ನಾರಸಿಂಹವಾತಾರಿ ಡಾ. ಶ್ರೀಪಾದ ಭಟ್ಟರ ಸಾಂಸ್ಕೃತಿಕ ರಾಜಕಾರಣ!

ಕರ್ನಾಟಕದ ವೈಚಾರಿಕ ಲೋಕದಲ್ಲಿ ಯಾವಾಗಲೂ ನಡೆಯುತ್ತಲೇ ಇರುವ ಒಂದು ಚರ್ಚೆ ಎಂದರೆ ಅದು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಾಗ್ವಾದ. ಸಾಮಾಜಿಕ ಮಾಧ್ಯಮ ಪ್ರವರ್ಧಮಾನಕ್ಕೆ ಬಂದ ಮೇಲಂತೂ ಈ ವಾಗ್ವಾದ ಬಹಳಷ್ಟು ತೀವ್ರತೆ ಪಡೆದುಕೊಂಡಿರುವುದನ್ನು ಕಾಣುತ್ತೇವೆ. ಜಾತಿಭೇದ, ಅಸ್ಪೃಶ್ಯತೆ ಇವುಗಳನ್ನು ವಿರೋಧಿಸುವ ಭರದಲ್ಲಿ ಅತಿರೇಕದ ಬ್ರಾಹ್ಮಣ ದ್ವೇಷವೂ ಒಂದು ರೀತಿಯಲ್ಲಿ ವೈಚಾರಿಕ ಲೋಕದಲ್ಲಿ ಸ್ಥಾನ ಪಡೆದಿದೆ. ಆದರೆ ಜಾತೀಯತೆಗೆ, ಅಸ್ಪೃಶ್ಯತೆಗೆ ಕಾರಣವಾಗಿರುವುದು ಬ್ರಾಹ್ಮಣ ಶ್ರೇಷ್ಠತೆಯ ಮನಸ್ಥಿತಿ ಅಥವಾ ಬ್ರಾಹ್ಮಣ್ಯವೇ ಹೊರತು ಇದಕ್ಕೆ ಒಂದು ಜಾತಿಯಾಗಿ ಬ್ರಾಹ್ಮಣರನ್ನು ದ್ವೇಷಿಸುವುದು ಸಲ್ಲದು ಎಂಬ ತಿಳಿವಳಿಕೆಯೂ ಸಾಕಷ್ಟು ಪ್ರಗತಿಪರರಲ್ಲಿದೆ. ಆದರೆ ಪ್ರಗತಿಪರ ವಲಯಗಳಲ್ಲಿ ಸಾಕಷ್ಟು ಗುರುತಿಸಿಕೊಂಡು, ಹೆಸರು ಮಾಡಿಕೊಂಡು ಇದ್ದಕ್ಕಿದ್ದಂತೆ ಆಗಾಗ ತಲೆಕೆಳಗು ಮಾಡಿ ನಿಂತುಬಿಡುವ ಕೆಲವು ಸೋಕಾಲ್ಡ್ ಪ್ರಗತಿಪರರು ಬ್ರಾಹ್ಮಣರಾದಾಗ ಮೇಲೆ ತಿಳಿಸಿದ ಅತಿರೇಕದ ತರ್ಕಗಳಿಗೂ ಒಂದು ಸ್ಥಾನ ಸಿಕ್ಕಿಬಿಡುತ್ತಿದೆ.

ಜಾತಿ ಎನ್ನುವುದು ‘ಸೋಷಲ್ ಕ್ಯಾಪಿಟಲ್’ ಕೂಡಾ ಆಗುವಂತಹ ಭಾರತದ ಸಮಾಜದಲ್ಲಿ ಅದರ ಮೂಲಕವೇ ಮುನ್ನೆಲೆಗೆ ಬರಲು ಕೆಲವು ಜಾತಿಗಳಿಗೆ ಸಾಧ್ಯವಾಗುತ್ತದೆ. ಅದರಲ್ಲಿ ಹಿರಿಯಣ್ಣನ ಸ್ಥಾನ ಹೊಂದಿರುವುದು ಬ್ರಾಹ್ಮಣರು. ನಾಡಿನ ಪ್ರಗತಿಪರ ಚಳವಳಿಗಳ ಧಾರೆಯಲ್ಲಿ ಹಲವಾರು ಬ್ರಾಹ್ಮಣರು ತಮ್ಮ ಜಾತಿಶ್ರೇಷ್ಠತೆಯನ್ನು ಕಳಚಿಕೊಂಡು ವೈಚಾರಿಕ ಸ್ಪಷ್ಟತೆಯಿಂದ, ಪ್ರಾಮಾಣಿಕತೆಯಿಂದ ತಾವು ನಂಬಿಕೊಂಡ ತತ್ವ ಚಿಂತನೆಗಳಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿರುವ ನಿದರ್ಶನಗಳಿವೆ. ಇದೇ ವೇಳೆಗೆ ಇವರಂತೆಯೇ ತೋರಿಸಿಕೊಂಡು ತಾವೂ ಸಹ ಪ್ರಗತಿಪರ ವಿಚಾರಧಾರೆಯ ಪ್ರತಿನಿಧಿಗಳಲ್ಲಿ ಒಬ್ಬರು ಎಂದು ಬಿಂಬಿಸಿಕೊಳ್ಳುತ್ತಲೇ ಯಾವುದೋ ಕ್ಷಣದಲ್ಲಿ ಠಣ್ ಎಂದು ಬ್ರಾಹ್ಮಣಿಕೆಯ ಕಾರಸ್ಥಾನಗಳನ್ನು ಪ್ರವೇಶಿಸಿಬಿಡುತ್ತಾರಲ್ಲ ಅಂತವರು ಪ್ರಗತಿಪರ ಚಿಂತನೆಗಳಿಗೆ ಮಾಡುವ ಹಾನಿ ಬಹಳ ದೊಡ್ಡದಿರುತ್ತದೆ. ಇಂತವರು ಕೇವಲ ಅವಕಾಶವಾದಿತನದಿಂದ ಹೀಗಾಡುತ್ತಾರೋ ಅಥವಾ ಮೂಲತಃ ಅವರಲ್ಲಿ ಬ್ರಾಹ್ಮಣ್ಯವೇ ಇದ್ದು ಕೇವಲ ಐಡೆಂಟಿಟಿಗಾಗಿ ಪ್ರಗತಿಪರ ವಲಯಗಳನ್ನು ಬಳಸಿಕೊಂಡಿರುತ್ತಾರೋ ಎಂದು ಹೇಳುವುದು ಕಷ್ಟ. ರಾಜ್ಯದ ರಂಗಭೂಮಿಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಾ.ಶ್ರೀಪಾದ ಭಟ್ ಇಂತಹ ಒಬ್ಬ ನಾಜೂಕಿನ ಬ್ರಾಹ್ಮಣ ಎಂಬುದನ್ನು ಅವರ ನಿರ್ದೇಶನದ ಇತ್ತೀಚಿನ ಒಂದು ನೃತ್ಯ ರೂಪಕ ಪ್ರಯೋಗವಾದ ‘ನಾರಸಿಂಹ’ ಬಯಲು ಮಾಡುತ್ತದೆ.

ಮೊನ್ನೆ ಉಡುಪಿಯಲ್ಲಿ ಈ ‘ನಾರಸಿಂಹ’ ನೃತ್ಯರೂಪಕ ಪ್ರಯೋಗವಾಯಿತು. ಉಡುಪಿಯ ಮತ್ತೊಬ್ಬ ಪ್ರಗತಿಪರರಾದ ಮುರಳೀಧರ ಉಪಾಧ್ಯ ಅವರ ಪುತ್ರಿ, ರಂಗಭೂಮಿ ಮತ್ತು ಕಿರುತೆರೆ ಕಲಾವಿದೆ ಮಾನಸಿ ಸುಧೀರ್ ಮತ್ತು ಅವರ ಪತಿ ಸುಧೀರ್ ನಡೆಸುವ ನೃತ್ಯನಿಕೇತ ಕೊಡವೂರು ಎಂಬ ತಂಡ ವೈದಿಕ ಪುರಾಣದಲ್ಲಿ ಬರುವ ಶಿವಭಕ್ತ ಹಿರಣ್ಯಕಶಿಪುವಿನ ಕೊಲೆಯ ಕಥೆಯಾದ ನರಸಿಂಹಾವತಾರವನ್ನು “ನಾರಸಿಂಹ” ನೃತ್ಯರೂಪಕದ ಹೆಸರಿನಲ್ಲಿ ಪ್ರಸ್ತುತಪಡಿಸಿತು. ಒಂದು ನೃತ್ಯಪ್ರಯೋಗವಾಗಿ ಇದೊಂದು ಪರಿಣಾಮಕಾರಿ ಪ್ರಯೋಗ. ರೂಪಕದಲ್ಲಿ ಪಾಲ್ಗೊಂಡ ತಂಡದ ವಿದ್ಯಾರ್ಥಿನಿಯರ ಪರಿಶ್ರಮವೂ ಎದ್ದು ಕಾಣುತ್ತದೆ. ಇದರ ಬದಲು ಮತ್ತೊಂದು ಕಥೆಯ ನೃತ್ಯರೂಪಕವೇ ಆಗಿದ್ದರೂ ಸಹ ವಿದ್ಯಾರ್ಥಿನಿಯರು ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸುತ್ತಿದ್ದರು. ಈ ನೃತ್ಯರೂಪಕವನ್ನು ಆಯ್ಕೆ ಮಾಡಿಕೊಂಡ ನೃತ್ಯನಿಕೇತನ ತಂಡದ ಸ್ವಾತಂತ್ರ‍್ಯವನ್ನು ನಾವು ಪ್ರಶ್ನಿಸಬೇಕಿಲ್ಲ. ಅದು ಅವರ ಆದ್ಯತೆ ಆಸಕ್ತಿಗಳಿಗೆ ಅನುಗುಣವಾಗಿರುತ್ತದೆಯಷ್ಟೇ. ಆದರೆ ಪ್ರಶ್ನೆ ಇರುವುದು ಇಂತಹ ಒಂದು ವೈದಿಕ ಪಠ್ಯಕ್ಕೆ ವಿನ್ಯಾಸ ಮಾಡಿ, ಸಂಗೀತ ಸಂಯೋಜನೆ ನಡೆಸಿ ಕೊನೆಗೆ ನಿರ್ದೇಶನವನ್ನೂ ಮಾಡಿದ ಸೋಕಾಲ್ಡ್ ಪ್ರಗತಿಪರ ಡಾ.ಶ್ರೀಪಾದ್ ಭಟ್ ಅವರ ಕುರಿತು.

ನರಸಿಂಹಾವತಾರ ಎಂಬುದು ಶಿವಭಕ್ತ ಹಿರಣ್ಯಕಶಿಪುವನ್ನು ವಿಷ್ಣುವಿನ ಅವತಾರವಾದ ನರಸಿಂಹ ಕೊಲ್ಲುವ ಕಥೆ. ಈ ನರಸಿಂಹನ ಅವತಾರದ ಪರಿಕಲ್ಪನೆಯನ್ನು ಭಾರತದ ಬ್ರಾಹ್ಮಣ ಪುರಾಣಕರ್ತರು ಪಡೆದುಕೊಂಡಿದ್ದು ಕ್ರಿಸ್ತಪೂರ್ವದ ರೋಮ್ನಲ್ಲಿ ಶುರುವಾಗಿ ಇಡೀ ಯೂರೋಪಿನ ಉದ್ದಗಲಕ್ಕೆ ಹರಡಿಕೊಂಡಿದ್ದ ರಹಸ್ಯ ಮಿತ್ರಪಂಥದ ಮಿತ್ರನ ಕುರಿತ ನಂಬಿಕೆಗಳಿಂದ. ಅರಿಮಾನಿಯಸ್, ಅಯಾನ್, ಅಹ್ರಿಮನ್ ಎಂಬ ಹೆಸರುಗಳಿಂದ ಕರೆಸಿಕೊಂಡ ಋಗ್ವೇದದ ಆರ್ಯಮನ್ನನೇ ಭಾರತದ ಪುರಾಣಗಳ ಕಾಲಕ್ಕೆ ನರಸಿಂಹನಾದದ್ದು. ಪಾರ್ಸಿಗಳ ಪುರಾಣಕೃತಿಯಲ್ಲಿ ಈ ಅಹ್ರಿಮನ್ ದುಷ್ಟಶಕ್ತಿಯಾಗಿದ್ದಾನೆ. ಭಾರತಕ್ಕೆ ಬಂದ ಆರ್ಯರು ಇಲ್ಲಿನ ದ್ರಾವಿಡರ ಶಿವನ ವಿರುದ್ಧ ಪುರಾಣಗಳನ್ನು ಸೃಷ್ಟಿಸುವ ಉದ್ದೇಶದಿಂದಲೇ ದಶಾವತಾರಗಳನ್ನು ಸೃಷ್ಟಿಸಿ ವಿಷ್ಣುವನ್ನು ಅವುಗಳ ಕೇಂದ್ರವಾಗಿಸಿದರು. ಹಿರಣ್ಯಕಶಿಪುವನ್ನು ನರಸಿಂಹ ವಧಿಸುವ ಪುರಾಣವನ್ನು ಸೃಷ್ಟಿಸಿದ ನಂತರ ಶಿವ ತನ್ನ ಭಕ್ತರ ವಧೆಯಿಂದ ಕೆರಳಿ ಉಗ್ರರೂಪಿಯಾದ ಶರಭಾವತಾರವನ್ನೆತ್ತಿ ನರಸಿಂಹನ ತಲೆ ಕಡಿದು ತನ್ನ ನಡುವಿಗೆ ಕಟ್ಟಿಕೊಂಡ ಪ್ರತಿಪುರಾಣವೂ ಹುಟ್ಟಿಕೊಂಡದ್ದು, ಈ ಶರಭಾವತಾರವನ್ನೇ ಕರಾವಳಿ ಭಾಗದಲ್ಲಿ ಭೂತರಾಯನೆಂದು ಪೂಜಿಸುವುದು, ಕರಾವಳಿಯ ದ್ರಾವಿಡ ಮೂಲದ ಮೊಗವೀರರು ಮತ್ತು ಬಿಲ್ಲವರು ಶಿವನ ಒಕ್ಕಲುಗಳಾಗಿ ಈ ಭೂತರಾಯನನ್ನು ಪೂಜಿಸುವುದರ ಕುರಿತು ಸಂಸ್ಕೃತಿ ಚಿಂತಕ ಲಕ್ಷ್ಮೀಪತಿ ಕೋಲಾರ ಅವರು ತಮ್ಮ ಪ್ರಮುಖ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ.

ತನ್ನನ್ನು ತಾನು ಕಮ್ಯುನಿಸ್ಟ್ ಪಾಳಯದಲ್ಲಿ ಆಗಾಗ ಗುರುತಿಸಿಕೊಳ್ಳುವ, ಸಿಪಿಎಂ ಪಕ್ಷದ ಸಾಂಸ್ಕೃತಿಕ ತಂಡವಾದ ಸಮುದಾಯದಲ್ಲಿ ನಿರಂತರವಾಗಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿರುವ ರಂಗಕರ್ಮಿ ಡಾ.ಶ್ರೀಪಾದ ಭಟ್ ಹಾಗೂ ಉಡುಪಿಯ ಪ್ರಗತಿಪರ ಚಿಂತಕರು ಎನಿಸಿಕೊಂಡಿರುವ ಮುರಳೀಧರ ಉಪಾಧ್ಯ ಇವರುಗಳು ‘ನಾರಸಿಂಹ’ ಪ್ರಯೋಗದಲ್ಲಿ ತೊಡಗಿಕೊಂಡದ್ದು ಬ್ರಾಹ್ಮಣಿಕೆಯ ಒಂದು ಸಾಂಸ್ಕೃತಿಕ ರಾಜಕಾರಣವೇ? ಇದು ಉಡುಪಿಯ ವೈದಿಕಮಣಿಗಳ ನಡುವೆ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಳ್ಳುವ ಪ್ರಯತ್ನವೇ? ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ನರಸಿಂಹಾವತಾರ ಎಲ್ಲರಿಗೂ ತಿಳಿದಮಟ್ಟಿಗೆ ಒಂದು ವೈದಿಕ ಪಠ್ಯ. ಆದರೆ ಇದನ್ನು ನೃತ್ಯರೂಪಕವಾಗಿಸುವಾಗ ‘ಒಳಿತಿನ ವಿಜಯದ ಕಥನ’ ಎಂಬುದಾಗಿ ಸುಧಾ ಆಡುಕಳ ಬರೆದವರು ರೂಪಕವನ್ನು ಶ್ರೀಪಾದ ಭಟ್ ನಿರ್ದೇಶಿಸುತ್ತಾರೆ. ಕೆಲವಾರು ತಿಂಗಳುಗಳ ಕಾಲ ಇದರ ರಿಹರ್ಸಲ್ ನಡೆಯುವುದು ಪುತ್ತಿಗೆ ಮಠದ ಆಶ್ರಯದಲ್ಲಿ! ಈ ನೃತ್ಯರೂಪಕದಲ್ಲಿ ಪಾಲ್ಗೊಂಡಿರುವ ಹೆಣ್ಣುಮಕ್ಕಳೆಲ್ಲರೂ ಬಹುತೇಕ ಒಂದೇ ಜಾತಿಗೆ ಸೇರಿದವರು! ಇದೂ ಸಹ ಆಯ್ಕೆ ‘ನೃತ್ಯ ನಿಕೇತನ’ ತಂಡದ ಮತ್ತು ಆಯ್ಕೆ ಮತ್ತು ಆದ್ಯತೆಗೆ ಬಿಟ್ಟ ವಿಷಯ. ಹೀಗೆ ಬ್ರಾಹ್ಮಣರಿಂದ ಬ್ರಾಹ್ಮಣರೇ ಸೇರಿಕೊಂಡು ಬ್ರಾಹ್ಮಣ್ಯದ ಕಥೆಯೊಂದನ್ನು ನೃತ್ಯರೂಪಕ ಮಾಡುವಾಗ ಅದನ್ನು ಒಪ್ಪಿಕೊಂಡು ನಿರ್ದೇಶಿಸುವುದು ಸಹ ಪ್ರಜ್ಞಾಪೂರ್ವಕ ಆಯ್ಕೆಯೇ ತಾನೇ? ಇನ್ನು ಈ ನೃತ್ಯರೂಪಕದ ಮೊದಲ ಪ್ರದರ್ಶನದಂದು ಮಹಾನ್ ಸಾಂಸ್ಕೃತಿಕ ವ್ಯಾಪಾರಿಗಳಾದ ಡಾ.ಮೋಹನ್ ಆಳ್ವ ಅವರು ಬಂದು ಎಲ್ಲರನ್ನೂ ಸನ್ಮಾನಿಸುವುದು ಆಶ್ಚರ್ಯವೇನಲ್ಲ ಬಿಡಿ. ಅವರಿಂದ ಸನ್ಮಾನ ಪಡೆದುಕೊಂಡ ಶ್ರೀಪಾದ ಭಟ್ ಮತ್ತು ಮುರಳೀಧರ ಉಪಾಧ್ಯ ಅವರ ಜನ್ಮಗಳೂ ಪಾವನವಾಗಿರಬಹುದು!

ಉತ್ತರ ಕನ್ನಡದ ಗಟ್ಟಿ ಚಿಂತಕರಾಗಿದ್ದ ಆರ್.ವಿ.ಭಂಡಾರಿಯವರ ಶಿಷ್ಯ ತಾವೆಂದು ಹೇಳಿಕೊಳ್ಳುವ ಡಾ.ಶ್ರೀಪಾದ ಭಟ್ ಅವರಿಗೆ ‘ನಾರಸಿಂಹ’ ನಿರ್ದೇಶನ ಅವರ ಹೆಗ್ಗಳಿಕೆಯ ಕಿರೀಟಕ್ಕೆ ಮತ್ತೊಂದು ಗರಿಯಾಗಿ ಸೇರಬಹುದಷ್ಟೇ. ನಾಳೆಯೇ ಅವರು ಸಾದತ್ ಹಸನ್ ಮಾಂಟೋನ ಆಥವಾ ಗಾಂಧಿಯ ಇಲ್ಲವೇ ಕಾರ್ಲ್ ಮಾರ್ಕ್ಸ್ನ ಜೀವನಗಳನ್ನಾಧರಿ ಮತ್ತೊಂದಿಷ್ಟು ನಾಟಕಗಳನ್ನೂ ಮಾಡಿ ಸೈ ಎನಿಸಿಕೊಳ್ಳಲೂಬಹುದು. ಈಗಾಗಲೇ ನಿರಂಜನ ಮೃತ್ಯುಂಜಯವನ್ನು ಸಹ ರಂಗರೂಪಕ್ಕೆ ತಂದು ಭೇಷ್ ಅನಿಸಿಕೊಂಡಿರುವ ಶ್ರೀಯುತ ಭಟ್ಟರು ಕೊನೆಗೆ ಡಾ.ಅಂಬೇಡ್ಕರ್, ಫುಲೆ ದಂಪತಿಗಳ ಕುರಿತು ಸಹ ‘ಕ್ರಾಂತಿಕಾರಿ’ ಎನಿಸುವ ರಂಗಪ್ರಯೋಗಗಳನ್ನು ಸಹ ಮಾಡಿ ಬಿಸಾಕಬಹುದು. ಎಡಪಂಥೀಯ ಸಮುದಾಯದ ತಂಡವೇ ಇವುಗಳನ್ನು ಪ್ರದರ್ಶಿಸಲೂಬಹುದು. ತತ್ವ, ಚಿಂತನೆ, ಸಿದ್ಧಾಂತಗಳನ್ನು ಬದುಕಾಗಿಸದೇ ಕೇವಲ ಐಡೆಂಟಿಟಿಗೆ, ಸ್ವಾರ್ಥಕ್ಕೆ, ಲಾಭಕ್ಕೆ ಬಳಸಿಕೊಳ್ಳುವವರು ಯಾವುದಕ್ಕೂ ಹೇಸುವುದಿಲ್ಲ ಎಂಬುದಷ್ಟೇ ಇದರ ತಾತ್ಪರ್ಯ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here