Homeಸಾಮಾಜಿಕಸಂಸ್ಕøತಿಯ ಕನಸುಗಾರ ಕಜುವೊ ಇಶಿಗುರೊ

ಸಂಸ್ಕøತಿಯ ಕನಸುಗಾರ ಕಜುವೊ ಇಶಿಗುರೊ

- Advertisement -
ಕಳೆದವಾರ ನೆನಪಿಸಿಕೊಂಡ ಇಂಗ್ಲೆಂಡಿನಲ್ಲರಳಿದ ನಾಗಸಾಕಿ ಹೂವು ಕಜುವೊ ಇಶಿಗುರೊ ಸಂಸ್ಕøತಿಯ ಮಹಾನ್ ಕನಸುಗಾರ. ತಾನು ಕಳೆದುಕೊಂಡ, ಆದರೂ ತನ್ನೊಳಗೇ ಕಾಪಿಟ್ಟುಕೊಂಡ ತನ್ನ ನೆಲದ ಸಂಸ್ಕøತಿಯ ಬೀಜಗಳನ್ನು ಪುನಃ ಬಿತ್ತುವ, ಆ ಮೂಲಕ ಕಥನವನ್ನು ಕಟ್ಟುವ ಜಾಣತನವನ್ನು ಕಂಡುಕೊಂಡ ಬರಹಗಾರ. ಸಾಹಿತ್ಯದ ಜಾಗತಿಕ ಶ್ರೇಷ್ಠತೆಯ ಪ್ರತಿಭೆಯಾಗಿ ಅದೂ ವಿರೋಧಿ ನೆಲದಲ್ಲಿ ವಲಸೆಗೊಂಡು, ತನ್ನದಲ್ಲದ ಭಾಷೆಯ ಪ್ರಭುತ್ವವನ್ನು ಮೆರೆದ ಇಶಿಗುರೊ ಅವರ ವಿಕಾಸದ ಕಥೆಯನ್ನು ಅವರ ಬಾಯಲ್ಲೇ ಕೇಳಬೇಕು. ನೊಬೆಲ್ ಬಹುಮಾನವನ್ನು ಸ್ವೀಕರಿಸುವ ಮುನ್ನ ಸಾಹಿತ್ಯದ ನೊಬೆಲ್ ಭಾಷಣದಲ್ಲಿ ಅವರು ಹಂಚಿಕೊಂಡದ್ದು ಅಂತಹ ಮಾತುಗಳನ್ನೇ! ಪುಸ್ತಕ ಜಗತ್ತಿನ ಪುರಸ್ಕಾರದ ಬಹುಮುಖ್ಯವಾದ ಬುಕರ್ ಪ್ರಶಸ್ತಿಯನ್ನು ಪಡೆದ ಅವರ ಒಂದು ಕೃತಿಯ ಕುರಿತು ಹಾಗೂ ಓರ್ವ ಶ್ರೇಷ್ಠ ಬರಹಗಾರನಾಗಿ, ಕಾದಂಬರಿಕಾರನಾಗಿ ವಿಕಾಸಗೊಂಡ ಅವರಾಡಿದ ಮಾತುಗಳ ಕುರಿತು ತಿಳಿಯದೆ ಇಶಿಗುರೊ ಪೂರ್ಣವಾಗಿ ದಕ್ಕುವುದಿಲ್ಲ. ಇಲ್ಲಿನ ಟಿಪ್ಪಣಿಗಳು ಅಂತಹ ಪೂರ್ಣತೆಯನ್ನು ಸ್ವಲ್ಪವಾದರೂ ತಲುಪುವ ದಾರಿಯ ಹುಡುಕಾಟವನ್ನು ಹೊಂದಿವೆ.
ನೊಬೆಲ್ ಭಾಷಣ
ಜಗತ್ತಿನ ಹೆಸರಾಂತ ಪುರಸ್ಕಾರವೊಂದನ್ನು ಪಡೆದ ಯಾವುದೇ ವ್ಯಕ್ತಿ ತಾನು ಆ ಸಾಧನೆಯ ಹಾದಿಯ ಅನುಭವಗಳನ್ನು ಹಂಚಿಕೊಳ್ಳುವುದು ಸಹಜವಾದದ್ದು. ನೊಬೆಲ್ ಬಹುಮಾನದ ಪುರಸ್ಕಾರದ ಮುನ್ನ ಪುರಸ್ಕøತರು ತಮ್ಮ ವಿದ್ವತ್ ಚಿಂತನೆಯ ಕ್ಷಣಗಳು ರೂಪುಗೊಂಡ ಬಗೆಯನ್ನು ಭಾಷಣವಾಗಿ ಕೊಡುವುದು ಒಂದು ಸಂಪ್ರದಾಯ ಮಾತ್ರವಲ್ಲ, ಅಂತಹ ಸಂದರ್ಭವು ಸಾಧನೆಯ ವೈಧಾನಿಕತೆಯನ್ನು ವಿವರಿಸಲು ಸಾಧ್ಯವಿದೆ. ಕಜುವೊ ಇಶಿಗುರೊ, ಅಪ್ಪನ ವೃತ್ತಿಯ ನಿಮಿತ್ತವಾಗಿ ಜಪಾನಿನಿಂದ ಇಂಗ್ಲೆಂಡಿಗೆ ಎಳೆತನದ ದಿನಗಳಲ್ಲೇ  ಬಂದವರು. ಜಾಗತಿಕ ಮಹಾಯುದ್ದಗಳಲ್ಲಿ ಜಪಾನ್ ವಿರೋಧಿ ರಾಷ್ಟ್ರಗಳಲ್ಲೊಂದಾದ ಬ್ರಿಟನ್ನಿನಲ್ಲಿ ಸ್ವಾಗತಗೊಂಡು ನೆಲೆಕಂಡ ಕ್ಷಣಗಳನ್ನು ಪ್ರಸ್ತಾಪಿಸುತ್ತಾ ಭಾಷಣವನ್ನು ಆರಂಭಿಸಿದರು. ಒಲ್ಲದ ನೆಲದಲ್ಲಿ, ಅಪರಿಚಿತ ಭಾಷೆಯಲ್ಲಿ ಕನಸುಗಳಿಗೆ ರೆಕ್ಕೆ ಕಟ್ಟಲು ಅವಕಾಶವಿತ್ತ ಅಭೂತಪೂರ್ವ ಮನಸ್ಸುಗಳನ್ನು ಮೆಚ್ಚಿಕೊಂಡರು. ಬ್ರಿಟಿಷ್ ನೆಲದ ಅಪ್ಪಿಕೊಳ್ಳುವ ಸಾಂಸ್ಕøತಿಕತೆಯನ್ನು ಎಳೆಎಳೆಯಾಗಿ ತೆರೆದಿಟ್ಟರು. ಅಷ್ಟರೊಳಗೆ ಸೃಜನಶೀಲ ಬರಹಗಾರನಾಗಲು ತನ್ನ ಒಳಗೇ ಹುದುಗಿದ್ದ ಹೆಚ್ಚೇನೂ ಕಾಣದ ಜಪಾನ್ ಸಂಸ್ಕøತಿಯನ್ನೂ ಕಟ್ಟಲು ಸಾಧ್ಯಮಾಡಿದ ಕಥನವನ್ನು ವಿವರಿಸಿದರು. ಬರಹಗಾರನಾಗುವ ಕ್ಷಣದಿಂದಲೇ ಬ್ರಿಟನ್ನಿನಲ್ಲಿದ್ದ ಜಾಗತಿಕ ಮನ್ನಣೆ ಪಡೆದ ನೈಪಾಲ್, ಸಲ್ಮಾನ್ ರಶ್ದಿಯವರಂತಹವರಿಂದ ಪ್ರೇರಣೆಗೊಂಡದನ್ನೂ ಪ್ರಸ್ತಾಪಿಸುತ್ತಲೇ ವಲಸಿಗರಾಗಿ ನೆಲೆಗೊಂಡ ನೆಲದ ಭಾಷೆಯಲ್ಲಿ ಅವರುಗಳು ಸ್ಥಾಪಿಸಿದ ಸಾಮ್ರಾಜ್ಯವನ್ನು ಮೂಲವಾಗಿಟ್ಟುಕೊಂಡು ಪೂರ್ವದ ತುದಿಯ ಸಂಸ್ಕøತಿಯವರೆಗೂ ವಿಸ್ತರಿಸಿದ ಬರಹಗಾರ.
ಕಜುವೊ ಇಶಿಗುರೊ ತಮ್ಮ ನೊಬೆಲ್ ಭಾಷಣವನ್ನು ಸಾಹಿತ್ಯ ಮತ್ತು ಸಾಂಸ್ಕøತಿಕ ವಲಸೆಯ ಮತ್ತು ಆ ಮೂಲಕ ಜೀವನದ ಅನುಸಂಧಾನವನ್ನು ವಿವರಿಸಿದರು. ಪೂರ್ವದ ತುದಿಯ ಜಪಾನಿಯನಾಗಿ ಹುಟ್ಟಿ ಪಶ್ಚಿಮದ ಬ್ರಿಟನ್ನಿಗೆ ವಲಸಿಗನಾಗಿ ಬಂದು ಇಂಗ್ಲೀಶ್ ಬರಹಗಾರನಾದ ಅಪೂರ್ವ ಕ್ಷಣಗಳನ್ನು ಹಂಚಿಕೊಂಡರು. ತಮ್ಮ ಅಧ್ಯಯನದ ಅವಕಾಶವು ಕಾದಂಬರಿಯ ರೂಪ ಪಡೆಯಲು ಕಾರಣವಾದ ವಾತಾವರಣದ ಸಹಕಾರವನ್ನೂ ಕುರಿತು ಇಶಿಗುರೊ ಮಾತನಾಡಿದರು. ಸಾಗರವಿಜ್ಞಾನಿಯಾದ ತಂದೆಯು ವೃತ್ತಿಯ ಬದುಕಿನಲ್ಲಿ ಸಂಗ್ರಹಿಸಿದ ಅನೇಕ ಮಾದರಿಗಳು ಬ್ರಿಟನ್ನಿನ ಮ್ಯೂಜಿಯಮ್ಮಿನಲ್ಲಿ ಶಾಶ್ವತ ಸ್ಥಾನ ಕಂಡುಕೊಂಡ ಕ್ಷಣಗಳ ಮೂಲಕ ಬದ್ಧತೆಯ ಹಿತದ ಪ್ರೇರಣೆಗಳನ್ನು ಹಂಚಿಕೊಂಡರು. ಸುಮಾರು ಮುಕ್ಕಾಲು ತಾಸಿನ ಅವರ ಎಲ್ಲಾ ಮಾತುಗಳ ಹಿತವನ್ನು ಈ ಬರಹದಲ್ಲಿ ಓದುವುದಕ್ಕಿಂತಲೂ, ಅವರ ಸಾಹಿತ್ಯಿಕ ಭಾಷಣದ ಪೂರ್ಣ ಪಾಠವನ್ನು ಯೂಟ್ಯೂಬಿನ ಈ ಲಿಂಕ್‍ನಲ್ಲಿ ನೋಡಿ ಕೇಳುತ್ತಾ ಆನಂದಿಸಬಹುದು. (hಣಣಠಿs://ತಿತಿತಿ.ಥಿouಣube.ಛಿom/ತಿಚಿಣಛಿh?v=ZW_5ಙ6eಞUಇತಿ).
ಇಶಿಗುರೊಗೆ ಬುಕರ್ ಬಹುಮಾನ ತಂದುಕೊಟ್ಟ ಕಾದಂಬರಿ-”The Remains of the Day”
ಕಜುವೊ ಇಶಿಗುರೊ ಸುಮಾರು ನಾಲ್ಕು ಬಾರಿ ಬುಕರ್ ಬಹುಮಾನಕ್ಕೆ ನಾಮನಿರ್ದೇಶನ ಪಡೆದ ಬರಹಗಾರ. ಆದಾಗ್ಯೂ ಒಮ್ಮೆ 1989ರಲ್ಲಿ ಮಾತ್ರವೆ ತಮ್ಮ “The Remains of the Day” ಕಾದಂಬರಿಗೆ ಬುಕರ್ ಬಹುಮಾನವನ್ನು ಪಡೆದರು. “ಈ ದಿನದ ಅವಶೇಷ- The Remains of the Day” ಕಾದಂಬರಿಯು 1993ರಲ್ಲಿ ಚಲನಚಿತ್ರವಾಗಿಯೂ ನಿರ್ಮಿತವಾಯಿತು. ಫಿಲಿಪ್ಸ್ ಆಂತೋಣಿ ಹಾಪ್‍ಕಿನ್ಸ್ ಮತ್ತು ಎಮ್ಮಾ ಥಾಮ್ಸನ್ ತಾರಾಗಣದಲ್ಲಿ ನಿರ್ಮಿಸಿದ ಚಲನ ಚಿತ್ರವು ಬರೋಬ್ಬರಿ ಎಂಟು ಪ್ರಕಾರಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿತ್ತು.  ಚಿತ್ರ ವೀಕ್ಷಣೆಗೆ ( https://www.youtube.com/watch?v=l_NM9Y5pTK8 )  ಲಿಂಕ್ ನೋಡಬಹುದು.
“The Remains of the Day” – ಕಥೆಯು ಓರ್ವ ಬಟ್ಲರ್- ದೊಡ್ಡಕುಟುಂಬದ ಮನೆಯ ಕೆಲಸದವ-  ತನ್ನ ಕಥೆಯನ್ನು ಹೇಳುವ ಮಾದರಿಯದು. ತನ್ನ ಜೀವನವನ್ನು ಡಾರ್ಲಿಂಗ್‍ಟನ್ ಕುಟುಂಬದ ಸೇವೆಗೆ ಮೀಸಲಿಟ್ಟ ವ್ಯಕ್ತಿ ಸ್ಟೀವನ್ಸ್‍ನ ಜೀವನದಲ್ಲಿ ನಡೆದ ಕಥೆಯ ನಿರೂಪಣೆಯು ಕಾದಂಬರಿಯ ಮೂಲ ಸರಕು. ಸ್ಟೀವನ್ಸ್ ತನ್ನ ಹಳೆಯ ಸಹಚರಳಾದ ಮಿಸ್ ಕೆಂಟನ್ ಅವಳಿಂದ ಪತ್ರವೊಂದನ್ನು ಪಡೆದುಕೊಳ್ಳುವ ಮೂಲಕ ಕಥನವು ಆರಂಭವಾಗುತ್ತದೆ. ಆಕೆಯ ವೈವಾಹಿಕ ಜೀವನವನ್ನು ವಿವರಿಸುವ ಪತ್ರವು, ಬದುಕಿನ ದುಃಖದ ಅನುಭವಗಳನ್ನು ಸೂಕ್ಷ್ಮವಾಗಿ ಹೇಳಿಕೊಂಡ ಸಾಲುಗಳನ್ನು ಹೊತ್ತಿರುತ್ತದೆ.
ಪತ್ರವು ತಲುಪಿದ ಸಮಯವು ಒಂದು ರೀತಿಯಲ್ಲಿ ಹಳೆಯ ನೆನಪನ್ನು ಮರುಕಳಿಸಿ, ಹಿಂದೊಮ್ಮೆ ಬೆಳೆದಿದ್ದ ಸ್ನೇಹವನ್ನು ಮತ್ತೆ ಕಾಣುವ ಕನಸನ್ನು ಬಿತ್ತುತ್ತದೆ. ಸ್ಟೀವನ್ಸ್‍ನ ಈಗಿನ ಹೊಸ ಧಣಿ ಫ್ಯಾರಡೆಯು ಅಮೆರಿಕಾದ ಶ್ರೀಮಂತ, ಜೊತೆಯಲ್ಲಿ ತುಂಬು ಧಾರಾಳಿ. ಹಾಗಾಗಿ ಸ್ಟೀವನ್ಸ್‍ಗೆ ಗಳಿಕೆಯ ರಜೆಯಲ್ಲಿ ತನ್ನ ಕಾರನ್ನು ಪ್ರವಾಸಕ್ಕೆಂದು ಕೊಡುತ್ತಾನೆ. ಕಾರನ್ನು ಪಡೆದ ಸ್ಟೀವನ್ಸ್ ಅದೇ ಅವಕಾಶವನ್ನು ಗೆಳತಿ ಕೆಂಟನ್‍ಳನ್ನು ಭೇಟಿಯಾಗಲು ಬಳಸುತ್ತಾನೆ. ಈಗ ಅವಳು ಮಿಸೆಸ್ ಬೆನ್.  ಈಗ ಕಾರ್ನ್‍ವಾಲ್ ಎಂಬಲ್ಲಿ ನೆಲಸಿದ ಆಕೆಯನ್ನು ಅವನು ಹುಡುಕಿಕೊಂಡು ಬರುತ್ತಾನೆ.
ಹಿಂದೊಮ್ಮೆ ಸ್ಟೀವನ್ಸ್ ಹಾಗೂ ಆತನ ಅಪ್ಪ ಕೂಡ ಡಾರ್ಲಿಂಗ್‍ಟನ್ ಕುಟುಂಬದ ಸೇವೆಗೆ ಜೀವನವನ್ನೇ ಮೀಸಲಿಟ್ಟವರು. ಡಾರ್ಲಿಂಗ್‍ಟನ್ ಆದರೋ ಎರಡನೆಯ ಪ್ರಪಂಚದ ಮಹಾಯುದ್ದದಲ್ಲಿ ಜರ್ಮನಿ ಮತ್ತು ಇಂಗ್ಲೆಂಡಿನ ಅಂತರರಾಷ್ಟ್ರೀಯ ಕೂಟಗಳನ್ನು ಪ್ರೇರೇಪಿಸಿದವರು. ಅಂತಹವರ ಮಹತ್ವದ ಸಾನಿಧ್ಯವನ್ನು ಮತ್ತು ಸೇವೆಯನ್ನು ಬಳಸಿಕೊಂಡು ತನ್ನ ನಿರೂಪಿಸಿಕೊಳ್ಳುವ ಮೂಲಕ ಜೊತೆಗೆ ಮಿಸ್ ಕೆಂಟನ್‍ಳ ಜೊತೆಗಿನ ಬಾಂಧವ್ಯವನ್ನೂ ಹೊರಗೆಡಹುವ ನಿಟ್ಟಿನಲ್ಲಿ ಕಥೆಯು ಮುಂದುವರೆಯುತ್ತದೆ. ಎರಡು ಯುದ್ಧಗಳ ಮಧ್ಯಂತರದಲ್ಲಿ ಇಬ್ಬರೂ ಜೊತೆಯಾಗಿ ನಿರ್ವಹಿಸಿದ ಕೆಲಸಗಳಲ್ಲಿ ತಮ್ಮದೇ ನಡುವಣ ಪ್ರೀತಿಯನ್ನು ಒಪ್ಪಿಕೊಳ್ಳುವಲ್ಲಿ ಹಿಂಜರಿಯುತ್ತಾರೆ. ಇನ್ನೇನು ಪ್ರೀತಿಯ ಗಡಿ ದಾಟಿದರು ಎನ್ನುವಷ್ಟರಲ್ಲಿ ಹಿಂದೆ ಉಳಿಯುತ್ತಾರೆ. ನೇಪಥ್ಯದ ನೆನಕೆಯಲ್ಲಿ ವೃತ್ತಿಯ ಕರ್ತವ್ಯಪ್ರಜ್ಞೆಯು ಪ್ರತಿಫಲಿಸುತ್ತದೆ.
ಮತ್ತೊಮ್ಮೆ ಕೊನೆಗೂ ಭೇಟಿಯಾದಾಗ ಆಕೆ ಮಿಸಸ್ ಬೆನ್ ಆಗಿದ್ದು ಮದುವೆ ಆಗಿ 20 ವರ್ಷ ಕಳೆದಿರುತ್ತದೆ. ತಾನು ಮದುವೆ ಆಗಿ ತಪ್ಪು ಮಾಡಿದೆನಾ ಎಂದು ಆಕೆಗೆ ಅನಿಸಿದರೂ, ನಿಜವಾಗಿಯೂ ತನ್ನ ಗಂಡನ ಪ್ರೀತಿಗಾಗಿ ಮತ್ತು ಮುಂದಿನ ದಿನಗಳ ಮೊಮ್ಮಗುವಿನ ಬಯಕೆಗಾಗಿ ಬಂದದ್ದು ಎನಿಸುತ್ತದೆ. ಸ್ಟೀವನ್ಸ್‍ಗೆ ಕಳೆದುಹೋದ ಡಾರ್ಲಿಂಗ್‍ಟನ್ ಕುಟುಂಬದ ಸೇವೆ ಮತ್ತು ಅದರೊಳಗಿನ ದಶಕಗಳ ಕಾಲದ ಸ್ವಾರ್ಥರಹಿತ ಒಳಗೊಳ್ಳುವಿಕೆ ಎಲ್ಲವೂ ಮರುಕಳಿಸುತ್ತವೆ. ಕೆಂಟನ್ ಜೊತೆಗಿನ ಎಲ್ಲಾ ಹಳೆಯ ದಿನಗಳ ಜೊತೆಗೆ ಅನುಭವದ ಎಲ್ಲವೂ ಆತನ ಮನಸ್ಸಿಗೆ ಮರುಕಳಿಸುತ್ತವೆ. ಕಥೆಯ ಕೊನೆಯಲ್ಲಿ ಅವೆಲ್ಲವನ್ನೂ “ದಿನದ ಅವಶೇಷ” ಗಳಾಗಿ ಸ್ಟೀವನ್ಸ್ ಮತ್ತೆ ಫ್ಯಾರಡೆಯ ಸೇವೆಯ ಕಡೆಗೆ ಮತ್ತು ಉಳಿದ ಬದುಕಿನ ಕಡೆಗೆ ತಿರುಗಿಸುತ್ತಾರೆ. “ದಿನದ ಅವಶೇಷ- The Remains of the Day” ದ ಕಥೆಯು ಮುಕ್ತಾಯಗೊಳ್ಳುತ್ತದೆ.
ಕಾದಂಬರಿ ಹಾಗೂ ಚಲನಚಿತ್ರ ಕ್ಷೇತ್ರಗಳೆರಡರಲ್ಲೂ ಹೆಸರು ಮಾಡಿದ ಇಶಿಗುರೊ ಅವರ ಕೊಡುಗೆಯ ಕೃತಿಯು ಓದುಗರಲ್ಲಿ ಓದಬೇಕಾದ ಅವಶೇಷವನ್ನು ಉಳಿಸುತ್ತದೆ. ಈ ಕಥನದ ಪುಸ್ತಕ ಹಾಗೂ ಚಲನಚಿತ್ರಗಳೆರಡರ ಕುರಿತ ಇಶಿಗುರೊ ಸಂದರ್ಶನವನ್ನು (https://www.youtube.com/watch?v=g1P6c3yomp0) ಲಿಂಕ್‍ನಲ್ಲಿ ನೋಡಬಹುದು.
ಹೀಗೆ ಮಹತ್ವದ ಸಾಹಿತ್ಯವನ್ನು ಕೊಡುತ್ತಲೇ ಇಶಿಗುರೊ ಸಿನಿಮಾದತ್ತ ಒಲವು ತೋರಿಸುತ್ತಾರೆ. ಅದನ್ನೂ ತುಂಬಾ ಆಪ್ಯಾಯಮಾನವಾಗಿ ಅಪ್ಪಿಕೊಳ್ಳುತ್ತಾರೆ. ತಾನೊಬ್ಬ ಚಲನಚಿತ್ರ ಪ್ರೇಮಿ ಎಂದೇ ಕರೆದುಕೊಳ್ಳುವ ಇಶಿಗುರೊ ಕೆಲವು ಚಿತ್ರಗಳಿಗೂ ಚಿತ್ರ ಕಥನವನ್ನು ಬರೆದಿದ್ದಾರೆ. ಚಿತ್ರಗಳ ಪ್ರೀತಿಯ ಜೊತೆಯಲ್ಲಿ ಸಂಗೀತಕ್ಕೂ ಒಂದಷ್ಟು ಮನಸೋತವರು ಇಶಿಗುರೊ. ಖ್ಯಾತ ಜಾಜ್ ಹಾಡುಗಾರ್ತಿ ಸ್ಟೆಸಿ ಕೆಂಟ್ ಮತ್ತು ಆಕೆಯ ಗಂಡ ಸ್ಯಾಕ್ಸೊಫೋನ್ ವಾದಕ ಜಿಮ್ ಟಾಮಿಲಿನ್‍ಸನ್ ಅವರ ಆಲ್ಬಂಗಳಿಗಾಗಿ ಹಲವಾರು ಹಾಡುಗಳನ್ನು ಬರೆದುಕೊಟ್ಟಿದ್ದಾರೆ. ಅವುಗಳಲ್ಲಿ ಒಂದಾದ Breakfast on the Morning Tram” ಆಲ್ಬಂನ ಪ್ರಸಿದ್ಧ ಗೀತ ರಚನೆಕಾರ ಕಜುವೋ ಇಶಿಗುರೊ. ಇದು ಗ್ರಾಮಿ ಪುರಸ್ಕಾರಕ್ಕೆ ನಾಮಾಂಕಿತಗೊಂಡಿತ್ತು.
ಹೀಗೆ ಕಥೆ, ಕಾದಂಬರಿ, ಹಾಡು, ಚಲನಚಿತ್ರ, ಸಂಗೀತ ಮುಂತಾಗಿ ಸೃಜನಶೀಲ ಕಲೆಯ ಹತ್ತಾರು ಮಜಲುಗಳ ಔನ್ನತ್ಯಕ್ಕೆ ಏರಿದವರು ಕಜುವೊ ಇಶಿಗುರೊ. ಇಶಿಗುರೊ ಅವರ ‘The Remains of the Day’ ಮತ್ತು ‘Never Let Me Go’ ಕಾದಂಬರಿಗಳನ್ನು ನೊಬೆಲ್ ಬಹುಮಾನದ ಸಾಹಿತ್ಯದ ಸ್ವೀಡಿಶ್ ಅಕಾಡೆಮಿಯು ಬಹುವಾಗಿ ಕೊಂಡಾಡಿದೆ. ಇಶಿಗುರೊ ನೊಬೆಲ್ ಬಹುಮಾನವನ್ನಲ್ಲದೆ ಹಲವಾರು ಸಾಹಿತ್ಯದ ಬಹುಮಾನಗಳನ್ನೂ ಮುಡಿಗೇರಿಸಿಕೊಂಡವರು. ಅಷ್ಟಾದರೂ ನೊಬೆಲ್ ಬಹುಮಾನವು ಇಶಿಗುರೊ ಅವರಿಗೆ ಒಂದು ಅಚ್ಚರಿಯ ಸಂಗತಿ. ಅಂತಹದ್ದೊಂದು ತಮಾಷೆಯ ಸುದ್ದಿಯಿರಬಹುದೇ ಎಂದುಕೊಂಡದ್ದೂ ಉಂಟಂತೆ!
ಬ್ರಿಟಿಷ್ ಪ್ರಜೆಯಾದ ಕಜುವೊ ಲೊರ್ನಾ ಮ್ಯಾಕ್‍ಡೊಗಾಲ್ ಎಂಬ ಸಾಮಾಜಿಕ ಕಾರ್ಯಕರ್ತೆಯನ್ನು ಮದುವೆ ಆಗಿದ್ದಾರೆ. ದಂಪತಿಗಳು ಹೀಗೆ ಒಮ್ಮೆ ಸಾಮಾಜಿಕ ಸನ್ನಿವೇಶದಲ್ಲೇ ಭೇಟಿಯಾಗಿ ಒಂದಾದವರು. ಲಂಡನ್ನಿನಲ್ಲಿ ನೆಲೆಸಿದ ಅವರಿಗೆ ನಾವೊಮಿ ಎಂಬ ಮಗಳಿದ್ದಾಳೆ. ಶಾಂತ ಸ್ವಭಾವದ ಇಶಿಗುರೊ, 2016ರ ಸಾಹಿತ್ಯದ ನೊಬೆಲ್ ಪುರಸ್ಕøತ ಬಾಬ್ ಡೈಲನ್‍ರ ಕಟ್ಟಾ ಅಭಿಮಾನಿ. ಬಾಬ್ ಓರ್ವ ಸಂಗೀತಕಾರ, ಗೀತರಚನಕಾರ, ಕಲಾವಿದ ಹಾಗೂ ಬರಹಗಾರ. ಅಮೆರಿಕದಲ್ಲಿ ನೆಲೆಸಿದ ಬಾಬ್‍ಡೈಲನ್ ಕಳೆದ ಐದಾರು ದಶಕಗಳಿಂದ ಪ್ರಭಾವಿ ಕಲಾವಿದನಾಗಿ ಹೆಸರು ಮಾಡಿದ ವ್ಯಕ್ತಿಯಾಗಿದ್ದಾರೆ.
ಅಪ್ಪನ ಬದ್ಧತೆಯ ಬದುಕು, ಅಮ್ಮ ನಿರ್ವಹಿಸಿದ ಜಪಾನಿ ಸಂಸ್ಕøತಿಯ ಮನೆಯ ವಾತಾವರಣ, ನೆಲೆಗೊಂಡ ಆರಂಭದಲ್ಲಿ ಓದಿನ ಶಾಲೆಯಲ್ಲಿ ಒಬ್ಬನೇ ದೂರ ದೇಶವೊಂದರ ಹುಡುಗನಾಗಿ, ದೇಶ ಮತ್ತು ಕುಲಗಳೆರಡರಲ್ಲೂ ಮತ್ತೋರ್ವನಾಗಿಯೇ ಬ್ರಿಟಿಷರಾದವರು ಇಶಿಗುರೊ. ವಲಸೆಯಲ್ಲೂ ಕಳೆದುಹೋದ ನೆಮ್ಮದಿಯನ್ನು ಕಟ್ಟುವ ಪೂರ್ವದ ಶಕ್ತಿಯನ್ನು ಪಶ್ಚಿಮದ ಭಾಷೆಯಲ್ಲಿಯೇ ಎತ್ತಿ ಹಿಡಿದು ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ.
– ಡಾ. ಟಿ. ಎಸ್. ಚನ್ನೇಶ್
ನಿರ್ದೇಶಕರು
ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ ಕೇಂದ್ರ, 
ಬೆಂಗಳೂರು
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...