Homeಅಂಕಣಗಳುನಿರುದ್ಯೋಗ ಮತ್ತು ಉದ್ಯೋಗ ಅಭದ್ರತೆಯ ವಿರುದ್ಧದ ಹೋರಾಟ: ಅಗತ್ಯವಿದ್ದ ಬೆಸುಗೆ

ನಿರುದ್ಯೋಗ ಮತ್ತು ಉದ್ಯೋಗ ಅಭದ್ರತೆಯ ವಿರುದ್ಧದ ಹೋರಾಟ: ಅಗತ್ಯವಿದ್ದ ಬೆಸುಗೆ

- Advertisement -
- Advertisement -

ಡಾ.ವಾಸು.ಎಚ್.ವಿ |

‘ಉದ್ಯೋಗಕ್ಕಾಗಿ ಯುವಜನರು’ ವೇದಿಕೆಯಿಂದ ಯುವಜನ ಜಾಥಾ ನಡೆಯುತ್ತಿದೆ. ರಾಜ್ಯದ ಮೂವತ್ತೂ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ, ಫೆಬ್ರವರಿ 15ರಂದು ಬೆಂಗಳೂರಿನಲ್ಲಿ ‘ಯುವಾಗ್ರಹ ಸಮಾವೇಶ’ ಮಾಡಲು ಯೋಜಿಸಲಾಗಿದೆ. ಬಹಳ ವಿಶೇಷವಾದ ಸಂಗತಿಯೆಂದರೆ, ಈ ಜಾಥಾ ಮತ್ತು ಯುವಾಗ್ರಹ ಸಮಾವೇಶಗಳಲ್ಲಿ ನಿರುದ್ಯೋಗ ಹಾಗೂ ಉದ್ಯೋಗ ಅಭದ್ರತೆ ಎರಡೂ ಅಂಶಗಳನ್ನು ಬೆಸೆದಿರುವುದು. ಗುತ್ತಿಗೆ ನೌಕರರು ಹಾಗೂ ಇತರ ಅಸಂಘಟಿತ ಮತ್ತು ಅಭದ್ರ ಕಾರ್ಮಿಕರನ್ನು ಸಂಘಟಿಸುವಲ್ಲಿ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ಅನುಭವದಿಂದ ಇದು ಅತ್ಯಂತ ಮಹತ್ವದ ಪ್ರಯೋಗವೆನಿಸುತ್ತದೆ. ವಾಸ್ತವದಲ್ಲಿ ನಿರುದ್ಯೋಗದ ವಿರುದ್ಧ ಆಂದೋಲನ ಹಮ್ಮಿಕೊಳ್ಳಲು ಹೊರಟಿದ್ದ ಆ ವೇದಿಕೆಗೆ, ಉದ್ಯೋಗ ಭದ್ರತೆಯ ವಿಚಾರವನ್ನೂ ಕೈಗೆತ್ತಿಕೊಳ್ಳಬೇಕೆಂದು ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ್ದನ್ನು ಮೊದಲು ಅಭಿನಂದಿಸಬೇಕು. ಈ ಪ್ರಯೋಗ ಯಶಸ್ವಿಯಾದರೆ, ಇಡೀ ದೇಶದ ದುಡಿಯುವ ಜನರ ಆಂದೋಲನಕ್ಕೆ ಹೊಸದೊಂದು ಹೋರಾಟದ ವಿಧಾನ ಸಿಕ್ಕಂತಾಗುತ್ತದೆ.
ಏಕೆಂದರೆ, ಸಾಮಾನ್ಯವಾಗಿ ನಿರುದ್ಯೋಗಿ ಯುವಜನರು ಮತ್ತು ಉದ್ಯೋಗದಲ್ಲಿರುವ ನೌಕರರು ಸದಾಕಾಲ ಎದುರುಪಾಳೆಯದಲ್ಲಿರುವಂತೆ ವ್ಯವಸ್ಥೆ (System) ನೋಡಿಕೊಳ್ಳುತ್ತದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾದಂತೆ, ಉದ್ಯೋಗದಲ್ಲಿರುವವರು ಅಭದ್ರರಾಗುತ್ತಾರೆ ಮತ್ತು ಅವರ ನಿಜವೇತನ (Real wages -ಅಂದರೆ ಹಣದುಬ್ಬರ, ಬದಲಾದ ಜೀವನಾಗತ್ಯ ಮತ್ತಿತ್ಯಾದಿ ಅಂಶಗಳಿಗೂ ಮೀರಿ ವೇತನ ಹೆಚ್ಚುವುದು) ಹೆಚ್ಚಾಗುವುದಿಲ್ಲ.ಭಾರತದಲ್ಲೇ 2009ರಿಂದೀಚೆಗೆ ಭಾರತದಲ್ಲಿ ಉದ್ಯೋಗ ಸೃಷ್ಟಿಯ ದರ ಸಹಾ ಕುಸಿಯುತ್ತಿದೆ ಮತ್ತು ಸರಿಯಾಗಿ ಇದೇ ಅವಧಿಯಲ್ಲಿ ನಿಜವೇತನದ ಹೆಚ್ಚಳದ ಪ್ರಮಾಣ ಕುಸಿಯುತ್ತಿದೆ. ಇದು ಹೇಗೆ?
ಇದನ್ನು ಈ ರೀತಿ ವಿವರಿಸಬಹುದು. ಒಂದು ಕೈಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನವು ನಿಗದಿಯಾಗಲು ಮತ್ತು ಉದ್ಯೋಗದ ಸ್ಥಿತಿ-ಗತಿ (Working conditions) ನಿರ್ಧಾರವಾಗಲು ಹಲವು ಕಾರಣಗಳಿರಬಹುದು. ಅದರಲ್ಲಿ ಆಶ್ಚರ್ಯಕರವಾದ ಒಂದು ಕಾರಣವಿದೆ. ಸದರಿ ಕೈಗಾರಿಕೆ ಎಷ್ಟು ಲಾಭ ಮಾಡುತ್ತದೆ, ಅದರಲ್ಲಿ ಕೆಲಸ ಮಾಡುತ್ತಿರುವವರು ಎಷ್ಟರಮಟ್ಟಿಗೆ ಕೌಶಲ್ಯವನ್ನು ಹೊಂದಿದ್ದಾರೆ, ಎಷ್ಟು ಶ್ರಮವಹಿಸಿ ಕೆಲಸ ಮಾಡುತ್ತಾರೆ ಎನ್ನುವುದಕ್ಕಿಂತ ಬೇರೊಂದು ಅಂಶವು ಅವರ ವೇತನವನ್ನು ನಿರ್ಧರಿಸುತ್ತದೆ. ಕೈಗಾರಿಕೆಯ ಆಂತರಿಕ ಅಂಶಕ್ಕಿಂತ ಭಿನ್ನವಾಗಿ ಹೊರಗಿನ ಅಂಶ ಅದು. ಅದೇನೆಂದರೆ, ಅದೇ ಕೆಲಸವನ್ನು ಮಾಡುವ ಸಾಮಥ್ರ್ಯವಿದ್ದು, ಕೆಲಸದ ಹುಡುಕಾಟಲ್ಲಿರುವವರು ಕೈಗಾರಿಕೆಯ ಗೇಟಿನ ಹೊರಗೆ ಎಷ್ಟು ಜನ ಇದ್ದಾರೆ ಎನ್ನುವುದರ ಆಧಾರದ ಮೇಲೆ ಒಳಗಿರುವವರ ಘನತೆ ಮತ್ತು ವೇತನ ನಿರ್ಧಾರವಾಗುತ್ತದೆ. ಹೌದು, ಇನ್ನೂ ಕಡಿಮೆ ವೇತನಕ್ಕೆ ದುಡಿಯಲು ಜನರು ಸಿದ್ಧರಿದ್ದರೆ, ಹೆಚ್ಚಿನ ವೇತನ ಕೊಡಲು ಮಾಲೀಕರು ಸಿದ್ಧರಿರುವುದಿಲ್ಲ.
ಆದರೆ ಸರ್ಕಾರದಲ್ಲೂ ಹೀಗೇ ಆಗುತ್ತದಾ? ಸರ್ಕಾರದ ಇಲಾಖೆಗಳೂ ಸೇರಿದಂತೆ, ಹಲವು ಸ್ಥಾಪಿತ ಕೈಗಾರಿಕೆಗಳಲ್ಲಿ ಈಗಾಗಲೇ ಸಂಬಳ ಮತ್ತು ಇತರ ಸೌಲಭ್ಯಗಳು ನಿಗದಿಯಾಗಿಬಿಟ್ಟಿರುತ್ತದೆ. ಅಲ್ಲಿ ಹಿಂದಿಗಿಂತಲೂ ಸಂಬಳ ಕಡಿಮೆ ಮಾಡಲಾಗುವುದಿಲ್ಲ, ನಿಜ. ಆದರೆ, ನಿರುದ್ಯೋಗ ಹೆಚ್ಚಾದಂತೆ ಅಲ್ಲಿಯೂ ನಿಜವೇತನದ ಹೆಚ್ಚಳದ ದರ ಹಿಂದಿನಂತಿರುವುದಿಲ್ಲ. ಎರಡನೆಯದಾಗಿ ಅಂತಹ ಕಡೆ ಬೇರೊಂದು ಉಪಾಯ ಕಂಡುಕೊಳ್ಳುತ್ತಾರೆ. ಖಾಯಂ ನೌಕರರಿಗೆ ಹೆಚ್ಚಿನ ವೇತನ ಇರುತ್ತದೆ. ಅವರಲ್ಲದೇ, ಎರಡು ಅಥವಾ ಮೂರ್ನಾಲ್ಕು ಬೇರೆ ಬೇರೆ ಥರದ ನೌಕರರ ಸ್ತರಗಳು ಹುಟ್ಟಿಕೊಳ್ಳುತ್ತವೆ. ಗುತ್ತಿಗೆ, ಹೊರಗುತ್ತಿಗೆ, ಅತಿಥಿ, ಗೌರವಧನ, ಅಡ್‍ಹಾಕ್, ಟ್ರೈನಿ ಇತ್ಯಾದಿ. ಅವರುಗಳಿಗೆ ಅವರ ಜೊತೆಯಲ್ಲೇ ಕೆಲಸ ಮಾಡುವ ಖಾಯಂ ನೌಕರರಿಗೆ ನೀಡುವ ಅರ್ಧದಷ್ಟು ಸಂಬಳ, ಕಾಲುಭಾಗ ಗೌರವ ಮತ್ತು ಶೂನ್ಯ ಸೌಲಭ್ಯಗಳು! ಏಕೆಂದರೆ, ಇದೇ ಕೆಲಸ ಮಾಡಲು ಸಿದ್ಧರಿರುವ ದೊಡ್ಡ ನಿರುದ್ಯೋಗಿ ಪಡೆ ಹೊರಗೆ ಕಾದಿರುತ್ತಾರೆ. ಇವರು ದನಿಯೆತ್ತಿದರೆ, ನೀವು ಬೇಡ ಹೊರಹೋಗಿ ಎನ್ನುತ್ತಾರೆ. ಅವರು ಕೆಲಸ ಬಿಟ್ಟು ಹೋದರೆ, ಆಡಳಿತಕ್ಕೆ ಯಾವ ಸಮಸ್ಯೆಯೂ ಆಗುವುದಿಲ್ಲ. ಈ ಕೆಲಸಕ್ಕಾಗಿ ಕ್ಯೂ ನಿಂತಿರುತ್ತಾರೆ. ಹಾಗಾಗಿ ನಿರುದ್ಯೋಗ ಹೆಚ್ಚಾದಂತೆ ಸೌಲಭ್ಯಗಳಿಲ್ಲದೇ ಕಡಿಮೆ ವೇತನಕ್ಕೆ ಅಭದ್ರತೆಯಲ್ಲಿ ದುಡಿಸುವ ಗುತ್ತಿಗೆ ಪದ್ಧತಿಯೂ ಹೆಚ್ಚಾಗುತ್ತದೆ.
ಸರ್ಕಾರೀ ಇಲಾಖೆಗಳಲ್ಲಿ ಇನ್ನೂ ಒಂದು ಸಂಕಷ್ಟವಿದೆ. ಖಾಲಿ ಇರುವ ಹುದ್ದೆಗಳಿಗೆ ಖಾಯಂ ನೌಕರರ ಬದಲಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರಲಾಗುತ್ತದೆ. ನಿರುದ್ಯೋಗಿಗಳ ದನಿ ಹೆಚ್ಚಾದಂತೆ, ರಾಜಕೀಯವಾಗಿ ಸಮಸ್ಯೆಯಾಗಬಹುದು ಎನಿಸಿದಾಗಲೆಲ್ಲಾ ಸರ್ಕಾರಗಳು ಖಾಯಂ ನೇಮಕಾತಿಗೆ ಮುಂದಾಗುತ್ತವೆ. ಆಗ ಅದುವರೆಗೂ ಅಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ/ಅತಿಥಿ ನೌಕರರು ಹೊರಹೋಗಬೇಕಾಗುತ್ತದೆ. ನೇಮಕಾತಿ ಪ್ರಕ್ರಿಯೆ ಒಂದಷ್ಟು ಆಗಿರುವಾಗ, ಗುತ್ತಿಗೆ ನೌಕರರು ಹರಸಾಹಸ ಮಾಡಿ ಅಲ್ಲಿಯೇ ಉಳಿಯಲು ಪ್ರಯತ್ನಿಸುತ್ತಿರುತ್ತಾರೆ. ಆಗ ಇಬ್ಬರದ್ದೂ ಪರಸ್ಪರ ಶತ್ರುಬಣ! ಈ ಪರಿಸ್ಥಿತಿಗೆ ಕಾರಣವಾಗಿರುವ ಸರ್ಕಾರವನ್ನು ಎರಡೂ ಬಣಗಳು ವಿರೋಧಿಸುವುದಿಲ್ಲ. ಬದಲಿಗೆ ಅವರಲ್ಲಿ ಹೋಗಿ ಬೇಡಿಕೊಳ್ಳುತ್ತಾರೆ ಅಥವಾ ಲಂಚ ಕೊಟ್ಟಾದರೂ ತಮ್ಮ ಕೆಲಸ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ನಿರುದ್ಯೋಗಿಗಳು ಅಥವಾ ಸರ್ಕಾರೀ ಉದ್ಯೋಗದ ಆಕಾಂಕ್ಷಿಗಳೇ ಸುಪ್ರೀಂಕೋರ್ಟಿಗೆ ಹೋಗಿ, ಇನ್ನು ಮುಂದೆ ಗುತ್ತಿಗೆ ಆಧಾರದ ನೌಕರರ ಖಾಯಮಾತಿ ಆಗಬಾರದು ಎಂಬ (ಕು)ಖ್ಯಾತ ಉಮಾದೇವಿ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಎಂಬ ಕೇಸಿನ ಆಘಾತಕಾರಿ ತೀರ್ಪು ತಂದಿದ್ದು.
ಹಾಗೆ ನೋಡಿದರೆ, ಈ ನಿರುದ್ಯೋಗಿಗಳಿಗೂ ಗುತ್ತಿಗೆ ಪದ್ಧತಿಯೆಂಬುದೊಂದು ಶಾಪ. ಹೇಗೆಂದು ನೋಡೋಣ. ಕರ್ನಾಟಕದಲ್ಲಿ ಮೂರ್ನಾಲ್ಕು ವರ್ಷಗಳ ಕೆಳಗೆ 2,500 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಹೊರಟಾಗ 18,60,000 ಜನರು ಅರ್ಜಿ ಹಾಕಿದರು. ಮೊನ್ನೆಯ ಪತ್ರಿಕೆಯಲ್ಲಿ ಬಂದಿರುವಂತೆ ಮಹಾರಾಷ್ಟ್ರದ ಸರ್ಕಾರೀ ಇಲಾಖೆಯಲ್ಲಿ 13 ವೇಟರ್ (ಊಟ, ತಿಂಡಿ ಬಡಿಸುವ) ಹುದ್ದೆಗಳಿಗೆ 7000 ಅರ್ಜಿಗಳು ಬಂದಿವೆ. ಅವರಲ್ಲಿ ಪದವೀಧರರೂ ಇದ್ದಾರೆ. ಅಂದರೆ ಈಗಿನ ಲೆಕ್ಕದ ಪ್ರಕಾರ ಹೋದರೆ, ಯಾವುದೇ ಹುದ್ದೆಗಳಿಗೆ ಅರ್ಜಿ ಹಾಕುತ್ತಿರುವವರಲ್ಲಿ ಶೇ.1ರಷ್ಟು ಜನಕ್ಕೂ ಉದ್ಯೋಗ ಸಿಗುವುದಿಲ್ಲ. ಉಳಿದವರು ಏನಾಗುತ್ತಾರೆ? ಏನೇನೋ ರೀತಿಯ ಉದ್ಯೋಗ, ಅರೆ ಉದ್ಯೋಗಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರಲ್ಲಿ ಉದ್ಯೋಗ ಪಡೆದುಕೊಳ್ಳುವ ಬಹುಪಾಲು ಜನರಿಗೂ ಸರ್ಕಾರೀ ಅಥವಾ ಖಾಸಗಿ ವಲಯದಲ್ಲಿ ಸಿಗುವುದು ಗುತ್ತಿಗೆ ಆಧಾರದ ಕೆಲಸವೇ. ಯಥಾಪ್ರಕಾರ ಉದ್ಯೋಗ ಭದ್ರತೆ ಇಲ್ಲದ, ಘನತೆಯ ವೇತನವಿಲ್ಲದ ಕೆಲಸ. ಅಂದ ಮೇಲೆ ಅವರೂ ಸಹಾ ಗುತ್ತಿಗೆ ಪದ್ಧತಿಯ ವಿರುದ್ಧ ಹೋರಾಡಲೇಬೇಕು ತಾನೇ?
ಹಾಗಾಗುವುದಿಲ್ಲ. ಎಲ್ಲರೂ ತನಗೆ ಸಿಕ್ಕರೆ ಸಾಕು ಎಂದು ಬಗೆಯುತ್ತಾರೆ. ಅದಕ್ಕಾಗಿ ಲಂಚ ಕೊಡಲು, ಅನ್ಯಾಯದ ದಾರಿಗಳನ್ನು ತುಳಿಯಲು ಮುಂದಾಗುತ್ತಾರೆ. ಆಗಲೂ ಶೇ.1ರಷ್ಟು ಜನರಿಗೆ ಉದ್ಯೋಗ ಸಿಗುವುದಿಲ್ಲ. ಹಾಗಾಗಿ ಈ ಎಲ್ಲಾ ಗುಂಪುಗಳಿಗೆ ಸೇರಿದ ಬಹುಪಾಲು ಜನರು ವ್ಯವಸ್ಥೆಯ ಬಲಿಪಶುಗಳಾಗುತ್ತಾರೆ. ಅವರ ಕಣ್ಣೆದುರಿಗೇ ವಾಸ್ತವ ಕಾಣುತ್ತಿದ್ದರೂ, ತಮ್ಮ ಪ್ರತ್ಯೇಕತೆಗಾಗಿ ಪಟ್ಟು ಹಿಡಿಯುತ್ತಾರೆ.
ಈ ಪ್ರತ್ಯೇಕತೆ, ನಾವೇ ಬೇರೆ, ನಮ್ಮದಾದರೆ ಸಾಕು ಎನ್ನುವ ಮನೋಭಾವ ಎಷ್ಟು ಪ್ರಬಲವಾಗಿದೆಯೆಂದರೆ ನಿರುದ್ಯೋಗಿಗಳು ಮತ್ತು ಅರೆ ಉದ್ಯೋಗಿಗಳಾದ ಗುತ್ತಿಗೆ ನೌಕರರು ಒಂದಾಗುವುದು ಹೋಗಲಿ, ಒಂದೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರೂ ಒಂದಾಗುವುದಿಲ್ಲ. ಕೆಲವೊಮ್ಮೆ ಒಂದೇ ಇಲಾಖೆಯ ವಿವಿಧ ವಿಭಾಗಗಳಲ್ಲಿ/ಶ್ರೇಣಿಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರೂ ಒಂದಾಗುವುದಿಲ್ಲ. ಈ ಪ್ರತ್ಯೇಕತೆಯಿಂದ ಅವರು ಪಡೆದುಕೊಳ್ಳುವುದೇನು? ಏನೂ ಇಲ್ಲ. ವೈಫಲ್ಯವೇ ಹೆಚ್ಚು.
ಪ್ರತ್ಯೇಕ ಪ್ರತ್ಯೇಕವಾಗಿ ಹೋರಾಡಲು ಇನ್ನೊಂದು ಕಾರಣವೆಂದರೆ, ಸದರಿ ಸಮಸ್ಯೆಯ ಮೂಲವೇನು, ಸರ್ಕಾರಗಳ ನೀತಿ (ಪಾಲಿಸಿ)ಯ ಭಾಗವಾಗಿ ಗುತ್ತಿಗೆ ಪದ್ಧತಿಯು ವರ್ಷದಿಂದ ವರ್ಷಕ್ಕೆ ಹೇಗೆ ಹೆಚ್ಚಾಗುತ್ತಿದೆ ಎನ್ನುವುದನ್ನು ನೋಡಲೇ ಹೋಗುವುದಿಲ್ಲ. ಆದರೂ, ಒಂದಾದ ಮೇಲೆ ಒಂದು ಗುಂಪು ಚಿಕ್ಕ ಚಿಕ್ಕ ಹೋರಾಟ ಮಾಡುತ್ತವೆ. ಕೆಲವೊಮ್ಮೆ ಭಾರೀ ದೊಡ್ಡ ಗುಂಪೇ ಮೇಲೇಳುತ್ತದೆ. ‘ಇದು ಮಾಡು ಇಲ್ಲವೇ ಮಡಿ ನಿರ್ಣಾಯಕ ಹೋರಾಟ’ ಎಂಬ ಘೋಷಣೆ ಮೊಳಗಿಸುತ್ತಾರೆ. ಆದರೆ, ತನ್ನ ಸಂಘಟನೆಯೊಳಗಿನ ಭಾರಕ್ಕೆ ಅದೇ ಕುಸಿದು ಕೂರುತ್ತದೆ. ಅದು ದಿಢೀರನೆ ಸ್ಪಿರಿಟ್‍ನಲ್ಲಿ ಹುಟ್ಟಿಕೊಂಡ ಬಲೂನಾಗಿರುತ್ತದೆ. ಸಂಘಟನಾ ಅನುಭವವಾಗಲೀ, ಕಾನೂನಿನ ಅರಿವಾಗಲೀ, ಸಮಸ್ಯೆಯ ಆಳವಾಗಲೀ ಎಲ್ಲರಲ್ಲೂ ಇರುವುದಿಲ್ಲವಾದ್ದರಿಂದ ಅತಿರೇಕದ ಸಲಹೆಗಳು ಬರುತ್ತವೆ. ಕೆಲವೊಮ್ಮೆ ಪೊಲೀಸು ಕೇಸುಗಳನ್ನು ಎದುರಿಸುವ ಮಟ್ಟಕ್ಕೆ ಹೋಗಿ ಕುಸಿಯುತ್ತಾರೆ. ಅದಕ್ಕಿಂತ ಮುಖ್ಯವಾಗಿ ಸರ್ಕಾರವೆನ್ನುವುದು ಒಂದು ಬಲಶಾಲೀ ವ್ಯವಸ್ಥೆ ಎನ್ನುವುದನ್ನು, ಅದೇ ವ್ಯವಸ್ಥೆಯೊಳಗಿರುವ ಜನರೇ ತಾತ್ಕಾಲಿಕವಾಗಿ ಮರೆಯುತ್ತಾರೆ. ಯಾವಾಗ ಪೆಟ್ಟು ಬೀಳುತ್ತದೋ, ಆಗ ಶರಣಾಗತಿಗೆ ದೂಡಲ್ಪಟ್ಟು ಗೂಡು ಸೇರಿಕೊಂಡು ಬಿಡುತ್ತಾರೆ.
ಇದಕ್ಕೆ ಒಂದು ರೀತಿಯಲ್ಲಿ ರಾಜಕೀಯ ಸ್ಪಷ್ಟತೆಯಿಲ್ಲದ ಟ್ರೇಡ್ ಯೂನಿಯನ್ನುಗಳೂ ಕಾರಣವಾಗುತ್ತವೆ. ಅವರಿಗೆ ಟ್ರೇಡ್ ಯೂನಿಯನ್ ಉಳಿಸಿಕೊಳ್ಳುವುದು, ತಾವು ನಾಯಕರಾಗಿರುವುದು ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ. ಹಾಗಾಗಿ ಹೇಗೋ ಲಾಬಿ ಮಾಡಿ ಅರ್ಜಿಗಳ ಮೇಲೆ ಅರ್ಜಿಗಳನ್ನು ಹಾಕುತ್ತಾ ಮಂತ್ರಿ ಮಹೋದಯರಿಗೆ ಅವನ್ನು ನೀಡಿ ಫೋಟೋ ತೆಗೆಸಿಕೊಂಡು ಹಂಚುತ್ತಾ ಮ್ಯಾನೇಜ್ ಮಾಡುತ್ತಾರೆ. ದಿನ ಕಳೆದಂತೆ ಕೆಳಗಿನ ಸ್ತರಗಳಲ್ಲಿರುವವರಿಗೆ ಹತಾಶೆ ಕಾಡುತ್ತದೆ; ಸಿನಿಕತನ ತಲೆದೋರುತ್ತದೆ; ಆದರೆ, ಪರ್ಯಾಯವೇನೂ ಇಲ್ಲದೇ ಸಂಘಟನೆಯ ಒಳಗೆ ಕಾಲಹಾಕುತ್ತಾರೆ. ಆಂದೋಲನ ದುರ್ಬಲವಾಗುತ್ತದೆ.
ಹಾಗೆ ನೋಡಿದರೆ ಕಾರ್ಮಿಕ ವರ್ಗದ ಹೋರಾಟ ಮಾಡುತ್ತಿರುವ ಎಲ್ಲರಿಗೂ ಉದ್ಯೋಗ ಭದ್ರತೆಯ ಹೋರಾಟ ಮುಖ್ಯವಾಗಿದೆ. 150 ವರ್ಷಗಳ ದುಡಿವ ವರ್ಗದ ಹೋರಾಟದಿಂದ ಪಡೆದುಕೊಂಡಿರುವ ಯೂನಿಯನ್ ಕಟ್ಟಿಕೊಳ್ಳುವ ಹಕ್ಕು, ವರ್ಷಪೂರ್ತಿ ಕೆಲಸ ನಡೆಯುವ ಕಡೆ ಖಾಯಂ ಕೆಲಸದ ಹಕ್ಕು ಸೇರಿದಂತೆ ನೂರಾರು ಹಕ್ಕುಗಳನ್ನು ದುರ್ಬಲಗೊಳಿಸಲಾಗಿದೆ. ದುರ್ಬಲಗೊಳಿಸುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಹಳಷ್ಟು ಮಾಡಿದೆ ಎಂಬುದು ಎಷ್ಟು ನಿಜವೋ, ಈ ಹಿಂದಿನ ಸರ್ಕಾರಗಳೂ ಕಳೆದ 25 ವರ್ಷಗಳಿಂದ ಅದನ್ನು ಮಾಡುತ್ತಲೇ ಬರುತ್ತಿವೆ ಎಂಬುದೂ ಅಷ್ಟೇ ನಿಜವಾಗಿದೆ.
ಸರ್ಕಾರೀ ವಲಯದಲ್ಲಿರುವ, ಅದರಲ್ಲೂ ಬುದ್ಧಿಜೀವಿ ವರ್ಗವಾದ ಕಾಲೇಜು ಯೂನಿವರ್ಸಿಟಿಗಳ ಅತಿಥಿ ಉಪನ್ಯಾಸಕರು ಸೇರಿದಂತೆ ಎಲ್ಲರೂ ಒಟ್ಟಿಗೇ ಸರ್ಕಾರದ ನೀತಿಗಳ ವಿರುದ್ಧ ಹೋರಾಟ ಮಾಡಬೇಕು; ಎಂದಿಗೂ ಈಡೇರದ ‘ನಮ್ಮನ್ನು ಮಾತ್ರ ಖಾಯಂ ಮಾಡಿ’ ಎಂಬ ಪ್ರತ್ಯೇಕ ಹೋರಾಟವನ್ನು ಬದಿಗಿಟ್ಟು ಗುತ್ತಿಗೆ ಪದ್ಧತಿಯನ್ನೇ ಟಾರ್ಗೆಟ್ ಮಾಡಬೇಕು. ಹೊರಗುತ್ತಿಗೆ ರದ್ದು ಮಾಡುವುದು, ವರ್ಷ ವರ್ಷ ನವೀಕರಣ ಮಾಡುವ ಪದ್ಧತಿ ರದ್ದು ಮಾಡಿ ಉದ್ಯೋಗ ಭದ್ರತೆ ಪಡೆದುಕೊಳ್ಳುವುದು, ಸಮಾನ ವೇತನ ಸಮಾನ ಭತ್ಯೆ ಮತ್ತು ಸವಲತ್ತುಗಳು ಇವೆಲ್ಲವನ್ನೂ ಹಂತ ಹಂತವಾಗಿ ಎಲ್ಲರೂ ಪಡೆದುಕೊಳ್ಳುವಂತೆ ಹೋರಾಡಬೇಕು. ಎಲ್ಲರೂ ಜೊತೆಗೂಡಿದರೆ, ಗುತ್ತಿಗೆ ಪದ್ಧತಿಯ ವಿರುದ್ಧ ಒಂದು ಜನಪ್ರಿಯ ಸಾರ್ವಜನಿಕ ಕಥನ ರೂಪುಗೊಳ್ಳುತ್ತದೆ.
ಆದರೆ, ಇಂದು ಅದಿನ್ನೂ ರೂಪುಗೊಂಡಿಲ್ಲ. ಬದಲಿಗೆ ಅಂತಹ ಜನಪ್ರಿಯ ಸಾರ್ವಜನಿಕ ಕಥನ ರೂಪುಗೊಳ್ಳುವ ಮುಂಚೆಯೇ, ನಿರುದ್ಯೋಗವು ರಾಜಕೀಯ ಮತ್ತು ಅಕ್ಯಾಡೆಮಿಕ್ ಕಥನವಾಗಿ ಚಾಲ್ತಿಗೆ ಬಂದುಬಿಟ್ಟಿದೆ. ಹೀಗಾಗಿ ಎಲ್ಲರೂ ನಿರುದ್ಯೋಗದ ಕುರಿತು ಮಾತನಾಡುತ್ತಿದ್ದಾರೆ. ಈಗಾಗಲೇ ಉದ್ಯೋಗದಲ್ಲಿ ಇರುವ ಈ ವರ್ಗದ ಪರಿಸ್ಥಿತಿ ಇಷ್ಟು ಕೆಟ್ಟದಾಗಿದೆಯೆಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದರ ಕುರಿತು ಮಾತನಾಡುವುದಿಲ್ಲ, ನಿರುದ್ಯೋಗದ ಬಗ್ಗೆ ಮಾತ್ರ ಅಕ್ಯಾಡೆಮಿಕ್ ತಜ್ಞರು, ರಾಜಕಾರಣಿಗಳು, ಟಿವಿ ಆಂಕರ್‍ಗಳು ಎಲ್ಲರೂ ಮಾತನಾಡುತ್ತಿದ್ದಾರೆ. ಪ್ಯಾನೆಲ್ ಚರ್ಚೆಗಳು ನಡೆಯುವ ಟಿವಿ ಚಾನೆಲ್‍ಗಳಿಂದ ಹಿಡಿದು, ಐಟಿ ಇಂಜಿನಿಯರ್‍ಗಳವರೆಗೆ ಮತ್ತು ಸರ್ಕಾರೀ ವಲಯದಿಂದ ಹಿಡಿದು ಖಾಸಗಿ ಕ್ಷೇತ್ರದವರೆಗೆ ಎಲ್ಲೆಲ್ಲೂ ಅಭದ್ರ ನೌಕರಿಗಳು ಇವೆ. ಅದು ‘ಸಾರ್ವಜನಿಕವಾಗಿ’ ಗಮನ ಸೆಳೆದಿರುವ ಸಂಗತಿಯಲ್ಲ..
ಇವರೂ ಸಾರ್ವಜನಿಕರೇ. ಆದರೆ ಸಮಾಜದಲ್ಲಿ ‘ಸಾರ್ವಜನಿಕ ಅಭಿಪ್ರಾಯ’ ಮೂಡಿಸಲು ಶಕ್ತರಾಗಿಲ್ಲ. ಹಾಗಾಗಿ ರಾಜಕಾರಣಿಗಳೂ ಈ ಕಡೆಗೆ ತಿರುಗಿ ನೋಡುವುದಿಲ್ಲ. ಚುನಾವಣೆಯಲ್ಲೂ ಗುತ್ತಿಗೆ ಪದ್ಧತಿ ಒಂದು ಇಶ್ಯೂ ಆಗುವುದಿಲ್ಲ. ಯಥಾಪ್ರಕಾರ ಈ ಸಾರಿಯ ಚುನಾವಣೆಯಲ್ಲೂ ಮತ್ತೊಮ್ಮೆ ಜಾತಿ, ಧರ್ಮ, ಹಣ, ವ್ಯಕ್ತಿಗತ ಆರೋಪಗಳು ನಡೆಯುತ್ತಿರುತ್ತವೆ. ಈ ವ್ಯವಸ್ಥೆಯಲ್ಲಿ ಬಲಿಪಶುಗಳಾಗಿರುವವರೂ ಅದನ್ನು ನಿಬ್ಬೆರಗಾಗಿ ನೋಡುತ್ತಾ ಚುನಾವಣೆಯಲ್ಲಿ ನಿಷ್ಠೆಯಿಂದ ಮತ ಹಾಕಿ ಮುಂದೆ ಸಾಗುತ್ತಾರೆ.
ಈ ವ್ಯೂಹವನ್ನು ದಾಟಬೇಕೆಂದು ನಿರ್ಧರಿಸಿ ಜನರ ಸಮಸ್ಯೆಯನ್ನು ರಾಜಕೀಯ ಆಂದೋಲವನ್ನಾಗಿಸಲು ಹೊರಟ ಪ್ರಯತ್ನವೇ ಉದ್ಯೋಗಕ್ಕಾಗಿ ಯುವಜನರು. ‘ಉದ್ಯೋಗಕ್ಕೇ ಓಟು, ಉದ್ಯೋಗ ಭದ್ರತೆಗೇ ಓಟು’ ಎಂದು ಕರೆ ನೀಡಿ, ಪರಸ್ಪರ ವಿರೋಧಿ ಬಣದಲ್ಲಿರಿಸಲಾಗುವ ನಿರುದ್ಯೋಗಿಗಳು ಮತ್ತು ಗುತ್ತಿಗೆ ನೌಕರರನ್ನು ಬೆಸೆದು ನಡೆಸಿದ ಆಂದೋಲನವದು. ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಪ್ರತಿಕ್ರಿಯಿಸಲೇಬೇಕಾದ ಒತ್ತಡವನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರ್ಮಾಣವಾಯಿತು. ಇದೀಗ ತಾವು ಒಪ್ಪಿಕೊಂಡಿದ್ದನ್ನು ಜಾರಿ ಮಾಡುವ ಜವಾಬ್ದಾರಿ ಆಯಾ ಪಕ್ಷಗಳದ್ದು. ಅದಕ್ಕಾಗಿ ಇದೇ ಫೆಬ್ರವರಿ 15ರಂದು ಯುವಾಗ್ರಹ ಸಮಾವೇಶವನ್ನು ಉದ್ಯೋಗಕ್ಕಾಗಿ ಯುವಜನರು ಮತ್ತು ಕರ್ನಾಟಕ ಸರ್ಕಾರೀ ಗುತ್ತಿಗೆ ನೌಕರರ ಮಹಾಒಕ್ಕೂಟಗಳು ಹಮ್ಮಿಕೊಂಡಿವೆ. ಅದರ ಸುದ್ದಿಯನ್ನು ರಾಜ್ಯದೆಲ್ಲೆಡೆ ಹರಡಲು ‘ಯುವಜನ ಜಾಥಾ’ ಹೊರಟಿದೆ. ನಿಧಾನಕ್ಕೆ ಅದರ ಬಿಸಿಯೇರುತ್ತಿದೆ.
ರಾಜಕೀಯ ಪಕ್ಷಗಳು ಇನ್ನೂ ವ್ಯೂಹ ರೂಪಿಸುವುದಕ್ಕೆ ಮುಂಚೆಯೇ ಈ ಸಾರಿ ರಾಜ್ಯದ ಯುವಜನರು ಮತ್ತು ಗುತ್ತಿಗೆ ನೌಕರರು ಜಂಟಿಯಾಗಿ ಪ್ರಶ್ನೆಗಳನ್ನೆತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡಕ್ಕೂ. ಈ ಪ್ರಶ್ನೆಗಳಿಂದ ತಪ್ಪಿಸಿಕೊಂಡು ಹೋಗದಂತೆ ಮಾಡಲು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರು ಸೇರಿದಂತೆ ಹಲವು ಹಿರಿಯರು ಬೆಂಬಲಕ್ಕೆ ನಿಂತಿದ್ದಾರೆ. ‘ದೇಶಕ್ಕಾಗಿ ನಾವು ICAN-19’ ಕ್ಯಾಂಪೇನ್ ಸಹಾ ತನ್ನ ಮೂರು ಪ್ರಮುಖ ಘೋಷಣೆಗಳಲ್ಲಿ ಇದನ್ನೊಂದು ವಿಚಾರವಾಗಿ ಕೈಗೆತ್ತಿಕೊಂಡಿದೆ. ಈ ಸಾರಿಯ ಚುನಾವಣೆಯಲ್ಲಿ ನಿರುದ್ಯೋಗ ಮತ್ತು ಉದ್ಯೋಗ ಅಭದ್ರತೆಗಳು ದೊಡ್ಡದಾಗಿ ಸದ್ದು ಮಾಡುವುದರಲ್ಲಿ ಸಂಶಯವಿಲ್ಲ. ಸುಭದ್ರ ಉದ್ಯೋಗದ ನಿರ್ಮಾಣದ ದೃಷ್ಟಿಯಲ್ಲಿ ಇದೊಂದು ಗಮನಾರ್ಹ ಹೆಜ್ಜೆಯಾಗಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ನಾಯಕ ಸುರ್ಜೇವಾಲಾಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ

0
ಬಿಜೆಪಿ ಸಂಸದೆಯ ವಿರುದ್ಧದ ಅವಹೇಳನಾಕಾರಿ ಹೇಳಿಕೆ ಆರೋಪದಲ್ಲಿ ಕಾಂಗ್ರೆಸ್‌ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿ ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿದೆ....