ಜಂಬದ ಹೆಬ್ಬಾವು : ರಸ್ಕಿನ್ ಬಾಂಡ್‌ರವರ ಕಥೆ

ತಾತ ತನ್ನ ಬಳಿ ಹೆಚ್ಚುಕಾಲ ಇರಿಸಿಕೊಳ್ಳಲಾಗದೇ ಹೋದ ಒಂದು ಸಾಕು ಪ್ರಾಣಿಯಿತ್ತು. ಅಜ್ಜಿಯು ಹಕ್ಕಿ ಮತ್ತು ಪ್ರಾಣಿಗಳನ್ನೆಲ್ಲಾ ಸಹಿಸುತ್ತಿದ್ದಳು, ಆದರೆ ಸರೀಸೃಪಗಳನ್ನು ಮಾತ್ರ ಆಕೆ ಸಹಿಸುತ್ತಿರಲಿಲ್ಲ. ಶಾಂತ ರೀತಿಯಿಂದ ಇರುತ್ತಿದ್ದ ಹೆನ್ರಿ ಎಂಬ ಊಸರವಳ್ಳಿ (ಇವನ ವಿಷಯಕ್ಕೆ ಆಮೇಲೆ ಬರೋಣ) ಕಂಡರೇನೇ ಅಜ್ಜಿ ಬಿಳಿಚಿಕೊಳ್ಳುತ್ತಿದ್ದರು. ಅಂಥದ್ದರಲ್ಲಿ ಹೆಬ್ಬಾವನ್ನು ಮನೆಯಲ್ಲಿರಿಸಿಕೊಳ್ಳುವ ಅವಕಾಶ ಇರಲಾರದು ಎಂಬುದು ತಾತನಿಗೆ ತಿಳಿದಿರಬೇಕಿತ್ತು.

ಚಿತ್ರವಿಚಿತ್ರದ ಪ್ರಾಣಿಗಳನ್ನು ಕೊಂಡು ತರಬಾರದು ಎಂದು ಕೊಂಡರೂ ತಾತನ ಮನಸ್ಸು ಆ ವಿಷಯದಲ್ಲಿ ಅಂಕೆ ಮೀರಿ ವರ್ತಿಸುತ್ತಿತ್ತು. ನಮ್ಮ ಮನೆಯಲ್ಲಿ ಅದಾಗಲೇ ಟೋಟೋ (ಕೋತಿ) ಇತ್ತು, ಆದರೂ ಪೇಟೆಯಲ್ಲಿ ಹಾವಾಡಿಗನಿಗೆ ನಾಲ್ಕು ರೂಪಾಯಿಗಳನ್ನು ಕೊಟ್ಟು, ನಾಲ್ಕು ಅಡಿ ಉದ್ದದ ಮರಿ ಹೆಬ್ಬಾವನ್ನು ಕೊಂಡರು. ಕೌತುಕದ ಕಣ್ಣುಗಳಿಂದ ನೋಡುತ್ತಿದ್ದ ಮಕ್ಕಳು ಮತ್ತು ಜನಸಂದಣಿ ಮೆಚ್ಚುಗೆಯಿಂದ ನೋಡುವಂತೆ ತನ್ನ ಭುಜದ ಮೇಲೆ ಹೆಬ್ಬಾವನ್ನು ಬಿಟ್ಟುಕೊಂಡು ತಾತ ಮನೆಗೆ ಬಂದರು.

ಅವರು ಬರುವುದನ್ನು ಮೊದಲು ನೋಡಿದ್ದು ಟೋಟೋ. ಹಲಸಿನ ಮರದ ರೆಂಬೆಯಲ್ಲಿ ನೇತಾಡುತ್ತಿದ್ದ ಟೋಟೋ ತನ್ನ ಕುಲದ್ವೇಷಿಯನ್ನು ಕಂಡೊಡನೆಯೇ ಮನೆಯೊಳಕ್ಕೆ ಓಡಿತು. ಯುದ್ಧೋನ್ಮಾದದಲ್ಲಿ ಕಿರುಚತೊಡಗಿತು. ಇದರ ಶಬ್ದವನ್ನು ಕೇಳಿ ಅಜ್ಜಿ ವರಾಂಡಕ್ಕೆ ಬಂದರು. ತಾತನ ಕುತ್ತಿಗೆಗೆ ಸುತ್ತಿಕೊಂಡಿದ್ದ ಹೆಬ್ಬಾವನ್ನು ನೋಡುತ್ತಿದ್ದಂತೆಯೇ ಅಜ್ಜಿಗೆ ಮೂರ್ಛೆ ಬಂದಂತಾಯಿತು.

“ಅದು ನಿಮ್ಮನ್ನು ಉಸಿರು ಕಟ್ಟಿ ಸಾಯಿಸುತ್ತೆ, ಮೊದಲು ಅದನ್ನು ಬಿಸಾಡಿ!” ಎಂದು ಅಜ್ಜಿ ಕಿರಿಚಿದರು.

“ಎಂಥದ್ದೂ ಇಲ್ಲ! ಇದು ಇನ್ನೂ ಎಳೇದು, ಕ್ರಮೇಣ ಹೊಂದಿಕೊಳ್ಳುತ್ತೆ ಬಿಡು” ಎಂದರು ತಾತ.

“ಅದು ಹೊಂದಿಕೊಳ್ಳಬಹುದು, ನನಗೇನೂ ಹೊಂದಿಕೊಳ್ಳುವ ಕರ್ಮ ಇಲ್ಲ. ನಿಮ್ಮ ಸಂಬಂಧಿ ಮಾಬೆಲ್ ನಮ್ಮೊಂದಿಗೆ ಸ್ವಲ್ಪ ದಿನ ಇರಲೆಂದು ನಾಳೆ ಬರುತ್ತಿರುವುದು ನಿಮಗೆ ಗೊತ್ತು. ಮನೆಯಲ್ಲಿ ಹಾವು ಇದೆ ಎಂದು ಗೊತ್ತಾದರೆ ಅವಳು ಒಂದು ನಿಮಿಷ ಕೂಡ ಇರುವುದಿಲ್ಲ ಅಷ್ಟೆ” ಎಂದರು ಅಜ್ಜಿ.

“ಹೌದಾ, ಹಾಗಾದ್ರೆ ಅವಳು ಮನೆಗೆ ಬರುತ್ತಿದ್ದಂತೆಯೇ ಇದನ್ನು ತೋರಿಸಬೇಕು” ಎಂದರು ತಾತ. ಮನೆಗೆ ನೆಂಟರು ಬರುವುದು ಅವರಿಗೂ, ನನಗೂ ಇಬ್ಬರಿಗೂ ಇಷ್ಟವಾಗುತ್ತಿರಲಿಲ್ಲ.

“ಭಾರಿ ಕಿರಿಕಿರಿ ಮನುಷ್ಯ ಕಣ್ರೀ ನೀವು!” ಎಂದು ಗೊಣಗುತ್ತಾ ಅಜ್ಜಿ, “ಮೊದಲು ಈ ಪೀಡೆಯನ್ನು ಬಚ್ಚಲು ಮನೆಯಲ್ಲಿ ಕೂಡಿ ಹಾಕಿ. ನಂತರ ಹೋಗಿ ಯಾರತ್ರ ಕೊಂಡು ತಂದಿರೋ ಅವನನ್ನು ಕರೆದುಕೊಂಡು ಬಂದು ವಾಪಸ್ ಕೊಟ್ಟು ಕಳಿಸಿ” ಎಂದು ಹೇಳಿದರು.

ಗಾಬರಿಗೊಂಡ ನನ್ನ ಮುಖವನ್ನು ನೋಡುತ್ತಾ ತಾತ ಹೆಬ್ಬಾವನ್ನು ಬಚ್ಚಲಿಗೆ ತೆಗೆದುಕೊಂಡು ಹೋಗಿ ಅಲ್ಲಿ ಟಬ್ ನಲ್ಲಿ ಬಿಟ್ಟರು. ಅದರ ಬಾಗಿಲನ್ನು ಮುಚ್ಚಿ ನನ್ನೆಡೆಗೆ ತಾತ ಬೇಸರದಿಂದ ನೋಡಿದರು.

“ಬಹುಶಃ ಅಜ್ಜಿ ಹೇಳುತ್ತಿರುವುದು ಸರಿ ಅನ್ಸುತ್ತೆ. ಹಸಿವಾದಾಗ ಅದು ಟೋಟೋವನ್ನು ಹಿಡಿದು ನುಂಗಿ ಬಿಟ್ಟರೆ ಕಷ್ಟ ಅಲ್ವಾ” ಎಂದರು.

ಪೇಟೆಯ ಕಡೆಗೆ ಹಾವಾಡಿಗನನ್ನು ಹುಡುಕಿಕೊಂಡು ಅವಸರದಿಂದ ಹೊರಟರು. ಸುಮಾರು ಎರಡು ಗಂಟೆಗಳ ಕಾಲ ತಾತ ಬರಲೇ ಇಲ್ಲ. ಅದುವರೆಗೂ ಅಜ್ಜಿ ವೆರಾಂಡದಲ್ಲಿ ಅತ್ತಿಂದಿತ್ತ ಶತಪತ ಹಾಕುತ್ತಿದ್ದರು. ತಾತ ಜೋಲು ಮೋರೆ ಹಾಕಿ ಕೊಂಡು ಹಿಂದಿರುಗಿದರು. ಅವರನ್ನು ನೋಡಿದೊಡನೆಯೇ ಹಾವಾಡಿಗ ಸಿಕ್ಕಿಲ್ಲ ಎಂಬುದು ತಿಳಿಯುತ್ತಿತ್ತು.

“ದಯವಿಟ್ಟು, ಅದನ್ನು ನೀವೇ ತಗೊಂಡು ಹೋಗಿ, ಕಾಡಿನ ಹತ್ತಿರ ನದಿಯಂಚಿನಲ್ಲಿ ಬಿಟ್ಟು ಬನ್ನಿ” ಎಂದರು ಅಜ್ಜಿ.

“ಸರಿ ಸರಿ, ಮೊದಲು ಅದಕ್ಕೆ ಊಟ ಹಾಕಬೇಕು” ಎನ್ನುತ್ತಾ ತಾತ, ತಾನು ತಂದಿದ್ದ ಪುಕ್ಕಗಳನ್ನು ಕಿತ್ತಿದ್ದ ಕೋಳಿಯನ್ನು (ಆ ಕಾಲದಲ್ಲಿ ಒಂದು ರೂಪಾಯಿಗಿಂತ ಕಡಿಮೆಗೇ ಈ ರೀತಿಯ ಕೋಳಿ ದೊರಕುತ್ತಿತ್ತು) ತಗೊಂಡು ಬಚ್ಚಲಿನ ಕಡೆ ಹೋದರು. ಹಿಂದೆಯೇ ನಾನು, ಅಜ್ಜಿ, ಅಡುಗೆಯವ ಮತ್ತು ತೋಟದ ಮಾಲಿ ಸಾಲಾಗಿ ಹಿಂಬಾಲಿಸಿದೆವು. ತಾತ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದರು. ತಾತನ ಕಾಲುಗಳ ಪಕ್ಕದಲ್ಲಿ ನಾನು ನುಸುಳಿ ಇಣುಕಿದೆ. ಉಳಿದವರೆಲ್ಲ ಹಿಂದೆಯೇ ಇದ್ದರು. ಹೆಬ್ಬಾವು ಕಾಣಲಿಲ್ಲ.

“ಅದು ಹೊರಟುಹೋಗಿದೆ” ಎಂದು ತಾತ ಘೋಷಿಸಿದರು.

“ದೂರ ಹೋಗಿರಲು ಸಾಧ್ಯವಿಲ್ಲ, ಟಬ್ ಕೆಳಗೆ, ಸುತ್ತ ಮುತ್ತ ಸರಿಯಾಗಿ ನೋಡಿ” ಎಂದರು ಅಜ್ಜಿ.

ಟಬ್ ಕೆಳಗೆ ಹುಡುಕಿದೆವು. ಸುತ್ತ ಮುತ್ತೆಲ್ಲ ನೋಡಿದೆವು. ತಾತ ಕಿಟಕಿಯ ಬಳಿ ಹೋಗಿ ನೋಡಿದರು. “ನಾವು ಕಿಟಕಿ ತೆರೆದು ತಪ್ಪು ಮಾಡಿದೆವು. ಅದು ಕಿಟಕಿಯಿಂದ ಹೊರಹೋಗಿದೆ” ಎಂದರು.

ಎಲ್ಲರೂ ಸೇರಿ ಸೂಕ್ಷ್ಮವಾಗಿ ಹುಡುಕಾಡಿದೆವು. ಮನೆಯ ವಿವಿಧ ಕೋಣೆಗಳು, ಅಡುಗೆ ಮನೆ, ಅಂಗಳದ ಉದ್ಯಾನ, ಗ್ವಾದಲಿ, ಕೋಳಿ ಗೂಡು ಎಲ್ಲೆಡೆ ಹುಡುಕಿದರೂ ಹೆಬ್ಬಾವು ಕಾಣಿಸಲಿಲ್ಲ.

“ಉದ್ಯಾನದ ಗೋಡೆ ದಾಟಿ ಹೊರ ಹೋಗಿರಬೇಕು. ಇಷ್ಟೊತ್ತಿಗೆ ತುಂಬಾ ದೂರ ಹೋಗಿರುತ್ತೆ ಬಿಡಿ” ಎಂದರು ತಾತ.

“ನಾನೂ ಹಾಗೇ ಅಂದ್ಕೋತೀನಿ” ಎಂದು ನಿಟ್ಟುಸಿರಾದರು ಅಜ್ಜಿ.

ಮಾಬೆಲ್ ಆಂಟಿ ಮೂರು ವಾರ ನಮ್ಮೊಂದಿಗೆ ಇರಲೆಂದು ಮರುದಿನವೇ ಆಗಮಿಸಿದರು. ಅಕಸ್ಮಾತ್ ಹೆಬ್ಬಾವು ಕಾಣಿಸಿಕೊಂಡರೆ ಏನು ಕಥೆ ಎಂದು ತಾತ ಮತ್ತು ನಾನು ಚಿಂತಿತರಾಗಿದ್ದೆವು. ಮೂರು ದಿನಗಳಾದರೂ ಅದರ ಸುಳಿವಿರದುದರಿಂದ ಅದು ಹೋಗಿದ್ದು ಒಳ್ಳೇದಾಯ್ತು ಎಂದು ನಾವು ಸಮಾಧಾನಪಟ್ಟುಕೊಂಡೆವು.

ಸಂಜೆ, ಉದ್ಯಾನದಿಂದ ಜೋರು ಕೂಗು ಕೇಳಿಬಂದಿದ್ದರಿಂದ ಎಲ್ಲರೂ ಗಾಬರಿಬಿದ್ದೆವು. ಮಾಬೆಲ್ ಆಂಟಿ ಪಿಶಾಚಿಯನ್ನು ಕಂಡವಳಂತೆ ಕಿರುಚಿಕೊಂಡು ಓಡೋಡಿ ವೆರಂಡದವರೆಗೂ ಬಂದರು.

ಏದುಸಿರು ಬಿಡುತ್ತಾ, “ಸೀಬೆ ಮರ!” ಎಂದು ಉಸಿರೆಳೆದುಕೊಳ್ಳುತ್ತಾ ಆಂಟಿ, “ಹಣ್ಣು ಕೀಳಲು ಹೋದೆ, ಅದು ನನ್ನನ್ನೇ ನೋಡುತ್ತಿತ್ತು. ಅದರ ಕಣ್ಣುಗಳು! ನನ್ನನ್ನು ಸಜೀವವಾಗಿ ತಿನ್ನುವಂತೆ ನೋಡುತ್ತಿತ್ತು…” ಎಂದರು.

“ಸಮಾಧಾನ ಮಾಡ್ಕೋ” ಎನ್ನುತ್ತಾ ಅಜ್ಜಿ ಸುಗಂಧ ಬೆರೆಸಿದ ನೀರನ್ನು ಆಂಟಿಯ ಮೇಲೆ ಚಿಮುಕಿಸಿ, “ಏನಾಯ್ತು, ಏನು ನೋಡಿದೆ?” ಎಂದು ವಿಚಾರಿಸಿದರು.

“ಹಾವು!” ಎನ್ನುತ್ತಾ ಮಾಬೆಲ್ ಆಂಟಿ ಬಿಕ್ಕಿದರು. “ದೊಡ್ಡ ಗಾತ್ರದ ಹಾವು. ಇಪ್ಪತ್ತು ಅಡಿ ಉದ್ದವಿತ್ತು! ಸೀಬೆ ಮರದಲ್ಲಿತ್ತು. ಅದರ ಕಣ್ಣುಗಳು ಭಯಂಕರ. ನನ್ನನ್ನು ಅದು ಹೇಗೆ ನೋಡಿತು ಗೊತ್ತಾ…”

ತಾತ ಮತ್ತು ಅಜ್ಜಿ ಪರಸ್ಪರ ದೃಷ್ಟಿ ಹಾಯಿಸಿಕೊಂಡರು. ಒಡನೆಯೇ , “ನಾನು ಅದನ್ನು ಕೊಂದು ಬರುತ್ತೀನಿ ತಡಿ” ಎನ್ನುತ್ತಾ ತಾತ ಕೊಡೆಯನ್ನು ಹಿಡಿದು ಅತ್ತ ಕಡೆ ಹೊರಟರು. ಆದರೆ ಸೀಬೆ ಮರದ ಬಳಿ ತಾತ ಹೋಗುವಷ್ಟರಲ್ಲಿ ಹೆಬ್ಬಾವು ಹೊರಟುಹೋಗಿತ್ತು.

“ಬಹುಶಃ ಮಾಬೆಲ್ ಆಂಟಿ ಅದನ್ನು ಬೆದರಿಸಿಬಿಟ್ಟಿರಬೇಕು” ಎಂದೆ ನಾನು.

“ಶ್! ಆಂಟಿಯ ಬಗ್ಗೆ ಹಾಗೆಲ್ಲಾ ಮಾತಾಡಬಾರದು” ಎಂದರು ತಾತ. ಆದರೆ, ತಾತನ ಕಣ್ಣುಗಳಲ್ಲಿ ತುಂಟ ನಗು ಹೊರಹೊಮ್ಮಿದ್ದನ್ನು ನಾನು ಗಮನಿಸಿದೆ.

ಈ ಘಟನೆಯ ನಂತರ ಹೆಬ್ಬಾವು ಹಲವು ಬಾರಿ ಅನಿರೀಕ್ಷಿತ ಸ್ಥಳಗಳಲ್ಲಿ ದರ್ಶನ ಕೊಟ್ಟಿತು. ಸೋಫಾ ಮೆತ್ತೆಯ ಕೆಳಗಿನಿಂದ ಅದೊಮ್ಮೆ ಹೊರಬಂದಾಗ ಮಾಬೆಲ್ ಆಂಟಿ ಬೆಚ್ಚಿ ಬಿದ್ದು, ತಮ್ಮ ಬ್ಯಾಗ್ ತಗೊಂಡು ಮನೆಯಿಂದ ಹೊರಟುಬಿಟ್ಟರು.

ಅದರ ಹುಡುಕಾಟ ಮುಂದುವರೆಯಿತು.

ಒಂದು ಬೆಳಗ್ಗೆ ಸುರುಳಿಸುತ್ತಿಕೊಂಡಿದ್ದ ಹೆಬ್ಬಾವನ್ನು ಡ್ರೆಸ್ಸಿಂಗ್ ಟೇಬಲಿನ ಮೇಲೆ ಕಂಡೆ. ಅದು ತನ್ನ ಪ್ರತಿಬಿಂಬವನ್ನೇ ತದೇಕಚಿತ್ತದಿಂದ ನೋಡುತ್ತಿತ್ತು. ನಾನು ತಾತನ ಬಳಿ ಹೋಗಿ ತಿಳಿಸಿ, ಅವರು ಬರುವಷ್ಟರಲ್ಲಿ ಅದು ಹೊರಟುಹೋಗಿತ್ತು. ಉದ್ಯಾನದಲ್ಲೊಮ್ಮೆ ಅದು ಕಾಣಿಸಿತು. ಅಡುಗೆಯವನಿಗೆ ಮಹಡಿಯ ಏಣಿಯ ಮೇಲೆ ತೆವಳುತ್ತಿದ್ದ ಅದು ಕಂಡುಬಂತು. ಎರಡನೇ ಬಾರಿ ಅದನ್ನು ಡ್ರೆಸ್ಸಿಂಗ್ ಟೇಬಲಿನ ಮೇಲೆ ನೋಡಿದೆವು. ತನ್ನನ್ನೇ ತಾನು ಮೆಚ್ಚುಗೆಯಿಂದ ನೋಡಿಕೊಳ್ಳುತ್ತಿತ್ತು. ತನ್ನ ಪ್ರತಿಬಿಂಬಕ್ಕೆ ಅದು ಆಕರ್ಷಿತಗೊಂಡಂತಿತ್ತು.

“ಇದಕ್ಕೆ ನಾವೆಲ್ಲರೂ ಹೆಚ್ಚೆಚ್ಚು ಗಮನ ಕೊಡುತ್ತಿರುವುದರಿಂದ ಇದಕ್ಕೆ ಜಂಬ ಬಂದಿದೆ: ಎಂದರು ತಾತ.

“ಮಾಬೆಲ್ ಆಂಟಿಯನ್ನು ಮೆಚ್ಚಿಸಲು ಚೆನ್ನಾಗಿ ಕಾಣಲೆಂದು ಕನ್ನಡಿ ನೋಡಿಕೊಳ್ಳುತ್ತಿರ ಬಹುದು” ಎಂದು ನಾನು ಹೇಳಿದೆ.

(ಹೀಗನ್ನಬಾರದಿತ್ತು ಅಂತ ಆಮೇಲೆ ಅನ್ನಿಸಿತು. ಏಕೆಂದರೆ, ನನ್ನ ಈ ಮಾತನ್ನು ಕೇಳಿಸಿಕೊಂಡ ಅಜ್ಜಿ ಮುಂದಿನ ವಾರ ಪೂರಾ ಖರ್ಚಿಗೆ ಕಾಸು ಕೊಡಲಿಲ್ಲ)

“ಏನಾದರಾಗಲಿ ನಮಗೆ ಈಗ ಅದರ ದೌರ್ಬಲ್ಯ ತಿಳಿಯಿತು” ಎಂದರು ತಾತ.

“ನೀವೂ ತಮಾಷೆ ಮಾಡಲು ಶುರು ಮಾಡಿದ್ರಾ?” ಎಂದರು ಕೋಪದಿಂದ ಅಜ್ಜಿ.

“ಏ, ನಾನು ಮಾಬೆಲ್ ಬಗ್ಗೆ ಮಾತಾಡಲಿಲ್ಲ, ಹೆಬ್ಬಾವನ್ನು ಹಿಡಿಯಲು ಅದರ ಕನ್ನಡಿ ವೀಕ್ಷಣೆಯ ಹವ್ಯಾಸ ಸಹಾಯವಾಗಬಹುದು ಎಂಬರ್ಥದಲ್ಲಿ ಹೇಳಿದೆ” ಎಂದು ತಾತ ವಿವರಣೆ ಕೊಟ್ಟರು.

ತಾತ ಹೆಬ್ಬಾವನ್ನು ಹಿಡಿಯಲು ಒಂದು ದೊಡ್ಡ ಪಂಜರನ್ನು ತಯಾರಿಸಿದರು. ಅದರ ಒಂದು ಕೊನೆಯಲ್ಲಿ ಕನ್ನಡಿಯನ್ನು ಅಳವಡಿಸಿದರು. ಒಳಗೆ ಕೋಳಿಯ ಮಾಂಸ ಮತ್ತಿತರ ರುಚಿರುಚಿ ತಿನಿಸುಗಳನ್ನಿಟ್ಟರು. ಅದರ ಪ್ರವೇಶದ್ವಾರವನ್ನು ಸುಲಭವಾಗಿ ಮುಚ್ಚಲು ವ್ಯವಸ್ಥೆ ಮಾಡಿದರು.

ನಾವು ಈ ಪಂಜರವನ್ನು ಮಾಡುವ ಹೊತ್ತಿಗಾಗಲೇ ಮಾಬೆಲ್ ಆಂಟಿ ಮನೆ ಬಿಟ್ಟು ಹೋಗಿಯಾಗಿತ್ತು. ಆದರೂ, ನಾವು ಈ ಹಾವು ಹಿಡಿಯುವ ಯೋಜನೆ ಮಾಡಲೇಬೇಕಿತ್ತು. ಏಕೆಂದರೆ, ಮನೆಯಲ್ಲಿ ಎಲ್ಲೆಂದರಲ್ಲಿ ಅಚಾನಕ್ಕಾಗಿ ಬಂದುಬಿಡುತ್ತಿದ್ದ ಈ ಹೆಬ್ಬಾವನ್ನು ಇರಿಸಿಕೊಳ್ಳುವಂತಿರಲಿಲ್ಲ. ಹೆಬ್ಬಾವು ವಿಷಜಂತುವೇನಲ್ಲ, ಆದರೆ ಅದು ಕೋತಿಯನ್ನು ಸರಾಗವಾಗಿ ನುಂಗಿಬಿಡಬಹುದು ಮತ್ತು ಚಿಕ್ಕ ಬಾಲಕನಾದ ನಾನು ಮನೆಯಲ್ಲಿದ್ದಾಗ ಹಿರಿಯರು ಅದನ್ನು ಇರಿಸಿಕೊಳ್ಳುವುದು ಅಪಾಯ ಎಂದು ಭಾವಿಸಿದ್ದರು.

ಸ್ವಲ್ಪ ದಿನ ಏನೂ ವಿಶೇಷ ಸಂಭವಿಸಲಿಲ್ಲ. ಒಂದು ಬೆಳಗ್ಗೆ ನಾನು ಶಾಲೆಗೆ ಹೊರಟಿದ್ದೆ, ಆಗ ಹೆಬ್ಬಾವನ್ನು ಪಂಜರದಲ್ಲಿ ಕಂಡೆ. ಅದಕ್ಕಾಗಿ ಇರಿಸಿದ್ದ ತಿನಿಸುಗಳನ್ನೆಲ್ಲಾ ಮುಗಿಸಿತ್ತು. ಸುರುಳಿಸುತ್ತಿಕೊಂಡು ಕನ್ನಡಿಯನ್ನು ನೋಡಿಕೊಂಡು ಮಲಗಿತ್ತು. ಅದರ ಮೊಗದಲ್ಲಿ ಹಸನ್ಮುಖವಿತ್ತು ? ನೀವು ಬೇಕಿದ್ದರೆ ಹೆಬ್ಬಾವಿನ ಮುಗುಳ್ನಗೆಯನ್ನು ಊಹಿಸಿಕೊಳ್ಳಬಹುದು.

ಮೆಲ್ಲಗೆ ಪಂಜರದ ಬಾಗಿಲನ್ನು ಮುಚ್ಚಿದೆ. ಆದರೆ, ಹೆಬ್ಬಾವು ನನ್ನನ್ನು ಗಮನಿಸಲಿಲ್ಲ. ತಾತ ಮತ್ತು ತೋಟದ ಮಾಲಿ ಪಂಜರವನ್ನು ಟಾಂಗಾದಲ್ಲಿ ಇರಿಸಿಕೊಂಡು ನದಿಯ ಅಂಚಿಗೆ ಒಯ್ದರು. ಪಂಜರದ ಬಾಗಿಲನ್ನು ತೆರೆದಿಟ್ಟು ವಾಪಸ್ ಬಂದರು. ಅವರು ಬಾಗಿಲನ್ನು ತೆರೆದು ಸ್ವಲ್ಪ ದೂರ ಬಂದರೂ ಹೆಬ್ಬಾವು ಹೊರಕ್ಕೇ ಬರಲಿಲ್ಲವಂತೆ.

ಅಲ್ಲಿಂದ ಬಂದ ನಂತರ ತಾತ, “ಆ ಕನ್ನಡಿಯನ್ನು ವಾಪಸ್ ತೆಗೆದುಕೊಂಡು ಬರಲು ಮನಸ್ಸಾಗಲಿಲ್ಲ. ಇದೇ ಮೊದಲ ಬಾರಿ ಪ್ರೀತಿಯಲ್ಲಿ ಮುಳುಗಿರುವ ಹಾವನ್ನು ನಾನು ಕಂಡದ್ದು” ಎಂದರು.

ಮೂಲ: ರಸ್ಕಿನ್ ಬಾಂಡ್
ಕನ್ನಡಕ್ಕೆ: ಡಿ ಜಿ ಮಲ್ಲಿಕಾರ್ಜುನ್
ಶಿಡ್ಲಘಟ್ಟದವರು. ಮೆಡಿಕಲ್ ಶಾಪ್ ನಡೆಸುವ ಮಲ್ಲಿಕಾರ್ಜುನ್ ಅವರ ಆಸಕ್ತಿಗಳು ಮತ್ತು ಪ್ರವೃತ್ತಿಗಳು ಹಲವು. ಫೋಟೋಗ್ರಾಫರ್ ಆಗಿ ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ಪ್ರವಾಸದ ಹುಚ್ಚು ಕೂಡ. ಅವರ ಅನುವಾದದ `ರಸ್ಕಿನ್ ಬಾಂಡ್ ಕಥೆಗಳು’ ಪುಸ್ತಕ ಕನ್ನಡ ಓದುಗ ವಲಯದಲ್ಲಿ ಬಹಳ ಗಮನ ಸೆಳೆಯಿತು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here