Homeಚಳವಳಿನಿಮ್ಮ ಮಕ್ಕಳು ಕಲಿಯುವ ಶಿಕ್ಷಣ ಪದ್ಧತಿ ಹೀಗಿದ್ದರೆ ಚೆನ್ನ ಅಲ್ಲವೇ?

ನಿಮ್ಮ ಮಕ್ಕಳು ಕಲಿಯುವ ಶಿಕ್ಷಣ ಪದ್ಧತಿ ಹೀಗಿದ್ದರೆ ಚೆನ್ನ ಅಲ್ಲವೇ?

- Advertisement -
- Advertisement -

| ಜಿ.ಆರ್. ವಿದ್ಯಾರಣ್ಯ |

ಇತ್ತೀಚೆಗಷ್ಟೇ ಭಾರತ ಸರಕಾರದ ಶಿಕ್ಷಣ ನೀತಿಯ ಕರಡು ಪ್ರತಿ ಬಿಡುಗಡೆ ಮಾಡಿದೆ. ಅದರಲ್ಲಿ ಏನಿದೆ, ಏನಿಲ್ಲ, ಏನಿರಬೇಕು ಅಥವಾ ಬೇಡ ಅದರ ವಿಸ್ತೃತ ಚರ್ಚೆ ಇನ್ನೂ ಆಗಬೇಕಿದೆ. ಅದಕ್ಕೆ ಮುನ್ನವೇ ಇದು ತ್ರಿಭಾಷಾ ಸೂತ್ರದಡಿಯಲ್ಲಿ ಹಿಂದಿ ಭಾಷೆಯನ್ನು ದಕ್ಷಿಣ ಭಾರತದ ಮೇಲೆ ಬಲವಂತವಾಗಿ ಹೇರುವ ಮರು ಪ್ರಯತ್ನ ಎಂಬ ದೋಷಾರೋಪಣೆ ಎದ್ದು ಹಲವಾರು ಎಚ್ಚರಿಕೆ ಕೂಗು, ಪ್ರತಿಭಟನೆಗಳು, ಅದಕ್ಕೆ ಬೇಕಾದ ಸಮಜಾಯಿಷಿ ಎಲ್ಲವೂ ನಡೆದಿದೆ. ಶ್ರೀ ಕಸ್ತೂರಿರಂಗನ್ ಸಮಿತಿ ಮಾತ್ರ ಇದರಲ್ಲಿ ನಮಗೆ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ, ಹಳೆಯ ಶಿಕ್ಷಣ ನೀತಿ ಸುಮಾರು 30ವರ್ಷ ಹಳೆಯದಾಗಿದ್ದು ಅದು ಇಂದಿನ ಸ್ಥಿತಿಗತಿಗೆ ಅನುಕೂಲವಾಗಿಲ್ಲದೆ ಇದ್ದುದರಿಂದ ಹೊಸ ಚಿಂತನೆಯ ಅವಶ್ಯಕತೆಯನ್ನು ಮನಗಂಡು, ಸರಕಾರದ ಆದೇಶದಂತೆ,ನೀತಿ ರೂಪಿಸಲಾಗಿದೆ ಮತ್ತು ಇದಕ್ಕೆ ಜನರು ತಮ್ಮ ತಿದ್ದುಪಡಿ ತಿಳಿಸಬಹುದಾಗಿದೆ ಎಂದು ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ.

ನಮ್ಮ ಶಿಕ್ಷಣ ನೀತಿಯಲ್ಲಿ ನಮ್ಮ ವಿದ್ಯಾರ್ಥಿಗಳು ಏನು ಕಲಿಯುತ್ತಿದ್ದಾರೆ, ನಿಜವಾಗಿ ಕಲಿಯುತ್ತಿದ್ದಾರೋ ಅಥವಾ ಶಾಲಾ-ಕಾಲೇಜಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಬೇಕಾದ ಅಂಕ ಗಳಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೋ ಎಂಬುದು ಚರ್ಚಾಸ್ಪದ ವಿಷಯ. ಈಗಿನ ಕಾಲದ ಪರೀಕ್ಷೆ ಫಲಿತಾಂಶಗಳನ್ನು ನೋಡಿದರೆ ನಾವು ನಿಜವಾಗಿ “ಮಾರ್ಕ್ಸ್”ವಾದಿಗಳಾಗುತ್ತಿರುವುದು ಎದ್ದು ಕಾಣುತ್ತದೆ. ನೂರಕ್ಕೆ ನೂರು ಅಂಕದಿಂದಲೂ ಮಕ್ಕಳು ಮತ್ತು ಅವರು ಪೋಷಕರು ಸಂತೋಷಪಡುತ್ತಿಲ್ಲ. 99.9% ಅಂಕ ಪಡೆದ ವಿದ್ಯಾರ್ಥಿಗಳು ಅಳುತ್ತಿರುವ ದೃಶ್ಯ ಮಾಧ್ಯಮದಲ್ಲಿ ಕಾಣಬಹುದಾಗಿದೆ. ದೆಹಲಿಯಲ್ಲಿ 95% ಅಂಕ ಗಳಿಸಿದ ಎರಡನೆಯ ಪಿಯು ವಿದ್ಯಾರ್ಥಿಗಳಿಗೆ ಅಲ್ಲಿಯ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ದೊರಕುತ್ತಿಲ್ಲ. ಬೇರೆ ನಗರಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಕಲಿಯುವ ವಿಷಯ ಮಕ್ಕಳ ತಲೆಗೆ ಹೋಗುತ್ತಿದೆಯೇ, ಅವರು ನಿಜವಾಗಿ ಕಲಿತು ಜಾಣರಾಗುತ್ತಿದ್ದಾರೆಯೇ ಎಂಬ ಸಂದೇಹ ಸ್ವಾಭಾವಿಕವಾಗಿ ಮೂಡುತ್ತದೆ.

ಜಾಣತನ ಎಂದರೆ ಏನು? ಇಂಗ್ಲೀಷಿನಲ್ಲಿ ಇದನ್ನು ಇಂಟೆಲಿಜೆನ್ಸ್ ಎನ್ನುತ್ತಾರೆ. ಇದರಲ್ಲಿ ಹಲವಾರು ವಿಧಗಳಿವೆ. ಆದರೆ ನಾವು ಮುಖ್ಯವಾಗಿ ಕಲಿಸುವುದು ಮತ್ತು ಪರೀಕ್ಷಿಸುವುದು ಮೂರು-ನಾಲ್ಕು ಮಾತ್ರ. ಭಾಷಾ ಜ್ಞಾನ, ತರ್ಕಶಾಸ್ತ್ರ ಹಾಗೂ ಗಣಿತಜ್ಞಾನ, ಇವಿಷ್ಟು ವಿಷಯದ ಮೇಲೆ ನಮ್ಮ ಮಕ್ಕಳ ಜಾಣತನ (ಐ.ಕ್ಯೂ.) ಅಳೆಯಲಾಗುತ್ತದೆ. ಹಾರ್ವರ್ಡ್ ಶಿಕ್ಷಣ ತಜ್ಞ ಪ್ರಾಧ್ಯಾಪಕ ಹಾವರ್ಡ್ ಗಾರ್ಡನರ್ ಎಂಬುವರು ಒಟ್ಟು ಎಂಟು ವಿಧವಾದ ಜಾಣತನಗಳನ್ನು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಮೇಲೆ ತಿಳಿಸಿದ ಮೂರು-ನಾಲ್ಕು ಜಾಣತನಗಳ ಜೊತೆಗೆ ದೈಹಿಕ ಕೈನೆಸ್ಥೆಟಿಕ್ಸ್, ಸ್ಪೇಷಿಯಲ್ ಕೈನೆಸ್ಥೆಟಿಕ್ಸ್, ಸಂಗೀತ, ಪರಸ್ಪರ ಸಂವಹನ(ಇಂಟರ್ ಪರ್ಸನಲ್) ಕಲೆ, ಆತ್ಮಾವಲೋಕನ(ಇಂಟ್ರಾ ಪರ್ಸನಲ್)ಕಲೆ ಮತ್ತು ನೈಸರ್ಗಿಕ ಜಾಣತನವನ್ನೂ ಸೇರಿಸಿದ್ದಾರೆ.

ಹಾವರ್ಡ್ ಗಾರ್ಡನರ್

ಸ್ಪೇಷಿಯಲ್ ಕೈನೆಸ್ಥೆಟಿಕ್ಸ್ ಎಂದರೆ ಜಗತ್ತನ್ನು ತ್ರಿಪರಿಮಾಣ(ಉದ್ದ-ಅಗಲ-ಎತ್ತರ)ದಲ್ಲಿ ಕಾಣುವ, ಅರಿತುಕೊಳ್ಳುವ ಕಲೆ. ಸಂಗೀತ ಜ್ಞಾನ ಐಚ್ಛಿಕ ವಿಷಯವಾಗಿದ್ದು ಇದು ಎಲ್ಲರಿಗೂ ಅನ್ವಯಿಸುವ ವಿಷಯ ಎಂದು ಯಾರೂ ಪರಿಗಣಿಸಿಲ್ಲ. ಕೇಳುವ ಕಿವಿ ಇರಲು ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ ಎಂಬ ಹಾಡು ನೆನಪಿರಬಹುದು. ಸಂಗೀತ ಲಯಬದ್ಧ. ಸಂಗೀತಕ್ಕೂ ಗಣಿತಕ್ಕೂ ಹತ್ತಿರದ ಸಂಬಂಧವಿದೆ. ಕರ್ನಾಟಕ/ಹಿಂದುಸ್ತಾನಿಯಾಗಲೀ, ಪಾಶ್ಚಾತ್ಯವಾಗಲೀ ಇದನ್ನು ಬರೆಯುವಾಗ ಗಣಿತದ ಅಕ್ಷರಗಳನ್ನು ಬಳಸುವುದನ್ನು ನೀವು ಕಾಣಬಹುದು. ಸಂಗೀತ ಬಲ್ಲವರಿಗೆ ಗಣಿತ ಸುಲಭವಾಗಿ ಅರ್ಥವಾಗುತ್ತದೆ.

ಇಂದಿನ ಜಗತ್ತಿನಲ್ಲಿ ತನ್ನನ್ನು ತಾನು ಅರಿತುಕೊಳ್ಳುವುದು ಎಷ್ಟೊಂದು ಮುಖ್ಯ. ಅದೇ ರೀತಿ ಪರಸ್ಪರ ಅರಿವು, ಸಮಾಜದ ಬಗ್ಗೆ ಅನುಭೂತಿ ಇವುಗಳ ಅವಶ್ಯಕತೆಯನ್ನು ಸ್ವಲ್ಪ ಮಟ್ಟಿಗೆ ನಮ್ಮ ಶಿಕ್ಷಣ ನೀತಿ ಈಗಾಗಲೇ ಗ್ರಹಿಸಿ, ಕೇಂದ್ರದ ಸಿಬಿಎಸ್ಇ ಪಠ್ಯಕ್ರಮದಲ್ಲಿ ಇವುಗಳ ಬಗ್ಗೆ ಒಂದಿಷ್ಟು ಉಲ್ಲೇಖವಿದೆ. ಆದರೆ ರಾಜ್ಯ ಶಿಕ್ಷಣ ನೀತಿಯಲ್ಲಿ ಇನ್ನೂ ಕಾಣುತ್ತಿಲ್ಲ ಮತ್ತು ಅವು ಶಿಕ್ಷಣದ ಮುಖ್ಯವಾಹಿನಿಗೆ ಬಂದಿಲ್ಲ. ಅದೇ ರೀತಿಯಲ್ಲಿ ದೈಹಿಕ ಕೈನೆಸ್ಥೆಟಿಕ್ಸ್ ಎಂದರೆ ದೇಹದ ಅಂಗಾಂಗಗಳನ್ನು ಬಳಸಿ ತನ್ನ ಒಳ ಅನಿಸಿಕೆಯನ್ನು ಇತರರಿಗೆ ತಿಳಿಸುವುದು; ಮುಖ್ಯವಾಗಿ ನೃತ್ಯ. ಇದೂ ಸಹ ಶಿಕ್ಷಣದ ಮುಖ್ಯವಾಹಿನಿಗೆ ಬಂದಿಲ್ಲ.

ನೈಸರ್ಗಿಕ ಜ್ಞಾನ. ಇದು ದೈವದತ್ತವಾಗಿ ಬಂದಿದ್ದು, ಇದನ್ನು ಮಕ್ಕಳಿಗೆ ತಾವಾಗಿಯೇ ವೃದ್ಧಿಸಿಕೊಳ್ಳಲು ಅವಕಾಶ ಕೊಡುವುದನ್ನು ಬಿಟ್ಟು, ನಾವು ಅದನ್ನು ಮೊಟಕುಗೊಳಿಸುವ ಪ್ರಯತ್ನವನ್ನೇ ಹೆಚ್ಚಾಗಿ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿಗೆ ಹೇಳಬೇಕಂದರೆ ನನ್ನ ಓರ್ವ ಮಿತ್ರರ ವೈಯುಕ್ತಿಕ ಅನುಭವ ಹಂಚಿಕೊಳ್ಳಬೇಕಾಗುತ್ತದೆ.

ವೃತ್ತಿಯಲ್ಲಿ ಸರಕಾರಿ ವೈದ್ಯರಾದ ಅವರು ತಾವಾಗಿಯೇ ಗ್ರಾಮೀಣ ಪ್ರದೇಶಕ್ಕೆ ಹಾಕಿಸಿಕೊಂಡು ಹೆಗ್ಗಡದೇವನ ಕೋಟೆಯ ಕಾಡಿನ ಬುಡಕಟ್ಟು ಜನಾಂಗದ ಹಾದಿಯೊಂದರಲ್ಲಿ ಕೆಲಸ ಪ್ರಾರಂಭಿಸಿದರು. ಅಲ್ಲಿಯ ಜನರಿಗೆ ಈ ಇಂಗ್ಲಿಷ್ ವೈದ್ಯರ ಅವಶ್ಯಕತೆ ಇರಲಿಲ್ಲ, ಹಾಗಾಗಿ ಇವರಿಗೆ ಮಾಡಲು ಕೆಲಸವಿರಲಿಲ್ಲ. ಸುಮ್ಮನೆ ಕುಳಿತು ಏನು ಮಾಡುವುದು ಎಂದು ಅಲ್ಲಿದ್ದ ಮಕ್ಕಳನ್ನು ಒಟ್ಟುಗೂಡಿಸಿ ಶಾಲೆ ಪ್ರಾರಂಭಿಸಲು ಪ್ರಯತ್ನ ಮಾಡಿದರು. ಎಂದೂ ಶಾಲೆಯನ್ನೇ ಕಾಣದ ಮಕ್ಕಳು ಆರರಿಂದ ಹದಿನಾಲ್ಕು ವಯಸ್ಸಿನವರಾಗಿದ್ದು, ಎಲ್ಲರಿಗೂ ಒಟ್ಟಾಗಿ ಕಲಿಸುವ ವಿಷಯ ಏನೆಂದು ಇವರಿಗೆ ತಕ್ಷಣ ಹೊಳೆಯಲಿಲ್ಲ. ಅವರಿಗೆ ಕನ್ನಡವಾಗಲೀ, ಇಂಗ್ಲೀಷ್ ಭಾಷೆಯಾಗಲೀ, ಇತಿಹಾಸ, ಭೂಗೋಳ, ಸಮಾಜ ಶಾಸ್ತ್ರ, ವಿಜ್ಞಾನ, ಗಣಿತವಾಗಲೀ ಹೇಗೆ ಮತ್ತು ಎಲ್ಲಿಂದ ಪ್ರಾರಂಭಿಸಬೇಕು ಎಂಬುದು ಇವರಿಗೆ ಸ್ಪಷ್ಟವಾಗಿರಲಿಲ್ಲ. ಕೊನೆಗೆ ಎಲ್ಲರೂ ಹೋಗಿ ಬೇರೆ ಬೇರೆ ಗಿಡದಿಂದ ಬೇರೆ ಬೇರೆ ತರಹದ ಎಲೆಗಳನ್ನು ಆಯ್ದು ತನ್ನಿ, ಯಾರು ಹೆಚ್ಚಿನ ಎಲೆ ತರುತ್ತಾರೋ ಅವರಿಗೆ ಏನೋ ಬಹುಮಾನ ಇದೆ ಎಂದು ಹೇಳಿದರು. ಸಂತೋಷದಿಂದ ಓಡಿ ಹೋದ ಮಕ್ಕಳು ಸ್ವಲ್ಪ ಸಮಯದ ನಂತರ ತಮ್ಮ ತಮ್ಮ ಶಕ್ತ್ಯಾನುಸಾರ ಎಲೆಗಳನ್ನು ತಂದು ಕೊಟ್ಟರು. ಅದರಲ್ಲಿ ಒಂದು ಹನ್ನೆರಡು ವರ್ಷದ ಹುಡುಗ ನೂರಕ್ಕೂ ಹೆಚ್ಚು ತರಹದ ಎಲೆ ಸಂಗ್ರಹಿಸಿದ್ದು, ಆ ಎಲೆಗಳು ಯಾವ ಗಿಡದ್ದು, ಅದಕ್ಕೆ ಅವರ ಆಡುಭಾಷೆಯಲ್ಲಿ ಏನೆಂದು ಹೆಸರು, ಅದರಲ್ಲಿ ಯಾವಾಗ ಯಾವ ರೀತಿಯ ಹೂವು, ಹಣ್ಣು, ಕಾಯಿ ಬಿಡುತ್ತದೆ, ಆ ಗಿಡಕ್ಕೆ ಯಾವ ಯಾವ ಹಕ್ಕಿಗಳು ಯಾವ ಕಾಲದಲ್ಲಿ ಬರುತ್ತವೆ ಎಲ್ಲವನ್ನೂ ವಿವರಿಸಿದ. ಇದುವೇ ನೈಸರ್ಗಿಕ ಜಾಣತನ. ಎಂದೂ ಶಾಲೆಗೆ ಹೋಗದ ಅವನ ನೈಸರ್ಗಿಕ ಜ್ಞಾನ ಯಾವ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗೂ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಇದನ್ನು ಅಳೆಯುವ ಯಂತ್ರ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬರಬೇಕು.

ನಮ್ಮ ಈಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಮಕ್ಕಳ ಭಾಷಾ ಜ್ಞಾನ, ತರ್ಕ/ಗಣಿತ, ಇವನ್ನು ಐ.ಕ್ಯೂ. ಎಂದು ಅಳೆದು ಇವನು ಜಾಣ, ಇವನು ದಡ್ಡ, ಇವನು ಮೂರ್ಖ, ಇವನು ಮುಠ್ಠಾಳ ಮುಂತಾದ ಹಣೆಪಟ್ಟಿ ಕಟ್ಟುತ್ತೇವೆ. ಎಂದು ಶಾಲೆಗೆ ಹೋಗದ ನೂರಾರು ಸಸ್ಯಗಳ ಜ್ಞಾನ ಸ್ವಯಂ ಸಂಪಾದಿಸಿದ ಹನ್ನೆರಡು ವರ್ಷದ ಬಾಲಕ ಮೇಧಾವಿಯೋ, ಜಾಣನೋ, ದಡ್ಡನೋ ನೀವೇ ಯೋಚಿಸಿ. ಕೆಲವು ವರ್ಷದ ಹಿಂದೆ ಕೇಂದ್ರ ಸರಕಾರ ಜಾರಿಗೆ ತಂದ ಮೋಟಾರು ವಾಹನ ಕಾಯಿದೆ ತಿದ್ದುಪಡಿ ಪ್ರಕಾರ ಎಂಟನೆಯ ತರಗತಿ ಉತ್ತೀರ್ಣರಾಗದ ಮಕ್ಕಳು ಆಟೋ ಚಾಲಕ ಪರವಾನಗಿ ಪಡೆಯಲು ಅನರ್ಹ ಎಂದು ಘೋಷಿಸಿತು. ಈ ಹುಡುಗ ಬಡತನದಿಂದಾಗಿ ಶಾಲೆ ಮುಂದುವರಿಸಲಾಗದೇ, ನಗರಕ್ಕೆ ಬಂದು, ತನ್ನ ಕುಟುಂಬವನ್ನು ರಕ್ಷಿಸಲು, ಆಟೋ ಚಾಲಕನಾಗಿ ದುಡಿಯಲು ಮುಂದಾದಾಗ, ನೀನು ಶಾಲೆಯಲ್ಲಿ  ಎಂಟು ವರ್ಷ ಕನ್ನಡ, ಇಂಗ್ಲೀಷ್, ಇತಿಹಾಸ, ಭೂಗೋಳ, ಸಮಾಜ ಶಾಸ್ತ್ರ, ವಿಜ್ಞಾನ, ಗಣಿತ ಕಲಿಯಲಿಲ್ಲ ಎಂದು ಸರಕಾರದ ಶಿಕ್ಷಣ ನೀತಿ ಅವನ ಜೀವನಾವಕಾಶ ಕಿತ್ತುಕೊಳ್ಳುವುದು ನ್ಯಾಯವೇ? ಆತ್ಮಾವಲೋಕನ ಶಕ್ತಿಯುಳ್ಳ ಎಷ್ಟೋ ಮಹಾಪುರುಷರು ನಮ್ಮ ಭಾರತದಲ್ಲಿ ಸಾಧು-ಸಂತರಾಗಿ,  ಜ್ಞಾನಿಗಳಾಗಿ ಜಗತ್ತಿಗೇ ದಾರಿ ತೋರಿಸಿದ್ದಾರೆ. ತಮ್ಮ ಸಂಗೀತ-ನೃತ್ಯ ಕಲೆಯಿಂದ ಕೋಟ್ಯಾಂತರ ಜನರನ್ನು ರಂಜಿಸಿ ಅವರ ಜೀವನದಲ್ಲಿ ಆನಂದವನ್ನು ತುಂಬಿದ್ದಾರೆ. ಪರಸ್ಪರ ಸಂವಹನ ಕಲೆಯುಳ್ಳ ಜನರು ಎಷ್ಟೋ ಜಗಳ-ಕದನಗಳನ್ನು ಮಧ್ಯಸ್ತಿಕೆ ವಹಿಸಿ ತಡೆದಿದ್ದಾರೆ. ತ್ರಿಪರಿಮಾಣದಲ್ಲಿ ಯೋಚಿಸುವ ಶಕ್ತಿಯುಳ್ಳ ಎಷ್ಟೋ ಕಲಾವಿದರು ಶಿಲ್ಪಕಲೆ, ವಿನ್ಯಾಸದಿಂದ ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ಇವರೆಲ್ಲ ಎಂಟನೆಯ ತರಗತಿಯಲ್ಲಿ ಉತ್ತೀರ್ಣರಾಗಿಲ್ಲ ಎಂದು ಇವರನ್ನು ಜೀವನದ ಮುಖ್ಯ ವಾಹಿನಿಯಿಂದ ವಂಚಿತಗೊಳಿಸುವುದು ಸರಿಯಾದ ಶಿಕ್ಷಣ ನೀತಿಯೇ? ಖಂಡಿತಾ ಅಲ್ಲ.

ಪ್ರಾಧ್ಯಾಪಕ ಹಾವರ್ಡ್ ಗಾರ್ಡನರ್ ಹೇಳಿರುವ ಎಂಟು ಜಾಣತನಗಳ ಪೈಕಿ ಮಕ್ಕಳಿಗೆ ಇಷ್ಟವಾದ ಯಾವುದೇ ಮೂರನ್ನು ಆಯ್ದುಕೊಂಡು ಶಾಲೆ/ಕಾಲೇಜು ದಾಟಲು, ಜೀವನದ ಮುಖ್ಯ ವಾಹಿನಿಗೆ ಸೇರಿ ಸಮಾಜಕ್ಕೆ ಬೇಕಾದಂತಹ ವ್ಯಕ್ತಿಯಾಗಲು ನಮ್ಮ ಶಿಕ್ಷಣ ನೀತಿ ಅನುವು ಮಾಡಿಕೊಡಬಲ್ಲದೇ?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...