ಆನಿ ಬಂದವು ಆನಿ ಎರಡೆರಡು ಆನಿ – ಒಂದು ಅಂಬಾನಿ, ಇನ್ನೊಂದು ಅಡಾನಿ

ಈಗಿನ ಯಡಿಯೂರಪ್ಪನವರ ಸರಕಾರ ಒಂದು ಬಾರಾ ಭಾನಗಡಿ ತಿದ್ದುಪಡಿ ಮಾಡಲಿಕ್ಕೆ ಹೊಂಟದ. ಮಿತಿಗಳನ್ನ ತೆಗೆದು ಹಾಕಿ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು ಅಂತ ಬದಲಾಯಿಸಲಿಕ್ಕೆ ಹೊಂಟದ. ಅದಕ್ಕ ಒಂದು ಅಧ್ಯಯನ ಸಮಿತಿ ಅಂತ ಮಾಡಬೇಕು, ಅದಕ್ಕ ಪೂರಕವಾದ ತಯಾರಿ ಮಾಡಿಕೊಳ್ಳಬೇಕು ಅಂತ ಮೊನ್ನೆನ ಆಯವ್ಯಯದಾಅಗ ಬರದದ.

ಉತ್ತರ ಕರ್ನಾಟಕದ ಆಯಿಗಳು ಅಂದರೆ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳನ್ನ ಒಂದು ಹಾಡು ಹೇಳಿ ಬೆಳೆಸತಾರ. ‘ಆನಿ ಬಂತು ಒಂದು ಆನಿ. ಯಾವ ಊರು ಆನಿ’ ಅಂತ. ಅವರು ಆಡಾಡತ ಹಾಡಿದ ಜನಪದ ಹಾಡು ಒಂದು ದಿನ ಖರೆ ಆಗತದ ಅಂತ ಅವರಿಗೆ ಗೊತ್ತ ಇರಲಿಲ್ಲ.

ಆದರ ಒಂದಲ್ಲ ಎರಡು ಆನಿ ಬಂದು ಬಿಟ್ಟಾವು. ಒಂದು ಅಂಬಾನಿ, ಇನ್ನೊಂದು ಅಡಾನಿ.

ಅವು ಎರಡೂ ಬರೇ ಒಂದೇ ಕ್ಷೇತ್ರದಾಗ ಬೀಡು ಬಿಟ್ಟಿಲ್ಲ. ಎಲ್ಲಾದರಾಗೂ ಬಂದಾರ. ಅಂಬಾನಿಯವರು ಚಹಾ ಕಂಪನಿಯಿಂದ ಹಿಡದು ಯುದ್ಧ ವಿಮಾನ ತಂತ್ರಜ್ಞಾನದತನಕಾ ರೊಕ್ಕ ಹೂಡ್ಯಾರ. ಅವರು ಹಳೇ ಕಾಲದಿಂದಲೂ ಇದ್ದವರು. ಕಾಂಗ್ರೆಸ್‍ನಿಂದಲೂ ಉಪಕೃತರಾದವರು, ಹಂಗ ಈಗಿನವರ ಹಂಗಿನಾಗೂ ಇರೋರು. ಈ ರಾಜಕೀಯದಾಗ ಯಾರು ಯಾರ ಹಂಗಿನ್ಯಾಗ ಇದ್ದಾರ ಅನ್ನೋದು ಹೆಂಗ ಗೊತ್ತಾಗಬೇಕು? ಇರಲಿ.

ಹೇಳೋದಿಷ್ಟ, ಅಡಾನಿಯವರು ಮಾತ್ರ ಈಗ ಬಂದವರು. ಇನ್ಸಟಂಟ ಕಾಫಿ ಇದ್ದಂಗ.

ಈ ಚಹಾ ಹಾಗೂ ಕಾಫಿ ಇಬ್ಬರೂ ಕೂಡಿ ಏನೇನೋ ಮಾಡತಿದ್ದರು. ಅದಕ್ಕ ಸರಕಾರದ ಕೃಪೆ- ಆಶೀರ್ವಾದ ನೂ ಇತ್ತು. ಆದರ ಈಗ ಈ ಚಹಾ- ಕಾಫಿ ಕಾಕಟೇಲು ಭಾಳ ಅಪಾಯಕಾರಿ ಆಗೇದ. ಅವರಿಬ್ಬರ ಕಣ್ಣು ಬಡ ಬೋರೇಗೌಡನ ಜಮೀನು ಮ್ಯಾಲೆ ಬಿದ್ದದ.

ಅದು ಹೆಂಗಪಾ ಅಂದರ ಕಾರ್ಪರೇಟು ಕಂಪನಿಗಳು ಕೃಷಿ ಜಮೀನು ಖರೀದಿ ಮಾಡಿ ಅಥವಾ ಲೀಸು ತೊಗೊಂಡು ಕೃಷಿ ಮಾಡಬಹುದು ಅನ್ನೋ ವಿಚಾರಕ್ಕ ಅವರು ಬಂದಾರ. ಅದು ಯಾಕಪ್ಪಾ ಅಂದರ ಇಡೀ ಜಗತ್ತಿನ್ಯಾಗ ಅತಿಹೆಚ್ಚು ಬೇಡಿಕೆ ಇರೋ ವಸ್ತುಗಳು ಕೆಲವೇ ಕೆಲವು- ಆಹಾರ, ನೀರು, ಆರೋಗ್ಯ – ಶಿಕ್ಷಣ ಹಾಗೂ ಹೆಂಡ. ನೀರು, ಆರೋಗ್ಯ -ಶಿಕ್ಷಣ ಹಾಗೂ ಹೆಂಡ ಅಂತೂ ಕಂಪನಿಗಳ ಕೈಯಾಗ ಅದಾವು. ಆಹಾರ ಒಂದು ಉಳಕೊಂಡಿತ್ತು. ಈಗ ಅದನ್ನೂ ಈ ಕಂಪನಿಗಳ ಉಡ್ಯಾಗ ಹಾಕಿ ಪುಣ್ಯಾ ಕಟಿಗೊಳ್ಳೋಣು ಅಂತ ಸರಕಾರ ನಿರ್ಧಾರ ಮಾಡೇದ.

ಭಾರತ ದೇಶದ ಸುಮಾರು ರಾಜ್ಯದೊಳಗ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು ಅಂತ ಕಾನೂನು ಅದ. ಆದರ ಕರ್ನಾಟಕದಾಗ ಇದು ಇರಲಿಲ್ಲ. ಯಾಕಂದ್ರ ಬಡವರು ಬೆಳಗಾಗೆದ್ದು ನೆನೆಯೋ ನಾಯಕರಾದ ದೇವರಾಜ ಅರಸರು ರೈತರಿಗೆ ಇರೋದು ಜಮೀನೊಂದೇ. ಅದೂ ಅವರ ಕೈತಪ್ಪಿ ಹೋಗಬಾರದು ಅಂತ ಹೇಳಿ ಕರ್ನಾಟಕ ಜಮೀನು ಸುಧಾರಣಾ ಕಾಯಿದೆ ಹಾಗೂ ಕಂದಾಯ ಕಾಯಿದೆ ಅಂತ ಮಾಡಿದರು. ಅದರ ಪ್ರಕಾರ ರೈತರ ಮಕ್ಕಳು ಮಾತ್ರ ಕೃಷಿ ಜಮೀನು ಖರೀದಿಸಬಹುದು. ಅದಕ್ಕ ಅವರು ತಮ್ಮ ಕುಟುಂಬದವರಲ್ಲಿ ಕೃಷಿ ಜಮೀನು ಮೊದಲಿನಿಂದಲೂ ಇದೆ ಅಂತ ಪುರಾವೆ ತೋರಿಸಬೇಕು. ಅಷ್ಟೇ ಅಲ್ಲದೇ ವಾರ್ಷಿಕ ಕೇವಲ ಎರಡೂವರೆ ಲಕ್ಷ ರೂಪಾಯಿಗಿಂತ ಹೆಚ್ಚು ವರಮಾನ ಇರೋರು ಖರೀದಿ ಮಾಡಲಿಕ್ಕೆ ಬರೋದಿಲ್ಲ, ಅಂತ ಅದರಲ್ಲಿ ಬರೆದರು. ಸಮಾಜವಾದಿ ನಾಯಕ ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿದ್ದಾಗ ಅದನ್ನು 25 ಲಕ್ಷ ಅಂತ ತಿದ್ದುಪಡಿ ಮಾಡಿದರು.

ಈಗಿನ ಯಡಿಯೂರಪ್ಪನವರ ಸರಕಾರ ಒಂದು ಬಾರಾ ಭಾನಗಡಿ ತಿದ್ದುಪಡಿ ಮಾಡಲಿಕ್ಕೆ ಹೊಂಟದ. ಈ ಮಿತಿಗಳನ್ನ ತೆಗೆದುಹಾಕಿ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು ಅಂತ ಬದಲಾಯಿಸಲಿಕ್ಕೆ ಹೊಂಟದ. ಅದಕ್ಕ ಒಂದು ಅಧ್ಯಯನ ಸಮಿತಿ ಅಂತ ಮಾಡಬೇಕು, ಅದಕ್ಕ ಪೂರಕವಾದ ತಯಾರಿ ಮಾಡಿಕೊಳ್ಳಬೇಕು ಅಂತ ಮೊನ್ನೆನ ಆಯವ್ಯಯದಾಗ ಬರದದ.

ಇದರಿಂದ ಏನಾಗತದ ಅಂದರ ಕಾರ್ಪೊರೇಟು ಕಂಪನಿಗಳು ಇಡೀ ಹಳ್ಳಿಗಳನ್ನೇ ಲೀಸಿಗೆ ತೊಗೋಬಹುದು. ಈ ಲೀಸು ಹತ್ತು ವರ್ಷದಿಂದ ಹಿಡಕೊಂಡು 99 ವರ್ಷದ ತನಕಾನೂ ಆಗಬಹುದು. ಅಲ್ಲಿ ತನಕಾ ಆ ಜಮೀನು ರೈತರ ಒಡೆತನದಾಗ ಇರೋದಿಲ್ಲ. ಒಬ್ಬ ರೈತ ಒಮ್ಮೆ ನೂರು ವರ್ಷ ಲೀಸು ಕೊಟ್ಟಾ ಅಂದರ ನಾಕು ತಲೆಮಾರಿನ ತನಕಾ ಅವರು ಅದನ್ನ ಮಾರಲಿಕ್ಕೆ ಬರಂಗಿಲ್ಲ. ಆ ಜಮೀನಿನ್ಯಾಗ ಏನು ಬೆಳೀಬೇಕು, ಏನು ಬೇಳೀಬಾರದು ಅಂತ ಅವರು ಹೇಳಲಿಕ್ಕೆ ಬರಂಗಿಲ್ಲಾ.

ರೈತರಿಗೆ ತಿಂಗಳಿಗೆ ಇಷ್ಟು ಅಂತ `ರಿಟೇನರಷಿಪ್’ (ಅಂದರ ಜಮೀನು ಕೊಟ್ಟದ್ದಕ್ಕ ಆ ರೈತ ಜೀವ ಉಳಿಸಿಕೊಳ್ಳಲಿ ಅಂತ ಅವರು ಕೊಡೋ ತಿರುಪೆ) ಕೊಡತಾರ. ನಮ್ಮ ರಾಜ್ಯದಾಗ 80 ಶೇಕಡಾ ರೈತರು ಐದು ಎಕರೆಗೂ ಕಮ್ಮಿ ಜಮೀನು ಹೊಂದಿದವರು ಇದ್ದಾರ. ಅವರಿಗೆ ಇರೋ ಆಸ್ತಿ ಅಂದರ ಅದೊಂದ. ಅವರು ಅದನ್ನೂ ಕಳಕೊಂಡರ ಅಕ್ಷರಶ ಜೀವಚ್ಛವ ಆಗಿ ಓಡಾಡಲಿಕ್ಕೆ ಹತ್ತತಾರ.

ಇನ್ನ ಇಡೀ ಊರು- ಅಥವಾ ಹೋಬಳಿ ಅಥವಾ ತಾಲೂಕು ಒಂದು ಕಂಪನಿ ಕೈಯ್ಯಾಗ ಹೋಗೋದಕ್ಕ ಅವರು ಅಲ್ಲಿನ ಆಹಾರ ಉತ್ಪಾದನೆಯನ್ನ ಸಂಪೂರ್ಣವಾಗಿ ತಮ್ಮ ಕೈಯ್ಯಾಗ ತೊಗೋಬಹುದು. ಜ್ವಾಳ- ಬ್ಯಾಳಿ- ಕಾಳು ಬಿಟ್ಟು ಯಾವುದೋ ಕಂಪನಿಗೆ ಬೇಕಾದ ಕಚ್ಚಾ ವಸ್ತು ಬೆಳೀಬಹುದು. ಒಂದು ಭೂಪ್ರದೇಶಕ್ಕ ತಾಳಲಾರದ ಇನ್ನೊಂದು ಪ್ರದೇಶದ ಬೆಳಿ ಬೆಳದು ಮಣ್ಣು- ನೀರು ಹಾಳು ಮಾಡಬಹುದು. ಅತಿ ಗೊಬ್ಬರ- ಅತಿ ನೀರಾವರಿ ಮಾಡಿ ಆ ಮಣ್ಣು ಬರಬಾದು ಮಾಡಬಹುದು. ಇದನ್ನು ಯಾರೂ ಮಾತನಾಡಲಿಕ್ಕೆ ಆಗಂಗಿಲ್ಲ. ಇನ್ನು ಲೀಸು ತೊಗೊಂಡ ಕಂಪನಿ, ತಂಬಾಕು- ಕಾಫಿ- ಕಬ್ಬು- ರಬ್ಬರು -ಸ್ಟೀವಿಯಾ- ನೀಲಗಿರಿ – ಮಣ್ಣು ಮಸಿ ಅಂತ ಏನರ ಬೆಳದು ಕೋಟ್ಯಂತರ ರೂಪಾಯಿ ಲಾಭ ಮಾಡಿದರೂ ಸಹ ರೈತರಿಗೆ ಮೊದಲಿಗೆ ಒಪ್ಪಿಕೊಂಡಷ್ಟ ಕೊಡತದ. ಇದನ್ನ ಏರಿಸೂ ಅಂತ ಕೇಳೋ ಹಂಗ ಇರಂಗಿಲ್ಲ. ಈಗ ರೈತಸಂಘದವರಿಗೆ ಕಬ್ಬಿನ ಕಾರ್ಖಾನಿ ಮಾಲಿಕರಿಂದ ಬಾಕಿ ಬಿಡಿಸಿಕೊಳ್ಳಲಿಕ್ಕೆ ಅಗವಲ್ಲದು. ಇನ್ನು ನಾಳೆ ಆನಿ ಕಂಪನಿ ಸೊಂಡಿಯೊಳಗಿಂದ ಕಬ್ಬಿನ ತುಂಡು ಹೆರೀಲಿಕ್ಕೆ ಆಗತದ?

ಸಾವಿರಾರು ಎಕರೆ ಏಕ ಬೆಳೆ ಪದ್ಧತಿ- ಪರಿಸರ ನಾಶ- ಹಾನಿಕಾರಕ ರಿಟೇನರ್ ಪಾವತಿ- ಆಹಾರದ ಏಕಸ್ವಾಮ್ಯ ಇಂಥಾವು ಎಲ್ಲಾ ಆಗಬಹುದು. ಆದರ ಇದರ ಅಪಾಯಗಳ ಬಗ್ಗೆ ಇನ್ನೂ ಯಾರೂ ದನಿ ಎತ್ತವಲ್ಲರು. ಬೆಲೆ ಕಮ್ಮಿ ಅಂತ ಹೇಳಿ ಟೊಮ್ಯಾಟೋ ತೊಗೊಂಡು ಬಂದು ರಸ್ತೆಯೊಳಗ ಹಾಕೋ ರೈತಸಂಘದವರು ಈ ಮಹಾ ಮಾರಿಯ ಜೊತೆ ಹೆಂಗ ಯುದ್ಧ ಮಾಡಬಹುದು ಅಂತ ವಿಚಾರನ ಮಾಡಿಲ್ಲ.

ನಮ್ಮ ದುರಾದೃಷ್ಟಕ್ಕ ಕರ್ನಾಟಕದ ಸುಮಾರು ಶೇಕಡಾ 70ರಷ್ಟು ಇರೋ ರೈತರ ಜೀವನದ ಕೊಡಲಿಯ ಕಾವು ಆಗಬಹುದಾದ ಈ ಕಾನೂನು ತಿದ್ದುಪಡಿಯ ಬಗ್ಗೆ ನಮ್ಮ ವಿಧಾನಮಂಡಲದಾಗ ಚರ್ಚೆ ಆಗಲೇ ಇಲ್ಲ. ಅದು ಯಾರಿಗೂ ಮಾತನಾಡುವಷ್ಟು ಗಂಭೀರ ಅಂತ ಅನ್ನಿಸಲೇ ಇಲ್ಲೋ ಏನೋ?

ಅಪ್ರತಿಮ ನಾಯಕ ಶಕ್ತಿಮಾನ್‍ನ ಎದುರಿಗೆ ಕೈಕಟ್ಟಿಕೊಂಡು `ಎಸ್ ಸರ್’ ಅಂತ ಹಾಜರಾತಿ ನೀಡುವ ಆಳುವ ಪಕ್ಷದವರಂತೂ ಬಿಡ್ರಿ, ಸರಕಾರದ ಮ್ಯಾಲೆ ಕಣ್ಣು ಇಡಲಿಕ್ಕೆ ಅಂತನ ಇರುವ ವಿರೋಧ ಪಕ್ಷದ ಹದ್ದುಗಳು ಸಹಿತ ಸುಮ್ಮನೇ ಕೂತಾವ. ಯಾಕಂದರ ಈ ದೇಶದಾಗ ಆಡಳಿತ ಪಕ್ಷ- ವಿರೋಧ ಪಕ್ಷ ಅಂತ ಇಲ್ಲ. ಇಲ್ಲಿ ಇರೋದು ಬರೇ ಇಂದಿನ ಆಡಳಿತ ಪಕ್ಷ- ನಿನ್ನೆಯ ಆಡಳಿತ ಪಕ್ಷ ಹಾಗೂ ನಾಳೆಯ ಆಡಳಿತ ಪಕ್ಷ ಅಂತ ಮಾತ್ರ. ಇವರು ಇವತ್ತು ಆನಿ- ಕುದರಿ ಕಂಪನಿಗಳನ್ನ ಚನ್ನಾಗಿ ನೋಡಿಕೊಂಡರೆ ನಾಳೆ ಅವರು ಅಧಿಕಾರಕ್ಕ ಬರಲು ಅವರು ಸಹಾಯ ಮಾಡತಾರ. ಇಲ್ಲಾಂದರ ಬರೇ ಒಂದ ಪಕ್ಷದ ಆಡಳಿತ ನೋಡಬೇಕಾಗತದ. ಅಥವಾ ಆಡಳಿತದಾಗಿರೋ ಪಕ್ಷ ಸೇರಿಕೋಬೇಕಾಗತದ. ರಾಜಮಹಾರಾಜರೇ ಪಕ್ಷ ಬಿಟ್ಟು ಹೋಗಲಿಕ್ಕೆ ಹತ್ತಾಗ ಅಧಿಕಾರದಿಂದ ದೂರ ಇರೋ ವೆಂಕಾ- ನೊಣಾ- ಸೀನಾನಂಥವರು ಯಾಕ ಸುಮ್ಮನೇ ಇರತಾರ?

ಕೃಷಿ ಭೂಮಿ ಮಾರಾಟಕ್ಕ ಮಿತಿ ಇರೋದರಿಂದನ ಇಲ್ಲಿ ಉದ್ಯಮ ಅಭಿವೃದ್ಧಿ ಹೊಂದಿಲ್ಲ ಅನ್ನೋ ಅರ್ಥಹೀನ ವಾದವನ್ನ ಕಂಪನಿಗಳು ಮಂಡಸಲಿಕ್ಕೆ ಹತ್ಯಾವು. ಅವರಿಗಿಂತ ಜೋರಾಗಿ ನಮ್ಮನ್ನಾಳುವ ರಾಜಕಾರಣಿಗಳೇ ಇದರ ಬಗ್ಗೆ ಮಾತಾಡಲಿಕ್ಕೆ ಹತ್ಯಾರ. ಭೂಮಿ ಇದ್ದರೆ ಬಂಡವಾಳ, ಬಂಡವಾಳ ಬಂದರೆ ಉದ್ದಿಮೆ, ಉದ್ದಿಮೆ ಇದ್ದರೆ ಉದ್ಯೋಗ, ಉದ್ಯೋಗ ಇದ್ದರೆ ಅಭಿವೃದ್ಧಿ ಅನ್ನೋ ಮಂತ್ರ ಜಪಿಸಲಿಕ್ಕೆ ಹತ್ಯಾರ. ಆದರ ಅಭಿವೃದ್ಧಿ ಅನ್ನೋದು ಮಾಯಾ ಮೋಹಿನಿ. ಅದರ ಬೆನ್ನು ಹತ್ತಿದರ ತಿರಗಿ ಬರಲಿಕ್ಕೆ ಆಗೋದಿಲ್ಲ. ಆ ದಾರಿಯೊಳಗ ಹೋಗಬೇಕಾದರ ನೆಮ್ಮದಿ ಅನ್ನೋದನ್ನ ಬಿಟ್ಟುಹೋಗಬೇಕಾಗತದ. ಪರಿಸರ ನಾಶ ಸಹಿಸಿಕೊಳ್ಳಬೇಕಾಗತದ. ಕಾಲ ಮಿಂಚಿ ಹೋಗೋದರಾಗ ಇದು ನಮ್ಮೆಲ್ಲರಿಗೂ ತಿಳೀಬೇಕಾಗತದ. ಅಲ್ಲವೇ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here