Homeಅಂಕಣಗಳುಗೌರಿ ಲಂಕೇಶ್‍ರ ಮರುಹುಟ್ಟಿನ ತಯಾರಿಯ ಮೊದಲ ಹಂತ ಮುಗಿಸಿ... ನಿಮ್ಮೊಡನೆ ಎರಡು ಮಾತು

ಗೌರಿ ಲಂಕೇಶ್‍ರ ಮರುಹುಟ್ಟಿನ ತಯಾರಿಯ ಮೊದಲ ಹಂತ ಮುಗಿಸಿ… ನಿಮ್ಮೊಡನೆ ಎರಡು ಮಾತು

- Advertisement -
- Advertisement -

ನಿಯತಕಾಲಿಕ ಪತ್ರಿಕೆಗಳ ಯುಗ ಮುಗಿದು ಹೋಗಿದೆಯಾ? ಅದರಲ್ಲೂ ಟ್ಯಾಬ್ಲಾಯ್ಡ್‍ಗಳು ನಡೆಯುವುದಿಲ್ಲವಾ? ಈ ಚರ್ಚೆ ಗೌರಿ ಲಂಕೇಶ್ ಪತ್ರಿಕಾ ಕಚೇರಿಯಲ್ಲಿ ವರ್ಷಕ್ಕೊಂದು ಬಾರಿಯಾದರೂ ನಡೆದಿತ್ತು. ಒಂದು ಲಕ್ಷದಷ್ಟು ಪ್ರಸಾರ ಹೊಂದಿದ್ದ ಪತ್ರಿಕೆಗಳೂ ಈಗ ಏದುಸಿರು ಬಿಡುತ್ತಿವೆ ಎಂಬ ವರ್ತಮಾನ ಮೊದಮೊದಲು ಆಶ್ಚರ್ಯ ತರುತ್ತಿದ್ದವು. ‘ಬೇರೇನೋ’ ಉದ್ದೇಶ ಅಥವಾ ‘ಬೇರೆ ರೀತಿಯ’ ಆದಾಯ ಇದ್ದವರು ಮಾತ್ರ ಟ್ಯಾಬ್ಲಾಯ್ಡ್ ತರಲು ಸಾಧ್ಯ ಎಂಬ ಕನ್‍ಕ್ಲೂಷನ್ ಗಾಬರಿ ತರುವ ಹೊತ್ತಿಗೆ, ಗೌರಿಯವರ ಪತ್ರಿಕೆ ಉಳಿಸಿಕೊಳ್ಳಲು ಗೈಡ್ ಪತ್ರಿಕೆಯನ್ನು ಆರಂಭಿಸಬೇಕಾಗಿ ಬಂದಿತು. ಗೈಡ್ ಪ್ರಕಾಶನವೂ ಆರಂಭವಾಗಿ ಇನ್ನೊಂದಷ್ಟು ಚೈತನ್ಯ ತಂದಿತು. ಲಂಕೇಶ್ ಪ್ರಕಾಶನ ಯಾವತ್ತೂ ಕೈಬಿಡಲಿಲ್ಲ.
ಇಷ್ಟೆಲ್ಲಾ ಇದ್ದರೂ, ಅಂತಿಮವಾಗಿ ಎಷ್ಟು ಜನರಿಗೆ ಪತ್ರಿಕೆ ತಲುಪುತ್ತಿದೆ ಎಂಬುದು ಯಾರಿಗೂ ಸಮಾಧಾನ ತಂದಿರಲಿಲ್ಲ; ಆರ್ಥಿಕ ನಿಭಾವಣೆಯೂ ಸುಲಭದ್ದಾಗಿರಲಿಲ್ಲ. ಹೀಗಾಗಿ ಪತ್ರಿಕೆಯ ಗುಣಮಟ್ಟದಲ್ಲೂ ದೊಡ್ಡ ಚೇತರಿಕೆ ಬರಲಿಲ್ಲ. ಅದೊಂಥರಾ ಕೋಳಿ ಮೊದಲೋ ಮೊಟ್ಟೆ ಮೊದಲೋ ಕಥೆಯಾಗಿತ್ತು. ಇನ್ನೂ ಬಹಳ ಚೆನ್ನಾಗಿ ತರಬೇಕೆಂದರೆ, ಹೆಚ್ಚಿನ ಹಣ ಹೂಡಿಕೆ ಮಾಡಬೇಕು. ಹೆಚ್ಚಿನ ಹಣ ಹೂಡಿಕೆ ಮಾಡಬೇಕೆಂದರೆ, ಪತ್ರಿಕೆ ಇನ್ನೂ ಚೆನ್ನಾಗಿ ಬರಬೇಕು. ಅದಕ್ಕಿಂತ ಮುಖ್ಯವಾದ ಪ್ರಶ್ನೆಯೆಂದರೆ ‘ಚೆನ್ನಾಗಿ’ ಬಂದರೂ ಕೊಂಡು ಓದುವವರಿದ್ದಾರಾ ಎಂಬುದು.
ಅಂತರ್ಜಾಲದಲ್ಲೇ ಬೇಕಾದಷ್ಟು ಸಿಗುತ್ತದೆ; ಅಂತರ್ಜಾಲವೂ ಸುಲಭಕ್ಕೆ ಸಿಗುತ್ತದೆ. ಆದರೆ, ಅಲ್ಲಿಯೂ ಅಂತರ್ಜಾಲದಲ್ಲಿ ನೋಡುಗರ ಸಂಖ್ಯೆಗೆ ಅನುಗುಣವಾಗಿ ದಕ್ಕುವ ಜಾಹೀರಾತಿನಿಂದ ಮಾಧ್ಯಮ ಸಂಸ್ಥೆ ಸ್ವಾವಲಂಬಿಯಾಗಿ ನಡೆಯುವುದು ಕಷ್ಟ. ಅದೇನೇ ಆದರೂ, ವೆಬ್ ಮ್ಯಾಗಝೀನೇ ಭವಿಷ್ಯದ ಮಾಧ್ಯಮ ಎಂಬುದರಲ್ಲಿ ಯಾರಿಗೂ ಸಂಶಯವಿರಲಿಲ್ಲ. ಹೀಗಿದ್ದರೂ 2019ರ ಮಧ್ಯಭಾಗದವರೆಗೆ ಪತ್ರಿಕೆಯನ್ನು ನಿಲ್ಲಿಸುವುದು ಬೇಡ ಎಂದು ಗೌರಿ ಮೇಡಂ ಇದ್ದಾಗಲೇ ನಡೆದ ಚರ್ಚೆಯ ಅಂತಿಮ ತೀರ್ಮಾನವಾಗಿತ್ತು. ಅಲ್ಲಿಯವರೆಗೂ ಮುದ್ರಿತ ಪತ್ರಿಕೆಯನ್ನು ನಡೆಸುವುದು, ನಂತರ ಸೂಕ್ತವಾದ ಮಾಧ್ಯಮಕ್ಕೆ ರೂಪಾಂತರ ಹೊಂದುವುದರ ಬಗ್ಗೆ ಬಳಗದ ಎಲ್ಲರಿಗೂ ಸಹಮತವಿತ್ತು. ಈ ಚರ್ಚೆಗಳೆಲ್ಲಾ ನಡೆದದ್ದು ಬಹುಶಃ 2017ರ ಜೂನ್, ಜುಲೈನಲ್ಲಿ.
ಆ ದಿಕ್ಕಿನಲ್ಲಿ ಕೆಲಸ ಶುರು ಮಾಡುವ ಹೊತ್ತಿಗೆ ದುರಂತ ನಡೆದು ಹೋಯಿತು. ಕ್ಯಾಪ್ಟನ್ ಇಲ್ಲವಾದರು. ತಾವು ನಂಬಿದ ಧ್ಯೇಯಕ್ಕೆ ಬದ್ಧರಾಗಿ ದುಡಿಯುವ ಹಾದಿಯಲ್ಲಿ ಅವರು ಹುತಾತ್ಮರಾದರು. ಆಘಾತ, ಆಕ್ರೋಶ, ತೀರದ ದುಃಖಗಳ ನಡುವೆಯೇ ಪತ್ರಿಕೆ ನಿಲ್ಲಿಸಬಾರದು ಎಂಬ ಚರ್ಚೆ ರಾಜರಾಜೇಶ್ವರಿನಗರದ ಮನೆಯ ಮುಂದೆಯೇ ನಡೆಯಿತು. ಮರುದಿನವೇ ಬರಬೇಕಿದ್ದ ಪತ್ರಿಕೆಯನ್ನು ರೂಪಿಸಲು ಕಚೇರಿಯನ್ನು ಬಳಸುವುದು ಸಾಧ್ಯವಿರಲಿಲ್ಲ. ಅದಾಗಲೇ ಪೊಲೀಸರ ವಶದಲ್ಲಿತ್ತು. ಸೆಪ್ಟೆಂಬರ್ 12ರ ‘ನಾನು ಗೌರಿ’ ಸಮಾವೇಶದಲ್ಲಿ ಸಂಪಾದಕರ ಫೋಟೋವನ್ನೇ ಮುಖಪುಟವಾಗಿಸಿಕೊಂಡು ‘ನನ್ನ ದನಿ ಅಡಗುವುದಿಲ್ಲ’ವೆಂಬ ಸಂದೇಶ ಹೊತ್ತ ಗೌರಿ ನೆನಪಿನ ಸಂಚಿಕೆ ಹೊರಬಂದಿತು.
ಅಲ್ಲಿಂದ ಮುಂದೆ ಹಲವು ಎಡರುತೊಡರುಗಳು. ಗೌರಿ ಸ್ಮಾರಕ ಟ್ರಸ್ಟ್ ರಚನೆ, ಪತ್ರಿಕೆ ತರಲಿಕ್ಕಾಗಿ ಮೀಡಿಯಾ ಟ್ರಸ್ಟ್ ರಚನೆ, ಆರ್‍ಎನ್‍ಐ ನೋಂದಣಿ ಪಡೆಯಲು ದೀರ್ಘವಾದ ಪ್ರಕ್ರಿಯೆ, ಒಂದು ರೀತಿಯಲ್ಲಿ ನಿರೀಕ್ಷಿತ ರೀತಿಯಲ್ಲಿ ಟೈಟಲ್ ನಿರಾಕರಣೆ …….. ಹೀಗೆ. ಆರ್‍ಎನ್‍ಐ ಸಮಸ್ಯೆ ಬಗೆಹರಿಸಿಕೊಳ್ಳಲು ಗಮನ ಕೊಡುತ್ತಲೇ ವೆಬ್ ಎಡಿಷನ್ ಆರಂಭಿಸುವುದೆಂದು ತೀರ್ಮಾನವಾಯಿತು. ಅಷ್ಟು ಹೊತ್ತಿಗೆ ವಾರ್ಷಿಕ ಚಂದಾ ಕೊಡಲು ಹಲವರು ಮುಂದೆ ಬಂದಿದ್ದರಿಂದಲೂ ಟ್ರಸ್ಟ್‍ನ ಅಧ್ಯಕ್ಷರು ಖಾಸಗಿ ಪ್ರಸಾರದ ಪತ್ರಿಕೆ ತರಬೇಕೆಂದು ಸೂಚಿಸಿದ್ದರಿಂದಲೂ, ಮುದ್ರಿತ ಪತ್ರಿಕೆಯನ್ನೂ ತರುವುದೆಂದು ನಿರ್ಧರಿಸಲಾಯಿತು.
ಇದುವರೆಗೆ 11 ಸಂಚಿಕೆಗಳು ಮುಗಿದು, 12ನೇ ಸಂಚಿಕೆ ನಿಮ್ಮ ಕೈಯ್ಯಲ್ಲಿದೆ. ಒಂದು ರೀತಿಯಲ್ಲಿ ಇವೆಲ್ಲವೂ ಮುಂದೆ ದೊಡ್ಡ ಪ್ರಮಾಣದಲ್ಲಿ ರೀ ಲಾಂಚ್ ಮಾಡಲು ನಡೆಸುತ್ತಿರುವ ತಯಾರಿ. ಪತ್ರಿಕೆಯ ಸ್ವರೂಪ, ಹೂರಣ, ಧೋರಣೆ, ಭಾಷೆಯನ್ನು ರೂಪಿಸಿಕೊಳ್ಳುವುದು ಮತ್ತು ವಾರದ ಡೆಡ್‍ಲೈನ್‍ಗೆ ಸರಿಯಾಗಿ ಪತ್ರಿಕೆಯ ಎಲ್ಲಾ ಪುಟಗಳ ಬರವಣಿಗೆ, ಟೈಪಿಂಗ್, ಡಿಸೈನ್ ಮುಗಿಸಿ ಮುದ್ರಣಕ್ಕೆ ಕಳಿಸುವುದು… ಇದರ ತಾಲೀಮು ನಡೆಯುತ್ತಿದೆ.
‘ಬಹಳ ಚೆನ್ನಾಗಿ ಬರುತ್ತಿದೆ’ ಎಂಬ ಅಭಿಪ್ರಾಯದಿಂದ ಹಿಡಿದು ‘ತುಂಬಾ ಅಕ್ಯಾಡೆಮಿಕ್ ಎನಿಸುತ್ತದೆ’ ಎನ್ನುವವರೆಗೆ, ‘ಪೊಲಿಟಿಕ್ಸ್ ಜಾಸ್ತಿ ಆಯಿತು’ ಎಂಬಲ್ಲಿಂದ, ‘ಇಷ್ಟೊಂದು ಪೊಲಿಟಿಕ್ಸ್ ಬೇಕಾ?’ ಎಂಬವರೆಗೆ ಭಿನ್ನವಾದ ಅಭಿಪ್ರಾಯಗಳು ಬಂದಿವೆ. ಖಾಸಗಿ ಪ್ರಸಾರದ ಪತ್ರಿಕೆಯಾದ್ದರಿಂದ ಸದ್ಯಕ್ಕೆ ಸ್ಟಾಂಡ್ ಮಾರಾಟ ಸಾಧ್ಯವಿಲ್ಲ; ಆದರೆ ಪೋಸ್ಟ್‍ನಲ್ಲಿ (ಪೋಸ್ಟಲ್ ರಿಯಾಯಿತಿಯೂ ಇಲ್ಲದೇ) ಕಳಿಸಿದ್ದು ತಲುಪುತ್ತಿಲ್ಲ ಎಂಬ ದೂರು ಇದೆ. ಇವೆಲ್ಲವೂ ಹಿಂದಿನಿಂದಲೂ ಇದ್ದಂಥದ್ದೇ.
ಮಾರುಕಟ್ಟೆಯ ಅಧ್ಯಯನ ಹೇಳುವುದೇ ಬೇರೆ. ಈಗ ಡಜನ್‍ಗಟ್ಟಲೆ ಸುದ್ದಿ ಚಾನೆಲ್‍ಗಳಿವೆ. ಅಲ್ಲದೆ ದಿನಪತ್ರಿಕೆಗಳೇ ಟ್ಯಾಬ್ಲಾಯ್ಡ್ ರೀತಿಯ ಶೈಲಿಯಲ್ಲಿ ಬರತೊಡಗಿದ ಮೇಲೆ ಎಲ್ಲಾ ಟ್ಯಾಬ್ಲಾಯ್ಡ್‍ಗಳ ಪ್ರಸಾರವೂ ಕಡಿಮೆಯಾಗುತ್ತಾ ಸಾಗಿದೆ. ಇದೀಗ (ನಮ್ಮ ಮ್ಯಾನೇಜರ್ ಪ್ರಕಾರ – ಟಿವಿ ಸೀರಿಯಲ್‍ಗಳು ಹೆಚ್ಚಾದ ಮೇಲೆ) ಕೌಟುಂಬಿಕ ನಿಯತಕಾಲಿಕಗಳ ಪ್ರಸಾರವೂ ಗಣನೀಯವಾಗಿ ಇಳಿದುಹೋಗಿದೆ. ಏನು ಬೇಕೋ ಎಲ್ಲವೂ ಅವರವರ ಸ್ಮಾರ್ಟ್ ಫೋನ್‍ನಲ್ಲೇ ಲಭ್ಯ. ಹೀಗೆ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪತ್ರಿಕೆಯನ್ನು ಜನಪ್ರಿಯಗೊಳಿಸಬೇಕೆಂದರೆ ಪತ್ರಿಕೆಯ ಸ್ವರೂಪ, ಹೂರಣ, ಧೋರಣೆ, ಭಾಷೆ ಏನಿರಬೇಕು ಎಂಬ ಕುರಿತು ಓದುಗರಾದ ಮತ್ತು ಗೌರಿಯವರ ಬಳಗದ ಭಾಗವೂ ಆದ ನಿಮ್ಮನ್ನೇ ಕೇಳಬೇಕೆಂದುಕೊಂಡಿದ್ದೇವೆ.
ಸದ್ಯದಲ್ಲೇ ಈ ಪತ್ರಿಕೆಯು ಪೂರ್ಣ ಪ್ರಮಾಣದಲ್ಲಿ ರೀಲಾಂಚ್ ಆಗಲಿದೆ. ಇಷ್ಟು ದಿನಗಳ ಅನುಭವದಿಂದ ನಮಗೂ (ಪತ್ರಿಕೆಯ ತಂಡಕ್ಕೂ) ಕೆಲವು ಅಭಿಪ್ರಾಯಗಳಿವೆ. ಆದರೆ, ಹೊಸ ಪತ್ರಿಕೆ/ವೆಬ್ ಮ್ಯಾಗಜೀನ್ ನಮ್ಮೆಲ್ಲರದ್ದೂ ಆಗಿದೆ. ಗೌರಿಯವರ ಆಶಯವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಬಯಸುವ ಎಲ್ಲರದ್ದೂ.. ಹಾಗಾಗಿ ಇದನ್ನು ರೂಪಿಸುವುದರಲ್ಲಿ ಹಾಗೂ ಮುಂದಕ್ಕೊಯ್ಯುವುದರಲ್ಲಿ ನಾವೆಲ್ಲರೂ ಜೊತೆಯಾಗಬೇಕು. ನಿಮಗೆ ಪತ್ರಿಕೆ ಹೇಗೆ ಬಂದರೆ ಚೆನ್ನ ಅನಿಸುತ್ತದೆ ಎಂಬುದನ್ನೂ ತಿಳಿಸಿ, ಮಾರುಕಟ್ಟೆಯಲ್ಲಿ ವಿಶಿಷ್ಟ ಛಾಪು ಮೂಡಿಸಬೇಕೆಂದರೆ ಏನು ಮಾಡಬೇಕೆಂಬುದನ್ನೂ ತಿಳಿಸಿ.
ನಮ್ಮ ಕಚೇರಿಯ ವಿಳಾಸಕ್ಕೆ (ಕಡೆಯ ಪುಟದ ಕೆಳಭಾಗದಲ್ಲಿ ಲಭ್ಯ) ಪತ್ರ ಬರೆಯಬಹುದು, 9880302817 ಈ ನಂಬರ್‍ಗೆ ವಾಟ್ಸಾಪ್ ಮಾಡಬಹುದು, ಇಲ್ಲವೇ ನಮ್ಮ ಫೇಸ್‍ಬುಕ್ ಪುಟ ‘Naanu Gauri magazine ನಾನು ಗೌರಿ ಪತ್ರಿಕೆ’ಯಲ್ಲಿ ತಿಳಿಸಬಹುದು ಅಥವಾ [email protected] ಗೆ ಇ-ಮೇಲ್ ಸಹಾ ಮಾಡಬಹುದು. ನಿಮ್ಮ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿರುತ್ತೇವೆ.

– ಸಂಪಾದಕ ಮಂಡಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ: ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ

0
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶಿಸಿದ್ದು, ಸಿಐಡಿಯ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 18ರಂದು ಸಂಜೆ ಹುಬ್ಬಳ್ಳಿಯ...