Homeಮುಖಪುಟಬಜೆಟ್ ರಾಜಕೀಯದಲ್ಲಿ ಸೋತ ಎಚ್‍ಡಿಕೆ

ಬಜೆಟ್ ರಾಜಕೀಯದಲ್ಲಿ ಸೋತ ಎಚ್‍ಡಿಕೆ

- Advertisement -
- Advertisement -

ಬಜೆಟ್ ವಿಚಾರದಲ್ಲಿ ತಮಗೆ ಮೊದಲ ತೊಡಕನ್ನು ನೀಡಿದ್ದ ಸಿದ್ದರಾಮಯ್ಯನವರು ಹಾಕಿದ ಕೆಲವು ತಪ್ಪು ಹೆಜ್ಜೆಗಳ ಜಾಡಿನಲ್ಲೇ ಕುಮಾರಸ್ವಾಮಿಯವರೂ ಹೊರಟಿದ್ದಾರೆಂಬುದಕ್ಕೆ ಅವರ ಚೊಚ್ಚಲ ಬಜೆಟ್ ಕೆಲವು ಸಾಕ್ಷ್ಯಗಳನ್ನು ಒದಗಿಸುತ್ತದೆ. ಹಾಗೆ ನೋಡಿದರೆ, ಅವರ ಚುನಾವಣಾ ಪೂರ್ವ ಭರವಸೆಗಳಲ್ಲಿ ಮುಖ್ಯವಾದ ಎರಡನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಟ್ಟೂ ಅದರ ಸರಿಯಾದ ಕ್ರೆಡಿಟ್ ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಒಂದೆಡೆ ಪ್ರಾದೇಶಿಕ ಪಕ್ಷಗಳು ಕೆಲವು ರಾಜ್ಯಗಳಲ್ಲಿ – ಮುಖ್ಯವಾಗಿ ದಕ್ಷಿಣದ ರಾಜ್ಯಗಳಲ್ಲಿ – ತೆಗೆದುಕೊಳ್ಳುತ್ತಿರುವ ಜನಪ್ರಿಯ ಕ್ರಮಗಳೂ ಸಾಧ್ಯವಾಗಿಲ್ಲ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಶಿಸ್ತಿನ ಸಮತೋಲನವೂ ಸಾಧ್ಯವಾಗಿಲ್ಲ. ಹಾಗಾಗಿಯೇ, ಹಲವು ಅತ್ಯುತ್ತಮ ಸಾಧನೆಗಳನ್ನು ಮಾಡಿಯೂ, ಅದನ್ನು ಸೂಕ್ತವಾಗಿ ಸಂಬಂಧಪಟ್ಟವರಿಗೆ ‘ಕಮ್ಯುನಿಕೇಟ್’ ಮಾಡಲು ವಿಫಲರಾದ ಸಿದ್ದರಾಮಯ್ಯನವರ ದಿಕ್ಕಿನಲ್ಲೇ ಎಚ್‍ಡಿಕೆ ಸಹಾ ಹೊರಟಿದ್ದಾರಾ ಎಂಬ ಪ್ರಶ್ನೆ ಹುಟ್ಟುತ್ತಿದೆ.
ರೈತರ ಸಾಲಮನ್ನಾ ಮತ್ತು 1 ಕೋಟಿ ಉದ್ಯೋಗ ಸೃಷ್ಟಿ ಇವೆರಡೂ ಜೆಡಿಎಸ್ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿದ್ದವು. ಇದರಾಚೆಗೆ ನೇರವಾಗಿ ಅಕೌಂಟಿಗೆ ಹಣ ತಲುಪಿಸುವ ಹಲವು ಅಪ್ರಾಯೋಗಿಕವಾದ ಭರವಸೆಗಳೂ ಅದರಲ್ಲಿದ್ದವು. ರೈತರ ಸಾಲ ಸಂಪೂರ್ಣ ಮನ್ನಾ ಸಹಾ ಅಪ್ರಾಯೋಗಿಕ ಎಂದು ಹೇಳಿದವರಿದ್ದರು. ಸಿದ್ದರಾಮಯ್ಯನವರು ಮಾಡಿದ 50,000 ರೂ.ಗಳವರೆಗಿನ ಸಹಕಾರಿ ಸಾಲಮನ್ನಾ ವಾಸ್ತವದಲ್ಲಿ ಅರ್ಹ ರೈತರನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ಕ್ರಮವಾಗಿತ್ತು. ಆದರೆ, ಅದರ ಲಾಭವನ್ನು ಕಾಂಗ್ರೆಸ್ ತೆಗೆದುಕೊಳ್ಳದೇ ಹೋಯಿತು. ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ‘ರಾಜ್ಯ ಸರ್ಕಾರವೊಂದು ಅಷ್ಟು ಸುಲಭಕ್ಕೆ ಈಡೇರಿಸಲಾಗದ ಪ್ರಮಾಣದ’ ಸಾಲಮನ್ನಾವನ್ನು ಇಟ್ಟುಕೊಂಡಿದ್ದೇ ತಪ್ಪಾಗಿತ್ತು. ಸಮ್ಮಿಶ್ರ ಸರ್ಕಾರವಾದ್ದರಿಂದ ಇದಕ್ಕೆ ಸಮಯ ಬೇಕು ಎಂದು ಹೇಳಿ ದಕ್ಕಿಸಿಕೊಳ್ಳಲಾಗದ ಸ್ಥಿತಿಗೆ ಬಿಜೆಪಿ ತಳ್ಳಲಾರಂಭಿಸಿತ್ತು. ತಾನು ಸಹಕಾರಿ ಸಾಲದ ಅರ್ಧ ಮನ್ನಾ ಮಾಡುತ್ತೇನೆ, ಕೇಂದ್ರದ ಕೈಲಿ ರಾಷ್ಟ್ರೀಕೃತ ಬ್ಯಾಂಕುಗಳ ಅರ್ಧ ಸಾಲಮನ್ನಾ ಮಾಡಿಸಿ ಎಂದು ಸಿದ್ದು ಸಹಾ ಬಿಜೆಪಿಗೆ ಹೇಳುತ್ತಿದ್ದರು. ಕೇಂದ್ರ ಅಂತಹ ಸಾಲಮನ್ನಾ ಮಾಡದಿದ್ದರೂ, ತಾನು ಮಾಡಿದ್ದುದನ್ನು ಮುಂದಿಟ್ಟು ಕೇಂದ್ರವನ್ನು ಪೇಚಿಗೆ ಸಿಲುಕಿಸುವ ಕೆಲಸ ಕಾಂಗ್ರೆಸ್ ಕೈಲಿ ಆಗಲಿಲ್ಲ. ಆ ಸಾಧ್ಯತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ಗಿತ್ತು. ಕೇಂದ್ರಕ್ಕೆ ನೀಡುವ ತೆರಿಗೆಯಲ್ಲಿ ಶೇ.40ರಷ್ಟನ್ನು ಮಾತ್ರ ವಾಪಸ್ಸು ಪಡೆಯುವ ಕರ್ನಾಟಕವು, ರಾಜಸ್ತಾನ ಬಿಟ್ಟರೆ ಅತೀ ಹೆಚ್ಚು ಒಣಪ್ರದೇಶವನ್ನು ಹೊಂದಿರುವ ಕರ್ನಾಟಕವು, ಅತ್ಯಂತ ಹೆಚ್ಚು ರೈತ ಆತ್ಮಹತ್ಯೆಗಳನ್ನು ಕಾಣುತ್ತಿರುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕವು ವಿಶೇಷ ಅನುದಾನಕ್ಕೆ ಅರ್ಹವೆಂದೂ ಸೂಕ್ತವಾದ ರೀತಿಯಲ್ಲಿ ಪ್ಯಾಕೇಜ್ ವಾದವನ್ನು ಮಂಡಿಸಬಹುದಿತ್ತು.
ಅದ್ಯಾವುದನ್ನೂ ಮಾಡದೇ, ಅರೆ ಬರೆ ವಾದಗಳನ್ನು ಮುಂದಿಟ್ಟು ಸಾಲಮನ್ನಾ ಘೋಷಣೆ ಮಾಡಲೇಬೇಕಾದ ಇಕ್ಕಟ್ಟಿಗೆ ಸಿಕ್ಕುತ್ತಾ ಹೋದರು. ನಂತರ ಅದಕ್ಕೆ ಬೇಕಾದ ಸಂಪನ್ಮೂಲ ಹೊಂದಿಸಲು ‘ಜನಪ್ರಿಯ’ವಾದ ಕ್ರಮಗಳಿಗೂ ಕೈಹಾಕಲಿಲ್ಲ. ವಾಸ್ತವದಲ್ಲಿ ಬೆಂಗಳೂರು ಸುತ್ತಲಿನ ಅಕ್ರಮ ಭೂ ಒತ್ತುವರಿಯ ಮೇಲೆ ವಿಧಿಸಬಹುದಾದ ದಂಡದ ಮೂಲಕ ಅನುದಾನ ಸಂಗ್ರಹಿಸುವ ಸಾಧ್ಯತೆಯ ಕುರಿತು ಸ್ವತಃ ಎಚ್‍ಡಿಕೆ ವಿರೋಧ ಪಕ್ಷದಲ್ಲಿದ್ದುಕೊಂಡು ಸದನದಲ್ಲಿ ವಾದ ಮಾಡಿದ್ದರು. ಅಂತಹ ಕ್ರಮಗಳಿಗೆ ಹೋಗುವ ಬದಲಿಗೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಪೆಟ್ರೋಲ್, ಡೀಸೆಲ್ ದರ, ವಿದ್ಯುತ್ ದರ ಮತ್ತು ಮೋಟಾರು ವಾಹನ ತೆರಿಗೆ ಹೆಚ್ಚಳದಂತಹ ಕ್ರಮಗಳಿಗೆ ಮುಂದಾದರು. ಒಂದೆಡೆ ಇದನ್ನು ಮಾಡಿ ಮಧ್ಯಮವರ್ಗದ ಸಿಟ್ಟನ್ನೂ ಎದುರಿಸಬೇಕಾಯಿತು; ಇನ್ನೊಂದೆಡೆ ಸಂಪೂರ್ಣ ಸಾಲಮನ್ನಾವನ್ನೂ ಮಾಡದೇ ರೈತರಿಗೂ ಸಮಾಧಾನವಾಗಲಿಲ್ಲ.
ಎಚ್‍ಡಿಕೆ ಬಜೆಟ್‍ನ ಇನ್ನೊಂದು ತಪ್ಪು ಬ್ರಾಹ್ಮಣ ಮಂಡಳಿ ಮತ್ತು ಶಂಕರ ಜಯಂತಿಯದ್ದು. ಇದರ ಹಿಂದಿರಬಹುದಾದ ಕಾರಣಗಳಲ್ಲಿ ಒಂದು, ಗೌಡರ ಕುಟುಂಬದ ದೈವಭಕ್ತಿಯ ಜೊತೆಜೊತೆಗೇ ಇರಬಹುದಾದ ಬ್ರಾಹ್ಮಣರ ಅನುಗ್ರಹ ಪಡೆಯುವ ಮೌಢ್ಯ. ಅಥವಾ ಮೇಲ್ಜಾತಿಗಳನ್ನು ತಾವು ಸಿದ್ದರಾಮಯ್ಯನವರ ಥರದಲ್ಲಿ ದೂರ ಮಾಡಿಕೊಳ್ಳುವುದಿಲ್ಲವೆಂಬ ಸೂಚನೆ ನೀಡುವ ಲೆಕ್ಕಾಚಾರ. ಬಜೆಟ್‍ನಲ್ಲಿ ಘೋಷಿಸಬೇಕಾದ ಯಾವ ತುರ್ತು ಇರದಿದ್ದರೂ, ಶಂಕರ ಜಯಂತಿಯ ಘೋಷಣೆ ಮಾಡಿದ್ದು ಬಹುಶಃ ಈ ಕಾರಣಕ್ಕೇ ಇರಬೇಕು. ಎರಡೂ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಲ್ಲದೇ ಬೇರೇನೂ ಅಲ್ಲ. ಶೃಂಗೇರಿ ದೇವರ ಮತ್ತು ಮಠದ ಭಕ್ತಿ ಇದ್ದರೆ, ಅದು ಗೌಡರ ಕುಟುಂಬದ ಖಾಸಗಿ ಆಚರಣೆಯಾಗಬೇಕಿತ್ತೇ ಹೊರತು ಸರ್ಕಾರದ್ದಲ್ಲ.
ತಾವು ಎಲ್ಲಾ ಜಾತಿಗಳ ಬಡವರ ಪರವಾಗಿಯೂ ಇದ್ದೇವೆಂದು ಹೇಳಲೇಬೇಕಿದ್ದರೆ, ಮೊದಲು ಮಾಡಬೇಕಿದ್ದದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ನೀಡುವುದು. ಸಿದ್ದರಾಮಯ್ಯನವರೇ ಕಡೆಯ ಬಜೆಟ್‍ನಲ್ಲಿ ಅದರ ಘೋಷಣೆ ಮಾಡಿದ್ದರು ಎಂಬ ಕಾರಣಕ್ಕೆ ಹೊರಗಿಟ್ಟರೋ ಏನೋ, ಇದುವರೆಗೂ ಅದರ ಬಗ್ಗೆ ಸಕಾರಾತ್ಮಕ ಪ್ರಕಟಣೆ ಹೊರಬಿದ್ದಿಲ್ಲ. ಬಡವರಾಗಿರುವ ಕಾರಣಕ್ಕೆ ಎಲ್ಲಾ ಜಾತಿಯ ಜನರಿಗೂ ಆರೋಗ್ಯ, ಶಿಕ್ಷಣ, ವಿದ್ಯಾರ್ಥಿಗಳಿಗೆ ಬಸ್‍ಪಾಸ್, ಊಟ ಇತ್ಯಾದಿಗಳನ್ನು ನೀಡಲು ಯಾರದ್ದೂ ವಿರೋಧವಿಲ್ಲ. ಶಾಲೆಗಳಲ್ಲಿ ಎಸ್‍ಸಿ, ಎಸ್‍ಟಿ ಮಕ್ಕಳಿಗೆಂದು ಇದ್ದ ಉಚಿತ ಪ್ರವಾಸದ ಸೌಲಭ್ಯವನ್ನು ಸಿದ್ದರಾಮಯ್ಯನವರು ಓಬಿಸಿ ಮಕ್ಕಳಿಗೆ ಮಾತ್ರ ವಿಸ್ತರಿಸಿದ್ದು ಅಷ್ಟೇನೂ ಉತ್ತಮ ಕ್ರಮವಾಗಿರಲಿಲ್ಲ. ಏಕೆಂದರೆ, ಇಂದು ಸರ್ಕಾರೀ ಶಾಲೆಗಳಿಗೆ ಹೋಗುತ್ತಿರುವವರೆಲ್ಲರೂ ಬಡವರೇ ಆಗಿರುವಾಗ ಅದನ್ನು ಎಲ್ಲಾ ಮಕ್ಕಳಿಗೂ ವಿಸ್ತರಿಸಬೇಕಿತ್ತು. ಅಂತಹ ಇನ್ನೂ ಹಲವು ಕ್ರಮಗಳನ್ನು ಎಚ್‍ಡಿಕೆ ಮುಂದಿಡಬಹುದಿತ್ತು. ಆದರೆ, ಜಾತಿಯ ಹೆಸರಿನಲ್ಲಿ ಯಾವುದೇ ಸೌಲಭ್ಯವನ್ನು ಯಾರಿಗೇ ಆದರೂ ವಿಶೇಷವಾಗಿ ನೀಡಬೇಕೆಂದರೆ, ಅದಕ್ಕೆ ಜಾತಿ ಶೋಷಣೆಯ ಕಾರಣವಲ್ಲದೇ ಇನ್ನಾವ ಹೆಸರಿನಲ್ಲೂ ನೀಡಬಾರದು ಮತ್ತು ಸಂವಿಧಾನದ ಪ್ರಕಾರ ನೀಡುವಂತಿಲ್ಲ.
ಇದಕ್ಕಿಂತ ತಪ್ಪಾದ ಇನ್ನೊಂದು ಘೋಷಣೆ ಶಾಲೆಗಳ ವಿಲೀನದ್ದು. ಕರ್ನಾಟಕದ ಸರ್ಕಾರೀ ಶಾಲೆಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಶಾಲೆಗಳನ್ನು ಒಂದೇ ಏಟಿಗೆ ಮುಚ್ಚಿ ಪಕ್ಕದ ಶಾಲೆಗಳ ಜೊತೆ ವಿಲೀನ ಮಾಡುತ್ತೇವೆಂದು ಬಜೆಟ್‍ನಲ್ಲಿ ಸೇರಿಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಿ ಅವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರ ಸರ್ಕಾರ ಕಷ್ಟಕ್ಕೆ ಸಿಕ್ಕಿಕೊಳ್ಳುವುದನ್ನು ಯಾರೂ ತಪ್ಪಿಸಲಾಗದು. ಇದು ಕಣ್ತಪ್ಪಿನಿಂದ ಆಗಿರುವುದು ಎಂದು ಎಚ್‍ಡಿಕೆ ಹೇಳಿರುವುದರ ಹಿನ್ನೆಲೆಯಲ್ಲಿ ಈ ರೀತಿ ಹೇಳಬಹುದೇ ಹೊರತು, ಸ್ವತಃ ಸರ್ಕಾರವೇ ಈ ರೀತಿ ಭಾವಿಸುತ್ತಿದೆ ಎಂದಾದಲ್ಲಿ, ಈ ಸರ್ಕಾರ ಆಗಲೇ ತಪ್ಪು ಹಾದಿ ಹಿಡಿದಾಗಿದೆ ಎಂದೇ ಹೇಳಬೇಕಾಗುತ್ತದೆ. ಇದುವರೆಗೆ ಯಾವ ಕಾರಣಕ್ಕಾಗಿ ಸರ್ಕಾರೀ ಶಾಲೆಗಳಿಗೆ ದಾಖಲಾತಿ ಕಡಿಮೆಯಾಗುತ್ತಿತ್ತೋ, ವಿಲೀನಗೊಂಡ ನಂತರ ಉಳಿದ ಶಾಲೆಗಳಲ್ಲೂ ಅದೇ ಕಾರಣಕ್ಕೆ ದಾಖಲಾತಿ ಕಡಿಮೆಯಾಗುತ್ತದೆ. ಹಾಗಾಗಿ ಕಾರಣವೇನು ಎಂಬುದನ್ನು ಮೊದಲು ಪತ್ತೆ ಹಚ್ಚಿ ಸರಿಪಡಿಸಬೇಕು. ಖಾಸಗಿ ಶಾಲೆಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿರುವ ಜನರ ಆದಾಯದ ಗಣನೀಯ ಭಾಗ ಆ ಬಾಬ್ತುಗಳಿಗೆ ಸೋರಿ ಹೋಗುತ್ತಿದ್ದು, ಅಂಥವರು ನಿಜಕ್ಕೂ ಅತ್ಯುತ್ತಮ ಸರ್ಕಾರೀ ವ್ಯವಸ್ಥೆಗೆ ಹಂಬಲಿಸುತ್ತಿದ್ದಾರೆಂಬುದು ‘ಜನರ ನಾಡಿಮಿಡಿತ ಬಲ್ಲ’ ಕುಮಾರಸ್ವಾಮಿಯವರಿಗೆ ಅರ್ಥವಾಗದ್ದೇನಲ್ಲ.
ಬೀದರ್, ಕೊಪ್ಪಳ, ಗದಗಗಳನ್ನೂ ಹೆಸರಿಸಿ ಕೆಲವು ಯೋಜನೆಗಳನ್ನು ಪ್ರಕಟಿಸಿರುವ ಈ ಬಜೆಟ್‍ನಲ್ಲಿ ‘ಜೆಡಿಎಸ್ ಜಿಲ್ಲೆ’ಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ವಾಸ್ತವ. ರೈತರ ಸಾಲಮನ್ನಾ ಮಾಡಿದರೆ, ‘ಒಕ್ಕಲಿಗರ ಸಾಲ ಮಾತ್ರ ಮನ್ನಾ’ ಎಂದು ಪ್ರಚಾರ ಮಾಡುವ ಬಿಜೆಪಿ ಮೀಡಿಯಾಗಳು ಇರುವ ಹೊತ್ತಿನಲ್ಲಿ, ಈ ತಪ್ಪು ಮಾಡಬಾರದಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಹಾಲು ಒಕ್ಕೂಟವು ಹಾಸನಕ್ಕಿಂತ ಲೀಟರ್‍ಗೆ 3-4 ರೂ ಕಡಿಮೆ ಹಣವನ್ನು ಹಾಲು ಉತ್ಪಾದಕರಿಗೆ ನೀಡುತ್ತಿದೆ ಎಂದು ಪ್ರತಿಭಟನೆ ನಡೆಯುವ ಹೊತ್ತಿನಲ್ಲೇ, ಹಾಸನ ಒಕ್ಕೂಟಕ್ಕೆ ಮಾತ್ರ ಮೆಗಾಡೈರಿ ನಿರ್ಮಿಸಲು 50 ಕೋಟಿ ನೀಡುವುದು ಏನನ್ನು ತೋರಿಸುತ್ತದೆ?
ಚೀನಾದೊಂದಿಗೆ ಸ್ಪರ್ಧೆಯೂ ಸೇರಿದಂತೆ, ಉದ್ಯೋಗ ಸೃಷ್ಟಿಯ ಕೆಲವು ಉತ್ತಮ ಕ್ರಮಗಳನ್ನು ಎಚ್‍ಡಿಕೆ ಘೋಷಿಸಿದ್ದಾರೆ. ಅವರ 1 ಕೋಟಿ ಉದ್ಯೋಗ ಸೃಷ್ಟಿಸುವ ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಇದು ಪೂರ್ಣ ಸಾಕಾಗದ, ಆದರೆ ಪೂರಕವಾದ ಹೆಜ್ಜೆ. ಈ ಉದ್ಯೋಗ ಸೃಷ್ಟಿಯನ್ನು ಪರಿಣಾಮಕಾರಿಯಾಗಿ ಸಾಧಿಸುವ ಉದ್ಯೋಗ ಆಯೋಗದಂತಹ ಒಂದು ಯಂತ್ರಾಂಗದ ಘೋಷಣೆ ಮಾಡಿದ್ದರೆ, ಇನ್ನೂ ಹೆಚ್ಚಿನ ಭರವಸೆ ಬರುತ್ತಿತ್ತು. ಅಧಿವೇಶನ ನಡೆಯುತ್ತಿರುವಾಗಲೇ ಬಿಸಿಎಂ ಹಾಸ್ಟೆಲ್ ಗುತ್ತಿಗೆ ನೌಕರರಿಗೆ ಭದ್ರತೆ ಕೊಡುವ ತೀರ್ಮಾನವನ್ನು ಎಚ್‍ಡಿಕೆ ಮತ್ತು ಪ್ರಿಯಾಂಕ ಖರ್ಗೆ ಮಾಡಿದರು. ಎಲ್ಲಾ ಬಗೆಯ ಗುತ್ತಿಗೆ ನೌಕರರು ಮತ್ತು ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಇಂತಹ ಕೆಲಸದ ಭದ್ರತೆ ವಿಸ್ತರಿಸುವ ತೀರ್ಮಾನವನ್ನು ಕುಮಾರಸ್ವಾಮಿಯವರು ಘೋಷಿಸಬಹುದಿತ್ತು.
ಜನಪ್ರಿಯವೂ, ಜನಸಾಮಾನ್ಯರ ಆರ್ಥಿಕತೆಯನ್ನು ಮತ್ತು ಆ ಮೂಲಕ ರಾಜ್ಯದ ಆರ್ಥಿಕತೆಯನ್ನೂ, ತಮ್ಮ ರಾಜಕೀಯ ಭವಿಷ್ಯವನ್ನೂ ಬಲಗೊಳಿಸುವ ಕ್ರಮಗಳು ಯಾವುವು ಎಂಬುದನ್ನು ಅರಿಯುವುದು, ಅಂತಹ ಕ್ರಮಗಳನ್ನು ದಿಟ್ಟವಾಗಿ ಕೈಗೊಂಡು, ಅದನ್ನು ಸೂಕ್ತವಾಗಿ ಜನರಿಗೆ ತಲುಪಿಸುವುದೂ ಆಗಬೇಕಿದೆ. ಇದರಲ್ಲಿ ಕೆಲಭಾಗಗಳನ್ನು ಮಾತ್ರ ಸಮರ್ಥವಾಗಿ ಮಾಡಿ, ಕೆಲವನ್ನು ಮಾಡದೇ, ಜನರಿಗೂ ತಲುಪಿಸದೇ ಹೋದದ್ದು ಸಿದ್ದರಾಮಯ್ಯನವರ ವೈಫಲ್ಯ. ಕುಮಾರಸ್ವಾಮಿಯವರು ಬಜೆಟ್ ಮಂಡಿಸುವ ಮುನ್ನ ಸಿದ್ದರಾಮಯ್ಯನವರಿಂದ ಕಲಿಯಬೇಕಾದ್ದೂ ಇತ್ತು; ಕಲಿಯಬಾರದ್ದೂ ಇತ್ತು. ಆದರೆ, ಅವರು ಕಲಿಯಬಾರದ್ದನ್ನೇ ಕಲಿಯುವ ದಿಕ್ಕಿನಲ್ಲಿ ನಡೆಯುತ್ತಿದ್ದಂತಿದೆ. ಇದನ್ನು ಬದಲಿಸಿಕೊಂಡು ಸರಿಯಾದ ದಿಕ್ಕಿನಲ್ಲಿ ಹೋಗುವುದು ಮಾತ್ರ ಸಮ್ಮಿಶ್ರ ಸರ್ಕಾರಕ್ಕೂ ಒಳ್ಳೆಯದು ಮಾಡುತ್ತದೆ; ರಾಜ್ಯಕ್ಕೂ ಒಳಿತಾಗುತ್ತದೆ.

– ನೀಲಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...