ನಿರ್ಣಾಯಕ ಹಂತದತ್ತ ಎನ್‌ಪಿಆರ್ ಹೋರಾಟ: ಮುಂದೇನು?

0

ಎನ್‌ಪಿಆರ್ ಜಾರಿಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 1ರಿಂದ ದೇಶದಾದ್ಯಂತ ಮನೆಗಣತಿ ಸೆನ್ಸಸ್ ಪ್ರಕ್ರಿಯೆ ಆರಂಭವಾಗಲಿದ್ದು ಅದರ ಜೊತೆಜೊತೆಗೇ ಎನ್‌ಪಿಆರ್ ಪ್ರಕ್ರಿಯೆ ನಡೆಸುವ ಇರಾದೆ ಸರ್ಕಾರದ್ದು. ದೇಶದಲ್ಲಿ ಏಪ್ರಿಲ್ 1ರಿಂದ ಸೆಪ್ಟೆಂಬರ್ ಅಂತ್ಯದವರೆಗೂ ಈ ಪ್ರಕ್ರಿಯೆ ನಡೆಯಬೇಕಿದ್ದು, ಕರ್ನಾಟಕದಲ್ಲಿ ಏಪ್ರಿಲ್ 15ರಿಂದ ಮೇ ಅಂತ್ಯದವರೆಗೆ ಈ ಪ್ರಕ್ರಿಯೆ ನಡೆಯಲಿದೆ.

ಸೆನ್ಸಸ್ಸಿಗೆ ಯಾವ ವಿರೋಧವೂ ಇಲ್ಲವಾದರೂ ಎನ್‌ಪಿಆರ್‌ಗೆ ಈ ದೇಶದ ನಾಗರಿಕ ಸಮಾಜ ಬಲವಾದ ಪ್ರತಿರೋಧ ತೋರಿದೆ. No NPR-No NRC-No CAA ಘೋಷಣೆ ಮನೆಮನೆಗೂ, ಮನಮನಕ್ಕೂ ತಲುಪಿದೆ. ಈ ಪ್ರತಿರೋಧ ಎಷ್ಟು ಪ್ರಬಲವಾಗಿ ನಡೆದಿದೆ ಎಂದರೆ ಬಿಜೆಪಿಯೇತರ ಆಳ್ವಿಕೆ ಇರುವ 12 ರಾಜ್ಯ ಸರ್ಕಾರಗಳು ತಾವು ಎನ್‌ಪಿಆರ್ ಜಾರಿಗೊಳಿಸುವುದಿಲ್ಲ ಎಂಬ ನಿರ್ಣಯ ತೆಗೆದುಕೊಂಡಿವೆ. ಇಷ್ಟಕ್ಕೂ ಮೀರಿ ಬಿಜೆಪಿ ಆಳ್ವಿತ ರಾಜ್ಯಗಳಲ್ಲಿ ಎನ್‌ಪಿಆರ್ ಜಾರಿ ಮಾಡಲು ಹೊರಟರೆ ಅದನ್ನು ಬಹಿಷ್ಕರಿಸುವ ಮತ್ತು ಶಾಂತಿಯುತವಾಗಿ ಆದರೆ ದಿಟ್ಟವಾಗಿ ಪ್ರತಿರೋಧಿಸುವ ಕರೆಗಳು ದೇಶದಾದ್ಯಂತ ಮಾರ್ದನಿಸಿವೆ.

ಇಕ್ಕಟ್ಟಿಗೆ ಸಿಲುಕಿರುವ ಕೇಂದ್ರ ಸರ್ಕಾರ

ಕೇಂದ್ರದ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಗುರಿಯಾಗಿದೆ. ಈ ದೇಶವ್ಯಾಪಿ ಪ್ರತಿರೋಧವನ್ನು ಎದುರು ಹಾಕಿಕೊಂಡು ಎನ್‌ಪಿಆರ್ ನಡೆಸುವುದು ಸಾಧ್ಯವಿಲ್ಲ ಎಂಬ ಸ್ಥಿತಿಗೆ ತಳ್ಳಲ್ಪಟ್ಟಿದೆ. 12 ರಾಜ್ಯಗಳಲ್ಲಿ ಎನ್‌ಪಿಆರ್ ಪ್ರಕ್ರಿಯೆ ನಡೆಯದಿದ್ದರೆ, ಮಿಕ್ಕ ರಾಜ್ಯಗಳಲ್ಲಿ ಕೋಟ್ಯಾಂತರ ಜನ ಅದನ್ನು ಬಹಿಷ್ಕರಿಸಿದರೆ ಕೇಂದ್ರ ಸರ್ಕಾರವು ದೊಡ್ಡ ಮುಖಭಂಗಕ್ಕೆ ಗುರಿಯಾಗಲಿದೆ. ಅದನ್ನು ಬಲಪ್ರಯೋಗದ ಮೂಲಕ ಜಾರಿ ಮಾಡಲು ಮುಂದಾಗುವುದಾದರೆ 12 ರಾಜ್ಯ ಸರ್ಕಾರಗಳನ್ನು ವಜಾಗೊಳಿಸಬೇಕಾಗುತ್ತದೆ. ತನ್ನ ಆಳ್ವಿಕೆಯ ರಾಜ್ಯಗಳಲ್ಲೂ ಜನರನ್ನು ಬೆದರಿಸಿ ಬಂಧಿಸಿ, ದಂಡ ಹಾಕಿ ಎನ್‌ಪಿಆರ್ ನಡೆಸಬೇಕಾಗುತ್ತದೆ. ಇದು ದೇಶವ್ಯಾಪಿ ರಾಜಕೀಯ ಸಂಕ್ಷೋಭೆಗೆ ಕಾರಣವಾಗುತ್ತದೆ ಮತ್ತು ಜಾಗತಿಕ ಛೀಮಾರಿಗೆ ಕೇಂದ್ರ ಸರ್ಕಾರ ಗುರಿಯಾಗಬೇಕಾಗುತ್ತದೆ. “ಎನ್‌ಪಿಆರ್ ವಿಚಾರದಲ್ಲಿ ಒಂದು ಹೆಜ್ಜೆಯೂ ಹಿಂದಕ್ಕೆ ಹೋಗಲು ಸಾಧ್ಯವಿಲ್ಲ” ಎಂದು ಘೋಷಿಸಿದ್ದ ಅಮಿತ್ ಶಾಗೆ ರಾಜಿಸೂತ್ರಕ್ಕೆ ಮುಂದಾಗದೆ ಗತಿ ಇಲ್ಲ ಎಂಬ ವಾಸ್ತವ ಅರಿವಾದಂತೆ ಕಾಣುತ್ತಿದೆ. ಕೊನೆ ಪ್ರಯತ್ನವಾಗಿ ಹಸಿ ಸುಳ್ಳಿನ ಆಸರೆಯನ್ನು ಪಡೆಯಲು ಲೋಕಸಭೆಯಲ್ಲಿ ಪ್ರಯತ್ನಿಸಿದ್ದಾರೆ. “ದಾಖಲೆ ತೋರಿಸಬೇಕಿಲ್ಲ. ಗೊತ್ತಿಲ್ಲದ ಪ್ರಶ್ನೆಗೆ ಉತ್ತರಿಸಬೇಕಿಲ್ಲ. ಯಾರನ್ನೂ ಅನುಮಾನಾಸ್ಪದ [Doubtful– D] ಎಂದು ಗುರುತು ಮಾಡುವುದಿಲ್ಲ”, “ದೇಶವ್ಯಾಪಿ ಎನ್‌ಆರ್‌ಸಿ ಜಾರಿ ಮಾಡುವ ಗುರಿ ಸದ್ಯಕ್ಕೆ ಸರ್ಕಾರದ ಮುಂದಿಲ್ಲ” ಎಂಬ ಕತೆ ಬಿಟ್ಟಿದ್ದಾರೆ.

ಧೀಮಂತ ಜನ ಹೋರಾಟಕ್ಕೊಂದು ಸಲಾಂ

ಅಮಿತ್ ಶಾ ಉತ್ತರದ ಸುಳ್ಳು ಮತ್ತು ಸುಳ್ಳಿನ ಹಿಂದಿರುವ ಸಂಚಿನ ಕುರಿತು ನಂತರ ಚರ್ಚಿಸಬಹುದಾದರೂ ಸರ್ವಾಧಿಕಾರಿ ದಂಡನಾಯಕರು ತಮ್ಮ ಅಚಲ ನಿಲುವಿನಿಂದ ಹಿಂದೆ ಸರಿದು, ಸರ್ಕಾರವನ್ನು ರಕ್ಷಿಸಿಕೊಳ್ಳಲು ಸುಳ್ಳುಗಳನ್ನು ಆಶ್ರಯಿಸುವಂತೆ ಮಾಡಿದ್ದು ಮಾತ್ರ ಜನತೆಯ ಸಾಧನೆ. ಈ ಸಾಧನೆಗಾಗಿ ಮೊದಲು ಜನತೆಯನ್ನು ಅಭಿನಂದಿಸಲೇಬೇಕಿದೆ. ದೇಶದ ಜನರು, ವಿಶೇಷವಾಗಿ ಮುಸ್ಲಿಂ ಸಮುದಾಯ ಎಲ್ಲರೂ ನಿಬ್ಬೆರಗಾಗುವ ರೀತಿಯ ಪ್ರಬುದ್ಧತೆಯನ್ನು, ಒಗ್ಗಟ್ಟನ್ನು ಮತ್ತು ಅಚಲತೆಯನ್ನು ತೋರಿದೆ. ದೇಶದ ಸಂವಿಧಾನವನ್ನು ಎದೆಗಪ್ಪಿಕೊಂಡು, ಲಕ್ಷಾಂತರ ರಾಷ್ಟ್ರ ಧ್ವಜಗಳನ್ನು ಕೈಯಲ್ಲಿ ಹಿಡಿದು ಅಂಬೇಡ್ಕರ್, ಗಾಂಧಿ, ಭಗತ್‌ಸಿಂಗರನ್ನು ಹೆಜ್ಜೆಹೆಜ್ಜೆಗೂ ಸ್ಮರಿಸಿಕೊಂಡು ಹೋರಾಡಿದೆ. ಒಳ ವಿಭಜನೆಗಳನ್ನು, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿದೆ. ಪ್ರಭುತ್ವ ಪಡೆಗಳ ನಿರ್ಬಂಧ ಮತ್ತು ದಮನಕ್ಕೆ ಜಗ್ಗದೆ, ಧರ್ಮಾಂಧ ಪುಂಡರ ಗೂಂಡಾಗಿರಿ ಮತ್ತು ಗುಂಡಿಗೂ ಹೆದರದೆ, ಏಮಾರಿಸುವ ತಂತ್ರಗಳಿಗೆ ಬಲಿಯಾಗದೆ, ಕೊರೊನಾ ಭೂತದ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಹೋರಾಟವನ್ನು ಮುಂದುವರಿಸಿದೆ.

ದೇಶದ ಪ್ರಜ್ಞಾವಂತ ನಾಗರಿಕ ಸಮಾಜ ದೊಡ್ಡ ಮಟ್ಟದಲ್ಲಿ ಈ ಹೋರಾಟವನ್ನು ಸಮರ್ಥಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಹೋರಾಟದಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ. ಶಾಹಿನ್ ಬಾಗ್ ಮಹಿಳಾ ಪ್ರತಿರೋಧದ ಧೀಮಂತ ಸಂಕೇತವಾಗಿದೆ, ಜನಹೋರಾಟದ ಚರಿತ್ರೆಯಲ್ಲಿ ದಾಖಲಾಗುವ ಮಹತ್ವವನ್ನು ಹೊಂದಿದೆ. ಈ ಹೋರಾಟದಲ್ಲಿ ಅನೇಕರು ಮಡಿದಿದ್ದಾರೆ, ಸಹಸ್ರಾರು ಕುಟುಂಬಗಳು ಆಸ್ತಿಪಾಸ್ತಿ ಕಳೆದುಕೊಂಡಿವೆ. ಕಣ್ಣೊರೆಸಿಕೊಳ್ಳುತ್ತಲೇ, ಎದೆ ಉರಿಯುತ್ತಿದ್ದರೂ ಸಂಯಮ ಕಳೆದುಕೊಳ್ಳದೆ ಶಾಂತಿ ಮತ್ತು ಪ್ರೀತಿಗೆ ಬದ್ಧವಾಗಿ ಹೋರಾಟ ನಡೆದಿದೆ. ಬೆಂಕಿ ಹಚ್ಚುವ ಪ್ರಯತ್ನಗಳ ಹೊರತಾಗಿಯೂ ವಿವಿಧ ಕೋಮಿನ ಜನರು ಮಾನವೀಯತೆಯನ್ನು ಮೆರೆದಿದ್ದಾರೆ. ಮುಸ್ಲಿಂ ಬಾಂಧವರು ನಡೆಸುವ ಹೋರಾಟಕ್ಕೆ ಅನೇಕ ವಿಧದಲ್ಲಿ ಹೆಗಲುಗೂಡಿಸಿ ನಿಂತಿದ್ದಾರೆ. ಇದು ಕೇವಲ ಮುಸ್ಲಿಮರ ಹೋರಾಟವಾಗಬಾರದು ಎಂಬ ಕಾಳಜಿಯೊಂದಿಗೆ ತಮ್ಮ ಸಮುದಾಯಗಳನ್ನೂ ಜೊತೆಗೂಡಿಸಲು ಶ್ರಮಿಸಿದ್ದಾರೆ. ಈ ಎಲ್ಲಾ ದಿಟ್ಟ, ಪ್ರಬುದ್ಧ, ಮಾನವೀಯ ಮನಸ್ಸುಗಳಿಗೆ ಸಲಾಂ ಹೇಳಬೇಕಿದೆ. ಈ ಸಂಕಷ್ಟದ ಅವಧಿ ಜನತೆಯನ್ನು ಹೋರಾಟಕ್ಕಿಳಿಸಿದೆ. ಹೋರಾಟ ಸಂಘಟಿತ ಶಕ್ತಿ ಹರಳುಗಟ್ಟುವಂತೆ, ಮಾನವೀಯತೆಯ ಪರಿಮಳ ಪಸರಿಸುವಂತೆ ಮಾಡಿದೆ.

ರಾಜಿ ಸೂತ್ರದ ಸಾಧ್ಯತೆ

ಶಾ ಮತ್ತು ಮೋದಿಯ ‘ಜುಮ್ಲಾ’ಗಳನ್ನು ಕಂಡಿರುವ ಜನರು ಮತ್ತು ಹೋರಾಟದ ಮುಂದಾಳುಗಳು ಅಮಿತ್ ಶಾರ ಹುಸಿ ಮಾತುಗಳಿಗೆ ಮರುಳಾಗಲು ತಯಾರಿಲ್ಲ. ಹಾಗಾಗಿಯೇ ಶಾ ಮಾತಿಗೆ ಯಾರೂ ಮರುಳಾಗಿಲ್ಲ. ನೀವು ಹೇಳುತ್ತಿರುವುದನ್ನು ‘ಬರೆದುಕೊಡಿ’ ಎಂದು ಪ್ರಶ್ನಿಸಿದ್ದಾರೆ. ಇದರ ಅರ್ಥ ಕಾಯ್ದೆಯಲ್ಲಿ ಈ ಆತಂಕಕ್ಕೆ ಕಾರಣವಿಲ್ಲದಂತೆ ತಿದ್ದುಪಡಿ ತನ್ನಿ ಎನ್ನುವುದು ಇಂದಿನ ಜನಾಗ್ರಹ. ದಿನಗಳು ಹತ್ತಿರವಾಗುತ್ತಿರುವುದರಿಂದ ಹೊಸ ರಾಜಿಸೂತ್ರಕ್ಕೆ ಶಾ ಮುಂದಾಗುವ ಸಾಧ್ಯತೆ ಇದೆ. ೨೦೧೦ರಲ್ಲಿ ಕಾಂಗ್ರೆಸ್ ರೂಪಿಸಿದ್ದ ಪ್ರಶ್ನೆಗಳನ್ನೇ ಇಟ್ಟು ಎನ್‌ಪಿಆರ್ ಜಾರಿ ಮಾಡುತ್ತೇವೆ; ತಂದೆತಾಯಿಯ ಜನ್ಮ ಆಧಾರ ಕೇಳುವ ಪ್ರಶ್ನೆ ಕೈ ಬಿಡುತ್ತೇವೆ ಎನ್ನುವ ರಾಜಿ ಸೂತ್ರಕ್ಕೆ ಮುಂದಾಗಬಹುದು. ಅದಕ್ಕೆ ಕಾಂಗ್ರೆಸ್ ಮತ್ತು ಬಹುತೇಕ ಬಿಜೆಪಿಯೇತರ ಪಕ್ಷಗಳು ಒಪ್ಪಿಗೆ ಸೂಚಿಸಬಹುದು. ಇದು ತಾತ್ಕಾಲಿಕ ನಿರಾಳತೆ ಮತ್ತು ಸಾಧನೆಯೆ. ಆದರೆ ಅಪಾಯದಿಂದ ಪಾರಾದಂತೆ ಅಲ್ಲ. ಈ ಇರುವ ಮಾಹಿತಿಯನ್ನೇ ಇಟ್ಟುಕೊಂಡು ಎನ್‌ಆರ್‌ಸಿಯನ್ನು ಜಾರಿಗೆ ತರುವ ಹೊಸ ಪ್ರಕ್ರಿಯೆಯನ್ನು ಅವರು ಮತ್ತೆ ಪ್ರಾರಂಭಿಸಬಹುದು ಮತ್ತು ಮಾಡುವ ಸಾಧ್ಯತೆಯೇ ಹೆಚ್ಚು. ಹಾಗಾದಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ನಮ್ಮೆಲ್ಲರ ಮುಂದೆ ಉದ್ಭವಿಸಲಿದೆ. ಆಗಿರುವಷ್ಟು ಗೆಲುವನ್ನು ದಕ್ಕಿಸಿಕೊಳ್ಳುವ, ಬರಲಿರುವ ಅಪಾಯಕ್ಕೆ ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಮುಂದುವರೆಸುವ ತೀರ್ಮಾನ ತೆಗೆದುಕೊಳ್ಳಬೇಕಾಗಿ ಬರಬಹುದು. ಈ ಸಾಧ್ಯಾಸಾಧ್ಯತೆಗಳಿಗೆ ನಾವು ಸಿದ್ಧರಾಗಬೇಕು ಮತ್ತು ಏನೇ ಇದ್ದರೂ ನಮ್ಮ ನಿಲುವುಗಳಲ್ಲಿ ಒಡಕು ಬರದಂತೆ ಒಮ್ಮತದ ನಿಲುವನ್ನು ತೆಗೆದುಕೊಳ್ಳಬೇಕು. ಈ ನಿರ್ಣಾಯಕ ಹಂತದಲ್ಲಿ ಹೋರಾಟಗಾರರು ನಿಕಟ ಸಮನ್ವಯ ಇಟ್ಟುಕೊಂಡು ಗೊಂದಲಕ್ಕೆ ಆಸ್ಪದವಿಲ್ಲದಂತೆ ಏಕ ತೀರ್ಮಾನವನ್ನು ತೆಗೆದುಕೊಳ್ಳಬೇಕು.

ಇದನ್ನು ಓದಿ: CAA, NRC, NPR : ಮೋದಿ- ಅಮಿತ್‌ ಶಾ ಹೇಳಿದ ಹತ್ತು ಮಹಾ ಸುಳ್ಳುಗಳು

ಒಂದುವೇಳೆ ಭಂಡ ಸರ್ಕಾರ ರಾಜಿಸೂತ್ರಕ್ಕೂ ಮುಂದಾಗದೆ ಬಲವಂತವಾಗಿ ಎನ್‌ಪಿಆರ್ ಜಾರಿ ಮಾಡಲು ಮುಂದಾದರೆ ಏನು ಮಾಡುವುದು? ಹಾಗಾದಲ್ಲಿ ನಮ್ಮ ನಿಲುವು ಅಚಲವಾಗಿರಬೇಕು. ಎನ್‌ಪಿಆರ್ ಪ್ರಕ್ರಿಯೆಯನ್ನು ನಾವು ಸಾರಾಸಗಟು ಬಹಿಷ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಸೆನ್ಸಸ್ ಪಟ್ಟಿ ಮತ್ತು ಎನ್‌ಪಿಆರ್ ಪಟ್ಟಿಗಳನ್ನು ಸಮೀಕ್ಷಕರು ಒಟ್ಟೊಟ್ಟಿಗೇ ತೆಗೆದುಕೊಂಡು ಬರುವುದರಿಂದ ಜನಸಾಮಾನ್ಯರಿಗೆ ಯಾವುದು ಸೆನ್ಸಸ್ ಪ್ರಶ್ನೆಗಳು? ಯಾವುದು ಎನ್‌ಪಿಆರ್ ಪ್ರಶ್ನೆಗಳು? ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಎನ್‌ಪಿಆರ್ ಜೊತೆ ಬರುವ ಸೆನ್ಸಸ್ ಅನ್ನೂ ಅನಿವಾರ್ಯವಾಗಿ ಬಹಿಷ್ಕರಿಸಲೇಬೇಕು. ಈ ಬಹಿಷ್ಕಾರ ಶಾಂತಿಯುತವಾಗಿ ಆದರೆ ಪರಿಣಾಮಕಾರಿಯಾಗಿ ನಡೆಯಬೇಕು. ೧೩ ರಾಜ್ಯಗಳ ಮಾಹಿತಿ ಇಲ್ಲದೆ, ದೇಶದ ಕೋಟ್ಯಾಂತರ ಜನರ ಮಾಹಿತಿ ಇಲ್ಲದೆ ಮುಕ್ತಾಯಗೊಳ್ಳುವ ಎನ್‌ಪಿಆರ್ ಸಮೀಕ್ಷೆಗೆ ಕಾನೂನಾತ್ಮಕ ಬಲ ಇರುವುದಿಲ್ಲ. ಅಪೂರ್ಣವಾಗಿ ನಡೆದ ಯಾವ ಸಮೀಕ್ಷೆಯನ್ನೂ ಆಧರಿಸಿ ಕ್ರಮಕೈಗೊಳ್ಳಲು ಬರುವುದಿಲ್ಲ. ಇದನ್ನು ಸುಪ್ರೀಂಕೋರ್ಟಿನಲ್ಲೂ ಪ್ರಶ್ನಿಸಬಹುದು. ಈ ರೀತಿ ಸಾಮೂಹಿಕ ಕ್ರಿಯೆಯ ಮೂಲಕ ಆಳುವವರ ದುಷ್ಟ ಉದ್ದೇಶವನ್ನು ಸೋಲಿಸಬಹುದು.

ಕೊನೆ ಮಾತು

ಅಂತಿಮವಾಗಿ ಮತ್ತೊಮ್ಮೆ ಹೇಳುವುದಾದರೆ ಎನ್‌ಪಿಆರ್ ಉದ್ದೇಶವೇ ಎನ್‌ಆರ್‌ಸಿ ಮಾಡುವುದು. ಹಾಗಾಗಿ ಯಾವುದೇ ರೂಪದ ಎನ್‌ಪಿಆರ್ ಜಾರಿಯಾದರೂ ಎನ್‌ಆರ್‌ಸಿ ಅಪಾಯ ತಪ್ಪಿದ್ದಲ್ಲ ಎಂದೇ ಅರ್ಥ. ಆದರೆ ಸದ್ಯಕ್ಕೆ ಹಿಂದೆ ಸರಿಯುವ ರಾಜಿ ಸೂತ್ರಕ್ಕೆ ಸರ್ಕಾರ ಮುಂದಾದರೆ ಎಚ್ಚರಿಕೆ ಜೊತೆ ಅದನ್ನೂ ಪರಿಶೀಲಿಸಬೇಕು. ಆ ಗೆಲುವನ್ನು ನಮ್ಮದಾಗಿಸಿಕೊಳ್ಳುತ್ತಲೇ ಮುಂದಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಹಾಗೇನೂ ಇಲ್ಲದೆ ಈಗಿರುವುದನ್ನೇ ಹೇರಲು ಮುಂದಾದರೆ ಒಕ್ಕೊರಲಿನಿಂದ ಎನ್‌ಪಿಆರ್ ಮತ್ತು ಅದರ ಜೊತೆಗೆ ಬರುವ ಸಮೀಕ್ಷೆ ಎರಡನ್ನೂ ಬಹಿಷ್ಕರಿಸಬೇಕು.

ಒಡನಾಡಿಗಳೇ, ಪ್ರಬುದ್ಧ ಮತ್ತು ಪ್ರಬಲ ಹೋರಾಟವೊಂದು ನಿರ್ಣಾಯಕ ಹಂತಕ್ಕೆ ತಲುಪುತ್ತಿದೆ. ಸರ್ಕಾರದ ಒಂದೊAದು ನಡೆಯನ್ನೂ ಗಮನಿಸೋಣ, ಷಡ್ಯಂತ್ರಗಳ ಬಗ್ಗೆ ಜಾಗೃತರಾಗಿರೋಣ, ಸಂಧಾನದ ನಿಲುವು ಬಂದರೆ ವಾಸ್ತವತೆಯ ನೆಲೆಗಟ್ಟಿನ ಮೇಲೆ ನಿಂತು ಒಮ್ಮತದ ತೀರ್ಮಾನ ತೆಗೆದುಕೊಳ್ಳೋಣ. ಅನಿವಾರ್ಯವಾಗುವುದಾದರೆ ಬಹಿಷ್ಕರಿಸುವ ಸಾಮೂಹಿಕ ಸಂಕಲ್ಪದ ಮೂಲಕ ದುಷ್ಟ ಯೋಜನೆಯನ್ನು ಎದುರಿಸೋಣ, ವಿಫಲಗೊಳಿಸೋಣ.

ನಿಮ್ಮ ಓದಿಗಾಗಿ: NRC ವಿವಾದ: ಛತ್ತೀಸ್‌ಘಡದ ಅರ್ಧ ಜನರ ಬಳಿ ದಾಖಲೆಗಳಿಲ್ಲ, ಮೊದಲು ನಾನೇ ಸಹಿ ಹಾಕುವುದಿಲ್ಲ: ಸಿಎಂ ಭೂಪೇಶ್ ಬಾಗೆಲ್

ತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ಹೋರಾಟದಲ್ಲಿ ಸೋಲು ಎಂಬುದೆ ಇಲ್ಲ..

CAA, NRC: ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ!. ಪರಿಣಾಮ- ಅಂಕಿಅಂಶಗಳ ಸಂಗ್ರಹಕ್ಕೆ ಮರ್ಮಾಘಾತ..

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here