Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಬೇಯುವ ಭೂಮಿಯನ್ನು ಉಳಿಸುವುದು ಎಲ್ಲರ ಕರ್ತವ್ಯ

ಬೇಯುವ ಭೂಮಿಯನ್ನು ಉಳಿಸುವುದು ಎಲ್ಲರ ಕರ್ತವ್ಯ

- Advertisement -
- Advertisement -

ನಿನ್ನೆ ದೆಹಲಿಯಲ್ಲಿ ಅತ್ಯಂತ ಹೆಚ್ಚು ಮಾಲಿನ್ಯವಿತ್ತೆಂದು ಇಂದಿನ ದಿನಪತ್ರಿಕೆಗಳು ಬರೆದಿವೆ. ಇದರಿಂದ ಜನರು ಕಂಗಾಲಾಗಿದ್ದಾರೆಂದೂ ವರದಿಯಲ್ಲಿ ಹೇಳಲಾಗಿದೆ. ವಾಸ್ತವದಲ್ಲಿ ಜನರೇನೂ ಕಂಗಾಲಾಗಿಲ್ಲ. ಏಕೆಂದರೆ, ಇದು ಇದ್ದಕ್ಕಿದ್ದಂತೆ ಒಂದು ದಿನ ಸಂಭವಿಸಿದ ವಿಕೋಪವಲ್ಲ. ಪ್ರವಾಹ, ಸುನಾಮಿ, ಭೂಕಂಪದಂತಹ ಕೆಲವು ಪ್ರಾಕೃತಿಕ ವಿಕೋಪಗಳು ಉಂಟುಮಾಡುವ ಪರಿಣಾಮದ ಸ್ವರೂಪ ಬೇರೆ. ಒಳಗೊಳಗೇ ಶಿಥಿಲಗೊಳಿಸುವ ಬರ, ಪರಿಸರ ಮಾಲಿನ್ಯಗಳ ಪರಿಣಾಮದ ಸ್ವರೂಪ ಬೇರೆ. ನಿಧಾನಕ್ಕೆ ಹೆಚ್ಚಾಗುತ್ತಾ ಹೋಗುವ ಎರಡನೆಯ ಬಗೆಯ ಸಮಸ್ಯೆಗಳಿಗೆ ಜನರು ಹೊಂದಿ ಕೊಳ್ಳುತ್ತಾ ಹೋಗುತ್ತಾರೆ. ಅವರಲ್ಲಿ ಅಂತಹ ‘ಕಂಗಾಲು’ ಉಂಟಾ ಗುವುದಿಲ್ಲ. ಸದರಿ ವರದಿಯನ್ನು ಬರೆದ ವರದಿಗಾರರಿಗೂ ಕಂಗಾಲು ಉಂಟಾಗಿರುವುದಿಲ್ಲ; ತನ್ನ ಕರ್ತವ್ಯದ ಭಾಗವಾಗಿ ಬರೆದ ವರದಿಯಾಗಿರುತ್ತದೆ. ಇಲ್ಲವೇ ಗಮನ ಸೆಳೆಯುವ ದೃಷ್ಟಿಯಿಂದ ಪರಿಣಾಮ ಬೀರುವ ಪದಗಳನ್ನು ಬಳಸಬೇಕೆಂಬ ಉದ್ದೇಶ ಅವರದ್ದಾಗಿರುತ್ತದೆ.
ಇದಕ್ಕೆ ಕಾರಣವಿದೆ. ಈಗಾಗಲೇ ಚಾಲ್ತಿಯಲ್ಲಿರುವ ಉದಾಹರಣೆಯೊಂದರ ಮೂಲಕ ಅದನ್ನು ವಿವರಿಸಬಹುದು. ನೀವು ಕಪ್ಪೆಯೊಂದನ್ನು ಬಿಸಿ ನೀರಿಗೆ ಹಾಕಿದಲ್ಲಿ ಅದು ಕೂಡಲೇ ನೆಗೆದು ಅಲ್ಲಿಂದ ತಪ್ಪಿಸಿಕೊಳ್ಳುತ್ತದೆ. ಆದರೆ, ತಣ್ಣೀರಿನ ಪಾತ್ರೆಯಲ್ಲಿ ಅದನ್ನು ಇಟ್ಟು ತಳವನ್ನು ನಿಧಾನಕ್ಕೆ ಬಿಸಿ ಮಾಡುತ್ತಾ ಹೋದಲ್ಲಿ, ತಾನು ಬೆಂದು ಹೋಗುವವರೆಗೂ ಅದು ಸುಮ್ಮನೇ ಇರುತ್ತದೆ.
ಈ ರೀತಿ ಬೇಯುವ ಸ್ಥಿತಿಗೆ ಭೂಮಿ ಬರುತ್ತಿದೆ ಎಂದು ಹಲವು ತಜ್ಞರು ಹೇಳುತ್ತಿದ್ದಾರೆ. ಅದನ್ನು ಸೂಚಿಸುತ್ತಿರುವ ಹಲವು ಸಂಗತಿಗಳನ್ನೂ ಅವರು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಇನ್ನೂ ಎಲ್ಲವೂ ಮುಗಿದು ಹೋಗಿಲ್ಲ ಎಂಬ ಸಮಜಾಯಿಷಿಯನ್ನು ನೀಡುತ್ತಾ, ಭೂಮಿಯನ್ನು ಮತ್ತಷ್ಟು ಸಂಕಷ್ಟಕ್ಕೆ ಒಡ್ಡುವ ಕೆಲಸ ನಡೆಯುತ್ತಲೇ ಇದೆ. ಉದಾಹರಣೆಗೆ ಕಾವೇರಿಗೆ ಅಡ್ಡಲಾಗಿರುವ ಕಟ್ಟಿರುವ ಕೆಆರ್‍ಎಸ್ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಉಂಟಾದ ಕಂಪನಗಳು, ಅಣೆಕಟ್ಟೆಯ ಪಕ್ಕದಲ್ಲೇ ಸ್ಥಾಪನೆಯಾಗಿರುವ ಕಂಪನ ಮಾಪನ ಕೇಂದ್ರದವರೆಗೂ ಹೋಗಿ ಅಲ್ಲಿ ದಾಖಲಾಗಿವೆ. ಆದರೆ, ಆ ಕಂಪನದಿಂದ ಅಣೆಕಟ್ಟೆಗೆ ಯಾವುದೇ ಧಕ್ಕೆಯಾಗಿಲ್ಲವೆಂಬ ವರದಿಯನ್ನು ಇಟ್ಟುಕೊಂಡು ಗಣಿಗಾರಿಕೆ ಮುಂದುವರೆಸುವ ಸನ್ನಾಹಗಳು ಜಾರಿಯಲ್ಲಿವೆ. ಹಾಗಾದರೆ, ಒಮ್ಮೆ ಅಣೆಕಟ್ಟೆಗೆ ಧಕ್ಕೆಯಾದ ಮೇಲೆಯೇ ನಾವು ಎಚ್ಚೆತ್ತುಕೊಳ್ಳಬೇಕೆಂಬುದು ಅದರ ಅರ್ಥವೇ?
ಇಂತಹ ಅದೆಷ್ಟೋ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು. ಒಟ್ಟಿನಲ್ಲಿ ಮನುಷ್ಯರು ಸಾಂದ್ರವಾಗಿ ಜೀವನ ನಡೆಸುವ ಎಲ್ಲೆಡೆ ಪ್ರಕೃತಿಯಲ್ಲಿ ಭಾರೀ ಪ್ರಮಾಣದ ಏರುಪೇರುಗಳುಂಟಾಗುತ್ತವೆ. ಅವರು ಬಳಸಿ ಎಸೆಯುವ ತ್ಯಾಜ್ಯದ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ, ಅದನ್ನೂ ದಾಟಿ ನೋಡಿದರೆ, ಇದು ‘ಜೀವನ’ದ ಪ್ರಶ್ನೆ ಅಷ್ಟೇ ಅಲ್ಲ. ಈ ರೀತಿಯ ನಗರೀಕರಣ ಹೆಚ್ಚಾದರೆ, ಭೂಮಿಯನ್ನು ಬೇಯಿಸುತ್ತಲೇ ಹೋಗುವ ಅಭಿವೃದ್ಧಿ ಹೆಚ್ಚಾಗುತ್ತಾ ಹೋದರೆ ಜಿಡಿಪಿ ಹೆಚ್ಚಾಗುತ್ತದೆ. ಹಾಗಾಗಿ ಜಿಡಿಪಿ ಹೆಚ್ಚಳದ ಹಿಂದೆ ಬಿದ್ದಿರುವ, ಕೆಲವು ಕಂಪೆನಿಗಳ ಲಾಭ ಹೆಚ್ಚಿಸುವ ಅಭಿವೃದ್ಧಿಯನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳ ಕೂಟ ಬೆಂಬಲಿಸುತ್ತಾ ಹೋಗುತ್ತದೆ. ಅಂತಿಮವಾಗಿ ಇನ್ನು ತಡೆದುಕೊಳ್ಳುವುದು ಸಾಧ್ಯವೇ ಇಲ್ಲ ಎನಿಸಿದಾಗ, ದೂರದ ಕಾಡಿನಲ್ಲಿರುವ ಜನರಿಗೆ ಕಾಡನ್ನು ರಕ್ಷಿಸುವ ಹೊಣೆ ವಹಿಸಲಾಗುತ್ತದೆ. ಅಲ್ಲಿ ಉಳಿದುಕೊಳ್ಳುವ ಕಾಡು, ಇನ್ನೆಲ್ಲೋ ನಡೆಯುತ್ತಿರುವ ಉತ್ಪಾತವನ್ನು ತಡೆಗಟ್ಟುವ ವಿಪರೀತದ ಪರಿಸರ ಸಮತೋಲನದ ಯೋಜನೆಗಾಗಿ ವರದಿಗಳು ತಯಾರಾಗುತ್ತವೆ.
ಒಂದಲ್ಲಾ ಒಂದು ರೀತಿಯಲ್ಲಿ ಕಸ್ತೂರಿ ರಂಗನ್ ವರದಿ ಅದೇ ಆಗಿದೆ. ಪಶ್ಚಿಮಘಟ್ಟ ಏನು ಮಾಡಬೇಕು ಎಂದು ನೀಡಲಾಗುತ್ತಿರುವ ವರದಿಗಿಂತ, ಈ ನಗರಗಳಲ್ಲಿ ಏನು ಮಾಡಬೇಕು ಎಂಬ ವರದಿಗಳು ಬರಬೇಕು ಮತ್ತು ಅವನ್ನು ಉಲ್ಲಂಘಿಸಲೇಬಾರದು ಎಂಬ ನಿಯಮಗಳನ್ನು ಹಾಕಿಕೊಳ್ಳಬೇಕು. ಅದು ನಡೆಯುತ್ತಿಲ್ಲ.
ನಮ್ಮ ನಗರಗಳ ಜನರ ಬದುಕನ್ನು ಸಹನೀಯಗೊಳಿಸಲು ಪ್ರತ್ಯೇಕ ಬಿಡಿ ಯೋಜನೆಗಳನ್ನು ತಯಾರಿಸುವುದನ್ನೇ ಬಿಡಬೇಕು. ಇಡೀ ಭೂಮಿಯ ಎಲ್ಲಾ ಭಾಗಗಳಲ್ಲೂ ಸಮತೋಲನದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಲು ಹೆಚ್ಚಿನ ತಜ್ಞತೆಯೇನೂ ಬೇಕಿಲ್ಲ. ದೆಹಲಿಯ ವಿಚಾರವನ್ನೇ ನೋಡಿ. ದೆಹಲಿ ಕೇಂದ್ರಿತವಾದ ಅಭಿವೃದ್ಧಿಯ ಭಾಗವಾಗಿ ಜಾರಿಗೆ ಬಂದ ಹಸಿರುಕ್ರಾಂತಿಯನ್ನು ಪಂಜಾಬಿನವರು ಅನುಸರಿಸಬೇಕಾಯಿತು. ಈಗ ಅಲ್ಲಿನ ಹೊಲಗದ್ದೆಗಳಲ್ಲಿ ಬೆಳೆ ಬೆಳೆದ ನಂತರ ಉಳಿಯುವ ಹುಲ್ಲಿನ ವಿಲೇವಾರಿ ಸಾಧ್ಯವಾಗದೇ ಬೆಂಕಿ ಹಾಕಲಾಗುತ್ತದೆ. ಆಗ ಅಲ್ಲಿಂದ ಏಳುವ ಹೊಗೆಯು ದೆಹಲಿಯವರೆಗೆ ಬಂದು ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ವರದಿಯೊಂದಿದೆ. ಅದೇ ಪಂಜಾಬಿನವರೂ, ಹರಿಯಾಣದವರು ತಮ್ಮ ಹಳ್ಳಿಗಳಲ್ಲಿ ಬದುಕಲಾರದೇ ದೆಹಲಿಗೆ ಬಂದು ದುಡಿಯುತ್ತಾರೆ. ದೆಹಲಿಯನ್ನು ಜೀವಂತವಾಗಿಡಲು ಅವರೂ ಬೆವರು ಸುರಿಸುತ್ತಾರೆ ಮತ್ತು ದೆಹಲಿಯ ಕೊಳೆಗೆ ಅವರೂ ಕಾರಣರಾಗುತ್ತಾರೆ.
ಅಂದರೆ ಎಲ್ಲವೂ ಪರಸ್ಪರ ಹೆಣೆದುಕೊಂಡಿರುವ ಸಂಗತಿಗಳಿವು ಮತ್ತು ದೆಹಲಿಗೋ ಬೆಂಗಳೂರಿಗೋ ವಾಷಿಂಗ್ಟನ್ನಿಗೋ ಸೀಮಿತವಾದ ಸಂಗತಿಗಳೂ ಅಲ್ಲ. ಹಾಗೆಯೇ ಇದನ್ನು ಉಳಿಸಿಕೊಳ್ಳುವ ಕರ್ಮವನ್ನು ಅಂಚಿನಲ್ಲಿರುವವರ ಮೇಲೆ ಹೇರುವುದಕ್ಕಿಂತ ಆಷಾಢಭೂತಿತನ ಹಾಗೂ ಕ್ರೌರ್ಯ ಇನ್ನೊಂದಿಲ್ಲ. ಯಾರು ಶುರು ಮಾಡಬೇಕೆಂದು ಯಾದಿ ತಯಾರಿಸುವುದಾದರೆ, ಇದು ಮೊದಲು ಮೇಲಿನವರಿಂದ ಶುರುವಾಗಬೇಕಾದ ಕೆಲಸ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...