ಪ್ರಚಂಡ ಕುಳ್ಳನಿಗೆ ಜಯಣ್ಣ ಜೀವಬೆದರಿಕೆ ಹಾಕಿದರಾ!?

ವಿಷ್ಣು ಜೊತೆ ದ್ವಾರಕೀ ಹಲವಾರು ಸಿನಿಮಾ ಮಾಡಿ ದುಡ್ಡು ಮಾಡಿಕೊಂಡದ್ದಂತೂ ಸತ್ಯ. ತದನಂತರ ಅದೇ ವಿಷ್ಣು ಜೊತೆಗೂ ಹಣಕಾಸಿನ ವಿಚಾರವಾಗಿ ಸ್ನೇಹ ಕೆಡಿಸಿಕೊಂಡದ್ದೂ ಅಷ್ಟೇ ಸತ್ಯ. ಆದರೆ, ದ್ವಾರ್ಕಿ ಆರ್ಥಿಕ ಮುಗ್ಗಟ್ಟಿಗೆ ಬಿದ್ದಾಗ ಕೊನೆಗೆ ಅದೇ ವಿಷ್ಣು `ಆಪ್ತಮಿತ್ರ’ನಾಗಿ ಬಂದು ನೆರವಾಗಬೇಕಾಯ್ತು.

ಸಿನಿಮಾರಂಗದಲ್ಲಿ ನಡೆಯುತ್ತಿದ್ದ ಸ್ಟಾರ್‍ವಾರ್ ಈಗ ಹೊಸ ರೂಪ ತಳೆದು ನಿರ್ಮಾಪಕರ ವಾರ್ ಆಗಿ ಬದಲಾಗುತ್ತಿದೆ. ಸ್ಯಾಂಡಲ್‍ವುಡ್ ಹಳೆಯ ಬೇರಿನಂತಿದ್ದ ದ್ವಾರಕೀಶ್ ಮತ್ತು ನಿರ್ಮಾಪಕ ಜಯಣ್ಣನ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದ್ದು ಬೆಳಗ್ಗೆ ಒಬ್ಬರು, ಸಂಜೆ ಒಬ್ಬರು ಪ್ರೆಸ್‍ಮೀಟ್ ಮಾಡುತ್ತಾ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿಹೋಗಿದ್ದಾರೆ.

ದ್ವಾರಕೀಶ್ ನಟ, ನಿರ್ದೇಶಕರಷ್ಟೇ ಅಲ್ಲ ನಿರ್ಮಾಪಕರೂ ಹೌದು. ಅಂತೆಯೇ ಜಯಣ್ಣನೂ ಇತ್ತೀಚೆಗೆ ಹೆಸರು ಮಾಡುತ್ತಿರುವ ನಿರ್ಮಾಪಕ. ಸ್ಯಾಂಡಲ್‍ವುಡ್‍ನ ನಿರ್ಮಾಪಕರು ನೋಡೋಕೆ ತುಂಬಾ ಆತ್ಮೀಯ ಮಿತ್ರರಂತೆ ಇದ್ದರೂ ಒಳಗಿನ ಜಲಸ್‍ಗೇನೂ ಕಡಿಮೆಯಿಲ್ಲ. ಜಯಣ್ಣ ತಮ್ಮ ಮನೆಗೆ ನುಗ್ಗಿ ತನ್ನ ತಂದೆಗೆ ಜೀವಬೆದರಿಕೆ ಹಾಕಿದ್ದಾರೆ ದ್ವಾರ್ಕಿ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಯಣ್ಣನ ಗ್ಯಾಂಗು ನಿಜಕ್ಕೂ ದ್ವಾರಕೀಶ್‍ಗೆ ಜೀವ ತೆಗೆಯುವುದಾಗಿ ಥ್ರೆಟ್ ಮಾಡಿದರಾ? ಎಂದು ಯೋಚಿಸುವುದು ಎಷ್ಟು ಮುಖ್ಯವೋ ಹಣಕಾಸು, ಸ್ನೇಹಸಂಬಂಧಗಳ ವಿಚಾರದಲ್ಲಿ ಕುಳ್ಳನ ಟ್ರ್ಯಾಕ್ ರೆಕಾರ್ಡ್ ಪರಿಶುದ್ಧವಾಗಿದೆಯಾ? ಎಂಬ ಪ್ರಶ್ನೆಯನ್ನೂ ಇಲ್ಲಿ ಕೇಳಿಕೊಳ್ಳಲೇಬೇಕಿದೆ. ಒಂದು ಕಾಲಕ್ಕೆ ಮೇಯರ್ ಮುತ್ತಣ್ಣ ಅನ್ನೋ ಆ ಕಾಲದ ಸೂಪರ್ ಹಿಟ್ ಸಿನಿಮಾ ಮಾಡಿ ರಾಜ್ ಸ್ಟಾರ್‍ವ್ಯಾಲ್ಯೂ ಸೂರೆ ಹೊಡೆದಿದ್ದ ಕುಳ್ಳ, ಆಮೇಲೆ ರಾಜ್-ವಿಷ್ಣು ನಡುವಿನ ಸ್ಟಾರ್‍ವಾರ್ ಅನ್ನೇ ಬಂಡವಾಳ ಮಾಡಿಕೊಂಡು ರಾಜ್‍ಗೆ ಪ್ರತಿಯಾಗಿ ವಿಷ್ಣುವನ್ನು ಕಟೆದು ನಿಲ್ಲಿಸುತ್ತೇನೆ ಅಂತ ಹೊರಟದ್ದು ಹಳೆಯ ಇತಿಹಾಸ. ವಿಷ್ಣು ಜೊತೆ ದ್ವಾರಕೀ ಹಲವಾರು ಸಿನಿಮಾ ಮಾಡಿ ದುಡ್ಡು ಮಾಡಿಕೊಂಡದ್ದಂತೂ ಸತ್ಯ. ತದನಂತರ ಅದೇ ವಿಷ್ಣು ಜೊತೆಗೂ ಹಣಕಾಸಿನ ವಿಚಾರವಾಗಿ ಸ್ನೇಹ ಕೆಡಿಸಿಕೊಂಡ ಪ್ರಚಂಡ ಕುಳ್ಳ, ವಿಷ್ಣುಗೆ ಪ್ರತಿಯಾಗಿ ಹೊಸ ಹೀರೋ ಹುಟ್ಟುಹಾಕುತ್ತೇನೆ ಅಂತ ಶಶಿಕುಮಾರ್‍ರನ್ನು ಹೀರೋ ಆಗಿ ಹಾಕಿಕೊಂಡು `ಹಳೇ ಕುಳ್ಳ ಹೊಸ ಕಳ್ಳ’ ಸಿನಿಮಾ ಮಾಡಿ ಕೈಸುಟ್ಟುಕೊಂಡದ್ದೂ ಉಂಟು. ಒಂದು ಕಾಲಕ್ಕೆ ದುಬಾರಿ ಸಿನಿಮಾಗಳ ಸಾಹಸಿ ನಿರ್ಮಾಪಕ ಅಂತಲೇ ಹೆಸರು ಮಾಡಿದ್ದ ದ್ವಾರ್ಕಿ ಆರ್ಥಿಕ ಮುಗ್ಗಟ್ಟಿಗೆ ಬಿದ್ದಾಗ ಕೊನೆಗೆ ಅದೇ ವಿಷ್ಣು `ಆಪ್ತಮಿತ್ರ’ನಾಗಿ ಬಂದು ನೆರವಾಗಬೇಕಾಯ್ತು. ಆದರೆ ಆ ಸಿನಿಮಾದ ಮೂಲಕ ಕಾಸು ಕಂಡ ದ್ವಾರಕೀಶ್ ಮತ್ತೆ ಹಳೆ ಚಾಳಿಗೆ ಕಟ್ಟುಬಿದ್ದು ಲೇವಾದೇವಿ ವ್ಯವಹಾರದಲ್ಲಿ ವಿಷ್ಣುವಿನಿಂದ ಪುನಾಃ ದೂರಾದರು. ವಿಷ್ಣು ನಿರ್ಗಮಿಸಿದ ನಂತರ ಅದೇ ವಿಷ್ಣು ಹೆಸರಲ್ಲಿ ಸಿನಿಮಾ ಮಾಡಲು ಮುಂದಾಗಿ ಒಂದಷ್ಟು ರಾಡಿ ಮಾಡಿಕೊಂಡದ್ದೂ ಉಂಟು. ತಮ್ಮ ಬ್ಯಾನರ್‍ನಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಬಾಕಿ ಉಳಿಸಿಕೊಂಡು ಸತಾಯಿಸಿದ ಉದಾಹರಣೆಗಳೂ ಇವೆ.

ಆದರೆ ಈಗ ದ್ವಾರಕೀಶ್ ಮತ್ತು ಜಯಣ್ಣರ ನಡುವಿನ ಈ ಬೀದಿ ಕಾಳಗಕ್ಕೆ ಕಾರಣವಾಗಿರೋದು ದ್ವಾರಕೀಶ್ ಮಗ ಯೋಗೀಶ್ ಮಾಡಿಕೊಂಡಿರುವ ಸಾಲ. ಆತ `ಅಮ್ಮಾ ಐ ಲವ್ ಯೂ’ ಸಿನಿಮಾ ಮಾಡಿದಾಗ ಅದರ ಡಿಸ್ಟ್ರಿಬ್ಯೂಷನ್‍ಗಾಗಿ ಜಯಣ್ಣನ ಬಳಿ 80 ಲಕ್ಷ ಸಾಲ ಪಡೆದಿದ್ದರು. ಅಲ್ಲದೆ ಆಯುಶ್‍ಮಾನ್ ಭವ ಸಿನಿಮಾ ಸೆಟ್ಟೇರಿದಾಗಲೂ ಜಯಣ್ಣನ ಬಳಿ 3 ಕೋಟಿ ಹಣ ಪಡೆದಿದ್ದರಂತೆ. ಹೀಗೆ ಬೇರೆಬೇರೆ ಸಮಯದಲ್ಲಿ ಒಟ್ಟು ಆರು ಕೋಟಿ ಸಾಲ ತನ್ನಿಂದ ಯೋಗೀಶ್ ಪಡೆದಿದ್ದಾರೆ ಅನ್ನೋದು ಜಯಣ್ಣನ ಅಂಬೋಣ.

ಆದರೆ ಕೊಟ್ಟ ಸಾಲ ವಾಪಸ್ ಕೇಳಿದಾಗ ತಾನು ತುಂಬಾ ಸಮಸ್ಯೆಯಲ್ಲಿದ್ದು ಜನವರಿ 30ರೊಳಗೆ ಹಣ ಕೊಡುವುದಾಗಿ ಯೋಗೀಶ್ ವಾಯಿದೆ ಪಡೆದುಕೊಂಡಿದ್ದರಂತೆ. ಈ ಮಧ್ಯೆ ಹಲವು ಬಾರಿ ಇದೇ ವಿಚಾರ ತನ್ನ ಹಾಗೂ ಯೋಗೀಶ್ ಸ್ನೇಹಿತರ ನಡುವೆ ಹಲವು ಬಾರಿ ಮೀಟಿಂಗ್ ನಡೆದು ಒಂದಷ್ಟು ಹಣವನ್ನೂ ಕೈಬಿಟ್ಟಿದ್ದೇನೆ ಎಂದು ಜಯಣ್ಣ ಹೇಳುತ್ತಿದ್ದಾರೆ.

ಜನವರಿ 30ರೊಳಗೆ ಹಣ ವಾಪಸ್ ನೀಡುವುದಾಗಿ ಹೇಳಿದ್ದ ಯೋಗೀಶ್ ಜನವರಿ 27ರಂದೇ ಜಯಣ್ಣ ಫೋನ್ ನಂಬರನ್ನು ಬ್ಲಾಕ್ ಮಾಡಿದ್ದರಂತೆ. ಫೋನ್ ಕರೆಗೆ ಯೋಗೀಶ್ ಸಿಗದಿದ್ದಾಗ ಮನೆಗೇ ಹೋಗಿ ಹಣ ಕೇಳೋ ಪ್ರಯತ್ನಕ್ಕೆ ಜಯಣ್ಣನ ಗ್ಯಾಂಗು ಮುಂದಾಗಿತ್ತು. ಅವಾಗಲೂ ದ್ವಾರಕೀಶ್ ಸಮಸ್ಯೆಯಲ್ಲಿದ್ದೇವೆ ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ. ಆದರೆ, ಫೋನ್‍ಗೆ ಸಿಗದ ದ್ವಾರಕೀ ಮಗನ ಅವಾಂತರಕ್ಕೆ ಬೇಸತ್ತಿದ್ದ ಜಯಣ್ಣ ಇದಕ್ಕೆ ಒಪ್ಪಿಲ್ಲ. ಈ ಸಂದರ್ಭದಲ್ಲಿ ಫೈನಾನ್ಶಿಯರ್ ರಮೇಶ್ ಏರುಧ್ವನಿಯಲ್ಲಿ ಕೂಗಾಡಿದ್ದಾರೆ.

ಅಲ್ಲದೆ, ಐ ಲವ್ ಯೂ ಸಿನಿಮಾ ಮಾಡುವಾಗ ಯೋಗೀಶ್ ನಿರ್ಮಾಪಕ ಮನೋಹರ್ ಬಳಿ 50 ಲಕ್ಷ ಪಡೆದಿದ್ದು, ಅದನ್ನೂ ಇನ್ನೂ ತೀರಿಸಿಲ್ಲ. ಅದಷ್ಟೇ ಅಲ್ಲದೆ, ಆಯುಷ್‍ಮಾನ್ ಭವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಚಿತಾರಾಮ್ ಅವರಿಗೂ ಇನ್ನೂ 75% ಸಂಭಾವನೆ ಕೊಟ್ಟೇ ಇಲ್ಲ, ಶಿವರಾಜ್‍ಕುಮಾರ್‍ಗೂ ಕೂಡ ಪೂರ್ತಿ ಸಂಭಾವನೆ ನೀಡಿಲ್ಲ, ಅದೇ ಸಿನಿಮಾದ ಸ್ಟಂಟ್ ಮಾಡಿದ್ದ ರವಿವರ್ಮ ಹಾಗೂ ಕೊರಿಯೋಗ್ರಫಿ ಮಾಡಿದ್ದ ಹರ್ಷ ಅವರಿಗೂ ಇನ್ನೂ ಪೇಮೆಂಟ್ ಮಾಡಿಲ್ಲ. ಇದಲ್ಲದೆ 11 ಕೋಟಿ ಬಜೆಟ್‍ನ ಸಿನಿಮಾಕ್ಕೆ 20 ಕೋಟಿ ಖರ್ಚು ತೋರಿಸಿದ್ದೀರಿ ಅಂತ ಅವರೆಲ್ಲ ರೇಗಾಡಿದ್ದಾರೆ.

ಈ ರೇಗಾಟ ಕೂಗಾಟದಲ್ಲಿ ನಿಜಕ್ಕೂ ದ್ವಾರ್ಕಿಗೆ ಜಯಣ್ಣನ ಗ್ಯಾಂಗಿನಿಂದ ಜೀವಬೆದರಿಕೆ ಹೊರಬಂತಾ? ನಿಜಕ್ಕೂ ದ್ವಾರ್ಕಿಯನ್ನು ಕೊಲ್ಲುವ ಇರಾದೆ ಜಯಣ್ಣನ ಗ್ಯಾಂಗಿದೆಯಾ? ಕೊಂದರೆ ಅವರ ದುಡ್ಡು ವಾಪಾಸ್ಸು ಬರುತ್ತಾ? ಈ ಪ್ರಶ್ನೆಗೆ ಉತ್ತರ ಸುಲಭಕ್ಕೆ ಗೊತ್ತಾಗುವಂತದ್ದಲ್ಲ. ಆದರೆ ದ್ವಾರಕೀಶ್ ಸದ್ಯಕ್ಕೆ ಆರ್ಥಿಕ ಮುಗ್ಗಟ್ಟಿನಲ್ಲಿರುವುದಂತೂ ಸತ್ಯ. ವರ್ತನೆಗಳು ಎಂತದ್ದೇ ಇರಲಿ, ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಛಾಪು ಮೂಡಿಸಿದ ನಟ ಕಂ ನಿರ್ದೇಶಕ ಕಂ ನಿರ್ಮಾಪಕನಾದ ಹಿರಿವಯಸ್ಸಿನ ದ್ವಾರಕೀಶ್‍ಗೆ ಒಂದೊಮ್ಮೆ ನಿಜಕ್ಕೂ ಜೀವಬೆದರಿಕೆ ಹಾಕಿದ್ದರೆ ಅದು ಖಂಡಿತ ತಪ್ಪು. ಆದರೆ ಕುಳ್ಳನ ಹಳೇ ವರಸೆಗಳು ಒಂದು ಕ್ಷಣ ಈ ಆರೋಪವನ್ನು ಅನುಮಾನಿಸುವಂತೆ ಮಾಡುತ್ತಿರುವುದೂ ಸುಳ್ಳಲ್ಲ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here