Homeಸಾಮಾಜಿಕಇಟ್ಟಿಹರೆಜ್ಜೆ ನಮ್ಮ ಜನ, ಗೆದ್ದೇ ಗೆಲ್ಲುವೆವು ಮುಂದೊಂದು ದಿನ

ಇಟ್ಟಿಹರೆಜ್ಜೆ ನಮ್ಮ ಜನ, ಗೆದ್ದೇ ಗೆಲ್ಲುವೆವು ಮುಂದೊಂದು ದಿನ

- Advertisement -
- Advertisement -

ಕಳೆದ ಒಂದು ದಶಕದಿಂದ ಇಡೀ ರಾಜ್ಯವೇ ಬರಗಾಲದ ಬೇಗೆಯಲ್ಲಿ ನಲುಗುತ್ತಿದೆ. ಇದಕ್ಕೆ ಮರೆಮಲೆನಾಡು ಪ್ರದೇಶವಾಗಿರುವ ಹಾಸನ ಜಿಲ್ಲೆಯೇನೂ ಹೊರತಾಗಿಲ್ಲ. ಹಾಸನವನ್ನೂ ಒಳಗೊಂಡಂತೆ ಜಿಲ್ಲೆಯ 5 ತಾಲ್ಲೂಕುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೋದ ವರ್ಷ ಬರ ಪೀಡಿತ ರಾಜ್ಯಗಳ ಪಟ್ಟಿಗೆ ಸೇರಿಸಿವೆ. ಕಳೆದೆರಡು ವರ್ಷಗಳಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ದಾರುಣತೆಯೂ ಜೊತೆಗೂಡಿದೆ. ಮಳೆ ಬಾರದಿದ್ದಾಗ ನೀರಿನ ಹಾಹಾಕಾರವಿರುವ ನಗರಪ್ರದೇಶಗಳಿಗೆ, ಹಳ್ಳಿಗಳಿಗೆ ಟ್ಯಾಂಕರ್‍ಗಳ ಮೂಲಕ ಒಂದಷ್ಟು ದಿನಗಳ ಕಾಲ ನೀರುಕೊಟ್ಟು ಕೈತೊಳೆದುಕೊಳ್ಳುತ್ತಿದ್ದ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್‍ಗಳ ಮಧ್ಯೆ ಸದ್ದಿಲ್ಲದೆ ಚಿಗುರೊಡೆದದ್ದು ಹಸಿರುಭೂಮಿ ಪ್ರತಿಷ್ಠಾನ.
ಪರಿಸರದ ಬಗೆಗಿನ ಕಾಳಜಿಯುಳ್ಳ ಪರಿಸರ ಸಂಬಂಧಿ ಚಟುವಟಿಕೆಗಳು, ಬರಹಗಳು, ಹೋರಾಟಗಳನ್ನು ಮಾಡುತ್ತಿದ್ದ ಹಾಸನದ ಸಮಾನ ಮನಸ್ಸುಗಳು 2017ರ ಏಪ್ರಿಲ್‍ನಲ್ಲಿ ಒಂದೆಡೆ ಸೇರಿ, ನೀರಿನ ಬಗೆಯ ಅಧ್ಯಯನದೊಂದಿಗೆ, ಬರದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ಮುಂದಡಿ ಇಟ್ಟವರು. ಅಮೀರ್‍ಖಾನ್ ಮಹಾರಾಷ್ಟ್ರದಲ್ಲಿ ಬರದ ವಿರುದ್ಧ ಪಾನೀ ಫೌಂಡೇಶನ್ ಮೂಲಕ ನಡೆಸುತ್ತಿರುವ ಕೆಲಸಗಳ ಸಾಕ್ಷ್ಯಚಿತ್ರ ‘ದಿ ಬ್ಯಾಟಲ್ ಎಗೆನೆಸ್ಟ್ ಡ್ರಾಟ್’ ವೀಕ್ಷಿಸಿ, ನಂತರ ನಡೆಸಿದ ಚರ್ಚೆ ಅಲ್ಲಿ ನೆರೆದಿದ್ದ ಸಾಹಿತಿಗಳು, ಹೋರಾಟಗಾರರು, ಅಧಿಕಾರಿಗಳು, ಪತ್ರಕರ್ತರು, ಪರಿಸರಪ್ರೇಮಿಗಳು, ಕಲಾವಿದರಲ್ಲಿ ಕ್ರಿಯಾಶೀಲತೆಯಿಂದ ನೀರಿನ ಕೆಲಸದಲ್ಲಿ ತೊಡಗಲು ‘ಹಸಿರುಭೂಮಿ ಪ್ರತಿಸ್ಠಾನ’ವನ್ನು ಸ್ಥಾಪಿಸುವಂತೆ ಮಾಡಿತು.
ಪರಿಸರ ಮತ್ತು ಅಂತರ್ಜಲದ ಬಗೆಗೆ ನಾಡಿನ ಖ್ಯಾತ ಜಲ ಮತ್ತು ಅಂತರ್ಜಲ ತಜ್ಞರ ಮೂಲಕ ತರಬೇತಿ ಪಡೆದ ಹಸಿರುಭೂಮಿ ಪ್ರತಿಸ್ಠಾನದ ತಂಡ, ಆನಂತರ ಹೂಳು ತುಂಬಿ ಬತ್ತಿಹೋದ ಕೆರೆಗಳಲ್ಲಿ ಅಂತರ್ಜಲ ಹುಡುಕಿ ಕೆರೆ-ಕಲ್ಯಾಣಿಗಳಲ್ಲಿ ಹೂಳೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಈಗ ಇತಿಹಾಸ. 2017ರ ಮೇ 1ರ ಕಾರ್ಮಿಕ ದಿನದಂದು ಹಾಸನ ತಾಲ್ಲೂಕಿನ ದೊಡ್ಡಕೊಂಡಗುಳ ಗ್ರಾಮದಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಂಡು ಹೋಯ್ಸಳರ ಕಾಲದ 2 ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸುವ ಕೆಲಸವನ್ನು ಆರಂಭಿಸಿತು. ಹೂಳು ತುಂಬಿದ್ದ ಕಲ್ಯಾಣಿಗಳ ತಳಮಟ್ಟಕ್ಕೆ ಹೂಳು ತೆಗೆಯುತ್ತಿದ್ದಂತೆ ಜಲಚಿಲುಮೆ ಪಸರಿಸಿತು. ಆನಂತರ ಅದೇ ಊರಿನ ಕೆರೆಯನ್ನೂ ದಾನಿಗಳ ನೆರವಿನಿಂದ ಸುಮಾರು 6 ಲಕ್ಷ ಹಣವನ್ನು ವಿನಿಯೋಗಿಸಿ 20 ದಿನಗಳಲ್ಲಿ ಯಮತ್ರಗಳ ನೆರವಿನಿಂದ ಪುನಶ್ಚೇತನಗೊಳಿಸಿ ದಾಖಲೆ ಬರೆಯಿತು. ಆರಂಭದ ಮೊದಲನೆಯ ಪ್ರಯೋಗ ಯಶಸ್ಸು ಕಂಡ ಹುಮ್ಮಸ್ಸಿನಲ್ಲಿ ಮುನ್ನಡೆದ ತಂಡ ಹಾಸನ, ಚನ್ನರಾಯಪಟ್ಟಣ, ಅರಕಲಗೂಡು, ಬೇಲೂರು ತಾಲ್ಲೂಕುಗಳ ಹಲವಾರು ಹಳ್ಳಿಗಳಲ್ಲಿ ಸ್ಥಳೀಯರ ನೆರವಿನೊಂದಿಗೆ ತಂಡ ಕಟ್ಟಿ, ಜಲದ ಜಾಡನ್ನು ಹಿಡಿದು 35ಕ್ಕೂ ಹೆಚ್ಚಿನ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಿತು. ಹಾಗೂ ದಾನಿಗಳು, ಖಾಸಗಿ ಸಂಸ್ಥೆಗಳ ಸಾಮಾಜಿಕ ನಿಧಿಯ ನೆರವಿನೊಂದಿಗೆ 5ಕೆರೆಗಳನ್ನು 10ಅಡಿಗಳಷ್ಟು ಆಳಕ್ಕೆ ಹೂಳು ತೆಗೆದು ಪುನಶ್ಚೇತನಗೊಳಿಸುವಲ್ಲಿ ಹಸಿರುಭೂಮಿ ಪ್ರತಿಸ್ಠಾನ ಯಶಸ್ಸು ಕಂಡಿದೆ.
ಮೊದಲ ಯಶಸ್ಸು ಕಂಡ ದೊಡ್ಡಕೊಂಡಗುಳ ಕೆರೆಗೆ ನೀರು ಭರ್ತಿಯಾಗಿ ಸುತ್ತಮುತ್ತಲಿನ ಜಮೀನಿಗೆ, ಜಲಚರಗಳಿಗೆ, ಪ್ರಾಣಿ ಪಕ್ಷಿಗಳಿಗೆ, ಜನಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆಯನ್ನು ನೀಗಿಸಿದೆ. ಅಲ್ಲದೆ ತೆರೆದ ಬಾವಿಗಳು, ಕೊಳವೆಬಾವಿಗಳು ಅಂತರ್ಜಲ ವೃದ್ಧಿಸಿದ ಕಾರಣ ಭರ್ತಿಯಾಗಿವೆ. ಪ್ರತಿಷ್ಠಾನವು ಹಲವು ಗ್ರಾವiಗಳಲ್ಲಿ ಗ್ರಾಮ ಸ್ವರಾಜ್ ಸಮಿತಿಯನ್ನು ರಚನೆ ಮಾಡಿ ಇಂತಹ ಕೆಲಸಗಳಲ್ಲಿ ತೊಡಗಿಸಲು ಶ್ರಮಿಸುತ್ತಿದೆ. ದೊಡ್ಡಕೊಂಡಗುಳ ಗ್ರಾಮಸ್ವರಾಜ್ ಸಮಿತಿಯು ಹೋದ ವರ್ಷ ಕೆರೆಗೆ 15000 ಮೀನಿನ ಮರಿಗಳನ್ನು ಬಿಟ್ಟಿದ್ದು, ಕೆರೆಯನ್ನು ಸ್ವಚ್ಛವಾಗಿಸಿ, ಮೀನುಗಳ ಪೋಷಣೆ ಮಾಡಿದ್ದರ ಫಲವಾಗಿ ಮೀನುಗಳು ಅಭಿವೃದ್ಧಿಗೊಂಡು ಕಳೆದ ತಿಂಗಳು ಈ ಕೆರೆಯಲ್ಲಿ ಮೀನಗಳನ್ನು ಹಿಡಿದು ಕನಿಷ್ಠ ಬೆಲೆಗೆ ಮಾರಾಟ ಮಾಡಿದ್ದು ಒಂದು ಸಂತೋಷದ ವಿಚಾರ. ಈಗ 350 ಕೆ.ಜಿ ಇಂದ 35000 ರೂ ಆದಾಯ ತೊರೆತಿದೆ. ಮುಂದೆ ಒಂದೂವರೆ ಲಕ್ಷ ಆದಾಯದ ನಿರೀಕ್ಷೆಯಿದೆ. ಈ ಹಣವನ್ನು ಸಮಿತಿಯವರು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಬಳೆಸಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಸಮಿತಿಯು ಪ್ರತಿಷ್ಠಾನದೊಂದಿಗೆ ಕೈ ಜೋಡಿಸಿ ಶಾಲಾವರಣ, ಕೆರೆಯ ಸುತ್ತಮುತ್ತ, ಗುಂಡುತೋಪಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದು ಇದೂ ಕೂಡ ಗ್ರಾಮಕ್ಕೆ ಆದಾಯದ ಮೂಲವಾಗಿದ್ದು ಗ್ರಾಮವು ಸ್ವಾವಲಂಬಿ ಹಾಗೂ ಮಾದರಿ ಗ್ರಾವiವಾಗಿ ಪರಿವರ್ತನೆಗೊಳ್ಳಲು ಹಸಿರುಭೂಮಿ ಪ್ರತಿಷ್ಠಾನ ಅಹರ್ನಿಶಿ ಶ್ರಮಿಸುತ್ತಿದೆ.
ಹಾಸನದ ಉಪವಿಭಾಗಾಧಿಕಾರಿಗಳಾದ ಡಾ. ಎಚ್.ಎಲ್.ನಾಗರಾಜ್, ಚಿಂತಕರಾದ ರೂಪ ಹಾಸನ, ಪತ್ರಕರ್ತರಾದ ಆರ್.ಪಿ.ವೆಂಕಟೇಶಮೂರ್ತಿ, ಪರಿಸರಪ್ರಿಯ ಚ.ನಾ.ಅಶೋಕ್, ಇಂಜಿನಿಯರ್ ಸುಬ್ಬಸ್ವಾಮಿ, ವೆಂಕಟೇಗೌಡ, ದಾನಿಗಳಾದ ಡಾ.ಸಾವಿತ್ರಿ, ನಿವೃತ್ತ ಉಪನ್ಯಾಸಕರಾದ ಶಿವಶಂಕರಪ್ಪ, ಅಪ್ಪಾಜಿಗೌಡ, ಹಿರಿಯರಾದ ಪುಟ್ಟಯ್ಯ, ಸದ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೀವೇಗೌಡ, ಅಹರ್ನಿಶಿ ಪ್ರತಿಷ್ಠಾನದ ಕೆಲಸದಲ್ಲಿ ತೊಡಗಿರುವ ಡಾ.ಮಂಜುನಾಥ್, ಮಂಜುನಾಥ್ ಮೋರೆ, ಅಹಮದ್, ಸೌಭಾಗ್ಯ, ಬಿ.ಎಸ್.ದೇಸಾಯಿ, ತಿಮ್ಮೇಶ್‍ಪ್ರಭು, ಚಿನ್ನೇನಹಳ್ಳಿಸ್ವಾಮಿ, ಎಸ್.ಎಸ್.ಪಾಷಾ, ಪ್ರಸನ್ನ….. ಹೀಗೆ ಹಲವು ಪ್ರಜ್ಞಾವಂತ ಸದಸ್ಯರು ತಮ್ಮ ಉಳಿದೆಲ್ಲ ಕಾರ್ಯಗಳು, ಭಾಷಣಗಳನ್ನು ಬಿಟ್ಟು ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರ ಫಲವಾಗಿ ಇಂದು ಹಾಸನ ಜಿಲ್ಲೆಯ ಕೆಲವು ಹಳ್ಳಿಗಳು ಬರದ ಮಧ್ಯೆಯೂ ಜೀವಂತವಾಗಿ ಉಸಿರಾಡಲು ಸಾಧ್ಯವಾಗಿದೆ. ಇಂತಹ ಸ್ಫೂರ್ತಿ ನಾಡಿನ ಉದ್ದಕ್ಕೂ ಹಬ್ಬಲಿ, ರೈತರ ಬದುಕು ಹಸನಾಗಲಿ ಎಂಬುದು ನಮ್ಮ ಹಾರೈಕೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...