Homeಅಂಕಣಗಳುಭಾರತದಲ್ಲಿ ಮಾರ್ಕ್ಸ್ ವಾದ : ಸ್ವಾತಂತ್ರ್ಯ ಚಳವಳಿಯ ಸಂದರ್ಭ

ಭಾರತದಲ್ಲಿ ಮಾರ್ಕ್ಸ್ ವಾದ : ಸ್ವಾತಂತ್ರ್ಯ ಚಳವಳಿಯ ಸಂದರ್ಭ

- Advertisement -
ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಈ ಹೊಸ ಬಾಳಿನ ಗೀತೆ, ಕುವೆಂಪುರವರಿಂದ ಅತ್ಯಂತ ಸರಳವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸಲ್ಪಟ್ಟ ಚಿಂತನೆ ಮತ್ತು ಅದನ್ನು ಸಾಧಿಸಲು ಕ್ರಿಯಾ ಸರಣಿಗಳೇ ಭಾರತಕ್ಕೆ ಮಾಕ್ರ್ಸ್‍ವಾದ ನೀಡಿದ ಅಪ್ರತಿಮ ಕೊಡುಗೆ.
ಕರ್ನಾಟಕದಲ್ಲಿ ಹೇಗೋ ಹಾಗೆಯೇ ಭಾರತದಲ್ಲಿ ಕೂಡಾ ಮಾಕ್ರ್ಸ್‍ವಾದವನ್ನು ಪರಿಚಯಿಸಿದ್ದು ಸಾಹಿತಿಗಳು ಬರಹಗಾರರು. 19ನೇ ಶತಮಾನದ ಕೊನೆ ಮತ್ತು ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಕವಿಗಳಾದ ರವೀಂದ್ರನಾಥ ಟ್ಯಾಗೋರರು, ಕಾಜಿ ನಜರುಲ್ ಇಸ್ಲಾಂ, ಕಾದಂಬರಿಕಾರರಾದ ಬಂಕಿಮ್ ಚಂದ್ರ ಚಟರ್ಜಿ, ಕತೆಗಾರರಾದ ಪ್ರೇಮಚಂದ್ ಮಾಕ್ರ್ಸ್‍ವಾದ ಮತ್ತು ಸಮಾಜವಾದದ ಬಗ್ಗೆ ಲೇಖನಗಳನ್ನು ಬರೆದರು. ಕ್ರಾಂತಿಕಾರರಾಗಿದ್ದ ಅರಬಿಂದೋ, ಲಾಲಾ ಹರದಯಾಲ್, ಸೋಹನ್ ಸಿಂಗ್ ಜೋಶ್ (ಗದರ್ ಎಂಬ ಕ್ರಾಂತಿಕಾರಿ ಪಕ್ಷದ ನಾಯಕರು) ಸ್ವಾತಂತ್ರ್ಯ ಹೋರಾಟಗಾರರಾದ ಬಿಪಿನ್ ಚಂದ್ರಪಾಲ್, ಲಾಲಾ ಲಜಪತರಾಯ್ ತಮ್ಮ ಭಾಷಣಗಳಲ್ಲಿ ಸೋವಿಯತ್ ಕ್ರಾಂತಿಯ ಪ್ರಸ್ತಾಪ ಮಾಡಿದರು. ಕಲಕತ್ತಾ, ಪೂನಾ, ಲಾಹೋರಿನ ಪತ್ರಿಕೆಗಳಲ್ಲಿ ಈ ಕುರಿತು ಕೆಲ ಲೇಖನಗಳು ಪ್ರಕಟವಾದವು. ಈ ವಿಚಾರಗಳು ಜನರನ್ನು ಸೆಳೆಯುತ್ತಿರುವದನ್ನು ಕಂಡು ಬೆದರಿದ ಬ್ರಿಟಿಷ್ ಆಳರಸರು ಅದಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ನಿಷೇಧಿಸಿದರು. ಇದರಿಂದ ಈ ವಿಚಾರಗಳ ಪ್ರಸರಣಕ್ಕೆ, ಅಧ್ಯಯನಕ್ಕೆ ಭಾರತದ ಕ್ರಾಂತಿಕಾರಿ ಚಳವಳಿಯ ಬೆಳವಣಿಗೆಗೆ ದೊಡ್ಡ ತೊಡಕುಂಟಾಯಿತು.
ಮಾಕ್ರ್ಸ್‍ವಾದಿ ವಿಚಾರಗಳು ಹಲವು ರೀತಿಯಲ್ಲಿ ಭಾರತವನ್ನು ಪ್ರಭಾವಿಸಿದವು. ಒಂದು ಕಡೆ ಅದರ ಸಾಮಾಜಿಕ ವಿಶ್ಲೇಷಣಾ ವಿಧಾನ, ಸಮಗ್ರತೆ, ವೈಜ್ಞಾನಿಕತೆ ಹಲವು ರಂಗಗಳ ಕ್ರಿಯಾಶೀಲರನ್ನು ಅದರ ಚಿಂತನಾ ವಿಧಾನವನ್ನು ಅನುಸರಿಸುವಂತೆ ಮಾಡಿತ್ತು. ಇದನ್ನು ಆಧರಿಸಿದ ಕಮ್ಯೂನಿಸ್ಟ್ ಪಕ್ಷದ ಚಳವಳಿ ಮತ್ತೊಂದು ಕಡೆ ಭಾರತದ ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳಲ್ಲಿ ಮಹತ್ವದ ಪಾತ್ರ ವಹಿಸಿತು.
ಭಗತ್ ಸಿಂಗ್ ಮೊದಲಾದ ಕ್ರಾಂತಿಕಾರಿಗಳು ಮಾಕ್ರ್ಸ್‍ವಾದದ ಪ್ರಭಾವದಲ್ಲಿ ಸಮಾಜವಾದಿ ಗಣರಾಜ್ಯವನ್ನು ಗುರಿಯಾಗಿರಿಸಿಕೊಂಡರು. ಗದರ್ ಕ್ರಾಂತಿಕಾರಿ ಪಕ್ಷದ ನಾಯಕರು, ಜುಗಾಂತರ್, ಅನುಶೀಲನ್ ಎಂಬ ಬಂಗಾಲಿ ಹಾಗೂ ದೇಶಾದ್ಯಂತ ಚದುರಿದ್ದ ಗುಂಪುಗಳ ಮತ್ತು ಕ್ರಾಂತಿಕಾರಿಗಳು ಮಾಕ್ರ್ಸ್‍ವಾದಕ್ಕೆ ಒಲಿದು ಕಮ್ಯೂನಿಸ್ಟ್ ಪಕ್ಷ ಸೇರಿದರು.
 ಕಾಂಗ್ರೆಸ್‍ನ ಒಳಗಡೆಯೇ ಜಯಪ್ರಕಾಶ ನಾರಾಯಣ್‍ರವರ ಸಂಚಾಲಕತ್ವದಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷ ಆರಂಭವಾಯಿತು. ಕಾಂಗ್ರೆಸ್ಸಿನ ಒಂದು ವಿಭಾಗದ ಮೇಲೆ ಮಾಕ್ರ್ಸ್‍ವಾದದ ವಿಚಾರಗಳು ಪ್ರಭಾವ ಬೀರಿದವು. ಪಾಳೆಯಗಾರಿ ವ್ಯವಸ್ಥೆಯ ವಿಚಾರಗಳನ್ನು, ಹಿಂದುತ್ವದ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದ ಬಲಪಂಥೀಯರ ವಿರುದ್ಧ ಕಾಂಗ್ರೆಸ್‍ನಲ್ಲಿ ನೆಹರೂ, ನೇತಾಜಿ ನೇತೃತ್ವದ ಎಡಪಂಥೀಯ ಪ್ರಜಾಪ್ರಭುತ್ವವಾದಿ ರಾಜಕಾರಣವನ್ನು ಬಲಪಡಿಸಿತು. ಸ್ವಾತಂತ್ರ್ಯಾನಂತರದ ಭಾರತದ ಸ್ವರೂಪವನ್ನು ಸೆಕ್ಯುಲರ್ ಪ್ರಜಾಪ್ರಭುತ್ವವಾಗಿ ರೂಪಿಸುವಲ್ಲಿ ಈ ಪ್ರಭಾವ ಗಣನೀಯ ಪಾತ್ರ ವಹಿಸಿತು.
   ಬಾಬಾಸಾಹೇಬ್ ಅಂಬೇಡ್ಕರ್‍ರವರಿಗೆ ಮಾಕ್ರ್ಸ್‍ವಾದದ ಹಲವು ವಿಚಾರಗಳ ಬಗ್ಗೆ ಮತ್ತು ಕಮ್ಯೂನಿಸ್ಟ್ ಪಕ್ಷದ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಕೂಡಾ ಮಾಕ್ರ್ಸ್‍ವಾದದ ಮತ್ತು ಸೋವಿಯತ್ ಒಕ್ಕೂಟದ ಅನುಭವದ ಆಧಾರದ ಮೇಲೆ ಪ್ರಭುತ್ವ ಸಮಾಜವಾದದ ಪರಿಕಲ್ಪನೆಯನ್ನು ರೂಪಿಸಿ ಸಂವಿಧಾನ ಸಭೆಯ ಮುಂದಿಟ್ಟರು. ಜಾತಿ ವ್ಯವಸ್ಥೆ ಮೊದಲಾದ ಸಾಮಾಜಿಕ ವಿಷಯಗಳ ವಿಶ್ಲೇಷಣೆಗಳ ಕೆಲ ಅಂಶಗಳಲ್ಲಿಯೂ ಮಾಕ್ರ್ಸ್‍ವಾದದ ವಿಧಾನದ ಅಳವಡಿಕೆಯನ್ನು ಕಾಣಬಹುದು.
ಈ ಲೇಖನದ ಆರಂಭದಲ್ಲಿ ಹೇಳಿರುವಂತೆ ಮಾಕ್ರ್ಸ್‍ವಾದ ಸಾಹಿತ್ಯ ಮತ್ತು ಸಾಂಸ್ಕøತಿಕ ರಂಗದಲ್ಲಿ ಗಣನೀಯ ಪ್ರಭಾವ ಬೀರಿತು. ಮೂವತ್ತರ ದಶಕದಲ್ಲಿ ಆರಂಭಗೊಂಡ ಪ್ರಗತಿಶೀಲ ಸಾಹಿತ್ಯದ ಚಳವಳಿ ಪ್ರಸಿದ್ಧ ಹಿಂದಿ ಕತೆಗಾರ ಪ್ರೇಮಚಂದ್‍ರವರ ನೇತೃತ್ವದಲ್ಲಿ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಸಾಹಿತ್ಯದ ಮೇಲೆ ಪ್ರಭಾವ ಬೀರಿತು. ಇಂಡಿಯನ್ ಪೀಪಲ್ಸ್ ಥಿಯೇಟರ್ (ಇಪ್ಟಾ) ಸಂಸ್ಥೆಯ ಮೂಲಕ ರಂಗಭೂಮಿ, ಸಂಗೀತಗಳ ಮೇಲೆ, ಸಿನಿಮಾರಂಗದ ಮೇಲೆ ಕೂಡಾ ಪ್ರಭಾವ ಬೀರಲಾರಂಭಿಸಿತು. ಉನ್ನತ ಶಿಕ್ಷಣದಲ್ಲಿ ಇತಿಹಾಸ, ಸಾಮಾಜಿಕ ವಿಜ್ಞಾನಗಳ ಸಂಶೋಧನೆಯಲ್ಲೂ ಕೂಡಾ ಹೊಸ ಕಣ್ಣೋಟಗಳಿಗೆ ಕಾರಣವಾಯಿತು. ಈ ನಿಟ್ಟಿನಲ್ಲಿ ಪಂಡಿತ ರಾಹುಲ್ ಸಾಂಕೃತ್ಯಾಯನ, ಧರ್ಮಾನಂದ್ ಕೊಸಾಂಬಿ ಮೊದಲಾದವರನ್ನು ಇಲ್ಲಿ ನೆನೆಯಬಹುದು.
ಕಮ್ಯೂನಿಸ್ಟ್ ಪಕ್ಷ ಮತ್ತು ರೈತ, ಕಾರ್ಮಿಕ ಚಳುವಳಿಗಳ ಬೆಳವಣಿಗೆ
ಕಮ್ಯೂನಿಸ್ಟ್ ಪಕ್ಷ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಮಹತ್ವದ ಕೊಡುಗೆ ಎಂದರೆ 1920 ರಲ್ಲಿ ತನ್ನ ಹುಟ್ಟಿನೊಂದಿಗೇ ಎತ್ತಿದ ಪ್ರಶ್ನೆ ‘ಸ್ವಾತಂತ್ರ್ಯ ಯಾರಿಗಾಗಿ, ಯಾಕಾಗಿ, ಹೇಗೆ?’ ಮತ್ತು ಸಂಪೂರ್ಣ ಸ್ವಾತಂತ್ರ್ಯದ ಕಲ್ಪನೆ. ಸ್ವಾತಂತ್ರ್ಯಾನಂತರ ಭಾರತವನ್ನು ಆಳಿದ ಜನರು ಹೇರಿದ ಸ್ವಾತಂತ್ರ್ಯ ಹೋರಾಟದ ಸಂಕಥನಗಳು ಈ ಅಂಶವನ್ನು ಜನರಿಂದ ಮರೆಮಾಚಿದೆ. 1921ರಲ್ಲಿ ಕಾಂಗ್ರೆಸ್ ಪಕ್ಷ  ಬ್ರಿಟಿಷರ ಅಧೀನದಲ್ಲಿಯೇ ದೇಶದ ಒಳಾಡಳಿತದಲ್ಲಿ ಭಾಗವಹಿಸುವುದು ಎಂಬ ಸೀಮಿತ  ಡೊಮಿನಿಯನ್ ಕಲ್ಪನೆಯಲ್ಲಿ ಇನ್ನೂ ಮುಳುಗಿರುವಾಗಲೇ, ಕಮ್ಯೂನಿಸ್ಟ್ ಪಕ್ಷ ಮೊತ್ತ ಮೊದಲು ದೇಶದ ಮುಂದೆ `ಸಾರ್ವತ್ರಿಕ ಮತದಾನ ಆಧಾರಿತ ಸೆಕ್ಯುಲರ್ ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂಬ ಪರಿಕಲ್ಪನೆಯನ್ನು ತೀವ್ರವಾಗಿ ಮಂಡಿಸಿತು.  ಈ ಗಣರಾಜ್ಯದ ಆಧಾರಪೂರ್ವಕವಾದ ಅಂಶಗಳನ್ನೂ ಜನತೆಯ ಮುಂದಿರಿಸಿತು.
1. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಆರ್ಥಿಕ ಶೋಷಣೆ ಮತ್ತು ರಾಜಕೀಯ ದಬ್ಬಾಳಿಕೆಯಿಂದ ಮುಕ್ತವಾಗಿ ಪೂರ್ಣ ಸ್ವಾತಂತ್ರ್ಯ ಪಡೆಯಬೇಕು.
2. ಜೊತೆ ಜೊತೆಗೇ ರೈತರ ಬದುಕನ್ನು ಹಿಂಡುತ್ತಿದ್ದ ಮತ್ತು ಬ್ರಿಟಿಷ್ ಆಡಳಿತದ ಊರುಗೋಲಾಗಿದ್ದ ಜಹಗೀರುದಾರರು, ಜಮೀನುದಾರರು ಮತ್ತಿತರರ ಭೂಮಾಲೀಕತ್ವ ಪೂರ್ತಿ ರದ್ದು ಮಾಡಬೇಕು. ಉಳುವವನೇ ಹೊಲದೊಡೆಯನಾಗಬೇಕು. ರೈತರನ್ನು ಬಡ್ಡಿ ಸಾಹುಕಾರರ ಸುಲಿಗೆಯಿಂದ ಮುಕ್ತರನ್ನಾಗಿಸಬೇಕು.
3. ಎಲ್ಲಾ ಅಪ್ರತ್ಯಕ್ಷ ತೆರಿಗೆಗಳ ರದ್ದು. ಕೇವಲ ಆದಾಯದ ಮೇಲಿನ ತೆರಿಗೆ ಮಾತ್ರ.
4. ರೈಲ್ವೆ, ಅಂಚೆ ಮೊದಲಾದ ಮೂಲಸೌಕರ್ಯ ಮತ್ತು ಮೂಲಭೂತ ಕೈಗಾರಿಕೆಗಳ ರಾಷ್ಟ್ರೀಕರಣ, ಅವುಗಳನ್ನು ನಿರ್ವಹಿಸಲು ಕಾರ್ಮಿಕ ಮಂಡಳಿಗಳು.
5. ಕನಿಷ್ಠ ಕೂಲಿ, ನಿರುದ್ಯೋಗ ವಿಮೆ, ಮುಷ್ಕರದ ಹಕ್ಕು, ಕಾರ್ಮಿಕರಿಗೆ ಹಾಗೂ ಜನರಿಗೆ ಕೈಗಾರಿಕೆಗಳ ಲಾಭದ ಹಂಚಿಕೆ.
6. ಎಲ್ಲರಿಗೂ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ. ಪ್ರೌಢ, ತಾಂತ್ರಿಕ ಹಾಗೂ ಔದ್ಯೋಗಿಕ ಶಿಕ್ಷಣ.
7. ಜಾತಿ ವ್ಯವಸ್ಥೆ ಮತ್ತು ಜಾತಿ ಅಸಮಾನತೆಯ ಎಲ್ಲ ರೂಪಗಳ (ಸಾಮಾಜಿಕ, ಸಾಂಸ್ಕøತಿಕ ಇತ್ಯಾದಿ) ವಿರುದ್ಧ ಹೋರಾಟ. ಎಲ್ಲ ಪರಯ್ಯಾ ಜನರ ಮತ್ತು ಶ್ರಮಿಕರ ಸಂಪೂರ್ಣ ಮತ್ತು ಶಾಶ್ವತ ಸಮಾನತೆ. ಅದಕ್ಕಾಗಿ ಎಲ್ಲಾ ಜಾತಿ ಮತ್ತು ವರ್ಗ ಸ್ಥಾನ ಸೌಲಭ್ಯಗಳ ರದ್ದು, ಸಾಮಾಜಿಕ ಸಮಾನತೆಯ ಕಾನೂನು. ಸಮಾಜದ ಪೂರ್ಣ ಪ್ರಜಾಪ್ರಭುತ್ವೀಕರಣ
8. ಮಹಿಳೆಯರಿಗೆ ಪೂರ್ಣ ಸಮಾನತೆಯ ಸಾಮಾಜಿಕ, ಆರ್ಥಿಕ, ಸಾಮಾಜಿಕ ಹಕ್ಕುಗಳು.
9. ಅಲ್ಪಸಂಖ್ಯಾತರ ಹಕ್ಕುಗಳ ಖಾತರಿ.
`ರಾಷ್ಟ್ರ ವಿಮೋಚನೆ ಮತ್ತು ಪುನರುಜ್ಜೀವನ’ ಎಂಬ ಹೆಸರಿನಲ್ಲಿ ಈ  ಕಾರ್ಯಕ್ರಮಗಳನ್ನು ಕಾಂಗ್ರೆಸ್‍ನ 1921, 22, 24, 26ರ  ಮಹಾಧಿವೇಶನಗಳ ಸಮಯದಲ್ಲಿ ದೇಶದ ಮುಂದೆ ಇಟ್ಟಿತು. ಇಂದು ಭಾರತ ಪ್ರಜಾಸತ್ತಾತ್ಮಕ ಸೆಕ್ಯುಲರ್ ಗಣರಾಜ್ಯವಾಗಿದೆ. ಅದರ ಉಳಿದೆಲ್ಲ ಅಂಶಗಳು ಇಂದಿಗೂ ಕಾರ್ಯಗತವಾಗಿಲ್ಲ. ಆದುದರಿಂದಲೇ ಇಂದೂ ಕೂಡಾ ಭಾರತದ ಜನತೆಗೆ ನೈಜ ಸ್ವಾತಂತ್ರ್ಯ, ಜಾತಿ ವ್ಯವಸ್ಥೆಯ ರದ್ಧತಿಯಿಂದ ಲಭ್ಯವಾಗುವ ಸಮಾನತೆ, ದುಡಿಯುವವರ ಕೈಗೆ ಆಡಳಿತ , ತೆರಿಗೆಗಳ ಹೊರೆಯಿಂದ ಮುಕ್ತಿ, ಉತ್ತಮ ಬದುಕು ಲಭ್ಯವಾಗಿಲ್ಲ.
ಕಮ್ಯೂನಿಸ್ಟ್ ಪಕ್ಷ 1920ರಲ್ಲಿ ಹುಟ್ಟು ಪಡೆದರೂ ಅದರ ಮೇಲೆ ನಿರಂತರವಾದ ನಿಷೇಧವನ್ನು ಹೇರಲಾಗಿತ್ತು. 1920, 25 ಮತ್ತು 29ರಲ್ಲಿ ಮೂರು ಪಿತೂರಿ ಮೊಕದ್ದಮೆಗಳ ಮೂಲಕ ಹಲವಾರು ವರ್ಷ ಅದರ ನಾಯಕರನ್ನು ಮಾಕ್ರ್ಸ್‍ವಾದದ ವಿಚಾರಗಳನ್ನು ಪಸರಿಸದಂತೆ ಹಾಗೂ ತಮ್ಮ ಈ ಕಾರ್ಯಕ್ರಮಕ್ಕಾಗಿ ಹೋರಾಟ ಮಾಡಲಾಗದಂತೆ ತಡೆಯೊಡ್ಡಲಾಗಿತ್ತು. ಕೊನೆಯ ಲಾಹೋರ್ ಪಿತೂರಿ ಮೊಕದ್ದಮೆಯನ್ನೇ ಬಳಸಿಕೊಂಡು ಈ ಮೇಲಿನ ಕಾರ್ಯಕ್ರಮವನ್ನು ಕೋರ್ಟ್ ಮೂಲಕವೇ ಜನರ ಮುಂದಿಟ್ಟರು. ನಾಲ್ಕು ತಿಂಗಳುಗಳ ಕಾಲ ನೀಡಿದ 400 ಪುಟಗಳ ಹೇಳಿಕೆ ಅಂದಿನ ಭಾರತದ ಬಗ್ಗೆ ಕಮ್ಯೂನಿಸ್ಟ್ ವಿಶ್ಲೇಷಣೆಯನ್ನು ಮಂಡಿಸಿತು. ಇದು ದೇಶದ ಜನರ ಗಮನ ಸೆಳೆಯಿತು.
 ಈ ಮಿತಿಗಳ ನಡುವೆಯೇ ಭಾರತದ ದುಡಿಯುವ ಜನರ ಮುಖ್ಯ ವಿಭಾಗಗಳಾದ ರೈತಾಪಿ ಮತ್ತು ಕಾರ್ಮಿಕ ವರ್ಗಗಳ ಸ್ವತಂತ್ರ ರಾಜಕೀಯ ಅಸ್ತಿತ್ವವನ್ನು ಸ್ಥಾಪಿಸಲು ದೇಶದ ಹಲವು ರಾಜ್ಯಗಳಲ್ಲಿ ‘ಕಾರ್ಮಿಕರ ಮತ್ತು ರೈತರ ಪಕ್ಷ‘ಗಳನ್ನು ಸ್ಥಾಪಿಸಿತು. ದೇಶವನ್ನಾಳುತ್ತಿದ್ದ ಬ್ರಿಟಿಷ್ ಹಾಗೂ ಭಾರತೀಯ ಬಂಡವಾಳಶಾಹಿಗಳ ಹಾಗೂ ಅವರ ಆಧಾರ ಸ್ತಂಭವಾಗಿದ್ದ ಪಾಳೆಯಗಾರಿ ಭೂಮಾಲಿಕ ವ್ಯವಸ್ಥೆಯ ವಿರುದ್ಧ ಒಂದು ಕಡೆ ಕಾರ್ಮಿಕರನ್ನು ಮತ್ತೊಂದು ಕಡೆ ರೈತಾಪಿ ಜನರನ್ನೂ ಸಂಘಟಿಸಿದರು. ಇದು  ಭೂಮಾಲಕರ ಶೋಷಣೆಯ ವಿರುದ್ಧ ರೈತರು ದನಿ ಎತ್ತಬಾರದೆಂಬ ಗಾಂಧೀಜಿ ಮತ್ತು ಕಾಂಗ್ರೆಸ್‍ನ ಧೋರಣೆಗೆ ವಿರುದ್ಧವಾಗಿತ್ತು.
ಕಾರ್ಮಿಕರನ್ನು ಸಂಘಟಿಸಿ ಅವರನ್ನು ಸ್ವಾತಂತ್ರ ಚಳವಳಿಯ ಸಮರಧೀರ ಹೋರಾಟಗಳಲ್ಲಿ ತೊಡಗಿಸಿದರು. ಸೊಲ್ಲಾಪುರದಲ್ಲಿ ಆಢಳಿತಾಧಿಕಾರಿಗಳು ಮತ್ತು ಸೈನ್ಯವನ್ನು ಓಡಿಸಿ ಕಾರ್ಮಿಕರು ಸ್ವಾತಂತ್ರ್ಯವನ್ನೇ ಘೋಷಿಸಿಬಿಟ್ಟರು. 1936ರಲ್ಲಿ ವಿವಿಧ ರಾಜ್ಯಗಳ ರೈತ ಸಂಘಗಳನ್ನು ಒಗ್ಗೂಡಿಸಿ ಅಖಿಲ ಭಾರತ ಕಿಸಾನ್ ಸಭಾ ಸ್ಥಾಪಿಸಲಾಯಿತು. ಇದು ದೇಶಾದ್ಯಂತ ರೈತನ್ನು ಸಂಘಟಿಸಿ ಭೂಮಾಲಿಕತ್ವದ ವಿರುದ್ಧ ಹೋರಾಟಕ್ಕಿಳಿಸಿತು. ಈ ಹೋರಾಟಗಳು ಬೆಳೆಯುತ್ತಾ ಎರಡನೇ ಮಹಾಯದ್ಧದ ನಂತರ ಬೃಹತ್ ರೂಪವನ್ನು ಪಡೆದವು.
ವಾರಾಣಸಿ, ಮುಂಬಯಿಗಳಲ್ಲಿ ಹತ್ತಾರು ಸಾವಿರ ಕಾರ್ಮಿಕರ ತೀವ್ರ ಹೋರಾಟಗಳು ಆರಂಭವಾದವು. ನಂತರ ನೇತಾಜಿಯವರ ಐ.ಎನ್.ಎ. ಪಡೆಗಳ ಸೈನಿಕ ಮತ್ತು ಅಧಿಕಾರಿಗಳ ಬಂಧನದ ವಿರುದ್ಧ ದೇಶಾದ್ಯಂತ ಎದ್ದ ಚಳವಳಿ. ಕಲಕತ್ತಾದಿಂದ ಮೊದಲಾಗಿ ಮುಂಬಯಿ ಮೊದಲಾದ ನಗರಗಳಿಗೆ ಹಬ್ಬಿತು. ಕಾರ್ಮಿಕರು, ವಿದ್ಯಾರ್ಥಿಗಳು ಈ ಚಳವಳಿಗಳ ಮುಖ್ಯ ನೆಲೆಯಾದರು. ನಾವಿಕ ಸೈನ್ಯದ ದಂಗೆ ಮತ್ತೊಂದು ದೇಶದೆಲ್ಲ ಜನ ನೆನಪಿಸಿಕೊಳ್ಳಬೇಕಾದ ಚಳವಳಿ. 1946 ಫೆಬ್ರವರಿ 18 ಂದು 20.000 ನಾವಿಕ ಪಡೆ ದಂಗೆಯೇಳಲು ಕಾರಣವಾಯಿತು. ಕಮ್ಯೂನಿಸ್ಟ್ ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಮುಂಬಯಿಯ ಕಾರ್ಮಿಕರು ಮುಷ್ಕರ ಮಾಡಿ ಬೆಂಬಲಿಸಿದರು. ಜನ ಹರತಾಳ ಆಚರಿಸಿದರು. ಫೆಬ್ರವರಿ 21-23ವರೆಗೆ ಮುಂಬಯಿ ರಣರಂಗವಾಯಿತು. ಭಾರತೀಯ ಸೈನ್ಯ ಗುಂಡು ಹಾರಿಸಲು ನಿರಾಕರಿಸಿತೆಂದು ಬ್ರಿಟಿಷ್ ಪಡೆಗಳನ್ನು ಛೂಬಿಡಲಾಯಿತು. ಏಳು ಗಂಟೆಗಳ ಕಾಲ ಯುದ್ಧವೇ ನಡೆದು 250 ಜನ ಬಲಿಯಾದರು. ಇದು ನಾವಿಕ ಸೈನ್ಯವಿದ್ದ ಕರಾಚಿ, ವಿಶಾಖಪಟ್ಟಣ ಮೊದಲಾದ ಬಂದರು ನಗರಗಳಿಗೆಲ್ಲಾ ಹರಡಿತು. ಸೈನ್ಯ ಬಲದಿಂದಲೇ ಭಾರತವನ್ನು ಅಧೀನದಲ್ಲಿರಿಸಿಕೊಂಡಿದ್ದ ಬ್ರಿಟಿಷರಿಗೆ ಇನ್ನು ನಾವು ಭಾರತವನ್ನು ಆಳಲು ಸಾಧ್ಯವೇ ಎಂಬ ಆತಂಕವನ್ನು ಉಂಟುಮಾಡಿತು.
ಅದೇ ಸಮಯದಲ್ಲಿ ದೇಶದ ಹಲವು ಭಾಗಗಳಲ್ಲಿ ಏಕಕಾಲಕ್ಕೆ ಗ್ರಾಮಾಂತರದಲ್ಲಿ 3,000 ಹಳ್ಳಿಗಳನ್ನು ವ್ಯಾಪಿಸಿದ್ದ ನಿಜಾಮನ ಆಡಳಿತದ ತೆಲಂಗಾಣ ರೈತರ ದಂಗೆ, ಬಂಗಾಲ ರಾಜ್ಯದ ತೇಭಾಗ ಹೋರಾಟ, ಕೇರಳದ ಪುನ್ನಪ್ರ ವಯಲಾರ್ ದಂಗೆ, ಕಯ್ಯೂರು ಸೇರಿದ ಮಲಬಾರ್ ರೈತರ ಹೋರಾಟಗಳು, ಮಹಾರಾಷ್ಟ್ರದ ಆದಿವಾಸಿಗಳ ಹೋರಾಟ. ಪಂಜಾಬ್, ಅಸ್ಸಾಂ, ತ್ರಿಪುರಾ ಮೊದಲಾದ ಪ್ರದೇಶಗಳಲ್ಲಿ ಕೂಡಾ ಹೋರಾಟಗಳು ವ್ಯಾಪಕವಾಗಿ ಬೆಳೆದವು. ಈ ಎಲ್ಲಾ ಹೋರಾಟಗಳಲ್ಲಿ ಕಮ್ಯೂನಿಸ್ಟ್ ಪಕ್ಷ ಪ್ರಧಾನ ಪಾತ್ರ ವಹಿಸಿತು. ಈ ಕೆಲ ಹೋರಾಟಗಳಲ್ಲಿ ಎಡ ಕಾಂಗ್ರೆಸಿಗರು, ಸಮಾಜವಾದಿಗಳೂ ಜೊತೆಗೂಡಿದ್ದರು.
ಒಂದು ಕಡೆ ನಗರಗಳಲ್ಲಿ, ಮತ್ತೊಂದು ಕಡೆ ಹಳ್ಳಿಗಳಲ್ಲಿ ವಿಸ್ತರಿಸಿದ ಕೆಂಬಾವುಟದ ಚಳವಳಿಯ ಬೆಳವಣಿಗೆ ಭಾರತ ಚೀನಾದ ದಾರಿಯಲ್ಲಿ ಸಾಗುವುದನ್ನು ತಪ್ಪಿಸಲು ಮತ್ತು ತಮ್ಮ ಬಂಡವಾಳದ ಹೂಡಿಕೆಗಳು, ಕಾರ್ಖಾನೆ, ಪ್ಲಾಂಟೇಷನ್‍ಗಳಿಗೆ ರಕ್ಷಣೆ ಒದಗಿಸಬಲ್ಲ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಹುನ್ನಾರು ಮಾಡಲಾಯಿತು. ಈ ಕಾರಣಕ್ಕೆ ಸ್ವಾತಂತ್ರ್ಯವನ್ನು ಬೇಗನೇ ಕೊಟ್ಟುಬಿಡುವುದೊಳ್ಳೆಯದು ಎಂಬ ತೀರ್ಮಾನಕ್ಕೆ ಬ್ರಿಟಿಷರು ಬರುವಂತಹ ಒತ್ತಡವನ್ನು ಈ ಹೋರಾಟಗಳು ಹೇರಿದವು.
ಅದೇ ವೇಳೆಯಲ್ಲಿ ಭಾರತದ ಪ್ರಮುಖ ಕಮ್ಯೂನಿಸ್ಟ್ ನಾಯಕರೆಲ್ಲರೂ ಜಾತಿವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತಲೇ ಕಮ್ಯೂನಿಸ್ಟ್ ಚಳುವಳಿಗೆ ಸೇರಿದ್ದರೂ ಕೂಡಾ ಜಾತಿವಿನಾಶವನ್ನು, ಅಸ್ಪøಶ್ಯತೆಯ ಕರಾಳತೆಯ ವಿರುದ್ಧ ಹೋರಾಟವನ್ನು ಪ್ರಧಾನವಾಗಿ ಕೈಗೊಳ್ಳಲಿಲ್ಲ. ಹಲವು ಹೋರಾಟಗಳ ಸಂದರ್ಭದಲ್ಲಿ ವಿಶಾಲ ಹೋರಾಟಗಳ ಜೊತೆಗೆ ಬೆರೆಯದೇ ಪ್ರತ್ಯೇಕತೆಯನ್ನು ಅನುಸರಿಸಿದರು. ಚಲೇಜಾವ್ ಚಳವಳಿಯ ಸಂದರ್ಭದಲ್ಲಿ ಜನರ ಸಿಟ್ಟಿಗೊಳಗಾದರು ಎಂಬ ತಪ್ಪುಗಳನ್ನು ಎಸಗಿದರು. ಮಾಕ್ರ್ಸ್‍ವಾದವನ್ನು ಭಾರತಕ್ಕೆ ಅನ್ವಯಿಸುವುದರಲ್ಲಿ ಉಂಟಾದ ದೋóಷಗಳಿವು. ಇದರಿಂದಾಗಿ ಮಾಕ್ರ್ಸ್‍ವಾದದ ವಿಚಾರಗಳು ಜನರ ನಡುವೆ ಮತ್ತಷ್ಟು ವ್ಯಾಪಕವಾಗಿ ಹರಡಲು ಅಡ್ಡಿಯುಂಟಾಯಿತು ಎಂಬುದೂ ಸತ್ಯವೇ.
– ಜಿ.ಎನ್. ನಾಗರಾಜ್
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...