ಬೀದಿಗೆ ಬಿದ್ದ ತೊಗಲುಗೊಂಬೆ ಕಲಾವಿದೆ ಗೌರಮ್ಮ

ಎಲೆಮರೆ-32

ಊರಿಂದ ಊರಿಗೆ ಸಂಚರಿಸಿ ಸಾರ್ವಜನಿಕ ಕಾರ್ಯಕ್ರಮ ಕೊಡುತ್ತಾ ಜೀವನ ನಡೆಸುತ್ತಿದ್ದ ರಾಜ್ಯದ ಸಾವಿರಾರು ಜನಪದ ಮತ್ತು ರಂಗಭೂಮಿ ಕಲಾವಿದರು ಕೋರೋನ ಲಾಕ್‍ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾವಿದರಿಗೆ ಸಂಸ್ಕೃತಿ ಇಲಾಖೆ ಎರಡು ಸಾವಿರ ಧನ ಸಹಾಯ ಘೋಷಿಸಿ ಅರ್ಜಿ ಆಹ್ವಾನಿಸಿದರೂ ಆ ಹಣವಿನ್ನು ಕಲಾವಿದರಿಗೆ ತಲುಪಿಲ್ಲ. ಅಷ್ಟಕ್ಕೂ ಈ ಅರ್ಜಿ ಹಾಕಲೂ ಗೊತ್ತಾಗದ, ಗೊತ್ತಾದರೂ ಅದಕ್ಕೆ ಬೇಕಾದ ದಾಖಲಾತಿಗಳಿಲ್ಲದ ಸಾವಿರಾರು ಕಲಾವಿದರಿಗೆ ನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ಹೀಗೆ ಹುಡುಕುತ್ತಾ ಹೋದರೆ ನೂರಾರು ಕಲಾವಿದರ ಗೋಳಿನ ಕಥೆಗಳನ್ನು ಕೇಳಬಹುದಾಗಿದೆ. ಅಂತಹ ಕಲಾವಿದರಲ್ಲಿ ರಾಮನಗರದ ಚಿತ್ತಂಗ್‍ವಾಡಿಯ ಅಂಚಿನಲ್ಲಿ ಪುಟ್ಟ ಗುಡಿಸಲು ಹಾಕಿಕೊಂಡು ಒಪ್ಪತ್ತಿನ ಊಟಕ್ಕೂ ಪರದಾಡುತ್ತಾ ಸಂಕಷ್ಟಕ್ಕೆ ಸಿಲುಕಿರುವವರು ಕಲಾವಿದೆ ತೊಗಲುಗೊಂಬೆ ಗೌರಮ್ಮ.

ಈ ಪುಟ್ಟ ಗುಡಿಸಲಲ್ಲಿ ಕೂತು ಗೌರಮ್ಮನ ಕಲಾ ಬದುಕಿನ ಬಗ್ಗೆ ಕೇಳಿದರೆ, ಎಲ್ಲಾ ಸಂಕಷ್ಟಗಳನ್ನು ಮರೆತು ಚೈತನ್ಯ ಮೂಡಿದಂತೆ ಗಡುಸು ಧ್ವನಿಯಲ್ಲಿ ತನ್ನ ಕಲಾ ಬದುಕಿನ ವಿವಿಧ ಘಟ್ಟಗಳನ್ನು ಹೇಳತೊಡಗುತ್ತಾರೆ. ತನ್ನ ತಂದೆ ತಾಯಿ ಇಬ್ಬರೂ ರಂಗಭೂಮಿ ಮತ್ತು ತೊಗಲುಗೊಂಬೆ ಕಲಾವಿದರು. ತೊಗಲುಗೊಂಬೆ ಚಿತ್ರಪಟಗಳ ಜತೆ ಆಟವಾಡುತ್ತಲೇ ಗೌರಮ್ಮ ಬೆಳೆಯುತ್ತಾರೆ. ಇದು ಸಹಜವಾಗಿ ಕಲಾ ಪರಂಪರೆಯ ಕೊಂಡಿಯಂತೆ ಗೌರಮ್ಮ ಬಾಲ್ಯದಲ್ಲೆ ಪುಟ್ಟಪುಟ್ಟ ಪಾತ್ರಗಳನ್ನು ಮಾಡುತ್ತಾಳೆ. ಜಗತ್ತಿನಾದ್ಯಾಂತ ಪ್ರಚಲಿತದಲ್ಲಿರುವ ತೊಗಲುಗೊಂಬೆ ಕಲೆ ಭಾರತದ ಒಂದು ಪ್ರಾಚೀನ ಕಲೆ. ಕ್ರಿ.ಪೂ ಮೂರು ಸಾವಿರದಷ್ಟು ಹಿಂದಿನದೆಂದು ಊಹಿಸಲಾಗಿದೆ. ಕಿಳ್ಳೆಕ್ಯಾತರ ಸಮುದಾಯ ಮೂಲಪುರುಷ ಮಹಾಭಾರತದ ವನವಾಸದಲ್ಲಿ ಪಾಂಡವರನ್ನು ತೊಗಲುಗೊಂಬೆ ಆಡಿಸಿ ಮನರಂಜಿಸಿದ್ದ ಎನ್ನುವ ದಂತಕತೆಗಳಿವೆ. ಕನ್ನಡದ ಪ್ರಾಚೀನ ಪಠ್ಯಗಳಲ್ಲಿಯೂ ತೊಗಲುಗೊಂಬೆಯಾಟದ ಉಲ್ಲೇಖಗಳಿವೆ. ಕಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದ ಕಲಕೇತ ಬೊಮ್ಮಯ್ಯ ಎಂಬ ವಚನಕಾರ 12 ನೇ ಶತಮಾನದಲ್ಲಿದ್ದ ಎನ್ನುವ ಚರ್ಚೆಗಳಿವೆ.

ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ತೊಗಲುಗೊಂಬೆಯಾಟವನ್ನು ಬೇರೆ ಬೇರೆ ಪ್ರಾದೇಶಿಕ ಹೆಸರುಗಳಿಂದ ಕರೆಯುತ್ತಾರೆ. ಹಗರಿಬೊಮ್ಮನಹಳ್ಳಿಯ ಪಕ್ಕದ ಯಡ್ರಾಮನಹಳ್ಳಿ ದೊಡ್ಡಭರಮಪ್ಪ, ಬೆಳಗಲ್ ವೀರಣ್ಣನಂತವರು ತೊಗಲುಗೊಂಬೆಯಾಟವನ್ನು ವಿದೇಶಗಳಲ್ಲಿಯೂ ಜನಪ್ರಿಯಗೊಳಿಸಿದ್ದಾರೆ. ಇಂತಹ ಕಿಳ್ಳೇಕ್ಯಾತರ ತೊಗಲುಗೊಂಬೆಯಾಟದಲ್ಲಿ ಗಂಡಸರು ಹೆಚ್ಚು ಪ್ರಸಿದ್ಧಿಗೆ ಬಂದಿದ್ದಾರೆ. ಆದರೆ ತೆರೆಮರೆಯಲ್ಲಿ ತೊಗಲುಗೊಂಬೆಯಾಡಿಸುವ ಮಹಿಳೆಯರು ಹೆಚ್ಚು ಪ್ರಚಾರಕ್ಕೆ ಬಂದಿಲ್ಲ. ರಾಮನಗರ ಭಾಗದಲ್ಲಿ ಗೌರಮ್ಮ ತೊಗಲು ಗೊಂಬೆ ಕಲೆಯನ್ನು ಜನಪ್ರಿಯಗೊಳಿಸಿದ್ದಾರೆ. ಮುಖ್ಯವಾಗಿ ಚರ್ಮ ಹದ ಮಾಡಿ, ಬಣ್ಣ ಹೊಂದಿಸಿ, ತೊಗಲುಗೊಂಬೆ ರಚಿಸಿವುದರಿಂದ ಹಿಡಿದು ಮೂವತ್ತಕ್ಕೂ ಹೆಚ್ಚು ಕಥೆಗಳನ್ನು ತೊಗಲುಗೊಂಬೆಯಲ್ಲಿ ಪ್ರದರ್ಶನ ಮಾಡುವಷ್ಟು ಗೌರಮ್ಮ ಕಲಾ ಪ್ರವೀಣೆಯಾಗಿದ್ದಾರೆ. ಮುಖ್ಯವಾಗಿ ಗೌರಮ್ಮ ಹರಿಕಥೆಯನ್ನೂ ಹೇಳುವ ರಂಗ ಕಲಾವಿದೆ ಕೂಡ. ಈ ಕಾರಣ ಗೌರಮ್ಮನ ತೊಗಲುಗೊಂಬೆಯಾಟಕ್ಕೆ ಒಂದು ವಿಶೇಷ ಚಹರೆ ಬಂದಿದೆ.

`ನಾನು ರಂಗಭೂಮಿ ಕಲಾವಿದೆ ಕೂಡ. ಹರಿಕಥೆಯಲ್ಲಿ ಮಾತಾಡಿ ಮಾತಾಡಿ ಗಂಟಲು ಸ್ವಲ್ಪ ಒರಟಾಗಿ ಗಂಡಸಿನ ಧ್ವನಿ ಆದಂಗೆ ಆಗಿದೆ. ಹೀಗಾಗಿ ನನ್ನ ಧ್ವನಿ ಹೆಣ್ಣು ಪಾತ್ರಗಳಿಗೆ ಸರಿ ಹೋಗಲ್ಲ. ಹಂಗಾಗಿ ಹೆಣ್ಣು ಪಾತ್ರಗಳನ್ನು ನಾನು ಮಾಡೋಲ್ಲ. ಕೇವಲ ಗಂಡು ಪಾತ್ರಗಳನ್ನು ಮಾತ್ರ ಮಾಡ್ತೀನಿ. ರಾಮಾಯಣದಲ್ಲಿ ದಶರಥ, ಕುರುಕ್ಷೇತ್ರದಲ್ಲಿ ಭೀಮ, ರಾಜಾ ಸತ್ಯವ್ರತದಲ್ಲಿ ದೇವೇಂದ್ರ, ಸಾವಿತ್ರಿಯಲ್ಲಿ ಸತ್ಯವಂತ, ಸದಾರಮೆಯಲ್ಲಿ ರಾಜ ಮಾರ್ತಾಂಡ, ಆಂಜನೇಯ ಮುಂತಾದ ಬರೀ ಗಂಡು ಪಾತ್ರಗಳನ್ನು ಮಾಡುವೆ’ ಎಂದು ತನ್ನ ರಂಗಭೂಮಿ ನಂಟನ್ನು ಹಂಚಿಕೊಳ್ಳುತ್ತಾರೆ.

ಗೌರಮ್ಮನಿಗೆ ಇಬ್ಬರು ಮಕ್ಕಳು, ಒಬ್ಬರು ತಬಲಾ ಸಾತಿ, ಮತ್ತೊಬ್ಬರು ಡ್ರಾಮಾ ಮೇಷ್ಟ್ರು. ಇಬ್ಬರೂ ನಾಟಕ ಕಲಿಸುವ ಕಲಾವಿದರು. ಗೌರಮ್ಮ ಇಬ್ಬರ ಬಳಿಯೂ ಇಲ್ಲ. `ಈಗಿನ ಕಾಲದ್ ಸೊಸೆಯಂದ್ರತ್ರ ಹೆಚ್ಚು ಮಾತಾಡಿದ್ರೆ ಮನೆ ಹೊಡೆದೋಗುತ್ತೆ. ಹೆಂಗೋ ಬದುಕೊಳ್ರೀ ಅಂತ ಬಿಟ್ ಬಿಟ್ಟಿದಿನಿ. ನನ್ನ ಪಾಡಿಗೆ ನಾನಿದಿನಿ, ಎಸ್ಸಿ ಜನ ಹನುಮಂತು ಅನ್ನೋರ ಹೊಲದಲ್ಲಿ ಕೇಳಿಕೊಂಡ್ ಒಂದ್ ಸಣ್ಣ ಸೊಪ್ಪಿನ ಗುಡ್ಲು ಹಾಕೊಂಡು ಕಾಲ ಕಳಿತಿದೀನಿ. ಮೂರು ದೊಡ್ ದೊಡ್ ಆಪರೇಷನ್ ಆಗಿವೆ. ನಡೆದಾಡೋಕೆ ಆಗಲ್ಲ. ಕೂತಲ್ಲೆ ಎಲೆ ಅಡಿಕೆ ಖರ್ಚಿಗೆ ಬಳೆ ಯಾಪಾರ ಮಾಡ್ತಿದ್ದೆ. ಈ ಕೊರೋನ ಅಡ್ಡ ಬಂದು ಅದೂನು ನಿಂತೋಗಿದೆ, ಈಗ ಉಣ್ಣೋಕು ಕಷ್ಟ ಆಗೇತಿ’ ಎನ್ನುತ್ತಾರೆ.

ಇದೀಗ 66 ವರ್ಷದ ಗೌರಮ್ಮ ಈತನಕ ಎರಡು ಮೂರು ಬಾರಿ ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಕಲಾವಿದರ ಮಾಶಾಸನ ಈ ತನಕವೂ ಬಂದಿಲ್ಲ. ತನ್ನ ಆರೋಗ್ಯವೂ ಸರಿ ಇಲ್ಲದ ಕಾರಣ `ಏನಾದ್ರೂ ಮಾಡಾಣ ಅಂದ್ರೆ ಬದುಕಿನ ದೋಣಿನೇ ಮುರುಕಲು ಆಗೋಗಿದೆ’ ಎಂದು ಒಗಟಾಗಿ ನೋವಿನಿಂದ ನುಡಿಯುತ್ತಾರೆ. ಈಗಲೂ ಆಡ್ಸೋರು ಈಳ್ಯೆ ಕೊಟ್ರೆ ತನ್ನ ಶಿಷ್ಯರ ತಂಡಗಳನ್ನು ಕರೆಸಿ ತೊಗಲುಗೊಂಬೆಯಾಟ ಆಡಿಸುವ ಗೌರಮ್ಮ ಯಾರಾದರೂ ಕಲಿಯುವ ಆಸಕ್ತಿ ಇದ್ದವರು ಬಂದರೆ ಕಲಿಸಿಕೊಡುವೆ, ಯಾರಿಗಾದರೂ ಗೊಂಬೆಗಳು ಬೇಕಾದರೆ ಮಾಡಿಕೊಡುವೆ, ಒಟ್ನಲ್ಲಿ ಕಲೆ ಉಳಿದ್ರೆ ಸಾಕು, ಸ್ಕೂಲ್ ಮಕ್ಕಳಿಗೆ ಕಲಿ-ನಲಿ ಕಾರ್ಯಕ್ರಮದಲ್ಲಿ ಸ್ಕೂಲಲ್ಲಿ ಇರೋ ಪಾಠಗಳನ್ನೆ ಗೊಂಬೆ ಮಾಡಿ ಗೊಂಬೆಯಾಟ ಆಡ್ಸಿದಿವಿ’ ಎನ್ನುತ್ತಾರೆ.

ನಾವು ಪ್ರಾಣ ಹೋದ್ರೂನು ಗೊಂಬೆಗಳನ್ನು ಕಳೆಯೋದಿಲ್ಲ ಎನ್ನುವ ಗೌರಮ್ಮ ತಾನಿರುವ ಗುಡಿಸಲಲ್ಲಿ ಗೊಂಬೆ ಮಡಗೋಕೆ ಜಾಗ ಇಲ್ಲದ್ದಕ್ಕೆ, ಒಂದಕ್ಕೊಂಡು ಕಚ್‍ಕೊಂಡು ಬಣ್ಣನೆಲ್ಲ ಬಿಟ್ಟು ಕೆಟ್ಟೋಗತ್ತೆ ಅಂತ ಗೊಂಬೆಗಳನ್ನು ತನ್ನ ತವರು ಮನೆ ಬೆಳ್ಳೂರು ಪಕ್ಕ ಬೆಟ್ಟುಕೊಂಡನಹಳ್ಳಿಯಲ್ಲಿ ಇಟ್ಟಿದ್ದಾರೆ. `ನನ್ನ ಶಿಷ್ಯರೆಲ್ಲಾ ಬೆಳ್ಳೂರು ನಾಗಮಂಗಲ, ಕಲ್ಲೂರು ಭಾಗದಲ್ಲೆ ಇದಾರೆ. ಒಟ್ಟು ಅವರ 13 ತಂಡಗಳಿವೆ’ ಎನ್ನುವ ಗೌರಮ್ಮ, `ಈ ಸರಕಾರಕ್ಕೆ ಕಣ್ಣಿಲ್ಲ ಸರ್ ಗೋರ್ಮೆಂಟಿನೋರು ಒಂದು ಮನೆ ಕೊಟ್ರೆ, ಕಲಾವಿದರ ಮಾಶಾಸನ ಮುಂಜೂರು ಮಾಡಿದ್ರೆ ಸಾಕು ಸಾಯೋ ಕಾಲದಲ್ಲಿ ನಾಕು ದಿನನಾದ್ರೂ ನೆಮ್ಮದೀಲಿ ಬದುಕಿ ಸಾಯ್ತೀನಿ ಇದೊಂದೆ ಸರ್ ನನ್ನ ಆಸೆ’ ಎನ್ನುತ್ತಾರೆ.

ರಾಮನಗರ ಭಾಗದಲ್ಲಿ ಇಂತಹ ಜನಪದ ಕಲಾವಿದರನ್ನು ಹುಡುಕಿ, ಅವರುಗಳ ಸಂದರ್ಶನ ಮಾಡಿ ಪತ್ರಿಕೆಗಳಿಗೆ ಬರೆದು, ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದು ಕಲಾವಿದರಿಗೆ ನೆರವಾಗುವ ಕೆಲಸವನ್ನು ಯುವ ಪತ್ರಕರ್ತ ರುದ್ರೇಶ್ ಮಾಡುತ್ತಿದ್ದಾರೆ. ಹಿಂದೊಮ್ಮೆ ಗುಬ್ಬಿವೀರಣ್ಣನ ಸೊಸೆ ಶಾಂತಮ್ಮನ ಬಗ್ಗೆ ಬರೆದಾಗಲೂ ರುದ್ರೇಶ್ ಪರಿಚಯಿಸಿದ್ದರು. ಈ ಗೌರಮ್ಮನ ಬಗ್ಗೆ ಗಮನಸೆಳೆದವರೂ ಕೂಡ ರುದ್ರೇಶ್ ಅವರೆ. ಗೌರಮ್ಮನ ಕುರಿತು ಹಿಂದೆ ಪ್ರಜಾವಾಣಿಯ ಪ್ರಾದೇಶಿಕ ಪುಟದಲ್ಲಿ ಬರೆದಿದ್ದರು. ರುದ್ರೇಶ್ ಹೇಳುವಂತೆ `ಗೌರಮ್ಮನಂಥಹ ದೊಡ್ಡ ಕಲಾವಿದರಿಗೆ ಸರಕಾರ ಮಾಶಾಸನವನ್ನೂ ಕೊಡದಿರುವುದು ದುರಂತ. ಈ ಭಾಗದ ಜನಪ್ರತಿನಿಧಿಗಳು ಇಂತಹ ಕಲಾವಿದರನ್ನು ಪ್ರೋತ್ಸಾಹಿಸಬೇಕು. ನಾನೊಬ್ಬ ಪತ್ರಕರ್ತನಾಗಿ ಕಲಾವಿದರನ್ನು ಪರಿಚಯಿಸಬಹುದು, ಸಣ್ಣಪುಟ್ಟ ನೆರವು ನೀಡಬಹುದು. ಆದರೆ ಸರಕಾರ ನೆರವಿನ ಅಗತ್ಯವಿದೆ’ ಎನ್ನುತ್ತಾರೆ. ಕೊರೋನ ಲಾಕ್‍ಡೌನ ಪರಿಣಾಮ ಗೌರಮ್ಮನಂತಹ ಸಾವಿರಾರು ರಂಗಭೂಮಿ ಮತ್ತು ಜನಪದ ಕಲಾವಿದರು ಇಂದು ಬೀದಿಗೆ ಬಿದ್ದಿದ್ದಾರೆ. ಅವರ ಚೇತರಿಕೆಗೆ ಸರಕಾರದ ಯೋಜನೆಗಳು ಕಣ್ಣುಬಿಟ್ಟು ನೋಡಬೇಕಾಗಿದೆ. ಅಂತೆಯೇ ವಯಕ್ತಿಕ ನೆಲೆಯಲ್ಲಿ ಇಂತಹವರನ್ನು ಗುರುತಿಸಿ ಕೈಲಾದಷ್ಟು ನೆರವು ನೀಡಬೇಕಾಗಿದೆ.

ಈ ಬರಹ ಓದಿದವರು, ಗೌರಮ್ಮನಿಗೆ ನೆರವಾಗುವ ಮನಸ್ಸಿದ್ದರೆ ಈ ನಂಬರಿಗೆ ಸಂಪರ್ಕಿಸಿ. 9731049042.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ನಾಚಿಕೆಯಾಗಬೇಕು, ಕರೋನ ಕರಾಳತೆಯಲ್ಲೂ ಹಣ ಲೂಟಿ ಮಾಡುವ ಈ ಕಡು ಭ್ರಷ್ಟರಿಗೆ

LEAVE A REPLY

Please enter your comment!
Please enter your name here