Homeಎಂಟರ್ತೈನ್ಮೆಂಟ್ರಾಜ್ - ಎಂದೂ ಮಾಸದ ನೆನಪು: ಭವಾನಿ ಕ್ಯಾಮರಾ ಕಣ್ಣಲ್ಲಿ ರಾಜ್!

ರಾಜ್ – ಎಂದೂ ಮಾಸದ ನೆನಪು: ಭವಾನಿ ಕ್ಯಾಮರಾ ಕಣ್ಣಲ್ಲಿ ರಾಜ್!

- Advertisement -
- Advertisement -

ವರನಟ ಡಾ.ರಾಜಕುಮಾರ್ ಅಗಲಿ ಇಂದಿಗೆ ಹದಿನಾಲ್ಕು ವರ್ಷ. ಏಕೀಕರಣದ ನಂತರ ಕನ್ನಡ ನಾಡು-ನುಡಿಯ ಬಗ್ಗೆ ಕನ್ನಡಿಗರಲ್ಲಿ ಒಲವು ಮೂಡಿಸಿದ ಸಾಂಸ್ಕೃತಿಕ ವ್ಯಕ್ತಿತ್ವ ರಾಜ್. ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ರಾಜ್ ಅವರ ಆತ್ಮೀಯರೊಲ್ಲಬ್ಬರು. ತಾವು ಕಂಡ ನಟನನ್ನು ಅಪರೂಪದ ಸಂದರ್ಭಗಳೊಂದಿಗೆ ಅವರಿಲ್ಲಿ ಸ್ಮರಿಸಿಕೊಂಡಿದ್ದಾರೆ.

ನಾನು ರಾಜ್‌ರ ನೂರಾರು ಫೋಟೋಗಳನ್ನು ಸೆರೆಹಿಡಿದ್ದೇನೆ. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಪ್ರತೀ ಚಿತ್ರದಲ್ಲೂ ಅವರಲ್ಲಿನ ಸರಳತೆ ಕಾಣಿಸುತ್ತದೆ. ನಾನು ಹತ್ತಾರು ವರ್ಷಗಳ ಕಾಲ ಕಂಡಂತೆ ಸೆಟ್‌ನಲ್ಲೂ ಅವರು ಎಲ್ಲರೊಂದಿಗೂ ಸರಳವಾಗಿ ಬೆರೆಯುತ್ತಿದ್ದರು. ಸಹಕಲಾವಿದರೊಂದಿಗೆ ಅವರದು ಉತ್ತಮ ಬಾಂಧವ್ಯ. ಹಿರಿಯರನ್ನು ಗೌರವಿಸುತ್ತಿದ್ದ ರಾಜ್, ಕಿರಿಯರಿಗೆ ಸಲಹೆ – ಸೂಚನೆ ಕೊಡುತ್ತಿದ್ದರು. ಕ್ಯಾಮರಾ ಎದುರು ಕೂಡ ಅವರು ಅಷ್ಟೇ ಸಂಯಮಿ. ಟೇಕ್ ಹೆಚ್ಚಾದರೆ ಒಂದಿಷ್ಟೂ ಬೇಸರಿಸಿಕೊಳ್ಳದೆ ಮತ್ತೊಂದು ಟೇಕ್‌ಗೆ ರೆಡಿಯಾಗುತ್ತಿದ್ದರು. ತಪ್ಪನ್ನು ಒಪ್ಪಿಕೊಳ್ಳುವ ಗುಣ ಅವರದು. ಸನ್ನಿವೇಶ ಮತ್ತಷ್ಟು ಚೆನ್ನಾಗಿ ಮೂಡಿಬರಬೇಕೆಂದು ನಿರ್ದೇಶಕರ ಸಲಹೆಯನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸುತ್ತಿದ್ದರು. ಅವರು ನಿರ್ದೇಶಕರಿಗೆ ಎದುರಾಡಿದ್ದನ್ನು ನಾನಂತೂ ಒಮ್ಮೆಯೂ ನೋಡಿಲ್ಲ. ಶೂಟಿಂಗ್ ಬಿಡುವಿನ ವೇಳೆಯಲ್ಲಿ ನಾನು ಕೊಡುತ್ತಿದ್ದ ತೊಂದರೆಗೂ ಅವರು ಬೇಸರ ಮಾಡಿಕೊಂಡವರಲ್ಲ. ಒಳ್ಳೆಯ ಮೂಡ್‌ನ ನಿರೀಕ್ಷೆಯಲ್ಲಿರುವ ಛಾಯಾಗ್ರಾಹಕನಿಗೆ ಮತ್ತೇನು ಬೇಕು ಹೇಳಿ?

ಕೂಸು ಮರಿ

ನಾನು ನೋಡಿದಂತೆ ರಾಜ್ ಮತ್ತು ಚಿತ್ರಸಾಹಿತಿ ಚಿ.ಉದಯಶಂಕರ್ ಅಪರೂಪದ ಸ್ನೇಹಿತರು. ಇಬ್ಬರಿಗೂ ಪರಸ್ಪರರಲ್ಲಿ ಅಪಾರ ಪ್ರೀತಿ, ಗೌರವ. ಒಂದು ಹಂತದ ಸಲಿಗೆಯೂ ಇತ್ತು. ಉದಯಶಂಕರ್ ಚಿತ್ರಕಥೆ, ಸಂಭಾಷಣೆಯಲ್ಲಿಯೇ ಅಲ್ಲವೇ ರಾಜ್ ಜನರನ್ನು ಸೆಳೆದದ್ದು? ರಾಜ್‌ರನ್ನು ಹತ್ತಿರದಿಂದ ಒಡನಾಡಿದ್ದರಿಂದ ಅವರ ಇಮೇಜ್‌ಗೆ ಸರಿಹೊಂದುವಂತೆ ಬರೆಯಲು ಉದಯಶಂಕರ್ ಅವರಿಗೆ ಸಾಧ್ಯವಾಗಿರಬಹುದು. ರಾಜ್ ಸಿನಿಮಾಗಳ ಚಿತ್ರೀಕರಣಗಳಿಗೆ ಹೋದ ಬಹಳಷ್ಟು ಸಂದರ್ಭಗಳಲ್ಲಿ ಚಿ.ಉದಯಶಂಕರ್ ಅವರನ್ನು ಭೇಟಿಯಾಗಿದ್ದೇನೆ. ಸಾಕಷ್ಟು ಬಾರಿ ಅವರು ನನ್ನ ಕ್ಯಾಮರಾಗೆ ರೂಪದರ್ಶಿಯಾಗಿದ್ದಾರೆ.

ನಂದಿಬೆಟ್ಟದಲ್ಲೊಮ್ಮೆ ರಾಜ್ ಮತ್ತು ಉದಯಶಂಕರ್ ಜೋಡಿಯ ಚಿತ್ರ ತೆಗೆದದ್ದು ನನಗೆ ಬಹುವಾಗಿ ಕಾಡುತ್ತದೆ. ರಾಜ್‌ರ ಚಿತ್ರವೊಂದಕ್ಕೆ ನಂದಿಬೆಟ್ಟದ ಟಿಪ್ಪು ಡ್ರಾಪ್‌ನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಚಿ.ಉದಯಶಂಕರ್ ಕೂಡ ಸೆಟ್‌ನಲ್ಲಿದ್ದರು. ನಾನಲ್ಲಿಗೆ ಹೋದಾಗ ಇಬ್ಬರೂ ಸನ್ನಿವೇಶವೊಂದರ ಬಗ್ಗೆ ಚರ್ಚಿಸುತ್ತಿದ್ದರೆಂದು ಕಾಣುತ್ತದೆ. ಅವರ ಗಂಭೀರ ಮಾತುಕತೆ ಮುಗಿಯುತ್ತಿದ್ದಂತೆ ನಾನಲ್ಲಿಗೆ ಹೋದೆ. ಅಪರೂಪದ ಪೋಸ್ ಬೇಕೆಂದಾಗ, ಉತ್ಸಾಹಿ ರಾಜ್ ಕ್ಷಣಕಾಲ ಯೋಚಿಸಿದರು.ಉದಯಶಂಕರ್‌ರನ್ನು ಕೂಸು ಮರಿ ಮಾಡಿದರೆ ಹೇಗೆ?’ ಎಂದು ಕೇಳಿದ ರಾಜ್, ಅದಕ್ಕೆ ಸಜ್ಜಾದರು. ಚಿ.ಉದಯಶಂಕರ್ ನಗುತ್ತಲೇ ರಾಜ್ ಬೆನ್ನೇರಿದರು. ಸ್ಥೂಲಕಾಯದ ಅವರನ್ನು ಹೊರುತ್ತಲೇ ರಾಜ್ ಒಂದೆಡೆ ಕೊಂಚ ವಾಲಿದರು. ಆಕಸ್ಮಾತ್ ಇಬ್ಬರೂ ಬಿದ್ದರೇನು ಗತಿ ಎಂದು ನನಗೆ ಗಾಬರಿಯಾಯ್ತು. ಯಾಕಾದರೂ ಭಿನ್ನ ಪೋಸ್ ಕೊಡಿ ಎಂದು ಕೇಳಿದೆನೋ ಎಂದು ಪರಿತಪಿಸಿದೆ. ಹಾಗೇನೂ ಆಗಲಿಲ್ಲ. ರಾಜ್ ತಮ್ಮ ಸ್ನೇಹಿತನನ್ನು ಕೂಸು ಮರಿ ಮಾಡುವ ಅಪರೂಪದ ಪೋಸ್ ನನ್ನ ಕ್ಯಾಮರಾಗೆ ದಕ್ಕಿತು. ಮುಂದೆ ಈ ಫೋಟೋ ನೋಡಿ ಅವರಿಬ್ಬರೂ ತುಂಬಾ ಖುಷಿಪಟ್ಟಿದ್ದರು.

ರಾಜ್ ನೃತ್ಯಕ್ಕೆ ಮನಸೋತ ಹನುಮ!

ನಂದಿಬೆಟ್ಟದಲ್ಲಿ ರಾಜ್ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ ಎನ್ನುವ ವಿಷಯ ಕಿವಿಗೆ ಬಿದ್ದಿತ್ತು. ಯಾವ ಸಿನಿಮಾ ಎನ್ನುವ ಕುತೂಹಲದಿಂದಲೇ ಹೋಗಿದ್ದೆ. ಸೆಟ್‌ಗೆ ಹೋಗುತ್ತಿದ್ದಂತೆ ನೃತ್ಯ ನಿರ್ದೇಶಕ ಉಡುಪಿ ಜಯರಾಂ ಎದುರಾದರು. `ಓ, ನೀವು ಬಂದ್ಬಿಟ್ರಾ, ಇನ್ನು ಅಣ್ಣಾವ್ರು ನಮಗೆ ಸಿಗೋಲ್ಲ ಬಿಡಿ..’ ಎಂದು ನಗುತ್ತಲೇ ನನ್ನನ್ನು ಸ್ವಾಗತಿಸಿದರು. ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ನಿರ್ದೇಶಕ ಗೀತಪ್ರಿಯ ಅವರ ಪದಾರ್ಪಣೆಯಾಯ್ತು. ರಾಜ್ ಅಭಿನಯದ `ಭೂಪತಿ ರಂಗ’ ಸಿನಿಮಾ ಹಾಡಿನ ಚಿತ್ರೀಕರಣ ಎನ್ನುವುದು ಗೊತ್ತಾಯಿತು. ಕೊಂಚ ಹೊತ್ತಿನಲ್ಲಿಯೇ ಶಾಟ್‌ಗೆ ಸಿದ್ಧರಾಗಿ ರಾಜ್ ನನ್ನೆಡೆ ಕೈಬೀಸುತ್ತಾ ಬಂದರು.
ತಮಿಳಿನಲ್ಲಿ ಆಗ ಹೆಸರು ಮಾಡಿದ್ದ ಉದಯ ಚಂದ್ರಿಕಾ ಈ ಚಿತ್ರದ ನಾಯಕಿ. ರಾಜ್ – ಉದಯ ಚಂದ್ರಿಕಾ ಜೋಡಿಯ `ಓಹೋ ಮುದ್ದಿನ ಮಲ್ಲಿಗೆ..’ ಯುಗಳ ಗೀತೆಗೆ ಅಂದು ಚಿತ್ರೀಕರಣ ನಡೆದದ್ದು. ಮಧ್ಯಾಹ್ನದಿಂದ ಸಂಜೆ ನಾಲ್ಕರವರೆಗೆ ಸತತವಾಗಿ ಚಿತ್ರೀಕರಣ ನಡೆಸಿದರು. ಕೊನೆಯಲ್ಲೊಂದು ತಮಾಷೆ ನಡೆಯಿತು. ಆಗ ನಂದಿ ಬೆಟ್ಟದಲ್ಲಿ ಕೋತಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ರಾಜ್ ಮುಂದಿನ ಶಾಟ್‌ಗೆಂದು ಕ್ಯಾಮರಾ ಎದುರು ಬರುತ್ತಿದ್ದಂತೆ ಕೋತಿಯೊಂದು ಅವರ ಬಳಿ ಓಡಿಬಂತು. ಚಿತ್ರತಂಡದ ಹುಡುಗರು ಓಡಿಸಿದರೂ ಅದು ಹೋಗಲೊಲ್ಲದು. ತಮ್ಮ ಕಾಲ ಬಳಿಯೇ ಸುಳಿದಾಡುತ್ತಿದ್ದ ಕೋತಿಯನ್ನು ರಾಜ್ ಪ್ರೀತಿಯಿಂದ ಮಾತನಾಡಿಸತೊಡಗಿದರು. ಕ್ಯಾಮರಾಮನ್ ಪಿ.ಎಸ್.ಪ್ರಕಾಶ್ ತಮ್ಮ ಕ್ಯಾಮರಾ ಆಫ್ ಮಾಡಿ ನಗುತ್ತಾ ಕುಳಿತರು. ನಾನು ಕ್ಯಾಮರಾ ಎತ್ತಿಕೊಂಡು ಅಲ್ಲಿಗೆ ಓಡಿದೆ. ಕೋತಿ ಎದುರು ರಾಜ್ ನೃತ್ಯದ ಬಂಗಿಯಲ್ಲಿ ಕೊಟ್ಟ ಪೋಸುಗಳನ್ನು ಕ್ಲಿಕ್ಕಿಸಿಕೊಂಡೆ. ಹೀಗೆ, ರಾಜ್ ಅವರೊಂದಿಗಿನ ಒಡನಾಟ ನನ್ನ ಬದುಕಿನ ಮಧುರ ನೆನಪುಗಳಾಗಿ ಉಳಿದಿವೆ.

ನಿರೂಪಣೆ: ಶಶಿಧರ ಚಿತ್ರದುರ್ಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...