Homeಅಂಕಣಗಳುಗೌಡರ ವಿರುದ್ಧ  ತಿರುಗಿಬಿದ್ದ ಒಕ್ಕಲಿಗರು

ಗೌಡರ ವಿರುದ್ಧ  ತಿರುಗಿಬಿದ್ದ ಒಕ್ಕಲಿಗರು

- Advertisement -
ದೇವೇಗೌಡರು ಜನಾಂಗದ ನಾಯಕನಾಗಿ ರೂಪುಗೊಳ್ಳುತ್ತಲೆ, ಅವರ ಹಿತ ಕಾಯುವವರಂತೆ ಭಾಷಣ ಮಾಡಿ ಕ್ರಮೇಣ ತಂದು ಕೂರಿಸಿದ್ದು ಕುಟುಂಬವನ್ನು. ಅವರ ರಾಜಕಾರಣವೇನಿದ್ದರೂ ಬೀಗರು, ಬಿಜ್ಜರು, ನಂಟರು, ಇಷ್ಟರು ಎಂಬ ಕಟುಸತ್ಯ ತಡವಾಗಿಯಾದರೂ ಜನಾಂಗಕ್ಕೆ ಅರಿವಾಗಿದೆ. ಕುಲಕ್ಕೆ ಮೂಲ ಕೊಡಲಿ ಕಾವು ಎಂಬಂತೆ ಗೌಡರು ಒಕ್ಕಲಿಗ ಜನಾಂಗದ ಪ್ರತಿಭಾವಂತ ರಾಜಕಾರಣಿಗಳನ್ನು ಮುಗಿಸಿರುವ ಸಂಖ್ಯೆ ಕನಿಷ್ಠ ಎರಡು ಡಜನ್! ಮೊಮ್ಮಗನನ್ನು ಸುಮಲತಾ ಎದುರು ನಿಲ್ಲಿಸಿದ ಕಾರಣಕ್ಕೆ ಮಂಡ್ಯದ ಮತದಾರ ಇದನ್ನೆಲ್ಲಾ ಚರ್ಚಿಸತೊಡಗಿದ್ದಾನೆ….
ಮಂಡ್ಯದಲ್ಲಿ ಸುಮಲತಾ ಪಕ್ಷೇತರವಾಗಿ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ನಿಂತ ಕಾರಣಕ್ಕೆ, ಇಡೀ ದೇವೇಗೌಡರ ಕುಟುಂಬ ಅವರನ್ನ ವೈರಿ ಎಂಬಂತೆ ನಡೆದುಕೊಂಡ ಪರಿಗೆ ಪ್ರಥಮ ಬಾರಿ ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಒಕ್ಕಲಿಗರು ಪ್ರತಿಭಟಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಹಾಗೂ ಅಂಬಿ ಅಭಿಮಾನಿಗಳಲ್ಲದೆ ಬಿಜೆಪಿಯ ಕೆಲ ಕಾರ್ಯಕರ್ತರೂ ಕೂಡ ಪಕ್ಷಾತೀತವಾಗಿ ದೇವೇಗೌಡರ ಕುಟುಂಬದೆದುರು ಘರ್ಜಿಸಿದೆ. ಇದು ಈ ಜಿಲ್ಲೆಯ ಮಟ್ಟಿಗೆ ಇದೇ ಪ್ರಥಮವಾಘಿ ಗೌಡರ ಕುಟುಂಬದ ಎದುರು ಶೆಡ್ಡು ಹೊಡೆದ ಘಟನೆಯಾಗಿದೆ. ದೇವೇಗೌಡರ ರಾಜಕಾರಣದ ಸಂಚನ್ನು ಈ ಹಿಂದೆ ಹಲವು ಬಾರಿ ಬರೆದಾಗಿದೆ. ಅಂದರೆ ಜನಾಂಗದ ಏಕೈಕ ನಾಯಕನಾಗಿ ಬಿಂಬಿಸಿ ಕೊಳ್ಳುವುದು, ಕಡೆಗೆ ಕುಟುಂಬವನ್ನು ಪ್ರತಿಷ್ಠಾಪಿಸುವುದು. ಆದರೆ ಈಚೆಗೆ, ದೇವೇಗೌಡರು ನಾನು ಕುಟುಂಬ ರಾಜಕಾರಣವನ್ನ ಮಾಡಿಲ್ಲ ಎಂದು ಪತ್ರಿಕೆಯೊಂದಕ್ಕೆ ಖಚಿತವಾಗಿ ಹೇಳಿದ್ದಾರೆ. ಇದಕ್ಕೆ ಮಂಡ್ಯ ಜಿಲ್ಲೆಯ ಮುಗ್ಧನೂ ಕೂಡ ನಕ್ಕು ಹಾಗಾದರೆ ಗೌಡರ ಇಬ್ಬರ ಮಕ್ಕಳು ಯಾರು, ಅವರ ಹೆಂಡತಿಯರು ಯಾರು, ಅವರ ಮೊಮ್ಮಕ್ಕಳು ಯಾರು, ಡಿ.ಸಿ.ತಮ್ಮಣ್ಣ ಎಂಬ ಓಲ್ಡ್ ಮಾಡಲ್ ಪಾರ್ಗು ಲಾರಿ ಯಾರು, ಚನ್ನರಾಯಪಟ್ಟಣದ ಎಂಎಲ್‍ಎ ಯಾರೂ ಎಂದು ಉದ್ಘಾರ ತೆಗೆದು ಅಲಲಾ ಗೌಡರೆ ಎಂದು ಅಚ್ಚರಿ ಪಡತೊಡಗಿದ್ದಾರೆ.
ದೇವೇಗೌಡರು ಒಂದು ಕಾಲದಲ್ಲಿ ಜನಪರ ಕಾಳಜಿಯುಳ್ಳ ಸರಳ ಜೀವನದ ಆದರ್ಶ ರಾಜಕಾರಣಿಯಾಗಿ ಕಂಡಿದ್ದರು. ಅದಕ್ಕೆ ಜನತಾ ಪಕ್ಷದ ಘಟಾನುಘಟಿ ನಾಯಕರೆಲ್ಲಾ ಅವರ ಹಿಂಬಾಲಕರಾಗಿದ್ದರು. ಆದರೂ ಜನಸಾಮಾನ್ಯ ಅವರನ್ನ ಸರಿಯಾಗಿ ಗ್ರಹಿಸಿದವನಂತೆ ದೇವರಾಜ ಅರಸು ಎಂದರು ಗೌಡರಿಗೆ ಬಹುಮತ ಕೊಡಲಿಲ್ಲ. ಕೇವಲ ಐವತ್ತು ಚಿಲ್ಲರೆ ಸೀಟಿಗೆ ನಿಂತುಹೋದರು. ಮುಂದೆ ಮೊಯ್ಲಿ ಮುಖ್ಯಮಂತ್ರಿಯಾಗಿ ಇಳಿದ ಸಮಯದಲ್ಲಿ ದೇವೇಗೌಡರಿಗೆ ಜನ ಬಹುಮತ ಕೊಟ್ಟರು. ಅದೊಂದು ಸಂಘಟಿತ ಹೋರಾಟವಾಗಿತ್ತು. ಹೆಗಡೆ, ಪಟೀಲರು, ಬೊಮ್ಮಾಯಿ, ಭೈರೇಗೌಡ, ಸಿಂಧ್ಯ, ಸಿದ್ದರಾಮಯ್ಯ, ವೈ.ಕೆ.ರಾಮಯ್ಯ, ವೀರಣ್ಣ, ವೈದ್ಯನಾಥ ಪಾಟೀಲ್ ಇಂತಹ ಜನಪ್ರಿಯ ನಾಯಕರ ಶ್ರಮದ ಫಲವಾಗಿ ಗೌಡರು ಬಹುಮತ ಪಡೆದು ಮುಖ್ಯಮಂತ್ರಿಯಾದರು. ಆಗಲೂ ಕೂಡ ಕುಮಾರಸ್ವಾಮಿ ರಾಮನಗರದ ಕಡೆಯ ಲಕ್ಷಾಂತರ ಜನತಂದು ವಿಧಾನಸೌಧವನ್ನೇ ಮುತ್ತಿಗೆ ಹಾಕಿದಂತೆ ಮಾಡಿ ಗೌಡರನ್ನ ಮುಖ್ಯಮಂತ್ರಿಯಾದದ್ದಾಯ್ತು. ಅಲ್ಲಿಂದ ಅವರ ಕುಟುಂಬದ ರಾಜಕಾರಣ ಗರಿಗೆದರಿತು. ಅತ್ತ ಹೊಳೆನರಸೀಪುರದಲ್ಲಿ ಗೌಡರಿಗಾಗಿ ದುಡಿಯುತ್ತಿದ್ದ ಪುಟ್ಟಸ್ವಾಮಿಗೌಡರನ್ನ ಅವಮಾನಿಸುತ್ತಲೇ ಬದಿಗೊತ್ತಿ ರೇವಣ್ಣನನ್ನು ತಂದು ಕೂರಿಸಿದ್ದಾಗಿತ್ತು. ಇತ್ತ ರಾಮನಗರದ ಪ್ರಾಂತ್ಯದ ನಾಯಕರುಗಳನ್ನು ಮೂಲೆಗುಂಪು ಮಾಡಿ ಕುಮಾರಣ್ಣನ ಅನಿವಾರ್ಯತೆಯನ್ನ ಅನಿವಾರ್ಯವಾಗಿಸಿ ಎಂಪಿ ಮಾಡಿಯಾಗಿತ್ತು. ಆ ನಂತರ ಮುಂದೆ ನಡೆದ ಗೌಡರ ರಾಜಕಾರಣದ ಸೂತ್ರವೆಲ್ಲಾ ಕುಟುಂಬವನ್ನ ಪ್ರತಿಸ್ಠಾಪಿಸುವ ಸಂಚಿನಿಂದಲೇ ನಡೆಯುತ್ತಾ ಹೋಗುತ್ತದೆ. ಜನಾಂಗದ ಬುದ್ಧಿವಂತ ನಾಯಕರನ್ನೆಲ್ಲಾ ಒಬ್ಬೊಬ್ಬರಾಗಿ ಬಲಿತೆಗೆದುಕೊಳ್ಳುತ್ತಾ ಹೋದ ಪರಿಯನ್ನ ನೋಡಿದರೆ ಅಚ್ಚರಿಯಾಗುತ್ತದೆ. ಒಳ್ಳೆ ಮನುಷ್ಯರಾಗಿದ್ದ ಪುಟ್ಟಸ್ವಾಮಿಗೌಡರು ಅನಿವಾರ್ಯವಾಗಿ ದೇವೇಗೌಡರ ವೈರಿಯಾಗಿ ಮಾರ್ಪಟ್ಟು. ಆ ಕೊರಗಿನಲ್ಲೇ ಹೊರಟುಹೋದರು. ಇನ್ನ ಶ್ರೀಕಂಠಯ್ಯ ನಂಜೇಗೌಡರು ಗೌಡರಿಗೆ ಶೆಡ್ಡು ಹೊಡೆದು ಬದುಕಿದರು. ಒಳ್ಳೆಯ ನೀರಾವರಿ ತಜ್ಞರಾದ ನಂಜೇಗೌಡರನ್ನು ಎಲ್ಲೂ ಸಲ್ಲದಂತೆ ಮಾಡಲಾಯ್ತು.
ಕೆ.ಆರ್.ಪೇಟೆ ನಿಂಗಪ್ಪ ದೇವೇಗೌಡರ ಸಹವಾಸಕ್ಕೆ ಹೋಗದೆ ಸ್ವಾಭಿಮಾನದ ರಾಜಕಾರಣ ಮಾಡಿದರೆ ಕೆ.ಆರ್.ಪೇಟೆ ಕೃಷ್ಣ ಈಗ ಎಲ್ಲಿದ್ದಾರೋ ಏನು ಮಾಡುತ್ತಿದ್ದಾರೋ ಆ ದೇವರಿಗೇ ಗೊತ್ತು. ಅವರನ್ನ ಸ್ಪೀಕರನ್ನಾಗಿ ಮಾಡಿ ಆ ಸ್ಥಾನದ ಗೌರವ ಘನತೆಯನ್ನ ದುರುಪಯೋಗ ಮಾಡಿಕೊಂಡ ನಂತರ ಕೃಷ್ಣರಿಗೆ ಟಿಕೆಟ್ ಕೊಡದೆ ಬೊಂಬಾಯಿಯಲ್ಲಿ ಹೋಟೆಲ್ ಉದ್ಯಮ ಮಾಡುತ್ತಿದ್ದ ನಾರಾಯಣಗೌಡನನ್ನು ತಂದು ಪ್ರತಿಷ್ಠಾಪಿಸಲಾಯ್ತು. ಜೆಡಿಎಸ್‍ಗಾಗಿ ಕೋಟ್ಯಾಂತರ ರೂಪಾಯಿಗಳನ್ನ ಖರ್ಚು ಮಾಡಿರುವ ನಾರಾಯಣಗೌಡನೀಗ ಏನು ಮಾಡುತ್ತಿದ್ದಾರೆಂದರೆ ತನ್ನ ಕ್ಷೇತ್ರದ ಎಲ್ಲಾ ಅಧಿಕಾರವನ್ನ ರೇವಣ್ಣ ಭವಾನಿ ನಡೆಸುತ್ತಿರುವುದರಿಂದ ಆತ ಬೇಸರಗೊಂಡು ಬಾಂಬೆಗೆ ಹೋಗಿ ತನ್ನ ಸಿಟ್ಟನ್ನು ಹೊರಹಾಕಿದ್ದಾರೆ. ಜಾಸ್ತಿ ಬಾಲ ಬಿಚ್ಚಿದರೆ ಮುಂದೆ ಆತನಿಗೂ ಒಂದು ಗತಿ ಕಾದಿದೆ.
ದೇವೇಗೌಡರು ಒಕ್ಕಲಿಗರು ಬಹು ಸಂಖ್ಯಾತರಾಗಿರುವ ಜಿಲ್ಲೆಗಳ ಜನಪ್ರಿಯ ನಾಯಕರನ್ನ ಮುಗಿಸುತ್ತಾ ಬಂದರೂ, ಮಂಡ್ಯ ಜಿಲ್ಲೆಗೆ ಕೈಹಾಕಲಾಗಿರಲಿಲ್ಲ. ಆದರೂ ಸಭ್ಯ ರಾಜಕಾರಣಿಯಾಗಿದ ಹೆಚ್.ಟಿ.ಕೃಷ್ಣಪ್ಪನವರನ್ನ ಮುಗಿಸಲು ಸಂಚು ರೂಪಿಸುತ್ತಲೇ ಇದ್ದರು. ಗೌಡರಿಗೂ ಹೆಗಡೆಯವರಿಗೂ ಮನಸ್ಥಾಪವಾದಾಗ ಹೆಗಡೆಯವರು ಒಕ್ಕಲಿಗ ಜನಾಂಗದ ಉಪನಾಯಕನನ್ನು ತಯಾರು ಮಾಡಲು ಹೆಚ್.ಟಿ.ಕೃಷ್ಣಪ್ಪನವರನನ್ನ ವiಂತ್ರಿ ಮಾಡಿ ಪ್ರಬಲ ಖಾತೆಗಳಾದ ಆರೋಗ್ಯ ಮತ್ತು ಅಬಕಾರಿ ನೀಡಿದರು. ಇದರಿಂದ ಒಳಗೊಳಗೆ ಸಿಡಿದೆದ್ದ ಗೌಡರು, ಹೆಚ್.ಟಿ.ಕೆಯವರ ಪಾರ್ಟಿ ನಿಷ್ಠೆ ಪರೀಕ್ಷಿಸಲು ಶ್ರೀಕಂಠಯ್ಯನ ಗೆಳೆಯರಾದ ಹೆಚ್.ಟಿ.ಕೆ ಅವರನ್ನ ಟೀಕಿಸಲಿ ನೋಡೋಣ ಎಂದರು. ಅದಕ್ಕೆ ಹೆಚ್.ಟಿ.ಕೆ ನಾನು ಶ್ರೀಕಂಠಯ್ಯ ಗೆಳೆಯರಿರಬಹುದು ಆದರೆ ನನ್ನ ಪಾರ್ಟಿ ನಿಷ್ಠೆಯನ್ನ ಯಾರೂ ಅನುಮಾನ ಪಡುವಂತಿಲ್ಲ ಎಂದರು. ಇದಕ್ಕೂ ಸುಮ್ಮನಾಗದ ದೇವೇಗೌಡರು ಮಂತ್ರಿ ಕೃಷ್ಣಪ್ಪ ಹಾಸನ ಜಿಲ್ಲೆಗೆ ಬರಬೇಕಾದರೆ, ನನ್ನ ಅನುಮತಿ ಬೇಕು ಎಂಬ ಸುದ್ದಿ ತಲುಪಿಸಿದರು. ಇಂತಹ ಕಿರಿಕಿರಿಯ ನಡುವೆ ಹೆಗಡೆಯವರನ್ನ ಕಂಡ ಗೌಡರು, ಆ ಕೃಷ್ಣಪ್ಪ ಇರಬೇಕು ಇಲ್ಲ ನಾನಿರಬೇಕು. ನಿಮ್ಮ ಸರಕಾರದಲ್ಲಿ ಎಂದು ಧಮಕಿಹಾಕಿ. ಸಾಯಂಕಾಲದ ಬಳಗೆ ಹೆಚ್.ಟಿ.ಕೃಷ್ಣಪ್ಪನವರು ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟು ಮನೆಗೆ ಹೋಗುವಂತೆ ಮಾಡಿದರು. ಅದಷ್ಟೇ ಅಲ್ಲ, ಮುಂದಿನ ಚುನಾವಣೆಯಲ್ಲಿ ಕೊಲೆ ಆಪಾದನೆ ಹೊತ್ತ ಶಿವರಾಮೇಗೌಡನನ್ನ ಒಳಗೊಳಗೇ ಬೆಂಬಲಿಸಿ ಕೃಷ್ಣಪ್ಪನವರನ್ನು ಸೋಲಿಸಿದರು. ಇದು ದೇವೇಗೌಡರು ಮಂಡ್ಯಜಿಲ್ಲೆಯಲ್ಲಿ ತಮ್ಮ ಕುಟುಂಬ ರಾಜಕಾರಣಕ್ಕೆ ಪಡೆದ ಮೊದಲ ಬಲಿ, ಆದರೂ ಜಿಲ್ಲೆಯ ಘಟಾನುಘಟಿ ರಾಜಕಾರಣಿಗಳಾದ ಶಂಕರೇಗೌಡರು ಮಾರೇಗೌಡರ ದೆಸೆಯಿಂದಾಗಿ ಮಂಡ್ಯ ಜಿಲ್ಲೆಗೆ ಬರದಂತೆ ನೋಡಿಕೊಳ್ಳಬೇಕು ಎಂದು ಖಾಸಗಿ ಮಾತುಕತೆಯಲ್ಲಿ ಹೇಳುತ್ತಿದ್ದರು. ದೇವೇಗೌಡರ ಸಂಪುಟದಲ್ಲಿ ಗಣಿ ಸಚಿವರಾಗಿದ್ದ ಜಯರಾಂ, ಜಿಲ್ಲೆಯಲ್ಲಿ ಜೆ.ಡಿ.ಎಸ್ ಬೆಳೆಯುವಂತೆ ಮಾಡಿದರು. ಅವರು ದೇವೇಗೌಡರ ನಿಷ್ಠರಾಗಿದ್ದರಿಂದ ಅವರನ್ನ ಪ್ರೋತ್ಸಾಹಿಸುತ್ತಲೇ ಅಂದು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಚಲುವರಾಯ ಸ್ವಾಮಿಯನ್ನ ಬೆಂಬಲಿಸಿದ ಗೌಡರು ಅವರಲ್ಲಿ ತಮ್ಮ ಮಕ್ಕಳ ಬಗೆಗಿದ್ದ ಗೌರವವನ್ನ ಗುರುತಿಸಿ ಚಲುವರಾಯಸ್ವಾಮಿಯನ್ನ ಮಂತ್ರಿ ಮಾಡಿದರು. ಆದರೆ ರೇವಣ್ಣನಿಗೆ ಚಲುವರಾಯಸ್ವಾಮಿ ಕಂಡರಾಗುತ್ತಿರಲಿಲ್ಲ. ಹಾಗೆಯೇ ಬಿ.ಬಿ.ನಿಂಗಯ್ಯ ಮತ್ತಿತರ ಬುದ್ಧಿವಂತ ರಾಜಕಾರಣಿಗಳ ಬಗ್ಗೆ ಅವರಪ್ಪನಿಗೆ ಸಣ್ಣ ಹುಡುಗರಂತೆ ಚಾಡಿಹೇಳುತ್ತಿದ್ದರು. ಆ ಸಮಯದಲ್ಲಿ ನೋಡುನೋಡುತ್ತಿದ್ದಂತೆ ಚಲುವರಾಯಸ್ವಾಮಿ ಅವರ ಕಣ್ಣು ಕುಕ್ಕುವಂತೆ ಬೆಳೆದು ಬಿಜೆಪಿಯ ಅಶೋಕ್ ಜೊತೆಗೆ ಚೆನ್ನಾಗಿದ್ದಾನೆ ಎಂಬ ಸುದ್ದಿ ತಿಳಿದು ಆತನನ್ನ ಮುಗಿಸುವ ಸಂಚು ರೂಪಿಸಿದರು. ಅಲ್ಲದೆ ಕುಮಾರಸ್ವಾಮಿಯನ್ನೇ ಓವರ್‍ಟೇಕ್ ಮಾಡುವಂತಿದ್ದ ಬಾಲಕೃಷ್ಣ, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಇವರನ್ನೆಲ್ಲಾ ಸಾರಾಸಗಟು ದೂರವಿಟ್ಟು, ಸ್ವತಃ ತಾವೇ ಮಕ್ಕಳ ರಕ್ಷಣೆಗೆ ಮುಂದಾದರು. ಅದಷ್ಟೇ ಅಲ್ಲ, ಬಾಲಕೃಷ್ಣ, ಚಲುವರಾಯ ಸ್ವಾಮಿ ಕಾಂಗ್ರೆಸ್ ಸೇರುವಂತೆ ಮಾಡಿ ಸೋಲಿಸಿದರು. ತಮ್ಮ ಮಕ್ಕಳ ಅಭ್ಯುದಯಕ್ಕೆ ಎದುರಾದ ಕಂಟಕಗಳನ್ನು ನಿವಾರಿಸಿಕೊಂಡವರಂತೆ ನಿರಾಳರಾದರೂ ಜಮೀರ್ ಅಹಮದ್ ವಿಷಯದಲ್ಲಿ ಗೌಡರ ಆಟ ನಡೆಯಲಿಲ್ಲ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯನ ಭಾಷಣ ಜಿಲ್ಲೆಯ ಒಕ್ಕಲಿಗರನ್ನು ಒಟ್ಟಾಗುವಂತೆ ಮಾಡಿದ್ದು ಈಗ ಇತಿಹಾಸ. ಸ್ವತಃ ದೇವೇಗೌಡರೇ ತಮ್ಮ ಖಾಸಗೀ ಮಾತುಕತೆಯಲ್ಲಿ `ಈ ಸಿದ್ದರಾಮಯ್ಯನಿಗೆ ಒಕ್ಕಲಿಗರನ್ನ ಕಂಡರಾಗಲ್ಲ, ನಮ್ಮ ಜನರ ಸಮಸ್ಯೆಗಳ ಫೈಲುಗಳನ್ನು ತೆಗೆದು ಎಸೆಯುತ್ತಾನೆ, ನಾವೇನು ಮಾಡಲಿ’ ಎಂದು ಅಸಹಾಯಕತೆ ತೋಡಿಕೊಂಡಿದ್ದು ಒಕ್ಕಲಿಗರು ಸಿದ್ದರಾಮಯ್ಯನ ವಿರುದ್ಧ ರೊಚ್ಚಿಗೇಳುವಂತೆ ಮಾಡಿತು. ಆ ಕಾರಣವಾಗಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳೀಪಟವಾಯ್ತು. ಜೊತೆಗೆ ಅಂಬರೀಶ್ ಕೂಡ ತಮ್ಮ ಅನಾರೋಗ್ಯದ ಕಾರಣದಿಂದ ಕಾಂಗ್ರೆಸ್ ಟಿಕೆಟನ್ನು ನಿರಾಕರಿಸಿದ್ದು ಸೇರಿಕೊಂಡು ಜಿಲ್ಲೆಯ ಅಂಬಿ ಅಭಿಮಾನಿಗಳು ಜೆಡಿಎಸ್ ಬೆಂಬಲಿಸಿದರು. ಈ ಎಲ್ಲಾ ಕಾರಣದಿಂದ ದೇವೇಗೌಡರ ಮಕ್ಕಳು ಜಿಲ್ಲೆಯ ರಾಜಕಾರಣವನ್ನ ಕೈಗೆ ತೆಗೆದುಕೊಂಡು ಮೆರೆಯತೊಡಗಿದರು.
ಕರ್ನಾಟಕದ ರಾಜಕಾರಣದಲ್ಲಿ ನಡೆದ ಹಲವು ಸಾವುಗಳು ಗೌಡರ ರಾಜಕಾರಣಕ್ಕೆ ಪೊರಕ್ಕು ಶಕ್ತಿಯನ್ನ ಒದಗಿಸಿರುವುದೊಂದು ವಿಪರ್ಯಾಸ. ಹೆಗಡೆಯವರ ಸಾವಿಗೂ ಮೊದಲು ಹೊಳೆನರಸೀಪುರದ ಪುಟ್ಟಸ್ವಾಮಿ, ಕುಣಿಗಲ್ ರಾಮಯ್ಯ, ಮಂಡ್ಯದ ಜಯರಾಂ, ಈ ಯಾರ ಸಾವು ನೋಡಿದರೂ ಅವು ಗೌಡರ ಕುಟುಂಬ ರಾಜಕಾರಣಕ್ಕೆ ಇದ್ದ ಅಡ್ಡಿಯನ್ನು ಸುಗಮಗೊಳಿಸಿದಂತೆ ಕಾಣುತ್ತವೆ. ಹಾಗೆಯೇ ಕಾಂಗ್ರೆಸ್‍ಗೆ ಹೇಳಿಮಾಡಿಸಿದಂತಿದ್ದ ಅಂಬರೀಶ್‍ರ ಅಕಾಲ ಮರಣ ಕೂಡ ಗೌಡರ ಕುಟುಂಬದ ಮೂರನೇ ತಲೆಮಾರನ್ನ ಮಂಡ್ಯಕ್ಕೆ ತಂದು ನಾಟಿ ಹಾಕುವ ಸಾಹಸಕ್ಕೆ ಪ್ರೇರೇಪಿಸಿತು. ಇದು ಕೂಡ ಸಡನ್ನಾಗಿ ಸಂಭವಿಸಿದ ಘಟನೆಯಲ್ಲ ಬೆಂಗಳೂರಿನ ಬಾರೊಂದರಲ್ಲಿ ತಡರಾತ್ರಿ ಊಟ ಕೇಳಿ, ಊಟವಿಲ್ಲದಕ್ಕೆ ರೊಚ್ಚಿಗೆದ್ದು ದಾಂಧಲೆ ಮಾಡಿದ ನಿಖಿಲ್‍ನ ವಿಷಯದಲ್ಲಿ ತಲೆಕೆಡಿಸಿಕೊಂಡ ಗೌಡರು ಆತನನ್ನ ರಾಜಕಾರಣಕ್ಕೆ ತಂದು ಬಿಟ್ಟರೆ ಹೇಗೆಂದು ಯೋಚಿಸಿದರು. ಹಾಗೆ ಏಕದಂ ತರಲಾಗುವುದಿಲ್ಲ ಆತನ ಹೆಸರು ಜನರ ಬಾಯಲ್ಲಿ ನಲಿದಾಡಬೇಕು. ಆದ್ದರಿಂದ ಕೋಟ್ಯಾಂತರ ರೂಪಾಯಿ ಸುರಿದು ಆತನನ್ನ ಸಿನಿಮಾ ಹೀರೋ ಮಾಡಿ ಮಂಡ್ಯದಲ್ಲಿ ಸಭೆಗಳನ್ನ ಮಾಡುತ್ತ ಮೆರೆಸಲಾಯ್ತು. ಜನರಂತೂ ಸಮೂಹ ಸನ್ನಿಗೆ ಒಳಗಾದವರಂತೆ ಹುಚ್ಚೆದ್ದು ಕುಣಿದರು. ಆದರೇನು ನಿಖಿಲ್‍ಗೆ ನಟನೆ ಸಾಧ್ಯವಿರಲಿಲ್ಲ, ದುರುಗುಟ್ಟಿ ನೋಡಬಹುದೇ ಹೊರತು ಭಾವಾಭಿನಯ ಗೊತ್ತಿರದ ಹುಡುಗ. ಆದರೂ ಮುಂದಿನ ಭವಿಷ್ಯದ ಕಾರಣಕ್ಕೆ ಮತ್ತೊಂದು ಸಿನಿಮಾ “ಸೀತಾರಾಮ ಕಲ್ಯಾಣ” ತೆಗೆದು ಬಿಡುಗಡೆ ಮಾಡಿ ಮಂಡ್ಯದ ಮನೆಮನೆಗೂ ಟಿಕೆಟ್ ತಲುಪಿಸಿದರು. ಈ ಸಾಹಸದ ಸಮಯದಲ್ಲಿ ಕುಮಾರಣ್ಣನವರು ರಾಜ್ಯಾಡಳಿತ ಮರೆತು ಮಗನ ಅಭ್ಯುದಯದಲ್ಲಿ ನಿರತರಾಗಿದ್ದರು. ಅದೇ ಸಮಯಕ್ಕೆ ಮಂಡ್ಯದ ಲೋಕಸಭಾದ ಉಪಚುನಾವಣೆ ಎದುರಾಯ್ತು. ಅಭ್ಯರ್ಥಿ ವಿಷಯ ಬಂದಾಗ ಈಗಾಗಲೇ ದೇವೇಗೌಡರ ಪಾಳಯ ಸೇರಿದ್ದ ಶಿವರಾಮೇಗೌಡನನ್ನ ದೇವೇಗೌಡರು ಆಯ್ಕೆ ಮಾಡಿದ್ದರು. ಏಕೆಂದರೆ, ಜನಸಮೂಹದ ನೆನಪಿನ ಶಕ್ತಿ ಬಹುದೀರ್ಘ ಬಾಳಿಕೆ ಬರುವಂತದಲ್ಲಾ, ಇದೇ ಶಿವರಾಮೇಗೌಡ ಗಂಗಾಧರಮೂರ್ತಿ ಕೊಲೆ ಅಪಾದನೆ ಹೊತ್ತಾಗ ದೇವೇಗೌಡರು ನಾಗಮಂಗಲಕ್ಕೆ ಬಂದು ಅತ್ತು ಕರೆದು ಗಂಗಾಧರ ಮೂರ್ತಿ ಫೋಟೋವನ್ನ ತಲೆ ಮೇಲೆ ಹೊತ್ತು ಕುಳಿತ್ತಿದ್ದರಲ್ಲದೆ, “ನನ್ನ ರಾಜಕೀಯ ಜೀವನದಲ್ಲಿ ಈ ಕೊಲೆಗಡುಕ ಶಿವರಾಮೇಗೌಡನ ಸಹಾಯದಿಂದ ರಾಜಕಾರಣ ಮಾಡುವ ಅನಿವಾರ್ಯತೆ ಬಂದರೆ, ಅಂತ ರಾಜಕಾರಣವನ್ನ ತಿರಸ್ಕರಿಸುತ್ತೇನೆ, ಅಲ್ಲದೆ ಗಂಗಾಧರ ಮೂರ್ತಿ ಕುಟುಂಬದ ಕಣ್ಣೀರಿನ ಶಾಪದಿಂದ ಗೃಹಮಂತ್ರಿ ವಂಶ ನಿರ್ವಂಶವಾಗುತ್ತದೆಂದು” ಶಾಪಕೊಟ್ಟಿದ್ದರು. ಆದರೆ, ಎರಡು ದಶಕದ ನಂತರ ದೇವೇಗೌಡರು ಶಿವರಾಮನಿಗೆ ಎಂಪಿ ಟಿಕೆಟ್ ಕೊಟ್ಟು ಮಂಡ್ಯ ಜಿಲ್ಲೆಗೆ ಅವಮಾನ ಮಾಡಿದರು. ಆಗ ಮಂಡ್ಯದ ಸ್ವಾಭಿಮಾನಿ ಜನ ಬಿಜೆಪಿಗೆ ಓಟು ಮಾಡಲಾಗದೆ ಶಿವರಾಮನಿಗೇ ಓಟು ಮಾಡಿ ಗೆಲ್ಲಿಸಿದರೂ, ದೇವೇಗೌಡರ ರಾಜಕಾರಣದ ಕಾರಣಕ್ಕೆ ಸಿಟ್ಟಾಗಿದ್ದರು, ಆ ಸಿಟ್ಟು ಈಗ ಭುಗಿಲೆದ್ದಿದೆ!
ಅಂಬರೀಶ್ ನಿಧನರಾದಾಗ ಅವರ ಸಂಸ್ಕಾರದ ಜವಾಬ್ದಾರಿ ಹೊತ್ತ ಕುಮಾರಣ್ಣನ ಕಾಳಜಿ ಇವತ್ತು ಅವರ ನಡವಳಿಕೆ ನಟನೆ ಇರಬಹುದೇ ಎಂಬ ಅನುಮಾನ ಹುಟ್ಟುವಂತೆ ಮಾಡಿದೆ. ಇದೇ ಕುಮಾರಸ್ವಾಮಿ ಡಾ.ರಾಜ್ ತೀರಿಕೊಂಡಾಗ ತಲೆ ಮರೆಸಿಕೊಂಡಂತಿದ್ದು, ಪರಿಸ್ಥಿತಿಯನ್ನ ನಿಭಾಯಿಸಲಾಗದೇ ಎಂಟು ಜನ ಹತರಾಗುವಂತಾಗಿತ್ತು. ಆದರೆ, ಅಂಬಿ ಸಾವಿನ ಸಂದರ್ಭವನ್ನ ಕೈಗೆತ್ತಿಕೊಂಡ ಕುಮಾರಣ್ಣ ಮಂಡ್ಯದವರೆಗೂ ಮೆರವಣಿಗೆ ಮಾಡಿಸಿ ಕಂಠೀರವ ಸ್ಟೇಡಿಯಂಗೆ ತಂದು ಡಾ.ರಾಜ್ ಸಮಾಧಿ ಪಕ್ಕ ಸಂಸ್ಕಾರ ಮಾಡಿಸಿ ಮಂಡ್ಯ ಜನರ ಅಭಿಮಾನಕ್ಕೆ ಪಾತ್ರರಾಗಿದ್ದರು. ಆದರೀಗ ಜಿಲ್ಲೆಯ ಜನತಾದಳದ ಯಾವ ಶಾಸಕರ ಅಭಿಪ್ರಾಯವನ್ನು ಕೇಳದೆ, ಜೊತೆಗೆ ಅಂಬರೀಶ್ ಅಭಿಮಾನಿಗಳ ಅಭಿಪ್ರಾಯವನ್ನ ಆಲಿಸದೆ, ತಮ್ಮ ಮಗನನ್ನ ಅಭ್ಯರ್ಥಿಯನ್ನಾಗಿಸುತ್ತಲೇ ಮಂಡ್ಯದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನದ ಅಡಿಗಲ್ಲಾಕಿರುವುದು, ಮುಗ್ಧ ಜನರನ್ನ ಮೋಸಗೊಳಿಸುವ ತಂತ್ರವಾಗಿ ಕಂಡಿದೆ. ಆದ್ದರಿಂದ ಅವರ ರಾಜಕಾರಣವೇ ಈ ರಾಜ್ಯದಲ್ಲಿ ಕುಟುಂಬ ಸ್ಥಾಪಿಸುವ ಸಂಚಿನಂತೆ ಕಂಡ ಪರಿಣಾಮ ಗೌಡರ ರಾಜಕೀಯ ನಡೆಯೇ ವಿಮರ್ಶೆಗೆ ತುತ್ತಾಗಿದೆ. ಬಹಳಷ್ಟು ಜನ ದೇವೇಗೌಡರು ಬಲಿ ಪಡೆದ ಜನಾಂಗದ ನಾಯಕರನ್ನು ನೆನೆಸುತ್ತಿದ್ದಾರೆ. ಆ ಪೈಕಿ ಇತ್ತೀಚಿನ ಉದಾಹರಣೆ ಚೆಲುವರಾಯಸ್ವಾಮಿ, ಬಾಲಕೃಷ್ಣ. ಅದಕ್ಕಿಂತ ಹಿಂದೆ ಹೋದರೆ ನಾಗೇಗೌಡ, ಬಚ್ಚೇಗೌಡ, ಭೈರೇಗೌಡ, ಕುಣಿಗಲ್ ರಾಮಯ್ಯ, ಬಂಡಿಸಿದ್ದೇಗೌಡ, ಕೆ.ಆರ್.ಪೇಟೆ ಕೃಷ್ಣ, ಎಂ.ಶ್ರಿನಿವಾಸ್, ಪಾಂಡವಪುರದ ಕೆಂಪೇಗೌಡ, ನಿಂಗಪ್ಪ, ಹೀಗೆ ದೇವೇಗೌಡರ ಕುಟುಂಬ ಸ್ಥಾಪನೆಗೆ ಬಲಿಯಾದವರ ಸಂಖ್ಯೆ ಎಣಿಸಿದರೆ ಎರಡು ಡಜನ್ ಒಕ್ಕಲಿಗ ನಾಯಕರಿದ್ದಾರೆ. ಅವರೆಲ್ಲಾ ಇದ್ದಿದ್ದರೆ ಜನತಾದಳ ಒಂದು ಸಮರ್ಥ ಪ್ರಾದೇಶಿಕ ಪಾರ್ಟಿಯಾಗಿ ಬೆಳೆದು ಬಿಜೆಪಿ ಹೇಳಹೆಸರಿಲ್ಲದಂತಾಗುತ್ತಿತ್ತು ಎಂಬುದು ಅಳಿದುಳಿದ ಮಂಡ್ಯ ನಾಯಕರ ಅಭಿಪ್ರಾಯ. ದೇವೇಗೌಡರು ಮುಗಿಸಲಾಗದ ವ್ಯಕ್ತಿ ಎಂದರೆ, ಸಿದ್ದರಾಮಯ್ಯ. ಆದರೇನು ಅವರೂ ಕೂಡ ದೇವೇಗೌಡರ ಮನೆ ಬಳಿ ಕೈಕಟ್ಟಿ ನಿಲ್ಲುವಂತಾಗಿದ್ದು ವಿಪರ್ಯಾಸ. ಆದರೀಗ, ಅಂಬರೀಶ್‍ನಿಗೇ ದ್ರೋಹ ಬಗೆದು ಸುಮಲತಾ ವಿರುದ್ಧ ಹಗುರವಾಗಿ ಮಾತಾಡುತ್ತಿರುವ ಗೌಡರ ಫ್ಯಾಮಿಲಿ ವಿರುದ್ಧ ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಜನಾಂಗವನ್ನ ಮತೀಯವಾಗಿ ಪ್ರಚೋದಿಸಿದ್ದ ದೇವೇಗೌಡರಿಗೆ ಅದೇ ಜನ ತುಚ್ಛವಾದ ಭಾಷೆಯಲ್ಲಿ ನಿಂದಿಸತೊಡಗಿದ್ದಾರೆ. ಅದರಲ್ಲು ರೇವಣ್ಣನಿಗೆ ಏಕವಚನ ಬಳಸಿ ಅಖಾಡಕ್ಕೆ ಆಹ್ವಾನಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮ ಹಟಕ್ಕೆ ಬಿದ್ದ ದೇವು ಕುಟುಂಬ ಕೆರಳಿ ಯಾವ ಅನಾಹುತಗಳಿಗೆ ಕೈ ಹಾಕುತ್ತಾರೋ ಏನೋ ಜಿಲ್ಲೆಯ ಜನರ ಆಕ್ರೋಶ ನೋಡಿದ ಕುಮಾರಣ್ಣ ದಿಕ್ಕುತೋಚದಂತಾಗಿದ್ದಾರೆ. ಜೆಡಿಎಸ್ ಕಾರ್ಯಕರ್ತರೇ ಕುಮಾರಣ್ಣನಿಗೆ ತಿರುಗಿಬಿದ್ದಿದ್ದಾರೆ. ಇನ್ನು ಕಾಂಗ್ರೆಸ್‍ನವರಿಗೆ ಸೇಡುತೀರಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶದಂತೆ ಕಾಣುತ್ತಿದೆ. ಸುಮಲತಾ ಗೆಲುವು ಮಂಡ್ಯದ ಒಕ್ಕಲಿಗ ಜನಾಂಗದ ಸ್ವಾಭಿಮಾನದ ಸವಾಲಿನಂತೆ ಕಾಣುತ್ತಿದೆ. ಜೊತೆಗೆ ಆಕೆಯ ಸಂಯಮದ ನಡೆ ನುಡಿ ಮಂಡ್ಯದ ಶಂಕರೇಗೌಡ ಮಾದೇಗೌಡ ಅಂಬರೀಶ್‍ರ ರಾಜಕಾರಣಕ್ಕೆ ಬೆಲೆ ತರುವಂತಿದೆ. ಮಂಡ್ಯದ ಒಕ್ಕಲಿಗರ “ಗೋ ಬ್ಯಾಕ್ ನಿಖಿಲ್” ಘೋಷಣೆ ಎಲ್ಲಿಗೆ ಬಂದು ನಿಲ್ಲುತ್ತೋ ನೋಡಬೇಕು.
ಗೌಡರ ಕುಟುಂಬದ ಭಾಷೆ
ದೇವೇಗೌಡರು ಹೆಣ್ಣುಮಕ್ಕಳ ಬಗ್ಗೆ ಎಂದೂ ಅಗೌರವವಾಗಿ ಮಾತನಾಡಿದವರಲ್ಲ. ಮತ್ತು ಏಕವಚನ ಬಳಸಿದವರಲ್ಲ. ಆದರೆ ತಮ್ಮ ರಾಜಕೀಯ ವೈರಿಗಳ ಬಗ್ಗೆ ತುಂಬಾ ಹಗುರವಾಗಿ ಮಾತನಾಡಿದ ದಾಖಲೆಗಳಿವೆ. ಹೆಗಡೆಯವರಿಗೂ ಅವರಿಗೂ ಜಗಳ ಬಿದ್ದಾಗ ಅವರು ಏರ್ಪಡಿಸಿದ್ದ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಹೆಗಡೆಯವರ ಹೆಸರು ಹೇಳದೆ “ಕಾಲಿನಲ್ಲಿರುವ ವಸ್ತುವಿನಿಂದ ಉತ್ತರ ಕೊಡಬೇಕಾಗುತ್ತೆ” ಎಂದಿದ್ದರು. ಅವರ ಮಕ್ಕಳಾದ ರೇವಣ್ಣ ಕುಮಾರಣ್ಣ ತಮ್ಮ ಎದುರಾಳಿಗಳ ಬಗ್ಗೆ ಗೌರವದಿಂದ ಮಾತನಾಡಿದ್ದು ಕಡಿಮೆ ರೇವಣ್ಣನಂತೂ ತೀರಾ ಅನಾಗರಿಕವಾಗಿ ವರ್ತಿಸಿದ್ದು ಮಾತನಾಡಿದ್ದಕ್ಕೆ ಹೇರಳ ಉದಾಹರಣೆಗಳಿವೆ. ಇನ್ನ ಕುಮಾರಣ್ಣನವರು ಮಹಿಳಾ ವಿ.ಸಿ ಬಗ್ಗೆ ಆಡಿದ ಮಾತು ಹಾಗೂ ಬೆಂಗಳೂರು ಕಾರ್ಪೊರೇಷನ್ ಮಹಿಳಾ ಅಧಿಕಾರಿಯ ಬಗ್ಗೆ ಆಡಿದ ಮಾತುಗಳು ಕೀಲುಮಟ್ಟದ್ದಾಗಿತ್ತು. ಈಚೆಗೆ ಬೆಳಗಾವಿ ಅಧಿವೇಶನ ನಡೆಯುವಾಗ ಪ್ರತಿಭಟಿಸಿದ ಮಹಿಳಾ ರೈತ ನಾಯಕಿಯನ್ನ ಉದ್ದೇಶಿಸಿ “ಇಷ್ಟು ದಿನ ಎಲ್ಲಿ ಮನಿಗಿದ್ದೆವ್ವಾ?” ಎಂದರು. ಈ ಮಾತು ಇಡೀ ಮಹಿಳಾ ಕುಲವನ್ನೇ ರೊಚ್ಚಿಗೆಬ್ಬಿಸಿ ಕುಮಾರಸ್ವಾಮಿ ನಿಜಬಣ್ಣ ಬಯಲಾಗುವಂತೆ ಮಾಡಿತು.
ಕುಮಾರಸ್ವಾಮಿ ಮತ್ತು ರೇವಣ್ಣನ ಬಾಯಿಂದ ¨ರುವ ಇಂತಹ ಮಾತುಗಳ ಬಗ್ಗೆ ಯಾರಿಗೂ ಅಚ್ಚರಿಯಿಲ್ಲ. ಏಕೆಂದರೆ ನಾವು ನಮ್ಮ ಮಕ್ಕಳೆದುರು ಮಾತನಾಡುವ ಭಾಷೆಯನ್ನ ಮಕ್ಕಳೂ ಉಪಯೋಗಿಸುತ್ತವೆ. ದೇವೇಗೌಡರು ಎಡೂರಪ್ಪನನ್ನ “ಯಾವನ್ರೀ ಅವುನು ಬೋಸುಡಿಮಗ” ಎಂದು ಸಾರ್ವಜನಿಕವಾಗಿ ನಿಂದಿಸಿದ್ದರು. ಹಾಗೂ ಸಿದ್ದರಾಮಯ್ಯನನ್ನ ನೀಚ ಎಂದರು. ಅವರ ಮಕ್ಕಳ ದನಿ ಗೌಡರ ದನಿಯಂತೆಯೇ ಕೇಳುವುದರಲ್ಲಿ ಅಚ್ಚರಿಯೇನಿಲ್ಲ. ತಂದೆತಾಯಿಗಳು, ಅದರಲ್ಲೂ ಜನನಾಯಕರು ತಮ್ಮ ಮಕ್ಕಳ ಎದುರು ತಮಗಾಗದವರ ಬಗ್ಗೆಯೂ ಒಳ್ಳೆ ಭಾಷೆ ಬಳಸಿ ಮಾತನಾಡಿದರೆ ಒಂದೊಳ್ಳೆಯ ಸಂಸ್ಕøತಿ ಮುಂದುವರಿಯುತ್ತದೆ. ಇಲ್ಲದಿದ್ದರೆ ದೇವೇಗೌಡರ ಮಕ್ಕಳು ಮೊಮ್ಮಕ್ಕಳಂತೆ ಹಗುರವಾಗಿ ಅಹಂಕಾರದಿಂದ ಮಾತನಾಡುತ್ತಾರೆ. ಇಂತವರಿಗೆ ಬರುವ ಶ್ರೀಮಂತಿಕೆ ಮತ್ತು ಅಧಿಕಾರ ಈ ಸಮಾಜಕ್ಕೆ ಬಹಳ ಅಪಾಯಕಾರಿ.
ವಿಶ್ವನಾಥನ ಶರಣಾಗತಿ
ಜೆಡಿಎಸ್ ಅಧ್ಯಕ್ಷರಾದ ವಿಶ್ವನಾಥ್ ದೇವೇಗೌಡರ ವಿರೋಧ ಪಾಳಯದ ಮೊದಲ ಲಿಸ್ಟಿನಲ್ಲಿದ್ದವರು. ಏಕೆಂದರೆ ದೇವೇಗೌಡರನ್ನ ಆಮೂಲಾಗ್ರವಾಗಿ ಗ್ರಹಿಸಿದ್ದ ವಿಶ್ವನಾಥ್ ತಾತ್ವಿಕವಾಗಿ ವಿರೋಧಿಸಿದ್ದರು. ಅವರು ಬರೆದ “ಹಳ್ಳಿ ಹಕ್ಕಿ”ಯಲ್ಲಿ ಶನಿದೇವರು ಮೈಮೇಲೆ ಬಂದವನಿಂದ ಗೌಡರು ಗೂಸಾ ತಿಂದ ವಿವರವನ್ನ ರಸವತ್ತಾಗಿ ದಾಖಲಿಸಿದ್ದಾರೆ. ಇದನ್ನ ಓದಿದರೂ ಗೌಡರು ಸಿಟ್ಟಾಗುವುದಿಲ್ಲ. ಏಕೆಂದರೆ, ಅಷ್ಟರ ಮಟ್ಟಿಗೆ ಅವರು ಶನಿಭಕ್ತರು ವಿಶ್ವನಾಥ್ ಕಾಂಗ್ರೆಸ್‍ನಲ್ಲಿದ್ದಾಗ ದೇವೇಗೌಡರನ್ನ ಟೀಕಿಸುವ ಯಾವ ಸಂದರ್ಭವನ್ನೂ ಕಳೆದು ಕೊಂಡವರಲ್ಲಾ. ದೇವೇಗೌಡರೇ ಸಿದ್ದರಾಮಯ್ಯನನ್ನ ಟೀಕಿಸಿದಾಗ ಸಿದ್ದು ಉತ್ತರ ಕೊಡುತ್ತಿರಲಿಲ್ಲ ಬದಲಿಗೆ ವಿಶ್ವನಾಥ್ ಉತ್ತರಿಸುತ್ತಿದ್ದರು. ಅಷ್ಟರ ಮಟ್ಟಿಗೆ ವಿಶ್ವನಾಥ್ ಸಿದ್ದರಾಮಯ್ಯನಿಗೆ ಗುರಾಣಿಯಾಗಿದ್ದರು. ಆದರೆ ಸಿದ್ದು ಗುಣದಲ್ಲಿನ ಪ್ರಧಾನ ಅಂಶ ಯಾವುದೆಂದರೆ ಅವರ್ಯಾರಿಗೂ ತನ್ನ ಪರವಾಗಿ ಮಾತನಾಡಿರಿ ಎಂದು ಕೇಳಿಕೊಂಡವರಲ್ಲ. ವೈಯಕ್ತಿಕ ವಿಷಯದಲ್ಲೂ ಸಹಾಯ ಕೋರಿದವರಲ್ಲ ಅವರನ್ನ ಇಷ್ಟಪಡುವ ಜನ ಅವರಾಗಿಯೇ ಸಹಾಯ ಮಾಡಿದಾಗ, ಮೇವು ನೋಡಿದ ದನದಂತೆ ದೃಷ್ಟಿಸಿ ಸುಮ್ಮನಾಗುವ ಪೈಕಿ ಜೊತೆಗೆ ಉಪಕಾರ ಮಾಡಿದವರನ್ನ ನೆನಸಿಕೊಂಡು ಪ್ರತ್ಯುಪಕಾರ ಮಾಡುವ ಜಾಯಮಾನ ಸಿದ್ದರಾಮಯ್ಯನವರಲ್ಲಿ ತುಂಬಾ ಕಡಿಮೆ. ಇದನ್ನ ಗ್ರಹಿಸದ ವಿಶ್ವನಾಥ್ ಸಿದ್ದು ಹೊಗಳುತ್ತ ದೇವೇಗೌಡರನ್ನ ಟೀಕಿಸಿದ್ದೇ ಬಹಳ. ಇದನ್ನೆಲ್ಲಾ ನೋಡಿದ ದೇವೇಗೌಡರು ಮೈಸೂರಿಗೆ ಠೇವಣಿ ಕಳೆದುಕೊಳ್ಳುವಂತಹ ಅಭ್ಯರ್ಥಿ ಹಾಕಿ, ವಿಶ್ವನಾಥ್ ಸೋತು ಪ್ರತಾಪಸಿಂಹ ಗೆಲ್ಲುವಂತೆ ನೋಡಿಕೊಂಡರು. ಆದರೇನು ಸಿದ್ದು ವಿಶ್ವನಾಥರ ಕೈ ಹಿಡಿಯಲಿಲ್ಲ. ಶನಿಯ ವಕ್ರದೃಷ್ಟಿಗೆ ತುತ್ತಾಗಿ ರಾಜ್ಯಕೋಶಾಪಿಗಳನ್ನ ಕಳೆದುಕೊಂಡ ಗಾಣ ಹೊಡೆಯಲು ಸೇರಿಕೊಂಡ ವಿಕ್ರಮರಾಜನಂತೆ ವಿಶ್ವನಾಥ್ ಪರಿತಪಿಸುತ್ತಿದ್ದಾಗ ಅದೇ ಶನಿದೇವ ಪ್ರತ್ಯಕ್ಷನಾಗಿ ಮರಳಿ ವಿಕ್ರಮನ ವೈಭೋಗವನ್ನ ಕರುಣಿಸಿದಂತೆ ದೇವೇಗೌಡರು ವಿಶ್ವನಾಥನನ್ನ ಪಾರ್ಟಿ ಅಧ್ಯಕ್ಷನನ್ನಾಗಿ ಮಾಡಿ ಬಗಲಿಗೆ ತಂದು ಕೂರಿಸಿಕೊಂಡರು. ಈಗ ಅವರಿಬ್ಬರನ್ನ ನೋಡಿದರೆ ಒಂದೇ ತಾಯಿಯ ಮಕ್ಕಳಂತೆ ಕಾಣಬತ್ತಾರೆ. ಅದಕ್ಕೆ ರೇವಣ್ಣ ಅಂದಿರುವ ಮಾತಿಗೆ ವಿಶ್ವನಾಥ್ ಕ್ಷಮೆ ಯಾಚಿಸಿದ್ದಾರೆ. ಸುಮಲತಾರನ್ನ ನಿಂದಿಸಿದ್ದಕ್ಕಾಗಿ ಕ್ಷಮೆ ಕೇಳಬೇಕಾದವರು ರೇವಣ್ಣ. ಆದರೆ ರೇವಣ್ಣನಲ್ಲಿ ಸಣ್ಣ ಮಕ್ಕಳ ರಚ್ಚೆ ಇರುವುದರಿಂದ ಕ್ಷಮೆಕೇಳಲು ನನಗೆ ಹುಚ್ಚೇ ಎಂದು ಬಿಟ್ಟಿದ್ದಾರೆ. ಆದರಿಂದ ವಿಶ್ವನಾಥ್ ಕ್ಷಮೆ ಕೇಳಿದ್ದಾರೆ. ವಾಸ್ತವವಾಗಿ ಜೆಡಿಎಸ್ ಪಾರ್ಟಿಯ ಅಧ್ಯಕ್ಷರ ಕೆಲಸ ಇಂತಹವಕ್ಕೆ ಮಾತ್ರ ಸೀಮಿತ, ಎಲ್ಲ ಅಧಿಕಾರ ಗೌಡರು ಮತ್ತವರ ಮಕ್ಕಳಲ್ಲಿರುತ್ತದೆ. ಅವರ ಯಾವುದೇ ತೀರ್ಮಾನ ಪ್ರಶ್ನಿಸುವ ಹಕ್ಕು ಪಾರ್ಟಿ ಅಧ್ಯಕ್ಷನಿಗಿರುವುದಿಲ್ಲ. ಅದೇನೆ ಆದರೂ ಸಿದ್ದರಾಮಯ್ಯನ ದೆಸೆಯಿಂದ ಕಾಂಗೈನಲ್ಲಿ ಮೂಲೆಗುಂಪಾಗಿ ಹೋಗುತ್ತಿದ್ದ ವಿಶ್ವನಾಥ್, ಚಾಣಕ್ಯ ತಂತ್ರದ ರಾಜಕರಣದ ದೆಸೆಯಿಂದ ಮತ್ತೆ ಮರು ಹುಟ್ಟು ಪಡೆದುಕೊಂಡಿದ್ದು ಗೌಡರ ರಾಜಕಾರಣದ ಅಚ್ಚರಿ ಅಂಶಗಳಲ್ಲೊಂದು. ಮುಂದೆ ವಿಶ್ವನಾಥರಿಂದ ಗೌಡರ ಮಾನ ಉಳಿಸುವ ಹೇಳಿಕೆಗಳಾಗಿ ಮುಂದುವರಿಯುತ್ತದೆ ಅಪರಾಧಕ್ಕೆ ಶಿಕ್ಷೆ ಎಂದರೆ ಇದೇ ಇರಬೇಕು.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...