Homeಮುಖಪುಟಕೋವಿಡ್-19 ಸದ್ಯದ ಲಭ್ಯ ಚಿಕಿತ್ಸೆಗಳು ಮತ್ತು ಹಿಂದಿನ ರಾಜಕೀಯಗಳು

ಕೋವಿಡ್-19 ಸದ್ಯದ ಲಭ್ಯ ಚಿಕಿತ್ಸೆಗಳು ಮತ್ತು ಹಿಂದಿನ ರಾಜಕೀಯಗಳು

ಸಾಧಾರಣದಿಂದ ತೀವ್ರ ರೋಗಲಕ್ಷಣಗಳು ಇರುವ ರೋಗಿಗಳಿಗೆ ಸ್ಟೆರೋಯ್ಡ್ ಬಳಸಬಹುದು ಎಂದು ಮಾರ್ಚ್ 31ರಂದು ಪ್ರಕಟಿಸಲಾದ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳು ಹೇಳುತ್ತವೆ.

- Advertisement -
- Advertisement -

ಕೋವಿಡ್-19 ಪರೀಕ್ಷೆ, ಹರುಡುವಿಕೆಯ ತಡೆ, ಪಿಡುಗಿನ ಉತ್ತುಂಗ ಕಾಲದಲ್ಲಿ ರೋಗಿಗಳ ಸಂಖ್ಯೆ ಎಷ್ಟಾಗಬಹುದೆಂಬ ಅಂದಾಜು ಮತ್ತು ಅದಕ್ಕೆ ಪ್ರತಿಸ್ಪಂದಿಸಲು ಆರೋಗ್ಯ ವ್ಯವಸ್ಥೆಯ ಸಿದ್ಧತೆ ಮುಂತಾದವುಗಳ ಕುರಿತ ಆರಂಭಿಕ ಚರ್ಚೆಯು ಕೇಂದ್ರೀಕೃತವಾಗಿತ್ತು. ಭಾರತದಲ್ಲಿ ಇತ್ತೀಚಿನ ವಾರಗಳಲ್ಲಿ ಪಿಡುಗಿನ ಹರಡುವಿಕೆಯ ವೇಗ ಹೆಚ್ಚಾಗಿದೆ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಬೀಳುತ್ತಿದೆ. ಪರಿಣಾಮವಾಗಿ ಚಿಕಿತ್ಸೆಯ ಸಾಧ್ಯತೆಗಳು ಮತ್ತು ಪ್ರಾಥಮಿಕ ವೈದ್ಯಕೀಯ ಪರಿಣಾಮಗಳನ್ನು ಪರಿಶೀಲಿಸಿ ಬಳಸಬಹುದಾದ ಔಷಧಿಗಳ ಮೇಲೆ ತುರ್ತು ಗಮನ ಹರಿಸಬೇಕಾಗಿಬಂದಿದೆ. ಕೋವಿಡ್-19ಗೆ ಲಸಿಕೆಯನ್ನು ಕಂಡುಹಿಡಿಯುವಲ್ಲಿ ತುರುಸಿನ ಧಾವಂತ ಉಂಟಾಗಿದ್ದು, ಹಲವಾರು ಸರಕಾರಿ ಸಂಸ್ಥೆಗಳು, ಖಾಸಗಿ ಪ್ರತಿಷ್ಠಾನಗಳು, ಶೈಕ್ಷಣಿಕ ಸಂಸ್ಥೆಗಳು, ಅಂತರರಾಷ್ಟ್ರೀಯ ಸಂಸ್ಥೆಗಳು, ಜೌಷಧಿ ತಯಾರಿಕಾ ಸಂಸ್ಥೆ ಹಿಂದೆಂದೂ ಕಾಣದ ರೀತಿಯಲ್ಲಿ ಪರಸ್ಪರ ಸಹಕರಿಸುತ್ತಿವೆ.

ಎಪ್ರಿಲ್ 24, 2020ರಂದು, ವಿಶ್ವ ಆರೋಗ್ಯ ಸಂಸ್ಥೆಯು “ಎಕ್ಸೆಸ್ ಟು ಕೋವಿಡ್-19 ಟೂಲ್ಸ್ (ಎಟಿಸಿ) ಎಕ್ಸಲರೇಟರ್” ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ಇದು ಕೋವಿಡ್-19 ಪಿಡುಗಿನ ಪರೀಕ್ಷೆ, ಮತ್ತು ಅದಕ್ಕೆ ಚಿಕಿತ್ಸೆ ನೀಡಬಹುದಾದ ಲಸಿಕೆಯ ಅಭಿವೃದ್ಧಿ, ಮತ್ತು ನ್ಯಾಯಸಮ್ಮತ ಲಭ್ಯತೆಯನ್ನು ತ್ವರಿತಗೊಳಿಸಲು ಜಾಗತಿಕ ಸಹಭಾಗಿತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಜೂನ್ 12, 2020ರ ತನಕ ಔಷಧಿ ಮತ್ತು ಲಸಿಕೆಗಳಿಗಾಗಿ ಹೆಚ್ಚು ಕಡಿಮೆ 2,100ರಷ್ಟು ಪ್ರಾಯೋಗಿಕ ಪರೀಕ್ಷೆಗಳು ನಡೆದಿವೆ. ಇವುಗಳಲ್ಲಿ 231 ಮೊದಲ ಹಂತದಲ್ಲಿ, 1029 ಎರಡನೆಯ ಹಂತದಲ್ಲಿ, 580 ಮೂರನೆಯ ಹಂತದಲ್ಲಿ ಮತ್ತು 225 ನಾಲ್ಕನೆಯ ಹಂತದ ವೈದ್ಯಕೀಯ ಪರೀಕ್ಷೆಯಲ್ಲಿವೆ.

ಅತ್ಯಂತ ಪ್ರಮುಖವಾದ ಪರೀಕ್ಷಾ ಕಾರ್ಯಕ್ರಮಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಸಹಯೋಗಿತ್ವದಲ್ಲಿ ಆರಂಭಿಸಿದ “ಸಾಲಿಡಾರಿಟಿ ಟ್ರಯಲ್” ಕೂಡ ಸೇರಿದೆ. ಇದು ಕೋವಿಡ್-19 ಚಿಕಿತ್ಸೆಯ ನಾಲ್ಕು ವಿಧಾನಗಳ ತುಲನೆ ಮಾಡುತ್ತಿದೆ. ಅನೇಕ ರಾಷ್ಟ್ರಗಳ ರೋಗಿಗಳನ್ನು ನೋಂದಾಯಿಸಿಕೊಂಡು ಯಾವುದಾದರೂ ಔಷಧಿ  ಕೋವಿಡ್-19 ರೋಗವನ್ನು ಕಡಿಮೆ ಮಾಡುತ್ತದೆಯೇ, ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆಯೇ ಎಂದು ತ್ವರಿತವಾಗಿ ಕಂಡುಹಿಡಿಯುವುದೇ ಈ ಕಾರ್ಯಕ್ರಮದ ಗುರಿ. ಇತರ ಔಷಧಿಗಳನ್ನೂ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಸೇರಿಸಿಕೊಳ್ಳುವ ಉದ್ದೇಶವಿದೆ.

“ರಿಕವರಿ ಟ್ರಯಲ್” ಎಂಬುದು ಸದ್ಯಕ್ಕೆ ನಡೆಯುತ್ತಿರುವ ಅತ್ಯಂತ ದೊಡ್ಡ ಚಿಕಿತ್ಸಕ ಪ್ರಯೋಗವಾಗಿದೆ. ಇದು ಆರು ಸಂಭಾವ್ಯ ಔಷಧಿಗಳನ್ನು ಒಳಗೊಂಡಿದೆ. ಅವುಗಳೆಂದರೆ, Lopinavir-Ritonavir (ಸಾಮಾನ್ಯವಾಗಿ ಎರಡನೇ ಹಂತದ ಎಚ್‌ಐವಿ ಚಿಕಿತ್ಸೆಯಲ್ಲಿ ಬಳಸುವ), ಕಡಿಮೆ ಡೋಸಿನ Dexamethasone, Hydroxychloroquine (ಇದನ್ನೀಗ ನಿಲ್ಲಿಸಲಾಗಿದೆ), Azithromycin (ಸಾಮಾನ್ಯವಾಗಿ ಬಳಸಲಾಗುವ ಏಂಟಿಬಯೋಟಿಕ್),Tocilizumab (ಸೂಜಿ ಮೂಲಕ ನೀಡಲಾಗುವ ಉರಿಯೂತ ಶಮನಕಾರಿ ಔಷಧಿ) ಮತ್ತು Convalescent Plasma (ಗುಣಮುಖರಾದ ದಾನಿಗಳಿಂದ ಸಂಗ್ರಹಿಸಿದ ರೋಗನಿರೋಧಕ ಅಂಶಗಳಿರುವ ಪ್ಲಾಸ್ಮಾ). ಈ ಪರೀಕ್ಷೆಯು ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆಯ 175ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿರುವ 11,500ಕ್ಕೂ ಹೆಚ್ಚು ರೋಗಿಗಳನ್ನು ಒಳಗೊಂಡಿದೆ. ಇದಕ್ಕೆ ಹಲವಾರು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತು ಪ್ರತಿಷ್ಟಾನಗಳು ಹಣಕಾಸಿನ ನೆರವು ಒದಗಿಸುತ್ತಿವೆ.

ಮೂರನೆಯ ಪ್ರಮುಖ ಚಿಕಿತ್ಸಕ ಪ್ರಯೋಗ ಎಂದರೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಎಂಡ್ ಇನ್ಫೆಕ್ಷಿಯಸ್ ಡಿಸೀಸಸ್ (NIAID) ನಡೆಸುತ್ತಿರುವ ಪ್ರಯೋಗ. ಇದು ಆಸ್ಪತ್ರೆ ಸೇರಿರುವ ವಯಸ್ಕ ರೋಗಿಗಳಲ್ಲಿ ವೈರಸ್ ವಿರೋಧಿ ಔಷಧವಾದ Remdesivirನ ಸುರಕ್ಷಿತತೆ ಮತ್ತು ಪರಿಣಾಮಕಾರಕತೆಯನ್ನು ಪರೀಕ್ಷಿಸುತ್ತಿದೆ. ಇದು ಜಾಗತಿಕವಾಗಿ 75 ಸ್ಥಳಗಳಲ್ಲಿ ನಡೆಯಲಿದೆ. ಸದ್ಯ 35 ಸ್ಥಳಗಳಲ್ಲಿ ಈ ಪ್ರಯೋಗ ನಡೆಯುತ್ತಿದೆ.

ಹೊಸ ‘ಆವಿಷ್ಕಾರ’: Dexamethazone

ಕಳೆದ ವಾರದಲ್ಲಿ ಔಷಧಿಗಳು ಮತ್ತು ಲಸಿಕೆಗಳ ಬಗ್ಗೆ ಹಲವಾರು ಘೋಷಣೆಗಳು ಹೊರಬಿದ್ದಿವೆ. ಮೊದಲಿಗೆ ಹೊರಬಿದ್ದದ್ದು Dexamethazone ಎಂಬ ಔಷಧಿಯ ಸುದ್ದಿ. ಇದೊಂದು ಸ್ಟೆರೋಯ್ಡ್ ಆಗಿದ್ದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತದನ್ನು ರುಮಟಾಯ್ಡ್ ಅರ್ಥ್ರೈಟಿಸ್, ಲ್ಯೂಪಸ್ ಹಾಗೂ ನಿರ್ದಿಷ್ಟ ರೀತಿಯ ಟ್ಯೂಮರ್‌ಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. Dexamethazone ವೆಂಟಿಲೇಟರ್‌ನಲ್ಲಿರುವ ರೋಗಿಗಳಲ್ಲಿ ಮೂರನೇ ಒಂದರಷ್ಟು ಮತ್ತು ಕೇವಲ ಆಮ್ಲಜನಕದಲ್ಲಿರುವ ಐದನೇ ಒಂದರಷ್ಟು ರೋಗಿಗಳಲ್ಲಿ ಮಾರಣಾಂತಿಕತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಪರೀಕ್ಷೆಯ ವೇಳೆ ಕಂಡುಬಂತು. ಇದು ವೆಂಟಿಲೇಟರ್‌ನಲ್ಲಿರುವ ಎಂಟು ರೋಗಿಗಳಲ್ಲಿ ಮತ್ತು ಆಮ್ಲಜನಕದ ಅಗತ್ಯವಿರುವ 25 ರೋಗಿಗಳಲ್ಲಿ ಒಂದು ಸಾವನ್ನು ತಪ್ಪಿಸಬಹುದು ಎಂದು ಪ್ರಯೋಗವು ತೀರ್ಮಾನಿಸಿದೆ.

ಈ ಔಷಧಿಯು ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಕೊರೋನ ವೈರಸ್ ಸೋಂಕು ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ದೇಹವು ಅದನ್ನು ಪ್ರತಿರೋಧಿಸಲು ಯತ್ನಿಸುತ್ತದೆ. ಕೆಲವೊಮ್ಮೆ ಈ ರೋಗನಿರೋಧಕ ವ್ಯವಸ್ಥೆಯೇ ಅತಿರೇಕದಿಂದ ವರ್ತಿಸಿ ಸೋಂಕನ್ನು ಕೊಲ್ಲುವ ಬದಲು ತನ್ನದೇ ದೇಹದ ಜೀವಕೋಶಗಳನ್ನು ಕೊಲ್ಲುತ್ತದೆ ಮತ್ತು ಇದು ಮಾರಣಾಂತಿಕವಾಗಬಹುದು. Dexamethasone ಈ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದೊಂದು ಮಹತ್ವದ ಶೋಧನೆಯಾಗಿದ್ದು, ವೆಂಟಿಲೇಟರ್‌ನಲ್ಲಿರುವ ಮತ್ತು ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ ಇದು ಮಾದರಿ ಚಿಕಿತ್ಸೆ ಎಂದು ಶಿಫಾರಸು ಮಾಡಲಾಗಿದೆ.

ಆದರೆ ಇದು ಕೇವಲ ಅಂತಹಾ ರೋಗಿಗಳಿಗೆ ಮಾತ್ರ ಸೂಕ್ತ. ತಕ್ಷಣವೇ ಸಂಶೋಧಕರು ಇನ್ನೊಂದು ಘೋಷಣೆಯನ್ನು ಮಾಡಿದರು. ಸ್ವಲ್ಪ ಮಟ್ಟಿನ ಅನಾರೋಗ್ಯವಿರುವ ರೋಗಿಗಳಿಗೆ ಇದು ನಿಜವಾಗಿಯೂ ಹಾನಿಕಾರಕ ಮತ್ತು ಬೇರೆಬೇರೆ ಹಂತಗಳಲ್ಲಿರುವ ರೋಗಿಗಳ ಮೇಲೆ ಅದು ಬೇರೆಬೇರೆ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದೇ ಈ ಘೋಷಣೆ. ಆದುದರಿಂದ ಇದನ್ನು ರೋಗ ತಡೆಯುವ ವಿಧಾನವೆಂದಾಗಲೀ, ಸೌಮ್ಯ ರೋಗಲಕ್ಷಣಗಳು ಇರುವ ರೋಗಿಗಳಿಗೆ ಬಳಸಬಾರದು. ಇದರಿಂದ ಶ್ವಾಸಕೋಶ, ಕಿಡ್ನಿ ಮುಂತಾದವುಗಳಿಗೆ ಹಾನಿಯಾಗಿ ಸಾವು ಸಂಭವಿಸಬಹುದೆಂದು ತಜ್ಞರು ಹೇಳುತ್ತಿದ್ದಾರೆ. ಏನಿದ್ದರೂ ಈ ಸಂಶೋಧನೆಯನ್ನು ಪ್ರಗತಿ ಎಂದು ಪರಿಗಣಿಸಬಹುದು.

ಆದರೆ ಭಾರತದಲ್ಲಿ ಇದನ್ನು ಬಳಸಲಾಗುವುದೇ, ಇಲ್ಲವೇ ಎಂಬುದು ಸಂಶಯ. ಸಾಧಾರಣದಿಂದ ತೀವ್ರ ರೋಗಲಕ್ಷಣಗಳು ಇರುವ ರೋಗಿಗಳಿಗೆ ಸ್ಟೆರೋಯ್ಡ್ ಬಳಸಬಹುದು ಎಂದು ಮಾರ್ಚ್ 31ರಂದು ಪ್ರಕಟಿಸಲಾದ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳು ಹೇಳುತ್ತವೆ. ಜೂನ್ 13ರಂದು ಪ್ರಕಟಿಸಲಾದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸಾಮಾನ್ಯ ಖಾಯಿಲೆ ಇರುವವರಿಗೆ ಮೂರು ದಿನಗಳ ಕಾಲ ಮತ್ತು ತೀವ್ರ ಸೋಂಕು ಇರುವವರಿಗೆ ಐದರಿಂದ ಏಳು ದಿನಗಳ ಕಾಲ Methylprednisolone ಬಳಸಬಹುದೆಂದು ಶಿಫಾರಸು ಮಾಡಲಾಗಿದೆ. ತಕ್ಷಣವೇ ಸರಕಾರವು ಅಂತವರಿಗೆ Dexamthasone ನೀಡಬಹುದೆಂದು ಸೂಚಿಸಿದೆ.

Hydroxychloroquineನ ಕತೆ

ಸಾರ್ವಜನಿಕ ನಂಬಿಕೆ ಕಳೆದು ಕೊಂಡಿರುವುದರಿಂದ Hydroxychloroquineನ ಕುರಿತ ವರದಿಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ. ಈ ಮಲೇರಿಯಾ ನಿರೋಧಕ ಔಷಧಿಯ ಸುತ್ತ ಹುಟ್ಟಿರುವ ರಾಜಕೀಯವೇ ಇದಕ್ಕೆ ಕಾರಣ. ಇದು ಪರಿಸ್ಥಿತಿಯನ್ನು ಬದಲಿಸುತ್ತಿದೆ ಮತ್ತು ತನಗೆ ವೈರಸ್ ಇಲ್ಲವಾದರೂ ತಾನು ಇದನ್ನೇ ತೆಗೆದುಕೊಳ್ಳುವುದನ್ನು ಪರಿಗಣಿಸುತ್ತೇನೆ ಎಂದು ಯುಎಸ್‌ಎಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿವಿಯಲ್ಲಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಇದು ತಕ್ಷಣವೇ ವೈದ್ಯಕೀಯ ಸಮುದಾಯದಲ್ಲಿ ಅಪಾಯದ ಗಂಟೆಯನ್ನು ಮೊಳಗಿಸಿತು. ಸಿಂಗಾಪುರ ಈಗಾಗಲೇ ಎಚ್ಚರಿಕೆ ವಹಿಸುವ ಸಲಹೆ ನೀಡಿದೆ. ಭಾರತದಲ್ಲಿಯೂ ಮಹಾತ್ಮಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್‌ನ ವಿಜ್ಞಾನಿಗಳು ಯಾವುದೇ ಆಧಾರವಿಲ್ಲದೆ ಈ ಔಷಧಿಯ ವ್ಯಾಪಕ ಬಳಕೆಗೆ ಸರಕಾರ ಅವಕಾಶ ನೀಡಿರುವುದನ್ನು ಪ್ರಶ್ನಿಸಿದ್ದಾರೆ.

ಮಾರ್ಚ್ 28ರಂದು Hydroxychloroquineನ ಬಳಕೆಗೆ ಅವಕಾಶ ನೀಡಿ ರಾಜಕೀಯ ಒತ್ತಡಕ್ಕೆ ಬಲಿಬಿದ್ದಿರುವುದಕ್ಕಾಗಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್, ಯುಎಸ್ ಫುಡ್ ಎಂಡ್ ಡ್ರಗ್ ಎಡ್ಮಿನಿಸ್ಟ್ರೇಷನ್ ಪ್ರಾಧಿಕಾರವನ್ನು ಕಟುವಾಗಿ ಟೀಕಿಸಿದೆ. ಬ್ರೆಜಿಲ್‌ನಲ್ಲಿಯೂ ಅದರ ಬಳಕೆ ರಾಜಕೀಯ ತಿರುವು ಪಡೆದುಕೊಂಡಿದೆ. ಅದನ್ನು ವಿರೋಧಿಸಿದ ಬ್ರೆಜಿಲ್, ಸ್ಪೇನ್, ಮೊಝಾಂಬಿಕ್ ಒಳಗೊಂಡ ಪ್ರಯೋಗದ ಮುಖ್ಯ ಸಂಶೋಧಕರಿಗೆ ಸಾವಿನ ಬೆದರಿಕೆ ಒಡ್ಡಲಾಗಿದೆ. ಕ್ಲೋರೋಕ್ವಿನನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ಅದು ಅಪಾಯಕಾರಿ ಎಂದು ಈ ಸಂಶೋಧನೆ ಹೇಳಿದೆ. ಈ ಸಂಶೋಧನೆ ಎಡಪಂಥೀಯ ಸಂಚು ಎಂದು ಕೂಡಾ ಇಪ್ಪತ್ತು ಲಕ್ಷ ಹಿಂಬಾಲಕರನ್ನು ಹೊಂದಿರುವ ಬ್ರೆಜಿಲ್‌ನ ತೀವ್ರ ಬಲಪಂಥೀಯ ಅಧ್ಯಕ್ಷರ ಪುತ್ರ ಎಡ್ವರ್ಡೋ ಬೊಲ್ಸನಾರೋ ಟ್ವಿಟ್ಟರ್‌ನಲ್ಲಿ ಆರೋಪಿಸಿದ್ದಾರೆ. ಈ ಸಂಶೋಧನೆಯ ಮುಖಸ್ಥರು ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಲೂಯಿ ಇನಾಸಿಯೊ ದ ಲಾ ಸಿಲ್ವಾ ಅವರ ಪಕ್ಷಕ್ಕೆ ನಿಷ್ಟೆ ಹೊಂದಿರುವವರು ಎಂದೂ ಅವರು ಆರೋಪಿಸಿದ ಬಳಿಕ ಈ ಸಂಶೋಧನೆಯ ಮುಖ್ಯಸ್ಥರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಕರೆಗಳು ಬರಲು ಆರಂಭವಾದವು. ಈ ಔಷಧಿಯು ಅಪಾಯಕಾರಿ ಎಂಬ ಫಲಿತಾಂಶದ ನಡುವೆ ಅವರಿಗೆ ನೀಡಲಾದ ರಾಜಕೀಯ ಪ್ರೇರಿತ ಜೀವ ಬೆದರಿಕೆಯು ಅಂತರರಾಷ್ಟ್ರೀಯ ವೈದ್ಯಕೀಯ ಸಮುದಾಯದಲ್ಲಿ ತಲ್ಲಣವನ್ನು ಉಂಟುಮಾಡಿದೆ.

ನಂತರದಲ್ಲಿ ಲ್ಯಾನ್ಸೆಟ್ ಎಂಬ ಪ್ರಸಿದ್ಧ ವೈಜ್ಞಾನಿಕ ಪತ್ರಿಕೆಯು ಸಪನ್ ದೇಸಾಯಿ ಎಂಬವರು ಸಹ ಲೇಖಕರಾಗಿರುವ ಲೇಖನವೊಂದನ್ನು ಪ್ರಕಟಿಸಿ ಕೋವಿಡ್-19 ವಿರುದ್ಧ ಚಿಕಿತ್ಸೆಯಲ್ಲಿ Hydroxychloroquineನ ಬಳಕೆಯ ಪರಿಣಾಮದ ಬಗ್ಗೆ ನಡೆದ ಚರ್ಚೆ ವೈದ್ಯಕೀಯ ಸಮುದಾಯದಲ್ಲಿ ಕೋಲಾಹಲವನ್ನು ಸೃಷ್ಟಿಮಾಡಿತು. ಸರ್ಜಿಸ್ಪಿಯರ್ ಎಂಬ ಸಂಸ್ಥೆಯು ಸಾವಿರಾರು ರೋಗಿಗಳ ಪರಿಶೀಲನೆಯ ಬಳಿಕ ಹೊಂದಿರುವ ದತ್ತಾಂಶಗಳನ್ನು ಆಧರಿಸಿ ಈ ಲೇಖನ ಬರೆದಿರುವುದಾಗಿ ಹೇಳಲಾಗಿತ್ತು. ಶೀಘ್ರದಲ್ಲೇ ಗಾರ್ಡಿಯನ್ ಮುಂತಾದ ಪತ್ರಿಕೆಗಳು ತನಿಖೆ ನಡೆಸಿದಾಗ ಇದೊಂದು ನಕಲಿ ಸಂಸ್ಥೆಯೆಂದೂ, ಅದರ ನೌಕರರು ಯಾವುದೇ ವೈದ್ಯಕೀಯ ಅಥವಾ ವೈಜ್ಞಾನಿಕ ಹಿನ್ನೆಲೆ ಇಲ್ಲದವರೆಂದೂ ಸಪನ್ ದೇಸಾಯಿಯೇ ಇದರ ಮಾಲಕನಾಗಿದ್ದು ಕನಿಷ್ಟ ಮೂರು ಅಕ್ರಮ ವ್ಯವಹಾರಗಳ ಪ್ರಕರಣ ಎದುರಿಸುತ್ತಿರುವುದಾಗಿಯೂ ಬಹಿರಂಗವಾಯಿತು. ಲ್ಯಾನ್ಸೆಟ್‌ನಂತಹಾ ಖ್ಯಾತ ಪತ್ರಿಕೆಯೂ ಹೇಗೆ ಸ್ಪರ್ಧೆಯ ಒತ್ತಡಕ್ಕೆ ಒಳಗಾಗಿ ನಕಲಿ ದತ್ತಾಂಶ ಆಧರಿಸಿದ ಲೇಖನವನ್ನು ಪರಿಶೀಲಿಸದೆ ಪ್ರಕಟಿಸಬಹುದೆಂಬುದು ವೈದ್ಯಕೀಯ ಸಮುದಾಯದ ವಿಶ್ವಾಸವನ್ನೇ ಅಲುಗಾಡಿಸಿದೆ.

ಕೋವಿಡ್ ಪಿಡುಗು ಆರಂಭವಾದಲ್ಲಿಂದ ಅದರ ಮೂಲ ಮತ್ತು ಚಿಕಿತ್ಸೆಯ ವಿವರಗಳು ಬದಲಾಗುತ್ತಲೇ ಇದ್ದು, ಹಲವಾರು ನಕಲಿ ಸುದ್ದಿಗಳು ಹರಡುತ್ತಿವೆ. ಇಂತಹಾ ಸಂದರ್ಭದಲ್ಲಿ ಸ್ಥಾಪಿತ ವೈದ್ಯಕೀಯ ಪತ್ರಿಕೆಗಳೇ ವೈದ್ಯಕೀಯ ಸಮುದಾಯಕ್ಕೆ ಆಧಾರವಾಗಿರುವ ಸಂದರ್ಭದಲ್ಲಿಯೇ ಲ್ಯಾನ್ಸೆಟ್‌ನಂತಹ ಘಟನೆ ನಡೆದಿದೆ.

ಕಳೆದ ವಾರದಲ್ಲಿ ಭಾರತದಲ್ಲಿ ಗ್ಲೆನ್‌ಮಾರ್ಕ್ Favipiravir ಎಂಬ ಔಷಧಿಯನ್ನು FabiFlu ಎಂಬ ಹೆಸರಿನಲ್ಲಿ ಅಲ್ಪ ಮತ್ತು ಸಾಧಾರಣ ಕೋವಿಡ್ ಲಕ್ಷಣಗಳಿರುವ ರೋಗಿಗಳಿಗಾಗಿ ಘೋಷಿಸಿದೆ. ಪ್ರತೀ ಮಾತ್ರೆಗೆ 103 ರೂ. ಬೆಲೆಯಿರುವ ಈ ಔಷಧಿಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅವರು ತ್ವರಿತ ಅಂಗೀಕಾರ ಪ್ರಕ್ರಿಯೆಯ ಅನ್ವಯ ಅಂಗೀಕರಿಸಿದ್ದಾರೆ. ತಾನು ಇದರ ಸುರಕ್ಷಿತತೆ ಮತ್ತು ಪರಿಣಾಮಕಾರಕತೆಯ ಕುರಿತು 150 ರೋಗಿಗಳ ಆಧಾರದಲ್ಲಿ ಸ್ವಂತ ಪರೀಕ್ಷಾ ವರದಿ ಬಿಡುಗಡೆ ಮಾಡಿರುವುದಾಗಿ ಸಂಸ್ಥೆ ಹೇಳಿದೆಯಾದರೂ ಇದನ್ನು ಅನ್ಯ ತಜ್ಞರು ಈ ತನಕ ಪರಿಶೀಲಿಸಿ ಅಧ್ಯಯನ ಪ್ರಕಟಿಸಿಲ್ಲ. ಅಲ್ಪದಿಂದ ಸಾಧಾರಣ ರೋಗಲಕ್ಷಣಗಳು ಇರುವ 88 ಶೇಕಡಾ ರೋಗಿಗಳಲ್ಲಿ ಇದು ಪರಿಣಾಮಕಾರಿ ಎಂದು ಸಂಸ್ಥೆ ಹೇಳಿಕೊಂಡಿದೆ. Favipiravir ಔಷಧಿಯನ್ನು 2014ರಿಂದಲೇ ಜಪಾನಿನಲ್ಲಿ ಇನ್‌ಫ್ಲೂಯೆಂಝಾ (ಫ್ಲೂ) ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರ ಸೀಮಿತ ಬಳಕೆಗೆ ಮೊದಲು ರೋಗಿಗಳ ಲಿಖಿತ ಅನುಮತಿ ಪಡೆಯಬೇಕೆಂದು ಅಂಗೀಕಾರದ ವೇಳೆ ಡಿಸಿಜಿಐ ಶರತ್ತು ವಿಧಿಸಿದೆ. ಆದರೆ, ಅಧ್ಯಯನ ವರದಿಯಲ್ಲಿ ಹಲವಾರು ದೋಷಗಳು ಇರುವಾಗಲೇ ಹೇಗೆ ಗುಟ್ಟುಗುಟ್ಟಾಗಿ ಅದಕ್ಕೆ ಅಂಗೀಕಾರ ನೀಡಲಾಯಿತು ಎಂದು ವೈದ್ಯಕೀಯ ಸಮುದಾಯದ ಹಲವರು ಡಿಸಿಜಿಐ ಕ್ರಮವನ್ನು ಪ್ರಶ್ನಿಸಿದ್ದಾರೆ. ಲಘು ಪ್ರಕರಣಗಳಲ್ಲಿ ಕೋವಿಡ್ ತನ್ನಿಂದ ತಾನೇ ಗುಣವಾಗುವಾಗ, ಈ ಅಧ್ಯಯನವೇ ಪ್ರಶ್ನಾರ್ಹವಾಗಿದೆ ಎಂಬುದು ಅವರ ವಾದ. ಇದು ರೋಗಿಗಳನ್ನು ಅನಗತ್ಯವಾಗಿ ಹಾನಿಗೆ ಒಳಪಡಿಸಬಾರದು ಎಂಬ ವೈದ್ಯಕೀಯ ತತ್ವಕ್ಕೆ ವಿರುದ್ಧವಾಗಿದೆ.

ಎಚ್ಚರಿಕೆಯ ಮಾತು

ಕೋವಿಡ್-19ಕ್ಕೆ ಔಷಧಿ ಮತ್ತದರ ಚಿಕಿತ್ಸೆಯ ಕತೆಗಳು ಸುಳ್ಳು, ಮೋಸ ಮತ್ತು ವಂಚನೆಯಿಂದ ತುಂಬಿವೆ. ಇಲ್ಲಿ ರಾಜಕೀಯ ಪರಿಗಣನೆಗಳು ಮತ್ತು ವಾಣಿಜ್ಯ ಹಿತಾಸಕ್ತಿಗಳು- ದೃಢವಾದ ವೈದ್ಯಕೀಯ ಸಾಕ್ಷ್ಯಾಧಾರಗಳು ಮತ್ತು ವೈದ್ಯಕೀಯ ನೈತಿಕತೆಗಳ ಮೇಲೆ ಸವಾರಿ ಮಾಡುತ್ತಿವೆ. ಇಂತಹ ಪ್ರಮಾಣದಲ್ಲಿ ಸೋಂಕು ಹರಡಿರುವಾಗ ಇದೊಂದು ಭಯಾನಕ ಸನ್ನಿವೇಶ. ಮುಂದಿನ ಹಾದಿಯಲ್ಲಿ ಜನತಾ ಚಳವಳಿಗಳು, ನಾಗರಿಕ ಸಾಮಾಜಿಕ ಸಂಸ್ಥೆಗಳು ಮತ್ತು ನಾಗರಿಕರ ಎಚ್ಚರದ ಅಗತ್ಯವಿದೆ. ಹೊಸ “ಆವಿಷ್ಕಾರ ಮತ್ತು ಸಂಶೋಧನೆ”ಗಳು ಮತ್ತು ಪಾರದರ್ಶಕತೆ ಇಲ್ಲದ ಅಂಗೀಕಾರದ ನೆರೆಯಲ್ಲಿ ನಾವು ಕೊಚ್ಚಿಕೊಂಡು ಹೋಗಬಾರದು.

–        ಡಾ. ಅಖಿಲಾ ವಾಸನ್

–        ಸಂಗ್ರಹಾನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು: ರೋಗಿಗಳ ಮೇಲೆ ದುಬಾರಿ ಚಿಕಿತ್ಸೆಯ ಬರೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...