Homeಚಳವಳಿಗೌರಿ ಲಂಕೇಶ್ ಹತ್ಯೆಯ ತನಿಖೆ ತೆರೆದಿಡುವ ಚರ್ಚೆಗಳು

ಗೌರಿ ಲಂಕೇಶ್ ಹತ್ಯೆಯ ತನಿಖೆ ತೆರೆದಿಡುವ ಚರ್ಚೆಗಳು

- Advertisement -
- Advertisement -

ಮಾರನೆಯ ದಿನ ಪ್ರಿಂಟಿಂಗ್‍ಗೆ ಕಳಿಸಬೇಕಿದ್ದ ಪತ್ರಿಕೆಗೆ ಸಿದ್ಧತೆ ಮುಗಿಸಿ ಸೆಪ್ಟೆಂಬರ್ 5ರ ಸಂಜೆ ಮನೆಯ ಕಡೆ ಹೊರಟ ಗೌರಿ ಲಂಕೇಶರು ಅಂದೇ ಕೊಲೆಯಾಗುತ್ತಾರೆಂದು ಗೊತ್ತಿದ್ದದ್ದು ಕೊಲೆಗಡುಕರಿಗೆ ಮತ್ತು ಅದರ ಸಂಚುಕೋರರಿಗೆ ಮಾತ್ರ. ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಅದು ದೇಶವ್ಯಾಪಿ ಸುದ್ದಿಯಾಯಿತು. 2-3 ದಿನಗಳಲ್ಲಿ ಪ್ರಪಂಚದ ಇತರೆಡೆಗಳಲ್ಲೂ ಈ ಹತ್ಯೆಯನ್ನು ಖಂಡಿಸಲಾಯಿತು. ದೇಶದ ಪ್ರಧಾನಿ ಮತ್ತು ಅವರ ಸಂಪುಟದ ಮಂತ್ರಿಗಳನ್ನು ಬಿಟ್ಟು ಭಾರತದ ಬಹುತೇಕ ಗಣ್ಯ ಜನರು ಈ ಹತ್ಯೆಯ ವಿರುದ್ಧ ದನಿಯೆತ್ತಿದರು. ಕೊಲೆಗೀಡಾದ ವ್ಯಕ್ತಿಯು ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದ ದಿಟ್ಟ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಎನ್ನುವ ಕಾರಣಕ್ಕೆ ಸರ್ಕಾರೀ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು. ಕೊಲೆಯಾದ ಒಂದು ವಾರಕ್ಕೆ ಬೆಂಗಳೂರಿನಲ್ಲಿ ನಡೆದ ಖಂಡನಾ ಸಮಾವೇಶಕ್ಕೆ ಸಾವಿರಾರು ಜನರು ಸ್ವಯಂಪ್ರೇರಿತರಾಗಿ ಬಂದರು. ದೇಶದ ಕನಿಷ್ಠ 10 ರಾಜ್ಯಗಳಿಂದ ಪ್ರಜ್ಞಾವಂತರು ಬಂದು ದನಿಗೂಡಿಸಿದ್ದರು. ಹಲವು ಕ್ಷೇತ್ರಗಳ ಗಣ್ಯರು ಯಾರಿಂದಲೂ ಒಂದು ರೂಪಾಯಿಯ ಪ್ರಯಾಣ ಭತ್ಯೆ ಕೇಳದೇ ಭಾಗವಹಿಸಿದ್ದರು. ಹತ್ಯೆ ನಡೆದ ಒಂದು ತಿಂಗಳಿಗೆ ದೇಶದ ರಾಜಧಾನಿ ದೆಹಲಿಯಲ್ಲೂ ಪ್ರತಿಭಟನೆ ನಡೆಯಿತು. ಆದರೂ, ಕೊಲೆಗಡುಕರನ್ನು ಹಿಡಿಯಲಾಗುತ್ತದೆಂಬ ಬಗ್ಗೆ ಯಾರಿಗೂ ಖಾತರಿಯಿರಲಿಲ್ಲ.
ಏಕೆಂದರೆ, ಇದಕ್ಕಿಂತ ಮುಂಚೆ ನಡೆದಿದ್ದ ಇದೇ ರೀತಿಯ ಮೂರು ಹತ್ಯೆಗಳ (ಪಾನ್ಸರೆ, ಧಾಬೋಲ್ಕರ್ ಮತ್ತು ಡಾ.ಎಂ.ಎಂ.ಕಲಬುರ್ಗಿ) ತನಿಖೆಯೂ ಗುರಿ ಮುಟ್ಟಿರಲಿಲ್ಲ. ವಿಶೇಷ ತಂಡಗಳು ಮಾತ್ರವಲ್ಲದೇ, ಸಿಬಿಐಗೆ ವಹಿಸಿದ್ದಾಗ್ಯೂ ಕೊಲೆಗಡುಕರನ್ನು ಪತ್ತೆ ಹಚ್ಚಲಾಗಿರಲಿಲ್ಲ. ಯಾರು ಗೌರಿ ಲಂಕೇಶರನ್ನು ಸೈದ್ಧಾಂತಿಕ ಕಾರಣಗಳಿಗಾಗಿ ದ್ವೇಷಿಸುತ್ತಿದ್ದರೋ, ಅವರುಗಳು ಹತ್ಯೆಗಳನ್ನು ಬಹಿರಂಗವಾಗಿ ಸಮರ್ಥಿಸುವ ಮನಸ್ಥಿತಿಯನ್ನು ತಾವು ಹೊಂದಿರುವುದಲ್ಲದೇ, ಸಮಾಜದಲ್ಲೂ ವ್ಯಾಪಕಗೊಳಿಸುತ್ತಿದ್ದರು. ಅದನ್ನು ಗೌರಿ ಲಂಕೇಶರ ಹತ್ಯೆಯ ನಂತರದಲ್ಲೂ ಮಾಡಿದರು. ಹತ್ಯೆಯನ್ನು ಸಂಭ್ರಮಿಸುವ ಟ್ವೀಟ್‍ಗಳನ್ನು ಮಾಡಿದ ವ್ಯಕ್ತಿಯನ್ನು ಸ್ವತಃ ದೇಶದ ಪ್ರಧಾನಮಂತ್ರಿಗಳ ಟ್ವಿಟ್ಟರ್ ಖಾತೆ ಫಾಲೋ ಮಾಡುತ್ತಿತ್ತು. ದೇಶದ ಧೀಮಂತ ಪತ್ರಕರ್ತರು ಅದನ್ನು ಖಂಡಿಸಿ ಪದೇ ಪದೇ ಪ್ರಶ್ನಿಸಿದಾಗ್ಯೂ ಪ್ರಧಾನಮಂತ್ರಿಗಳು ತಮ್ಮ ಟ್ವಿಟ್ಟರ್ ಖಾತೆ ನೋಡಿಕೊಳ್ಳುವವರಿಗೆ ಸೂಚನೆ ಕೊಡಲಿಲ್ಲ. ಇವೆಲ್ಲಾ ಕಾರಣಗಳಿಂದ ಗೌರಿಯವರ ಹತ್ಯೆಯ ಹಿಂದಿನ ಕೈಗಳು ಮತ್ತು ಕೈಗಳ ಹಿಂದಿನ ತಲೆಗಳು ಪತ್ತೆ ಆಗಬಹುದೆಂಬ ಖಚಿತ ಭರವಸೆ ಯಾರಲ್ಲೂ ಇರಲಿಲ್ಲ.
ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಗೌರಿ ಲಂಕೇಶರು ಸೈದ್ಧಾಂತಿಕವಾಗಿ ಕಾಂಗ್ರೆಸ್‍ನ ಶತ್ರುವಾದ ಬಿಜೆಪಿಯ ವಿರುದ್ಧ ಇದ್ದುದೇನೋ ನಿಜ. ಆದರೆ, ಎಂ.ಎಂ.ಕಲಬುರ್ಗಿಯವರೂ ಸಹಾ ಅದೇ ರೀತಿಯ ಸೈದ್ಧಾಂತಿಕ ನಿಲುವನ್ನು ಹೊಂದಿದ್ದರು ಮತ್ತು ಇದೇ ಸರ್ಕಾರ ಆಗಲೂ ಅಧಿಕಾರದಲ್ಲಿತ್ತು. ಹೀಗಾಗಿ ಸೆಪ್ಟೆಂಬರ್ 6ರಂದು ರಚಿತವಾದ ವಿಶೇಷ ತನಿಖಾ ತಂಡ (ನಂ.ಸಿಆರ್‍ಎಂ/01/158/ಬಿಸಿ/2017-18ರ ಅನ್ವಯ ರಚಿತವಾದ ಎಸ್‍ಐಟಿ) ಮೇಲೂ ಯಾರಿಗೂ ನಂಬಿಕೆಯಿರಲಿಲ್ಲ. ಈ ತಂಡದ ಇಬ್ಬರು ಪ್ರಮುಖ ಅಧಿಕಾರಿಗಳಾಗಿದ್ದ ಬಿ.ಕೆ.ಸಿಂಗ್ ಮತ್ತು ಡಿಸಿಪಿ ಅನುಚೇತ್ ಇಬ್ಬರೂ ಯಾವ ಸೈದ್ಧಾಂತಿಕ ಹಿನ್ನೆಲೆಯವರೂ ಆಗಿರಲಿಲ್ಲ. ಸ್ವಲ್ಪ ಬಲಪಂಥೀಯರೇ ಆಗಿದ್ದಾರೆನ್ನುವುದಕ್ಕೆ ಕೆಲವು ಘಟನೆಗಳ ಉದಾಹರಣೆಗಳೂ ಅಲ್ಲಲ್ಲಿ ತೇಲುತ್ತಿದ್ದವು. ಈ ತಂಡದ ‘ವಿಶೇಷ’ ಅಧಿಕಾರಿಗಳಲ್ಲೊಬ್ಬರು ಎಸಿಪಿ ರವಿಕುಮಾರ್. ಅವರು ಕೆಲ ಸಮಯದ ಹಿಂದೆ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ನಡೆದ ಸ್ವಲ್ಪವೇ ಸಮಯದಲ್ಲಿ ಭಿನ್ನವಾದ ಧರ್ಮಕ್ಕೆ ಸೇರಿದ ವ್ಯಕ್ತಿಗಳನ್ನು ಬಂಧಿಸಿದ್ದರು.ಇಡೀ ದೇಶವು ಧರ್ಮ ಹಾಗೂ ಸಿದ್ಧಾಂತದ ಆಧಾರದಲ್ಲಿ ವಿಭಜಿತವಾಗಿರುವಾಗ, ಅಧಿಕಾರಿಗಳಿಗೂ ಅದನ್ನು ಆರೋಪಿಸುವುದು ಸಹಜವಾಗಿಬಿಟ್ಟಿದೆ. ಇದನ್ನು ಎಸ್‍ಐಟಿಯ ಅಧಿಕಾರಿಗಳಿಗೂ ಅನ್ವಯಿಸಿ, ಅವರು ಯಾವ್ಯಾವುದೋ ಸಂದರ್ಭದಲ್ಲಿ ಬಲಪಂಥೀಯರ ಕಡೆಗೆ ವಾಲಿದ್ದರು ಎಂದು ಹೇಳುತ್ತಿದ್ದ ವದಂತಿಗಳಿಗೂ ಕಡಿಮೆಯಿರಲಿಲ್ಲ. ಅದಕ್ಕೆ ಸರಿಯಾಗಿ, ಯಾವ ನಕ್ಸಲೈಟರ ಕುರಿತು ಗೌರಿಲಂಕೇಶರು ಸಹಾನುಭೂತಿ ಹೊಂದಿದ್ದರೆಂದು ಎಲ್ಲರೂ ಹೇಳುತ್ತಿದ್ದರೋ, ಅದೇ ನಕ್ಸಲೈಟರು ಕೊಲೆ ಮಾಡಿರಬಹುದು ಎಂದು ಬಲಪಂಥೀಯರು ಹರಿಯಬಿಟ್ಟ ಎಳೆಯ ಮೇಲೆ ತನಿಖೆಯ ಜಾಡು ಆರಂಭದಲ್ಲೇ ಸಾಗಿದ್ದೂ ಅನುಮಾನಗಳಿಗೆ ಕಾರಣವಾಗಿದ್ದವು.
ವಾಸ್ತವವೇನೆಂದರೆ, ಎಸ್‍ಐಟಿ ಯಾವ ಸಾಧ್ಯತೆಯನ್ನೂ ಆರಂಭದಲ್ಲೇ ಕೈಬಿಟ್ಟಿರಲಿಲ್ಲ. ಗೌರಿಯವರಿಗೆ ವೈಯಕ್ತಿಕವಾದ ದ್ವೇಷಿಗಳು ಯಾರಾದರೂ ಇದ್ದರೇ? ಆಸ್ತಿಯ ಕಾರಣಕ್ಕೆ, ವ್ಯಕ್ತಿಗತ ಜಿದ್ದಿನ ಕಾರಣಕ್ಕೆ, ಅವರ ಪತ್ರಿಕೆಯಲ್ಲಿ ಯಾರದ್ದೋ ವಿರುದ್ಧ ಬರೆದಿದ್ದರು ಎನ್ನುವ ಕಾರಣಕ್ಕೆ ಎಂಬುದನ್ನೂ ಬಿಡದೇ ಪರಿಶೀಲಿಸಿದರು. ನಕ್ಸಲೈಟ್ ಕೋನದಿಂದಲೂ ನೋಡಿದರು. ಬಲಪಂಥೀಯ ಸಂಘಟನೆಗಳ ಕೋನದಿಂದಲೂ ನೋಡಿದರು. ನೂರಾರು ಜನರ ಹೇಳಿಕೆಗಳನ್ನು ಪಡೆದುಕೊಂಡರು. ಒಂದು ರೀತಿಯಲ್ಲಿ ಗೌರಿಯವರ ಪತ್ರಿಕೆಯ ಕಚೇರಿಯೇ ಎಸ್‍ಐಟಿಯ ವಶಕ್ಕೆ ಹೋಗಿಬಿಟ್ಟಿತ್ತು. ಅವರ ಛೇಂಬರ್, ಫೋನ್‍ನಂತಹ ಭೌತಿಕ ವಸ್ತುಗಳಿಂದ ಹಿಡಿದು, ಇ-ಮೇಲ್‍ನಂತಹ ವಚ್ರ್ಯುಯಲ್ ಆಸ್ತಿಗಳ ತನಕ ಎಲ್ಲವನ್ನೂ ವಶಕ್ಕೆ ತೆಗೆದುಕೊಂಡಿದ್ದರು. ಯಾರೂ ಯಾವುದನ್ನೂ ಬದಲಿಸಲಾಗದಂತೆ ಸೀಝ್ó ಮಾಡಿ ಪರಿಶೀಲನೆಗೆ ಒಳಪಡಿಸಿದರು.
ಒಂದು ಕಡೆ ಕೊಲೆಗಡುಕರನ್ನು ಹಿಡಿಯಿರಿ ಎಂಬ ಒತ್ತಾಯ ಗೌರಿ ಲಂಕೇಶರ ಬಳಗದಿಂದ, ಇನ್ನೊಂದು ಕಡೆ ಅವರ ಸೈದ್ಧಾಂತಿಕ ವಿರೋಧಿಗಳನ್ನು ಸುಲಭವಾಗಿ ಮುಟ್ಟಲಾಗದ ಪರಿಸ್ಥಿತಿ, ಈ ಒತ್ತಡದಲ್ಲೇ ಎಸ್‍ಐಟಿ ಕಾರ್ಯನಿರ್ವಹಿಸಿದಂತಿದೆ. ಕೆಲವು ತಿಂಗಳುಗಳವರೆಗೂ ಯಾವೊಬ್ಬ ವ್ಯಕ್ತಿಯನ್ನೂ ಬಂಧಿಸಿರಲಿಲ್ಲ. ಇಂದು ಚಾರ್ಜ್‍ಶೀಟ್ ಹಾಕಿದ ನಂತರ, ನವೆಂಬರ್‍ನಿಂದಲೇ ನಿರ್ದಿಷ್ಟ ಪುರಾವೆಗಳ ಹಿಂದೆ ಎಸ್‍ಐಟಿ ಕೆಲಸ ಮಾಡಿದೆ ಎಂದು ಗೊತ್ತಾಗಿದೆಯಾದರೂ, ಗೃಹಮಂತ್ರಿಗಳು ‘ನಮಗೆ ಕೆಲವು ಕ್ಲೂ ಸಿಕ್ಕಿದೆ. ಆ ನಿಟ್ಟಿನಲ್ಲಿ ತನಿಖೆ ಸಾಗಿದೆ’ ಎಂಬ ಪುನರಾವರ್ತಿತ ಹೇಳಿಕೆಗಳ ಮೇಲೆ ನಂಬಿಕೆ ಉಳಿದಿರಲಿಲ್ಲ. ಹೆಚ್ಚು ಕಡಿಮೆ ನಾಲ್ಕೈದು ಬಾರಿ ತಿಂಗಳ ಐದನೇ ತಾರೀಕು ಒಂದಲ್ಲಾ ಒಂದು ಪ್ರತಿಭಟನೆ ಅಥವಾ ಕಾರ್ಯಕ್ರಮವನ್ನು ಗೌರಿಯವರ ಬಳಗ ಹಮ್ಮಿಕೊಳ್ಳುತ್ತಿದ್ದುದು ಈ ಅಪನಂಬಿಕೆಯ ಕಾರಣದಿಂದಲೇ. ಸಿದ್ದರಾಮಯ್ಯನವರ ಸರ್ಕಾರವಾಗಲೀ, ರಾಮಲಿಂಗಾರೆಡ್ಡಿಯವರ ಗೃಹಮಂತ್ರಿತ್ವವಾಗಲೀ ಕೊಲೆಗಡುಕರನ್ನು ಪತ್ತೆ ಹಚ್ಚಬಹುದೆಂಬ ಭರವಸೆ ಇರಲಿಲ್ಲ. ಪೊಲೀಸ್ ಇಲಾಖೆಯ ಮೇಲೆ ಈ ಜನಪ್ರತಿನಿಧಿಗಳು ಯಾವ ರೀತಿಯಲ್ಲೂ ಒತ್ತಡ ಹೇರಿ ಕೊಲೆಗಡುಕರನ್ನು ಹಿಡಿಯುವಂತೆ ಮಾಡುತ್ತಿಲ್ಲ ಎಂಬ ಅಸಹನೆ ಎಲ್ಲರಲ್ಲೂ ಇತ್ತು. ಅಂತಿಮವಾಗಿ ಚುನಾವಣೆ ಘೋಷಣೆಯಾದಾಗ, ಇನ್ನು ಈ ಕೇಸಿನ ಕಥೆ ಮುಗಿಯಿತು ಎಂಬ ಭಾವನೆ ಬಹುತೇಕರಲ್ಲಿ ಮೂಡಿತ್ತು.
ಹಿಂತಿರುಗಿ ನೋಡಿದಾಗ ಒತ್ತಡ ಹೇರದೇ ಸರ್ಕಾರವೂ, ಅವಸರಕ್ಕೆ ಬೀಳದೇ ಎಸ್‍ಐಟಿಯೂ ಒಳ್ಳೆಯದನ್ನೇ ಮಾಡಿದೆ ಎಂಬುದು ಎದ್ದು ಕಾಣುತ್ತಿದೆ. ಚಾರ್ಜ್‍ಶೀಟ್‍ನಲ್ಲಿ ನಮೂದಿಸಿರುವ ಅಂಶಗಳು ಮತ್ತು ಇದೀಗ ಪರಶುರಾಮ ವಾಘ್ಮರೆಯನ್ನು ಬಂಧಿಸಿ ಕೋರ್ಟಿನ ಮುಂದೆ ಹಾಜರುಪಡಿಸಿದಾಗ ಕಂಡುಬರುತ್ತಿರುವ ಸಂಗತಿಗಳು ಕೊಲೆ ಹೇಗೆ ನಡೆದಿರುಬಹುದೆಂಬ ಬಗ್ಗೆ ಬೆಳಕು ಚೆಲ್ಲುತ್ತಿವೆ.
ಆದರೆ, ಈಗಲೂ ನಾವೆಲ್ಲರೂ ಹೇಳಬೇಕಾದ್ದಿಷ್ಟೇ. ಆರೋಪಿಗಳೆಂದು ಹೇಳಿ, ಸುಮ್ಮನೇ ಯಾರನ್ನೂ ಬಂಧಿಸಬಾರದು. ಬಂಧಿತರ ಕುರಿತು ಮಾಧ್ಯಮಗಳಲ್ಲೇ ವಿಚಾರಣೆ ನಡೆಯಬಾರದು. ಸನಾತನ ಸಂಸ್ಥೆಯ ಕುರಿತು ಅನುಮಾನ ಬರಲು ಹಲವು ಕಾರಣಗಳಿವೆ. ಅವುಗಳ ವಿಶ್ಲೇಷಣೆಯನ್ನು ಮಾಡಲೇಬೇಕು; ಆ ದಿಕ್ಕಿನಲ್ಲಿ ವಿಚಾರಣೆ ನಡೆಯದಿದ್ದರೆ ಪ್ರಶ್ನಿಸಬೇಕು. ಆದರೆ, ಕೇವಲ ಅನುಮಾನದ ಮೇಲೆ ಯಾರನ್ನೂ ತೊಂದರೆಗೆ ಒಳಪಡಿಸಬಾರದು ಎಂದೇ ನಾವೂ ಆಗ್ರಹಿಸಬೇಕು.
ಮಾಧ್ಯಮಗಳು ಇಂದು ಯಾವ ರೀತಿ ನಡೆದುಕೊಳ್ಳುತ್ತಿವೆ ಎಂಬುದನ್ನು ನೋಡಬಹುದು. ಈಗಲೂ ಗೌರಿಯವರ ಕುರಿತು ಸಣ್ಣತನದಿಂದ ವರ್ತಿಸುತ್ತಿರುವ ಕೆಲವು ನಂಜಿನ ಮನಸ್ಸುಗಳು ಮಾಧ್ಯಮದಲ್ಲಿ ಕೂತು ತಮ್ಮದೇ ರೀತಿಯಲ್ಲಿ ಕಾರಿಕೊಳ್ಳುತ್ತಿವೆ. ಅಂತಹವರು ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಬಹಳ ವೇಗವಾಗಿ ಕಳೆದುಹಾಕುತ್ತಿದ್ದಾರೆ ಎಂದಷ್ಟೇ ಹೇಳಬಹುದು. ಅದರ ಜೊತೆಗೆ ಆರೋಪಿತರ ಕುರಿತು ಹಲವು ಮಾಧ್ಯಮಗಳು ಬಹಳ ಮೃದುವಾಗಿ ನಡೆದುಕೊಳ್ಳುತ್ತಿವೆ. ಈ ಧೋರಣೆ ಸರಿಯೆಂದೇ ಹೇಳಬೇಕು. ಯಾವುದೇ ಆರೋಪಿ, ಆರೋಪಿ ಮಾತ್ರವಾಗಿರುತ್ತಾನೆ. ಆತನನ್ನು ಆರೋಪಿ ಎಂದು ಹೇಳಿರುವುದು ಪೊಲೀಸರಷ್ಟೇ. ಅದಕ್ಕಾಗಿ ಅಪರಾಧಿ ಎಂದು ತಾವೇ ವಿಚಾರಣೆ ನಡೆಸಿ ತೀರ್ಪು ನೀಡುವ ಕೆಲಸವನ್ನು ಸಮಾಜವೂ ಮಾಡಬಾರದು; ಮಾಧ್ಯಮಗಳೂ ಮಾಡಬಾರದು.
ದುರಂತವೆಂದರೆ, ಈ ಮಾಧ್ಯಮಗಳು ಆರೋಪಿತರು ಮುಸ್ಲಿಮರಾಗಿದ್ದರೆ ನಡೆದುಕೊಳ್ಳುವ ರೀತಿಯೇ ಬೇರೆ. ಪ್ರತಾಪ್ ಸಿಂಹ ಮತ್ತಿತರರನ್ನು ಕೊಲೆ ಮಾಡುವ ಸಂಚು ರೂಪಿಸಲಾಗಿದೆಯೆಂದು ಒಮ್ಮೆ ಇದ್ದಕ್ಕಿದ್ದಂತೆ ಕೆಲವರನ್ನು ಬಂಧಿಸಲಾಯಿತು. ಬಂಧನಕ್ಕೆ ಒಳಗಾದವರಲ್ಲಿ ಒಬ್ಬ ಪತ್ರಕರ್ತನೂ ಇದ್ದ. ಅದು ನಿಜವೇ, ಪೊಲೀಸರ ಸುಳ್ಳು ಸೃಷ್ಟಿಯೇ, ಬಿಜೆಪಿ ಸರ್ಕಾರದ ಹುನ್ನಾರವೇ ಏನನ್ನೂ ಯೋಚಿಸದೇ, ಪೊಲೀಸರು ಹೇಳದ್ದನ್ನೂ ಸೇರಿಸಿ ಮಾಧ್ಯಮಗಳು ಕಥೆ ಕಟ್ಟಿದವು. ಆ ಆರೋಪಿಗಳ ಕುಟುಂಬದವರು ಹೇಳಿದ ಮಾತುಗಳನ್ನು ಅಪಹಾಸ್ಯ ಮಾಡಲಾಯಿತು. ಅವರ ಮೇಲೆ ದಾಳಿ ನಡೆಸಲಾಯಿತು. ಅಂತಿಮವಾಗಿ ಅವು ಸುಳ್ಳು ಆರೋಪವೆಂದು ಸಾಬೀತಾಗಿ, ಎಲ್ಲಾ ಆರೋಪಿತರೂ ಹೊರಬಂದರು. ಆದರೆ ಅವುಗಳನ್ನು ಈ ರೀತಿ ನಡೆಸಿಕೊಂಡಿದ್ದೇಕೆ? ಏಕೆಂದರೆ ಅವರು ಮುಸ್ಲಿಮರಾಗಿದ್ದರು. ಅವರನ್ನು ಅಪರಾಧಿಗಳೆಂದು ಈ ಮಾಧ್ಯಮಗಳು ತೀರ್ಮಾನ ಮಾಡಿಯಾಗಿತ್ತು.
ಇಂದು ಗೌರಿ ಲಂಕೇಶರ ಕೊಲೆ ಮಾಡಿದನೆಂದು ಹೇಳಲಾಗಿರುವ ಪರಶುರಾಮ ವಾಘ್ಮೋರೆ ಮತ್ತು ಸಂಗಡಿಗರು ತಾವೇ ಪಾಕಿಸ್ತಾನದ ಧ್ವಜ ಹಾರಿಸಿ, ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ನೋಡಿದ್ದರು. ಆಗಲೂ ಮಾಧ್ಯಮಗಳು ಹಿಂದೆ ಮುಂದೆ ಯೋಚಿಸದೇ ಬಾಯಿಗೆ ಬಂದಂತೆ ವರ್ತಿಸಿದ್ದವು. ಪಾಕಿಸ್ತಾನದ ಧ್ವಜ ಹಾರಿಸಿದವರು ಶ್ರೀರಾಮಸೇನೆ ಅಥವಾ ಆರೆಸ್ಸೆಸ್‍ನವರು ಎಂಬುದನ್ನು ಪೊಲೀಸರು ಹೇಳಿದ ಮೇಲೆ ಅದಕ್ಕೆ ವಿಶೇಷ ಮಹತ್ವವೇನೂ ಕೊಡಲಿಲ್ಲ. ಈ ದ್ವಂದ್ವ ನೀತಿ ಏಕೆ? ತಪ್ಪಿನ ಸಂದೇಹ ಬಂದರೂ ಕೆಲವರನ್ನು ಅಪರಾಧಿಗಳೆಂದು ಘೋಷಿಸುವ ಆತುರ, ತಪ್ಪು ಸಾಕ್ಷಿ ಸಮೇತ ಸಿಕ್ಕಿದಾಗಲೂ ಅವರು ಅಪರಾಧ ಮಾಡಿರುವುದಕ್ಕೆ ಸಾಧ್ಯವೇ ಇಲ್ಲವೆಂಬ ಮೃದು ಧೋರಣೆ ಏಕೆ? ಪರಶುರಾಮ ವಾಘ್ಮೋರೆ ಬೆಂಗಳೂರಿಗೇ ಬಂದಿರಲಿಕ್ಕಿಲ್ಲ ಅಲ್ಲವೇ ಎಂದು ಬಹಳ ಪ್ರೀತಿಯಿಂದ ಚಾನೆಲ್‍ವೊಂದರ ಮಾಲೀಕ ಆಂಕರ್ ನಿನ್ನೆ ಆರೋಪಿಯ ಪರವಾಗಿ ಫೋನಿನಲ್ಲಿ ಮಾತಾಡುತ್ತಿದ್ದ ವ್ಯಕ್ತಿಗೆ ತಾವೇ ಕ್ಲೂ ಕೊಡುತ್ತಿದ್ದರು.
ಹೌದು, ಸಕಲ ಬಲವನ್ನು ಹೊಂದಿರುವ, ದುರ್ಬಲರನ್ನು ಎಳೆದುಕೊಂಡು ಬಂದು ಅವರ ಮೇಲೆ ಗೂಬೆ ಸೇರಿಸುವ ಸಾಧ್ಯತೆಯಿರುವ ಪೊಲೀಸ್ ಮಾಹಿತಿಯನ್ನು ಸಂಶಯದಿಂದಲೇ ನೋಡಬೇಕು. ದುರ್ಬಲರ ಪರವಾಗಿಯೇ ನಿಲ್ಲಬೇಕು. ಇಂದು ಪರಶುರಾಮ ವಾಘ್ಮೋರೆಯ ತಾಯಿಯ ಕಣ್ಣೀರಿಗೆ ನಾವೆಲ್ಲರೂ ಮರುಗಲೇಬೇಕು. ಒಂದು ವೇಳೆ ಆತನೇ ದೋಷಿ ಎಂದು ಸಾಬೀತಾದರೂ, ಆತನ ತಾಯಿಯ ಸ್ಥಿತಿ ಶೋಚನೀಯವಾಗಿಯೇ ಇರುತ್ತದೆ. ಆದರೆ, ಮುಸ್ಲಿಂ ವ್ಯಕ್ತಿಗಳ ಕುಟುಂಬದವರ ಕಣ್ಣೀರು ಕಣ್ಣೀರಲ್ಲವೇ?
ಇದು ಕೇವಲ ಪಕ್ಷಪಾತಿತನ ಅಷ್ಟೇ ಅಲ್ಲ. ಇದು ಸುಳ್ಳನ್ನು ಪದೇ ಪದೇ ಹೇಳಿ ಅದನ್ನೇ ನಿಜವಾಗಿಸುವ ಹುನ್ನಾರ. ಸತ್ಯಕ್ಕೆ ಕಡಿಮೆ ಪ್ರಚಾರವನ್ನೂ, ಸುಳ್ಳಿಗೆ ಹೆಚ್ಚಿನ ಪ್ರಚಾರವನ್ನೂ ನೀಡುವುದು ಅಮಾಯಕತೆಯಿಂದಲ್ಲ. ಅರ್ಧ ಸತ್ಯವನ್ನೂ ತಿರುಚಿ ಹೇಳುವ ಕಲೆಗಾರಿಕೆ ಕೆಲವರಿಗೆ ಸಿದ್ಧಿಸಿರುತ್ತದೆ. ಉದಾಹರಣೆಗೆ ಪರಶುರಾಮನ ಮೇಲಿರುವುದು ಕೋಮು ದ್ವೇಷ ಕೆರಳಿಸಲು ಪಾಕಿಸ್ತಾನದ ಧ್ವಜ ಹಾರಿಸಿದ ಆರೋಪ. ಆದರೆ, ಟಿವಿಯೊಂದರಲ್ಲಿ ಪಾಕಿಸ್ತಾನದ ಧ್ವಜ ಸುಟ್ಟ ಆರೋಪವಿರುವ ವ್ಯಕ್ತಿ ಎಂದು ಸ್ಕ್ರೋಲ್ ಓಡಿಸಿದರು. ಅದನ್ನು ನೋಡಿದವರಿಗೆ ಏನನ್ನಿಸುತ್ತದೆ? ಅವರು ಪಕ್ಷಪಾತಿತನವನ್ನೇ ತೋರಿಸಲಿ. ಪತ್ರಿಕೆಯ ನಿಲುವು ಇಷ್ಟೇ. ಈ ತನಿಖೆ ಈಗಲೂ ನಿಷ್ಪಕ್ಷಪಾತವಾಗಿಯೇ ನಡೆಯಬೇಕು. ಅಮಾಯಕರನ್ನು ಹಿಂಸಿಸಬಾರದು.

ಈ ಕೇಸಿನಲ್ಲಿ ಇದುವರೆಗೆ ಸಲ್ಲಿಸಲಾಗಿರುವ ಚಾರ್ಜ್‍ಶೀಟ್‍ನಲ್ಲಿ ಒಟ್ಟು 134 ಸಾಕ್ಷಿಗಳು ಇದ್ದಾರೆ. 600ಕ್ಕೂ ಹೆಚ್ಚು ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಇನ್ನೂ ಹೆಚ್ಚುವರಿ ಚಾರ್ಜ್‍ಶೀಟ್ ಸಲ್ಲಿಸುವ ಸಾಧ್ಯತೆ ಇದೆ. ವಿವಿಧ ಕೋನಗಳಿಂದ ಕೇಸಿನ ಸಾಧ್ಯತೆಗಳನ್ನು ಪರಿಶೀಲಿಸಲಾಗಿದೆ. 9 ತಿಂಗಳ ಸುದೀರ್ಘ ಕಾಲ ತನಿಖೆ ನಡೆದಿದೆ. ಸಾಮಾನ್ಯವಾಗಿ ಇರಬಹುದಾದ (ಬೇಗನೇ ತನಿಖೆ ಮಾಡಿ ಎಂಬ ಮೃತರ ಕಡೆಯವರ ಭಾವನೆ, ಗಣ್ಯ ವ್ಯಕ್ತಿಗೆ ಸಂಬಂಧಿಸಿದ ಮತ್ತು ಸಾಕಷ್ಟು ಸುದ್ದಿಯಾದ ಕೇಸು ಎಂಬ ಒತ್ತಡ) ಒತ್ತಡಗಳನ್ನು ಬಿಟ್ಟರೆ, ಯಾವುದಾದರೂ ರೀತಿಯ ಒತ್ತಡಕ್ಕೆ ಗುರಿಯಾಗಿಲ್ಲ ಎಂಬುದು ಎದ್ದು ಕಾಣುತ್ತಿದೆ. ತನಿಖೆ ನಡೆದ ರೀತಿ ಮತ್ತು ಇನ್ನಿತರ ಅಂಶಗಳ ಕುರಿತು ಇದುವರೆಗೆ ಪೊಲೀಸರಿಂದ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಮೇಲಿನ ಎಲ್ಲಾ ಅಂಶಗಳು ಎಸ್‍ಐಟಿಯ ಕಾರ್ಯಕ್ಷಮತೆ ಮತ್ತು ವೃತ್ತಿಪರತೆಯನ್ನು ಎತ್ತಿ ತೋರಿಸುತ್ತವೆ. ಅದಕ್ಕಾಗಿ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

– ಡಾ. ಎಚ್.ವಿ. ವಾಸು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...