Homeಮುಖಪುಟತಿದ್ದುಪಡಿ ಕಾಯ್ದೆಗೆ ಮುಚ್ಚಲಿವೆ ಎಪಿಎಂಸಿಗಳು; ಲಕ್ಷಾಂತರ ಕಾರ್ಮಿಕರು ಬೀದಿಪಾಲು ಸಾಧ್ಯತೆ!

ತಿದ್ದುಪಡಿ ಕಾಯ್ದೆಗೆ ಮುಚ್ಚಲಿವೆ ಎಪಿಎಂಸಿಗಳು; ಲಕ್ಷಾಂತರ ಕಾರ್ಮಿಕರು ಬೀದಿಪಾಲು ಸಾಧ್ಯತೆ!

- Advertisement -
- Advertisement -

ಪ್ರಧಾನಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ಎಪಿಎಂಸಿ ಕಾಯ್ದೆಯ ತಿದ್ದುಪಡಿ ನಿರ್ಧಾರಕ್ಕೆ ರೈತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತಿದ್ದುಪಡಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆಗಳು ಮುಚ್ಚಿಹೋಗಲಿವೆ. ಲಕ್ಷಾಂತರ ನೌಕರರು, ಹಮಾಲರು ಮತ್ತು ಸಣ್ಣ ಕಾರ್ಮಿಕರು ಬೀದಿಗೆ ಬೀಳಲಿದ್ದಾರೆ. ಇದು ರೈತರ ಶೋಷಣೆಗೆ ಮಾರ್ಗ ಮಾಡಿಕೊಡಲಿದೆ. ದಲ್ಲಾಳಿಗಳು ಮತ್ತು ಕಾರ್ಪೋರೇಟ್ ಕುಳಗಳ ಲಾಭಕೋರತನಕ್ಕೆ ದಾರಿಯಾಗಲಿದೆ. ಇದು ರೈತರು, ಕೃಷಿಕೂಲಿಕಾರರಿಗೆ ಮರಣಶಾಸನವಾಗಲಿದೆ ಎಂಬ ಆತಂಕ ರೈತರಿಂದ ವ್ಯಕ್ತವಾಗಿದೆ.

ರಾಜ್ಯದಲ್ಲಿ 177 ಕೃಷಿ ಉತ್ಪನ್ನ ಮಾರುಕಟ್ಟೆಗಳಿದ್ದು, ಜೊತೆ ಉಪ ಮಾರುಕಟ್ಟೆಗಳು ಕಾರ್ಯಾಚರಿಸುತ್ತಿವೆ. ಲಕ್ಷ ಲಕ್ಷ ನೌಕರರು, ಕಾರ್ಮಿಕರು, ವರ್ತಕರು ಕೆಲಸ ಮಾಡಿಕೊಂಡು ಕುಟುಂಬಗಳ ನಿರ್ವಹಣೆಗೆ ಈ ಕೃಷಿ ಉತ್ಪನ್ನ ಮಾರುಕಟ್ಟೆಗಳು ಮಾರ್ಗ ಕಲ್ಪಿಸಿವೆ. ಹೇಗೋ ಜೀವನ ದೂಡುತ್ತಿರುವ ಕುಟುಂಬಗಳ ನೆಮ್ಮದಿಗೆ ಎಪಿಎಂಸಿ ತಿದ್ದುಪಡಿ ಭಂಗ ತರಲಿದೆ. ಕೇಂದ್ರ ಸಚಿವ ಸಂಪುಟ ತಿದ್ದುಪಡಿಗೆ ಒಪ್ಪಿಗೆ ನೀಡಿರುವ ಕಾಯ್ದೆಯನ್ನು ಯಥಾವತ್ ತಿದ್ದುಪಡಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಅದೂ ಕೂಡ ಕೊರೊನದಿಂದ ಜನರು ತತ್ತರಿಸುತ್ತಿರುವ ಸಂದರ್ಭದಲ್ಲಿ. ರೈತ ಸಂಘಟನೆಗಳು ಮತ್ತು ರೈತರು ಪ್ರತಿಭಟನೆಗೆ ಇಳಿಯಲು ಸಾಧ್ಯವಾಗದಂಥ ಕಾಲದಲ್ಲಿ ಈ ತೀರ್ಮಾನಕ್ಕೆ ಬಂದಿರುವುದು ಹೇಡಿತನದ ಕೃತ್ಯವಾಗಿದೆ.

ರಾಜ್ಯದ ಕೃಷಿ ಉತ್ಪನ್ನಗಳ ಮಾರುಕಟ್ಟೆ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ 1966 ಮತ್ತು ನಿಯಮಗಳು 1968ರ ಕಲಂ 8, 66, 67 ಮತ್ತು 70 ರಂತೆ ಎಪಿಎಂಸಿಗಳ ಹೊರಗೆ ನಡೆಯುವ ಮಾರುಕಟ್ಟೆಯ ಮೇಲೆ ಎಪಿಎಂಸಿಗಳು ನಿಯಂತ್ರಣ ಹೊಂದಿವೆ. ಕಾಯ್ದೆ ತಿದ್ದುಪಡಿಯಾದರೆ ಯಾರು ಎಲ್ಲಿ ಬೇಕಾದರೂ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಿದೆ. ಇದು ಎಪಿಎಂಸಿಯನ್ನು ಅವಲಂಬಿಸಿರುವ ಎಲ್ಲರಿಗೂ ತೊಂದರೆಯನ್ನುಂಟು ಮಾಡಲಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾ ರೆಡ್ಡಿ “ಎಪಿಎಂಸಿ ಹೊರಗೆ ರೈತರಿಂದ ಕೃಷಿ ಉತ್ಪನ್ನವನ್ನು ಲೈಸನ್ಸ್ ಹೊಂದಿಲ್ಲದ ವ್ಯಕ್ತಿಗಳು ಖರೀದಿಸಲು ಅವಕಾಶವಿಲ್ಲ. ವರ್ತಕರು ಮನಬಂದಂತೆ ರೈತರ ಶೋಷಣೆ ನಡೆಸಲು ಹಾಗೂ ಎಪಿಎಂಸಿ ಆದಾಯ ವಂಚನೆ ಮಾಡಲು ಅವಕಾಶ ನೀಡುತ್ತಿಲ್ಲ. ಈ ನಿಯಮಗಳ ಅನ್ವಯ ನಡೆಯದಿದ್ದರೆ ಅಂತಹ ವರ್ತಕರ ಮೇಲೆ ಕಲಂ 114, 116, 117ರಡಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿತ್ತು. ಆದರೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಈ ನಿಯಮಗಳು ಇಲ್ಲದಂತಾಗಿ ಕಾರ್ಪೋರೇಟ್ ಕುಳಗಳು ಎಪಿಎಂಸಿ ಪ್ರವೇಶಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಸರ್ಕಾರ ಎಪಿಎಂಸಿ ಬಲಪಡಿಸಬೇಕು. ಖಾಸಗಿ ಮಾರುಕಟ್ಟೆ ನಿಷೇಧಿಸಬೇಕು. ಇಲ್ಲದಿದ್ದರೆ ಜಂಟಿ ಚಳವಳಿಗೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದುವರೆಗೆ ಮಾರುಕಟ್ಟೆಗಳಲ್ಲಿ ಸ್ಪರ್ಧೆಗೆ ಅವಕಾಶವಿತ್ತು. ರೈತರು ತಮಗೆ ಅನುಕೂಲವಾಗುವಂತಹ ಬೆಲೆಗೆ ಕೃಷಿ ಉತ್ಪನ್ನಗಳನ್ನು ಮಾರಬಹುದಿತ್ತು. ಕೇಂದ್ರದ ತೀರ್ಮಾನದಂತೆ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದರೆ ಕೃಷಿಲೋಕ ಕಂಗಾಲಾಗುತ್ತದೆ. ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಸಧ್ಯದ ಮಟ್ಟಿಗೆ ಅವಕಾಶವಿದೆ. ಮುಂದಿನ ದಿನಗಳು ರೈತರಿಗೆ ಸಂಕಷ್ಟವನ್ನು ತರಲಿವೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್, “ಕೇಂದ್ರ ಮತ್ತು ರಾಜ್ಯಗಳ ತೀರ್ಮಾನ ದಲ್ಲಾಳಿ ಮತ್ತು ಟ್ರೇಡರ್ ಗಳಿಗೆ ಅನುಕೂಲ ಕಲ್ಪಿಸಲಿದೆ. ಮಾರುಕಟ್ಟೆಗಳು ಇಲ್ಲವಾಗಲಿವೆ. ರೈತರಿಗೆ ದರ ಸಿಗುವುದಿಲ್ಲ. ಬೆಂಬಲ ಬೆಲೆ ನಿಗದಿಪಡಿಸಿದರು, ಅದು ರೈತರಿಗೆ ಗಗನ ಕುಸುಮವಾಗಲಿದೆ. ಕಾರ್ಪೋರೇಟ್ ಕುಳಗಳ ಮತ್ತು ಟ್ರೇಡರ್ ಗಳು ತಮಗೆ ಇಷ್ಟ ಬಂದಂತೆ ಖರೀದಿಸಲು ಅನುವುಮಾಡಿಕೊಡಲಿದೆ. ಕೊರೊನ ಸಂದರ್ಭವನ್ನು ಉಪಯೋಗಿಸಿಕೊಂಡು ಪಿತೂರಿ ನಡೆಸಲಾಗುತ್ತಿದೆ. ಟ್ರೇಡರ್, ದಲ್ಲಾಳಿ ಮತ್ತು ಕಂಪನಿಗಳಿಗೆ ಹೆಚ್ಚು ಲಾಭವಾಗುತ್ತದೆ. ರೈತರಿಗೆ ಮಾರುಕಟ್ಟೆ ಎಂಬುದು ಕನಸಾಗಲಿದೆ. ಹೊಲಗಳಿಗೆ ಹೋಗಿ ಖರೀದಿಸುವ ವ್ಯವಸ್ಥೆ ಬರಲಿದೆ. ಮಾರುಕಟ್ಟೆ ಇದ್ದರೆ ಸ್ಪರ್ಧೆ ಇರುತ್ತದೆ. ಇಲ್ಲದಿದ್ದರೆ ರೈತರು ಒಳ್ಳೆಯ ದರಕ್ಕೆ ಮಾರಾಟ ಮಾಡಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ತನ್ನ ತೀರ್ಮಾನಗಳಿಂದ ಹಿಂದೆ ಸರಿಯಬೇಕು, ಇಲ್ಲದದ್ದರೆ ಹೋರಾಟ ಅನಿವಾರ್ಯ” ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೀರ್ಮಾನಗಳ ವಿರುದ್ಧ ವ್ಯಾಪಕ ವಿರೋಧ ಕಂಡು ಬಂದಿದ್ದು ಕೊರೊನ ಲಾಕ್ ಡೌನ್ ನಡುವೆಯೂ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸುವ ಕಾರ್ಯ ನಾಳೆಯಿಂದ ಮುಂದುವರಿಯಲಿದೆ. ಕೊರೊನ ಸಂದರ್ಭದಲ್ಲಿ ರೈತ ವಿರೋಧಿ ತೀರ್ಮಾನಗಳನ್ನು ತೆಗೆದು ಕೊಳ್ಳುತ್ತಿರುವ ಸರ್ಕಾರಗಳು ಪತನದ ಹಾದಿ ಹಿಡಿಯಲಿವೆ ಎಂಬ ಮಾತುಗಳು ಕೇಳಿಬಂದಿದೆ.


ಓದಿ: ಎಪಿಎಂಸಿ ಕಾಯ್ದೆ ತಿದ್ದುಪಡಿಯ ವಿರುದ್ಧ ಲಾಕ್‌ಡೌನ್‌ ನಡುವೆಯೇ ಬೀದಿಗಿಳಿದ ರೈತರು


ವಿಡಿಯೋ ನೋಡಿ: ಕರ್ನಾಟಕ ಸರ್ಕಾರ ತೆಗೆದುಕೊಂಡ ಮೂರು ಆಘಾತಕಾರಿ, ಕರ್ನಾಟಕ ವಿರೋಧಿ ತೀರ್ಮಾನಗಳು.(facebook Live)


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...