`ಸುಪ್ರೀಂ ಕೋರ್ಟ್ ತಪ್ಪು ಮಾಡಬಾರದು ಅಂತೇನಿಲ್ಲವಲ್ಲ?’ : ಅಯೋಧ್ಯೆ ತೀರ್ಪಿಗೆ ಓವೈಸಿ ಅತೃಪ್ತಿ

ಅಯೋಧ್ಯೆ ತೀರ್ಪಿಗೆ ಸಂಬಂಧಪಟ್ಟಂತೆ ಹೈದ್ರಾಬಾದ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದ್-ಉಲ್-ಮುಸ್ಲೇಮಿನ್ ಪಕ್ಷದ ಸಂಸದ ಅಸೈದುದ್ದೀನ್ ಓವೈಸಿ “ಸುಪ್ರೀಂ ಕೋರ್ಟ್ ಸುಪ್ರೀಂ ಇರಬಹುದು. ಆದರೆ ಅದು ತಪ್ಪು ಮಾಡುವುದಿಲ್ಲ ಎಂದರ್ಥ ಅಲ್ಲವಲ್ಲ. ಈ ಮಾತನ್ನು ನಾನು ಹೇಳಿದ್ದಲ್ಲ. ಬಿಜೆಪಿ ಮತ್ತು ಸಂಘ ಪರಿವಾರಗಳು ಅಪಾರವಾಗಿ ಗೌರವಿಸುವ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಅವರು ಹೇಳಿದ್ದು” ಎಂದು ಪ್ರತಿಕ್ರಿಯಿಸಿದ್ದಾರೆ.

“ಅಯೋಧ್ಯೆ ತೀರ್ಪು ನನಗೆ ಸಮಾಧಾನ ತಂದಿಲ್ಲ. ನಂಬಿಕೆಯ ಹೆಸರಲ್ಲಿ ವಾಸ್ತವಗಳ ಮೇಲೆ ಪ್ರತಿಷ್ಠಾಪಿಸಲ್ಪಟ್ಟ ತೀರ್ಪು ಇದು. 1992 ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದವರಿಗೇ ಈಗ ಟ್ರಸ್ಟ್ ಮಾಡಿಕೊಂಡು ಮಂದಿರ ಕಟ್ಟಿ ಎಂಬ ಆದೇಶವನ್ನು ನ್ಯಾಯಾಲಯ ಕೊಟ್ಟಿದೆ. ಒಂದೊಮ್ಮೆ ಮಸೀದಿಯನ್ನು ಕೆಡವದೆ ಅದು ಸುಸ್ಥಿಯಲ್ಲೇ ಇದ್ದಿದ್ದರೆ ಆಗ ಏನು ತೀರ್ಪು ಕೊಡುತ್ತಿತ್ತು ನ್ಯಾಯಾಲಯ” ಎಂದವರು ಪ್ರಶ್ನಿಸಿದ್ದಾರೆ.

“ಮುಸ್ಲಿಂ ಲಾ ಬೋರ್ಡ್ ನ ಪ್ರತಿನಿಧಿಗಳು ಇಷ್ಟು ದಿನ ಸಮರ್ಥವಾಗಿ ನ್ಯಾಯಾಂಗ ಹೋರಾಟ ನಡೆಸಿದ್ದಾರೆ. ಹಿರಿಯ ನ್ಯಾಯವಾದಿಗಳಾದ ರಾಜೀವ್ ಧವನ್, ಜಫರ್ಯಾಬ್ ಜಿಲಾನಿ, ಮೀನಾಕ್ಷಿ ಅರೋರಾ ಮುಂತಾದವರ ಶ್ರಮವನ್ನು ನಾನು ಅಭಿನಂದಿಸುತ್ತೇನೆ. ಆದರೆ ನಮ್ಮ ಹೋರಾಟ ಇದ್ದದ್ದು ಜಾಗಕ್ಕಲ್ಲ. ಕಾನೂನುಬದ್ದ ಹಕ್ಕಿಗಾಗಿ. ಈಗ ನ್ಯಾಯಾಲಯ ಬೇರೆಡೆ ಮಸೀದಿ ನಿರ್ಮಿಸಲು ಐದು ಎಕರೆ ಜಮೀನು ಕೊಡಬೇಕೆಂದು ಹೇಳಿದೆ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಭಾರತೀಯ ಮುಸ್ಲಿಮರು ಬಡವರಿರಬಹುದು, ಹಲವು ಕಷ್ಟಗಳನ್ನು ಎದುರಿಸುತ್ತಿರಬಹುದು, ದೌರ್ಜನ್ಯಕ್ಕೂ ತುತ್ತಾಗಿರಬಹುದು. ಆದರೆ ಮಸೀದಿ ನಿರ್ಮಿಸಲಿ ಐದು ಎಕರೆ ಜಮೀನು ಕೊಳ್ಳಲಿಕ್ಕೆ ಆಗದಷ್ಟು ಪರಿಸ್ಥಿಯಲ್ಲಿಲ್ಲ. ಈಗಲೂ ನಾನು ಹೈದ್ರಾಬಾದ್ ಗಲ್ಲಿಯಲ್ಲಿ ಭಿಕ್ಷೆ ಎತ್ತುತ್ತಾ ಹೋದರೆ ಉತ್ತರ ಪ್ರದೇಶದಲ್ಲಿ ಐದು ಎಕರೆ ಜಮೀನು ಖರೀದಿಸುಷ್ಟು ಹಣ ಜಮೆಯಾಗುತ್ತೆ. ಆದರೆ ನಮ್ಮ ಹೋರಾಟವಿದ್ದುದ್ದು ಸಾಂವಿಧಾನಿಕ ಹಕ್ಕಿಗಾಗಿ. ನ್ಯಾಯಾಲಯ ಅದನ್ನು ಪರಿಗಣಿಸಿಲ್ಲ. ಹಾಗಾಗಿ ನನಗೆ ಈ ತೀರ್ಪು ಸಮಾಧಾನ ತಂದಿಲ್ಲ” ಎಂದಿದ್ದಾರೆ.

“ತೀರ್ಪು ಮರು ಪರಿಶೀಲನೆ ಅರ್ಜಿ ಸಲ್ಲಿಸುವುದು ಬಿಡುವುದು, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯರಿಗೆ ಬಿಟ್ಟ ತೀರ್ಮಾನ. ಆದರೆ ನನ್ನನ್ನು ಕೇಳುವುದಾದರೆ ಐದು ಎಕರೆ ಜಮೀನಿನ ಆಫರನ್ನು ನಾವು ತಿರಸ್ಕರಿಸಬೇಕು. ನಮಗೆ ಸಂವಿಧಾನದ ಮೇಲೆ ಈಗಲೂ ಅಪಾರ ಗೌರವವಿದೆ. ಆದರೆ ಸಮಸ್ತ ಭಾರತೀಯರು, ಹಿಂದೂಗಳು ಮತ್ತು ಮುಸ್ಲೀಮರು, ಒಂದು ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಇವತ್ತು ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಅಧಿಕೃತತೆ ಪಡೆಯಲಿದೆ. ಈಗಾಗಲೇ ಹಲವು ಪ್ರಾರ್ಥನಾ ಸ್ಥಳಗಳನ್ನು ಧರ್ಮದ ಹೆಸರಲ್ಲಿ ಆಕ್ರಮಿಸಿಕೊಂಡು ಕೋಮುಸಂಘರ್ಷ ಸೃಷ್ಟಿಲು ಸಂಘಿಗಳು ಹುನ್ನಾರ ನಡೆಸಿದ್ದಾರೆ. ಈ ತೀರ್ಪಿನಿಂದ ಅವರಿಗೆ ಇನ್ನಷ್ಟು ಒತ್ತಾಸೆ ಸಿಕ್ಕಂತಾಗಿ ವಿಪರೀತಕ್ಕೆ ಹೋಗುತ್ತಾರೆ. ಆಗ ಅಲ್ಲಿನ ನ್ಯಾಯಾಲಯಗಳು ಈ ತೀರ್ಪನ್ನೆ ಆಧಾರವಾಗಿಟ್ಟುಕೊಂಡು ಆದೇಶ ನೀಡಬೇಕಾಗುತ್ತದೆ. ಇದು ಈ ದೇಶದ ಜಾತ್ಯತೀತ, ಸೌಹಾರ್ದತೆಯ ಪರಂಪರೆಗೆ ಪೂರಕವಾಗುವಂತದ್ದಲ್ಲ” ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here