HomeUncategorizedರೈತರ ಪರವಾಗಿ ಬಲಪಡಿಸಬೇಕಿದ್ದ APMCಗಳನ್ನು ಕಾರ್ಪೋರೇಟ್ ಪರವಾಗಿ ದುರ್ಬಲಗೊಳಿಸಲಾಗುತ್ತಿದೆ

ರೈತರ ಪರವಾಗಿ ಬಲಪಡಿಸಬೇಕಿದ್ದ APMCಗಳನ್ನು ಕಾರ್ಪೋರೇಟ್ ಪರವಾಗಿ ದುರ್ಬಲಗೊಳಿಸಲಾಗುತ್ತಿದೆ

- Advertisement -
- Advertisement -

ದೀರ್ಘಕಾಲದ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದ್ದ ಭಾರತದ ಮೇಲೆ ಎರಗಿರುವ ಕರೋನಾ ವೈರಸ್ ಉಂಟು ಮಾಡಿರುವ ಪರಿಣಾಮಗಳನ್ನು ಲೆಕ್ಕ ಹಾಕಲು ಸಾಕಷ್ಟು ದಿನಗಳೇ ಬೇಕಾದೀತು. ನೋಟು ರದ್ದು, ಜಿಎಸ್‌ಟಿ ಮತ್ತಿತರ ಸರ್ಕಾರದ ಕ್ರಮಗಳ ಕಾರಣ ಕುಂಟುತ್ತಾ, ತೆವಳುತ್ತಾ ಸಾಗುತ್ತಿದ್ದ ನಮ್ಮ ಆರ್ಥಿಕತೆ ವೈರಸ್ ದಾಳಿಯಲ್ಲಿ ನಲುಗುತ್ತಿದೆ. ಇಂತಹ ಸಂದರ್ಭದಲ್ಲೂ ಭಾರತದ ಆಳುವ ವರ್ಗಗಳು ತಮ್ಮ ದುರ್ಲಾಭದ ಕೊಳ್ಳೆಯಲ್ಲೇ ನಿರತವಾಗಿವೆ. ಸ್ವತಂತ್ರ ಭಾರತದ ಅತಿದೊಡ್ಡ ಬಂಡವಾಳಿಗರ ಪರ ಸರ್ಕಾರವೆಂದೇ ಕುಖ್ಯಾತಿ ಪಡೆದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ಕೃಷಿ ಮಾರುಕಟ್ಟೆಯನ್ನು ದೊಡ್ಡ ಕಾರ್ಪೊರೇಟ್ ಕಂಪನಿಗಳ, ಬಹುರಾಷ್ಟ್ರೀಯ ಕಂಪನಿಗಳ ಪಾದದಡಿಯಲ್ಲಿಡಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಬದಲಿಸಲು ರಾಜ್ಯಗಳ ಮೇಲೆ ಕಾನೂನುಬಾಹಿರ ಒತ್ತಡ ಹಾಕುತ್ತಿದೆ.

ಹಿಂದೆ ಈ ರೀತಿ ಪ್ರಯತ್ನಿಸಿದಾಗಲೆಲ್ಲಾ ರೈತರ ಪ್ರತಿರೋಧ ಎದುರಿಸಿದ್ದ ಸರ್ಕಾರಗಳು ಹಿಂದೆ ಸರಿದಿದ್ದವು. ಸಾಂಕ್ರಾಮಿಕ ರೋಗ ತಡೆಗಟ್ಟುವ ಲಾಕ್‌ಡೌನ್‌ನಲ್ಲಿ ಇಡೀ ದೇಶ ಇರುವಂತಹ ಸಂದರ್ಭವನ್ನು ಬಳಸಿ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುವಂತೆ ಮೇ 5, 2020 ರಂದು ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ಕಾರ್ಯದರ್ಶಿ ಸಂಜಯ್ ಆಗರ್ವಾಲ್‌ರವರು ಈ ಇಲಾಖೆಗಳನ್ನು ನೋಡಿಕೊಳ್ಳುವ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕದೇವಿರವರಿಗೆ ಪತ್ರ ಬರೆದಿದೆ. ಈ ನಿರ್ದೇಶನದ ಆನ್ವಯ ಯಡಿಯೂರಪ್ಪರವರು ಸಂಪುಟದಲ್ಲಿ ತೀರ್ಮಾನ ಮಾಡದೇ ತರಾತುರಿಯಲ್ಲಿ ಸುಗ್ರಿವಾಜ್ಞೆ ಹೊರಡಿಸಿ ರಾಜ್ಯಪಾಲರ ಸಹಿಗೆ ಕಳುಹಿಸಿದ್ದರು. ಈಗ ಇದೇ ಕಾರಣ ಹೇಳಿ ರಾಜ್ಯಪಾಲರು ಸಹಿ ಹಾಕದೇ ವಾಪಸ್ಸು ಮಾಡಿದ್ದಾರೆ. ರಾಜ್ಯದ ಜನ ಬೀದಿಗೆ ಬಂದು ಪ್ರತಿಭಟಿಸಲು ಸಾಧ್ಯವಾಗದ ನಿರ್ಬಂಧದ ಪ್ರಯೋಜನ ಪಡೆಯಲು ಮತ್ತೆ ಸಂಪುಟದ ಒಪ್ಪಿಗೆ ಪಡೆದು ರಾಜ್ಯಪಾಲರ ಸಹಿಗೆ ಶಿಫಾರಸು ಮಾಡುವ ಅಪಾಯ ಇದ್ದೇ ಇದೆ.

ಇಷ್ಟೊಂದು ತರಾತುರಿಯಲ್ಲಿ ಸುಗ್ರಿವಾಜ್ಞೆ ತರುವಂತೆ ಒತ್ತಡ ಹೇರುತ್ತಿರುವ ಕಾಯ್ದೆಯ ಸ್ವರೂಪ ಏನು ಮತ್ತು ಹಿಂದೆ ಇದ್ದ ಕಾಯ್ದೆ ಸ್ವರೂಪ ಏನು ಎಂಬ ಬಗ್ಗೆ ಸ್ವಲ್ಪ ನೋಡೋಣ.

ಕೃಷಿ ಮಾರುಕಟ್ಟೆ ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯವಾದ್ದರಿಂದ ನೇರವಾಗಿ ಕಾಯಿದೆ ಅಂಗೀಕರಿಸಲು ಸಾಧ್ಯವಿಲ್ಲದ್ದರಿಂದ ಕೇಂದ್ರ ಸರ್ಕಾರವು ಮಾದರಿ ಕೃಷಿ ಉತ್ಪನ್ನ ಹಾಗೂ ಜಾನುವಾರು ಮಾರುಕಟ್ಟೆ ಕಾಯಿದೆ 2017 ಅನ್ನು ರಚಿಸಿ ಎಲ್ಲಾ ರಾಜ್ಯಗಳಿಗೆ ಈ ಮಾದರಿಯಲ್ಲಿ ತಮ್ಮ ಎಪಿಎಂಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವಂತೆ ಸೂಚಿಸಿತ್ತು. ಈ ಸೂಚನೆ ಪಾಲಿಸದಿದ್ದರೆ ಅನುದಾನ ನೀಡುವುದಿಲ್ಲ ಎಂಬ ಬೆದರಿಕೆಯನ್ನು ಸಹ ಹಾಕಿತ್ತು. ಈ ಹಿಂದೆ ಇದೇ ಸ್ವರೂಪದ ಮಾದರಿ ಮಾರುಕಟ್ಟೆ ಕಾಯ್ದೆ 2003ಅನ್ನು ರಾಜ್ಯ ಸರ್ಕಾರ ಅಂಗೀಕರಿಸಲು ನಡೆಸಿದ ಪ್ರಯತ್ನವು ಎರಡು ಬಾರಿ ಇಡೀ ರಾಜ್ಯದ ಮಂಡಿಗಳನ್ನು ಮುಚ್ಚಿ ಪ್ರತಿಭಟಿಸಿದ ಪರಿಣಾಮ ಹಾಗೂ ರೈತ ಸಂಘಗಳ ಒಕ್ಕೊರಲ ವಿರೋಧದ ಕಾರಣ ವಿಫಲವಾಗಿತ್ತು. ಆದರೂ ಎಪಿಎಂಸಿ ಮಂಡಿಗಳಾಚೆ ಸಮಿತಿಗಳ ಅಧಿಕಾರ ಹಾಗೂ ಕಾರ್ಯವ್ಯಾಪ್ತಿಯನ್ನು ನಿರ್ಬಂಧಿಸುವುದೊಂದನ್ನು ಹೊರತುಪಡಿಸಿ ಉಳಿದ ಅಂಶಗಳಾದ ಗೋಡೌನ್ -ಕೋಲ್ಡ್ ಸ್ಟೋರೆಜ್, ಹಣ್ಣು-ತರಕಾರಿ ಮಾರಾಟ, ಖಾಸಗಿ ಮಾರುಕಟ್ಟೆ, ನೇರ ಮಾರಾಟ ಮತ್ತು ಆನ್‌ಲೈನ್ ವಹಿವಾಟು ಮುಂತಾದ ಕ್ಷೇತ್ರಗಳಲ್ಲಿ ಮಾದರಿ ಕೃಷಿ ಉತ್ಪನ್ನ ಹಾಗೂ ಜಾನುವಾರು ಮಾರಾಟ ಕಾಯ್ದೆ 2017ಅನ್ನು ಜಾರಿ ಮಾಡಿದೆ. ಕೊನೆಯದಾಗಿ ಉಳಿದುಕೊಂಡಿರುವ ಜನಪ್ರತಿನಿಧಿಗಳ ಆಡಳಿತ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ತೆಗೆದು ಹಾಕಿದರೆ ಎಲ್ಲಾ ಎಪಿಎಂಸಿ ಮಾರುಕಟ್ಟೆಗಳು ಶಾಶ್ವತವಾಗಿ ಮುಚ್ಚಿ ಹಮಾಲರು ಚಿಲ್ಲರೆ ವ್ಯಾಪಾರಿಗಳು ದಿವಾಳಿಯಾಗಿ, ರೈತರು ಅದರಲ್ಲೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ತಮ್ಮ ಉತ್ಪನ್ನಗಳಿಗೆ ಖರೀದಿದಾರರೇ ಇಲ್ಲದೇ ಕೃಷಿ ಸಹವಾಸವೇ ಬೇಡ ಎಂದು ಕೃಷಿಯಿಂದ ಹೊರಗುಳಿಯುವ ಬಲವಂತ ಏರ್ಪಡಲಿದೆ. ಸರ್ಕಾರಿ ಖರೀದಿ ವ್ಯವಸ್ಥೆ ಇಲ್ಲದೇ ಅಂತಿಮವಾಗಿ ಆಹಾರ ಭದ್ರತೆಗೆ ದೊಡ್ಡ ಆಪತ್ತಿಗೆ ಎಡೆ ಮಾಡಿಕೊಡಲಿದೆ.

ನಿಯಂತ್ರಿತ ಮಾರುಕಟ್ಟೆಗಳ ಸ್ವರೂಪ

ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಅನುಭವಿಸುತ್ತಿದ್ದ ವಿವಿಧ ರೀತಿಯ ಮೋಸ, ವಂಚನೆ ಹಾಗೂ ಸೂಕ್ತ ದರ ಪಡೆಯಲು ಇದ್ದ ಸಮಸ್ಯೆ ನಿವಾರಣೆ ಜೊತೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ, ಆಹಾರ ಭದ್ರತೆ ಉದ್ದೇಶಕ್ಕಾಗಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ -1966ಅನ್ನು ಜಾರಿಗೆ ತರಲಾಯಿತು. ರಾಜ್ಯದ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ-1966 ಮತ್ತು ನಿಯಮಗಳು-1968ರ ಕಲಂ 8ರ 66, 67 ಮತ್ತು 70ರಂತೆ ಎಪಿಎಂಸಿಯ ಹೊರಗೆ ನಡೆಯುವ ವಹಿವಾಟಿನ ಮೇಲೆ ಎಪಿಎಂಸಿಯು ನಿಯಂತ್ರಣವನ್ನು ಹೊಂದಿರುತ್ತದೆ.

ಎಪಿಎAಸಿ ಅಂದರೆ ಮಾರುಕಟ್ಟೆಯನ್ನು ರೈತರು ತಮ್ಮ ಕೃಷಿ ಉತ್ಪನ್ನಗಳ ಮಾರಾಟದ ಸಂದರ್ಭದಲ್ಲಿ ಶೋಷಣೆಗೆ ಒಳಗಾಗದಂತೆ ನಿಯಂತ್ರಣ ಹಾಗೂ ನಿಗಾವಣೆಯಲ್ಲಿ ಇಡುವಂತಹ ವ್ಯವಸ್ಥೆ. ಲೈಸೆನ್ಸ್ ಟು ಪ್ರೊಕ್ಯರ್, ಲೈಸೆನ್ಸ್ ಟು ಪರ್ಚೇಸ್, ಲೈಸೆನ್ಸ್ ಟು ಟ್ರಾನ್ಸ್ಫರ್ ಅಂದರೆ ಖರೀದಿ, ಸಂಗ್ರಹಣೆ, ಸಾಗಾಣಿಕೆಗೆ ಲೈಸೆನ್ಸ್ಅನ್ನು ಎಪಿಎಂಸಿ ಮೂಲಕ ಪಡೆದ ನೋಂದಾಯಿತರಿಗೆ ಮಾತ್ರ ವ್ಯವಹಾರ ಮಾಡಲು ಅವಕಾಶ ನೀಡಿ, ಪ್ರಾಂಗಣದ ಒಳಗೆ ಸ್ಪರ್ಧಾತ್ಮಕ ದರ ಪಡೆಯುವಂತೆ ಅವಕಾಶ ಕಲ್ಪಿಸುವುದು. ಮಾರಾಟ ಮಾಡಿದ ನಂತರ ಹಣ ಪಡೆಯುವ ಖಾತರಿಯನ್ನೂ ಎಪಿಎಂಸಿ ಕಲ್ಪಿಸುತ್ತದೆ. ಈ ವಿಷಯಗಳನ್ನು ವಿವಿಧ ಕಲಂ, ಸೆಕ್ಷನ್‌ಗಳು ವಿವರಿಸುತ್ತವೆ.

ಎಪಿಎಂಸಿಯಾಚೆಯೂ ರೈತರಿಂದ ಕೃಷಿ ಉತ್ಪನ್ನಗಳನ್ನು ಲೈಸೆನ್ಸ್ ಹೊಂದಿಲ್ಲದ ವರ್ತಕರು ಖರೀದಿಸುವಂತಿಲ್ಲ ಮತ್ತು ವರ್ತಕರು ಮನಬಂದಂತೆ ರೈತರ ಶೋಷಣೆಯನ್ನು ನಡೆಸಲು ಮತ್ತು ವಂಚಿಸಲು ಅವಕಾಶ ಕೊಡುವುದಿಲ್ಲ. ಈ ರೀತಿಯ ನಿಯಮಗಳನ್ವಯ ನಡೆಯದಿದ್ದಲ್ಲಿ ಅಂತಹ ವರ್ತಕರ ಮೇಲೆ ಕಲಂ 114, 116 ಅಥವಾ 117ರಂತೆ ಕ್ರಿಮಿನಲ್ ದಾವೆ ಹೂಡಲು ಅವಕಾಶಗಳಿತ್ತು.

ಎಷ್ಟೇ ನಿಬಂಧನೆಗಳು, ನೀತಿ ನಿಯಮಗಳು ಇದ್ದಾಗ್ಯೂ ಎಪಿಎಂಸಿ ಸಮಿತಿಗಳಿಗೆ ಆಯ್ಕೆ ಆಗುತ್ತಿದ್ದ ಜನಪ್ರತಿನಿಧಿಗಳು, ಕಮಿಷನ್ ಏಜೆಂಟ್‌ಗಳು ಹಾಗೂ ವ್ಯಾಪಾರಿಗಳ ನಡುವೆ ಏರ್ಪಟ್ಟಿದ್ದ ಆಕ್ರಮ ಮೈತ್ರಿಯಿಂದಾಗಿ ವಾಸ್ತವದಲ್ಲಿ ಇವು ರೈತ ವಿರೋಧಿಗಳಾಗಿ ರೂಪುಗೊಂಡವು. ಈ ರೈತ ವಿರೋಧಿ ಶಕ್ತಿಗಳು ತಮ್ಮ ಪ್ರಾಬಲ್ಯವನ್ನು ಬಳಸಿ ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸುತ್ತಾ, ದುರ್ಬಲಗೊಳಿಸುತ್ತಾ ಬಂದವು. ಹಳದಿ ಚೀಟಿ ಅಂದರೆ ಎಪಿಎಂಸಿ ವ್ಯವಹಾರ, ಬಿಳಿಚೀಟಿ ವ್ಯವಹಾರ ಅಂದರೆ ಎಪಿಎಂಸಿ ಮಾರುಕಟ್ಟೆ ಒಳಗೆ ಎಪಿಎಂಸಿಗೆ ಗೊತ್ತಾಗದಂತೆ ಮಾರಾಟ ಮಾಡುವುದು ಇದೂ ನಡೆಯುತ್ತಿತ್ತು. ಒಂದು ಅಂದಾಜಿನ ಪ್ರಕಾರ ಇದು 25-75ರ ಪ್ರಮಾಣದಲ್ಲಿ ನಡೆಯುತ್ತಿದೆ. ಹೀಗಿದ್ದರೂ ಸ್ವಲ್ಪ ಮಟ್ಟಿಗಾದರೂ ಸಹಾಯಕವಾಗಿದ್ದವು. ಎಲ್ಲಿ ರೈತರು ಸಂಘಟಿತರಾಗಿ ಮಾತಾಡಲು ಸಾಧ್ಯವೋ ಅಂತಹ ಕಡೆ ಮತ್ತು ಒಂದಷ್ಟು ಪ್ರಮಾಣದಲ್ಲಾದರೂ ನಿಯಂತ್ರಣವಿದ್ದರೆ, ಅದರ ಪ್ರಭಾವ ಒಟ್ಟಾರೆ ಮಾರುಕಟ್ಟೆಯ ಮೇಲೆ ಇರುತ್ತಿತ್ತು. ಎಷ್ಟೇ ಸಮಸ್ಯೆಗಳಿದ್ದರೂ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳ ಹರಾಜಿನಲ್ಲಿ ವ್ಯಾಪಾರಿಗಳು ಸ್ಪರ್ಧೆ ಮಾಡಿ ಸರಕುಗಳನ್ನು ಕೊಳ್ಳಬೇಕಿತ್ತು. ರೈತರು ಒಟ್ಟುಗೂಡಿ ಕಾದಾಟಕ್ಕೆ ನಿಂತರೆ, ಜಾಗೃತರಾದರೆ ಜಾರಿ ಮಾಡಿಸಿಕೊಳ್ಳಲು ಒಂದು ಕಾಯ್ದೆಯಾದರೂ ಇತ್ತು.

ಕರ್ನಾಟಕದಲ್ಲಿ 177 ಕೃಷಿ ಮಾರುಕಟ್ಟೆಗಳಲ್ಲದೇ, ಹಲವಾರು ಉಪಮಾರುಕಟ್ಟೆಗಳೂ ಇವೆ. ಈ ಮಾರುಕಟ್ಟೆಗಳಲ್ಲಿ ಇದ್ದ ನ್ಯೂನತೆಗಳನ್ನು ಸರಿಪಡಿಸಿ ರೈತ ಸಮುದಾಯದ ಹಿತ ಕಾಪಾಡಬೇಕಿದ್ದ ಸರ್ಕಾರಗಳು, ತಾವೇ ಸೃಷ್ಟಿಸಿ, ಪೋಷಿಸಿದ್ದ ನ್ಯೂನತೆಗಳನ್ನು ನೆಪ ಮಾಡಿ ಮಾರುಕಟ್ಟೆಯನ್ನೇ ಮುಚ್ಚಿ, ಕಾರ್ಪೊರೇಟ್‌ಗಳ ಬಲಾಢ್ಯ ಖರೀದಿದಾರರ ಹಿಡಿತಕ್ಕೆ ಒಪ್ಪಿಸುತ್ತಿವೆ. ಎಪಿಎಂಸಿಯು ಕೇವಲ ಒಂದು ಮಂಡಿಯಾಗಿಬಿಡುವುದರಿAದ ಅದರ ಮಹತ್ವವು ಕಳೆದು ಹೋಗುತ್ತದೆ. ಇಂದಿನ ಸಗಟು ಮಾರಾಟಗಾರರೇ ಮುಂದೆಯೂ ಪ್ರಾಬಲ್ಯ ಹೊಂದಿರುವುದಿಲ್ಲ. ಆ ಜಾಗದಲ್ಲಿ ರಿಲೆಯನ್ಸ್ ಫ್ರೆಶ್, ಅದಾನಿ ಗ್ರೂಪ್, ಮೋರ್, ಬಿಗ್ ಬ್ಯಾಸ್ಕೆಟ್‌ನಂತಹ ದೊಡ್ಡ ಕಾರ್ಪೋರೇಟ್‌ಗಳು ಬರುತ್ತಾರೆ ಮತ್ತು ತಳಮಟ್ಟದಲ್ಲಿ ನಿಧಾನಕ್ಕೆ ಏಕಸ್ವಾಮ್ಯ ಸಾಧಿಸುತ್ತಾ ಹೋಗುತ್ತಾರೆ. ಇದರಿಂದ ಸಣ್ಣ ಹಿಡುವಳಿದಾರರೇ ಅಧಿಕ ಪ್ರಮಾಣದಲ್ಲಿರುವ ಈ ದೇಶದ ರೈತಾಪಿ ಮಂಡಿಯೂರುತ್ತಾ ಹೋಗಬೇಕಾಗುತ್ತದೆ.

ಕಳೆದ ಸರಿಸುಮಾರು ಮೂವತ್ತು ವರ್ಷಗಳ ಜಾಗತೀಕರಣ ಧೋರಣೆಗಳಿಗೆ ನಮ್ಮ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯದ ಕಾರಣದಿಂದ ಇಡೀ ಕೃಷಿ ಕ್ಷೇತ್ರವನ್ನು ರೈತಾಪಿ ಕೃಷಿಯಿಂದ ಕಾರ್ಪೊರೇಟ್ ಕೃಷಿಗೆ ರೂಪಾಂತರಗೊಳಿಸುವ ಸಂರಚನಾ ಹೊಂದಾಣಿಕೆಗಾಗಿ ಇಂತಹ ಸುಗ್ರಿವಾಜ್ಞೆಗಳು ಬರುತ್ತಿವೆ. ಒಂದು ಕಡೆ ಬೆಳೆ ಬೆಳೆಯುವ ಸಾಮಗ್ರಿಗಳ ಬಹುತೇಕ ಲಾಗುವಾಡುಗಳನ್ನು ಕಾರ್ಪೊರೇಟ್‌ಗಳು ನಿಯಂತ್ರಿಸುತ್ತಿವೆ. ಭಾರತದ ಚಿಲ್ಲರೆ ವ್ಯಾಪಾರದ ಮೇಲೆ ಭದ್ರವಾದ ಹಿಡಿತ ಸಾಧಿಸಲು ಕೃಷಿ ಉತ್ಪನ್ನಗಳ ಮಾರುಕಟ್ಟೆ ಮೇಲೆ ಭದ್ರವಾದ ಹಿಡಿತ ಸಾಧಿಸುವುದು ಅತ್ಯಗತ್ಯ. ಈ ಅಗತ್ಯಕ್ಕಾಗಿಯೇ ಇಂತಹ ಒತ್ತಡಗಳು. ಯಾರಾದರೂ ರೈತರ ನೆರವಿಗಾಗಿ ಈ ತಿದ್ದುಪಡಿಗಳು ಎಂದು ತಿಳಿದರೆ ತಪ್ಪಾಗುತ್ತದೆ. ಈ ತಿದ್ದುಪಡಿಗಳು ಅಂತಿಮವಾಗಿ ರೈತರನ್ನು ದಿವಾಳಿ ಮಾಡುವ, ಇಡೀ ಕೃಷಿ ಕ್ಷೇತ್ರದಿಂದ ರೈತರನ್ನು ಒಕ್ಕಲೆಬ್ಬಿಸುವ ಉದ್ದೇಶವನ್ನು ಹೊಂದಿವೆ. ಗುತ್ತಿಗೆ ಕೃಷಿ, ಒಪ್ಪಂದ ಕೃಷಿ ಮಾದರಿ ಕಾನೂನುಗಳಂತೆ ಇದು ಕೂಡ ರೈತ ವಿರೋಧಿ ಉದ್ದೇಶವನ್ನು ಸಾಧಿಸುವಂತಹದು. ಜೊತೆಗೆ ಚಿಲ್ಲರೆ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿ, ಸಾರ್ವಜನಿಕ ವಿತರಣಾ ವ್ಯವಸ್ಥೆ ನಾಶ ಪಡಿಸಿ ಇಡೀ ದೇಶವನ್ನು ಹಸಿವು ಮತ್ತು ಆತ್ಮಹತ್ಯೆಗಳ ನಾಡನ್ನಾಗಿ ಪರಿವರ್ತಿಸಿ ಗ್ರಾಮೀಣ ಜನ ಜೀವನವನ್ನು ನರಕಗೊಳಿಸುವ ದುಷ್ಟ ಉದ್ದೇಶದಿಂದ ಕೂಡಿದೆ. ಇಡೀ ದೇಶ ಲಾಕ್‌ಡೌನ್ ಇದ್ದರೂ ಗ್ರಾಮಗಳು ತಮ್ಮ ಚಟುವಟಿಕೆಗಳನ್ನು ನಡೆಸುತ್ತಾ, ನಗರಗಳ ಭಾದಿತರು ಮತ್ತೆ ಹಳ್ಳಿಗೆ ಬಂದಾಗ ಅವರಿಗೆ ಆಶ್ರಯ ನೀಡುತ್ತಾ ಲಾಕ್‌ಡೌನ್‌ನ ಪರಿಣಾಮಗಳನ್ನು ಕನಿಷ್ಟಗೊಳಿಸಿವೆ. ಇಂತಹ ಗ್ರಾಮಗಳ ತಾಕತ್ತನ್ನು ನಾಶ ಮಾಡುವ ಈ ಪ್ರಯತ್ನವನ್ನು ಜನ ಚಳುವಳಿಗಳು ಹಿಮ್ಮೆಟ್ಟಿಸಬೇಕಿದೆ.

(ಲೇಖಕರು ರಾಜ್ಯ ಸಮಿತಿ ಸದಸ್ಯರು, ಕರ್ನಾಟಕ ಪ್ರಾಂತ ರೈತಸಂಘ, ತೊರೆಶೆಟ್ಟಿಹಳ್ಳಿ, ಮದ್ದೂರು ತಾಲೂಕು.)


ಇದನ್ನೂ ಓದಿ: ತಿದ್ದುಪಡಿ ಕಾಯ್ದೆಗೆ ಮುಚ್ಚಲಿವೆ ಎಪಿಎಂಸಿಗಳು; ಲಕ್ಷಾಂತರ ಕಾರ್ಮಿಕರು ಬೀದಿಪಾಲು ಸಾಧ್ಯತೆ! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...