ಜಿಂದಾಲ್‍ಗೆ ಭೂಮಿ ಮಾರಾಟ ಮೂರೂ ಪಕ್ಷಗಳ ಆಟ-ಕೂಟ

ಗಣಿ ದಂಧೆಯಲ್ಲಿರುವವರು ಮತ್ತು ರಾಜ್ಯದ ರಾಜಕೀಯ ಪಕ್ಷಗಳ ಅಸಲಿ ಹುನ್ನಾರು ಮತ್ತೆ ಸಾರ್ವಜನಿಕವಾಗಿ ಕಾಣತೊಡಗಿದೆ. ಗಣಿ ಉದ್ಯಮಿಗಳೊಂದಿಗೆ ಮೂರೂ ಪಕ್ಷಗಳು ತಮ್ಮದೇ ಆದ ಅಗೋಚರ ಕೂಟಗಳನ್ನು ರಚಿಸಿಕೊಂಡಿವೆ.

| ಪಿ.ಕೆ ಮಲ್ಲನಗೌಡರ್ |

ಗಣಿ ದಂಧೆಯಲ್ಲಿರುವವರು ಮತ್ತು ರಾಜ್ಯದ ರಾಜಕೀಯ ಪಕ್ಷಗಳ ಅಸಲಿ ಹುನ್ನಾರು ಮತ್ತೆ ಸಾರ್ವಜನಿಕವಾಗಿ ಕಾಣತೊಡಗಿದೆ. ಗಣಿ ಉದ್ಯಮಿಗಳೊಂದಿಗೆ ಮೂರೂ ಪಕ್ಷಗಳು ತಮ್ಮದೇ ಆದ ಅಗೋಚರ ಕೂಟಗಳನ್ನು ರಚಿಸಿಕೊಂಡಿವೆ. ಇಲ್ಲಿ ಕಾನೂನು ಇಲಾಖೆಯ ವ್ಯತಿರಿಕ್ತ ಅಭಿಪ್ರಾಯವನ್ನು ಧಿಕ್ಕರಿಸುವ ರಾಜ್ಯ ಸಚಿವ ಸಂಪುಟ ಜಿಂದಾಲ್‍ಗೆ 3,667 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಧಾರೆ ಎರೆಯಲು ಬದ್ಧವಾಗಿದೆ. ಜನರ ವಿರೋಧ ಕಂಡು ಎಚ್ಚರಗೊಂಡ ಬಿಜೆಪಿ ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎನ್ನುತ್ತ ಈಗಾಗಲೇ ವಾರ ಕಾಲ ಸುಮ್ಮನಿದ್ದು, 14-15ರಂದು ಬೆಂಗಳೂರಿನಲ್ಲಿ ‘ಸಾಂಕೇತಿಕ’ ಪ್ರತಿಭಟನೆ ನಡೆಸಲಿದೆ….

ಜಿಂದಾಲ್‍ಗೆ ಕಡಿಮೆ ದರದಲ್ಲಿ ಭೂಮಿ ಕೊಟ್ಟಿದ್ದಷ್ಟೇ ಬಿಜೆಪಿಯ ತಕರಾರು. ಆದರೆ, ಯಡಿಯೂರಪ್ಪ ಡಿಸಿಎಂ ಇದ್ದಾಗಲೇ ಆದ ಈ ಜಮೀನಿನ ಲೀಸ್ ಕಂಸೇಲ್ ಡೀಡ್‍ನಲ್ಲಿರುವ ಅಂಶಗಳನ್ನು ಜಿಂದಾಲ್ ಎಷ್ಟರಮಟ್ಟಿಗೆ ಪಾಕಿಸದೆ ಎಂಬ ಬಗ್ಗೆ ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ಡಿ,ಕೆ ಶಿವಕುಮಾರ್ ಅವರಿಗೆ ಚಿಂತೆಯಿಲ್ಲ. ತನ್ನದೇ ಸಚಿವ ಸಂಪುಟ ಉಪ ಸಮಿತಿ 2015ರಲ್ಲಿ ಈ ಸೇಲ್ ವ್ಯವಹಾರಕ್ಕೆ ತಡೆಯೊಡ್ಡಿತ್ತು ಎಂಬುದನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಮರೆತಂತೆ ಸುಮ್ಮನಿದ್ದಾರೆ. ಈಗ ಸಚಿವ ಸಂಪುಟ ಒಪ್ಪಿಗೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ವಿಷಯ ಕುರಿತಂತೆ ಕಾಮೆಂಟನ್ನೂ ಮಾಡುತ್ತಿಲ್ಲ.

ಜಿಂದಾಲ್ ಮತ್ತು ಅಕ್ರಮದ ಇತಿಹಾಸ

ಸ್ಥಳಿಯ ಜನತೆಗೆ ಜಿಂದಾಲ್ ಕೊಟ್ಟಿರುವ ಉದ್ಯೋಗಗಳೆಷ್ಟು ಈ ಕುರಿತಾಗಿ ಯಾವ ಅಧಿಕೃತ ಅಂಕಿಸಂಖ್ಯೆ ಇಲ್ಲ. ಅದಿರು ಉತ್ಪಾದನೆಯ ಜೊತೆಗೆ ಡಾಂಬರು ಮತ್ತು ಪೇಂಟ್ ತಯಾರಿಸುವ ರಾಸಾಯನಿಕ ಬಳಕೆಯ ಕಿರು ಉದ್ಯಮಗಳನ್ನು ನಡೆಸುವ ಮೂಲಕ ಜಿಂದಾಲ್, ನಿಧಾನವಾಗಿ ಬಳ್ಳಾರಿಯ ತೋರಣಘಟ್ಟ ಮತ್ತು ಸುತ್ತಲಿನ ಗ್ರಾಮಗಳಲ್ಲಿ ನೆಲದೊಳಕ್ಕೆ ವಿಷವನ್ನು ತುಂಬುತ್ತಲೇ ಇದೆ. ಬಾಹ್ಯ ಪರಿಸರವೂ ಧಕ್ಕೆಗೆ ಒಳಗಾಗಿದೆ. ಕುಮಾರಸ್ವಾಮಿ – ಯಡಿಯೂರಪ್ಪ ಒಪ್ಪಂದ ಮಾಡಿಕೊಂಡಾಗ ಇದಕ್ಕೆಲ್ಲ ಸಮ್ಮತಿ ನೀಡಿದ್ದರೇ? ಇರದಿದ್ದರೆ ಅವರ್ಯಾಕೆ 2016ರಲ್ಲಿ ಡಾಂಬರು ಘಟಕದ ವಿರುದ್ಧ ತೋರಣಘಟ್ಟದಲ್ಲಿ ನಡೆದ ಸ್ಥಳೀಯರ ಪ್ರತಿಭಟನೆಗೆ ಸ್ಪಂದಿಸಿಲ್ಲವೇಕೆ? ಒಟ್ಟಿನಲ್ಲಿ ಮೂರೂ ಪಕ್ಷಗಳೂ ಇದರ ಹಿಂದೆ ಇರುವುದರಿಂದ ಜಿಂದಾಲ್ ನಿರುಮ್ಮಳವಾಗಿಯೇ ಇದೆ.

1970ರ ದಶಕದ ಕೊನೆಯಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಆಂಧ್ರ, ತಮಿಳುನಾಡು ಮತ್ತು ಕರ್ನಾಟಕಕ್ಕೆ ಮೂರು ಸಾರ್ವಜನಿಕ ಉಕ್ಕು ಉತ್ಪಾದನೆಯ ಘಟಕಗಳನ್ನು ಘೋಷಿಸಿದ್ದರು, ಅದರ ಪ್ರಕಾರ ನೀರು ಮತ್ತು ಖನಿಜಗಳ ಲಭ್ಯವಿದ್ದ ಬಳ್ಳಾರಿಯಲ್ಲಿ ವಿಜಯನಗರ ಸ್ಟೀಲ್ಸ್ ಕಾರ್ಖಾನೆ ಅರಂಭವಾಯಿತು. ಸರ್ಕಾರ ಕಡಿಮೆ ದರದಲ್ಲಿ ಭೂಮಿ ಖರೀದಿಸಿ ಈ ಕಂಪನಿಗೆ ನೀಡಿತು,. ಈ ಸಾರ್ವಜನಿಕ ಕಂಪನಿ ಮುಂದಕ್ಕೆ ಬರದಂತೆ ಖಾಸಗಿ ಉಕ್ಕು ಕಂಪನಿಗಳು ನಿಗಾ ವಹಿಸಿಕೊಂಡು ಬಂದವು. 1990ರ ದಶಕದಲ್ಲಿ ಖಾಸಗೀಕರಣ ಪರ್ವ ಆರಂಭವಾದ ಮೇಲೆ ಸರ್ಕಾರಿ ಸ್ವಾಮ್ಯದ ವಿಜಯನಗರ ಸ್ಟೀಲ್ಸ್ ಅನ್ನು ಜಿಂದಾಲ್ ಮಡಿಲಿಗೆ ಹಾಕಲಾಯಿತು. ಆಗ ಕೇವಲ ಸಣ್ಣ ಸಣ್ಣ ಘಟಕಗಳನ್ನಷ್ಟೇ ಹೊಂದಿದ್ದ ಜಿಂದಾಲ್ ಬೃಹತ್ ಕಾರ್ಯಾಚರಣೆ ಶುರು ಮಾಡಿದ್ದು ರಾಜ್ಯದಲ್ಲಿ ಎಸ್.ಎಂ ಕೃಷ್ಣ ಸರ್ಕಾರ ಬಂದ ಮೇಲೆ. ಅಷ್ಟೊತ್ತಿಗೆ ಎರಡು ಸಲ ಎಂಪಿಗಿರಿ ಮುಗಿಸಿ ರಾಜ್ಯಸಭಾ ಸದಸ್ಯರಾಗಿದ್ದ ಕೆ. ಸಿ ಕೊಂಡಯ್ಯ ಜಿಂದಾಲ್ ಕಂಪನಿಯ ಪರ ಸರ್ಕಾರಿ ಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು..ಆಗ ಮಲ್ಲಿಕಾರ್ಜುನ ಖರ್ಗೆ ಜಲಸಂಪನ್ಮೂಲ ಸಚಿವರಿದ್ದಾಗ ಜಿಂದಾಲ್‍ಗೆ ತುಂಗಭದ್ರಾ ನೀರು ಕೊಡಿಸುವಲ್ಲಿ ಕೊಂಡಯ್ಯ ಪಾತ್ರವೂ ಇತ್ತು. ಮುಂದೆ ದೂರದ ಆಲಮಟ್ಟಿ ಡ್ಯಾಮಿನಿಂದ ಪೈಪ್‍ಲೈನ್ ಮಾಡಿಸಿ ಜಿಂದಾಲ್‍ಗೆ ನೀರು ಒದಗಿಸಿವ ವ್ಯವಸ್ಥೆಯೂ ಆಗಿತು.

ಹಲವು ಕಡೆಗಳಿಂದ ವಿರೋಧ

ರಾಜ್ಯದ ಪ್ರಗತಿಪರ ಸಂಘಟನೆಗಳಲ್ಲದೇ ಹಲವಾರು ರಾಜಕಾರಣಿಗಳೂ ಜಿಂದಾಲ್‍ಗೆ ಭೂಮಿ ಕೊಡುವುದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮಾಜ ಪರಿವರ್ತಬಾ ಸಂಸ್ಥೆಯ ಎಸ್. ಆರ್ ಹಿರೇಮಠ ಯಾವ ಕಾರಣಕ್ಕೂ ಜಿಂದಾಲ್‍ಗೆ ಭೂಮಿ ಮಾರುವುದು ಕಾನೂನು ಉಲ್ಲಂಘನೆ ಎಂದು ಎಚ್ಚರಿಸಿದ್ದಾರೆ. ಇಂದು (ಮಂಗಳವಾರ) ಬೆಂಗಳೂರಿನಲ್ಲೂ ಹಿರೇಮಠ ಈ ಕುರಿತಾಗಿ ಪ್ರೆಸ್‍ಮೀಟ್ ಮಾಡಲಿದ್ದಾರೆ. ಬಳ್ಳಾರಿ ಜೆಲ್ಲೆಯಲ್ಲಿ ಪ್ರಲವಾಗಿರುವ ಜನಸಂಗ್ರಾ ಪರಿಷತ್ನ ರಾಘವೇಂದ್ರ ಪಾಟೀಲರು ಕೂಡ ಈ ಕುರಿತು ಧ್ವನಿ ಎತ್ತಿದ್ದಾರೆ. ಬಳ್ಳಾರಿ ಹಲವು ಸಂಘಟನೆಗಳು ಹೋರಾಟಕ್ಕೆ ಇಳಯುವ ಸಂಕಲ್ಪ ಮಾಡಿವೆ. ಗದಗಿನ ಪೋಸ್ಕೋ ವಿರೋಧಿ ಕಪ್ಪತ್ತಗುಡ್ಡ ಉಳಿಸಿ ಹೋರಾಟದಲ್ಲಿದ್ದ ಹಲವರು ರವಿವಾರದಂದು ಪ್ರೆಸ್‍ಮೀಟ್ ಮಾಡಿ ಸರ್ಕಾರದ ನಡೆಯ ವಿರುದ್ಧ ದೊಡ್ಡ ಹೋರಾಟ ಕಟ್ಟುವುದಾಗಿ ಘೋಷಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ಒಪ್ಪಿಗೆ

ನೀಡಿದಾಗಿನಿಂದ ನಮ್ಮ ರಾಜಕಾರಣಿಗಳು ಜಿಂದಾಲ್ ಪರ ಮತ್ತು ವಿರೋಧ ನಿಲುವುಗಳನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ‘ಬಳ್ಳಾರಿ ರಿಪಬ್ಲಿಕ್; ವಿರುದ್ಧ ದೊಡ್ಡ್ ಹೋರಾಟ ನಡೆಸಿ ಅಧಿಕಾರ ಪಡೆದಿದ್ದ ಕಾಂಗ್ರೆಸ್‍ನ ಹಲವು ಮುಖಂಡರು ಜಿಂದಾಲ್‍ಗೆ ಭೂಮಿ ಕೊಡುವುದರ ಪರ ನಿಂತಿದ್ದಾರೆ. ಡಿ.ಕೆ ಶಿವಕುಮಾರ್, ಕೆ. ಜೆ ಜಾರ್ಜ್ ಮತ್ತು ಬಳ್ಳಾರಿಯ ಎಂಎಲ್ಸಿ ಕೊಂಡಯ್ಯ ಬಹಿರಂಗವಾಗಿಯೇ ಜಿಂದಾಲ್ ಪರ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದನ್ನು ಸಾರಾಸಗಟಾಗಿ ವಿರೋಧಿಸಿರುವ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲರು ಕಳೆದ ಒಂದು ವಾರದಿಂದಲೂ ಜಿಂದಾಲ್‍ಗೆ ಭೂಮಿ ಕೊಡುವ ನಡೆಯನ್ನು ಟೀಕಿಸುತ್ತಲೆ ಬಂದಿದ್ದು, ಇದನ್ನು ಕೈಬಿಡಬೇಕೆಂದು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

ಎಚ್‍ಕೆ. ಪಾಟೀಲರು ಎತ್ತಿರುವ ಪ್ರಶ್ನೆಗಳೇ ಸರ್ಕಾರಕ್ಕೆ ಮುಜುಗರ ತಂದಿವೆ. ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಅಕ್ರಮ ಗಣಿಗಾರಿಕೆ ಕುರಿತು ಸಿದ್ದಪಡಿಸಿದ ವರದಿಯ ಆಧಾರೆದ ಮೇಲೆ ಸರ್ಕಾರ ಏನೂ ಕ್ರಮ ಕೈಗೊಳ್ಳಬೇಕೆ ಎಂದದನ್ನು ಶಿಫಾರಸ್ಸು ಮಾಡಲು ಸಿದ್ದರಾಮಯ್ಯ ಸರ್ಕಾರವು ನೇಮಿಸಿದ್ದ ಸಚಿವ ಸಂಪುಟ ಉಪಸಮಿತಿಗೆ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಎಚ್‍ಕೆ. ಪಾಟೀಲರೇ ಅಧ್ಯಕ್ಷರಾಗಿದ್ದರು. ಅಕ್ರಮವೆಸಗಿದ ಕಂಪನಿಗಳಿಂದ ರಾಜ್ಯ ಬೊಕ್ಕಸಕ್ಕೆ ಆಗಿರುವ ಮೊತ್ತವನ್ನು ವಸೂಲಿ ಮಾಡಿ ಅಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಈ ಉಪ ಸಮಿತಿ ಶಿಫಾರಸ್ಸು ಮಾಡಿತ್ತು. ಆ ಸಮಿತಿಯಲ್ಲಿ ಕೆಜೆ ಜಾರ್ಜ ಕೂಡ ಸದಸ್ಯರು. ಜಿಂದಾಲ್‍ಗೆ ಭೂಮಿ ಮಾರುವುದಕ್ಕೆ ಎಚ್‍ಕೆ, ಪಾಟೀಲ್ ನೇತೃತ್ವದ ಉಪಸಮಿತಿ ತಡೆ ಹಿಡಿದಿತ್ತು.

ಎಚ್.ಕೆ ಪಾಟೀಲ ಮಾಡಿರುವ ಮೂರು ಪ್ರಮುಖ ಆರೋಪಗಳು: 2006ರಲ್ಲಿ ಒಪ್ಪಂದವಾದ ವೇಳೆಯಲ್ಲಿದ್ದ ಭೂಮಿ ದರಕ್ಕಿಂತ ಅತಿ ಕಡಿಮೆ ಬೆಲೆಗೆ ಭೂಮಿಯನ್ನು ನೀಡುವ ಮೂಲಕ ರಜ್ಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವುದು. ಜಿಂದಾಲ್ ಸರ್ಕಾರದ ವಿವಿಧ ಇಲಾಖೆಗಳಿಗೆ ಸಾಕಷ್ಟು ಮೊತ್ತದ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರದ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್)ಗೆ 2 ಸಾವಿರ ಕೋಟಿಗೂ ಹಣವನ್ನು ಜಿಂದಾಲ್ ಬಾಕಿ ಪಾವತಿಸದೇ ಉಳಿಸಿಕೊಂಡಿದೆ. ನಮ್ಮ ಸರ್ಕಾರಿ ಸಂಸ್ಥೆಗೇ ಬಾಕಿ ಉಳಿಸಿಕೊಂಡ ಸಂಸ್ಥೆಗೆ ತರಾತುರಿಯಲ್ಲಿ ಅಗ್ಗದ ದರದಲ್ಲಿ ಭೂಮಿ ನೀಡಿದ್ದು ಅನೈತಿಕ ಮತ್ತು ಕಾನೂನು ವಿರೋಧಿ ತೀರ್ಮಾನ. ಜಿಂದಾಲ್ ಮೇಲೆ ಅಕ್ರಮವಾಗಿ ಅದಿರು ಮಾರಿದ ಆರೋಪಗಳಿವೆ. ನ್ಯಾ. ಸಂತೋಷ ಹೆಗ್ಡೆಯವರ ವರದಿಯಲ್ಲೂ ಇದು ಉಲ್ಲೇಖವಾಗಿದೆ. ಮೇಲಾಗಿ ಸುಪ್ರಿಂ ಕೋರ್ಟಿನಲ್ಲಿ ಜಿಂದಾಲ್ ಮೇಲೆ ಕೇಸೂ ಇದೆ. ನಮ್ಮ ರಾಜ್ಯದ ಸಾಮಾಜಿಕ ಹೋರಾಟಗಾರ ಎಸ್. ಆರ್ ಹಿರೇಮಠರು ಸುಪ್ರೀಂ ಕೋರ್ಟಿನಲ್ಲಿ ಜಿಂದಾಲ್ ವಿರುದ್ಧ ಕೇಸು (ಕೇಸ್ ನಂಬರ್: 562/2099) ಹಾಕಿದ್ದಾರೆ. ಹೀಗಾಗಿ ಕಾನೂನು ಇಲಾಖೆಯು ಜಿಂದಾಲ್‍ಗೆ ಭೂಮಿ ಕೊಡಬಾರದು ಎಂಬ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿತ್ತು. ಜಿಂದಾಲ್ ಮೇಲೆ ಅಂತಹ ಯಾವ ಅಪೀಲೂ ಇಲ್ಲ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಕೂಡ ಸಂಪುಟಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ.

ಬಿಜೆಪಿಯ ಕಾಟಾಚಾರದ ಪ್ರತಿಭಟನೆ

ಜಿಂದಾಲ್ ಪರ ಮತ್ತು ವಿರೋಧ ನಡೆಯುವುದು ಶುರುವಾದಾಗಲೇ ‘ಸರ್ಕಾರದ ನಡೆ ವಿರುದ್ಧ ರಾಜ್ಯಾದ್ಯಾಂತ ಪ್ರತಿಭಟನೆ’ ಘೋಸಿಸಿದ್ದ ಯಡಿಯೂರಪ್ಪನವರು ಎರಡು ಮೂರು ದಿನ ಈ ವಿಷಯ ಮರೆತೇಬಿಟ್ಟರು. ನಂತರ ರಾಜ್ಯ ಬಿಜೆಪಿ ಸಂಸದರಿಗೆ ಬೆಂಗಳೂರಿನಲ್ಲಿ ಸನ್ಮಾನ ಮಾಡುವ ಸಮಾರಂಭದಲ್ಲಿ ಯಡಿಯೂರಪ್ಪ ಮತ್ತೆ ಪ್ರತಿಭಟನೆಯ ಮಾತನ್ನಾಡಿದರು. ನಿನ್ನೆ ಜೂನ್ 10ರಂದು ಮೂರನೇ ಬಾರಿ ಪ್ರತಿಭಟನೆಯನ್ನು 14-15ರಂದು ಮಾಡುವುದಾಗಿ ಹೇಳಿದ್ದಾರೆ. ಈಗ ಅವರ ರಾಜ್ಯವ್ಯಾಪಿ ಹೋರಾಟ ಬೆಂಗಳೂರಿನ ಮೌರ್ಯ ಸರ್ಕಲ್‍ಗಷ್ಟೇ ಸೀಮೀತವಾಗಿದೆ.
ಯಡಿಯೂರಪ್ಪ ಹೀಗೆ ಘೋಷಿಸುವ ಎರಡು ದಿನ ಮೊದಲು, ಅಂದರೆ ಜೂನ್ 9ರಂದು ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟನೆ ಮಾಡಿದ ಸಜ್ಜನ್ ಜಿಂದಾಲ್‍ರ ಪಕ್ಕವೇ ಕುಳಿತಿದ್ದ ಬಿಜೆಪಿ ಶಾಸಕ ಶ್ರೀರಾಮುಲು ಸಮಾರಂಭದ ಉದ್ದಕ್ಕೂ ಜಿಂದಾಲ್ ಜೊತೆ ಗುಸುಗುಸು ಮಾತಾಡುತ್ತಲೇ ಇದ್ದರು. ಯಾವುದೇ ಸರ್ಕಾರವಿರಲಿ, ಕೈಗಾರಿಕೆಗಳಿಗೆ ನೆರವು ನೀಡಬೇಕು ಎಂದು ಶ್ರೀರಾಮುಕು ತಮ್ಮ ಭಾಷಣದಲ್ಲಿ ಸಲಹೆ ನೀಡಿದರು. ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ ಜಿಂದಾಲ್‍ಗೆ ಭೂಮಿ ಕೊಡುವುದನ್ನು ಸಮರ್ಥಿಸಿದರು.

ಇಲ್ಲಿವರೆಗೂ ಬಳ್ಳಾರಿ ಬಿಜೆಪಿಯ ಯಾವ ಜನಪ್ರತಿನಿಧಿಯೂ ಜಿಂದಾಲ್‍ಗೆ ಭೂಮಿ ಮಾರುವುದಕ್ಕೆ ವಿರೋಧ ವ್ಯಕ್ತ ಮಾಡಿಲ್ಲ. ಯಾವಾಗ ಹಲವು ಗಣ್ಯರು, ಸಂಘಟನೆಗಳು ಧ್ವನಿ ಎತ್ತಿದವೋ ಆಗ ವಿರೋಧ ಪಕ್ಷವಾಗಿ ನೆಪಮಾತ್ರಕ್ಕೆ 14-15ರಂದು ಬಿಜೆಪಿ ಸಾಂಕೇತಿಕ ಪ್ರತಿಭಟನೆಯ ಮೊರೆ ಹೋಗಿದೆ. ಸಜ್ಜನ್ ಜಿಂದಾಲ್ ಪ್ರಧಾನಿಯವರ ಆಪ್ರ ಬಳಗದವರೇ. ಹಿಂದೆ ಕಾಬೂಲ್‍ನಿಂದ ಯಾವ ನಿಗದಿತ ಕಾರ್ಯಕ್ರಮವೂ ಇಲ್ಲದೇ ಏಕಾಏಕಿ ಪಾಕ್‍ಗೆ ಹೀಗಿ ಅಲ್ಲಿನ ಪ್ರಧಾನಿ ನವಾಜ್ ಶರೀಫರನ್ನು ಭೇಟಿಯಾಗಿದ್ದರು ಮೋದಿ. ಈ ಭೇಟಿಯ ಹಿಂದೆ ಸಜ್ಜನ ಜಿಂದಾಲರೇ ಇದ್ದರು ಎಂಬುದಕ್ಕೆ ಸಾಕ್ಷ್ಯವಾಗಿ ಅವರು ಮೊದಲೇ ಅಲ್ಲಿ ಧಾವಿಸಿದ್ದರು. ಶರೀಫ್ ಮತ್ತು ಸಜ್ಜನ್ ಕುಟುಂಬಗಳ ನಡುವೆ ದೊಡ್ಡ ಮಟ್ಟದ ವ್ಯವಹಾರಗಳಿವೆ ಎಂದು ಹೇಳಲಾಗುತ್ತಿದೆ. ಈ ಎರಡೂ ಕುಟುಂಬಗಳೂ ಪರಸ್ಪರ ಆಪ್ತವಾಗಿವೆ.

ಅಂದಂತೆ ಇದೇ ಜಿಂದಾಲ್ ಕಂಪನಿಯಿಂದ ಚೆಕ್ ಮೂಲಕ ಲಂಚ ಪಡೆದ ಪ್ರಕರಣವೂ ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣವಾಗಿತ್ತು. ಸಿಬಿಐ ಮುಂದೆ ಯಡಿಯೂರಪ್ಪ ಕುಟುಂಬ ಒಡೆತನದ ಪ್ರೇರಣಾ ಟ್ರಸ್ಟ್ ತಾನು ಜಿಂದಾಲ್‍ನಿಂದ ಪಡೆದ ಹಣದ ವಿವರಗಳನ್ನು ನೀಡಿತ್ತು. 2006ರಲ್ಲಿ ಯಡಿಯೂರಪ್ಪ ಡಿಸಿಎಂ ಇದ್ದಾಗಿನಿಂದ ಮುಂದೆ ಸಿಎಂ ಆಗುವವರೆಗೂ ಪ್ರೇರಣಾ ಹಣ ಪಡೆದಿತ್ತು. 2006-07ರಲ್ಲಿ 2.2 ಕೋಟಿ ರೂ,, 2008-09ರಲ್ಲಿ 8.3 ಕೋಟಿ ರೂ, 2008-09ರಲ್ಲಿ 23.4 ಕೋಟಿ ರೂ, 2009-10ರಲ್ಲಿ 2.2 ಕೋಟಿ ರೂ ಪಡೆದಿದ್ದನ್ನು ಒಪ್ಪಿಕೊಂಡಿತ್ತು.

ಇಂತಹ ಜಿಂದಾಲ್ ವಿರುದ್ಧ ಅದ್ಯಾವ ನೈತಿಕತೆ ಇಟ್ಟುಕೊಂಡು ಯಡಿಯೂರಪ್ಪ ಪ್ರತಿಭಟನೆ ಮಾಡುತ್ತಾರೋ? ಅಥವಾ ಇದು ಕಾಟಾಚಾರದ ಸಾಂಕೇತಿಕ ಪ್ರತಿಭಟನೆ ಅಷ್ಟೇ ಏನೋ?

ಆದರೆ ಈ ಕುರಿತಂತೆ ಸಿದ್ದರಾಮಯ್ಯ ಯಾಕೆ ಮೌನ ಮುರಿದು ಮಾತಾಡುತ್ತಿಲ್ಲ. ಸರ್ಕಾಧರದ ನಡೆಯನ್ನು ಅವರು ಬೆಂಬಲಿಸುತ್ತಿದ್ದಾರೆಯೇ ಎಂಬ ಸಂಶಯಗಳಿಗೆ ಇದು ಕಾರಣವಾಗಿದೆ. ಮೂರೂ ಪಕ್ಷಗಳ ಆಂತರ್ಯದಲ್ಲಿ ಜಿಂದಾಲ್ ಆಪ್ತವೇ ಆಗಿರುವಾಗ ಇಲ್ಲಿ ಜನಾಂದೋಲನ ಬಿಟ್ಟು ಬೇರೆ ದಾರಿಯೇ ಇಲ್ಲ.

ವೈಕುಂಠ ತೊರೆದು ವೈಭೋಗದತ್ತ!

ಹಿದೆಲ್ಲ ಬಳ್ಳಾರಿ ಅಥವಾ ಕೊಪ್ಪಳ ಜಿಲ್ಲೆಗೆ ಭೇಟಿ ಕೊಟ್ಟ ರಾಜ್ಯದ ಮುಖ್ಯಮಂತ್ರಿಗಳು ಹೊಸಪೇಟೆಯಲ್ಲಿ ಅಚ್ಚುಕಟ್ಟಾಗಿರುವ ‘ವೈಕುಂಠ’ ಎಂಬ ಸರ್ಕಾರಿ ಅತಿಥಿ ಗೃಹದಲ್ಲಿ ತಂಗುತ್ತಿದ್ದರು. ಎಸ್‍ಎಂ. ಕೃಷ್ಣ ಮುಖ್ಯಮಂತ್ರಿ ಅವಧಿಯಲ್ಲಿ ಕೊಂಡಯ್ಯರ ವಿಶೇಷ ಆಸಕ್ತಿಯ ಪರಿಣಾಮವಾಗಿ ಮುಖ್ಯಮಂತ್ರಿಗಳು ಜಿಂದಾಲ್‍ನ ಆವರಣದಲ್ಲಿರುವ ‘ಹಂಪಿ ಹೌಸ್’ನಲ್ಲಿ ವಿಶ್ರಾಂತಿ ಮಾಡುವ ಪರಿಪಾಠ ಶುರು ಮಾಡಲಾಗಿತು. ಲೋಕಲ್ ರಾಜಕಾರಣಿಗಳಿಗೂ ಪ್ರವೇಶ ನಿಷಿದ್ಧವಾಗಿರುವ ವೈಭೋಗದ ವಿಶ್ರಾಂತಿ ಗೃಹವಂತೆ ಅದು! ಮುಂದೆ ಧರ್ಮಸಿಂಗ್, ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲ ಈ ಜಿಂದಾಲ್‍ನ ‘ಹಂಪಿ ಹೌಸ್’ನ ಆತಿಥ್ಯ ಸ್ವೀಕರಿಸಿಯೇ ಬಂದರು.
ಇಲ್ಲಿ ಜಿಂದಾಲ್ ಮುಖ್ಯಸ್ಥ ಸಜ್ಜನ್ ಜಿಂದಾಲ್‍ರಿಗೆ ಎಲ್ಲ ಪಕ್ಷಗಳ ನಾಯರ ಜೊತೆಗೂ ‘ಸ್ನೇಹ’ವಿದೆ. ಹಿಂದೆ ಅವರ ಸಹೋದರ ನವೀನ್ ಜಿಂದಾಲ್ ಕಾಂಗ್ರೆಸ್ ಸಂಸದರಾಗಿದ್ದರು. ಪ್ರಧಾನಿ ಮೋದಿ ಪಾಕ್‍ಗೆ ದಿಡೀರನೆ ಭೆಟಿ ಕೊಟ್ಟು ನವಾಜ್ ಶರೀಫ್ ಮನೆಯ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರಲ್ಲ? ಆ ಭೇಟಿ ಏಪ್ಡಿಸಿದ್ದೇ ಸಜ್ಜನ ಜಿಂದಾಲ್ ಎಂಬ ಮಾತಿಗೆ ತಕ್ಕಂತೆ ಸಜ್ಜನ್ ಆ ಬೇಟಿಗೂ ಮೊದಲೇ ಅಲ್ಲಿ ಹಾಜರಿದ್ದರು. ಪಾಕ್ನ ನವಾಜ್ ಶರೀಫರ ಕುಟುಂಬದ ಉಕ್ಕು ವ್ಯವಹಾರದ ಜೊತೆ ಸಜ್ಜನ್‍ಗೆ ಲಿಂಕ್ ಇದೆ ಎನ್ನಲಾಗುತ್ತಿದೆ.

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here