Homeಅಂಕಣಗಳುಕವಿ ಇಕ್ಬಾಲರ ರಾಮ

ಕವಿ ಇಕ್ಬಾಲರ ರಾಮ

- Advertisement -
- Advertisement -

ಉರ್ದುವಿನ ಪ್ರಖ್ಯಾತ ಕವಿ ಹಾಗೂ ದಾರ್ಶನಿಕ (1877-38) ಇಕ್ಬಾಲ್ ಎಂದರೆ `ಸಾರೆ ಜಹಾಂಸೆ ಅಚ್ಛಾ ಹಿಂದೂಸುತಾ ಹಮಾರ’ ಹಾಡೇ ನೆನಪಾಗುತ್ತದೆ. ಆದರೆ ಅವರ ಅಷ್ಟೊಂದು ಜನಪ್ರಿಯವಲ್ಲದ ಒಂದು ಪದ್ಯವಿದೆ. ಅದರ ಹೆಸರು ರಾಮ್! 1910ರಲ್ಲಿ ರಚಿಸಿದ್ದು. `ಸತ್ಯದ ಮದಿರೆಯಿಂದ ಹಿಂದೂಸ್ತಾನದ ಬಟ್ಟಲು ತುಳುಕುತಿದೆ, ಪಶ್ಚಿಮದ ಚಿಂತಕರು ಭಾರತದ ರಾಮನನ್ನು ಗುರುತಿಸಿಹರು’ ಎಂದು ಅದು ಶುರುವಾಗುತ್ತದೆ. ಮಂದುವರೆದು `ಇವನು ಭಾರತದ ದಾರ್ಶನಿಕರ ರಸದ ಪರಿಣಾಮ; ಔನ್ನತ್ಯದಲ್ಲಿ ಗಗನಕ್ಕಿಂತಲೂ ಎತ್ತರದಲ್ಲಿ ಮೆರೆಯುವ ನಿಶಾನೆ; ನಾಡಿನಲ್ಲಿ ದೇವತೆಗಳಷ್ಟು ಉನ್ನತವರ್ಗದವರು ಆಗಿಹೋದರು. ಇಂಥವರ ಕಾರಣದಿಂದ ಭಾರತದ ಖ್ಯಾತಿ ಹಬ್ಬಿದೆ. ರಾಮನ ದೆಸೆಯಿಂದ ಹಿಂದೂಸ್ತಾನದ ಹೆಮ್ಮೆ ಮೂಡಿದೆ, ವಿವೇಕಿಗಳ ಭಾರತದ ಆಧ್ಯಾತ್ಮಿಕ ನಾಯಕನೆಂದು ಇವನ ಗಣಿಸುವರು. ಜ್ಞಾನದೀವಿಗೆಯ ಚಮತ್ಕಾರನಿವನು; ಇವನಿಂದ ಭಾರತದ ಧೂಳ್ಸಂಜೆಗಳು ಬೆಳಗಿನ ಉಜ್ವಲತೆಯಿಂದ ಥಳಥಳಿಸಿವೆ; ಪಳಗಿದ ಯೋಧನಿವನು ಶೌರ್ಯದಲ್ಲಿ ಉಪಮಾತೀತ; ಪಾವಿತ್ರ್ಯದ ಮೂರ್ತಿಯಿವನು ಅಸದೃಶ ಪ್ರೇಮಿ’ ಎಂದು ಅದು ವರ್ಣಿಸುತ್ತದೆ.
ಭಾರತದ ಜನಪ್ರಿಯ ದೈವ ಮತ್ತು ಕಥಾನಾಯಕನನ್ನು ಕವಿತೆ ರಾಮನನ್ನು `ಇಮಾಮ್ ಎ ಹಿಂದ್’ ಎಂದು ಇಕ್ಬಾಲರು ಬಣ್ಣಿಸಲು ಪ್ರೇರಣೆ ಏನೆಂದು ಸ್ಪಷ್ಟವಾಗುವುದಿಲ್ಲ. ಆದರೆ ಕವಿಯೊಬ್ಬನು ತನ್ನ ಸುತ್ತಲಿನ ಪರಂಪರೆಯಲ್ಲಿರುವ ದೈವವನ್ನು ಅನುಸಂಧಾನ ಮಾಡಿರುವ ಸಹಜವಾದ ಬಗೆಯಿದು ಎಂದು ಹೇಳಬಹುದು. ಭಾರತದ ರಾಷ್ಟ್ರೀಯವಾದಿಗಳು ಇಡೀ ದೇಶವನ್ನು ಒಗ್ಗೂಡಿಸುವ ಸಂಕೇತಗಳಿಗೆ ಹುಡುಕುತ್ತಿದ್ದರು. ಗಾಂಧಿಗೆ ರಾಮ, ಚರಕ ಉಪ್ಪು ಸಿಕ್ಕಂತೆ ಅವರ ಸಮಕಾಲೀನರಾದ ಇಕ್ಬಾಲರಿಗೆ ರಾಮ ಸಿಕ್ಕಿರಬಹುದು. ಚರಿತ್ರೆಯುದ್ದಕ್ಕೂ ಪರ್ಶಿಯನ್ ಮತ್ತು ಉರ್ದು ಕವಿ-ವಿದ್ವಾಂಸರು, ಮುಸ್ಲಿಂ ಚಿತ್ರಕಲಾವಿದರು-ಸಂಗೀತಕಾರರು ರಾಮಾಯಣ-ಮಹಾಭಾರತ-ಭಾಗವತಗಳ ವಸ್ತುವಿಗೆ; ಉಪನಿಷತ್ತು-ಭಗವದ್ಗೀತೆಗಳ ಚಿಂತನೆಗೆ ಸ್ಪಂದಿಸುತ್ತಲೇ ಬಂದಿರುವ ಹಿನ್ನೆಲೆಯಲ್ಲಿ ನಓಡುವಾಗ, ಇಕ್ಬಾಲರ ರಾಮನ ಚಿತ್ರವು ಸೋಜಿಗವೆನಿಸುವುದಿಲ್ಲ. ವಿಶೇಷವೆಂದರೆ ಇಕ್ಬಾಲರು, ರಾಮನಾಮವನ್ನು ತನ್ನ ಜಪದ ಮಂತ್ರವನ್ನಾಗಿ (ಸೂಫಿಯಲ್ಲಿ ಇದನ್ನು ಝಿಕ್ರ್ ಎನ್ನುವರು) ಮಾಡಿಕೊಂಡಿದ್ದ ಕಬೀರನ ಹಾಗೆ ಸಾಂಪ್ರದಾಯಿಕ ಸಂತನಲ್ಲ. ಪಾಶ್ಚಿಮಾತ್ಯ ಆಧುನಿಕತೆಯ ಗರ್ಭದಿಂದ ಮೂಡಿದ ಧೀಮಂತ ಚಿಂತಕರಾಗಿದ್ದವರು. ಅವರ ಪದವಿ ವಿದ್ಯಾಭ್ಯಾಸ ಮುಗಿದಿದ್ದು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ. ಅವರ ಪಿಎಚ್.ಡಿ., ಸಂಶೋಧನೆ ಪೂರ್ಣಗೊಂಡಿದ್ದು ಜರ್ಮನಿಯಲ್ಲಿ. ಅವರಿಗೆ ಜಾಗತಿಕ ಇಸ್ಲಾಮಿಕ್ ಪರಂಪರೆಯ ಬಗ್ಗೆ ಅತೀವ ತಿಳುವಳಿಕೆಯಿತ್ತು. ಅವರು ಫಾರಸಿ ಅರಬ್ಬಿಯ ಪಂಡಿತರಾಗಿದ್ದರು. ಹಾಗೆ ಕಂಡರೆ ಅವರು ಬರೆಯಲು ಶುರುಮಾಡಿದ್ದೇ ಫಾರಸಿಯಲ್ಲಿ. ಅವರ `ಅಸ್ರಾರ್ ಎ ಖುದಿ’ (ಒಳಚೈತನ್ಯದ ರಹಸ್ಯ) ಫಾರಸಿ ಕಾವ್ಯ. ಆದರೆ ಅವರಿಗೆ ತಾನು ಬದುಕುತ್ತಿರುವ ದೇಶದ ಪೌರಾಣಿಕ ಚಾರಿತ್ರಿಕ ಸಂಗತಿಗಳ ಬಗ್ಗೆ ಧರ್ಮಾತೀತವಾದ ಸೆಳೆತವಿತ್ತು. ಅವರ ಪೂರ್ವಜರು ಕಾಶ್ಮೀರಿಪಂಡಿತರಾಗಿದ್ದುದು ಇದಕ್ಕೆ ಇನ್ನೊಂದು ಕಾರಣವಿದ್ದೀತು. ಅವರು ಪಾಶ್ಚಿಮಾತ್ಯ ನಾಸ್ತಿಕವಾದಿ ದಾರ್ಶನಿಕನಾದ ನೀಶೆಯಿಂದಲೂ ಫಾರಸಿಯ ಸಂತಕವಿ ರೂಮಿಯ ಕಾವ್ಯ ಮತ್ತು ಜೀವನದರ್ಶನದಿಂದಲೂ ಪ್ರಭಾವಿತರಾಗಿದ್ದರು. ಅವರು ಮಂಡಿಸಿದ `ಖುದಿ’ ಪರಿಕಲ್ಪನೆಯು, ಕುವೆಂಪು ಅವರ ನಿರಂಕುಶಮತಿಗೆ ಹತ್ತಿರವಾಗಿದೆ; ಅವಧೂತರು ಆರೂಢರು ತಮ್ಮ ಚೈತನ್ಯವನ್ನು ತಾವೇ ಶೋಧಿಸುವ ಸಾಧನೆಗೆ ಸಮೀಪವಾಗಿದೆ. ಅವರು ಖುದಿಯ ಮಹತ್ವವನ್ನು ಬಣ್ಣಿಸಿದ (“ಖುದಿಕೊ ಕರ್ ಬುಲಂದ್ ಇತನಾ ಕೆ ಹರ ತಖದೀರ್ ಸೆ ಪಹಲೆ, ಖುದಾ ಬಂದೇಸೆ ಖುದ್ ಪೂಛೆ ಕೆ ಬತಾತೇರಿ ರಜಾಕ್ಯಾ ಹೈ’’= `ನಿನ್ನ ಸ್ವಯವನ್ನು ಎಷ್ಟು ದೃಢಮಾಡು. ಎಷ್ಟೆಂದರೆ, ದೈವವೇ ಖುದ್ದಾಗಿ ಬಂದು ನಿನ್ನ ಆಶಯವೇನಪ್ಪ ಎಂದು ಕೇಳುವಂತೆ’) ಕವಿತೆಯ ಸಾಲುಗಳು ಪ್ರಖ್ಯಾತವಾಗಿವೆ. ಅಪ್ಪಟ ಧಾರ್ಮಿಕ ವ್ಯಕ್ತಿಯಾಗಿದ್ದ ಇಕ್ಬಾಲ್ ಎಲ್ಲ ಧರ್ಮಗಳ ಬಗ್ಗೆ ಆದರವಿದ್ದವರು. ಭಾರತದ ಬಹುರೂಪಿ ಸಂಸ್ಕøತಿಗಳ ಬಗ್ಗೆ ಅಭಿಮಾನ ಇದ್ದವರು. ಅವರ `ಸಾರೆ ಜಹಾಂಸೆ ಅಚ್ಛ’ದಲ್ಲಿ `ಮಝಬ್ ಸಿಖಾತಾ ನಹೀ ಆಪಸ್ ಮೆ ಬೈರ್ ರಖನಾ’ (ಧರ್ಮಗಳು ದ್ವೇಷವನ್ನು ಕಲಿಸುವುದಿಲ್ಲ) ಎಂಬ ಆಶಯಾತ್ಮಕ ಸಾಲಿದೆ. ಚರಿತ್ರೆ ಬಲ್ಲವರಿಗೆ ಅದು ನಿಜವಲ್ಲ ಎಂದು ಗೊತ್ತಿದೆ. ಆದರೆ ಧರ್ಮಗಳು ದ್ವೇಷವನ್ನು ಹುಟ್ಟಿಸಬಾರದು ಎಂಬುದು ಅಲ್ಲಿನ ಆಶಯ. ಭಾರತವು ಧರ್ಮದ ಹೆಸರಲ್ಲಿ ವಿಷವನ್ನು ಹುಟ್ಟಿಸುತ್ತಿದ್ದಾಗ ಅವರು ಬರೆದಿದ್ದು ಇದು. ದೇಶವು ಧರ್ಮದ ಹೆಸರಲ್ಲಿ ವಿಭಜನೆಗೊಂಡು ಅಮಾಯಕ ಜನರ ಬದುಕನ್ನು ಹೈರಾಣಗೊಳಿಸಿ ದುಃಖಗೀತೆಗಳನ್ನು ಬರೆದಿದ್ದನ್ನು ಓದಲು ಇಕ್ಬಾಲ್ 1947ರ ತನಕ ಉಳಿಯಲಿಲ್ಲ.
ಮುಸ್ಲಿಂ ಹಿನ್ನೆಲೆಯಿಂದ ಬಂದ ಭಾರತದ ದಾರ್ಶನಿಕರಿಗೆ ಕವಿಗಳಿಗೆ ಪಂಡಿತರಿಗೆ ಹಾಡುಗಾರರು ಅಲ್ಲಾಹನನ್ನು ಹೊರತುಪಡಿಸಿ ಬೇರಾವ ದೇವರಿಗೆ ನಿಷ್ಠೆದೋರುವುದು ಧರ್ಮವಿರೋಧವಾಗುವಂತಹ ಏಕದೇವೋಪಾಸಕ ಧರ್ಮಕ್ಕೆ ಸೇರಿದವರು. ಆದರೆ ಅವರಿಗೆ ಸಾಂಸ್ಕøತಿಕ ಕಲಾತ್ಮಕ ಆಧ್ಯಾತಿಕ ನೆಲೆಯಲ್ಲಿ ರಾಮ ಕೃಷ್ಣ ದೇವಿಯರನ್ನು ಕುರಿತು ಬರೆಯುವುದು ತೊಡಕೆನಿಸಲಿಲ್ಲ. ಸೂಫಿಗಳಂತೂ ಭಾರತದ ಧಾರ್ಮಿಕ ಪರಂಪರೆಯ ಜತೆ ಅನುಸಂಧಾನ ಮಾಡಿ ಭದ್ರವಾದ ಬುನಾದಿ ಹಾಕಿದ್ದರು. ಮಲಿಕ್ ಮಹಮದ್ ಜಾಯಸಿಯ `ಪದ್ಮಾವತ್’ ಕಾವ್ಯವಿರಬಹುದು; ಬಂಗಾಳದ ಸೂಫಿಕವಿ ಲಾಲುನ್ ಫಕೀರನು ರಚಿಸಿದ ರಾಧಾಕೃಷ್ಣರ ಪ್ರೇಮಕಾವ್ಯವಿರಬಹುದು; ಕನ್ನಡದ ಶಿಶುನಾಳರು ರಚಿಸಿದ ದೇವೀಸ್ತುತಿಗಳಿರಬಹುದು ಅಥವಾ ಸಾಲುಗುಂದಿಯ ಗುರುಪೀರಾರ ಬಸವಣ್ಣನ ಸ್ಮøತಿಗಳಿರಬಹುದು. ರಾಯಚೂರು ಜಿಲ್ಲೆಗೆ ಸೇರಿದ ಗೋನಾರೆ ಬಡೇಸಾಬರು ಹಂಪಿಯಲ್ಲಿ ದಾಸದೀಕ್ಷೆ ಪಡೆದು ಗೋನಾರೆ ರಾಮದಾಸರಾಗಿ ಬದಲಾಗುತ್ತಾರೆ. ಮೊಹರಂ ಕವಿಗಳು ಹಾಡುವ ರಾಮಾಯಣದಲ್ಲಿ ಹಜರತ ಅಲಿ ಫಾತಿಮಾ ರಾಮಸೀತೆಯರಾಗಿ, ಲವಕುಶರು ಹಸನಹುಸೇನರಾಗಿ ಬದಲಾಗಿಬಿಡುತ್ತಾರೆ. ಕವಿಗಳು ರಾಮಾಯಣವನ್ನು ತಮ್ಮ ಆಧ್ಯಾತ್ಮಿಕ ಕಾವ್ಯಕ್ಕಾಗಿ ವಸ್ತುವನ್ನಾಗಿ ಬಳಸಿದರೆ, ಕಬೀರದಾಸರಂತಹ ಸಂತರು ರಾಮನನ್ನು ಮಾನಸ ಜಪಕ್ಕೆ ಬೇಕಾದ ಮಂತ್ರವನ್ನಾಗಿ ರೂಪಿಸಿದರು. ಇದನ್ನು ಸೂಫಿಗಳು ಜಿಕ್ರ್ ಎನ್ನುವರು. `ರಾಮನಾಮ ಜಪೊಕರೊ’ ಎಂಬುದು ಕಬೀರರ ಪ್ರಸಿದ್ಧರಚನೆ. ಅವರು ರಾಮ-ರಹೀಮರನ್ನು ಈಶ್ವರ-ಅಲ್ಲಾ ಒಂದೇ ದೇವರ ಭಿನ್ನಹೆಸರುಗಳು ಎಂದು ಹೇಳುವಾಗ, ಬಹುಶಃ ಮಧ್ಯಯುಗಕ್ಕಾಗಲೇ ಹಿಂದು-ಮುಸ್ಲಿಂ ಭೇದವು ಜನರನ್ನು ವಿಭಜಿಸಲು ಆರಂಭಿಸಿತ್ತು. ಕಬೀರರ ಪ್ರಕಾರ ಲೋಕದಲ್ಲಿ ನಾಲ್ಕು ರಾಮರಿದ್ದಾರೆ-ದಶರಥನ ಮನೆಯಲ್ಲಿ ಬೆಳೆದ ರಾಜಕುಮಾರ, ರಾವಣನನ್ನು ಕೊಂದ ವೀರ, ಸೀತೆಯ ಗಂಡ ಇತ್ಯಾದಿ. ಅವರಲ್ಲಿ ನಾಲ್ಕನೆಯ ರಾಮನನ್ನೇ ಹೆಚ್ಚು ಮುಖ್ಯ. (`ಜಗಮೇ ಚಾರೋ ರಾಂ ಹೈ ತೀನ್ ರಾಂ ವ್ಯವಹಾರ್. ಚೌಥಾರಾಂ ನಿಜಸರ್ ತಕಾ ಕರೋ) ವಿಚಾರ. ಆದರೆ ರಾಮನಾಮವನ್ನು ಜಪದ ಮಂತ್ರವನ್ನಾಗಿಸಿದ ಕಬೀರನೇ, ಹಸಿವಾದಾಗ ಇದು ನೆರವಾಗುವುದಿಲ್ಲ; ಬೇಕಾಗುವುದು ರೊಟ್ಟಿ (`ನ ಕಚ್ ದೇಖಾ ರಾಮಭಜನಮೆ, ನಾ ಕಛ್ ದೇಖಾ ಪೋಥೀಮೇ, ಕಹದ್ ಕಬೀರ್ ಸುನೋಭಾಯಿ ಸಾಧು, ಜೋ ದೇಖಾ ದೊ ರೋಟಿಮೇ) ಎಂದು ಹೇಳುವ ಧೈರ್ಯ ತೋರುತ್ತಾನೆ. ಕಬೀರ್ ಆಶ್ರಮದಲ್ಲಿ ತಪಸ್ಸು ಮಾಡಿಕೊಂಡು ಬದುಕಿದವನಲ್ಲ. ಕೈಮಗ್ಗದ ಮುಂದೆ ಕೂತು ಬಟ್ಟೆ ನೇದು ದುಡಿಮೆ ಮಾಡಿದವನು. ದುಡಿವವನಿಗೆ ದೇವರು ರೊಟ್ಟಿಗಿಂತ ದೊಡ್ಡದಲ್ಲ ಎಂಬ ಸತ್ಯವನ್ನು ತಿಳಿದವನು.
ದೇವರ ಜತೆ ಹೀಗೆ ಆಟವಾಡುವುದನ್ನು ಕಾವ್ಯ ಮಾಡುವ ಧರ್ಮದ ಸಾಂಸ್ಕøತಿಕ ರೂಪಾಂತರ ಎನ್ನಬಹುದು. ಇಕ್ಬಾಲರು ರಾಮನನ್ನು `ಇಮಾಮ್ ಎ ಹಿಂದ್’ ಎನ್ನುವಾಗ, ಅದರೊಳಗೆ ನೀಶೆಯ ರೂಮಿಯ ಚಿಂತನೆಗಳೂ ಸೇರಿದ್ದವು. ನಾಮದೇವನು ತನ್ನೊಂದು ಅಭಂಗದಲ್ಲಿ ಕೇಶವನನ್ನು `ಖಲಂದರ್’ ಎಂದು ಕರೆಯುತ್ತಾನೆ. `ಆವೋ ಕೇಸವ ಖಲಂದರ್’ ಎಂದು ಆರಂಭವಾಗುವ ಈ ಹಾಡಿನಲ್ಲಿ `ತನು ಮಸಜಿದ್ ಮನಮೌಲಾನ’ ಎಂಬ ಸಾಲು ಬರುತ್ತದೆ. ಇದು ದೇಹವೇ ದೇಗುಲ ಎಂಬ ಬಸವನ ಹೇಳಿಕೆಗೆ ಸಮೀಪವಾದುದು. ಈ ಮರಾಠಿ ರಚನೆಯನ್ನು ಸಿಖ್ಖರು ತಮ್ಮ ಗುರುಗ್ರಂಥಸಾಹೇಬದಲ್ಲಿ ಸೇರಿಸಿಕೊಂಡರು. ಪಂಜಾಬಿನವರಾದ ಇಕ್ಬಾಲರಿಗೆ ದೈವಗಳ ಸಾಂಸ್ಕøತಿಕ ಮರುಹುಟ್ಟು ಮತ್ತು ಸೀಮೋಲ್ಲಂಘನ ಗೊತ್ತಿತ್ತು. ಭಾರತದ ಉಪಖಂಡದ ಬೇರೆಬೇರೆ ಸಂಸ್ಕøತಿ ಭಾಷೆ ಧರ್ಮ ಹಾಗೂ ಪ್ರದೇಶಗಳು ಬಹುರೂಪಿ ರಾಮರನ್ನು ಬಹುರೂಪಿ ಕೃಷ್ಣರನ್ನು ಸೃಷ್ಟಿಸಿರುವುದು ಸಹ ಗೊತ್ತಿತ್ತು. ಕನ್ನಡದ ಜನಪದ ರಾಮಾಯಣಗಳಲ್ಲಿ ರಾಮನು ಎಷ್ಟು ಸಹಜವಾದ ಮನುಷ್ಯನೆಂದರೆ, ಗರ್ಭಿಣಿ ಸೀತೆ ಹುಣಿಸೆಕಾಯನ್ನು ಬಯಸಲು ಆತ ಮರವನ್ನು ಹತ್ತುತ್ತಾನೆ. ಬಾಣವನ್ನು ಬಿಟ್ಟು ಉದುರಿಸುವುದಿಲ್ಲ. ಭಾರತದ ಈ ಪೌರಾಣಿಕ ರೂಪಾಂತರಗಳನ್ನು ಆಧರಿಸಿಯೇ ಎ.ಕೆ.ರಾಮಾನುಜನ್ ಅವರು `ತ್ರೀಹಂಡ್ರೆಡ್ ರಾಮಾಯಣಾಸ್’ ಪರಿಕಲ್ಪನೆಯನ್ನು ರೂಪಿಸಿದರು.
ಭಾರತದ ಮುಸ್ಲಿಂ ಹಿನ್ನೆಲೆಯಿಂದ ಬಂದ ಸಂಗೀತಗಾರರು ಕೂಡ ಭಾರತದ ಸಂತಪರಂಪರೆಯಲ್ಲಿದ್ದ ಈ ಧರ್ಮಾತೀತೆಯನ್ನು ತಮ್ಮ ಗಾಯನದಲ್ಲಿ ಮುಂದುವರೆಸಿದರು. ಅವರು ರಾಮ ಕೃಷ್ಣ ಕಾಳಿಯನ್ನು ಕುರಿತ ರಚನೆಗಳನ್ನು ಹಾಡಲು ಹಿಂಜರಿಯಲಿಲ್ಲ. ರಿಯಾಜ್ ಖವಾಲ್ ಅವರು ಗುಜರಾತಿನ ಭಕ್ತಕವಿ ನರಸಿಮಹೆತಾನ `ವೈಷ್ಣವ ಜನತೊ ತೇನೇ ಕಹಿಯೇ’ಯನ್ನು ಬಲೂಚಿಸ್ತಾನಿ ಪದ್ಧತಿಯಲ್ಲಿ ಖವಾಲಿಯಾಗಿ ಹಾಡಿದ್ದಾರೆ. ಈ ಗೀತೆ ಗಾಂಧಿಜಿಯವರಿಗೆ ಪ್ರಿಯವಾದುದು ಎಂಬ ಕಾರಣದಿಂದ ಹಲವಾರು ಜನರಿಂದ ಹಾಡಲ್ಪಟ್ಟಿದೆ. ಅವÀರಲ್ಲಿ ಬಿಜಾಪುರದ ಅಮೀರಬಾಯಿ ಕರ್ನಾಟಕಿಯವರ ಹಾಡಿಕೆಯೂ ಸೇರಿದೆ. 40ರ ದಶಕದಲ್ಲಿ ವಿಜಯಭಟ್ ನಿರ್ಮಿಸಿದ `ನರಸಿಭಗತ್’ ಚಿತ್ರಕ್ಕಾಗಿ ಅವರಿದನ್ನು ಹಾಡಿದರು. ಇದೇ ತರಹ `ಆವರೆ ಸಂತಾ ಆವರೆ ಸಾಧು ಕರಲೋ ದರ್ಶನ್ ರಾಮ್’ ಹಾಡನ್ನು ವಜೀರಲಿ ಶಾ ಖವಾಲ್ ಹಾಡುವುದನ್ನು ಗಮನಿಸಬಹುದು.
ಭಕ್ತಿಪಂಥಗಳಲ್ಲಿ ರಾಮನ ಇಲ್ಲವೇ ಕೃಷ್ಣ ಸಾಂಸ್ಕøತಿಕ ಮರುಹುಟ್ಟಿಗೆ ಕೇವಲ ಧಾರ್ಮಿಕ ಆಯಾಮವಿಲ್ಲ. ಈ ಹೆಸರುಗಳು ಸಾಧಕರ ಚೈತನ್ಯದ ಶೋಧದ ಸಂಕೇತಗಳು. ಗುರುಪಂಥಗಳು ಸಾಮಾನ್ಯ ಮನುಷ್ಯರನ್ನು ದೀಕ್ಷೆಯಿಂದ ವ್ಯಕ್ತಿವಿಶಿಷ್ಟ ಮಾನವರನ್ನಾಗಿ ರೂಪಾಂತರ ಮಾಡುತ್ತವೆ. ಇದೊಂದು ಬಗೆಯ ಮೇಲ್ಚಲನೆ. ಆರೂಢ ಶಬ್ದದಲ್ಲಿಯೂ ಏರುವಿಕೆ ಎಂಬರ್ಥವಿದೆಯಷ್ಟೆ. ಹೀಗೆ ದೀಕ್ಷೆ ಪಡೆದು ಸಾಧಕರಾದವರು ಗುಡಿಚರ್ಚು ಮಸಜೀದುಗಳಿಗೆ ಹೋಗುವುದಿಲ್ಲ. ತಮ್ಮೊಳಗೇ ಇರುವ ಚೈತನ್ಯವನ್ನು ಕಂಡುಕೊಳ್ಳಲು ಸಾಧನೆ ಮಾಡುತ್ತಾರೆ. ತಾವೇ ದೈವವಾಗುವ ಹಾದಿಯಿದು. ಆನೇ ಗುಹೇಶ್ವರ ಎಂದು ಅಲ್ಲಮ ಹೇಳುವುದು ಇದೇ ಅರ್ಥದಲ್ಲಿ. ಇಕ್ಬಾಲರ `ಖುದಿ’ ಕಲ್ಪನೆಯೂ ಇಂತಹುದೇ. ಅವರಿಗೆ ಅಲ್ಲಮ ಇಕ್ಬಾಲ್ ಎಂದೂ ಹೆಸರಿದ್ದುದು ಮಾರ್ಮಿಕವಾಗಿದೆ.
ಧರ್ಮ ಮತ್ತು ದೈವಗಳನ್ನು ಜನರನ್ನು ವಿಭಜಿಸುವ ಕೊಲ್ಲುವ ಹತ್ಯಾರ ಮಾಡಿಕೊಳ್ಳುವ ರಾಜಕಾರಣವು ಮತ್ತು ಅಧಿಕಾರ ಹಿಡಿಯುವುದಕ್ಕೆ ಬೇಕಾದ ಅಡ್ಡಹಾದಿಯನ್ನಾಗಿ ಮಾಡಿಕೊಳ್ಳುವ ರಾಜಕಾರಣವು, ಸಂತರು ಕವಿಗಳು ದೈವಗಳ ಮೂಲಕ ಮಾಡುವ ಈ ಆಧ್ಯಾತ್ಮಿಕ ಹುಡುಕಾಟವನ್ನು ಅರಿಯುವುದಿಲ್ಲ. ಅದಕ್ಕೆ ಧರ್ಮ ಮತ್ತು ದೈವಗಳನ್ನು ಜನರನ್ನು ಬೆಸೆಯುವ ನದಿಗಳಾಗಿ ಸೇತುವೆಗಳಾಗಿ ಸಂಸ್ಕøತಿಯ ಗುರುತುಗಳಾಗುವುದು ಅರ್ಥವಾಗುವುದಿಲ್ಲ. ಅದು ಮನುಷ್ಯರ ನಡುವೆ ಬೇಲಿಕಟ್ಟುತ್ತದೆ. ಧರ್ಮವನ್ನು ಸಾಂಸ್ಥಿಕ ಸ್ಥಾವರ ಮಾಡುತ್ತದೆ. ಸಂತಕವಿಗಳು ಮತ್ತೊಂದು ಧರ್ಮವನ್ನು ಜನರನ್ನು ಬೆಸೆಯುವ ಸೇತುವೆಯನ್ನಾಗಿಸುವರು. ಅವರಿಗೆ ಮನುಷ್ಯ ಅವನ ಕಾಯಕ, ಕಾಯಕ ಹಸಿವು ಕಾಯಕ ಪ್ರೀತಿ ಮುಖ್ಯ. ಈ ಧರ್ಮ ಸೀಮೋಲ್ಲಂಘನೆ ಮಾಡುತ್ತದೆ. ದೇಹದ ಹಾಗೆ, ದೇಹದೊಳಗಿನ ಕಾಯಕದ ಹಾಗೆ ಚಲಿಸುತ್ತದೆ. ಬಸವಣ್ಣ ಹೇಳಿದ್ದು ದೇಹವೇ ದೇಗುಲ ಎಂದು ಹೇಳುವಾಗ ಇದ್ದದ್ದು ಇದೇ ತತ್ವ. ಈ ಚಲಿಸುವ ಧರ್ಮವು ರಾಮಶಿವ ಕೃಷ್ಣ ಇವರನ್ನು ಕುರಿತು ಜಪಿಸಿ ಎಂದು ಹೇಳುತ್ತಿದ್ದರೂ, ಅಂತಿಮವಾಗಿ ಮನುಷ್ಯರನ್ನು ಕೇಂದ್ರೀಕರಿಸುತ್ತದೆ. ಅವರು ತಮ್ಮೊಳಗಿನ ಚೈತನ್ಯವನ್ನು ತಾವೇ ಹುಡುಕಿಕೊಂಡು ತಾವೇ ದೈವವಾಗುವುದನ್ನು ಹೇಳುತ್ತದೆ. ಕುರಾನಿನ ಸಾರಸತ್ವವನ್ನು ಹೀರಿಕೊಂಡಿದ್ದ ಇಕ್ಬಾಲ್ ರಾಮನ ಬಗ್ಗೆ ಸ್ತುತಿಸುವುದು ಈ ತತ್ವದಲ್ಲಿ. ಅವರ ರಾಮ ರಕ್ಕಸರ ಸಂಹಾರಕ್ಕೆ ಹುಟ್ಟಿದ ವಿಷ್ಣುವಿನ ಅವತಾರವಲ್ಲ. ದೇವರಲ್ಲ. ಸ್ವಸಾಧನೆಯಿಂದ ಬೆಳೆದು ಇಮಾಮ್ ಎ ಹಿಂದ್ ಆದವನು. ಸಂಘಪರಿವಾರವು ರಾಮನನ್ನು ಇಟ್ಟುಕೊಂಡು ಮಾಡುತ್ತಿರುವ ರಕ್ತಸಿಕ್ತ ರಾಜಕಾರಣವು ಇಲ್ಲದಿದ್ದ ಕಾಲದಲ್ಲಿ ಅವರು ಇದನ್ನು ನಿರಾಳವಾಗಿ ರಚಿಸಿದರು. ದ್ವೇಷಕಕ್ಕುವ ಬಲಪಂಥೀಯ ರಾಜಕಾರಣಿಗಳು ಮಾತ್ರವಲ್ಲ, ಅದರ ಬೆನ್ನುಬಿದ್ದಿರುವ ಧಾರ್ಮಿಕ ನಾಯಕರು ಸಹ ಭಾರತದ ಆಧ್ಯಾತ್ಮಿಕ ಪರಂಪರೆಗಳು ರೂಪಿಸಿದ ಈ ದೈವಗಳ ಸೀಮೋಲ್ಲಂಘನೆಯ ಸತ್ಯಕ್ಕೆ ಬಾಹಿರರಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...