Homeಮುಖಪುಟಕೊರೊನಾ: ದೂರ್ತರ ಕೇಕೆಗಳ ನಡುವೆ ಕೇಳಿಸದ ಬಡವರ ಬಿಕ್ಕಳಿಕೆ, ಕಾಣದ ಕಣ್ಣೀರು!

ಕೊರೊನಾ: ದೂರ್ತರ ಕೇಕೆಗಳ ನಡುವೆ ಕೇಳಿಸದ ಬಡವರ ಬಿಕ್ಕಳಿಕೆ, ಕಾಣದ ಕಣ್ಣೀರು!

ಇಂತಹಾ ಭೀಕರ ಸೋಂಕಿನ ನಡುವೆಯೂ ಯಾವುದೇ ಸುರಕ್ಷಾ ಸಾಧನಗಳಿಲ್ಲದೆ, ಮೂರುಕಾಸಿನ ಸಂಬಳಕ್ಕಾಗಿ ಜೀವವನ್ನು ಪಣಕ್ಕಿಟ್ಟು ದುಡಿಯುತ್ತಿರುವ ಸ್ವಚ್ಛತಾ ಕಾರ್ಮಿಕರಲ್ಲಿ ಬಹುತೇಕ ಎಲ್ಲರೂ ದಲಿತರೆಂಬುದನ್ನು ನೆನಪಿನಲ್ಲಿ ಇಡೋಣ.

- Advertisement -
ಕೊರೊನಾದ ಜಾತಿ, ಧರ್ಮ, ವರ್ಗಗಳ ಕುರಿತ ಪ್ರಶ್ನೆ ಪ್ರಪಂಚದ ಬಹುತೇಕ ದೇಶಗಳಲ್ಲಿ ಅಪ್ರಸ್ತುತ ಮಾತ್ರವೇ ಅಲ್ಲ; ಹಾಸ್ಯಾಸ್ಪದವಾಗಬಹುದು. ಆದರೆ, ತಲೆತಲಾಂತರಗಳಿಂದ ಕೋಮು, ಜಾತಿ ಎಂಬ ರೋಗದಿಂದ ಪೀಡಿತವಾಗಿರುವ ಭಾರತದಲ್ಲಿ ಈ ಪ್ರಶ್ನೆ ಅಪ್ರಸ್ತುತವೂ ಅಲ್ಲ; ಹಾಸ್ಯಾಸ್ಪದವೂ ಅಲ್ಲ. ಜಗತ್ತಿನಾದ್ಯಂತ ವೇಗವಾಗಿ ಹಬ್ಬಿ, ದಾಂದಲೆ ಎಬ್ಬಿಸುತ್ತಿರುವ ನೋವೆಲ್ ಕೊರೊನಾ-19 ವೈರಸಿಗೆ ಭಾರತದಲ್ಲಿ ಹೇಗೆ ಧಾರ್ಮಿಕ ಬಣ್ಣ ಬಳಿದು ರಾಜಕೀಯ ಲಾಭ ಪಡೆಯಲು ವ್ಯವಸ್ಥಿತವಾಗಿ ಯತ್ನಿಸಲಾಗುತ್ತಿದೆ ಎಂಬ ಬಗ್ಗೆ ಒಂದು ಲೇಖನ ಇಲ್ಲಿಯೇ ಪ್ರಕಟವಾಗಿದೆ. ಪ್ರಸ್ತುತ ಬರಹದಲ್ಲಿ ಈ ವೈರಸಿನ ಜಾತಿ-ವರ್ಗ ಆಯಾಮಗಳನ್ನು ಪರಿಶೀಲಿಸಲು ಯತ್ನಿಸಲಾಗಿದೆ.
- Advertisement -

ಇದನ್ನು ಓದಿ: ಕೊರೋನ ವೈರಸ್‌ನ ಧರ್ಮ, ಜಾತಿ ಯಾವುದು?

ರೋಗಗಳು ಜಾತಿ, ವರ್ಗ ನೋಡಿ ಬರುವುದಿಲ್ಲ ಎಂಬುದು ಹಳೆಯ ಮಾತು. ಅದು ಅದರಷ್ಟಕ್ಕೇ ಅರ್ಧ ಸತ್ಯ ಮಾತ್ರ. ಉದಾಹರಣೆಗೆ, ಮಾರಕ ಸಾಂಕ್ರಾಮಿಕ ರೋಗವಾದ ಕ್ಷಯ ಅಥವಾ ಟಿ.ಬಿ.ಯಿಂದ ಪ್ರತೀ ವರ್ಷ ನಮ್ಮ ದೇಶದಲ್ಲಿ ಸುಮಾರು ಎರಡೂವರೆ ಲಕ್ಷ ಜನರು ಸಾಯುತ್ತಿದ್ದಾರೆ. ಇದು ಯಾವತ್ತೂ ಸುದ್ದಿಯಾಗುವುದಿಲ್ಲ. ಯಾಕೆಂದರೆ, ಇದು ನಿರ್ಗತಿಕ ಬಡವರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ. ಶ್ರೀಮಂತರಲ್ಲಿ ತೀರಾ ಅಪರೂಪ.
ಕಾರಣವೆಂದರೆ ಜೋಪಡಿ, ಗುಡಿಸಲುಗಳಲ್ಲಿ, ನೈರ್ಮಲ್ಯದ ಲವಲೇಶವೂ ಇಲ್ಲದ ಕೊಳೆಗೇರಿಗಳು, ಊರಕೇರಿಗಳಲ್ಲೇ ಇದು ಹೆಚ್ಚಾಗಿ ಹರಡುತ್ತದೆ. ಇದೊಂದು ಗುಣಪಡಿಸಬಹುದಾದ ರೋಗವಾದರೂ, ಅದಕ್ಕಾಗಿ ಸರಕಾರಿ ಸೌಲಭ್ಯಗಳು ಇದ್ದರೂ, ಅವು ಬಡಜನರನ್ನು ತಲಪುತ್ತಲೇ ಇಲ್ಲ. ವರ್ಷಕ್ಕೊಮ್ಮೆ ಕ್ಷಯರೋಗ ದಿನಾಚರಣೆಯ ನಾಟಕದಲ್ಲೇ ಎಲ್ಲಾ ಮುಗಿದುಹೋಗುತ್ತದೆಯೇ ಹೊರತು, ಅದರ ಕುರಿತು ತಿಳುವಳಿಕೆ ಮೂಡಿಸುವ, ರೋಗ ಪೀಡಿತರನ್ನು ಸೋಂಕಿನ ಮೊದಲ ಹಂತದಲ್ಲಿಯೇ ಗುರುತಿಸಿ, ಚಿಕಿತ್ಸೆಗೆ ಕಳುಹಿಸುವ ಯಾವೊಂದು ಗಂಭೀರ ಅಭಿಯಾನವೂ ನಡೆದಿಲ್ಲ.
ಭಾರತದಲ್ಲಂತೂ ಬಡವರ ರೋಗ, ಶ್ರೀಮಂತರ ರೋಗ ಎಂಬ ವರ್ಗೀಕರಣವು ಜನರ ಆಡುಮಾತಿನಲ್ಲಿಯೇ ಹಿಂದಿನಿಂದಲೂ ಇದೆ. ಕ್ಷಯವಲ್ಲದೇ, ವಾರ್ಷಿಕವಾಗಿ ಒಂದು ಲಕ್ಷದಷ್ಟು ಮಕ್ಕಳನ್ನು ಬಲಿತೆಗೆದುಕೊಳ್ಳುವ ಅತಿಸಾರ (Diahorea) ಇತ್ಯಾದಿಗಳು ಬಡವರ ರೋಗವೆಂದು ಪರಿಗಣಿಸಲ್ಪಟ್ಟರೆ, ಡಯಾಬಿಟಿಸ್, ರಕ್ತದೊತ್ತಡ (ಬಿ.ಪಿ.) ಇತ್ಯಾದಿಗಳನ್ನು ಶ್ರೀಮಂತರ ರೋಗಗಳೆಂದು ಪರಿಗಣಿಸಲಾಗುತ್ತದೆ. ಕಾರಣವೆಂದರೆ, ಇವೆಲ್ಲವೂ ಹಣಕಾಸಿನ ಪರಿಸ್ಥಿತಿ ಮತ್ತು ಅದರ ಪರಿಣಾಮವಾದ ನೈರ್ಮಲ್ಯ-ಅನೈರ್ಮಲ್ಯ, ಜೀವನ ಶೈಲಿ, ಆಹಾರ ಪದ್ಧತಿ ಮುಂತಾದ ಹಲವಾರು ಅಂಶಗಳನ್ನು ಅವಲಂಬಿಸಿ ಈ ರೋಗಗಳು ಬರುವುದು.
ರೋಗಗಳ ಕಿಂಚಿತ್ ಲಕ್ಷಣಗಳು ಕಂಡುಬಂದರೂ, ತಜ್ಞ ವೈದ್ಯರ ಬಳಿ ಓಡಿಹೋಗುವ ಶ್ರೀಮಂತರೂ, ಗಂಭೀರವಾದ ರೋಗಲಕ್ಷಣಗಳು ಇದ್ದರೂ, ಅದು ಸಾಮಾನ್ಯ ಎಂಬಂತೆ ಪರಿಗಣಿಸಿ ಮನೆಯಲ್ಲೇ ಇರುವ, ಅಥವಾ ಹಣಕಾಸು ಮತ್ತಿತರ ಸಮಸ್ಯೆಗಳಿಂದಾಗಿ ಆಸ್ಪತ್ರೆಗಳಿಗೆ ಹೋಗದಿರುವ ಬಡವರೂ ಭಾರತದ ವಾಸ್ತವ. ಬಡವರ ಜೀವಮಾನದ ದುಡಿಮೆಯನ್ನು ಒಂದು ಹೊತ್ತಿಗೆ ಪಾವತಿ ಮಾಡಬೇಕಾದ ಪಂಚತಾರಾ ಹೊಟೇಲುಗಳಂತಹ ಖಾಸಗಿ ಆಸ್ಪತ್ರೆಗಳೂ, ಮೂಲಭೂತ ಸೌಲಭ್ಯಗಳೂ ಇಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಇದೀಗ ಕೊರೋನ ಪಿಡುಗಿನ ಸಂದರ್ಭದಲ್ಲಿ ವೆಟಿಲೇಟರ್‌ಗೂ ಗತಿ ಇಲ್ಲದ ಜಿಲ್ಲಾಸ್ಪತ್ರೆಗಳು ಮುಂತಾದ ಸರಕಾರಿ ವ್ಯವಸ್ಥೆಗಳು ಜೊತೆಜೊತೆಗೇ ಇರುವುದು- ರೋಗಗಳಿಗೂ ಜಾತಿ-ವರ್ಗಗಳಿಗೂ ಇರುವ ನೇರ ಸಂಬಂಧವನ್ನು ಎತ್ತಿತೋರಿಸುತ್ತವೆ. ಅಷ್ಟಕ್ಕೂ, ಮೇಲೆ ಕೇಳಲಾದ ಪ್ರಶ್ನೆ ಭಾರತದ ಮಟ್ಟಿಗೆ ಅಪ್ರಸ್ತುತವೂ ಅಲ್ಲ; ಹಾಸ್ಯಾಸ್ಪದವೂ ಅಲ್ಲ. ಬದಲಾಗಿ ನೋವಿನದ್ದು.
ಈಗ ಕೊರೊನಾ ಪಿಡುಗಿನ ಸಂದರ್ಭದಲ್ಲಿ ಜಾತಿ, ವರ್ಗ ಪ್ರಶ್ನೆಗಳು ಹೇಗೆ ರಾಡಿಯಂತೆ ಮೇಲೆದ್ದು ಬರುತ್ತಿವೆ ಎಂಬುದನ್ನು ಪರಿಶೀಲಿಸೋಣ. ಬುದ್ಧಿಜೀವಿಗಳು, ಪ್ರಗತಿಪರರು ಎಲ್ಲದಕ್ಕೂ, ರೋಗಕ್ಕೂ ಜಾತಿ-ವರ್ಗಗಳನ್ನು ತಳಕುಹಾಕುತ್ತಾರೆ ಎಂಬ ಅನುಕೂಲಶಾಸ್ತ್ರದ ಊಳಿಡುವವರು ಇದ್ದಾರೆ. ಅವರು ಬೇರಾರೂ ಅಲ್ಲ; ಹಿಂದಿನ ಲೇಖನದಲ್ಲಿ ವಿವರಿಸಿರುವಂತೆ ಕೊರೋನಾಕ್ಕೂ ಧರ್ಮಕ್ಕೂ ತಳಕುಹಾಕಿದವರೆ! (ಲಿಂಕ್ ನೋಡಿ).
ನಾವು ಕೊರೊನಾ ಹರಡುವುದನ್ನು ನಿಧಾನಗೊಳಿಸಲು-ದೇಶವ್ಯಾಪಿ ಲಾಕ್‌ಡೌನ್ ಹೇರಿರುವ ಸಂದರ್ಭದಲ್ಲಿ ನಮ್ಮ ಜಾತಿ-ವರ್ಗ ತಾರತಮ್ಯಗಳು ಕಣ್ಣಿಗೆ ರಾಚುವಂತೆ ಕಾಣುತ್ತಿವೆ. (ಸಂಪೂರ್ಣ ತಡೆಗಟ್ಟಲು ಪ್ರಯೋಗಿಕವಾಗಿ ಅಸಾಧ್ಯ ಮತ್ತು ಅದಕ್ಕೆ ವಿಶೇಷ ಪ್ರಯತ್ನಗಳ ಅಗತ್ಯವಿದೆ. ಇದಕ್ಕಾಗಿ ನಿರ್ದಿಷ್ಟ ಮತ್ತು ಖಚಿತ ಯೋಜನೆ ರೂಪಿಸುವಲ್ಲಿ ನರೇಂದ್ರ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂಬುದು ಬೇರೆಯೇ ಮಾತು.) ಈ ಲಾಕ್‌ಡೌನ್‌ನ ಮೂಲ ಉದ್ದೇಶವೇ “ಸಾಮಾಜಿಕ ಅಂತರ”ವನ್ನು ( Social Distancing) ಕಾಯ್ದುಕೊಳ್ಳುವುದು. ಆದರೆ, ಭಾರತೀಯ ಸಂದರ್ಭದಲ್ಲಿ ಈ ಪರಿಕಲ್ಪನೆಯೇ ವಿರುದ್ಧವಾದ ಮತ್ತು ಹಳೆಯ ಹಸಿಗಾಯಗಳನ್ನು ಕೆದಕುವ ಅರ್ಥವನ್ನು ಪಡೆಯುತ್ತಿದೆ.
ಇಡೀ ಇಟಲಿಯ ಜನಸಂಖ್ಯೆ ಹಿಡಿಸುವಷ್ಟು ಕೊಳೆಗೇರಿಗಳು ಭಾರತದಲ್ಲಿವೆ.
ನಿರ್ದಿಷ್ಟ ದೂರವನ್ನು (ಅಂತರ) ಕಾಪಾಡಿಕೊಂಡು ಮುಟ್ಟುವಿಕೆಯನ್ನು ತಪ್ಪಿಸಬೇಕು ಎಂಬುದನ್ನೇ ಈಗ ಎಲ್ಲಾ ಕಡೆ “ಸಾಮಾಜಿಕ ಅಂತರ” ಎಂದು ಕರೆಯುವುದು ರೂಢಿಯಾಗಿದೆ. ಆದರೆ, ಇದು ಎಷ್ಟು ಸರಿ? ಯಾಕೆಂದರೆ ನಮ್ಮಲ್ಲಿ ಜಾತಿ, ಧರ್ಮ, ವರ್ಗಗಳ ಹೆಸರಿನಲ್ಲಿ ಸಾಮಾಜಿಕ ಅಂತರವು ಹಲವಾರು ಶತಮಾನಗಳಿಂದ ಇದೆ. ಮೇಲು-ಕೀಳಿನ ಈ ಅಂತರವು ಕೊರೊನಾ ನಿರ್ವಹಣೆಯಲ್ಲೂ ಕಾಣುತ್ತಿದೆ. “ಮುಟ್ಟದೇ ಇರುವ” ಅಸ್ಪೃಶ್ಯತೆಯು, ಈ ಸಾಮಾಜಿಕ ಅಂತರದ ಭಾಗ. ಕೇರಳದಲ್ಲಿ ಯಾವಯಾವ ಜಾತಿಯವರು ಬ್ರಾಹ್ಮಣರಿಂದ ಎಷ್ಟೆಷ್ಟು ದೂರ ಇರಬೇಕು ಎಂಬ ನಿಯಮವಿತ್ತು.
ಬಡವರನ್ನು, ಕೂಲಿ, ರಿಕ್ಷಾ ಚಾಲಕ, ಪ್ಲಂಬರ್, ಮನೆಗೆಲಸ ಇತ್ಯಾದಿ ಉದ್ಯೋಗ ಮಾಡುವವರನ್ನು ವಯಸ್ಸಿನ ಪರಿವೆಯೇ ಇಲ್ಲದೆ ಏಕವಚನದಲ್ಲಿ ಕರೆಯುವ ವರ್ಗ ಅಂತರವನ್ನು ನಾವು ರಾಜ ಮಹಾರಾಜರ ಕಾಲದಿಂದಲೂ ಪಾಲಿಸುತ್ತಾ ಬಂದಿದ್ದೇವೆ. ಆದುದರಿಂದ, ಕೊರೊನ ಸಂದರ್ಭದಲ್ಲಿ ನಾವು ಅನಿವಾರ್ಯ ಅಗತ್ಯವಾಗಿ ಕಾಯ್ದುಕೊಳ್ಳಬೇಕಾಗಿರುವ ಶಿಸ್ತನ್ನು “ದೈಹಿಕ ಅಂತರ” (Physical Distancing) ಎಂದು ಕರೆಯುವುದೇ ಸೂಕ್ತವಲ್ಲವೇ?
ತಮ್ಮ ಗುರುವಿನ ಆಣತಿಯಂತೆ ಬಟ್ಟಲು-ಜಾಗಟೆ ಬಡಿಯುತ್ತಾ, ದೀಪ, ದೊಂದಿ ಹಿಡಿದುಕೊಂಡು, ಪಟಾಕಿ ಹೊಡೆದು ಹುಚ್ಚರಂತೆ ಕುಣಿದಾಡುತ್ತಾ ಬೀದಿಗೆ ಇಳಿದು ಈ ಸಾಮಾಜಿಕ ಅಂತರದ ಪರಿಕಲ್ಪನೆಯನ್ನೇ ಕಾಲಕೆಳಗೆ ಹೊಸಕಿಹಾಕಿ, ಕೊರೋನ ಹರಡುವುದಕ್ಕೆ ದೇಶಾದ್ಯಂತ ವೇದಿಕೆ ಕಲ್ಪಿಸಿದ ಮಧ್ಯಮ ವರ್ಗಗಳ ಜನರು ಒಂದು ಕಡೆಯಾದರೆ, ಇದೇ ಮಧ್ಯಮ ವರ್ಗದಲ್ಲೇ ಸ್ವಲ್ಪ ತಿಳಿವಳಿಕೆ ಇರುವವರು ಮನೆಯೊಳಗೇ ಇದ್ದಾರೆ ಮತ್ತು ಅವರಲ್ಲಿ ಕೆಲವರು ಅದನ್ನು ಬಲವಾಗಿ ಪ್ರತಿಪಾದಿಸುತ್ತಾ, ಪೊಲೀಸ್ ಅತಿರೇಕಗಳನ್ನು ಸಮರ್ಥಿಸುತ್ತಾ, ಬೀದಿಗಿಳಿದವರಿಗೆ ಗುಂಡು ಹೊಡೆಯಬೇಕು ಎಂದು ಹೇಳುವ ಮಟ್ಟಿಗೆ  ನಿರ್ದಯಿಗಳಾಗಿದ್ದಾರೆ.
ಕೆಲಸವಿಲ್ಲದ, ಹಣವಿಲ್ಲದ ಜನರು ಅಗತ್ಯವಸ್ತುಗಳ ಖರೀದಿಗೆಂದು ಬೀದಿಗೆ ಬಂದದ್ದನ್ನೂ ಸಹಿಸಲಾರದ ಇವರಲ್ಲಿ ಬಹುತೇಕರು ಮೋದಿಯ ವಿವೇಕ, ವಿವೇಚನೆಯಿಲ್ಲದ ಕರೆಯಿಂದ ಹುಚ್ಚೆದ್ದು ಬೀದಿಗಿಳಿದುದರ ಬಗ್ಗೆ ಒಂದು ಶಬ್ದವನ್ನೂ ಆಡುತ್ತಿಲ್ಲ. ಬಡವರ ಮೇಲೆ ಕ್ರೌರ್ಯ ತೋರಿದ ಪೊಲೀಸರೂ, (ಮಾನವೀಯತೆ ಮೆರೆದ ಪೊಲೀಸರೂ ಹಲವರಿದ್ದರು ಎಂದು ಇಲ್ಲಿ ಗುರುತಿಸಬೇಕು) ಇಂತವರನ್ನು ಚದರಿಸಿ ಮನೆ ಸೇರಿಸುವ ಬದಲು ರಕ್ಷಣೆ ನೀಡಿದರು. ಮನೆಯಲ್ಲಿ ಕುಳಿತೇ ಬೇಕಾದದ್ದನ್ನೆಲ್ಲಾ ತರಿಸಿಕೊಳ್ಳಬಹುದಾದ ಶ್ರೀಮಂತರಿಗೆ, ಉಳಿತಾಯದ ಹಣವಿದ್ದು ಮನೆಯಲ್ಲಿ ಕುಳಿತುಕೊಳ್ಳುವ ಸಾಮರ್ಥ್ಯ ಇರುವ ಮಧ್ಯಮ ವರ್ಗದವರಿಗೆ, “ಎಲ್ಲರೂ ಮನೆಯಲ್ಲಿ ಕುಳಿತುಕೊಳ್ಳಿ”, ‘Stay at Home” ಎಂದು ಹೇಳುವುದು ಬಹಳ ಸುಲಭ. ಅವರು ಮನೆಯಲ್ಲಿ ಟಿವಿ ನೋಡುತ್ತಾ, ಇಂಟರ್‌ನೆಟ್‌ನಲ್ಲಿ ಕಾಲ ಕಳೆಯುತ್ತಾ, ಪುಸ್ತಕ ಓದುತ್ತಾ, ಚೆನ್ನಾಗಿ ತಿಂದುಂಡು, ರಜಾ ಆಚರಿಸುತ್ತಾ, ಎಲ್ಲರಿಗೂ ಬುದ್ಧಿ ಹೇಳಬಹುದು.  ಆದರೆ, ಭಾರತದಲ್ಲಿ ನೆಲಮಟ್ಟದ ವಾಸ್ತವಿಕತೆ ಹಾಗಿದೆಯೇ? “ಹೊರಗೆ ಬರಬೇಡಿ, ಮನೆಯಲ್ಲೇ ಕುಳಿತು ಟಿವಿಯಲ್ಲಿ ರಾಮಾಯಣ ನೋಡಿ” ಎಂಬ ಮಹಾನ್ ಸಂದೇಶ ನೀಡಿದ ಮೋದಿ ಸರಕಾರದ ತಲೆಯಲ್ಲಿ ಇರುವುದು ಈ ಮಧ್ಯಮ ವರ್ಗವೇ ಹೊರತು ಕಂಗೆಟ್ಟ ಬಡಜನರಲ್ಲ.
ಇಲ್ಲಿನ ನಿವಾಸಿಗಳು “ಮನೆ” ಎಂದು ಕರೆಯಲಾಗುವ ಈ ಕೊಳಚೆ ಗೂಡುಗಳಲ್ಲಿ ಉಳಿದರೆ ಊಟಕ್ಕೇನು ಗತಿ?
ಯಾವುದೇ ಕಾಲಾವಕಾಶ ಕೊಡದೆ, ಪರಿಣಾಮಗಳ ಪರಿವೆಯೇ ಇಲ್ಲದೇ, ಯಾವುದೇ ಪೂರ್ವಸಿದ್ಧತೆಯೂ ಇಲ್ಲದೆ, ಮೋದಿ ಸರಕಾರ ಹೇರಿದ ಲಾಕ್‌ಡೌನ್ ಸಂದರ್ಭದಲ್ಲಿ- ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸಂಪರ್ಕಕ್ಕೆ ಬರುತ್ತಿದ್ದ ಆ ಭಾರತೀಯರನ್ನು ಮನೆಯಲ್ಲಿ ಕುಳಿತಿರುವ ನಾವು ನೆನಸಿಕೊಳ್ಳೋಣ. ನಿತ್ಯ ಕೂಲಿ ಪಡೆಯುವವರು, ಹಳ್ಳಿಗಳಿಂದ, ಬೇರೆಬೇರೆ ರಾಜ್ಯಗಳಿಂದ ವಲಸೆ ಬಂದು, ಅಸಂಘಟಿತ ಕ್ಷೇತ್ರಗಳಲ್ಲಿ ಬೇರೆಬೇರೆ ಉದ್ಯೋಗಗಳಲ್ಲಿ ತೊಡಗುವವರು, ನಿರ್ಮಾಣ ಕಾಮಗಾರಿ ನಡೆಸುವವರು, ಮನೆಗೆಲಸದವರು, ಸಣ್ಣ ರೈತರು ತಲೆಹೊರೆ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು, ಚಿಕ್ಕಪುಟ್ಟ ಗೂಡಂಗಡಿಗಳವರು, ಹೊಟೇಲು, ಬಾರ್, ವೈನ್‌ಶಾಪ್‌ಗಳಲ್ಲಿ ದುಡಿಯುವ ಕಾರ್ಮಿಕರು, ಮೀನು ಹಿಡಿಯುವವರು, ಮಾರುವವರು, ದಿನಸಿ ಹೊರತುಪಡಿಸಿ ಇತರ ಅಂಗಡಿಗಳನ್ನು ಇಟ್ಟವರು, ಕೂದಲು ಕತ್ತರಿಸುವವರು, ಗುಜರಿ ಹೆಕ್ಕುವವರು, ಭಿಕ್ಷುಕರು…. ಯೋಚಿಸುತ್ತಾ ಹೋಗಿ- ಇವರೆಲ್ಲರೂ ಈಗ ಏನು ಮಾಡುತ್ತಿದ್ದಾರೆ? ಹೇಗೆ ಬದುಕುತ್ತಿದ್ದಾರೆ? ಅದೂ ಕೂಡಾ ಸರಕಾರದ ಎಡೆಬಿಡಂಗಿ ನಾಟಕಗಳ ಹೊರತು ಬೇರಾವುದೇ ಆಧಾರ, ಬೆಂಬಲ ಇಲ್ಲದೆ?
ಅನಿವಾರ್ಯವಾಗಿ ರೈಲು ಹಳಿಗೆ ಬರುವ ಇಂತಹಾ ಲಕ್ಷಾಂತರ ಜನರಿಗೆ “ಅದನ್ನು” ಲಾಕ್‌ಡೌನ್ ಮಾಡಲು ಸಾಧ್ಯವೆ?
ಕೆಲಸವಿಲ್ಲದ, ಕೆಲಸ ಕಳೆದುಕೊಂಡ, ನಿರ್ಗತಿಗರಾದ, ಮನೆ ಸೇರಲು ನೂರಾರು ಕಿ.ಮೀ. ಹಸಿವಿನಲ್ಲಿ ನಡೆದ, ದಾರಿಯಲ್ಲೇ ಸಿಕ್ಕಿಬಿದ್ದ ವಲಸಿಗರು, ಮುಂದೆ ಬರಲಿರುವ ಕಷ್ಟದ ದಿನಗಳನ್ನು ಚಿಂತೆ, ಹತಾಶೆಗಳಿಂದ ಎದುರು ನೋಡುತ್ತಿರುವವರು ಯಾವ ಜಾತಿ ವರ್ಗಗಳಿಗೆ ಸೇರಿದವರು? ರೋಗಗಳಿಗೆ ಜಾತಿವರ್ಗ ಭೇದವಿಲ್ಲ ಎಂಬ ಅರ್ಧಸತ್ಯವನ್ನು ಹೇಳಿದವರು ಯಾರು?
ಇಲ್ಲಿ ಜಾತಿ ಎಲ್ಲಿಂದ ಬಂತು ಎಂದು ಕೇಳಬಹುದಾದವರಿಗೆ ಒಂದೇ ಒಂದು ಉತ್ತರ ಕೊಡಬಹುದು. ಇಂತಹಾ ಭೀಕರ ಸೋಂಕಿನ ನಡುವೆಯೂ ಯಾವುದೇ ಸುರಕ್ಷಾ ಸಾಧನಗಳಿಲ್ಲದೆ, ಮೂರುಕಾಸಿನ ಸಂಬಳಕ್ಕಾಗಿ ಜೀವವನ್ನು ಪಣಕ್ಕಿಟ್ಟು ದುಡಿಯುತ್ತಿರುವ ಸ್ವಚ್ಛತಾ ಕಾರ್ಮಿಕರಲ್ಲಿ ಬಹುತೇಕ ಎಲ್ಲರೂ ದಲಿತರೆಂಬುದನ್ನು ನೆನಪಿನಲ್ಲಿ ಇಡೋಣ. ಅವರು ತಮ್ಮ ಕೆಲಸವನ್ನು ನಿಲ್ಲಿಸಿದ್ದರೆ, ನಮ್ಮ ಭಾರತ ಇಂದು ನಾರುತ್ತಿತ್ತು. ಆದರೂ, ಅವರಿಗೆ ಸಿಕ್ಕಿದ್ದು ಬರೇ ಹುಚ್ಚಾಟದ ಚಪ್ಪಾಳೆ. ಮೇಲೆ ಹೇಳಿದ ಎಲ್ಲಾ ಕಾರ್ಮಿಕರು ಕೆಳಜಾತಿ, ಕೆಳವರ್ಗಗಳಿಗೆ ಸೇರಿದವರು; ಮುಖ್ಯವಾಗಿ ದಲಿತರರೆಂಬುದು ಕೊರೋನದಷ್ಟೇ ಸತ್ಯ. ಕೊರೋನಕ್ಕೆ ಜಾತಿಯಿಲ್ಲವೆಂಬ ಶುದ್ಧ ಸುಳ್ಳನ್ನು ಹೇಳಿದವರು ಯಾರು?
ಕುಡಿಯುವ ನೀರಿಗಾಗಿ ದೂರದೂರ ನಡೆಯಬೇಕಾದ ಗ್ರಾಮೀಣ ಮಹಿಳೆಯರು “ಮನೆಯಲ್ಲಿ ಉಳಿಯುವುದು” ಹೇಗೆ?
ಈ ಸಂದರ್ಭದಲ್ಲಿ ಭಾರತದ ಒಂದು ಕಟು ವಾಸ್ತವವನ್ನು ನೆನಪಿನಲ್ಲಿಡಬೇಕು. ಮೇಲ್ಜಾತಿಗಳಲ್ಲಿ ತೋರಿಸಲು ಕೆಲವು ಬಡವರಿರಬಹುದು. ಆದರೆ, ನಿಜವೆಂದರೆ, ಬಹುತೇಕ ಕೆಳಜಾತಿಗಳವರು ಕೆಳವರ್ಗದವರಾಗಿದ್ದಾರೆ ಮತ್ತು ಮೇಲ್ವರ್ಗದ ಬಹುತೇಕರು ಮೇಲ್ಜಾತಿಯವರಾಗಿದ್ದಾರೆ. ಈ ಸತ್ಯವನ್ನು ನಗರ ಮಧ್ಯಮ ವರ್ಗ, ಮೇಲ್ಜಾತಿಗಳನ್ನು ನೆಚ್ಚಿಕೊಂಡಿರುವ ನರೇಂದ್ರ ಮೋದಿಯ ಬಿಜೆಪಿ ಸರಕಾರ ತಿಳಿದಿಲ್ಲ. ಅಥವಾ ಪ್ರಭಾವಿ ಮಧ್ಯಮ ವರ್ಗದ ಆಷಾಢಭೂತಿತನ ಮತ್ತು ಬೆಂಬಲವನ್ನು ನೆಚ್ಚಿಕೊಂಡು ಬೇಕುಬೇಕೆಂದೇ ಕೆಳಜಾತಿ, ಕೆಳವರ್ಗಗಳನ್ನು ಅವಗಣಿಸುತ್ತಿದೆ ಮತ್ತು ಹಾಸ್ಯಾಸ್ಪದ ನಾಟಕಗಳ ಮೂಲಕ ಅವರಲ್ಲಿರುವ ಭಯ , ಮೌಢ್ಯಗಳನ್ನು ಪ್ರಚೋದಿಸಿ, ಮರುಳುಮಾಡಲು ಯತ್ನಿಸುತ್ತಿದೆ. ದುಖಃದ ವಿಷಯವೆಂದರೆ, ಧೂರ್ತರ ಕೇಕೆಗಳ ನಡುವೆ, ಮೋದಿಗೆ ಬಡವರ ಬಿಕ್ಕಳಿಕೆ ಕೇಳಿಸುತ್ತಿಲ್ಲ; ಕಣ್ಣೀರು ಕಾಣಿಸುತ್ತಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...