ಕಾ ಎಂಬ ಅಪಶಕುನ, ಎನ್‌ಆರ್‌ಸಿ ಎಂಬ ಸಂಚು : ದೇವನೂರ ಮಹಾದೇವ

ನಮ್ಮ ಪ್ರಧಾನಮಂತ್ರಿಯವರ ಮಾತುಗಳು ಜುಮ್ಲಾ ಆಗಬಾರದೆಂದರೆ ಅವರು ತಕ್ಷಣವೇ ಆರ್ಡಿನೆನ್ಸ್ ಮೂಲಕ ಸಿಎಎ ಹಿಂತೆಗೆದುಕೊಳ್ಳಬೇಕು ಹಾಗೂ ಎನ್‌ಆರ್‌ಸಿಯನ್ನು ದೇಶ ವ್ಯಾಪ್ತಿ ಜಾರಿಗೊಳಿಸುವುದಿಲ್ಲ ಎಂದು ಅಧಿಕೃತ ಆಶ್ವಾಸನೆ ನೀಡಬೇಕು.

ಮೋದಿ ಮತ್ತು ಶಾ ಅವರ ‘ಕಾ… ಕಾ’ ಕೂಗಿಗೆ ದೇಶ ಬೆಚ್ಚಿ ಬಿದ್ದಿದೆ. ಭಾರತೀಯ ಸುಪ್ತ ಮನಸ್ಸಲ್ಲಿ, ಗತಿಸಿದ ಪಿತೃಗಳು ಕಾಗೆಯ ರೂಪದಲ್ಲಿ ತಿಥಿಯ ಸಂದರ್ಭದಲ್ಲಿ ಬಂದು ಆಹಾರ ಸೇವಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗೆಯೇ ಕಾಗೆ ಆತಂಕದಿಂದ ಕೂಗುವ ಕಾ…ಕಾ’ ಶಬ್ಧ ಏನೋ ಅಪಶಕುನ, ಏನೋ ಕೇಡು ಎಂಬುದರ ಮುನ್ಸೂಚನೆ ನೀಡುತ್ತಿದೆ ಎಂದೂ ಭಾರತದ ಸುಪ್ತ ಮನಸ್ಸು ಭಾವಿಸುತ್ತದೆ. ‘ಪೌರತ್ವ ತಿದ್ದುಪಡಿ ಕಾಯ್ದೆ ‘ಸಿಎಎ’ ಅಂದರೆ ‘ಕಾ’ ಧ್ವನಿಯು ಕಾಗೆಯು ಮುನ್ಸೂಚನೆ ನೀಡುತ್ತಿರುವ ಕೇಡು, ಅಪಶಕುನ ಎಂದು ದೇಶದ ಸುಪ್ತ ಮನಸ್ಸಿಗೆ ತಟ್ಟಿರಬೇಕು. ಹೌದು, ಪೌರತ್ವ ತಿದ್ದುಪಡಿ ಕಾಯ್ದೆ ಅಂದರೆ ಸಿಎಎ ಅಂದರೆ ‘ಕಾ’ ಅಪಶಕುನ, ಕೇಡೂ ಎರಡೂ ಹೌದು.

ಈಗ ನೋಡಿ, ನಮ್ಮ ಸಂವಿಧಾನಕ್ಕೆ ಒಂದು ಚರಿತ್ರೆ ಇದೆ. ಹಾಗೇನೆ ಒಂದು ಚಾರಿತ್ರ್ಯ ಕೂಡ ಇದೆ. ಚಾರಿತ್ರ್ಯ ಎಂದರೆ ಶೀಲ. ಬುದ್ಧನ ಪಂಚಶೀಲದಂತೆ ನಮ್ಮ ಸಂವಿಧಾನಕ್ಕೂ ಪಂಚಶೀಲಗಳಿವೆ. ಅವು- ಸಾರ್ವಭೌಮತ್ವ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ. ಸಂವಿಧಾನದ ಶೀಲಗಳಲ್ಲಿ ಒಂದಾದ Secular ಅಂದರೆ ಜಾತ್ಯಾತೀತ ಅಥವಾ ಧರ್ಮ ನಿರಪೇಕ್ಷ ಮೌಲ್ಯವು ಆಳ್ವಿಕೆಗೆ ಜಾತಿ, ಧರ್ಮಗಳ ವಾಂಛೆ ಇರಬಾರದು ಎನ್ನುತ್ತದೆ. ಜಾಗತಿಕವಾಗಿ ಭಾರತದ ಗೌರವವನ್ನು ಹೆಚ್ಚಿಸಿದ ಮೌಲ್ಯ ಇದು. ಆದರೆ ಇಂದು ಈ ಸಿಎಎ ‘ಪೌರತ್ವ ತಿದ್ದುಪಡಿ ಕಾಯ್ದೆ’ಯು ಏನು ಮಾಡುತ್ತದೆ ಎಂದರೆ ಸಂವಿಧಾನದ ಈ ಶೀಲವನ್ನೇ ಕೆಡಿಸುತ್ತದೆ. ಸಂವಿಧಾನವನ್ನು ಪ್ರತ್ಯಕ್ಷವಾಗಿ ವಿರೋಧಿಸದೆ ಅದರ ಶೀಲ ಕೆಡಿಸಿ ಪರೋಕ್ಷವಾಗಿ ಸಂವಿಧಾನವನ್ನು ಕುರೂಪಗೊಳಿಸುವ ಹುನ್ನಾರು ಇದು. ಇದಕ್ಕಾಗೆ ಇರಬೇಕು- ಈ ಕಾಯ್ದೆ ಸಿಎಎ ಅಂದರೆ `ಕಾ’ ಎಂಬುದು ಅಪಶಕುನ, ಕೇಡು ಎಂದು ಭಾರತೀಯ ಮನಸ್ಸಿಗೆ ಅನ್ನಿಸತೊಡಗಿದೆ.

ಇನ್ನು ಎನ್‌ಆರ್‌ಸಿ ವಿಷಯ. ಹೆಚ್‌ಎಂ ಶಾ ಅವರು ನಾಕಾರು ಸಲ ಎನ್‌ಆರ್‌ಸಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲೂ ಹೇಳಿದ್ದಾರೆ. ಪಿಎಂ ಮೋದಿಯವರು “ಹಾಗೇನೂ ಆಲೋಚಿಸಿಲ್ಲ, ಭಯ ಪಡಬೇಡಿ” ಎಂದು ದೇಶಕ್ಕೆ ಆಶ್ವಾಸನೆ ಕೊಡುತ್ತಿದ್ದಾರೆ. ಯಾರನ್ನು ನಂಬುವುದು? ಯಾರನ್ನು ಬಿಡುವುದು?

ಭಾರತೀಯರೆಲ್ಲರ ಅಕೌಂಟ್‌ಗೆ ಕಪ್ಪು ಹಣ ತಂದು ರೂ. 15 ಲಕ್ಷ ಹಾಕುವುದು, ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಸುವುದು ಇತ್ಯಾದಿ ಆಶ್ವಾಸನೆಗಳನ್ನು ಕೊಟ್ಟು ಇವು ಈಡೇರಲೇ ಇಲ್ಲವಲ್ಲ ಎಂದು ಬಿಜೆಪಿ ಅಧ್ಯಕ್ಷರೂ ಆದ ಅಮಿತ್ ಶಾ ಅವರಿಗೆ ಕೇಳಿದ್ದಕ್ಕೆ ಅವರು- `ಅವೆಲ್ಲಾ ಚುನಾವಣಾ ಜುಮ್ಲಾ’ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ. ನಮ್ಮ ಪ್ರಧಾನಮಂತ್ರಿಯವರ ಮಾತುಗಳು ಜುಮ್ಲಾ ಆಗಬಾರದೆಂದರೆ ಅವರು ತಕ್ಷಣವೇ ಆರ್ಡಿನೆನ್ಸ್ ಮೂಲಕ ಸಿಎಎ ಹಿಂತೆಗೆದುಕೊಳ್ಳಬೇಕು ಹಾಗೂ ಎನ್‌ಆರ್‌ಸಿಯನ್ನು ದೇಶ ವ್ಯಾಪ್ತಿ ಜಾರಿಗೊಳಿಸುವುದಿಲ್ಲ ಎಂದು ಅಧಿಕೃತ ಆಶ್ವಾಸನೆ ನೀಡಬೇಕು. ತಕ್ಷಣವೇ ಇದಾಗದಿದ್ದರೆ ಇವರಿಬ್ಬರೂ ಜನಜೀವನದ ಪ್ರಾಣ ಸಂಕಟದ ಜೊತೆ ಬೆಕ್ಕಿನಂತೆ ಚೆಲ್ಲಾಟವಾಡುತ್ತಿದ್ದಾರೇನೊ ಅನ್ನಿಸಿಬಿಡುತ್ತದೆ.

ಈ ಎನ್‌ಆರ್‌ಸಿ ಯಿಂದ ಉದ್ಭವಿಸಬಹುದಾದ ಒಂದು ಯಾತಾನಾಮಯವಾದ ದೃಶ್ಯವನ್ನು ನೆನಪಿಸಿಕೊಳ್ಳುವುದಕ್ಕೂ ನನಗೆ ಕಷ್ಟವಾಗುತ್ತಿದೆ. ಅದು ಮೂಲನಿವಾಸಿಗಳ ಪಾಡು. ಭಾರತದಲ್ಲಿ ಶೇಕಡ 8 ರಷ್ಟು ಜನರು ಮಾತ್ರ ಮೂಲನಿವಾಸಿಗಳು, ಉಳಿದವರೆಲ್ಲಾ ವಲಸೆಗಾರರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮೂಲನಿವಾಸಿಗಳು ಈಗಲೂ ಬಹುತೇಕ ಅರಣ್ಯವಾಸಿಗಳು. ಇವರು ಅಲ್ಲೇ ಹುಟ್ಟಿ ಅಲ್ಲೇ ಮಣ್ಣಾಗುತ್ತ ಬಂದವರು. ಈಗ, ಎನ್‌ಆರ್‌ಸಿ ಬಂದರೆ ಏನಾಗುತ್ತದೆ? ಭಾರತಕ್ಕೆ ವಲಸೆ ಬಂದವರೇ ಅಧಿಕಾರ ಹಿಡಿದು ಈಗ ಮೂಲನಿವಾಸಿಗಳಿಗೆ ‘ನೀವು ಇಲ್ಲಿಯವರು ಅಂಥ ದಾಖಲೆ ತೋರಿಸು’ ಎಂದು ಕೇಳಿದಂತಾಗುತ್ತದೆ. ಇದಕ್ಕೆ ಮೂಲನಿವಾಸಿಗಳು ಏನು ತಾನೇ ಹೇಳಿಯಾರು? “ನೀವು ಬರುವುದಕ್ಕೂ ಮೊದಲಿನಿಂದಲೂ ಇಲ್ಲೇ ಹುಟ್ಟೀ ಇಲ್ಲೇ ಸಾಯುತ್ತಿದ್ದೀವಪ್ಪ. ಬೇಕಾದರೆ ಮರ ಕೇಳು, ಬೆಟ್ಟ ಕೇಳು, ನದಿ ಕೇಳು, ಕಾಡಲ್ಲಿರುವ ಪ್ರಾಣಿಗಳನ್ನ ಕೇಳು… ಅವಕ್ಕೆಲ್ಲಾ ನಾವು ಗೊತ್ತಿದೆ. ಇದನ್ನು ಬಿಟ್ಟರೆ ನಮ್ಮ ಬಳಿ ಏನೂ ಇಲ್ಲ” ಎಂದು ಅರಣ್ಯರೋಧನ ಮಾಡಬೇಕಾಗುತ್ತದೆ. ಇವರ ಜೊತೆಗೆ ನೆಲೆ ಇಲ್ಲದೆ ಅಲೆಯುತ್ತಿರುವ ಅಲೆಮಾರಿಗಳು, ಅತಂತ್ರರಾದ ಹಿಂದುಳಿದ ಸಮೂಹಗಳು ಕಣ್ಣುಬಾಯಿ ಬಿಡಬೇಕಾಗುತ್ತದೆ.

ಇದರಲ್ಲೊಂದು ಸಂಚಿನ ವಾಸನೆಯೂ ಇದ್ದಂತಿದೆ. ಮೂಲನಿವಾಸಿಗಳನ್ನು ಎನ್‌ಆರ್‌ಸಿ ನೆಪದಲ್ಲಿ ಅರಣ್ಯದಿಂದ ಸಂಪೂರ್ಣವಾಗಿ ಎತ್ತಂಗಡಿ ಮಾಡುವ ಸಂಚೂ ಇಲ್ಲಿ ಇರಬಹುದು. ಆಗ- ಅರಣ್ಯನಾಶ, ಗಣಿಗಾರಿಕೆ ಮಾಡಿ ಭೂಮಿ ಧ್ವಂಸ ಮಾಡಲು ಕಾರ್ಪೋರೇಟ್ ಕಂಪನಿಗಳಿಗೆ ಹಬ್ಬವಾಗುತ್ತದೆ. ನಮ್ಮ ಪೂರ್ವಿಕರು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ಸಂಸ್ಥೆ ಆಸ್ತಿಪಾಸ್ತಿಗಳನ್ನು ಖಾಸಗಿಗೆ ಮಾರಿಕೊಂಡು ಜೀವನ ದೂಡುತ್ತಿರುವ ಸರ್ಕಾರಕ್ಕೆ ಅರಣ್ಯ ನದಿ, ಬೆಟ್ಟ ಮಾರುವುದು ಸಹಜವೇ ಇರಬಹುದು. ಆದರೆ ದೇಶವನ್ನೆ ಖಾಸಗಿ ಕಂಪನಿಗಳಿಗೆ ಮಾರಿದಂತಾಗಿಬಿಡುತ್ತದೆ. ಆಗ, ಕಂಪನಿ ಸರ್ಕಾರದ ವಿರುದ್ಧ ಹೋರಾಡಿ ದೇಶ ಸ್ವಾತಂತ್ರ್ಯ ಪಡೆಯಿತು. ಈಗ, ಪಡೆದ ಸ್ವಾತಂತ್ರ್ಯವನ್ನು ಕಂಪನಿಗಳಿಗೆ ಮರುಮಾರಾಟ ಮಾಡಿದಂತಾಗಿಬಿಡುತ್ತದೆ. ಉಳಿಗಾಲ ಉಂಟೆ ಎನ್ನುವಂತಾಗಿಬಿಡುತ್ತದೆ.

ಈ ಸಂದರ್ಭದಲ್ಲಿ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ ಬಾಘೆಲ್ ಅವರ ಮಾತುಗಳನ್ನು ನಾವು ಕೇಳಿಸಿಕೊಳ್ಳಬೇಕಾಗಿದೆ. ಅವರು ಹೇಳುತ್ತಾರೆ- “ಛತ್ತೀಸ್‌ಗಡದ ಅರ್ಧಕ್ಕೂ ಹೆಚ್ಚಿನ ಜನರಿಗೆ ಪೌರತ್ವ ಸಾಬೀತು ಅಸಾಧ್ಯ. ಎನ್‌ಆರ್‌ಸಿ ಜಾರಿಗೊಳಿಸಿದರೆ ರಾಜ್ಯದ ಶೇಕಡ 50ಕ್ಕೂ ಜನರು ಭೂಮಿ ಅಥವಾ ಭೂ ದಾಖಲೆ ಹೊಂದಿಲ್ಲ. ಅವರಿಗೆ ತಮ್ಮ ಪೌರತ್ವ ಸಾಬೀತು ಪಡಿಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿ ಆಮೇಲೆ ಅವರು ಹೇಳುತ್ತಾರೆ- “1906ರಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ಬ್ರಿಟಿಷರು ತಂದಿದ್ದ ಗುರುತು ಯೋಜನೆಯನ್ನು ಗಾಂಧೀಜಿ ವಿರೋಧಿಸಿದ ರೀತಿಯಲ್ಲೆ ಎನ್‌ಆರ್‌ಸಿ ಪ್ರಕ್ರಿಯೆ ವಿರೋಧಿಸುತ್ತೇನೆ. ಎನ್‌ಆರ್‌ಸಿ ಜಾರಿಗೊಂಡರೆ ಅದರ ದಾಖಲೆಗೆ ಸಹಿ ಹಾಕದ ಮೊದಲ ವ್ಯಕ್ತಿ ನಾನೇ ಆಗಲಿದ್ದೇನೆ” ಎನ್ನುತ್ತಾರೆ. ಸಂವಿಧಾನದ ಶೀಲ ಹಾಗೂ ಭಾರತದ ಭಾರತೀಯತೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ಭಾರತ ಮಾತೆಯ ಮಕ್ಕಳಾಗಿ ನಾವು ಇಷ್ಟಾದರೂ ಮಾಡಬೇಕಾಗುತ್ತದೆ.

ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ ಬಾಘೆಲ್

ಈಗ ಈ ಸಿಎಎ, ಎನ್‌ಆರ್‌ಸಿ ವಿರೋಧಿ ಆಂದೋಲನ ಸರಿಯಾದ ಜಾಗಕ್ಕೆ, ಅಂದರೆ ವಿದ್ಯಾರ್ಥಿಗಳ ಅಂಗಳಕ್ಕೆ ಬಂದಿದೆ. ಭಾರತೀಯತೆ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಟೊಂಕಕಟ್ಟಿ ನಿಂತಿದ್ದಾರೆ. ಭಾರತಕ್ಕೆ ಕಷ್ಟ ಬಂದ ಕಾಲದಲ್ಲಿ ಕಾಪಾಡಬಲ್ಲ ಶಕ್ತಿ ಯುವಜನತೆಗೆ ಇದೆ ಎಂದು ಋಜುವಾತು ಮಾಡುತ್ತಿದ್ದಾರೆ. ಪ್ರತಿಭಟನೆಯನ್ನು ತುಂಬಾ ಹೊಣೆಗಾರಿಕೆಯಿಂದಲೂ ನಿಭಾಯಿಸುತ್ತಿದ್ದಾರೆ. ಚಳುವಳಿಯನ್ನು ದಾರಿತಪ್ಪಿಸಲು ನಾನಾರೀತಿಯ ಪ್ರಯತ್ನಗಳು ನಡೆಯಬಹುದು. ಆದರೂ – ‘ದಯವಿಟ್ಟು ಸಂಯಮ ಕಳೆದುಕೊಳ್ಳಬೇಡಿ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ಕೂಡ ನಿಮ್ಮದೇನೆ.

ಜೊತೆಗೆ ವಿದ್ಯಾರ್ಥಿ ಚಳವಳಿ ಒಳಕ್ಕೆ ಸಮಾಜಘಾತಕ ಶಕ್ತಿಗಳು ನುಸಳದಂತೆ ದಯವಿಟ್ಟು ಎಚ್ಚರಿಕೆ ವಹಿಸಿ. ಯಾಕೆಂದರೆ, ಮುಸ್ಲಿಮರ ಸೋಗಿನಲ್ಲಿ ರೈಲಿಗೆ ಕಲ್ಲು ಎಸೆಯುತ್ತಿದ್ದ ಐದಾರು ಜನ ಬಿಜೆಪಿಯವರು ಸಿಕ್ಕಿಬಿದ್ದಿದ್ದಾರೆ. ಇದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ. ಚಳವಳಿಗೆ ಈ ಎಚ್ಚರಿಕೆ ಇರಬೇಕು. ಹಾಗೇ ಗುಜರಾತ್‌ನ ಅಹಮದ್‌ಬಾದ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಸಿಕ್ಕಿಹಾಕಿಕೊಂಡ ನಾಲ್ವಾರು ಪೊಲೀಸರನ್ನು ಮುಸ್ಲಿಂ ಯುವಕರ ಗುಂಪೊಂದು ರಕ್ಷಿಸಿದೆ. ಇಂಥ ಹೊಣೆಗಾರಿಕೆಯೂ ಚಳವಳಿಗೆ ಬೇಕಾಗಿದೆ. ಹಾಗೂ ಇಂಥಹ ಸಂದರ್ಭಗಳಲ್ಲೆ ಹೆಚ್ಚುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ಆರ್ಥಿಕತೆ, ಏರುತ್ತಿರುವ ಬೆಲೆ ಏರಿಕೆ ಇಂಥವುಗಳ ಬಗ್ಗೆ ಹೆಚ್ಚೆಚ್ಚು ಮಾತಾಡಬೇಕಾಗಿದೆ’- ಇದು ಪ್ರಾರ್ಥನೆ.

(ದೇವನೂರು ಮಹಾದೇವರವರು ಪ್ರಸಿದ್ದ ಹಿರಿಯ ಸಾಹಿತಿಗಳು, ಜನಪರ ಚಿಂತಕರು ಮತ್ತು ಹೋರಾಟಗಾರರು. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ಮೈಸೂರಿನಲ್ಲಿ ನಡೆದ ಹೋರಾಟದಲ್ಲಿ ಅವರು ಮಾಡಿದ ಭಾಷಣದ ಅಕ್ಷರ ರೂಪ ಇದು)

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ನರೇಂದ್ರ ಮೋದಿಯವರನ್ನು ಅಯೋಗ್ಯರ ಎಂದರೆ ತಪ್ಪಾಗಲಾರದು

    ಯೋಗ್ಯವಾದ ಐಕ್ಯತೆಗೆ ಒಂದನ್ನು ಚಾಲನೆ ತೆಗೆದುಕೊಳ್ಳಲಿಲ್ಲ

    ಬಿಲ್ಡಪ್ ಭಾಷಣ ಬಿಡೋದಿಕ್ಕೆ ಅಷ್ಟೇ ಲಾಯಕ್

LEAVE A REPLY

Please enter your comment!
Please enter your name here