Homeಅಂಕಣಗಳುಕಾನಾರ್ಡ್ ಬದುಕಿನ ಬಿಡಿ ಚಿತ್ರಗಳು

ಕಾನಾರ್ಡ್ ಬದುಕಿನ ಬಿಡಿ ಚಿತ್ರಗಳು

- Advertisement -
- Advertisement -

ಹೆತ್ತವರಿಗೆ ಬೇಡವಾಗಿದ್ದ ಮಗು
ಇಷ್ಟೆಲ್ಲ ಖ್ಯಾತಿ ಗಳಿಸಿ, ಸಾಧನೆಯ ಉತ್ತುಂಗಕ್ಕೇರಿದ ಗಿರೀಶ್ ಕಾರ್ನಾಡರಿಗೆ ಒಮ್ಮೆ ತಮ್ಮ ಹೆತ್ತವರಿಗೇ ತಾನು ಬೇಡದ ಮಗುವಾಗುವವನಿದ್ದೆ ಎಂಬ ಸತ್ಯ ತಿಳಿದು ಶಾಕ್ ಆಗುತ್ತದೆ. ಅದನ್ನವರು ತಮಾಷೆಯಾಗಿಯೇ ತಮ್ಮ ಆತ್ಮಕತೆಯ ಅರ್ಪಣೆಯಲ್ಲಿ ಹೀಗೆ ದಾಖಲಿಸಿಕೊಂಡಿದ್ದಾರೆ.

“ಆಯೀ (ನನ್ನ ತಾಯಿ), ಬಾಪ್ಪಾ(ತಂದೆ) ಹಾಗೂ ನಾನು ಊಟ ಮಾಡುತ್ತಿದ್ದೆವು. ನನ್ನ ಚಿತ್ರ ‘ವಂಶವೃಕ್ಷ’ ಆಗಲೇ ತುಂಬ ಯಶಸ್ವಿಯಾಗಿ ಓಡಿ ಹಲವಾರು ಬಹುಮಾನಗಳನ್ನು ಗಳಿಸಿತ್ತು. ‘ಕಾಡು’ ಚಿತ್ರ ಮುಗಿಯುತ್ತ ಬಂದಿತ್ತು. ನಾನು ಪುಣೆಯ ಫಿಲ್ಮ್ ಹಾಗೂ ಟೆಲಿವಿಸನ್ ಸಂಸ್ಥಾನಕ್ಕೆ ನಿರ್ದೇಶಕನಾಗಿ ನೇಮಕಗೊಂಡಿದ್ದೆ. ಒಟ್ಟು ವಾತಾವರಣ ಆತ್ಮಾಭಿನಂದನೆಯಿಂದ ಬೀಗುತ್ತಿತ್ತು.
ಒಮ್ಮೆಲೆ ಆಯೀ ಬಾಪ್ಪಾನತ್ತ ನೋಡಿ, ‘ಮತ್ತು ನಾವು ಇವನು ಬೇಡ ಅಂತ ಅಂದುಕೊಂಡಿದ್ದೆವು!’ ಎಂದಳು.
ಈ ವಿಧಾನ ಅನಪೇಕ್ಷಿತವಾಗಿ ಬಂದರೂ ಬಾಪ್ಪಾಗೆ ತಕ್ಷಣ ಅದರ ಮೊನೆ ಚುಚ್ಚಿತು. ಮುಖ ಕೆಂಪೇರಿ, ‘ಅಂ… ಹೂ… ಅದೆಲ್ಲ ನಿನ್ನ

ಬಾಲ್ಯದಲ್ಲಿ ತಾಯಿ ಮತ್ತು ಸಹೋದರಿಯರೊಂದಿಗೆ ಕಾರ್ನಾಡ್

idea- ನನ್ನದಲ್ಲ. ಈಗ ಯಾಕೆ ಅದೆಲ್ಲ?’ ಎಂದು ಊಟದ ತಟ್ಟೆಯಲ್ಲಿ ಮುಖ ಮಾರೆಮಾಡಿದ.
ನನ್ನ ಕುತೂಹಲ ಕೆರಳಿತು. ಕೆದಕಿ ಕೇಳಿದೆ. ಆಗ ಆಯೀ ಹೇಳಿದಳು,
‘ನೀನು ಹೊಟ್ಟೆಯಲ್ಲಿದ್ದಾಗ, ನನಗೆ ಇನ್ನು ಮಕ್ಕಳು ಸಾಕು ಅನಿಸಿತು. ಮೂರು ಮಕ್ಕಳಿದ್ದಾರಲ್ಲ. ಇನ್ನೂ ಯಾಕೆ? ಎಂದೆ. ಅದಕ್ಕಾಗಿ ಪುಣೆಯಲ್ಲಿಯ ಡಾ.ಮಧುಮಾಲತಿ ಗುಣೆ ಎಂಬ ಡಾಕ್ಟರ ಕ್ಲಿನಿಕ್ಕಿಗೆ ಹೋದೆವು.’
‘ಮುಂದೆ?’
‘ಆಕೆ ಬರತೇನೆ ಎಂದವಳು ಬರಲೇ ಇಲ್ಲ. ಸುಮಾರು ಒಂದು ತಾಸು ಹಾದಿ ಕಾಯ್ದು ಬೇಸತ್ತು ಬಂದು ಬಿಟ್ಟೆವು.’
‘ಅಮೇಲೆ?’
‘ಅಮೇಲೇನು? ಹೊರಳಿ ಆ ಕಡೆಗೆ ಹೋಗಲೇ ಇಲ್ಲ.’
ನಾನು ಗರ ಬಡಿದವನಂತಾದೆ. ನನಗಾಗ ಮೂವತೈದು. ಆದರೂ ನಾನಿಲ್ಲದೆ ಈ ಜಗತ್ತು ಇರಬಹುದಾಗಿತ್ತೆಂಬ ಯೋಚನೆಗೆ ನಾನು ಮಂಕಾಗಿ ಕೂತೆ. ನಾನಿಲ್ಲದ್ದು ಹೇಗಿರತಿತ್ತು? ಕೆಲ ಹೊತ್ತು ಎಲ್ಲಿ ಇದ್ದೇನೆ ಎಂಬುದೆ ಎಚ್ಚರವಿಲ್ಲದೆ ಆ ಇರವಳಿಯನ್ನೇ ದಿಟ್ಟಿಸುತ್ತ ಕೂತೆ. ಮರುಗಳಿಗೆಗೆ ಇನ್ನೊಂದು ವಿಚಾರ ಹೊಳೆದು ದಿಗ್ಭ್ರಾಂತನಾಗಿ ಕೇಳಿದೆ.
‘ಹಾಗಾದರೆ ತಂಗಿ – ಲೀನಾ – ಆಕೆಯನ್ನು ಹೇಗೆ -?’
ಆಯೀ ಅರೆನಾಚುತ್ತ, ‘ಅಯ್ಯೋ ಆ ವರೆಗೆ ನಾವು ಆ ಯೋಚನೆಯನ್ನೇ ಬಿಟ್ಟುಬಿಟ್ಟಿದ್ದೆವು’ ಎಂದು ಖೊಳ್ಳನೆ ನಕ್ಕಳು.
ಬಾಪ್ಪಾ ತಾಳಿನೊಳಗಿಂದ ದೃಷ್ಟಿಯನ್ನೇ ಎತ್ತಿರಲಿಲ್ಲ.
ಅಂದು ಆ ಡಾಕ್ಟರರು ಕೊಟ್ಟ ಮಾತಿಗೆ ಸರಿಯಾಗಿ ಕ್ಲಿನಿಕ್ಕಿಗೆ ಬಂದಿದ್ದರೆ, ಈ ಆತ್ಮ-ಕತೆಗಳು ಮಾತ್ರವಲ್ಲ, ಇದರ ಉತ್ತಮ ಪುರುಷನಾದ ನಾನೇ ಇಲ್ಲಿರುತ್ತಿರಲಿಲ್ಲ.”
ಹೀಗೆ ಆ ಘಟನೆಯನ್ನು ಸ್ಮರಿಸಿಕೊಳ್ಳುವ ಅವರು ತಮ್ಮ ಆತ್ಮಕತೆಯನ್ನು ಆ ಡಾ.ಮಧುಮಾಲತಿ ಗುಣೆಯವರಿಗೇ ಅರ್ಪಣೆ ಮಾಡಿದ್ದಾರೆ.

 

ಸಾವಿನ ಕ್ಷಣದ ಆ ತಲ್ಲಣಗಳು
ಮುಂಬೈನಲ್ಲಿ ಗಿರೀಶ್ ಕಾರ್ನಾಡರು ಎಂ.ಎ ಮಾಡುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಡಿಫ್ತೀರಿಯಾಕ್ಕೆ ತುತ್ತಾಗುತ್ತಾರೆ. ಹೆಚ್ಚೂಕಮ್ಮಿ ಸಾವಿನ ಭಯ ಆವರಿಸುವ ಆ ಕ್ಷಣದಲ್ಲೂ ಅವರ ಮನಸ್ಸು ತರ್ಕಿಸುವ ವಿಚಾರಗಳು ಬಲು ಸ್ವಾರಸ್ಯವಾಗಿವೆ. ಅದನ್ನು ಅವರದೇ ಮಾತುಗಳು ಹೀಗೆ ವಿವರಿಸುತ್ತವೆ.

“ಡಿಸೆಂಬರ್ ಸೂಟಿಯಲ್ಲಿ ನಾನು, ಅಶೋಕ ಕುಲಕರ್ಣಿ ಮನೆಗೆ ಮರಳಿದೆವು. ಅವನು ಬೆಳಗಾಂವ ಸ್ಟೇಶನ್ನಿಗೆ ಇಳಿದ. ನಾನು ಧಾರವಾಡ ಸೇರಿಕೊಂಡೆ. ಮಾರನೆಯ ದಿನ ಮುಂಜಾನೆ ನನಗೆ ನುಂಗಲಿಕ್ಕೆ ಮಾತ್ರವಲ್ಲ, ಕೆಮ್ಮಲಿಕ್ಕೂ ಆಗದಷ್ಟು ಗಂಟಲು ಬಾತುಕೊಂಡಿತ್ತು. ಬಾಪ್ಪಾ ನನ್ನ ಗಂಟಲು ನೋಡಿ ಗಾಬರಿಯಾದರು. ಅದರ ಮೇಲೆ ದಪ್ಪನ್ನ ಬಿಳಿಯ ಲೇಪ ಹರಡಿತ್ತು. ಆಯೀ-ಬಾಪ್ಪಾ ಅಷ್ಟು ಅಂಜಿಕೊಂಡದ್ದನ್ನು ಆ ಮೊದಲು ನಾನೆಂದೂ ನೋಡಿರಲಿಲ್ಲ. ಡಾ. ಕಮಲಾಪೂರ ಬಂದು ‘ಡಿಫ್ತೀರಿಯಾಕ್ಕೆ ಏನು ಹೆದರತೀರಿ? ಗುಳಿಗೆ ಕೊಡಿರಿ’ ಎಂದು ಗುಳಿಗೆ ಎಣಿಸಿ ಹೋದರು. ಆದರೂ ಸಂಜೆಯಾದಂತೆ ಆಯೀ-ಬಾಪ್ಪಾ ಅವರ ಮುಖ ಹೆಚ್ಚು ಚಿಂತಾಕ್ರಾಂತವಾಗಲಾರಂಭಿಸಿತೇ ಹೊರತು ಹೊರಪಾಗಲಿಲ್ಲ. ಬಾಪ್ಪಾ ನನ್ನ ಪಕ್ಕದಲ್ಲೇ ಮೌನವಾಗಿ ಅರ್ಧ ಗಂಟೆ ಕೂತಿದ್ದುದು ಇದೇ ಮೊದಲನೆಯ ಸಲ. ಕೊನೆಗೆ ಆಯೀ ಒಬ್ಬಳೇ ಇದ್ದಾಗ ಇಂಥ ಆತಂಕಕ್ಕೆ ಕಾರಣವೇನೆಂದು ಕೇಳಿದೆ. ಆಕೆ ಇಂಥ ಸನ್ನಿವೇಶಗಳಲ್ಲಿ ಬಾಪ್ಪಾಗಿಂತ ಹೆಚ್ಚು ಗಟ್ಟಿಉಳ್ಳವಳು. ಕಾರಣ ಹೇಳಿಬಿಟ್ಟಳು. ‘ನೀನು ಮುಂಜಾನೆಯಿಂದ ಉಚ್ಚೆ ಹೊಯ್ದಿಲ್ಲ. ನಿನ್ನ ಮೂತ್ರಪಿಂಡ ಕುಸಿದು ನಿಷ್ಕ್ರಿಯವಾಗಿರುವ ಸಾಧ್ಯತೆಯಿದೆ. ಹಾಗೆ ಆಗಿದ್ದರೆ ನಿನ್ನ ಶರೀರದೊಳಗಿನ ಕಲ್ಮಷ ತೊಳೆದು ಹೋಗದೆ ನಿನ್ನ ಒಟ್ಟು ಒಳವ್ಯವಸ್ಥೆಯನ್ನೇ ವಿಷಮಯಗೊಳಿಸುತ್ತಿರಬಹುದು. ಬೇಗ ಮೂತ್ರವಾಗದಿದ್ದರೆ ನೀನು ಸಾಯಲೂಬಹುದು!’ ಎಂದಳು.

ಸಂಜೆಯವರೆಗೂ ನಾನು ಮೃತ್ಯುವನ್ನು ಕುರಿತು ಆಲೋಚಿಸಿದೆ. ಅಂದರೆ ಮೃತ್ಯುವೆಂದರೆ ಹೀಗೆ! ನನಗೆ ಯಾವ ನೋವೂ ಇಲ್ಲದೆ ನಾನು ಸಾಯುತ್ತಿದ್ದೇನೆ ಎಂಬುದು ಅದೃಷ್ಟದ ಮಾತು. ಪ್ರಜ್ಞೆ ಕಳೆದುಕೊಂಡು ಸಾವಿನಲ್ಲಿ ತೇಲಿ ಹೋಗುವದು ಕೇವಲ ಭಾಗ್ಯವಂತರಿಗೆ ಮೀಸಲಾದ ಹಣೆಬರಹ. ಆ ಬಗ್ಗೆ ನನ್ನ ತಕರಾರು ಇರಲಿಲ್ಲ. ಆದರೆ ನನ್ನ ಜೀವನದಲ್ಲಿ ಒಂದು ಕೊರತೆ ಉಳಿದು ಬಿಟ್ಟಿತ್ತು. ಲೈಂಗಿಕ ಅನುಭವ. ಹೆಣ್ಣಿನೊಡನೆ ಶಾರೀರಿಕ ಆಟ-ಪಾಟ, ಆಲಿಂಗನ-ಚುಂಬನ, ಸಂಭೋಗ ಇದ್ಯಾವುದರದೂ ಅನುಭವವಲ್ಲದೆ ಸಾಯುವದು ಇದೆಂಥ ಕರ್ಮ! ಆ ಉತ್ಕಟ ಕ್ಷಣಗಳ ಬಗ್ಗೆ ಓದಿ ಕೇಳಿ ಅವುಗಳನ್ನೇ ಎದುರು ನೋಡಿದ ನಾನು ಈಗ ಅವುಗಳಿಗೆ ಹೀಗೆ ವಂಚಿತವಾಗಿ ಸಾಯುತ್ತಿದ್ದೇನೆ ಎಂಬ ಮನದಟ್ಟು ಅಸಹ್ಯವಾಗಿತ್ತು. ಸುದೈವದಿಂದ ಅಂದು ಹೊತ್ತು ಮುಳುಗುತ್ತಿದ್ದಂತೆ ಎಲ್ಲ ಸರಿಹೋಯಿತು. ನಾನು ಉಚ್ಚೆ ಹೊಯ್ದೆ. ಬಾಪ್ಪಾ-ಆಯೀ ಅವರ ಮುಖ ಅರಳಿತು.”

 

ವಿಷ್ಣು ಜೊತೆಗಿನ ಮೊದಲ ಮುಲಾಕಾತ್
ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾದ ವಿಷ್ಣುವರ್ಧನ್‍ರನ್ನು ಸಾಮಾನ್ಯವಾಗಿ ಪುಟ್ಟಣ್ಣ ಕಣಗಾಲರ `ನಾಗರಹಾವು’ ಸಿನಿಮಾದಿಂದ ಗುರುತಿಸಲಾಗುತ್ತದೆ. ಆದರೆ ಅವರು ಮೊದಲ ಬಾರಿ ನಟನಾಗಿ ಕ್ಯಾಮೆರಾ ಎದುರಿಸಿದ್ದು ಕಾರ್ನಾಡರ ನಿರ್ದೇಶನದ `ವಂಶವೃಕ್ಷ’ದ ಪುಟ್ಟ ಪಾತ್ರದಲ್ಲಿ. ಆ ಪಾತ್ರಕ್ಕೆ `ಸಂಪತ್ ಕುಮಾರ್’ (ವಿಷ್ಣು ಮೂಲ ಹೆಸರು) ಆಯ್ಕೆಯಾದ ಸಂದರ್ಭ ಬಲು ಸ್ವಾರಸ್ಯಕರವಾಗಿದೆ. ತಮ್ಮ `ಆಡಾಡತ ಆಯುಷ್ಯ’ದಲ್ಲಿ ಆ ಘಟನೆಯನ್ನು ಕಾರ್ನಾಡ್ ಹೀಗೆ ಮೆಲುಕು ಹಾಕಿದ್ದಾರೆ…

“ನಾನು ವೈಎನ್ಕೆಯ ಮನೆಯಲ್ಲಿ ಏನೋ ಕೆಲಸ ಮಾಡುತ್ತ ಒಬ್ಬನೇ ಕುಳಿತಿದ್ದೆ. ವೈಎನ್‍ಕೆ ಆಫೀಸಿಗೆ ಹೋಗಿರಬೇಕು. ಸಂಪತ್ಕುಮಾರ ಬಂದ, ಕೂತ. ತುಂಬ ಸ್ಫುರದ್ರೂಪಿ, ಎತ್ತರ ಮೈಕಟ್ಟು. ಸಿನೆಮಾ ನಾಯಕನಾಗಲು ಯೋಗ್ಯನಾಗಿದ್ದ. ವಯಸ್ಸು ‘ಹದಿನೆಂಟು’ ಇರಬೇಕು. ಅವನ ಚಲನವಲನಗಳಲ್ಲೇ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು.

‘ನಿಮಗೆ ಅಭಿನಯದ ಅನುಭವವಿದಯೇ?’ ಎಂದು ಕೇಳಿದೆ.
‘ಓಹೋ, ನ್ಯಾಷನಲ್ ಕಾಲೇಜಿನಲ್ಲಿ ಎಲ್ಲ ನಾಟಕಗಳಲ್ಲಿ ಮುಖ್ಯ ಪಾತ್ರ ನನ್ನದೇ.” ಎಂದ.
‘ನೀವು ಚಲನಚಿತ್ರಗಳಲ್ಲಿ ಪಾತ್ರ ವಹಿಸಿದ್ದೀರಾ?’ ಎಂದು ಕೇಳಿದೆ.
‘ಇನ್ನೂ ಯಾವುದೂ ಪೂರ್ತಿಯಾಗಿಲ್ಲ. ಆದರೆ ಮೂರು-ನಾಲ್ಕು ಫಿಲ್ಮ್‍ಗಳನ್ನು ಸೈನ್ ಮಾಡಿದ್ದೇನೆ. ಒಂದು ಹಿಂದೀ ಚಿತ್ರದಲ್ಲಿ ಕೂಡ ಹೀರೋ ರೋಲ್ ಮಾಡತಾ ಇದ್ದೇನೆ. ಅದರಲ್ಲಿ ಮಾಲಾ ಸಿನ್ಹಾ ನಾಯಕಿ.’
‘ಅರೇ! ಮಾಲಾ ಸಿನ್ಹಾಳ ಜೊತೆಗೆ ಪಾತ್ರ ಮಾಡಲಿದ್ದೀರೇನು? ಅಂಥ ದೊಡ್ಡ ಸ್ಟಾರ್ ಜೊತೆಗೆ! ಆದರೆ ಆಕೆ ವಯಸ್ಸಿನಲ್ಲಿ ನಿಮಗಿಂತ ತುಂಬ ದೊಡ್ಡವಳಿರಬೇಕಲ್ಲ,’ ಎಂದೆ.
‘ಅಯ್ಯೋ, ನೀವು ಆಕೆಯನ್ನು ನೋಡಿಲ್ಲ. ಹದಿನೆಂಟು ವಯಸ್ಸಿನ ಯುವತಿ ಇದ್ದ ಹಾಗಿದ್ದಾಳೆ. ಆಕೆಯ ಜೊತೆಗೆ ಒಂದು ಚಿತ್ರದ ಶೂಟಿಂಗ್ ಆರಂಭವಾಗಲಿಕ್ಕಿದೆ. ಇನ್ನೆರಡು ಚಿತ್ರಗಳ ಆಫರ್ ಬಂದಿದೆ.’ ಎಂದು ಬಿಗುತ್ತಲೇ ಉತ್ತರಿಸಿದ.
‘ಯಾವಾಗ?’ ಎಂದೆ.
‘ಮುಂದಿನ ತಿಂಗಳು ಔಟ್‍ಡೋರ್ ಇದೆ. ಹೊರಡುತ್ತಿದ್ದೇವೆ. ಊಟಿಯಲ್ಲಿ ಸಾಂಗ್ ಪಿಕ್ಚರೈಸೇಷನ್. ಆದರೆ ಕಾಶ್ಮೀರಿಗೂ ಹೋಗಬಹುದು,’ ಎಂದ.
‘ಓಹೋ, ಹಾಗಾದರೆ ನಮಗೆ ನೀವು ಸಿಗುವುದಿಲ್ಲ. ನಾನು ಇನ್ನೊಂದು ಹದಿನೈದು ದಿನಗಳಲ್ಲಿ ಚಿತ್ರೀಕರಣ ಆರಂಭಿಸಬೇಕಲ್ಲ. pity!’ ಎಂದೆ.
ಸಂಪತ್ಕುಮಾರ ಕೂತಲ್ಲೇ ಹೆಪ್ಪುಗಟ್ಟಿದಂತಾದ.
‘ನೀವು ಯಾರು ತಿಳೀಲಿಲ್ಲ.’ ಎಂದು ಕೆಳದನಿಯಲ್ಲಿ ಕೇಳಿದ.
‘ನನ್ನ ಹೆಸರು ಗಿರೀಶ್ ಕಾರ್ನಾಡ್’, ಎಂದೆ.

ಸಂಪತ್ಕುಮಾರನ ಆಧ್ಯತೆಯೆಲ್ಲ ಒಂದು ಕ್ಷಣದಲ್ಲಿ ಕುಸಿದು ಬಿತ್ತು ‘ಅಯ್ಯೋ, ನೀವು ಯಾರು ಅಂತ ಗೊತ್ತಾಗಲಿಲ್ಲ. ಕ್ಷಮಿಸಿ, ಸಾರ್. ನನ್ನ ಹಿಂದಿ shootingಗೆ ಇನ್ನೂ ಸಮಯ ಇದೆ. ಮಾಲಾ ಸಿನ್ಹಾ ಬಹಳ busy ನಟಿ. ಇನ್ನೊಂದು ತಿಂಗಳು ಸಿಗುವುದಿಲ್ಲವಂತೆ. ನೀವೇನು ಚಿಂತೆ ಮಾಡಬೇಕಾಗಿಲ್ಲ, ಸಾರ್, ನಾನು freeಯಾಗಿದ್ದೇನೆ. ನೀವು ಹೇಳಿದಾಗ ಬರುತ್ತೇನೆ. ಹೇಳಿದಷ್ಟು ದಿನ ಇರುತ್ತೇನೆ,’ ಎಂದು ಒಂದರ ಮೇಲೆ ಇನ್ನೊಂದಾಗಿ ಉರುಳಿ ಬರುವ ಶಬ್ದಗಳಲ್ಲಿ ನನಗೆ ಶರಣಾಗತನಾದ.

ಅವನು ಆ ವರೆಗೆ ಹೇಳಿದೆಲ್ಲ ನಾನು ಅವನಂತೆಯೇ sಣಚಿಡಿ ಆಗಲು ಬಂದ ಇನ್ನೊಬ್ಬ ಅಭ್ಯರ್ಥಿ ನಟ ಎಂದು ತಿಳಿದುಕೊಂಡು ನನ್ನ ಮೇಲೆ impression ಬೀರಿ ನನ್ನನ್ನು ಹತಪ್ರಭಗೊಳಿಸುವ ಪ್ರಯತ್ನವಾಗಿತ್ತು.

ಸಂಪತ್ಕುಮಾರನನ್ನು ನಾವು ಚಿತ್ರದ ಶ್ರೇಯಾವಳಿಯಲ್ಲಿ ‘ಕುಮಾರ’ ಎಂದು ಕರೆದೆವು. ‘’ವಂಶವೃಕ್ಷ’ದಲ್ಲಿ ಅವನನ್ನು ನೋಡಿ, ಪುಟ್ಟಣ್ಣ ಕಣಗಾಲ್ ‘ನಾಗರಹಾವು’ ಚಿತ್ರದಲ್ಲಿ ಮುಖ್ಯಪಾತ್ರ ಕೊಟ್ಟು, ‘ವಿಷ್ಣುವರ್ಧನ’ ಎಂಬ ನಾಮಕರಣ ಮಾಡಿದರು.”
ವಿಷ್ಣುವರ್ಧನ್ ಮಾತ್ರವಲ್ಲ, ಕನ್ನಡದ ಮತ್ತೊಬ್ಬ ಖ್ಯಾತ ನಟ ದಿವಂಗತ ಶಂಕರ್‍ನಾಗ್‍ರನ್ನು ಮೊದಲ ಸಲ ಬೆಳ್ಳಿ ತೆರೆಗೆ ಪರಿಚಯಿಸಿದ್ದು ಕೂಡಾ ಗಿರೀಶ್ ಕಾರ್ನಾಡರೆ. 1978ರಲ್ಲಿ ತೆರೆಕಂಡ `ಒಂದಾನೊಂದು ಕಾಲದಲ್ಲಿ’ ಸಿನಿಮಾದ `ಗಂಡುಗಲಿ’ ಪಾತ್ರ ಶಂಕರ್‍ನಾಗ್ ಕನ್ನಡದಲ್ಲಿ ಬಣ್ಣ ಹಚ್ಚಿದ ಮೊದಲ ಪಾತ್ರ. ಆ ಪಾತ್ರಕ್ಕೆ ಶಂಕರ್‍ನಾಗ್‍ರಿಗೆ ಅತ್ಯುತ್ತಮ ನಟ (ಸಿಲ್ವರ್ ಪೀಕಾಕ್) ಪ್ರಶಸ್ತಿ ಲಭಿಸಿತ್ತು.

 

ಹೇಮಾಮಾಲಿನ ಜೊತೆಗಿನ ಮದುವೆ ಪ್ರಸ್ತಾಪ….
ಬಾಲಿವುಡ್ ಸಿನಿ ಜನಗತ್ತಿನಲ್ಲಿ ಡ್ರೀಮ್ ಗರ್ಲ್ ಎಂದೇ ಹೆಸರಾದ ಎಂಬತ್ತರ ದಶಕದಲ್ಲಿ ಹೆಚ್ಚೂಕಮ್ಮಿ ಹಿಂದಿ ಸಿನಿಮಾರಂಗವನ್ನು ಆಳಿದ ಹೇಮಾ ಮಾಲಿನಿಯನ್ನು ಗಿರೀಶ್ ಕಾರ್ನಾಡರು ಮದುವೆಯಾಗಬೇಕೆಂಬ ಪ್ರಸ್ತಾಪ ಹೇಮಾ ತಾಯಿಯಿಂದಲೇ ಬಂದಿತ್ತು. ಆದರೆ, ಕಾರ್ನಾಡ್ ಮತ್ತು ಹೇಮಾ ಇಬ್ಬರಿಗೂ ಅದರ ಬಗ್ಗೆ ಸಹಮತವಿರಲಿಲ್ಲ. ಬಂದಷ್ಟೇ ಅನಾಯಾಸವಾಗಿ ಪ್ರಸ್ತಾಪ ಮುರಿದುಬಿದ್ದ ಕ್ಷಣವನ್ನು ಕಾರ್ನಾಡ್ ಹೀಗೆ ಸ್ಮರಿಸಿಕೊಂಡಿದ್ದರು…

“ಪುಣೆಯಲ್ಲಿ, ನಾನಿದ್ದ ಎರಡನೆಯ ವರ್ಷ, ಇನ್ನೊಬ್ಬ ವ್ಯಕ್ತಿ ತನ್ನ ಜೀವನವನ್ನು ಪ್ರವೇಶಿಸಿದಳು. ಜಯಾ ಚಕ್ರವರ್ತಿ, ಹೇಮಾಮಾಲಿನಿಯ ತಾಯಿ. ಮೊದಲು ಪುಣೆಯ ಒಂದು ಪಂಚತಾರಾ ಹೋಟಲಿನಿಂದ ನನ್ನನ್ನು ಕರೆ ಕಳುಹಿಸಿದಾಗ ಆಮಂತ್ರಣಕ್ಕೆ ಕಾರಣ ತಾನು ನಿರ್ಮಿಸುತ್ತಿರುವ ‘ಸ್ವಾಮಿ’ ಚಿತ್ರದಲ್ಲಿ ಮುಖ್ಯ ಪಾತ್ರಮಾಡುತ್ತೀಯಾ ಎಂದು ಕೇಳುವುದೇ ಆಗಿತ್ತು ಎಂದು ವಿವರಿಸಿದಳು. ಆದರೆ ಮತ್ತೆ ಮತ್ತೆ ಆಮಂತ್ರಣ ಬಂದಂತೆ ಅದರ ಹಿಂದಿನ ವಿನ್ಯಾಸ ಸ್ಪಷ್ಟವಾಗಹತ್ತಿತು. ಆಕೆ ತನ್ನ ಮಗಳು ಹೇಮಾಮಾಲಿನಿಗಾಗಿ ವರನನ್ನು ಅರಸುತ್ತಿದ್ದಳು. ಆ ಕಾಲದಲ್ಲಿ ಹೇಮಾಮಾಲಿನಿ- ಧರ್ಮೇಂದರ್ ಜೋಡಿಯ ಪ್ರೇಮ ಪ್ರಕರಣವೇ ಎಲ್ಲರ ಬಾಯಲ್ಲಿತ್ತು. ಹೇಗಾದರೂ ಅದನ್ನು ಕೊನೆಗಾಣಿಸಿ ಹೇಮಾಳಿಗೊಂದು ಶಿಷ್ಟ ವೈವಾಹಿಕ ಜೀವನ ಕಲ್ಪಿಸಿ ಕೊಡುವದು ತಾಯಿಯ ಉದ್ದೇಶವಾಗಿತ್ತು. ನನಗೆ ಆಕೆಯ ಗೋಳು ಅರ್ಥವಾಗುತ್ತಿತ್ತು.

ಹೇಮಾಳ ಮನೆಗೆ ಊಟಕ್ಕೆ ಕರೆ ಬರಲಾರಂಭಿಸಿತು. ಆಕೆಯ ಇಬ್ಬರು ಬಂಧುಗಳು ನನ್ನನ್ನು ಭೆಟ್ಟಿಯಾಗಲಾರಂಭಿಸಿದರು. ‘ಸ್ವಾಮಿ’ ಚಿತ್ರದ ಅದ್ಭುತ ಯಶಸ್ಸಿನ ಪರಿಣಾಮವಾಗಿ ಜಯಾ ಚಕ್ರವರ್ತಿ ‘ರತ್ನದೀಪ’ ಚಿತ್ರವನ್ನು ಆರಂಭಿಸಿ ಅದರಲ್ಲಿ ಮುಖ್ಯ ಜೋಡಿಯಾಗಿ ನನ್ನ ಜೊತೆಗೆ ಹೇಮಾಳನ್ನು ತಂದಳು. ನಾವು ಖಜುರಾಹೋದಲ್ಲಿ ಚಿತ್ರೀಕರಣ ನಡೆಸಿದಾಗ ಒಂದು ಸಂಜೆ ಹೇಮಾ ನನ್ನನ್ನು ತನ್ನೊಡನೆ ಅಡ್ಡಾಡಲು ಬರಲು ಕರೆದು, ಮುಖ್ಯ ಪ್ರಶ್ನೆ ಕೇಳಿಯೇ ಬಿಟ್ಟಳು. ‘ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ಪತ್ರಿಕೆಗಳಾಡಿಕೊಳ್ಳುತ್ತಿವೆ. ಅದಕ್ಕೆ ನೀನೇನ್ನುತ್ತೀ?’ ಎಂದು ಕೇಳಿದಳು. ನಾನು ಹೇಳಿದೆ: ‘ಥ್ಯಾಂಕ್ಸ್, ನೋಡು, ಪತ್ರಿಕೆಗಳು ಇನ್ನೇನೇನು ಆಡಿಕೊಳ್ಳುತ್ತಿವೆ ಎಂಬುದು ನನಗೆ ಮಹತ್ವದಲ್ಲ. ಆದರೆ ನಾನು ಒಲ್ಲೆ ಎನ್ನಲು ಕಾರಣವೆಂದರೆ ನನ್ನ ವಾಗ್ದತ್ತ ವಧು ಅಮೆರಿಕೆಯಲ್ಲಿದ್ದಾಳೆ. ನಾವು ಮದುವೆಯಾಗುವುದೆಂದು ನಿಶ್ಚಯಿಸಿದ್ದೇವೆ!’

“ಇದು ಅರ್ಧ ಸತ್ಯವಾಗಿತ್ತು. ಏಕೆಂದರೆ ನಾನು ಆಗಲೇ ಸರಸ್ವತಿಯನ್ನು ಕೇಳಿದ್ದರೂ, ಆಕೆ ಇನ್ನೂ ಒಪ್ಪಿಕೊಂಡಿರಲಿಲ್ಲ. ಆದರೆ ಸರಸ್ವತಿ ನನ್ನ ಮಾನಸಿಕ ದಿಗಂತದ ಮೇಲೆ ಇರದಿದ್ದರೂ, ಹೇಮಾಳನ್ನು ಮದುವೆಯಾಗುವ ಯೋಚನೆಯೇ ಅಸಾಧ್ಯವಾಗಿತ್ತು. ಇದಕ್ಕೆ ಒಂದು ಕಾರಣ ಕೊಟ್ಟರೆ ಸಾಕೇನೋ. ನಾನು ಒಂದು ದಿನ ಹೇಮಾಗೆ ಕೇಳಿದೆ; ‘ನೀನು ಮದ್ರಾಸಿನಲ್ಲಿ ತಮಿಳು ಚಲನಚಿತ್ರಗಳಲ್ಲಿ ಎಂದೂ ಪಾತ್ರ ಏಕೆ ಮಾಡಲಿಲ್ಲ?’

ಹೇಮಾ, ‘ಅಯ್ಯೋ, ಅಲ್ಲಿಯ ಜನರು ಎಷ್ಟು ಕಪ್ಪು! The People there are so black!’ ಎಂದು ಕಿಲಕಿಲನೆ ನಕ್ಕಿದ್ದಳು. ಅಲ್ಲಿಗೇ ಹೇಮಾ ಪ್ರಕರಣ ಮುಕ್ತಾಯವಾಗಿತ್ತು.”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...