Homeಪ್ರಪಂಚಬಂಡವಾಳಶಾಹಿಗೆ ಸರ್ವಾಧಿಕಾರವೂ ಸೈ!

ಬಂಡವಾಳಶಾಹಿಗೆ ಸರ್ವಾಧಿಕಾರವೂ ಸೈ!

- Advertisement -
- Advertisement -

ನಿಖಿಲ್ ಕೋಲ್ಪೆ |

ಈ ಹಿಂದಿನ ಸಂಚಿಕೆಗಳಲ್ಲಿ ಹೇಳಿದಂತೆ ಬಂಡವಾಳಶಾಹಿಯ ಪರಮ ಉದ್ದೇಶ ಲಾಭ ಗಳಿಸುವುದಷ್ಟೇ. ಅಂದರೆ ಸಂಪತ್ತು ಮತ್ತು ಸಂಪನ್ಮೂಲಗಳ ನಿಯಂತ್ರಣ. ಅದಕ್ಕಾಗಿ ಅಧಿಕಾರದ ನಿಯಂತ್ರಣ ಅತ್ಯಗತ್ಯ. ಈ ಉದ್ದೇಶಕ್ಕಾಗಿ ಅದು ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಗಳನ್ನು ನಿಯಂತ್ರಿಸುತ್ತಾ ಬಂದಿದೆ. ಅದರೆ, ಸಮಾಜವಾದಿ ಹಾದಿಯಲ್ಲಿ ಸಾಗಲು ಯತ್ನಿಸಿದ ಹಲವಾರು ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಸರ್ವಾಧಿಕಾರಿಗಳನ್ನು ಪ್ರತಿಷ್ಟಾಪಿಸಿದೆ. ಕೆಲವು ಪ್ರಜಾಪ್ರಭುತ್ವವಾದಿ ಎನಿಸಿಕೊಂಡ ದೇಶಗಳಲ್ಲಿ ಇರುವುದು ಕೇವಲ ಒಡೆಯರ ಆಣತಿಯಂತೆ ತಲೆಯಾಡಿಸುವ ಕೈಗೊಂಬೆ ಸರಕಾರಗಳು. ಕೆಲವೊಮ್ಮೆ ಅದು ಪಕ್ಕಾ ಕ್ರಿಮಿನಲ್ ವ್ಯಕ್ತಿಗಳು, ಯುದ್ಧಕೋರರು (ವಾರ್ ಲಾಡ್ರ್ಸ್) ಮತ್ತು ಮಾಫಿಯಾ ಜೊತೆಗೆ, ಡ್ರಗ್ ಕಾರ್ಟೆಲ್‍ಗಳ ಜೊತೆಗೂ ಕೈ ಜೋಡಿಸಿದ್ದಿದೆ. ಈ ಕುರಿತ ಕೆಲವು ಉದಾಹರಣೆಗಳನ್ನು ಕಳೆದ ಸಂಚಿಕೆಯಲ್ಲಿ ನೀಡಲಾಗಿತ್ತು. ಈಗ ಇಂತಹ ಇನ್ನಷ್ಟು ಉದಾಹರಣೆಗಳನ್ನು ಈ ವಿಷಯವನ್ನು ಖಚಿತಪಡಿಸುವ ಸಲುವಾಗಿ ಚುಟುಕಾಗಿ ನೋಡೋಣ.

ಇವುಗಳಲ್ಲಿ ಕಣ್ಣಿಗೆ ರಾಚುವಂತಹ ಉದಾಹರಣೆ ಎಂದರೆ ನೆರೆಯ ಪುಟ್ಟ ಕ್ರಾಂತಿಕಾರಿ ದೇಶ ಕ್ಯೂಬಾದ ವಿರುದ್ಧ ಯುಎಸ್‍ಎ ನಡೆಸಿದ ನಿರಂತರ ಹುನ್ನಾರಗಳದ್ದು. ಕ್ಯೂಬಾ ದೇಶದಲ್ಲಿ ಹೆಚ್ಚುಕಡಿಮೆ ಯುಎಎಸ್‍ಎಯ ಯುನೈಟೆಡ್ ಫ್ರುಟ್ ಕಂಪೆನಿಯ ಆಡಳಿತವಿತ್ತು. ದೇಶದ ಬಹುತೇಕ ಜಮೀನು ಇಂತಹ ಕಂಪೆನಿಗಳ ವಶದಲ್ಲಿದ್ದು, ಜನರು ತಮ್ಮದೇ ನೆಲದಲ್ಲಿ ಗುಲಾಮರಂತೆ ಬದುಕುತ್ತಿದ್ದರು. ಹೆಸರಿಗೆ ಮಾತ್ರ ಫುಲ್ಜೆನ್ಸಿಯೊ ಬ್ಯಾಟಿಸ್ಟಾ ಎಂಬ ಕೈಗೊಂಬೆ ಸರಕಾರದ ಆಡಳಿತ. ಆಗ ಈ ಬಂಡವಾಳಶಾಹಿಗಳಿಗೆ ಪ್ರಜಾಪ್ರಭುತ್ವ, ಸಮಾನತೆ, ಮಾನವೀಯತೆ ಇತ್ಯಾದಿ ಮೌಲ್ಯಗಳು ನೆನಪಿಗೇ ಬಂದಿರಲಿಲ್ಲ! ಅವೆಲ್ಲವೂ ನೆನಪಿಗೆ ಬಂದುದು 1959ರಲ್ಲಿ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದ ಜನಪ್ರಿಯ ಕ್ರಾಂತಿ ಯಶಸ್ವಿಯಾಗಿ ಬ್ಯಾಟಿಸ್ಟಾ ದೇಶಬಿಟ್ಟು ಓಡಿಹೋದಾಗಲೇ!

ಚೆಗುವೆರಾ ಮತ್ತು ಕ್ಯಾಸ್ಟ್ರೊ

ತಕ್ಷಣ ಕಮ್ಯುನಿಸ್ಟ್ ಬೊಂಬಡಾ ಬಜಾಯಿಸಿದ ಯುಎಸ್‍ಎ ಕ್ಯೂಬಾದ ವಿರುದ್ಧ ದಿಗ್ಬಂಧನ ವಿಧಿಸಿತು. ಎರಡೇ ವರ್ಷಗಳಲ್ಲಿ, ಅಂದರೆ 1961ರಲ್ಲಿ ಬಾಡಿಗೆ ಸೈನಿಕರಿಗೆ ತರಬೇತಿ, ಶಸ್ತ್ರಾಸ್ತ್ರ ಕೊಟ್ಟು ಕ್ಯೂಬಾದ ಮೇಲೆ ದಾಳಿ ಮಾಡಿಸಿತು. ಪ್ಲಾಯಾ ಗಿರೋನ್ ಅಥವಾ ಬೇ ಆಫ್ ಪಿಗ್ಸ್ ಎಂದು ಕುಖ್ಯಾತವಾದ ಈ ಸಂಚಿನಲ್ಲಿ ದಯನೀಯವಾಗಿ ಮುಖಭಂಗ ಅನುಭವಿಸಿತು. ಆ ನಂತರವೂ ಸುಮ್ಮನಿರದ ಯುಎಸ್‍ಎ ತನ್ನ ಸಿಐಎ ಮತ್ತಿತರ ಗುಪ್ತಚರ ಸಂಸ್ಥೆಗಳ ಮೂಲಕ ಈಗ ಬಹಿರಂಗವಾಗಿರುವಂತೆ 638 ಬಾರಿ ಫಿಡೆಲ್ ಕ್ಯಾಸ್ಟ್ರೋ ಅವರ ಹತ್ಯೆಗೆ ವಿಫಲ ಯತ್ನ ನಡೆಸಿತು. ಇದಕ್ಕಾಗಿ ಅದು ತನ್ನ ದೇಶದ ಕುಖ್ಯಾತ ಇಟಾಲಿಯನ್ ಮಾಫಿಯಾಕ್ಕೂ ಗುತ್ತಿಗೆ ನೀಡಿತ್ತು ಎಂಬುದು ನಾಚಿಕೆಗೇಡು.

ನಂತರ ಬೊಲಿವಿಯಾದಲ್ಲಿ ಕ್ಯೂಬಾ ಮಾದರಿ ಕ್ರಾಂತಿ ನಡೆಸಲು ಯತ್ನಿಸಿ, ಸೆರೆಸಿಕ್ಕ ಅರ್ನೆಸ್ಟೋ ಚೆ ಗೆವಾರ ಅವರನ್ನು ಬೊಲಿವಿಯನ್ ಸರಕಾರದ ಮೂಲಕ ವಿಚಾರಣೆಗೆ ಒಳಪಡಿಸುವ ಬದಲು ಸಿಐಎ ಅವರನ್ನು ಇಟ್ಟಿದ್ದ ಹಳ್ಳಿ ಶಾಲೆಯ ಕೋಣೆಯಲ್ಲಿ ಗುಂಡುಹಾರಿಸಿ ಕೊಂದಿತು. ಸಾಕ್ಷಿಗಾಗಿ ಶವದ ಕೈಯನ್ನು ಕತ್ತರಿಸಿ ಸ್ವದೇಶಕ್ಕೆ ಸಾಗಿಸಿತು. ಅವರ ದೇಹವನ್ನು ಅಜ್ಞಾತ ಸ್ಥಳದಲ್ಲಿ ಗುಪ್ತವಾಗಿ ದಫನ ಮಾಡಲಾಯಿತು. ಇದು ಬಂಡವಾಳಶಾಹಿಗಳ ಪ್ರಜಾಪ್ರಭುತ್ವ!

ಇನ್ನು ಬಂಡವಾಳಶಾಹಿ ಮತ್ತು ಸಮಾಜವಾದಿ ತತ್ವಗಳ ಅನಿವಾರ್ಯ ತಿಕ್ಕಾಟದ ಫಲವಾಗಿ ಕೊರಿಯಾ, ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾ ಮುಂತಾದ ದೇಶಗಳಿರುವ ಇಂಡೋಚೀನಾ ಪ್ರದೇಶದಲ್ಲಿ 1955ರಲ್ಲಿ ಆರಂಭವಾದ ಯುದ್ಧದಲ್ಲಿ ಅನೇಕ ದೇಶಗಳು ಭಾಗವಹಿಸಿದವು. ಕೊನೆಗೆ ಯುಎಸ್‍ಎ ದಕ್ಷಿಣ ವಿಯೆಟ್ನಾಂನ ಸೈಗಾನ್‍ನಲ್ಲಿ ಕೈಗೊಂಬೆ ಸರಕಾರದ ಪರ ನಿಂತು ಕಮ್ಯುನಿಸ್ಟ್ ನೇತೃತ್ವದ ಉತ್ತರ ವಿಯೆಟ್ನಾಂ ಮೇಲೆ ಕ್ರೂರ ವೈಮಾನಿಕ ದಾಳಿ ನಡೆಸಿತು. ಲಕ್ಷಾಂತರ ನಾಗರಿಕರ ಸಹಿತ ಅಪಾರ ಸಾವು ನೋವುಗಳಿಗೆ ಈ ದಾಳಿಗಳು ಕಾರಣವಾದವು. ಕೊನೆಗೂ 1975ರಲ್ಲಿ ಯುಎಸ್‍ಎ ಅಲ್ಲಿನ ದೇಶಪ್ರೇಮಿಗಳ ಒಗ್ಗಟ್ಟಿನ ಪ್ರತಿರೋಧ ಎದುರಿಸಲಾಗದೇ ಅವಮಾನಕಾರಿಯಾಗಿ ಸೈಗಾನ್‍ನಿಂದ ಪಲಾಯನ ಮಾಡಿದ ವಿಷಯ ಬಹುತೇಕ ಓದುಗರಿಗೆ ಗೊತ್ತಿರಬಹುದು. ಇದು ವಿಯೆಟ್ನಾಂ ಏಕೀಕರಣಕ್ಕೆ ಕಾರಣವಾಯಿತು. ಬಂಡವಾಳಶಾಹಿಗೆ ಅಪಾಯ ಉಂಟಾದಾಗ ಪ್ರಪಂಚದ ಯಾವ ಮೂಲೆಯ ಪುಟ್ಟ ದೇಶಗಳ ವ್ಯವಹಾರದಲ್ಲಿ ಮೂಗುತೂರಿಸಿ ತನ್ನದೇ ಸೈನಿಕರನ್ನು ಬಲಿಕೊಡಲು ಅದು ಸಿದ್ಧ ಎಂದು ಈ ವಿದ್ಯಮಾನ ತೋರಿಸುತ್ತದೆ.

ತಮಗೆ ಅನುಕೂಲಕರವಾಗಿದ್ದರೆ, ಮಾದಕವಸ್ತು ದೊರೆಗಳನ್ನೇ ಚಿಕ್ಕ ದೇಶಗಳ ಸರ್ವಾಧಿಕಾರಿಗಳಾಗಿ ಪ್ರತಿಷ್ಟಾಪಿಸಲು ಮತ್ತು ಪೋಷಿಸಲು ಬಂಡವಾಳಶಾಹಿಗಳು ಹಿಂಜರಿಯುವುದಿಲ್ಲ ಎಂಬುದಕ್ಕೆ ಒಂದೇ ಒಂದು ಉದಾಹರಣೆಯನ್ನು ಇಲ್ಲಿ ಕೊಟ್ಟರೆ ಸಾಕು.

ಮಧ್ಯ ಅಮೇರಿಕಾದಲ್ಲಿರುವ ಪನಾಮಾ ದೇಶ ನೌಕಾಯಾನ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಬಹುದೊಡ್ಡ ಸಂಖ್ಯೆಯ ವಾಣಿಜ್ಯ ನೌಕೆಗಳು ಪನಾಮಾದಲ್ಲಿ ನೋಂದಣಿ ಹೊಂದಿ ಅದರ ಬಾವುಟದ ಅಡಿಯಲ್ಲಿ ಚಲಿಸುತ್ತವೆ. ಕಾರಣ- ಅಟ್ಲಾಂಟಿಕ್ ಮತ್ತು ಫೆಸಿಫಿಕ್ ಸಾಗರಗಳನ್ನು ಸಂಪರ್ಕಿಸುವ ಪನಾಮಾ ಕಾಲುವೆ. ಇದು ನೌಕಾಯಾತ್ರೆಯ ದೂರವನ್ನು ಸಾವಿರಾರು ಕಿ.ಮೀ. ಕಡಿಮೆಗೊಳಿಸುವುದರಿಂದ ವಾಣಿಜ್ಯಿಕವಾಗಿ ಮಹತ್ವದ್ದು. ಹಾಗಾಗಿ ಇಲ್ಲಿ ಯುಎಸ್‍ಎ ತನ್ನ ಕೈಗೊಂಬೆಗಳನ್ನೇ ಕೂರಿಸುತ್ತಾ ಬಂದಿತ್ತು.

ಅದಕ್ಕಾಗಿ ಸಿಐಎ ತನ್ನ ಏಜೆಂಟನಾಗಿ ಸೇನಾಧಿಕಾರಿಯಾಗಿದ್ದ ಮ್ಯಾನುಎಲ್ ಆಂಟೋನಿಯೋ ನೊರಿಗಾ ಮೊರೆನೋ ಎಂಬವನನ್ನು ಬೆಳೆಸಿತ್ತು. ಈತನೇ 1983ರಲ್ಲಿ ಸರ್ವಾಧಿಕಾರಿಯಾದ. ಕ್ಯೂಬಾ, ನಿಕರಾಗುವ ಮುಂತಾದ ದೇಶಗಳಲ್ಲಿ ಬೇಹುಗಾರಿಕೆ ರೂಪಿಸಿ ಕ್ರಾಂತಿ ವಿರೋಧಿಗಳು ಮತ್ತು ಸಿಐಎಯ ನಡುವೆ ಕೊಂಡಿಯಾಗಿದ್ದ ಈತ ಬೃಹತ್ ಪ್ರಮಾಣದಲ್ಲಿ ಮಾದಕವಸ್ತು ವ್ಯವಹಾರ ಜಾಲ ನಡೆಸುತ್ತಿದ್ದರೂ ಯುಎಸ್‍ಎ ಆಡಳಿತ ಸ್ವಹಿತಾಸಕ್ತಿ ಕಾರಣದಿಂದ ಕುರುಡಾಗಿ ಕುಳಿತಿತ್ತು. ಆದರೆ, ಈತ ಪನಾಮಾ ಕಾಲುವೆಯ ರಾಷ್ಟ್ರೀಕರಣದ ಮಾತಾಡಲು ಆರಂಭಿಸಿದಾಗ, ಬಂಡವಾಳಶಾಹಿಗಳಿಗೆ ಎಲ್ಲಾ ಆಸಕ್ತಿಗಳಿಗಿಂತ ತಮ್ಮ ಆಸಕ್ತಿಯೇ ದೊಡ್ಡದಾಗಿ 1989ರಲ್ಲಿ ಮಾದಕವಸ್ತು ವಿಷಯವನ್ನೇ ನೆಪ ಮಾಡಿಕೊಂಡು ಪನಾಮಾದ ಮೇಲೆ ಸೇನಾದಾಳಿ ಮಾಡಿ ನೊರಿಗಾನನ್ನು ಪದಚ್ಯುತಗೊಳಿಸಿತು. ಆತನನ್ನು ಪನಾಮಾದಲ್ಲಿ ವಿಚಾರಣೆ ನಡೆಸದೇ ಯುಎಸ್‍ಎಗೆ ಒಯ್ದು ಅಲ್ಲಿ ವಿಚಾರಣೆ ನಡೆಸಿ ಶಿಕ್ಷೆಯ ನಾಟಕವಾಡಿತು. ಅತ ಸೆರೆಯಲ್ಲಿ ಇದ್ದದ್ದು ಕಡಿಮೆ ಆತನನ್ನು ಅಡಗಿಸಿ ತನ್ನ ಕಣ್ಗಾವಲಲ್ಲೇ ಇರಿಸಿತ್ತು ಸಿಐಎ. ಆತ ಮಾತನಾಡಿ ತನ್ನ ಸಾವಿರಾರು ಸ್ಫೋಟಕ ಗುಟ್ಟುಗಳನ್ನು ಬಹಿರಂಗಪಡಿಸುವುದು ಅದಕ್ಕೆ ಬೇಕಿರಲಿಲ್ಲ!

ಇನ್ನು ಬಂಡವಾಳಶಾಹಿಗಳು ಬಹುರಾಷ್ಟ್ರೀಯ ಕಾರ್ಪೊರೇಷನ್‍ಗಳು ಅನಧಿಕೃತ ಸರಕಾರಗಳಂತೆ ವರ್ತಿಸಿ, ಚಿಕ್ಕ-ಮಧ್ಯಮ ದೇಶಗಳಲ್ಲಿ ಅಂತರ್ಯುದ್ಧ, ಸೇನಾಕ್ರಾಂತಿ, ಸಾಮೂಹಿಕ ಜನಾಂಗೀಯ ಹತ್ಯೆ ಇತ್ಯಾದಿಗಳನ್ನು ಮಾಡಿಸಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಹೇಗೆ ದೋಚುತ್ತಿವೆ ಎಂಬುದನ್ನು ನೋಡಬೇಕು. ಪ್ರಜಾಪ್ರಭುತ್ವದ, ಮಾನವೀಯ ಮೌಲ್ಯಗಳ ವಕ್ತಾರರು ಎಂದು ಹೇಳಿಕೊಳ್ಳುವ ಪಾಶ್ಚಾತ್ಯ ಶ್ರೀಮಂತ ರಾಷ್ಟ್ರಗಳು ಈ ಭೀಕರ ರಕ್ತಪಾತ, ಘೋರ ಪಾತಕಗಳಿಗೆ ಸಂಪೂರ್ಣವಾಗಿ ಕುರುಡಾಗಿವೆ ಮತ್ತು ಕಿವುಡಾಗಿವೆ.

ಒಂದು ಉದಾಹರಣೆಯಾಗಿ ವಜ್ರಗಳಿಂದ ಶ್ರೀಮಂತವಾಗಿರುವ ಸಿಯಾರಾ ಲಿಯೋನ್ ಎಂಬ ವಾಯವ್ಯ ಆಫ್ರಿಕಾದ ಪುಟ್ಟ ದೇಶದ ದುರಂತವನ್ನು ನೋಡಬಹುದು.

1991ರಲ್ಲಿ ಇಲ್ಲಿದ್ದ ಜೊಸೆಫ್ ಮೊಮೊಹ್ ಸರಕಾರವನ್ನು ರೆವಲ್ಯೂಷನರಿ ಯುನೈಟೆಡ್ ಫ್ರಂಟ್ ಬಂಡುಕೋರರು, ಚಾಲ್ರ್ಸ್ ಟೇಲರ್ ಎಂಬಾತನ ನ್ಯಾಷನಲ್ ಪೇಟ್ರಿಯಾಟಿಕ್ ಫ್ರಂಟ್ ಜೊತೆ ಸೇರಿಕೊಂಡು ಉರುಳಿಸಲು ಯತ್ನಿಸಿದಾಗ ಆರಂಭವಾದ ಅಂತರ್ಯುದ್ಧ 2002ರ ವರೆಗೆ ಮುಂದುವರಿದು ಈ ಪುಟ್ಟ ದೇಶದಲ್ಲಿ ಸಾವಿರಾರು ಜನರು ಸತ್ತರು. ಇದರಲ್ಲಿ ಯುಎಸ್‍ಎ ಅಲ್ಲದೇ ಭಾರತ ಸೇರಿದಂತೆ ಕಾಮನ್ವೆಲ್ತ್ ರಾಷ್ಟ್ರಗಳು, ದಕ್ಷಿಣ ಆಫ್ರಿಕಾದ ಬಾಡಿಗೆ ಸೈನಿಕರ ಪಡೆ ಸೇರಿದಂತೆ ಭಾಗವಹಿಸಿದವರೆಲ್ಲರ ಕಣ್ಣಿದ್ದದ್ದು ಅಲ್ಲಿ ಕಡುಬಡವರ ಒಳಿತಿನ ಮೇಲಲ್ಲ ಅಲ್ಲಿನ ವಜ್ರಗಳ ನಿಯಂತ್ರಣದ ಮೇಲೆ. ಕ್ರಾಂತಿಕಾರಿ, ದೇಶಪ್ರೇಮಿ ಇತ್ಯಾದಿ ಆಕರ್ಷಕ ಹೆಸರಿಟ್ಟುಕೊಂಡ ಬಂಡುಕೋರರ ಪಾಡೂ ಅದೇ.

ಇಂದಿಗೂ ಬಂಡುಕೋರರ ಹೆಸರಿನಲ್ಲಿ ಬಾಡಿಗೆ ಸೈನಿಕರು (ಮರ್ಸಿನರಿ), ಕ್ರಿಮಿನಲ್‍ಗಳ ಗ್ಯಾಂಗುಗಳು ಶಸ್ತ್ರಾಸ್ತ್ರಗಳ ಬಲದಿಂದ ಜನರನ್ನು ಗುಲಾಮರಂತೆ ದುಡಿಸಿ ಅವರ ಸಂಪತ್ತನ್ನು ದೋಚುತ್ತಿವೆ. ವಿರೋಧಿಸಿದವರನ್ನು ಬೀದಿನಾಯಿಗಳಂತೆ ಕೊಲ್ಲಲಾಗುತ್ತದೆ. ಇಲ್ಲವೇ ಕೈ, ಕಾಲು, ಮೂಗು, ಕಿವಿಗಳನ್ನು ಕತ್ತರಿಸಲಾಗುತ್ತಿದೆ. ಈ ಕುರಿತ ಸಾಕ್ಷ್ಯಚಿತ್ರಗಳನ್ನು ನೋಡಲೂ ಕಲ್ಲೆದೆ ಬೇಕು. ಇವೆಲ್ಲವುಗಳ ಹಿಂದಿರುವುದು ಬಹುರಾಷ್ಟ್ರೀಯ ವಜ್ರದ ಕಂಪನಿಗಳು. ಪ್ರಜಾಪ್ರಭುತ್ವದ ವಕ್ತಾರ ದೇಶಗಳು ನೋಡಿಯೂ ನೋಡದಂತೆ ಸುಮ್ಮನಿವೆ.

ಇದೇ ರೀತಿಯ ವಜ್ರ ಮತ್ತಿತರ ಖನಿಜ ಸಂಬಂಧಿ, ಕಾರ್ಪೊರೇಟ್ ಪ್ರೇರಿತ ಅಂತರ್ಯುದ್ಧಗಳು ಅಂಗೋಲ, ಐವರಿ ಕೋಸ್ಟ್, ಗಿನಿ, ಗಿನಿ ಬಿಸಾವ್, ಲೈಬೀರಿಯಾ ಮುಂತಾದ ಹಲವಾರು ದೇಶಗಳಲ್ಲಿ ನಡೆದಿವೆ.

ತನಗೆ ಲಾಭವಿರುವ ಕಡೆ ಪ್ರಜಾಪ್ರಭುತ್ವ- ಸರ್ವಾಧಿಕಾರ ಎಂಬ ಎರಡೂ ದಾಳಗಳನ್ನು ಉರುಳಿಸಿ, ಸಕ್ರಿಯ ದಾಳಿ ನಡೆಸಿ ತನಗೆ ಬೇಕಾದವರನ್ನು ಅಧಿಕಾರಕ್ಕೇರಿಸುವ ಬಂಡವಾಳಶಾಹಿ ದೇಶಗಳು, ಬಡದೇಶಗಳಲ್ಲಿ ಸರ್ವಾಧಿಕಾರಿಗಳಿದ್ದರೂ, ಜನಾಂಗೀಯ ಹತ್ಯೆಗಳು ನಡೆಯುತ್ತಿದ್ದರೂ ಕಣ್ಣುಮುಚ್ಚಿ ಸುಮ್ಮನಿರುತ್ತವೆ, ಅಥವಾ ವಿಶ್ವಸಂಸ್ಥೆಯಲ್ಲಿ ಮತಕ್ಕಾಗಿ ಅಂತವರಿಗೆ ಪರೋಕ್ಷವಾಗಿ ಬೆಂಬಲವನ್ನೂ ನೀಡುತ್ತವೆ. ಇಂತಹ ಕೆಲವು ಉದಾಹರಣೆಗಳನ್ನು ಮುಂದಿನ ಸಂಚಿಕೆಯಲ್ಲಿ ಪರಿಶೀಲಿಸಿ, ಸದ್ಯದ ಪರಿಸ್ಥಿತಿಯಲ್ಲಿ ಭಾರತದಂತಹ ದೇಶದಲ್ಲಿ ಇವೆಲ್ಲವುಗಳಿಂದ ನಾವು ಕಲಿಯಬೇಕಾದುದೇನೆಂಬುದನ್ನು ಯೋಚಿಸೋಣ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...