Homeಮುಖಪುಟ`ಆಪರೇಷನ್’ ಎಂಬ ಹೊಲಸು ಗುಂಡಿಯಿಂದ ಹೊರಬರದ ಕಮಲ!

`ಆಪರೇಷನ್’ ಎಂಬ ಹೊಲಸು ಗುಂಡಿಯಿಂದ ಹೊರಬರದ ಕಮಲ!

- Advertisement -
- Advertisement -

 ಪಿ.ಕೆ. ಮಲ್ಲನಗೌಡರ್ |

‘ಏನು, ಅವರೆಲ್ಲ ಈಗಲೇ ರಾಜಿನಾಮೆ ಕೊಟ್ಟು ಹೊರಬರ್ತಾರ?’
‘ತಯಾರಿ ಎಲ್ಲ ಜೋರಾಗಿದೆ…’
ಮೇಲಿನ ಫೋನ್ ಸಂಭಾಷಣೆ ‘ಆಪರೇಷನ್ ಕಮಲ’ ಎಂಬ ವಿಕೃತ, ಅನೈತಿಕ ದಂಧೆಯ ಭಾಗ. ಕರ್ನಾಟಕದ ಶಾಸಕರ ಖರೀದಿಯ ವ್ಯವಸ್ಥೆಗೆ ಸಂಭಾಷಣೆ ನಡೆದಿದ್ದು ಹಿಂದಿಯಲ್ಲಿ! Sರೀದಿಗೆ ನಿಂತವನಿಗೆ ಕನ್ನಡವೇ ಗೊತ್ತಿಲ್ಲ, ಅವನಿಗಿರುವುದು ದುಬೈನಲ್ಲಂತೆ!
ರಾಜ್ಯ ಬಿಜೆಪಿ ಅಧಿಕಾರದ ಹಪಾಹಪಿಗೆ ಬಿದ್ದು, ರಾಜ್ಯದ ಮತದಾರರ ಮಾನವನ್ನು ಹರಾಜಿಗಿಡುತ್ತಿರುವುದರ ಸ್ಯಾಂಪಲ್ ಇದು. ಮೇ 15ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪೂರ್ತಿಯಾಗಿ ಹೊರಬೀಳುವ ಮುನ್ನವೇ ಈ ದಂಧೆಗಿಳಿದ ಬಿಜೆಪಿ, ಈಗಲೂ, ಈ ಹೊತ್ತಿನಲ್ಲೂ ಹೇಗಾದರೂ ಮಾಡಿ ಸರ್ಕಾರ ಕೆಡವುವ ಹವಣಿಕೆಯಲ್ಲಿದೆ. ಬೆಳಗಾವಿಯ ಅಧಿವೇಶನ ಕೂಡ ಅದರ ಪಾಲಿಗೆ ಇಂತಹ ವ್ಯಾಪಾರದ ಮಾತುಕತೆಗೆ ಒದಗಿದ ‘ಸುವರ್ಣ’ ಅವಕಾಶವೇ ಆಗಿದೆ. ಮೊಗಸಾಲೆಯಲ್ಲಿ ಈ ದಂಧೆಯ ಬಗ್ಗೆ ಮಾತಾಡಲೆಂದೇ ಹಲವರನ್ನು ಬಿಜೆಪಿ ನಿಯೋಜಿಸಿದೆ.
ಇದು ಬಿಜೆಪಿಯ ಕ್ಷುಲ್ಲಕ ನಡೆ, ವಿನಾಶ ಬುದ್ಧಿ. ಅದಕ್ಕೆ ಈ ಬಗ್ಗೆ ಯಾವುದೇ ಅಳುಕಿಲ್ಲ; ಏಕೆಂದರೆ ಅದರ ‘ಆದರ್ಶ’ ನೇತಾರ ಫಲಿತಾಂಶ ಬಂದ ತುಸು ಹೊತ್ತಿನಲ್ಲೇ, ‘ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಏರಲು ನಾವು ಬಿಡಲ್ಲ’ ಎಂದು ಸಾರ್ವಜನಿಕವಾಗಿಯೇ ಆಪರೇಷನ್ ಕಮಲಕ್ಕೆ ಉತ್ತೇಜನ ನೀಡಿದ್ದರು. ಹೀಗಾಗಿ ಒಟ್ಟಿನಲ್ಲಿ ಅಧಿಕಾರ ಹಿಡಿಯಬೇಕು ಎಂಬುದೇ ಈಗ ಬಿಜೆಪಿಯ ಏಕೈಕ ಅಜೆಂಡಾ. ಬರ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಅದರದು ನಾಟಕೀಯ ಧ್ವನಿ.
ಎಲ್ಲೋ ಇರುವ ಯಾವನೋ ಉದ್ಯಮಿಯೊಬ್ಬ ಇಲ್ಲಿನ ರಾಜಕೀಯ ವ್ಯವಸ್ಥೆಯನ್ನೇ ಅಲುಗಾಡಿಸಲು ವ್ಯವಹಾರಕ್ಕೆ ಇಳಿದ ಸಂಗತಿ ಜೆಡಿಎಸ್-ಕಾಂಗ್ರೆಸ್ ಸರ್ಕಾರಕ್ಕೆ ಗಂಭೀರ ವಿಷಯ ಅನಿಸಲೇ ಇಲ್ಲ. ಸರ್ಕಾರ ಉಳಿಸಿಕೊಳ್ಳುವುದರ ಬಗ್ಗೆ ಮಾತಾಡಿದರೇ ಹೊರತು, ಸಮಾಜಘಾತುಕ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳುವ ಮಾತನ್ನೇ ಆಡಲಿಲ್ಲ.
ತಿಂಗಳಲ್ಲಿ ಎರಡೋ ಮೂರೋ ಸಲ ‘ಸರ್ಕಾರ ಪತನವಾಗಲಿದೆ’ ಎಂದು ಬಿಜೆಪಿ ಡೆಡ್‍ಲೈನ್ ಕೊಡುವುದು, ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಜೆಡಿಎಸ್, ಕಾಂಗ್ರೆಸ್ ತಂತ್ರ ರೂಪಿಸುವುದು-ಈ ಎರಡು ‘ಘನ ಗಂಭೀರ’ ಕೆಲಸಗಳಲ್ಲಿ ರಾಜ್ಯದ ಜನರ ಸಮಸ್ಯೆಗಳು ಮೂಲೆಗೆ ತಳ್ಳಲ್ಪಡುವುದು-ಆರು ತಿಂಗಳಿನಿಂದ ಇದೆ ಎಂಬಂತಾಗಿದೆ. ಸರ್ಕಾರ ಅಷ್ಟಿಷ್ಟು ಕಾರ್ಯಕ್ರಮ ರೂಪಿಸುವಾಗ, ದೃಶ್ಯ ಮಾಧ್ಯಮಗಳು ತಾವೇ ಆಪರೇಷನ್ ಕಮಲದ ಕತೆ ಬರೆಯಲು ಆರಂಭಿಸುವುದು…..ಗುಟ್ಟಲ್ಲದ ವಿಷಯವೆಂದರೆ ನಮ್ಮ ದೃಶ್ಯ ಮಾಧ್ಯಮಗಳನ್ನೂ ಜನ ಈ ಆಪರೇಷನ್ನಿನ ಭಾಗವೆಂದೇ ಪರಿಗಣಿಸಿ, ತಮಾಷೆ ಮಾಡುವುದು. ಈ ತಮಾಷೆ ಪ್ರತಿರೋಧವಾಗಿ ಬದಲಾಗುವ ಅಗತ್ಯವಂತೂ ಸದ್ಯಕ್ಕಿದೆ.
ಆ ದುಬೈ ವ್ಯಾಪಾರಿಗೆ ಉತ್ತರಿಸುವ ಮಂಜುನಾಥ್ (ಶ್ರೀರಾಮುಲು ಪಿಎ ಎನ್ನಲಾಗಿದೆ), ‘ರಾಜಿನಾಮೆ ಕೊಡಿಸಿ, ಮತ್ತದೇ ಕ್ಷೇತ್ರದಿಂದ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ನಮ್ಮ ನಾಯಕರು ನೋಡಿಕೊಳ್ಳುತ್ತಾರೆ’ ಎಂದು ಆಪ್-ಕಮಲದ ಡೆಫನಿಷನ್ ನೀಡುತ್ತಲೇ, ‘ಯಡಿಯೂರಪ್ಪ, ಶ್ರೀರಾಮುಲು, ಜನಾರ್ದನ ರೆಡ್ಡಿ ಖುದ್ದು ವ್ಯವಹಾರ ನಿಗದಿ ಮಾಡುತ್ತಾರೆ’ ಎಂದು ಖರೀದಿದಾರನಿಗೆ ಅಭಯ ನೀಡುತ್ತಾನೆ. ಇದು ಥೇಟು ದನದ ಸಂತೆಯಲ್ಲಿ ನಡೆಯುವ ಸಂಭಾಷಣೆಯಂತೆಯೇ ಇದೆ. ನಮ್ಮ ಶಾಸಕರನ್ನು ಬಿಜೆಪಿ ಅಷ್ಟು ಕ್ಷುಲ್ಲಕವಾಗಿ ಪರಿಗಣಿಸಿಬಿಟ್ಟಿದೆ!
ರಾಜ್ಯ ಚುನಾವಣಾ ಫಲಿತಾಂಶ ಬಂದಾಗಿನಿಂದ ಇಲ್ಲಿವರೆಗೆ ನಡೆದ ಸರ್ಕಾರ ಉರುಳಿಸುವ ವಿಧ್ವಂಸಕ, ಅಸಹ್ಯಕರ ಘಟನಾವಳಿಗತ್ತ ಒಮ್ಮೆ ನೋಡಿದರೆ ವಾಕರಿಕೆ ಬರುತ್ತದೆ.
ಹೇಯ ಆಪರೇಷನ್ನಿಗೆ ಪ್ರಧಾನಿಯ ಮುನ್ನುಡಿ!
2018, ಮೇ 15ರ ಮುಂಜಾನೆ ಚುನಾವಣಾ ಫಲಿತಾಂಶಗಳು ಬರಲು ಆರಂಭಿಸಿದ ಕೂಡಲೇ ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನಾಯಕರು, ‘ಟ್ರೆಂಡ್ ನಮ್ಮ ಕಡೆಯಿದೆ’ ಎಂದು ಅಧಿಕಾರ ಹಿಡಿಯಲು ರೆಡಿಯಾಗೇ ಬಿಟ್ಟರು. ತಡ ಮಧ್ಯಾಹ್ನದವರೆಗೂ ಈ ಸಂಭ್ರಮ ಮುಂದುವರೆದೇ ಇತ್ತು. ದೃಶ್ಯ ಮಾಧ್ಯಮಗಳಂತೂ ತಮ್ಮದೇ ಗೆಲುವು ಎಂಬಂತೆ ಸುದ್ದಿ ಬಿತ್ತರಿಸಿದವು. (ಕೆಲವು ಆ್ಯಂಕರ್‍ಗಳು ತುರ್ತಾಗಿ ಮನೆಗೆ ಹೋಗಿ ತಮ್ಮ ‘ಪೆಟ್’ ಸೀರೆ ಉಟ್ಟುಕೊಂಡು ಬಂದಿದ್ದರಂತೆ!)
ಆದರೆ, ಬಿಜೆಪಿ 104ಕ್ಕೆ ಏದುಸಿರು ಬಿಡುತ್ತಿದ್ದಂತೆ, 2008ರ ಕರಾಳ ಆಪರೇಷನ್ ಶುರು ಮಾಡಿಯೇ ಬಿಟ್ಟಿತು. ಅಂದು ಸಂಜೆ ರಾಷ್ಟ್ರ ರಾಜಧಾನಿಯಲ್ಲಿ ಸೇರಿದ್ದ ಬಿಜೆಪಿಯ ಕಾರ್ಯಕರ್ತರು, ಅಭಿಮಾನಿಗಳ ಮುಂದೆ ಮಾತನಾಡಿದ ಪ್ರಧಾನಿ, ‘ಯಾವ ಕಾರಣಕ್ಕೂ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಬಿಡುವುದಿಲ್ಲ’ ಎಂದು ಹೇಳುವ (ಆದೇಶ ನೀಡುವ?) ಮೂಲಕ ಆಪ್-ಕಮಲ ಎಂಬ ಹೇಸಿಗೆಗೆ ತಮ್ಮ ಕೈಯಾರೆ ಮುನ್ನುಡಿ ಬರೆದು ಕೃತಾರ್ಥರಾದರು… (ಇಲ್ಲಿ ಆಶ್ಚರ್ಯಕರ ಚಿಹ್ನೆ ಉಪಯೋಗಿಸುವ ಜರೂರತ್ತಿಲ್ಲ)
ಅಲ್ಲಿವರೆಗೂ ಜನಾರ್ಧನ ರೆಡ್ಡಿಯನ್ನು ಅಸ್ಪøಶ್ಯ ಎಂಬಂತೆ ಮಾತಾಡುತ್ತಿದ್ದ ಸತ್ಯ ಹರಿಶ್ಚಂದ್ರ ಅಮಿತ್ ಶಾ ಸಾಹೇಬರು ರೆಡ್ಡಿ-ರಾಮುಲುಗಳಿಗೆ 2008ರ ದಂಧೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲು ಸೂಚನೆ ಕೊಟ್ಟರು. ಮೋದಿ-ಶಾಗಳ ಸೂಚನೆಯ ಮೇರೆಗೆ ತಮ್ಮ ಹಳೆ ಲೊಳಗಬಳಗ ಖಾಕಿ ಚೆಡ್ಡಿಯನ್ನು ಜ್ಞಾಪಿಸಿಕೊಂಡ ರಾಜ್ಯಪಾಲ ವಜುಭಾಯಿ, ಅತಿ ದೊಡ್ಡ ಚುನಾವಣೋತ್ತರ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಬದಲು, ಬಿಜೆಪಿಗೆ ಕರೆದಿದ್ದಲ್ಲದೇ, ವಿಶ್ವಾಸಮತಕ್ಕೆ 15 ದಿನ ಅವಕಾಶ ನೀಡಿ, ಕುದುರೆ ವ್ಯಾಪಾರಕ್ಕೆ ಪರೋಕ್ಷ ಅವಕಾಶ ಸೃಷ್ಟಿಸಿದರು. ದೃಶ್ಯ ಮಾಧ್ಯಮಗಳಂತೂ 12 ಶಾಸಕರು ರೆಡ್ಡಿ-ರಾಮುಲು ಸಂಪರ್ಕದಲ್ಲಿ, ವಿಶ್ವಾಸಮತ ಪಕ್ಕಾ ಎಂದೆಲ್ಲ ಅರಚುತ್ತ ರಾಜ್ಯಪಾಲರ ನಡೆಯನ್ನು ಬೆಂಬಲಿಸಿದವು. ಕಾಂಗ್ರೆಸ್ ರಾಜ್ಯಪಾಲರ ಈ ನಡೆ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಯಿತು. ರಾತ್ರೋರಾತ್ರಿ ಆದೇಶ ನೀಡಿದ ಸುಪ್ರೀಂ, ಪ್ರಮಾಣವಚನಕ್ಕೆ ಅನುಮತಿ ನೀಡಿತಾದರೂ, ವಿಶ್ವಾಸಮತವನ್ನು ತ್ವರಿತವಾಗಿ ಸಾಬೀತು ಮಾಡಲು ಸೂಚಿಸಿತು.
ಮೇ 17ರ ಮುಂಜಾನೆ 9 ಗಂಟೆಗೆ, ಸಿಕ್ಕಿತೋ ಇಲ್ಲವೋ ಎಂದು ಹಪಾಹಪಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ, ಮೊಬೈಲಿನಲ್ಲಿ ಆಪರೇಷನ್‍ನ ವಿವರ ಪಡೆಯುತ್ತಲೇ ಉನ್ನತ ಅಧಿಕಾರಿಗಳ ವರ್ಗಾವಣೆಯನ್ನೂ ಮಾಡಿಬಿಟ್ಟರು. ಮೇ 20ಕ್ಕೆ ವಿಶ್ವಾಸಮತ ಯಾಚನೆ ನಿಗದಿಯಾಯಿತು. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಬಹುಪಾಲು ನಾಯಕರು ಖುದ್ದು ಶಾಸಕರ ಖರೀದಿಗೆ ನಿಂತರು. 2008ರ ದುಸ್ವಪ್ನ ನೆನೆಸಿಕೊಂಡ ಕಾಂಗ್ರೆಸ್, ಜೆಡಿಎಸ್‍ಗಳು ತಮ್ಮ ಶಾಸಕರನ್ನು ಬಿಡದಿ, ಹೈದರಾಬಾದ್, ಕೊಚ್ಚಿಯ ರೆಸಾರ್ಟ್‍ಗಳಲ್ಲಿ ತಂಗಿಸಿ, ರಕ್ಷಣೆಗೆ ತೊಡಗಿದವು.
ಈ ಮೂರು ದಿನಗಳಲ್ಲಿ ಬಹಿರಂಗಗೊಂಡ ಫೋನ್ ಸಂಭಾಷಣೆಗಳು ಬಿಜೆಪಿಯ ಚಿಲ್ಲರೆ ಆದರೆ ಅಪಾಯಕಾರಿ ರಾಜಕಾರಣಕ್ಕೆ ಸಾಕ್ಷಿಯಂತಿದ್ದವು. ಹಿರೇಕೇರೂರಿನ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲರಿಗೆ ಫೋನಾಯಿಸಿದ ಯಡ್ಡಿ, ಭಾರಿ ಆಮಿಷಗಳನ್ನು ಒಡ್ಡಿದರು.
ಯಡ್ಡಿ: ನೀನು ಬೇಗ ಬಂದ್ಬಿಡು, ಎಲ್ಲ ವ್ಯವಸ್ಥೆಯಾಗಿದೆ.
ಬಿ.ಸಿ. ಪಾಟೀಲ್: ಅಣ್ಣಾ, ಏನು ವ್ಯವಸ್ಥೆ?
ಯಡ್ಡಿ: ಸಚಿವ ಸ್ಥಾನ…. ಜೊತೆಗೆ ಕೊಡಬೇಕಾದ್ದನ್ನು ರಾಮುಲು ಹೇಳುತ್ತಾನೆ. ನಿನ್ನ ಜೊತೆಗಿರುವವರಿಗೂ ಕರೆದುಕೊಂಡು ಬಂದುಬಿಡು.
ಬಿ.ಸಿ.ಪಾಟೀಲ್: ನಾನೀಗ ಬಸ್‍ನಲ್ಲಿ ಶಾಸಕರ ಜೊತೆ ಕೊಚ್ಚಿಗೆ ಹೊರಟಿರುವೆ. ಈಗ ಬರುವುದು ಕಷ್ಟ.
ಯಡ್ಡಿ: (ಚಡಪಡಿಸುತ್ತ) ನೀನು ಅಲ್ಲಿ ತಲುಪಿದರೆ ಕಷ್ಟ. ಏನಾದರೂ ಹೇಳಿ ಬಂದುಬಿಡು…..
ಇತ್ತ ರಾಮುಲು ಮತ್ತು ಈ ಹಲ್ಕಾ ದಂಧೆಯ ವ್ಯವಹಾರದ ಉಸ್ತುವಾರಿ ನೋಡಿಕೊಳ್ಳಲು ದೆಹಲಿಯಿಂದ ಕಳಿಸಲ್ಪಟ್ಟಿದ್ದ ಮುರುಳೀಧರರಾವ್ ಇಬ್ಬರೂ ಸೇರಿ ಬಿ.ಸಿ. ಪಾಟೀಲರಿಗೆ ಫೋನು ಮಾಡಿ, ಕೋಟಿಗಳ ಮಾತಾಡಿದ್ದಲ್ಲದೇ, ಸ್ಪೀಕರ್ ನಮ್ಮವರೇ ಇರಲಿದ್ದು, ಉಪ ಚುನಾವಣೆಯ ಅಗತ್ಯವೇ ಇಲ್ಲ ಎಂದು ಭರವಸೆ ನೀಡುತ್ತಾರೆ.
ಜನಾರೆಡ್ಡಿ ಅದೆಷ್ಟು ಶಾಸಕರಿಗೆ ಫೋನಾಯಿಸಿ ಡೀಲ್ ಕುದುರಿಸಲು ಯತ್ನಿಸಿದರೋ? ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡರಿಗೆ ಕರೆ ಮಾಡಿ, ಬಸನಗೌಡ, ಈಗ ನನ್ನ ಒಳ್ಳೆಯ ದಿನ ಆರಂಭ ಆಗಿವೆ. ನೀನು ಚುನಾವಣೆಯಲ್ಲಿ ಖರ್ಚು ಮಾಡಿದ್ದರ ನೂರು ಪಟ್ಟು ಹಣ ಗಳಿಸ್ತೀಯಾ. ನಮ್ಮ ಅಮಿತ್ ಶಾರೊಂದಿಗೆ ಒನ್‍ಟುಒನ್ ಭೇಟಿ ಏರ್ಪಡಿಸುತ್ತೇನೆ. ಶಿವನಗೌಡ ನಾಯಕ್ ಹೇಗೆ ಗಳಿಸಿದ ನೋಡು… ಒಪ್ಪಿಕೊಂಡು ಬಿಡು ಎಂದು ವ್ಯಾಪಾರಕ್ಕಿಳಿಯುತ್ತಾರೆ. ‘ನನಗೆ ಟಿಕೆಟ್ ನೀಡಿದ್ದಲ್ಲದೇ, ಚುನಾವಣಾ ಖರ್ಚನ್ನು ನೀಡಿದ ಕಾಂಗ್ರೆಸ್ ಬಿಡುವುದು ಆತ್ಮವಂಚನೆ ಆಗುತ್ತೆ ಎಂದು ಬಸನಗೌಡ ಮುಖಕ್ಕೆ ಹೊಡೆದಂತೆ ಹೇಳಿದರೂ ನಾಚಿಕೆಗೆಟ್ಟ ರೆಡ್ಡಿ ಬೆಣ್ಣೆ ಹಚ್ಚುವ ಕೆಲಸ ಮುಂದುವರಿಸಿಯೇ ಇದ್ದರು.
ಆರ್.ಅಶೋಕ್, ಸಿ.ಟಿ.ರವಿಗಳು ಒಕ್ಕಲಿಗ ಶಾಸಕರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದರೆ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಲವಾರು ಕಾಂಗ್ರೆಸ್, ಜೆಡಿಎಸ್ ಶಾಸಕರ ಪತ್ನಿಯರಿಗೆ ಫೋನು ಮಾಡಿ, ಆಮಿಷ ಒಡ್ಡಿದ್ದ. ಚೆಕ್‍ನಲ್ಲಿ ದುಡ್ಡು ಕೊಡಲ್ಲ ಎಂದು ಹೇಳಿತೇನೋ ಈ ಪುಟಾಣಿ ಪುಡಾರಿ. ಕೆಲ ವೀರಶೈವ ಮಠಾಧೀಶರೂ ಶಾಸಕರಿಗೆ ಬೋಧನೆ ಮಾಡಿ, ಯಡಿಯೂರಪ್ಪರ ನೆರವಿಗೆ ಬರಲು ಸೂಚಿಸಿದ್ದರು!
ಹೀಗೆ ನಿರ್ಲಜ್ಜವಾಗಿ ಕುದುರೆ ವ್ಯಾಪಾರ ನಡೆಯುತ್ತಿದ್ದುದು ದೃಶ್ಯ ಮಾಧ್ಯಮಗಳನ್ನು ಕಾಡಲೇ ಇಲ್ಲ. ಜನರ ತೀರ್ಪೇ ಬಿಜೆಪಿ ಪರ ಎಂದೇ ಅವು ಬಿಂಬಿಸಲು ಯತ್ನಿಸಿ, ಕೊಳಕು ಕಾಯಕದಲ್ಲಿ ತಾವೂ ಭಾಗಿಯಾದವು. ಆದರೆ ಡಿ.ಕೆ.ಶಿವಕುಮಾರ್ ತಂಡ ಶಾಸಕರು ಫೋನಿಗೂ ಸಿಗದಂತೆ ಮಾಡಿದ್ದರಿಂದ, ಆಪ್-ಕಮಲಕ್ಕೆ ಸಿಕ್ಕರೆ ಭವಿಷ್ಯವಿಲ್ಲ ಎಂದು ಶಾಸಕರೂ ಅರಿತಿದ್ದರಿಂದ 2008ರ ಕರಾಳ ವಿದ್ಯಮಾನ ಮರುಕಳಿಸುವುದು ಅಸಾಧ್ಯವಾಗಿತ್ತು.
ಮೇ 19ರಂದು ದೆಹಲಿಯಲ್ಲಿ ಸಭೆ ನಡೆಸಿದ ಬಿಜೆಪಿಯ ವರಿಷ್ಠರು, ಆಡಿಯೋಗಳು ರಿಲೀಸಾಗಿ ರಾಷ್ಟ್ರಮಟ್ಟದಲ್ಲಿ ಮಾನ (ಇದೆ ಎಂದು ಭ್ರಮಿಸಿದ್ದರಿಂದ) ಹರಾಜಾಗಿದ್ದರಿಂದ ವಿಶ್ವಾಸಮತ ಯಾಚನೆ ಮಾಡದೇ, ಲೋಕಸಭೆ ಚುನಾವಣೆಯ ಭಾಷಣ ಮಾಡಬೇಕು ಎಂದು ಸೂಚಿಸಿದರು. ರೆಡ್ಡಿ-ರಾಮುಲುಗಳು ರಾತ್ರಿ ಕಸರತ್ತು ಮಾಡುವರು ಎಂದು ಇನ್ನೂ ದುರಾಶೆಯನ್ನು ಜೀವಂತ ಇಟ್ಟುಕೊಂಡಿದ್ದ ಯಡಿಯೂರಪ್ಪರು ಅಂದು ಎದೆ ಒಡೆದು ಸಾಯಲಿಲ್ಲ ಎಂಬುದೇ ಅವರ ರಾಜಕೀಯದ ‘ಎದೆಗಾರಿಕೆ’ಗೆ ನಿದರ್ಶನ!
ಮರುದಿನವೂ, ಅಂದರೆ ಮೇ 20ರಂದು ಆನಂದಸಿಂಗ್ ಮತ್ತು ಪ್ರತಾಪಗೌಡ ಪಾಟೀಲರು ಕಾಣದೇ ಇದ್ದಾಗ, ಯಡ್ಡಿ ಸಾಹೇಬರಿಗೆ ಮತ್ತೆ ಕನಸು ಚಿಗುರೊಡೆದಿರಲು ಸಾಕು. ಅವರೂ ಪ್ರತ್ಯಕ್ಷರಾದ ನಂತರ ಸದನಕ್ಕೆ ಬಂದ ಯಡಿಯೂರಪ್ಪ ವೀರ ಯೋಧನಂತೆ 2019ರ ಲೋಕಸಭೆ ಚುನಾವಣೆಯ ಪ್ರಚಾರ ಭಾಷಣ ಮಾಡಿ, ತಾವು ಹರಕೆಯ ಕುರಿ ಎಂದು ದೈನೇಸಿಯಾಗಿ ಬಿಂಬಿಸಲು ಯತ್ನಿಸಿ, ರಾಜಿನಾಮೆ ಘೋಷಿಸಿ, ಸಭಾತ್ಯಾಗ ಮಾಡಿದರು. ಅಲ್ಲಿಗೆ 56 ತಾಸಿನ ಅನೈತಿಕ ಅಧಿಕಾರ ಕೊನೆಗೊಂಡಿತ್ತಾದರೂ, ಕುಮಾರಸ್ವಾಮಿಗೆ ವಿಶ್ವಾಸಮತ ದಕ್ಕದಂತೆ ಮಾಡುವ ಕಾರ್ಯಾಚರಣೆ ಮಾತ್ರ ಆರಂಭವಾಗಿತ್ತು.
ಮೇ 23ರಂದು ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮ ವಿಪಕ್ಷಗಳ ಒಗ್ಗಟ್ಟಿಗೆ ಮುನ್ನುಡಿಯನ್ನೂ ಬರೆಯಿತು. ಕುಮಾರಸ್ವಾಮಿ ಸರ್ಕಾರ ಗಟ್ಟಿಯಾಗಿ ಭದ್ರವಾದ ನಂತರವೂ, ಶಾಸಕರ ಖರೀದಿಯ ಕೆಲಸವನ್ನು ಬಿಜೆಪಿ ಕೈ ಬಿಡಲೇ ಇಲ್ಲ. ಇವತ್ತಿಗೂ ಅದು ಅದೇ ಕೆಲಸದಲ್ಲಿ ನಿರತವಾಗಿದೆ.
ಹುಯಿಲು, ಹುನ್ನಾರ, ಹಪಾಹಪಿ
ಆಗಿಂದಲೂ ಹೇಗಾದರೂ ಮಾಡಿ, ಒಟ್ಟಿನಲ್ಲಿ ಅಧಿಕಾರ ಹಿಡಿಯುವ ಏಕೈಕ ಅಜೆಂಡಾ ಇಟ್ಟುಕೊಂಡು ಹರಸಾಹಸಗಳನ್ನು ಮಾಡುತ್ತಲೇ ಇರುವ ಬಿಜೆಪಿ, ಈ ಆಟದಲ್ಲಿ ಸತತ ಸೋಲುಗಳನ್ನು ಕಾಣುತ್ತಲೇ ಇದೆ. ಅದು ಇಲ್ಲಿವರೆಗೆ ಡಜನ್‍ಗೂ ಹೆಚ್ಚು ಬಾರಿ ಸರ್ಕಾರಕ್ಕೇ ಡೆಡ್‍ಲೈನ್ ನೀಡಿದೆ. ‘ಸರ್ಕಾರ ತಾನಾಗೇ ಬೀಳಲಿದೆ’ ಎಂದು ಆಚಾರದ ಮಾತನ್ನು ತನ್ನ ಕಪ್ಪು ನಾಲಿಗೆಯಿಂದ ಉದ್ಘರಿಸುತ್ತ ಬಂದಿದೆ. ಈ ಪ್ರಕ್ರಿಯೆಯಲ್ಲಿ ಅದು ತನಗೇ ಗೊತ್ತಿಲ್ಲದಂತೆ ತಾನು ವಿರೋಧಪಕ್ಷವಾಗಲೂ ಅಯೋಗ್ಯ, ನಾಲಾಯಕ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಇದರ ಲಾಭವನ್ನು ಹಲವಾರು ದೋಷಗಳುಳ್ಳ, ಭಾಗಶ: ಆಲಸಿಯಾಗಿರುವ ಕುಮಾರಸ್ವಾಮಿ ಸರ್ಕಾರ ಪಡೆದುಕೊಳ್ಳುತ್ತಿದೆ.
ಜೂನ್‍ನಲ್ಲೂ ಆಪರೇಷನ್ ಕಮಲದ ಯತ್ನಗಳು ನಡೆದೇ ಇದ್ದವು. ಜೂನ್ ಮೂರನೇ ವಾರದಲ್ಲಿ 15-20 ಶಾಸಕರಿಗೆ ಬಿಜೆಪಿ ಬಲೆ ಹಾಕಲು ಯತ್ನಿಸಿತ್ತು. ‘ಅತೃಪ್ತ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಜೂನ್ 23ರಂದು ಹೇಳಿದ್ದ ಯಡಿಯೂರಪ್ಪ, ಜೂನ್ 26ರಂದು ಬಸವರಾಜ ಬೊಮ್ಮಾಯಿಯವರ ಜೊತೆಗೆ ಅಹಮದಾಬಾದ್‍ಗೆ ತೆರಳಿ ಅಮಿತ್ ಶಾ ಜೊತೆಗೆ ಸರ್ಕಾರ ರಚನೆಯ ಕಸರತ್ತಿನ ಮಾಹಿತಿಗಳನ್ನು ನೀಡಿ ಬಂದಿದ್ದರು. ಅಲ್ಲಿಗೆ ಹೈಕಮಾಂಡೇ ಈ ದಂಧೆಗೆ ಸ್ಪೂರ್ತಿಎಂಬುದು ಮತ್ತೊಮ್ಮೆ ಸಾಬೀತಾಗಿತ್ತು.
ಜುಲೈ 10ರಂದು ಸದನದಲ್ಲಿ ಮಾತನಾಡಿದ ಯಡಿಯೂರಪ್ಪ, ಸರ್ಕಾರದ ತಪ್ಪುಗಳ ಬಗ್ಗೆ ಎಚ್ಚರಿಸುವ ಬದಲು, ‘ಕುಮಾರಸ್ವಾಮಿ, ನನಗೆ ನೀವು ದ್ರೋಹ ಬಗೆದಿದ್ದೀರಿ. ಧರ್ಮಸಿಂಗರಿಗೂ ದ್ರೋಹ ಮಾಡಿದ್ದೀರಿ. ಈ ಸಲವೂ ನನಗೆ ಅಧಿಕಾರ ಸಿಗದಂತೆ ಮಾಡಿದ್ದೀರಿ’ ಎಂದು ಮತ್ತೆ ಕುರ್ಚಿಯ ಜಪ ಮಾಡುವ ಮೂಲಕ ತಮ್ಮ ದುರಾಶೆ ಕಲಾಪದ ಕಡತಗಳಲ್ಲಿ ದಾಖಲಾಗುವಂತೆ ಮಾಡಿದರು.
ಐಟಿ-ಇಡಿ ನೆರವು!
ಸೆಪ್ಟೆಂಬರ್ 5ರಂದು ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಕುಮಾರಸ್ವಾಮಿ, ‘ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಂಡು ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಐಟಿ ಇಲಾಖೆಯ ಹಿರಿಯ ಅಧಿಕಾರಿಯನ್ನು ಭೇಟಿ ಮಾಡಿ ಮಾತಾಡಿದ್ದಾರೆ’ ಎಂದು ಆಪಾದಿಸಿದರು. ಆಗ ಜಾರಕಿಹೊಳಿ ಹಿಂದೆ ಬಿದ್ದಿದ್ದ ಬಿಜೆಪಿ ನಡೆ ಈ ಆರೋಪಕ್ಕೆ ಪುಷ್ಠಿ ನೀಡುವಂತೇ ಇತ್ತು.
ಸೆಪ್ಟೆಂಬರ್ 14 ರಂದು ಮತ್ತೆ ಆಪರೇಷನ್ ಕಮಲ ನಡೆಯುತ್ತಿರುವುದರ ಸೂಚನೆ ನೀಡಿದ ಕುಮಾರಸ್ವಾಮಿ, ಅಕ್ರಮ ಲಾಟರಿ ದಂಧೆಯವರು, ಗ್ಯಾಂಬ್ಲಿಂಗ್ ನಡೆಸುವವರು, ಅಕ್ರಮ ಮಟ್ಕಾ ದಂಧೆಕೋರರು ಅಪಾರ ಹಣ ಸಂಗ್ರಹಿಸುತ್ತಿದ್ದು, ಅವರ ನೆರವಿನಿಂದ ಬಿಜೆಪಿ ಸರ್ಕಾರ ಉರುಳಿಸಲು ತಯ್ಯಾರಿ ನಡೆಸಿದೆ. ಕಾಫಿ ಪ್ಲಾಂಟರ್ ಒಬ್ಬರ ಪತ್ನಿ ಮತ್ತು ಮಗನ ಕೊಲೆಯಲ್ಲಿ ಆರೋಪಿಯಾಗಿರುವಾತ ಮತ್ತು ಬಿಬಿಎಂಪಿಗೆ ಬೆಂಕಿ ಹಾಕಿದಾತ ಇದರಲ್ಲಿ ಇದ್ದಾರೆ’ ಎಂದು ಗಂಭೀರ ಅಪಾದನೆ ಮಾಡಿದರು. ಗುಪ್ತಚರ ಇಲಾಖೆಯೇ ಮಾಹಿತಿ ನೀಡಿದೆ ಎಂದು ಅವರು ಹೇಳಿದ್ದಕ್ಕೆ ಬಿಜೆಪಿ ‘ಅಂಥದ್ದೇನೂ ಇಲ್ಲ’ ಎಂದಿತಾದರೂ ಅದರ ನಾಯಕರ ನಡೆಗಳು ಸಂಶಯಕ್ಕೆ ಎಡೆ ಮಾಡಿದ್ದವು.
ಸೆಪ್ಟೆಂಬರ್ 15ರಂದು ‘ಬೆಂಗಳೂರು ಮಿರರ್’ ವರದಿಗಾರನೊಂದಿಗೆ ಮಾತಾಡಿದ ಗುಪ್ತಚರ ಅಧಿಕಾರಿಯೊಬ್ಬರು ಆ ಕಿಂಗ್‍ಪಿನ್‍ಗಳ ಮಾಹಿತಿ ನೀಡಿದರು. ಬಿಜೆಪಿ ಟಿಕೆಟ್‍ನಿಂದ ಸ್ಪರ್ಧಿಸಿ ಸೋತಿದ್ದ ಉದಯಗೌಡ ಎಂಬ ಭೂಗಳ್ಳ, ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ, ವಿಜಯ ಕಿರಂಗದೂರು (ಕೆಜಿಎಫ್ ನಿರ್ಮಾಪಕ, ಬಿಜೆಪಿ ನಾಯಕರೊಬ್ಬರ ಸಂಬಂಧಿ) ಈ ಕೃತ್ಯದಲ್ಲಿ ತೊಡಗಿದ್ಧಾರೆ ಎಂಬ ಮಾಹಿತಿ ನೀಡಿದರು.
ಸೆಪ್ಟೆಂಬರ್ 25ರಂದು ಬಿಜೆಪಿಯ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿ, ‘ಲೋಕಸಭಾ ಚುನಾವಣೆಗೂ ಮೊದಲು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಖಂಡಿತ. ಈಗಾಗಲೇ 15 ಶಾಸಕರು ಯಡಿಯೂರಪ್ಪರೊಂದಿಗೆ ಮಾತುಕತೆ ನಡೆಸಿದ್ದಾರೆ. ಸದ್ಯದಲ್ಲೇ ಸರ್ಕಾರಪತನ ಖಚಿತ’ ಎಂದು ಆಪ್-ಕಮಲ ನಡೆದೇ ಇರುವುದುನ್ನು ದೃಢಪಡಿಸಿದವು.
ಈ ನಡುವೆ ಆಗಾಗ ರಮೇಶ ಜಾರಕಿಹೊಳಿ ಹೆಸರು ಮುನ್ನೆಲೆಗೆ ಬರುವುದು, ಬಿಜೆಪಿಯ ಆಶೆ ಚಿಗುರುವುದೂ ನಡೆದೇ ಇತ್ತು.
ಬೈ-ಇಲೆಕ್ಷನ್: ಆಗಲೂ ಅದೇ ಅಜೆಂಡಾ!
ಮೂರು ಎಂಪಿ ಮತ್ತು ಎರಡು ಎಂಎಲ್‍ಎ ಸ್ಥಾನಗಳಿಗೆ ನವಂಬರ್ 3ರಂದು ಉಪಚುನಾವಣೆ ಎಂದು ಚುನಾವಣಾ ಆಯೋಗ ಅಕ್ಟೋಬರ್ 6ರಂದು ಘೋಷಿಸಿತು. ಅಲ್ಲಿಂದ ತಿಂಗಳು ಕಾಲ ಬರೀ ‘ಸರ್ಕಾರ ಬೀಳಲಿದೆ’ ಎಂದು ಬಿಜೆಪಿ, ‘ಸರ್ಕಾರ ಬಂಡೆಯಂತೆ ಗಟ್ಟಿ’ ಎಂದು ಮೈತ್ರಿಬಣ-ಈ ಮಾತುಗಳೇ ಪುನರಾವರ್ತನೆ ಆಗುತ್ತ ಬಂದವೇ ಹೊರತು ರಾಜ್ಯದ ನೈಜ ಸಮಸ್ಯೆಗಳ ಚರ್ಚೆ ಆಗಲೇ ಇಲ್ಲ. ಉಪ ಉನಾವಣೆಗಳಲ್ಲಿ ಬಿಜೆಪಿ ಗೆದ್ದರೆ 15-20 ಶಾಸಕರು ಬಿಜೆಪಿಗೆ ಬರುವುದೂ ಗ್ಯಾರಂಟಿ ಎಂದು ಹೇಳಲಾಯಿತು. ರೆಡ್ಡಿ-ರಾಮುಲು ಮತ್ತೆ ಕಾರ್ಯಪ್ರವೃತ್ತರಾದರು. ಆದರೆ ಚುನಾವಣೆ ಫಲಿತಾಂಶ ಬಂದಾಗ ಬಿಜೆಪಿಗೆ ಮುಖಭಂಗವಾಯಿತು. ಬಳ್ಳಾರಿಯಲ್ಲಿ ಅದು ಹೀನಾಯವಾಗಿ ಸೋತಿತು. ಬೇಲಿ ಮೇಲೆ ಕುಳಿತಿದ್ದ ಶಾಸಕರೂ ತೆಪ್ಪಗಾದರು. ಮತ್ತೆ ಯಡ್ಡಿಗೆ ದೊಡ್ಡ ನಿರಾಶೆಯಾಯಿತು.
ಡಿಸೆಂಬರ್ ಮೊದಲ ವಾರದಲ್ಲಿ ದೆಹಲಿಯ ಕಡೆಯಿಂದ ಆಪ್ ಕಮಲದ ಮಾತು ಬಂತು. ಸದ್ಯದಲ್ಲೇ ರಾಜ್ಯ ರಾಜಕೀಯದಲ್ಲಿ ಭೂಕಂಪ ಎಂದು ಪ್ರಕಾಶ ಜಾವಡೇಕರ್ ಹೇಳಿದರು. ಬೆನ್ನಲ್ಲೇ ದುಬೈ ಉದ್ಯಮಿಯೊಬ್ಬ ಶಾಸಕರ ಖರೀದಿಗೆ ನಿಂತಿರುವ ವಿಷಯ ಡಿಸೆಂಬರ್ 3ರಂದು ಬಯಲಾಯಿತು.
ಅಂದರೆ, ಚುನಾವಣೆಯ ಸೋಲನ್ನು ಒಪ್ಪಿಕೊಳ್ಳದ ಬಿಜೆಪಿಯು ಕರ್ನಾಟಕದಲ್ಲಿ ಅಸ್ಥಿರತೆಯನ್ನು ಉಂಟು ಮಾಡುವ ಪ್ರಯತ್ನವನ್ನು ಮೊದಲ ದಿನದಿಂದ ಇಲ್ಲಿಯವರೆಗೆ ನಡೆಸುತ್ತಲೇ ಇದೆ. ಈ ವಿಚಾರದಲ್ಲಿ ಉಳಿದೆರಡು ಪಕ್ಷಗಳನ್ನು ಅದರಲ್ಲೂ ಕಾಂಗ್ರೆಸ್ ಪಕ್ಷವನ್ನು (ಬಾಕ್ಸ್ ನೋಡಿ) ಕಟಕಟೆಯಲ್ಲಿ ನಿಲ್ಲಿಸಲೇಬೇಕು.
ಬಿಜೆಪಿಯ ನಿರ್ಲಜ್ಜ ನಡೆಗಳನ್ನು ಖಂಡಿಸುವತ್ತ ಯಾರೂ ಮುಂದಾಗುತ್ತಿಲ್ಲ. ಇವೆಲ್ಲವೂ ಯಾವುದೋ ಒಂದು ಕ್ರೀಡೆಯ ರೋಚಕ ನಡೆಗಳು ಎಂಬಂತೆ ನೋಡಲಾಗುತ್ತಿದೆ ಮತ್ತು ಮಾಧ್ಯಮಗಳು ಇಡೀ ರಾಜಕಾರಣವನ್ನು ಮತ್ತಷ್ಟು ಅನೈತಿಕಗೊಳಿಸುವಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿವೆ. ಇನ್ನಾದರೂ ರಾಜ್ಯದ ಪ್ರಜ್ಞಾವಂತ ಸಮೂಹ ಇದರ ವಿರುದ್ಧ ಕೆಲಸ ಮಾಡಲೇಬೇಕಿದೆ.

ಒಂದು ಸರ್ಕಾರವನ್ನು ಅಸ್ಥಿರಗೊಳಿಸುವ ವಿಚಾರದಲ್ಲಿ ಕಾಂಗ್ರೆಸಿಗೆ ದೀರ್ಘ ಇತಿಹಾಸವಿದೆ….
ರಾಜ್ಯದ ಮೂರೂ ಪ್ರಮುಖ ಪಕ್ಷಗಳಿಗೆ ಕರ್ನಾಟಕದ ಜನತೆ ಛೀಮಾರಿ ಹಾಕದಿದ್ದರೆ, ರಾಜ್ಯದ ಮತದಾರರನ್ನು ಇನ್ನಷ್ಟು ಮೂರ್ಖ ರನ್ನಾಗಿಸುವುದರಲ್ಲಿ ಸಂಶಯವಿಲ್ಲ. ಪ್ರಜಾಪ್ರಭುತ್ವದ ಘನತೆ, ಸಂವಿಧಾನ, ಚುನಾವಣಾ ಪ್ರಕ್ರಿಯೆ ಇವ್ಯಾವುದರ ಬಗ್ಗೆಯೂ ಕನಿಷ್ಠ ಕಾಳಜಿ ಇಲ್ಲದ ದ್ರೋಹಿ ಪಕ್ಷಗಳು ಇವಾಗಿವೆ. ದುರಂತವೆಂದರೆ, ಪಕ್ಷಗಳನ್ನು ಎಚ್ಚರಿಸಬೇಕಾದ ಮಾಧ್ಯಮಗಳು ಪಿಂಪ್ ಕೆಲಸ ಮಾಡುತ್ತಿವೆ. ಹೌದು, ಈ ರೀತಿಯ ಪದವನ್ನಲ್ಲದೇ ಅದನ್ನು ಸರಿಯಾಗಿ ವಿವರಿಸುವುದು ಕಷ್ಟ. ಸರ್ಕಾರ ಒಂದು ವೇಳೆ ಅನೈತಿಕ ಮಾರ್ಗದಿಂದ ಬೀಳುವುದಾದರೆ ಅದನ್ನು ಖಂಡಿಸಬೇಕಾದ್ದು ಮಾಧ್ಯಮಗಳ ಕರ್ತವ್ಯ. ಆದರೆ, ಅದನ್ನು ಪ್ರತಿನಿತ್ಯ ಕನಸಿನಲ್ಲೂ ಬಯಸುತ್ತಿರುವುದು ಮತ್ತು ಅದು ನಡೆಯುವ ಸೂಚನೆ ಸಿಕ್ಕರೆ ಸಂಭ್ರಮಿಸುವುದು ಹಾಗೂ ನಡೆಯದಿದ್ದಲ್ಲಿ, ನಡೆದೇ ಹೋಯಿತೆಂದು ಸುದ್ದಿ ಮಾಡುವುದನ್ನು ಪತ್ರಿಕೋದ್ಯಮವೆಂದು ಕರೆಯಲಾಗದು.
ಇದಕ್ಕಾಗಿ ಮೊದಲು ಯಾರನ್ನಾದರೂ ದೂರುವುದಾದರೆ ಕಾಂಗ್ರೆಸ್ ಪಕ್ಷವನ್ನು ದೂರಬೇಕು. ಸರ್ಕಾರವನ್ನು ಅಸ್ಥಿರಗೊಳಿಸುವ ವಿಚಾರದಲ್ಲಿ ಅವರಿಗೆ ದೀರ್ಘ ಇತಿಹಾಸವಿದೆ. ಆದರೆ, ದೂರಬೇಕಾದ್ದು ಅದರ ಹಿಂದಿನ ತಪ್ಪುಗಳಿಗಿಂತಲೂ ಹೆಚ್ಚಾಗಿ ಇಂದಿನ ಅಪರಾಧಗಳಿಗೆ. ಸರ್ಕಾರಗಳನ್ನು ಅಸ್ಥಿರಗೊಳಿಸಲು ಅಥವಾ ಅಸ್ಥಿರವೆಂದು ಘೋಷಿಸಿ ರಾಜ್ಯಪಾಲರ ಮೂಲಕ ವಜಾ ಮಾಡುವುದು ಜವಹರಲಾಲ್ ನೆಹರೂ ಅವರ ಕಾಲದಲ್ಲೇ ಆರಂಭವಾಯಿತು. ವಜಾಗೊಂಡ ಮೊಟ್ಟ ಮೊದಲ ಸರ್ಕಾರ ಕೇರಳದ ಇಎಂಎಸ್ ನಂಬೂದಿರಿಪಾಡ್ ಅವರ ಕಮ್ಯುನಿಸ್ಟ್ ಪಕ್ಷದ್ದಾಗಿತ್ತು. ಅದೇ ರೀತಿ ನ್ಯಾಯಬದ್ಧವಾಗಿ ಚುನಾಯಿತಗೊಂಡಿದ್ದ ಕಾಶ್ಮೀರದ ಷೇಕ್ ಅಬ್ದುಲ್ಲಾರ ಸರ್ಕಾರವನ್ನೂ ನೆಹರೂ ಅವರ ಸರ್ಕಾರವು ವಜಾಗೊಳಿಸಿತ್ತು.
ಇಂದಿರಾಗಾಂಧಿಯವರು ಇದನ್ನು ಇನ್ನೂ ವಿಪರೀತಗೊಳಿಸಿದ್ದರು. ಅದರಲ್ಲಿ ಬಹಳ ಕುಖ್ಯಾತವಾದದ್ದು ಜನಪ್ರಿಯ ಅಲೆಯಲ್ಲಿ ಗೆದ್ದು ಬಂದಿದ್ದ ಎನ್.ಟಿ.ರಾಮರಾವ್ ನೇತೃತ್ವದ ತೆಲುಗುದೇಶಂ ಸರ್ಕಾರವನ್ನು ಅಸ್ಥಿರಗೊಳಿಸಿದ್ದು. ಟಿಡಿಪಿಯ ನಾದೆಂಡ್ಲ ಭಾಸ್ಕರರಾವ್‍ರನ್ನು ಎತ್ತಿಕಟ್ಟಿ ಕೈಗೊಂಬೆ ರಾಜ್ಯಪಾಲ ರಾಮಲಾಲ್ ಮೂಲಕ ಎನ್‍ಟಿಆರ್ ಸಚಿವಸಂಪುಟವನ್ನು ವಜಾಗೊಳಿಸಿದ್ದರು. ನಂತರ ನಡೆದ ಜನಾಂದೋಲನಕ್ಕೆ ಹೆದರಿ ಮತ್ತೆ ಎನ್‍ಟಿಆರ್‍ರನ್ನು ಪ್ರತಿಷ್ಠಾಪನೆಗೊಳಿಸಬೇಕಾಯಿತು.
ಈ ಕೆಲಸವನ್ನು ರಾಜೀವ್‍ಗಾಂಧಿ ಸಹಾ ಮುಂದುವರೆಸಿದರು. ಕರ್ನಾಟಕದ ಜನತಾಪಕ್ಷದೊಳಗಿದ್ದ ಭಿನ್ನಮತವನ್ನು ನೆಪ ಮಾಡಿಕೊಂಡು ಸೂಕ್ತವಾದ ಅವಕಾಶವನ್ನೂ ಕೊಡದೇ ಕಾಂಗ್ರೆಸ್ ಸರ್ಕಾರದಿಂದ ನೇಮಕಗೊಂಡಿದ್ದ ರಾಜ್ಯಪಾಲ ಪೆಂಡೆಕಂಟಿ ವೆಂಕಟಸುಬ್ಬಯ್ಯ, ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿದರು. ರಾಷ್ಟ್ರಪತಿ ಆಡಳಿತದ ನಂತರ ಚುನಾವಣೆ ನಡೆದು ಕಾಂಗ್ರೆಸ್‍ನ ವೀರೇಂದ್ರ ಪಾಟೀಲರು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದರು. ಎಸ್.ಆರ್.ಬೊಮ್ಮಾಯಿ ಯವರು ಸುಪ್ರೀಂಕೋರ್ಟಿನಲ್ಲಿ ಹೂಡಿದ್ದ ಮೊಕದ್ದಮೆಯಲ್ಲಿ ರಾಷ್ಟ್ರಪತಿ ಆಡಳಿತವನ್ನು ತಪ್ಪೆಂದು ಘೋಷಿಸಿ ತೀರ್ಪು ಬಂದಿತು. ಇದುವರೆಗೂ ಅದೊಂದು ಮಹತ್ವದ ಕೇಸ್‍ಲಾ ಆಗಿ ಉಳಿದುಕೊಂಡಿದೆ.
ಅಲ್ಲಿಂದಾಚೆಗೆ ಕಾಂಗ್ರೆಸ್ ಅಂತಹ ತಪ್ಪುಗಳನ್ನು ಹೆಚ್ಚೇನೂ ಮಾಡಲು ಹೋಗಲಿಲ್ಲ. ಅದರಲ್ಲೂ ಸೋನಿಯಾಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷೆಯಾದ ಮೇಲೆ ಸಾಧ್ಯವಿದ್ದಷ್ಟೂ ಇಂತಹುದಕ್ಕೆ ಕೈ ಹಾಕಬಾರದು ಎಂಬ ತೀರ್ಮಾನ ಕೈಗೊಂಡರು. ಸರ್ಕಾರಗಳನ್ನು ಅಸ್ಥಿರಗೊಳಿಸಲಿಲ್ಲ ಮಾತ್ರವಲ್ಲಾ, ತಮ್ಮ ಜೊತೆಗೆ ಕೈ ಜೋಡಿಸಿದ ಮಿತ್ರ ಪಕ್ಷಗಳನ್ನೂ ಹೊಸಕುವ ಕೆಲಸಕ್ಕೆ ಹೋಗಲಿಲ್ಲ. ಇಲ್ಲಿಯವರೆಗೂ ಅದನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕಾಂಗ್ರೆಸ್‍ನ ಭೂತದ ಕರಾಳ ಇತಿಹಾಸವನ್ನು ದೂರುವುದರಲ್ಲಿ ಅರ್ಥವಿಲ್ಲ. ಆ ಇತಿಹಾಸವನ್ನು ಮರೆಯಬಾರದು ಎಂದಷ್ಟೇ ಹೇಳಬಹುದಾಗಿದೆ.
ದೂರಬೇಕಾದ್ದು ಬೇರೆ ಕಾರಣಕ್ಕೆ.
ಜಾರಕಿಹೊಳಿ ಸೋದರರೇ ಇರಲಿ, ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬಂದ ಗಣಿಚೋರರೇ ಇರಲಿ ಇಂತಹವರ ನಿಷ್ಠೆ ಪಕ್ಷಕ್ಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಜಾರಕಿಹೊಳಿ ಸೋದರರು ಬಹುಕಾಲದಿಂದ ಕಾಂಗ್ರೆಸ್ಸಿನಲ್ಲಿ ಇದ್ದಾರೆ ಎಂಬುದು ನಿಜವಾದರೂ, ಆಗಿಂದಾಗ್ಗೆ ಬಿಜೆಪಿಯತ್ತ ಹೋಗಬಹುದು ಎಂಬ ಸೂಚನೆ ನೀಡುವುದಂತೂ ಅಕ್ಷಮ್ಯ. ಅನಂದ್‍ಸಿಂಗ್‍ಅಂತೂ ಒರಿಜಿನಲ್ ಬಿಜೆಪಿ ಮತ್ತು ಗಣಿ ಕೇಸುಗಳುಳ್ಳ ವ್ಯಕ್ತಿ. ಇಂತಹವರಿಗೆ ಕಾಂಗ್ರೆಸ್‍ನಿಂದ ಟಿಕೆಟ್ ಏಕೆ ಕೊಟ್ಟರು?
ತನಗೆ ಮಂತ್ರಿ ಮಾಡದಿದ್ದರೆ ಪಕ್ಷ ತೊರೆಯುತ್ತೇನೆ ಎಂದು ಹೇಳುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಯಾವ ಸಿದ್ಧಾಂತವೂ ಇಲ್ಲ; ತನ್ನ ಕಾರ್ಯಕರ್ತರಿಗೆ ಹೋಗಲಿ ಶಾಸಕರಿಗೂ ಸರಿಯಾದ ಪಾಠ ಹೇಳಿಕೊಟ್ಟಿಲ್ಲ ಎಂದಾಯಿತಲ್ಲವೇ? ಇದು ಕಾಂಗ್ರೆಸ್‍ನ ವರ್ತಮಾನದ ದೊಡ್ಡ ಸಮಸ್ಯೆ. 2009ರಲ್ಲಿ ಬಿಜೆಪಿ ನಡೆಸಿದ ಆಪರೇಷನ್‍ನಲ್ಲಿ ಕಾಂಗ್ರೆಸ್ & ಜೆಡಿಎಸ್ ಎರಡೂ ಪಕ್ಷಗಳಿಂದ ಪಕ್ಷಾಂತರ ನಡೆಯಿತಾದರೂ ಈ ಸದ್ಯ ಅಂತಹ ಪರಿಸ್ಥಿತಿ ಇದ್ದಂತಿಲ್ಲ. ಹೀಗಾಗಿ ಕಾಂಗ್ರೆಸ್ ತನ್ನ ಶಾಸಕರ ಈ ಸೈದ್ಧಾಂತಿಕ ಮತ್ತು ನೈತಿಕ ದಿವಾಳಿಕೋರತನಕ್ಕೆ ಉತ್ತರದಾಯಿಯಾಗಲೇಬೇಕು. ಚುನಾವಣೆಯಲ್ಲಿ ಗೆದ್ದ ನಂತರ ರೆಸಾರ್ಟ್‍ಗಳಲ್ಲಿ ಶಾಸಕರನ್ನು ಇಟ್ಟುಕೊಂಡು ಕಾಯುತ್ತಿದ್ದ ಸಂದರ್ಭದಲ್ಲೇ ರಾಜ್ಯದ ಜನರು ಮೂರೂ ಪಕ್ಷಗಳಿಗೆ ಛೀಮಾರಿ ಹಾಕದಿರುವುದರಿಂದ ಈ ‘ಕ್ರೀಡೆ’ ಮುಂದುವರೆದಿದೆ. ಇದಕ್ಕೆ ಕೊನೆಹಾಡುವ ಕೆಲಸ ಆಗಲೇಬೇಕು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...