Homeನ್ಯಾಯ ಪಥಲಿಂಗಾಯತರಿಗೆ ಬಿಜೆಪಿ ಕೊಟ್ಟಿದ್ದೇನು?

ಲಿಂಗಾಯತರಿಗೆ ಬಿಜೆಪಿ ಕೊಟ್ಟಿದ್ದೇನು?

- Advertisement -
- Advertisement -

|ಪಿ.ಕೆ ಮಲ್ಲನಗೌಡರ್ |

ಈ ಸಲದ ಲೋಕಸಭೆ ಚುನಾವಣೆಯಲ್ಲಿ ಈ ಪ್ರಶ್ನೆ ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಗಳಲ್ಲಿ ಮುನ್ನೆಲೆಗೆ ಬಂದಿದೆ. ಒಂದು ಸಮುದಾಯವನ್ನು ಇಂಥದ್ದೇ ಪಾರ್ಟಿಯ ಬೆಂಬಲಿಗರೆಂದು ಫಿಕ್ಸ್ ಮಾಡಲಾಗದು. ಆದರೆ ಆ ಸಮುದಾಯ ಆಯಾ ಕಾಲಘಟ್ಟದಲ್ಲಿ ತೋರುವ ನಿಷ್ಠೆ, ಬೆಂಬಲಗಳ ಆಧಾರದಲ್ಲಿ ಹಾಗೆ ಗುರುತಿಸಲಾಗುತ್ತಿದೆ. ಜೆಡಿಎಸ್ ಒಕ್ಕಲಿಗರ ಪಕ್ಷ ಎಂಬಂತೆ, ಬಿಜೆಪಿ ಲಿಂಗಾಯತರ ಪಕ್ಷ ಎಂಬ ಬ್ರಾಂಡ್ ಹೊತ್ತಿದೆ.

ವೀರೇಂದ್ರ ಪಾಟೀಲರ ನಿರ್ಗಮನದ ನಂತರ ಒಬ್ಬ ನಾಯಕನ ಹುಡುಕಾಟದಲ್ಲಿದ್ದ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ನಲ್ಲಿ ಅಂತಹ ನಾಯಕ ಒದಗಲಿಲ್ಲ.. ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ವಿಧಾನವೂ ಕ್ರೂರವಾಗಿತ್ತು ಎಂಬ ಭಾವನೆ ಲಿಂಗಾಯತರಲ್ಲಿತ್ತು. ದಕ್ಷ ಆಡಳಿತ ನೀಡುತ್ತಿದ್ದ ವೀರೇಂದ್ರ ಪಾಟೀಲರು ಅನಾರೋಗ್ಯಕ್ಕೆ ತುತ್ತಾದಾಗ, ರಾಜೀವ್ ಗಾಂಧಿ ಏಕಾಏಕಿ ಬಂಗಾರಪ್ಪರನ್ನು ಮುಖ್ಯಮಂತ್ರಿ ಪಟ್ಟಕ್ಕೆ ತಂದು ಕೂಡಿಸಿದ್ದು ಲಿಂಗಾಯತ ಸಮುದಾಯದಲ್ಲಿ ಅಸಮಾಧಾನ ಮೂಡಿಸಿತ್ತು. ಅದರ ಫಲವೇ ಎಂಬಂತೆ ಅದು ಕ್ರಮೇಣ ಬಿಜೆಪಿಯ ಯಡಿಯೂರಪ್ಪರಲ್ಲಿ ಲಿಂಗಾಯತ ನಾಯಕನನ್ನು ಕಾಣಲು ಯತ್ನಿಸುತ್ತಾ ಬಂದದ್ದು, ಈಗ ಭ್ರಮನಿರಶನದತ್ತ ಸಾಗಿದೆ.

ಒಂದು ಕೊಟ್ಟು ಅದನ್ನೂ ಕಿತ್ತುಕೊಂಡರು

ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಗಳಲ್ಲಿ ಬಿಜೆಪಿಯನ್ನು ಲಿಂಗಾಯತರು ಗಾಢವಾಗಿ ಅಪ್ಪಿಕೊಂಡಿದ್ದರು. ರಾಜ್ಯದಿಂದ 17 ಬಿಜೆಪಿ ಸಂಸದರು (ಬಳ್ಳಾರಿ ಉಪಚುನಾವಣೆ ನಂತರ 16) ಆಯ್ಕೆಯಾಗಿದ್ದರು. 17ರಲ್ಲಿ 10 ಸಂಸದರು ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಸೇರಿದವರು. ಈ 10 ಸಂಸದರಲ್ಲಿ 7 ಲಿಂಗಾಯತ ಸಂಸದರಿದ್ದರು. 2014ರ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದು ಅದೇ ಒಂದು ವರ್ಷವಾಗಿತ್ತು ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆಗ ಸಿದ್ದರಾಮಯ್ಯರ ಆಡಳಿತ ಜನಮನ ಸೆಳೆದಿತ್ತು. ಅಂತಹ ಸಂದರ್ಭದಲ್ಲಿ ಸೃಷ್ಟಿತ ಮೋದಿ ಹವಾದೊಂದಿಗೆ ತೇಲಿದ್ದ ಲಿಂಗಾಯತರು ಬಿಜೆಪಿ ಪರ ನಿಂತಿದ್ದರು.

ಆದರೆ, ಕೇಂದ್ರದಲ್ಲಿ ಬಹುಮತ ಪಡೆದ ಬಿಜೆಪಿ ರಾಜ್ಯದ ಲಿಂಗಾಯತರಿಗೆ ರಾಜಕೀಯ ಪ್ರಾತಿನಿಧ್ಯ ಕೊಡದೇ ಹೋಯಿತು. ಯಾವುದೇ ಸಮುದಾಯ ತನ್ನವರು ಅಧಿಕಾರದಲ್ಲಿ ಎಷ್ಟು ಪಾಲು ಪಡೆದರೆಂದು ಯೋಚಿಸುತ್ತದೆ. ಎಂದೂ ಕಟ್ಟಾ ಆರೆಸ್ಸೆಸ್ ಅಲ್ಲದ ಲಿಂಗಾಯತರಿಗೂ ಅಂತಹ ಒಂದು ಸಹಜ ಬಯಕೆ ಇದ್ದೇ ಇತ್ತು.

ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬೆಳಗಾವಿಯ ಸುರೇಶ ಅಂಗಡಿ, ಹಾವೇರಿಯ ಶಿವಕುಮಾರ ಉದಾಸಿ, ಶಿವಮೊಗ್ಗದ ಯಡಿಯೂರಪ್ಪ (ಉಪಚುನಾವಣೆಯಲ್ಲಿ ಅವರ ಮಗ ಸಂಸದರಾದರು), ಬಾಗಲಕೋಟೆಯ ಗದ್ದಿಗೌಡರ್, ಬೀದರಿನ ಭಗವಂತ ಖೂಬಾ, ದಾವಣಗೆರೆಯ ಜಿ.ಎಂ. ಸಿದ್ದೇಶ್ವರ-ಈ ಎಲ್ಲ ಲಿಂಗಾಯತ ಸಂಸದರಲ್ಲಿ ದಾವಣಗೆರೆಯ ಜಿ.ಎಂ. ಸಿದ್ದೇಶ್ವರ ಅವರೊಬ್ಬರಿಗೆ ರಾಜ್ಯ ಖಾತೆ ನೀಡಿ ಕೈ ತೊಳೆದುಕೊಂಡ ಮೋದಿ ಸರ್ಕಾರ, ಮೊದಲ ಬಾರಿ ಆಯ್ಕೆಯಾದ ಆದರೆ ಆರೆಸ್ಸೆಸ್ ಮೂಲ ಹೊಂದಿದ್ದ ಹಿಂದಿ ಭಾಷಿಕ ಸಂಸದರಿಗೆ ಸಚಿವಗಿರಿ ನೀಡಿತು.

ರಾಜ್ಯದಿಂದ ಗೆದ್ದಿದ್ದ ಇಬ್ಬರು ಒಕ್ಕಲಿಗರ (ಸದಾನಂದಗೌಡ-ಬೆಂಗಳೂರು ಉತ್ತರ, ಶೋಭಾ ಕರಂದ್ಲಾಜೆ-ಉಡುಪಿ-ಚಿಕ್ಕಮಗಳೂರು) ಪೈಕಿ ಸದಾನಂದಗೌಡರಿಗೆ ಸಚಿವ ಸ್ಥಾನ ನೀಡಲಾಯಿತು. ರಾಜ್ಯದಿಂದ ಗೆದ್ದ ಮೂವರು ಬ್ರಾಹ್ಮಣ ಬಿಜೆಪಿ ಸಂಸದರ (ದಿ.ಅನಂತಕುಮಾರ್-ಬೆಂಗಳೂರು-ದಕ್ಷಿಣ, ಪ್ರಹ್ಲಾದ್ ಜೋಶಿ-ಧಾರವಾಡ, ಅನಂತಕುಮಾರ್ ಹೆಗಡೆ-ಉತ್ತರ ಕನ್ನಡ) ಪೈಕಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಯಿತು! ಈ ಮೂವರು ಬ್ರಾಹ್ಮಣ ಸಂಸದರು ಆರೆಸ್ಸೆಸ್ ಮೂಲದವರು ಎಂಬುದನ್ನು ಗಮನಿಸಿ.

ಮುಂದೆ, ಲಿಂಗಾಯತರಿಗೆ ಕೊಟ್ಟಿದ್ದ ಒಂದು ಸ್ಥಾನವನ್ನೂ ಕಿತ್ತುಕೊಂಡರು. ಜಿ.ಎಂ ಸಿದ್ದೇಶ್ವರರನ್ನು ವಿನಾ ಕಾರಣ ಕೆಳಗಿಳಿಸಿ, ಹಿಂದಿ ಭಾಷಿಕ ಬಿಜೆಪಿ ಸಂಸದನಿಗೆ ಮಣೆ ಹಾಕಲಾಯಿತು. ಲಿಂಗಾಯತರಲ್ಲಿನ ಪ್ರಜ್ಞಾವಂತರು ಇದನ್ನೆಲ್ಲ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರು. ಆದರೆ  ಮಾಧ್ಯಮಗಳು ಸೃಷ್ಟಿಸಿದ ಮೋದಿಯ ಬಿಂಬಿತ ಇಮೇಜನ್ನೇ ನಂಬಿದ ಲಿಂಗಾಯತರು ಮೋದಿ ಜಪದಲ್ಲಿ ತೊಡಗಿದರು.

ಮಹಾದಾಯಿ: ಮಲಗೇ ಇದ್ದ ಸಂಸದರು

ಇಲ್ಲಿಂದ ದೆಹಲಿಗೆ ಹೋದ ಬಿಜೆಪಿಯ ಸಂಸದರು ಒಂದು ಪ್ರೆಷರ್ ಗ್ರೂಪ್ ರೀತಿ ವರ್ತಿಸಿದ್ದರೆ ಮಹಾದಾಯಿ ವಿಚಾರದಲ್ಲಿ ನ್ಯಾಯ ಸಿಗುತ್ತಿತ್ತು. ಆದರೆ ಪ್ರಧಾನಿಯಿರಲಿ, ಜಲಸಂಪನ್ಮೂಲ ಸಚಿವೆಯಾಗಿದ್ದ ಉಮಾಭಾರತಿಯ ಮೇಲೂ ಇವರು ಒತ್ತಡ ಹಾಕಲಿಲ್ಲ. ಮಹಾದಾಯಿಯ ನೀರಿಗೆ ಕಾಯ್ದ ಬೆಳಗಾವಿ, ಧಾರವಾಡ, ಗದಗ (ಹಾವೇರಿ ಕ್ಷೇತ್ರ) ಮತ್ತು ಬಾಗಲಕೋಟೆಯಿಂದ ಆಯ್ಕೆಯಾದ ನಾಲ್ವರು ಸಂಸದರು ಮಹಾದಾಯಿ ಕುರಿತು ದೆಹಲಿಯಲ್ಲಿ ದನಿ ಎತ್ತದೇ ಮುಂಬೈ ಕರ್ನಾಟಕಕ್ಕೆ ಚಾರಿತ್ರಿಕ ಅನ್ಯಾಯ ಎಸಗಿದರು. ಇದರ ಅರಿವಿದ್ದೂ, ಮಧ್ಯಮವರ್ಗದ ಲಿಂಗಾಯತರು 2018ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ತಬ್ಬಿಕೊಂಡು ಮೋಸ ಹೋದರು.

ಪ್ರತ್ಯೇಕ ಧರ್ಮ, ಬಿಜೆಪಿ ಕುತಂತ್ರ

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದನ್ನು ಮುಕ್ತವಾಗಿ ಸ್ವಾಗತಿಸಬೇಕಾಗಿದ್ದ ಲಿಂಗಾಯತರು ಬಿಜೆಪಿ ಮತ್ತು ಆರೆಸ್ಸೆಸ್ ಕುತಂತ್ರಕ್ಕೆ ಬಲಿಯಾಗಿ, ಬಿಜೆಪಿಗೆ 2013ರಲ್ಲಿ ನೀಡಿದ್ದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ದಯಪಾಲಿಸಿಬಿಟ್ಟರು.

ಮುಂಬೈ ಕರ್ನಾಟಕದ 50 ಸ್ಥಾನಗಳ ಪೈಕಿ ಬಿಜೆಪಿಗೆ 30 ಸ್ಥಾನ ದೊರೆತರೆ, 2013ರಲ್ಲಿ 31 ಸೀಟು ಗೆದ್ದಿದ್ದ ಕಾಂಗ್ರೆಸ್ 13ಕ್ಕೆ ಕುಸಿಯಿತು. ಮಧ್ಯ ಕರ್ನಾಟಕದ 36 ಸ್ಥಾನಗಳಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಹೈದರಾಬಾದ್ ಕರ್ನಾಟಕದ 40 ಸ್ಥಾನಗಳಲ್ಲಿ ಬಿಜೆಪಿ ತನ್ನ ಟ್ಯಾಲಿಯನ್ನು 10ರಿಂದ 15ಕ್ಕೆ ಏರಿಸಿಕೊಂಡಿತು.

ಇದೆಲ್ಲ ಗೆಲುವಿಗೆ ಹಲವು ಕಾರಣಗಳಿವೆ. ಆದರೆ ಲಿಂಗಾಯತರು ಒಂದು ಸಮುದಾಯವಾಗಿ ಬಿಜೆಪಿ ಪರ ನಿಂತಿದ್ದು ಪ್ರಮುಖ ಕಾರಣವಾಗಿದೆ.

ನಾಯಕನ ಹುಡುಕಾಟದಲ್ಲಿ

ವೀರೇಂದ್ರ ಪಾಟೀಲರ ನಂತರ ಲಿಂಗಾಯತರ ರಾಜಕೀಯ ವಲಯದಲ್ಲಿ ನಾಯಕತ್ವದ ಕೊರತೆ ಕಾಡತೊಡಗಿತು. ಹಿಂದಿನಿಂದಲೂ ಉತ್ತರ ಕರ್ನಾಟಕದಲ್ಲಿ ಸಣ್ಣಗೆ ತನ್ನ ನೆಲೆಗಳನ್ನು ಆರೆಸ್ಸೆಸ್ ವಿಸ್ತರಿಸುತ್ತ ಬಂದಿತ್ತು. ಕರಾವಳಿಯಲ್ಲಿ ಸಾರಸ್ವತ ಬ್ರಾಹ್ಮಣರು ಆರೆಸ್ಸೆಸ್ ಬೆಳೆಸಿದಂತೆ, ಮುಂಬೈ ಕರ್ನಾಟಕದಲ್ಲಿ ಮಹಾರಾಷ್ಟ್ರ ಮೂಲದ ಚಿತ್ಪಾವನ ಬ್ರಾಹ್ಮಣರು ಆರೆಸ್ಸೆಸ್‌ಗೆ ಅಡಿಪಾಯ ಹಾಕಿದ್ದರು. ಹುಬ್ಬಳ್ಳಿಯ ವಾಣಿಜ್ಯ ವ್ಯಾಜ್ಯವಾಗಿದ್ದ ಈದ್ಗಾ ಮೈದಾನದ ವಿವಾದವನ್ನು ರಾಷ್ಟ್ರಧ್ವಜಕ್ಕೆ ತಳುಕು ಹಾಕುವ ಮೂಲಕ ಬಿಜೆಪಿಗೆ ಮುಂಬೈ ಕರ್ನಾಟಕದಲ್ಲಿ ಭದ್ರ ನೆಲೆ ಒದಗಿಸಿತು. 80ರ ದಶಕದ ಆರಂಭದಲ್ಲಿ ಜನತಾ ಪಕ್ಷದ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ 18 ಶಾಸಕರಿದ್ದ ಬಿಜೆಪಿ ಬೆಂಬಲ ನೀಡಿತ್ತು. ಉತ್ತರ ಕರ್ನಾಟಕದಲ್ಲಿ ಆಗ ಹೆಗಡೆ ಲಿಂಗಾಯತ ನಾಯಕನ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದರು.

ಮುಂದೆ ಜನತಾದಳ ವಿಭಜನೆಯಾದ ನಂತರ ಸ್ವಲ್ಪ ಅವಧಿಗೆ ಜೆಡಿಯು ಬೆಂಬಲಿಸಿದ್ದ ಲಿಂಗಾಯತರು, ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್‌ನಿಂದ ಇಳಿಸಿದ ನಂತರ, ನಾಯಕನೊಬ್ಬನ ಹುಡುಕಾಟದಲ್ಲಿ ಇದ್ದರು. ಪಂಚಪೀಠಗಳು ಮತ್ತು ಆರೆಸ್ಸೆಸ್‌ನ ಕಂದಾಚಾರಿಗಳು ಬಿಜೆಪಿಗೆ ವೇದಿಕೆ ಏರ್ಪಡಿಸುತ್ತಲೇ ಯಡಿಯೂರಪ್ಪರನ್ನು ಲಿಂಗಾಯತರ ನಾಯಕ ಎಂಬಂತೆ ಬಿಂಬಿಸಿದವು. ಇದಕ್ಕೆ ಕರ್ನಾಟಕದ ಬ್ರಾಹ್ಮಣಶಾಹಿ ಮೀಡಿಯಾ ಸಕಲ ನೆರವನ್ನು ನೀಡಿತು.

20 ತಿಂಗಳ ತಮ್ಮ ಅಧಿಕಾರ ಅವಧಿ ಮುಗಿದ ನಂತರ ಕುಮಾರಸ್ವಾಮಿ ಯಡಿಯೂರಪ್ಪರಿಗೆ ಅಧಿಕಾರ ಹಸ್ತಾಂತರ ನೀಡದೇ ಇದ್ದಾಗ, ಅದನ್ನು ಲಿಂಗಾಯತರಿಗಾದ ಅನ್ಯಾಯ ಎಂಬಂತೆ ವ್ಯವಸ್ಥಿತ ಪ್ರಚಾರ ಮಾಡಲಾಯಿತು. ಅಲ್ಲಿಂದ ಲಿಂಗಾಯತರು ಬಿಜೆಪಿಯ ಓಟ್‌ಬ್ಯಾಂಕ್ ತರಹ ಪರಿಗಣಿಸಲ್ಪಟ್ಟಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಈ ಸಂದರ್ಭದಲ್ಲೂ ಯಡಿಯೂರಪ್ಪರನ್ನು ಸೈಡ್‌ಲೈನ್‌ಗೆ ತಳ್ಳಿ, ಅನಂತಕುಮಾರ್ ಹೆಗಡೆ ತರದವರನ್ನು ಬಿಜೆಪಿ ಪ್ರಮೋಟ್ ಮಾಡುತ್ತಿದೆ.

ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸವಲತ್ತು ನೀಡಲು ವಾಜಪೇಯಿ ಸರ್ಕಾರ ನಿರಾಕರಿಸಿತ್ತು, ಈಗಿನ ಕೇಂದ್ರ ಸಂಪುಟದಲ್ಲೂ ಲಿಂಗಾಯತರಿಗೆ ಪ್ರಾಧಾನ್ಯವಿಲ್ಲ, ಮಹದಾಯಿ ವಿಚಾರದಲ್ಲೂ ಬಿಜೆಪಿ ಅನ್ಯಾಯ ಮಾಡಿತು…..ಬಿಜೆಪಿಯ ಸೋಗಲಾಡಿತನ ಈ ಸಲವಾದರೂ ಲಿಂಗಾಯತರಿಗೆ ಅರ್ಥವಾದೀತೆ? ಸದ್ಯದ ಸಂದರ್ಭ ಅವಲೋಕಿಸಿದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಅದರ ಮೊದಲ ಝಲಕ್ ಸ್ಟೋಟಗೊಳ್ಳಲಿದೆ. ಅದು ಒಟ್ಟೂ ರಾಜ್ಯದ ನೆಮ್ಮದಿಯ ಕಾರಣಕ್ಕೆ ಸ್ವಾಗತಾರ್ಹ…

“ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ  ಜಾಸ್ತಿ”

ಲಿಂಗಾಯತರಿಗೆ ಬಿಜೆಪಿ ಕೊಡುವುದಿರಲಿ, ರಾಜ್ಯಕ್ಕೆ ದಕ್ಕಬೇಕಾಗಿದ್ದ ಸವಲತ್ತುಗಳನ್ನೇ ಅದು ನೀಡಿಲ್ಲ. ಲಿಂಗಾಯತರು ಬಹುಸಂಖ್ಯಾತರಾಗಿರುವ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಅದು ಸಾಕಷ್ಟು ದ್ರೋಹ ಬಗೆದಿದೆ.

ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಹೋರಾಟ ಉಜ್ವಲವಾಗಿದ್ದ ದಿನಗಳಲ್ಲಿ ಬಿಜೆಪಿ ಅದಕ್ಕೆ ಮಾನ್ಯತೆ ನೀಡಲಿಲ್ಲ. ವಾಜಪೇಯಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಲಾಲ್‌ಕೃಷ್ಣ ಅದ್ವಾನಿ ರಾಜ್ಯ ಸರ್ಕಾರದ ಮನವಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು. ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರ ಶ್ರಮದಿಂದ ಆ ಸ್ಥಾನಮಾನ ಸಿಕ್ಕಿತ್ತು. ಇದರಿಂದಾಗಿ ಇವತ್ತು ಹೈದರಾಬಾದ್ ಕರ್ನಾಟಕದ ಸರ್ವಜನರಿಗೆ ಉದ್ಯೋಗ ಮತ್ತು ಶಿಕ್ಷಣ ಪ್ರವೇಶಾತಿಯಲ್ಲಿ ದೊಡ್ಡ ಅನುಕೂಲವಾಗಿದೆ. ಅದು ಅಲ್ಲಿನ ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಅವಕಾಶಗಳ ಬಾಗಿಲು ತೆಗೆದಿದೆ. ಇಂತಹ ಅವಕಾಶವನ್ನು ಕೊಡಲು ನಿರಾಕರಿಸಿದ ಬಿಜೆಪಿಯನ್ನು ಲಿಂಗಾಯತರು ಬೆಂಬಲಿಸುವುದು ಮೂರ್ಖತನವಷ್ಟೇ…

ಮುಂಬೈ ಕರ್ನಾಟಕಕ್ಕೆ ಅದರ ಕೊಡುಗೆಯಾದರೂ ಏನು? ಕುಡಿಯುವ ನೀರಿನ ವಿಷಯದಲ್ಲೂ ಅದು ರಾಜಕೀಯ ಮಾಡಿತು. ನಾಲ್ಕು ಜಿಲ್ಲೆಗಳ ರೈತರ ಪಾಲಿಕೆ ಕಂಟಕವಾಯಿತು.

ಬಸವತತ್ವಕ್ಕೆ ತದ್ವಿರುದ್ಧದ ನಿಲುವುಗಳನ್ನು, ಜೀವ ವಿರೋಧಿ ಸಿದ್ಧಾಂತವನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿರುವ ಸಂಘ ಪರಿವಾರವನ್ನು ಬೆಂಬಲಿಸಿದರೆ ಅದು ಆತ್ಮವಂಚನೆಯಾಗುತ್ತದೆ. ಲಿಂಗಾಯತರಲ್ಲಿ ಸಮಷ್ಠಿ ಕಲ್ಯಾಣದ ಪ್ರಜ್ಞೆ ಮೂಡಿಸಲು ಯತ್ನಿಸಿದವರ ವಿರುದ್ಧ ಸಂಘ ಪರಿವಾರ ಅಪಪ್ರಚಾರ ಮಾಡುತ್ತ ಬಂದಿದ್ದು, ಸುಳ್ಳುಗಳ ಮೂಲಕ ಲಿಂಗಾಯತರನ್ನು ದಾರಿ ತಪ್ಪಿಸುತ್ತಿದೆ. ಲಿಂಗಣ್ಣ ಸತ್ಯಂಪೇಟೆ, ಡಾ. ಎಂ. ಎಂ. ಕಲಬುರ್ಗಿ, ಗೌರಿ ಲಂಕೇಶ್, ತೋಂಟದಾರ್ಯ ಶ್ರೀಗಳ ವಿರುದ್ಧ ವ್ಯವಸ್ಥಿತ ತೇಜೋವಧೆ ಮಾಡಿದ ಗುಂಪನ್ನು ಬೆಂಬಲಿಸುವುದೇ ಅಪರಾಧ. ಲಿಂಗಾಯತ ಯುವಕರನ್ನು ಹಿಂದೂತ್ವ ಮತ್ತು ನಕಲಿ ರಾಷ್ಟ್ರೀಯತೆಗಳ ಎರಕದಲ್ಲಿ ಹೊಯ್ದು ಸಂಘ ಪರಿವಾರದ ಕಾಲಾಳುಗಳನ್ನಾಗಿ ಬಳಸಲಾಗುತ್ತಿದೆ. ಲಿಂಗಾಯತರು ಈ ಸಲವಾದರೂ ಎಚ್ಚರಗೊಂಡು ಮತ ಚಲಾಯಿಸುವ ಜರೂರತ್ತು ಈಗಿದೆ.

– ಡಾ.ಜಗದೀಶ ಪಾಟೀಲ, ವಿಜಯಪುರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...