ಕೊರೊನಾ ಕಾಲದ ಪ್ರಶ್ನೆಗಳಿಗೆ ಕೊರೊನಾ ಕಾಲದ ವಿಜ್ಞಾನ ಕೊಟ್ಟಿರುವ ಉತ್ತರಗಳಿವು

ಕಳೆದ ಸಂಚಿಕೆಯಲ್ಲಿ ಪ್ರಕಟಿಸಿದ್ದಂತೆ ವಿವಿಧ ದೇಶಗಳ ಅನುಭವಗಳು, ಭಾರತದ್ದೇ ಅನುಭವ ಮತ್ತು ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ತಜ್ಞರು ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡುವ ಅಗತ್ಯವಿತ್ತು. ಅವುಗಳ ಅಧ್ಯಯನ ಮಾಡಿ ಮುಂದಿನ ದಾರಿ ಹುಡುಕಬೇಕೆಂಬ ಪ್ರಯತ್ನದ ಭಾಗವಾಗಿ ಮುಂದಿಡಲಾಗುತ್ತಿರುವ ಬರಹದ ಮೊದಲನೇ ಕಂತು ಇದು.

ಕೊರೊನಾ ಸೋಂಕಿನ ಹರಡುವಿಕೆ ಮತ್ತು ಲಾಕ್‍ಡೌನ್‍ನ ಉಪಯುಕ್ತತೆ ಅಥವಾ ಅನುಪಯುಕ್ತತೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸರಿಯಾದ ಮುಂದಿನ ದಾರಿಯನ್ನು ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ. ಏಕೆಂದರೆ ಈಗಲೂ ಒಂದು ರೀತಿಯ ದಿಕ್ಕೇಡಿ ಸ್ಥಿತಿಯಲ್ಲಿ ಭಾರತವು ತನ್ನ ಕ್ರಮಗಳನ್ನು ಮುಂದಿಡುತ್ತಿರುವಂತೆ ಕಾಣುತ್ತಿದೆ. ಅತ್ಯಂತ ಕಡಿಮೆ ಪರೀಕ್ಷಿತ ರೋಗಿಗಳಿದ್ದಾಗ ಹಾಕಲಾಗಿದ್ದ ಲಾಕ್‍ಡೌನ್‍ಅನ್ನು 1 ಲಕ್ಷ ಖಚಿತಗೊಂಡ ರೋಗಿಗಳಿರುವಾಗ ಸಡಿಲಿಸಲಾಗುತ್ತಿದೆ. ಮುಂದೆ ಇದು ಇನ್ನೂ ಹೆಚ್ಚಾದಾಗ ಮತ್ತೆ ಲಾಕ್‍ಡೌನೇ ಪರಿಹಾರವಾ ಎಂಬ ಮಹತ್ವದ ತೀರ್ಮಾನ ಮತ್ತು ಇತರ ಕ್ರಮಗಳ ಯೋಜನೆಯನ್ನು ಸರ್ಕಾರಕ್ಕೆ ಮಾತ್ರ ಬಿಡಲಾಗದು ಎಂಬುದಕ್ಕೆ ಸಾಕಷ್ಟು ಕಾರಣಗಳನ್ನು ಈ ಎರಡು ತಿಂಗಳುಗಳು ಒದಗಿಸಿವೆ.

ಆ ದೃಷ್ಟಿಯಿಂದ ಪ್ರಜ್ಞಾವಂತರ ಮಧ್ಯೆ ಚರ್ಚೆಗಾಗಿ ಮುಂದಿಡಲಾದ ಬರಹ ಇದಾಗಿದೆ. ನಾವೇ ಹಾಕಿಕೊಂಡ ಪ್ರಶ್ನೆಗಳು ಮತ್ತು ಅದಕ್ಕೆ ಕಂಡುಕೊಂಡ ಉತ್ತರಗಳು ಇಲ್ಲಿವೆ. ಇದರ ವಿಸ್ಕೃತ ಭಾಗದ ಅನುವಾದ ಇನ್ನಷ್ಟೇ ಆಗಬೇಕಿದೆ. ಜೊತೆಗೆ ಈ ಅಧ್ಯಯನವು ಇನ್ನಷ್ಟು ಆಸಕ್ತರ ಜೊತೆಗೂಡಿ ಮುಂದುವರೆಯಬೇಕಿರುವುದರಿಂದ ಇದನ್ನು ಒಂದು ಆರಂಭಿಕ ಕರಡು ಎಂದಷ್ಟೇ ಭಾವಿಸಬೇಕೆಂದು ಕೋರುತ್ತೇವೆ.


ಇದನ್ನೂ ಓದಿ: ಕೊರೊನಾ ಮತ್ತು ಲಾಕ್‌ಡೌನ್‌ಅನ್ನು ಅರ್ಥ ಮಾಡಿಕೊಂಡು ಸರಿಯಾದ ಯೋಜನೆಗಾಗಿ ಆಗ್ರಹಿಸುವ ಈ ಅಧ್ಯಯನದಲ್ಲಿ ನೀವೂ ಭಾಗಿಯಾಗಬಹುದು 


1. ಭಾರತವು ಸಾಕಷ್ಟು ಮುಂಚೆ, ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸಿತೇ?

ಸಾಂಕ್ರಾಮಿಕವನ್ನು ತಡೆಗಟ್ಟುವಲ್ಲಿ ಬೇಗ ಎಚ್ಚೆತ್ತುಕೊಳ್ಳಲು ಬೇಕಾದ ಸರ್ವೇಕ್ಷಣಾ ವ್ಯವಸ್ಥೆ ಎಷ್ಟು ಸಕ್ರಿಯವಾಗಿದೆಯೆಂಬುದು ಒಂದು ಕೀಲಕ ಅಂಶವಾಗಿದೆ. ಸರ್ಕಾರಕ್ಕೆ ಬೇಗನೇ ಎಚ್ಚರಿಕೆಯ ಸಂದೇಹ ಹೋಗಿ ಬೇಗನೇ ಎಚ್ಚೆತ್ತರೆ ಬೇಗನೇ ತಡೆಗಟ್ಟಬಹುದು. ಅದಕ್ಕೆ ಎರಡು ಅತ್ಯುತ್ತಮ ಉದಾಹರಣೆಗಳೆಂದರೆ ತೈವಾನ್ ಮತ್ತು ಕೇರಳಗಳು. 2004ರಲ್ಲಿ ಸಾರ್ಸ್ ಬಂದಾಗ ಅತೀ ಹೆಚ್ಚು ಸಂಕಷ್ಟಕ್ಕೀಡಾದ ದೇಶಗಳಲ್ಲಿ ಒಂದಾಗಿದ್ದರಿಂದ, ತೈವಾನ್ ಕೇಂದ್ರೀಯ ಸಾಂಕ್ರಾಮಿಕ ನಿಯಂತ್ರಣ ಕೇಂದ್ರ (Central Epidemic Command Center CECC)ವನ್ನು ಸ್ಥಾಪಿಸಿತ್ತು. 2009ರಲ್ಲಿ ಸ್ವೈನ್ ಫ್ಲೂ ಬಂದಾಗ, 2013ರಲ್ಲಿ ಹಕ್ಕಿ ಜ್ವರ ಬಂದಾಗ ಮತ್ತು 2015ರಲ್ಲಿ ಡೆಂಗ್ಯೂ ಜ್ವರ ಬಂದಾಗಲೆಲ್ಲಾ ಅದು ಕ್ರಿಯಾಶೀಲವಾಗಿತ್ತು. ಚೀನಾದಲ್ಲಿ ಕೋವಿಡ್-19ರ ಕೇಸುಗಳು ಹೆಚ್ಚಾದಂತೆಲ್ಲಾ ಟೈವಾನ್ ಎಚ್ಚೆತ್ತಿತ್ತು. ಡಿಸೆಂಬರ್ 31ರಿಂದಲೇ ವುಹಾನ್‍ನಿಂದ ಬರುವ ಪ್ರಯಾಣಿಕರನ್ನು ಪರಿಶೀಲನೆಗೆ ಒಳಪಡಿಸಿತು ಮತ್ತು ಚೀನಾ, ಹಾಂಗ್‍ಕಾಂಗ್ ಮತ್ತು ಮಕಾವುನಿಂದ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿತು. ವಿಶ್ವ ಆರೋಗ್ಯ ಸಂಸ್ಥೆಯು ಇದನ್ನೊಂದು ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದ್ದು ಜನವರಿ 20ರ ಹೊತ್ತಿಗೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಹಾಗೆಯೇ ಕೇರಳವು ಉತ್ತಮವಾದ ಸರ್ಕಾರೀ ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿದ್ದು, 2018ರಲ್ಲಿ ನಿಫಾ ಸಾಂಕ್ರಾಮಿಕಕ್ಕೆ ಗುರಿಯಾಗಿದ್ದಾಗ ಅದನ್ನು ಎದುರಿಸಿದಾಗ ಹಲವು ಕ್ರಮಗಳ ಅನುಭವ ಪಡೆದುಕೊಂಡಿತ್ತು. ಕೇರಳದ ಸಿದ್ಧತೆಯ ಮಟ್ಟವು ಪ್ರಪಂಚದ ಹಲವು ಸದೃಢ ಸರ್ಕಾರೀ ಆರೋಗ್ಯ ವ್ಯವಸ್ಥೆಗೆ ಹೋಲಿಸಬಹುದಾದ ಪ್ರಮಾಣದಲ್ಲಿದೆ. 30ನೇ ಜನವರಿ 2020ರಂದು ಮೊದಲ ಕೇಸು ಕೇರಳದಲ್ಲಿ ಪತ್ತೆಯಾದಾಗಲೇ ತನ್ನ ಕೆಲಸ ಆರಂಭಿಸಿ ಸಮಗ್ರ ರೋಗ ಸರ್ವೇಕ್ಷಣಾ ಯೋಜನೆಯನ್ನು ಕ್ರಿಯಾಶೀಲಗೊಳಿಸಿತು.

ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಇದರೊಂದಿಗೆ ಹೋಲಿಸಿದರೆ ಬಹಳ ಹಿಂದುಳಿದಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಜನವರಿ 2020ರ 30ನೇ ತೇದಿಯಂದು ಜಾಗತಿಕ ತುರ್ತುಸ್ಥಿತಿ ಘೋಷಿಸಿದ್ದು, ಅದೇ ದಿನ ಭಾರತದಲ್ಲೂ ಮೊದಲನೇ ಕೇಸು ಪತ್ತೆಯಾಗಿದ್ದರೂ 2020ರ ಮಾರ್ಚ್ 3ರವರೆಗೆ ಚೀನಾ, ಇರಾನ್, ಇಟಲಿ ಮತ್ತು ದಕ್ಷಿಣ ಕೊರಿಯಾಘಳಿಂದ ಇಲ್ಲಿಗೆ ಪ್ರಯಾಣಿಕರಿಗೆ ಅವಕಾಶವಿತ್ತು. ಫ್ರಾನ್ಸ್, ಜರ್ಮನಿ ಮತ್ತು ಸ್ಪೇನ್ ರಾಷ್ಟ್ರದವರ ವೀಸಾಗಳನ್ನು ರದ್ದುಗೊಳಿಸಿದ್ದು ಮಾರ್ಚ್ 11ಕ್ಕೆ. ದೈಹಿಕ ಅಂತರದ ಕ್ರಮಗಳನ್ನು ಕೇಂದ್ರ ಸರ್ಕಾರವು ಪ್ರಸ್ತಾಪಿಸಿ ಶಾಲೆಗಳನ್ನು ಮುಚ್ಚಲು ಹೇಳಿದ್ದು ಮಾರ್ಚ್ 16ರಂದು, ಅಂದರೆ ಮೊದಲ ಕೇಸು ವರದಿಯಾದ ಒಂದೂವರೆ ತಿಂಗಳ ನಂತರ. ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆ ಆರಂಭಿಸಿದ್ದು ಮಾರ್ಚ್ 4ರಂದು. ಜನವರಿ 18ರಿಂದ ಮಾರ್ಚ್ 23ರ ನಡುವೆ ಭಾರತಕ್ಕೆ ಒಟ್ಟು 15 ಲಕ್ಷ ಅಂತರ್ರಾಷ್ಟ್ರೀಯ ಪ್ರಯಾಣಿಕರು ಬಂದಿದ್ದಾರೆಂದು ಅಂದಾಜಿಸಲಾಗಿದೆ.

ಅಂದರೆ ಕೇಂದ್ರ ಸರ್ಕಾರವು ಸ್ಕ್ರೀನಿಂಗ್ ಮಾಡಿ ಸೋಂಕಿತರನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ತಡಮಾಡಿದೆ ಎಂಬುದು ಗೊತ್ತಾಗುತ್ತದೆ. ಇದು ಭಾರತದಲ್ಲಿ ಸೋಂಕು ಹರಡದಂತೆ ಮಾಡುವಲ್ಲಿ ಮೊದಲ ಕ್ರಮವಾಗಿತ್ತು.

2. ಕೋವಿಡ್ 19ಅನ್ನು ನಿಗ್ರಹಿಸಲು ಭಾರತದಲ್ಲಿ ಲಾಕ್‍ಡೌನ್ ಅತ್ಯುತ್ತಮ ವಿಧಾನವಾಗಿತ್ತೇ?

ದೇಶದ ಎಲ್ಲಾ ಕಡೆ ಒಂದೇ ರೀತಿಯ ಮತ್ತು ಸಂಪೂರ್ಣ ಲಾಕ್‍ಡೌನ್‍ನ ದುಷ್ಪರಿಣಾಮಗಳ ಕುರಿತಂತೆ ಹಲವು ತಜ್ಞರು ಲಾಕ್‍ಡೌನ್ ಶುರುವಾದಾಗಲೇ ಎಚ್ಚರಿಸಿದ್ದರು. ಅದರಲ್ಲೂ ದೇಶದ ನಾಲ್ಕರಲ್ಲಿ ಮೂರು ಭಾಗ ಜನರು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರಿರುವಾಗ, ಇದರ ಪರಿಣಾಮ ಶೋಷಿತ ಸಮುದಾಯಗಳ ಮೇಲೆ ಹೇಗೆ ಬೀಳಬಹುದು ಎಂಬ ಕುರಿತು ಮುನ್ನೆಚ್ಚರಿಕೆಗಳು ಬಂದಿದ್ದವು. ಸಾಂಕ್ರಾಮಿಕ ರೋಗ ತಜ್ಞರೇ ‘ಬಲವಂತದ ಲಾಕ್‍ಡೌನ್ ಜನರಿಗೆ ಸಂಕಷ್ಟಗಳು, ಶೋಷಣೆ ಮತ್ತು ಸಮಸ್ಯಾತ್ಮಕ ಜನಗಳ ಕೈಗೆ ಅಧಿಕಾರ ನೀಡುವುದರ ಕಡೆಗೆ’ ಕೊಂಡೊಯ್ಯುತ್ತದೆ ಎಂದಿದ್ದರು. ಅದಲ್ಲದೇ ತಯಾರಿಯಿಲ್ಲದೇ ಗಡಿಬಿಡಿಯಲ್ಲಿ ಲಾಕ್‍ಡೌನ್ ಮಾಡುವುದರಿಂದ ದಮನಿತ ಸಮುದಾಯಗಳ ಮೇಲೆ ಒತ್ತಡ ಬಿದ್ದು ಮಾನವ ದುರಂತಗಳಿಗೆ ಕಾರಣವಾಗುತ್ತದೆಂಬುದನ್ನೂ ಹೇಳಲಾಗಿತ್ತು. ಆದರೆ ಅದೇ ರೀತಿಯ ಲಾಕ್‍ಡೌನ್ ಜಾರಿಗೆ ಬಂದು ಇಂದು ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿವೆ.

ಇಲ್ಲಿ ಹೇರಲಾದಷ್ಟು ಕಠಿಣ ಲಾಕ್‍ಡೌನ್ ಇಲ್ಲದೇ ಪರಿಣಾಮಕಾರಿಯಾದ ಕೆಲವು ಕ್ರಮಗಳ ಸಲಹೆಗಳೂ ಬಂದಿದ್ದವು. ಅದರಲ್ಲಿ ಒಂದು, ವಯಸ್ಸಾದವರು ಮತ್ತು ರಿಸ್ಕ್‍ನಲ್ಲಿದ್ದವರನ್ನು ಮಾತ್ರ ಪ್ರತ್ಯೇಕಗೊಳಿಸಿ ಯುವಜನರನ್ನು ಅವರ ಮಾಮೂಲಿನ ಚಟುವಟಿಕೆಗಳನ್ನು ಮಾಡಲು ಬಿಡುವುದರ ಮೂಲಕ ಸಾಮೂಹಿಕ ರೋಗನಿರೋಧಕತೆ ರೂಪಿಸಬಹುದು ಎಂಬುದಾಗಿತ್ತು. ಹಾಗೆಯೇ ಯಾವುದನ್ನು ‘ಹಾಟ್‍ಸ್ಪಾಟ್’ ಎಂದು ಕರೆಯಲಾಗುತ್ತಿತ್ತೋ, ಅಂತಹ ಜಾಗಗಳಲ್ಲಿ ಮಾತ್ರ ಲಾಕ್‍ಡೌನ್ ಮಾಡಬಹುದಿತ್ತು ಎಂಬುದು. ಟೆಸ್ಟ್‍ಗಳನ್ನು ಬೇಗನೇ ಹೆಚ್ಚೆಚ್ಚು ಮಾಡಿ, ಸೋಂಕಿತರು ಹಾಗೂ ಅವರ ಸಂಪರ್ಕಗಳನ್ನು ಹುಡುಕಿ ಅಂಥವರ ಕ್ವಾರಂಟೈನ್ ಮಾಡುವುದು ಹೆಚ್ಚು ಪರಿಣಾಮಕಾರಿ ಎಂಬ ಇನ್ನೊಂದು ಸಲಹೆಯೂ ಇತ್ತು.

ಆದರೆ ಈ ಸಂದರ್ಭದಲ್ಲಿ ಟೆಸ್ಟ್ ಕಿಟ್‍ಗಳು ಇತ್ಯಾದಿಗಳನ್ನು ಖರೀದಿಸಬೇಕಾಗುತ್ತಿತ್ತು. ಅದು ಬಹಳ ತಡವಾಯಿತು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಯಾವ ಪರ್ಯಾಯ ಸಲಹೆಗಳನ್ನು ಮುಂದಿಡಲಾಗಿತ್ತೋ ಅವುಗಳನ್ನು ಮಾಡಲೇ ಇಲ್ಲ ಹಾಗೂ ಯಾವುದು ದೇಶದ ಆರ್ಥಿಕತೆಯ ಮೇಲೆ ಗಂಭೀರ (ದಿನಕ್ಕೆ 35,000 ಕೋಟಿ ನಷ್ಟ) ಪರಿಣಾಮ ಬೀರುವ ಸಂಪೂರ್ಣ ಮತ್ತು ಸಾರ್ವತ್ರಿಕ ಲಾಕ್‍ಡೌನ್‍ಅನ್ನು ಜಾರಿಗೊಳಿಸಲಾಯಿತು. ಚೀನಾ ದೇಶ ಸಹಾ ದೇಶಾದ್ಯಂತ ಲಾಕ್‍ಡೌನ್ ಹೇರಿರಲಿಲ್ಲ ಮತ್ತು ಲಾಕ್‍ಡೌನ್‍ನಿಂದ ಅಂತಹ ಪ್ರಯೋಜನಗಳಿಲ್ಲ ಎಂದು ಅದು ತೀರ್ಮಾನಿಸುವ ಹೊತ್ತಿಗೆ ಪ್ರಪಂಚದ ಇತರೆಡೆಗಳಲ್ಲಿ ಲಾಕ್‍ಡೌನ್‍ನ ಚರ್ಚೆ ಆರಂಭವಾಗಿತ್ತು. ಭಾರತದಲ್ಲೂ ಅದೇ ಪರಿಸ್ಥಿತಿ ಇತ್ತು. ಹೀಗಾಗಿ ಮಾರ್ಚ್ 24ರಂದು ಲಾಕ್‍ಡೌನ್ ಘೋಷಿಸಿದಾಗ ಇನ್ನೂ ಸ್ಪಷ್ಟತೆಯಿರಲಿಲ್ಲ. ಆದರೆ ನಂತರದಲ್ಲಿ ಲಾಕ್‍ಡೌನ್ ಮತ್ತು ಆರ್ಥಿಕ ನಷ್ಟದ ನಡುವೆ ಸರಿಯಾದ ಸಮತೋಲನ ಹೊಂದಲು ಬೇಕಾದಷ್ಟು ಮಾಹಿತಿ, ಪುರಾವೆಗಳು ಲಭಿಸಲು ಆರಂಭವಾಗಿದ್ದವು. ಹಾಗಾಗಿ ಏಪ್ರಿಲ್ 14ರ ಹೊತ್ತಿಗೆ ತಜ್ಞರ ಅಭಿಪ್ರಾಯಗಳೂ ಬರತೊಡಗಿದ್ದವು. ಮಾರ್ಚ್ 24ಕ್ಕಿಂತ ಮುಂಚೆ ಲಾಕ್‍ಡೌನ್‍ಅನ್ನು ಪ್ರಬಲವಾಗಿ ಪ್ರತಿಪಾದಿಸಿದವರೂ ‘ಇನ್ನು ಸಾಕು. ಇನ್ನು ಮುಂದಿನ ಲಾಕ್‍ಡೌನ್‍ನಿಂದ ಹೆಚ್ಚಿನ ಪ್ರಯೋಜನಗಳಿಲ್ಲ’ ಎಂದು ಹೇಳಿದ್ದರು. ‘ಸೋಂಕು ಹೆಚ್ಚಾಗೇ ಆಗುತ್ತದೆ, ಲಾಕ್‍ಡೌನ್ ಇದ್ದರೂ, ಇಲ್ಲದಿದ್ದರೂ. ಈಗೇನಿದ್ದರೂ ಎಷ್ಟರಮಟ್ಟಿಗೆ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿ ಮಾಡಿಕೊಂಡಿದ್ದೇವೆ ಎಂಬುದಷ್ಟೇ ಮುಖ್ಯ’ ಎಂದಿದ್ದರು.

ಆದರೆ ಸರ್ಕಾರವು ವಿರುದ್ಧ ದಿಕ್ಕಿನಲ್ಲಿ ಆಲೋಚಿಸುತ್ತಿದ್ದಂತಿತ್ತು. ಅವರ ಪ್ರಕಾರ ಲಾಕ್‍ಡೌನ್ ಬಹಳ ಪರಿಣಾಮಕಾರಿಯಾಗಿತ್ತು. ಮೇ 16ರ ಹೊತ್ತಿಗೆ ದೇಶದಲ್ಲಿ ಹೊಸ ಕೇಸುಗಳ ಸಂಖ್ಯೆ ಸೊನ್ನೆಗಿಳಿಯುತ್ತದೆ ಎಂಬುದರ ಕುರಿತು ಆತ್ಮವಿಶ್ವಾಸವಿತ್ತು.

3. ಒಂದು ವೇಳೆ ಲಾಕ್‍ಡೌನೇ ಅಂದಿನ ಸಂದರ್ಭದಲ್ಲಿ ಸೂಕ್ತವಾಗಿತ್ತು ಎನ್ನುವುದಾದರೆ, ಭಾರತವು ಅದಕ್ಕೆ ಸೂಕ್ತವಾದ ಯೋಜನೆ ಮಾಡಿಕೊಂಡಿತ್ತೇ?

ಭಾರತದ ಲಾಕ್‍ಡೌನ್‍ನ ಎದ್ದುಕಾಣುವ ಲಕ್ಷಣವೇನಾಗಿತ್ತೆಂದರೆ ಅದಕ್ಕೆ ಯಾವ ತಯಾರಿಯೂ ಆಗಿರಲಿಲ್ಲ ಮತ್ತು ಘೋಷಣೆಯಾದ ನಾಲ್ಕು ಗಂಟೆಗಳಲ್ಲಿ ಜಾರಿ ಮಾಡಲಾಯಿತು. ಅದು ಉಂಟು ಮಾಡಿದ ಮಾನವೀಯ ಸಂಕಷ್ಟವು ಈಗಾಗಲೇ ಕಂಡಿದೆ. ಭಾರತದ ಕೇರಳ ರಾಜ್ಯವು ಆ ಹೊತ್ತಿಗೆ ಯಶಸ್ವಿಯಾಗಿ ಜಾರಿ ಮಾಡಿದ್ದ ಕ್ರಮಗಳಿಗೂ ಕೇಂದ್ರವು ಸೂಚಿಸಿದ ಕ್ರಮಗಳಿಗೂ ದೊಡ್ಡ ವ್ಯತ್ಯಾಸವಿತ್ತು. ಆಹಾರ ಭದ್ರತೆ ಮತ್ತು ಆರೋಗ್ಯ ಸೇವೆಯ ತಯಾರಿಯ ಉಪಾಯಗಳ ವಿಚಾರದಲ್ಲಿ ಉತ್ತಮವಾದ ಯೋಜನೆಗಳನ್ನು ಆ ರಾಜ್ಯದಲ್ಲಿ ಅಳವಡಿಸಲಾಗಿತ್ತು. ಸಾರ್ವಜನಿಕರ ಓಡಾಟ, ಸರಕು ಸಾಗಾಣಿಕೆ, ಅಗತ್ಯ ವಸ್ತುಗಳ ಸಾಗಾಟಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು.

ಖಾಲಿ ಬಿಟ್ಟಿದ್ದ ಕಟ್ಟಡಗಳನ್ನು ಮತ್ತು ಇನ್ನಿತರ ಭವನಗಳನ್ನು ವಶಕ್ಕೆ ತೆಗೆದುಕೊಂಡು ಕೋವಿಡ್ ಸೇವಾ ಕೇಂದ್ರಗಳನ್ನು ಮತ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಯಿತು. ಆಹಾರದ ಅಗತ್ಯವಿದ್ದ ಲಕ್ಷಾಂತರ ಜನರಿಗೆ ಉಣಬಡಿಸಲು ಸಾಮುದಾಯಿಕ ಅಡಿಗೆ ಮನೆಗಳನ್ನು ತೆರೆಯಲಾಯಿತು. ದೇಶದಲ್ಲೇ ಅತ್ಯಂತ ಹೆಚ್ಚು ಸೋಂಕಿತರಿದ್ದ, ಮೊದಲು ಸೋಂಕು ಪತ್ತೆಯಾದ ಮತ್ತು ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲಿ ಹೊರದೇಶದಲ್ಲಿ ಸ್ಥಳೀಯರನ್ನು ಹೊಂದಿದ್ದ ರಾಜ್ಯವು ಬಹುಬೇಗ ನಿಯಂತ್ರಣವನ್ನು ಸಾಧಿಸಿತ್ತು. ಆ ಮಾದರಿಯನ್ನು ದೇಶದ ಇತರೆಡೆಗಳಲ್ಲಿ ಜಾರಿ ಮಾಡದೇ ಇದ್ದುದರ ಕಾರಣ ಏನಿರಬಹುದೆಂಬುದು ಯಕ್ಷ ಪ್ರಶ್ನೆಯಾಗಿದೆ.

4. ಸಾಂಕ್ರಾಮಿಕವನ್ನು ತಡೆಗಟ್ಟಲು ಲಾಕ್‍ಡೌನ್ ಪರಿಣಾಮಕಾರಿಯಾಗಿತ್ತೇ?

ಸಹಜವಾಗಿ ಲಾಕ್‍ಡೌನ್ ಎಂಬುದು ದೇಶದ ಆರ್ಥಿಕತೆಯ ಮೇಲೆ, ದುಡಿಯುವ ಜನಸಮುದಾಯದ ಮೇಲೆ ಅದರಲ್ಲೂ ಶೋಷಿತರ ಮೇಲೆ ತೀರದ ಸಂಕಷ್ಟವನ್ನು ಉಂಟು ಮಾಡುವುದರಲ್ಲಿ ಸಂಶಯವಿರಲಿಲ್ಲ. ಆದರೆ, ಯಾವ ಉದ್ದೇಶಕ್ಕಾಗಿ (ಅಂದರೆ ಸಾಂಕ್ರಾಮಿಕವನ್ನು ತಡೆಗಟ್ಟಲು) ಅದನ್ನು ಜಾರಿ ಮಾಡಲಾಗಿತ್ತೋ, ಅದು ಯಶಸ್ವಿಯಾಯಿತೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ಈ ವಿಚಾರದಲ್ಲಿ ಅಧ್ಯಯನ ನಡೆಸುತ್ತಿದ್ದ Cov-Ind- Study Group ಗುಂಪು ಒಂದು ವೇಳೆ ಯಾವುದೇ ಮುನ್ನೆಚ್ಚರಿಎಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮೇ 15ರ ಹೊತ್ತಿಗೆ ಒಂದು ಲಕ್ಷ ಜನಸಂಖ್ಯೆಗೆ 161 ಜನರಿಗೆ (ಅಂದರೆ ದೇಶಾದ್ಯಂತ 2.2 ಮಿಲಿಯನ್ ಕೇಸುಗಳು) ಕೊರೊನಾ ಸೋಂಕು ಹಬ್ಬಬಹುದೆಂದು ಅಂದಾಜಿಸಿದ್ದರು. ಅತ್ಯಂತ ತೀವ್ರ ರೂಪದ ಮಧ್ಯಪ್ರವೇಶ ಮಾಡಿದ್ದೇ ಆದಲ್ಲಿ ಲಕ್ಷಕ್ಕೆ ಒಬ್ಬರಿಗೆ ಸೋಂಕು ಹಬ್ಬಬಹುದು (ಅಂದರೆ ದೇಶಾದ್ಯಂತ 13,800 ಕೇಸುಗಳು) ಎಂದಿದ್ದರು.

ಇಂತಹ ಬಹಳಷ್ಟು ಮುಂದಂದಾಜುಗಳನ್ನು ಕೆಲವು ತಜ್ಞರು ‘ಭಾರತಕ್ಕೆ ಇವು ಅನ್ವಯವಾಗುವುದಿಲ್ಲ’ ಎಂದು ತಳ್ಳಿಹಾಕಿದ್ದಾರಾದರೂ, ‘ಅತ್ಯಂತ ಕಠಿಣವಾದ ಮಧ್ಯಪ್ರದೇಶ’ದ ಹೊರತಾಗಿಯೂ ಭಾರತದಲ್ಲಿ ಮೇ 20ರ ಹೊತ್ತಿಗೆ 1 ಲಕ್ಷಕ್ಕೂ ಹೆಚ್ಚು ದೃಢೀಕೃತ ಕೊರೊನಾ ಕೇಸುಗಳಿದ್ದವು. ಒಟ್ಟಾರೆ ಸೋಂಕಿತರ ಸಂಖ್ಯೆ ಇದರ ನಾಲ್ಕೈದು ಪಟ್ಟು ಇರುವ ಎಲ್ಲಾ ಸಾಧ್ಯತೆಯಿದೆ. ಪ್ರತಿದಿನವೂ ಕೇಸುಗಳು ಹೆಚ್ಚುತ್ತಿವೆಯೇ ಹೊರತು ತಗ್ಗುತ್ತಿಲ್ಲ. ಕೊರೊನಾ ಸೋಂಕಿತರ ಶಿಖರ (peak) ಜುಲೈ ಕೊನೆ ಅಥವಾ ಆಗಸ್ಟ್ ಹೊತ್ತಿಗೆ ಆಗಬಹುದೆಂದು ಹೇಳಲಾಗುತ್ತಿದೆ. ಹಾಗಾಗಿ ಈ ಲಾಕ್‍ಡೌನ್ ಸೋಂಕು ಹರಡುವುದನ್ನು ನಿಧಾನಿಸಲು ಒಂದಷ್ಟು ಮಟ್ಟಿಗೆ ಸಹಾಯಕವಾಗಿದೆ. ಆದರೆ, ಮೊದಲ ಹಂತದ ನಂತರ ಅದರ ಯಶಸ್ಸು ಕಡಿಮೆಯಾಗುತ್ತಾ ಬಂದಿರುವುದನ್ನು ನೋಡಬಹುದು.

ಏಪ್ರಿಲ್ ತಿಂಗಳ ಮೊದಲ ವಾರಗಳಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು ಒಂದು ವಾರ ಬೇಕಿತ್ತು. ಆದರೆ, ಏಪ್ರಿಲ್ ಕಡೆಯ ವಾರದ ಹೊತ್ತಿಗೆ ಇದು 12.5 ದಿನ ತೆಗೆದುಕೊಂಡಿತು (25 ಸಾವಿರದಿಂದ 50 ಸಾವಿರ). ಮೇ ಎರಡನೆ ವಾರದ ಹೊತ್ತಿಗೆ ಅಂದರೆ 50,000ದಿಂದ 1 ಲಕ್ಷ ತಲುಪಲು 11 ದಿನ ತೆಗೆದುಕೊಂಡಿದೆ. ಮೇ 15ರ ರಾತ್ರಿಯಿಂದ ಮೇ 16ರ ಹೊತ್ತಿಗೆ 9,500 ಪ್ರಕರಣಗಳು ಪತ್ತೆಯಾಗಿದ್ದರೆ, ಮೇ 17ರಂದು 5,200 ಪ್ರಕರಣಗಳು ಮತ್ತು ಮೇ 18ರಂದು 7,700 ಪ್ರಕರಣಗಳು ಪತ್ತೆಯಾಗಿದ್ದವು.

ಲಾಕ್‍ಡೌನ್‍ನ ಉದ್ದೇಶವೇ ಸೋಂಕು ಹರಡುವುದನ್ನು ನಿಧಾನ ಮಾಡುವುದೇ ಆಗಿರಬೇಕಿತ್ತೇ ಹೊರತು ತಡೆಯುವುದಲ್ಲ. ಆದರೆ ‘ಮಹಾಭಾರತ ಯುದ್ಧ 18 ದಿನಗಳ ಕಾಲ ನಡೆದಿತ್ತು; ನಾವು ಈ ಯುದ್ಧವನ್ನು 21 ದಿನಗಳೊಳಗೆ ಮುಗಿಸೋಣ’, ‘ಮೇ 16ರ ಒಳಗೆ ಒಂದೂ ಹೊಸ ಕೇಸು ಇರಲ್ಲ’ ಎಂಬ ರೀತಿಯ ಹೇಳಿಕೆಗಳು ಸರ್ಕಾರದ ಉದ್ದೇಶವನ್ನು ಹೇಳುವುದಾದರೆ ಲಾಕ್‍ಡೌನ್ ಸಂಪೂರ್ಣ ವಿಫಲವಾಗಿದೆ.

5. ಕೋವಿಡ್ 19ರ ಕುರಿತು ಸರ್ಕಾರವು ಎಷ್ಟರಮಟ್ಟಿಗೆ ಸತ್ಯ ಸಂಗತಿಗಳನ್ನು ತಿಳಿಸುವ ಪ್ರಯತ್ನ ಮಾಡಿತು?

ಕೋವಿಡ್ 19ರ ಕುರಿತು, ಅಂದರೆ ಜನರು ಅದರ ಬಗ್ಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕೆಂದು ತಿಳಿಸುತ್ತಲೇ ಭೀತಿಗೆ ಒಳಗಾಗದಿರುವಂತೆ ಮಾಡುವುದು ಸರ್ಕಾರದ ಕರ್ತವ್ಯವಾಗಿತ್ತು. ಇದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ಭೀತಿಗೆ ಒಳಗಾಗಬಾರದೆಂಬಂತೆ ಪ್ರಯತ್ನಿಸಿದರೆ ಜನರು ನಿರ್ಲಕ್ಷಿಸುವ ಅಪಾಯವಿತ್ತು. ಜಾಹೀರಾತುಗಳ ಮೂಲಕ, ಜವಾಬ್ದಾರಿ ಸ್ಥಾನದಲ್ಲಿರುವವರ ಮೂಲಕ, ಫೋನ್ ಕಾಲರ್ ಟ್ಯೂನ್, ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಮೂಲಕ ಸರ್ಕಾರವು ಮುನ್ನೆಚ್ಚರಿಕೆಗಳನ್ನು ಯಾವ ರೀತಿ ತೆಗೆದುಕೊಳ್ಳಬೇಕೆಂಬುದರ ಕುರಿತು ಮಾಹಿತಿ ಪ್ರಸಾರ ಮಾಡಿತು.

ಆದರೆ ಈ ಎಲ್ಲಾ ಸಂಗತಿಗಳ ವಿಚಾರದಲ್ಲಿ ತಜ್ಞರು ಹೆಚ್ಚು ಮಾತಾಡಿದ್ದಾಗಲೀ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾಗಲೀ ಕಾಣಲಿಲ್ಲ. ವೈದ್ಯರು, ಸಾಂಕ್ರಾಮಿಕ ರೋಗ ತಜ್ಞರು ಹೆಚ್ಚು ಮಾತಾಡುವ ಅಗತ್ಯವಿತ್ತು; ಅದಾಗಲಿಲ್ಲ. ರಾಜಕೀಯ ನಾಯಕರುಗಳಿಗೆ ಅವರದ್ದೇ ಸ್ಥಾನವಿರುತ್ತದೆ ಮತ್ತು ಅವರುಗಳು ಏಕಕಾಲದಲ್ಲಿ ಜನರಿಗೆ ಭದ್ರತೆಯ ಭಾವ ಕೊಡುವ ಮತ್ತು ಮುನ್ನೆಚ್ಚರಿಕೆಗಳ ಕುರಿತು ಕಠಿಣ ಕ್ರಮಗಳನ್ನು ಸೂಚಿಸುವ ಎರಡೂ ಕರ್ತವ್ಯ ಹೊಂದಿರುತ್ತಾರೆ. ತಜ್ಞರು ಮತ್ತು ರಾಜಕೀಯ ನಾಯಕರುಗಳಲ್ಲಿ ಯಾರು, ಹೇಗೆ, ಎಷ್ಟು ಮಾತಾಡಬೇಕೆಂಬುದರಲ್ಲಿ ಸೂಕ್ತ ಸಮತೋಲನವಿರಲಿಲ್ಲ. ಕರ್ನಾಟಕದ ಆರೋಗ್ಯ ಸಚಿವರಲ್ಲದೇ, ಹಲವು ಜನಪ್ರತಿನಿಧಿಗಳು ಅತ್ಯಂತ ಅವೈಜ್ಞಾನಿಕ ಸಂಗತಿಗಳನ್ನು ಬಹಿರಂಗವಾಗಿ ಪ್ರತಿಪಾದಿಸಿದರು.

ಅದಕ್ಕಿಂತ ಮುಖ್ಯವಾಗಿ ಕೊರೋನಾ ಸೋಂಕಿನ ಕ್ರಿಮಿನಲೀಕರಣ ಟಿವಿ ಮಾಧ್ಯಮಗಳಲ್ಲಿ ಬಹಳ ಹೆಚ್ಚಾಗಿ ನಡೆಯಿತು. ಈ ಕ್ರಿಮಿನಲೀಕರಣವನ್ನು ತಡೆಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಲಿಲ್ಲ. ಫೇಕ್‍ನ್ಯೂಸ್, ರೋಗಿಗಳನ್ನು ಮತ್ತು ಅವರ ಸಮುದಾಯಗಳನ್ನು ಗುರಿ ಮಾಡುವುದು, ಸೋಂಕಿತರಿರುವ ಪ್ರದೇಶಗಳನ್ನು ಗುರಿ ಮಾಡುವುದು ಇತ್ಯಾದಿಗಳು ಸಾಮಾಜಿಕ ಬಹಿಷ್ಕಾರಕ್ಕೆ ಗುರಿ ಮಾಡುವಂತೆ ಮಾಡಿದವು. ಏಮ್ಸ್ ನಿರ್ದೇಶಕರು ಇದರ ಬಗ್ಗೆ ಎಚ್ಚರಿಸಿದ್ದಲ್ಲದೇ, ಒಟ್ಟಾರೆ ಸಾಂಕ್ರಾಮಿಕದ ನಿಯಂತ್ರಣಕ್ಕೂ ಇದು ತೊಂದರೆ ಕೊಡುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಸೌಹಾರ್ದ ಕದಡಿ ಹೋಗಿದ್ದು ಈ ಸಂದರ್ಭದಲ್ಲಿ ಆದ ಮತ್ತೊಂದು ದುರದೃಷ್ಟಕರ ಬೆಳವಣಿಗೆ. ಇದನ್ನು ಸರಿ ಮಾಡಲು ಯಾವುದೇ ಕ್ರಮವಾಗಲಿಲ್ಲವಷ್ಟೇ ಅಲ್ಲ, ಸರ್ಕಾರದ ಬೆಂಬಲ ಇರಬಹುದು ಎಂದು ತೋರುತ್ತಿತ್ತು.

ಸಮಾಜದಲ್ಲಿ ಸೌಹಾರ್ದ ಕದಡಿದ್ದಷ್ಟೇ ಅಲ್ಲದೇ, ಸಾಂಕ್ರಾಮಿಕವನ್ನು ತಡೆಗಟ್ಟುವುದು ಮತ್ತು ನಿಯಂತ್ರಿಸುವುದರ ಮೇಲೆಯೇ ಕೆಟ್ಟ ಪರಿಣಾಮ ಬೀರಿತು.

(ಉಳಿದ ಭಾಗ ಮುಂದಿನ ಸಂಚಿಕೆಯಲ್ಲಿ)

ಕಳೆದ ಸಂಚಿಕೆಯಲ್ಲಿ ಪ್ರಕಟಿಸಿದ್ದಂತೆ ವಿವಿಧ ದೇಶಗಳ ಅನುಭವಗಳು, ಭಾರತದ್ದೇ ಅನುಭವ ಮತ್ತು ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ತಜ್ಞರು ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡುವ ಅಗತ್ಯವಿತ್ತು. ಅವುಗಳ ಅಧ್ಯಯನ ಮಾಡಿ ಮುಂದಿನ ದಾರಿ ಹುಡುಕಬೇಕೆಂಬ ಪ್ರಯತ್ನದ ಭಾಗವಾಗಿ ಮುಂದಿಡಲಾಗುತ್ತಿರುವ ಬರಹದ ಮೊದಲನೇ ಕಂತು ಇದು. ಮುಂದಿನ ಸಂಚಿಕೆಯಲ್ಲಿ ಉಳಿದ ಭಾಗ ಪ್ರಕಟಿಸಲಾಗುತ್ತದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here