ಲಾಕ್‌ಡೌನ್‌: ಎರಡು ವಾರದಿಂದ ಸಿಗದ ಕೂಲಿ, ತುಮಕೂರಿನ ಟೆಂಟ್‌ಗಳಲ್ಲಿ ವಲಸೆ ಕೂಲಿ ಕಾರ್ಮಿಕರ ಬವಣೆ..

ಕೊರೊನ ಬಂದು ನಮ್ ಕೆಲಸ ಕಸ್ಕೊತ್ರಿ. ಅಂಗಡಿ ಬಂದ್ ಆಗೇವ. ರೊಕ್ಕನೂ ಇಲ್ಲ, ಅಕ್ಕಿನೂ ಇಲ್ಲ. ನೋಡ್ರಿ ಈ ಟೆಂಟ್ ಒಳಗ ನಿದ್ದಿ ಮಾಡೋಣ ಅಂದ್ರ ನಿದ್ದಿ ಬರೋದಿಲ್ರಿ, ಸ್ಯಾನ ಕಷ್ಟ ಆಗೇತ್ರಿ ಎನ್ನುತ್ತಾರೆ ಅಲ್ಲಿನ ಮಹಿಳೆಯರು.

ಕೊರೊನ ಸೋಂಕು ಹರಡುತ್ತಿರುವ  ಹಿನ್ನೆಲೆಯಲ್ಲಿ ಮಾಡಲಾದ ಲಾಕ್‌ಡೌನ್‌‌ನಿಂದಾಗಿ ದಿನಗೂಲಿ ಕಾರ್ಮಿಕರ ಪಾಡು ಹೇಳತೀರದಾಗಿದೆ. ಕೊರೊನ ಬಂದು ಅವರ ಕೆಲಸ ಕಿತ್ತುಕೊಂಡು ಮೂಲೆಗೆ ಕೂರಿಸಿದೆ. ಇತ್ತ ಕೆಲಸವೂ ಇಲ್ಲ, ಅತ್ತ ಹಳ್ಳಿಗೂ  ಹೋಗುವಂತಿಲ್ಲ ಪ್ಲಾಸ್ಟಿಕ್ ಹಾಳೆಯಿಂದ ನಿರ್ಮಿಸಿಕೊಂಡಿರುವ ಟೆಂಟ್‌ಗಳಲ್ಲಿ ಕೆಲಸವಿಲ್ಲದ ಕೂರುವುದೆಂದರೆ ಬೇಸರ. ಸುಡುಬೆಂಕಿ ಬಿಸಲಿಲ್ಲ ಗುಡಾರಗಳಲ್ಲಿ ಕುಳಿತುಕೊಂಡರೆ ಹಾಳಾದ ಧಗೆ. ಕ್ಷಣಮಾತ್ರದಲ್ಲಿ ಬೆವರಿನ ಸ್ನಾನವೂ ಆಗಿಹೋಗುತ್ತದೆ. ಇಂತಹ ಯಾತನಾಮಯ ಸನ್ನಿವೇಶದಲ್ಲಿ ಕೆಲಸ ಮಾಡಿಸಿಕೊಂಡಿರುವ ಗುತ್ತಿಗೆದಾರರು ಕೂಲಿಯನ್ನೂ ನೀಡಿಲ್ಲ. ಅಕ್ಕಿ ಕೊಳ್ಳಲು ದುಡ್ಡಿಲ್ಲ. ಅಕ್ಕಿ ತರೋಣವೆಂದರೆ ಅಂಗಡಿ ತೆಗೆಯುತ್ತಿಲ್ಲ. ಒಲೆ ಹಚ್ಚುವುದು ಹೇಗೆಂಬ ಚಿಂತೆಯಲ್ಲಿ ದಿನಕೂಲಿ ಕಾರ್ಮಿಕರು ಬದುಕು ಸವೆಸುವಂತಹ ಬಿಕ್ಕಟ್ಟಿನ ಪರಿಸ್ಥಿತಿ ತುಮಕೂರಿನಲ್ಲಿ ನಿರ್ಮಾಣವಾಗಿದೆ.

ಹೌದು, ಇದು ತುಮಕೂರಿಗೆ ಉತ್ತರ ಕರ್ನಾಟಕದಿಂದ ಬಂದಿರುವ ದಿನಗೂಲಿ ಕಾರ್ಮಿಕರ ದುಸ್ಥಿತಿ. ಕೇವಲ ರಾಯಚೂರು ಜಿಲ್ಲೆಯೊಂದರಿಂದಲೇ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳು ತುಮಕೂರಿಗೆ ಬಂದಿವೆ. ನಗರದ ಒಳಗೆ ಮತ್ತು ಹೊರಗೆ 50 ಕ್ಯಾಂಪ್‌ಗಳಲ್ಲಿ ಟೆಂಟ್ ಹಾಕಿಕೊಂಡು ಜೀವಿಸುತ್ತಿವೆ. ದೊಡ್ಡ ಕ್ಯಾಂಪ್ ಅಂದ್ರೆ ಸೋಮೇಶ್ವರಪುರಂ ಕೊನೆಯಲ್ಲಿ ರಾಧಾಕೃಷ್ಣ ರಸ್ತೆಯಲ್ಲಿರುವ ಕ್ಯಾಂಪ್. ಒಂದೇ ಕಡೆ 40ಕ್ಕೂ ಹೆಚ್ಚು ಕುಟುಂಬಗಳು ಟೆಂಟ್ ನಿರ್ಮಿಸಿಕೊಂಡು ಕಾಲದೂಡುತ್ತಿದ್ದಾರೆ. ಹಾಲುಕುಡಿಯುವ ಹಸುಳೆಯರು, ಅಪ್ರಾಪ್ತ ಬಾಲಕ ಬಾಲಕಿಯರು, ಹೆಂಗಸರು ಮತ್ತು ಪುರುಷರು ಕ್ಯಾಂಪ್‌ಗಳಲ್ಲಿ ಇದ್ದಾರೆ.

ಈಗ  ಕೊರನಾ ಸೋಂಕು ಹರಡುವ ಭೀತಿಯಿಂದ ಈ ಕೂಲಿಕಾರ್ಮಿಕರಿಗೆ ರಜೆ ನೀಡಲಾಗಿದೆ. ಹೀಗಾಗಿ ಕೆಲಸವಿಲ್ಲ. ಊರಿಗೆ ಹೋಗಬೇಕೆಂದರೆ ಬಸ್ ವ್ಯವಸ್ಥೆ ಇಲ್ಲ. ಇಲ್ಲಿರಲು ನೆಲೆ ಇಲ್ಲ. ಎರಡು ವಾರದಿಂದಲೂ ಮೇಸ್ತ್ರಿ ಕೂಲಿಹಣ ನೀಡಿಲ್ಲ. ಹೀಗಾಗಿ ಕೂಲಿಕಾರ್ಮಿಕರ ಪರಿಸ್ಥಿತಿ ಯಾರಿಗೂ ಹೇಳಿಕೊಳ್ಳುವಂತಿಲ್ಲ. ಇವರೆಲ್ಲ ತುಮಕೂರು ಸ್ಮಾರ್ಟಿಸಿಟಿಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದವರು. ಕುಡಿಯುವ ನೀರು ಪೈಪ್ ಅಳವಡಿಸುವುದು, ಮಲ್ಟಿಟ್ರ್ಯಾಕ್ ಪೈಪ್ ಲೈನ್‌ಗಾಗಿ ರಸ್ತೆ ಬದಿಯಲ್ಲಿ ಗುಂಡಿ ತೋಡುತ್ತಿದ್ದರು. ಗ್ಯಾಸ್ ಪೈಪ್ ಲೈನ್, ಚರಂಡಿಗಾಗಿ ಭೂಮಿ ಅಗೆಯುವ ಕೆಲಸ ಮಾಡುತ್ತಿದ್ದರು. ನಗರವನ್ನು ಕಟ್ಟುವಲ್ಲಿ ಇವರ ಪಾತ್ರ ಬಹುಮುಖ್ಯವಾದುದು. ಆದರೂ ಈ ಕೂಲಿ ಕಾರ್ಮಿಕರ ಬದುಕು ಕೊರೊನ ಮತ್ತು ಬಿಸಿಲ ಬೇಗೆಗೆ  ಬೆಂದು ಹೋಗಿದೆ.

ನಮ್ದು ರಾಯಚೂರ್ ರೀ. ನಮಗ ರೊಕ್ಕ ಕೊಟ್ಟು ಎರಡ್ ವಾರ ಆತ್ರಿ. ಊರಿಗೆ ಹೋಗೋಣ ಅಂದ್ರ ಬಸ್ ಇಲ್ರಿ. ಕೆಲಸಕ್ಕೆ ರಜೆ ಕೊಟ್ಟಾರ್ರೀ. ನಾವು ಏನೋ ಮಾಡೋದು ತಿಳಿತಿಲ್ರಿ, ಕೊರೊನ ಬಂದು ನಮ್ ಕೆಲಸ ಕಸ್ಕೊತ್ರಿ. ಅಂಗಡಿ ಬಂದ್ ಆಗೇವ. ರೊಕ್ಕನೂ ಇಲ್ಲ, ಅಕ್ಕಿನೂ ಇಲ್ಲ. ನೋಡ್ರಿ ಈ ಟೆಂಟ್ ಒಳಗ ನಿದ್ದಿ ಮಾಡೋಣ ಅಂದ್ರ ನಿದ್ದಿ ಬರೋದಿಲ್ರಿ, ಸ್ಯಾನ ಕಷ್ಟ ಆಗೇತ್ರಿ. ನಮಗೆ ರೊಕ್ಕ ಕೊಟ್ರ ಅಕ್ಕಿ, ಬೇಳಿ ಬೇರೆ ಬೇರೆ ಸಾಮಾನ ತರಬೌದ್ರಿ. ರೊಕ್ಕ ಕೊಡ್ತಾರ ಅಂತ ಎದುರು ನೋಡ್ತಾ ಇದ್ದೇವ್ರಿ. ನಾವ್ ಎಲ್ಲಿಗು ಹೋಕಾಗದಿಲ್ಲ. ಒಂದೇ ಕಡಿ ಕೂರ್ಬೇಕಂದ್ರ ಭಾಳ ತ್ರಾಸ ಆಗೇತ್ರಿ ಎಂದು ಅಲ್ಲಿನ ಮಹಿಳೆಯರು ನೋವು ತೋಡಿಕೊಂಡರು.

ಬಿಸಿಲಿನ ಧಗೆಗೆ ಮಕ್ಕಳ ಕಣ್ಣುಮುಚ್ಚಿದ್ದವು. ಪುರುಷರು ಮತ್ತು ಮಹಿಳೆಯರು ಟೆಂಟ್‌ಗಳಲ್ಲಿ ನಿದ್ದೆ ಬಾರದೆ ಹೊರಳಾಡುತ್ತಿದ್ದರು. ಇಡೀ ಟೆಂಟ್‌ಗಳು ನಿಶ್ಯಬ್ದವಾಗಿದ್ದವು. ಮಾತು ಇಲ್ಲ, ಕಥೆಯೂ ಇಲ್ಲ. ಅವರವರ ಪಾಡಿಗೆ ಅವರಿದ್ದರು. ನಾವು ಅಲ್ಲಿಗೆ ಹೋಗುತ್ತಿದ್ದಂತೆಯೇ ಒಬ್ಬೊಬ್ಬರೇ ಎದ್ದು ಬಂದರು. ಮೇಸ್ತ್ರಿಗೆ ಮೊಬೈಲ್ ಕರೆ ಮಾಡಿ ಕೇಳಿದರು. ಸ್ಮಾರ್ಟ್ ಸಿಟಿ ಕಾಮಗಾರಿ ಮಾಡಿಸುವ ಗುತ್ತಿಗೆದಾರರು ಪ್ರತಿವಾರವೂ ಕೂಲಿಹಣ ಬಟವಾಡೆ ಮಾಡಿಸಬೇಕಿತ್ತು. ಆದರೆ ಈ ಬಾರಿ ಹಾಗೆ ಮಾಡಿಲ್ಲ. ಗುತ್ತಿಗೆದಾರರು ಹಣ ಕೊಡದೆ ವಿಳಂಬ ಮಾಡಿರುವುದು ತಿಳಿದುಬಂತು. ಕೋಟಿಕೋಟಿ ಹಣ ಬಂದಿದ್ದರೂ ಸರಿಯಾಗಿ ಹಣ ಬಟವಾಡೆ ಮಾಡದಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದರು.

ಕುಣಿಗಲ್ ರಸ್ತೆಯಲ್ಲಿ ಬಳ್ಳಾರಿಯ ಜಿಲ್ಲೆಯ ನಾಲ್ಕು ಕುಟುಂಬಗಳು ಅದೇ ತಾನೆ ಟೆಂಟ್ ನಿರ್ಮಾಣಕ್ಕೆ ಸಿದ್ದತೆ ನಡೆಸುತ್ತಿದ್ದವು. ಕೆಲಸವಿಲ್ಲದೆ ತೊಂದರೆಯಾಗಿದೆ. ಸಣ್ಣ ಮಕ್ಕಳು ಇದ್ದಾವೆ. ಅವುಗಳನ್ನು ಕಟ್ಟಿಕೊಂಡು ಊರಿಗೆ ಹೋಗೋಕೆ ಆಗೊಲ್ಲ. ಬಸ್, ಲಾರಿ ಯಾವ ವ್ಯವಸ್ಥೆಯೂ ಇಲ್ಲ. ಗುತ್ತಿಗೆದಾರರನ್ನು ಕೇಳಿದ್ದೀವಿ. ಇಲ್ಲೇ ಟೆಂಟ್ ಹಾಕಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಎರಡು ದಬ್ಬೆಗಳನ್ನು ಜೋಡಿಸಿ ಮೊಳೆ ಹೊಡೆಯುತ್ತಿದ್ದರು. ಮಕ್ಕಳು ಮರದ ನೆರಳಿನಲ್ಲಿ ಆಡಿಕೊಳ್ಳುತ್ತಿದ್ದರು. ಬಿಸಿಲು ಕುಣಿಯುತ್ತಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು.

ತುಮಕೂರಿನಲ್ಲಿ ಉತ್ತರ ಕರ್ನಾಟದ ಜಿಲ್ಲೆಗಳಿಗೆ ಕೆಲಸಕ್ಕಾಗಿ ಅರಸಿ ಬಂದವರು ಇಂದು ಕೆಲಸವಿಲ್ಲದೆ, ಊರಿಗೂ ಹೋಗಲಾರದಂತಹ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಸಾವಿರಾರು ಕುಟುಂಬಗಳಿಗೆ ಗುತ್ತಿಗೆದಾರರು ನೀಡುವ ಹಣದಿಂದ ದವಸಧಾನ್ಯ ಖರೀದಿ ಮಾಡಿ ತುತ್ತಿನಚೀಲ ತುಂಬಿಸಿಕೊಳ್ಳಬೇಕಾಗಿದೆ. ಕೆಲಸದಲ್ಲಿ ಗಂಡಾಳಿಗೆ 450 ರೂಪಾಯಿ ಕೂಲಿ ನೀಡಿದರೆ ಹೆಣ್ಣಾಳಿಗೆ 300 ರೂಪಾಯಿ ನೀಡಿ ಕೂಲಿಯಲ್ಲೂ ತಾರತಮ್ಯ ಮಾಡಲಾಗುತ್ತಿದೆ.  ನಗರದ ರಸ್ತೆ, ಚರಂಡಿ, ಪೈಪ್ ಲೈನ್ ಮೊದಲಾದ ಜನೋಪಯೋಗಿ ಕೆಲಸ ಮಾಡುವ ಈ ಕೂಲಿಕಾರ್ಮಿಕರ ಬದುಕು ಅತಂತ್ರವಾಗಿದೆ. ನಗರವನ್ನೇ ನಿರ್ಮಿಸುವ ಇವರ ಬದುಕು ಹಸನಾಗುವುದೆಂತು?

ಕೂಡಲೇ ತುಮಕೂರು ಜಿಲ್ಲಾಡಳಿತ ಇವರ ನೆರವಿಗೆ ಬರಬೇಕಿದೆ. ಕೂಲಿ ಕೊಡುವುದರ ಜೊತೆಗೆ ಆಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕಿದೆ. ಇವರನ್ನು ನಿರ್ಮಾಣ ಕಾರ್ಮಿಕರ ಅಡಿಯಲ್ಲಿ ತಂದು ಪ್ರೋತ್ಸಾಹ ಧನ ನೀಡಬೇಕಿದೆ. ಈ ಕುರಿತು ಪ್ರಜ್ಞಾವಂತರು ಸರ್ಕಾರವನ್ನು ಒತ್ತಾಯಿಸಬೇಕಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here