Homeಅಂಕಣಗಳುಕಾಲ ಕಂದಕ ದಾಟಿದ ಡಾ.ಮುತ್ತುಲಕ್ಷ್ಮಿ ರೆಡ್ಡಿ

ಕಾಲ ಕಂದಕ ದಾಟಿದ ಡಾ.ಮುತ್ತುಲಕ್ಷ್ಮಿ ರೆಡ್ಡಿ

- Advertisement -
- Advertisement -

ಲಿಂಗ ಪೂರ್ವಗ್ರಹದ ಭಾರತೀಯ ಸಮಾಜದಲ್ಲಿ ಕಾಲ ಸೃಷ್ಟಿಸಿದ ಕಂದಕವನ್ನು ನೂರು ವರ್ಷ ಹಿಂದೆಯೇ ಒಬ್ಬ ಹುಡುಗಿ ಯಶಸ್ವಿಯಾಗಿ ದಾಟಿದಳು. ದೇವದಾಸಿ ಮನೆತನದ ತಾಯಿಯ ಮಗಳಾಗಿ; ಬಾಲ್ಯವಿವಾಹ ವಿರೋಧಿಸಿ ಓದಿ ವೈದ್ಯೆಯಾಗಿ; ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ರಾಜಕಾರಣಿಯಾಗಿ; ಮಹಿಳಾ ಜಾಗೃತಿಗೆ ಮುಡಿಪಿಟ್ಟುಕೊಂಡವಳಾಗಿ; ಕ್ಯಾನ್ಸರ್ ರೋಗಿಗಳಿಗೆ, ಪರಿತ್ಯಕ್ತ ಮಹಿಳೆಯರಿಗೆ ಆಸರೆ ನೀಡುವ ನೆರಳಾಗಿ ಬೆಳೆದ ಆ ಮಹಿಳೆ ಡಾ. ಮುತ್ತುಲಕ್ಷ್ಮಿ ರೆಡ್ಡಿ. ಅವರು ಮದರಾಸ್ ವಿವಿಯ ಮೊದಲ ಮಹಿಳಾ ವೈದ್ಯ ಪದವೀಧರೆ. ಮದರಾಸಿನಿಂದ ವಿಧಾನ ಪರಿಷತ್‍ಗೆ ಆಯ್ಕೆಯಾದ ಮೊದಲ ಮಹಿಳೆ. ವಿಶ್ವದಲ್ಲೇ ವಿಧಾನ ಪರಿಷತ್ ಉಪಸಭಾಪತಿಯಾದ ಮೊದಲ ಮಹಿಳೆ. ವೈದ್ಯೆಯಾಗಿ, ರಾಜಕಾರಣಿಯಾಗಿ, ಸಮಾಜ ಸುಧಾರಕಳಾಗಿ 20ನೇ ಶತಮಾನದ ಆರಂಭದ ದಶಕಗಳಲ್ಲಿ ಮಹಿಳಾ ಅಸ್ಮಿತೆ ಮತ್ತು ಹಕ್ಕುಗಳಿಗಾಗಿ ಹೋರಾಡಿದ ಅನನ್ಯ ವ್ಯಕ್ತಿ.
ತಮಿಳುನಾಡಿನ ಪುದುಕೊಟ್ಟೈ ಸಂಸ್ಥಾನದಲ್ಲಿ ಬ್ರಾಹ್ಮಣ ಸಮುದಾಯದ ನಾರಾಯಣ ಸ್ವಾಮಿ, ಇಸಾೈ ವೆಳ್ಳಾಲರ್ ಸಮುದಾಯದ ಚಂದ್ರಮ್ಮಾಳ್ ಮಗಳಾಗಿ 1886ರಲ್ಲಿ ಜನಿಸಿದ ಮುತ್ತುಲಕ್ಷ್ಮಿ ಸ್ವತಂತ್ರ ಆಲೋಚನಾ ಪ್ರವೃತ್ತಿಯ ಬಾಲಕಿ. ದೇವದಾಸಿ ಮನೆತನದ ಚಂದ್ರಮ್ಮಾಳ್ ಅವರನ್ನು ಮದುವೆಯಾದದ್ದಕ್ಕೆ ನಾರಾಯಣ ಸ್ವಾಮಿಯವರ ಕುಟುಂಬ ದೂರವಾಗಿತ್ತು. ಹಾಗಾಗಿ ಎಳೆಯ ಮುತ್ತುಲಕ್ಷ್ಮಿಗೆ ತಾಯಿ ಕಡೆಯ ಸಂಬಂಧಿಗಳ ಒಡನಾಟವೇ ಹೆಚ್ಚಿತ್ತು. ಮನೆಯಲ್ಲಿ ತಂದೆಯೇ ಪಾಠ ಹೇಳಿಕೊಟ್ಟು ಹುಡುಗಿ ಇಂಟರ್ ಪಾಸು ಮಾಡಿದಳು. ಆ ವೇಳೆಗೆ ಮುತ್ತುಲಕ್ಷ್ಮಿಯ ಮದುವೆ ತಯಾರಿ ಶುರುವಾಯಿತು. ಆದರೆ ಎಳೆಯಬಾಲೆ ಓದುವೆನೆಂದು ಹಠ ಹಿಡಿದಳು. 1902ರಲ್ಲಿ ಮೆಟ್ರಿಕ್ಯುಲೇಷನ್ ಪಾಸಾದಳು. ನಂತರ ಪುದುಕೊಟ್ಟೈಯ ಮಹಾರಾಜಾ ಕಾಲೇಜು ಸೇರಲು ಹೋದಾಗ ಕೋಲಾಹಲ. ಹುಡುಗಿಯರು ಕಾಲೇಜಿಗೆ ಬಂದರೆ ಹುಡುಗರು ಹಾಳಾಗಿಬಿಡುತ್ತಾರೆಂದು ವಿದ್ಯಾರ್ಥಿಗಳ ಪೋಷಕರಾದಿಯಾಗಿ ಎಲ್ಲರೂ ವಿರೋಧಿಸಿದರು. ಕೊನೆಗೆ ಆಧುನಿಕತೆಗೆ ತೆರೆದುಕೊಂಡಿದ್ದ ಪ್ರಾಂತ್ಯದ ಮಹಾರಾಜರೇ ಮುತ್ತುಲಕ್ಷ್ಮಿಗೆ ಅಡ್ಮಿಷನ್ ದೊರಕಿಸಿದರು. ಹುಡುಗರ ಕಾಲೇಜಿನ ಮೊದಲ ಹುಡುಗಿಯಾಗಿ ಮುತ್ತುಲಕ್ಷ್ಮಿ ಕಲಿಯತೊಡಗಿದಳು.
1907ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು ಸೇರಿದ ಮುತ್ತುಲಕ್ಷ್ಮಿ, 1912ರಲ್ಲಿ ಮದರಾಸು ವಿವಿಯಿಂದ ಪದಕ, ಪಾರಿತೋಷಕಗಳೊಂದಿಗೆ ವೈದ್ಯ ಪದವಿ ಪಡೆದರು. ಹಾಗೆ ಪದವೀಧರೆಯಾದ ಮೊದಲ ವೈದ್ಯೆ ಆಕೆ. ಎಗ್ಮೋರಿನ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೆಲಸ ಮಾಡತೊಡಗಿದಾಗ ಹೌಸ್ ಸರ್ಜನ್ ಆದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ವೈದ್ಯೆಯಾದ ಕೂಡಲೇ ವೆಟ್‍ನರ್ಸ್ ಆಗುವಿಕೆಯನ್ನು ತಡೆಯುವ ಜಾಗೃತಿ ಶುರುಮಾಡಿದರು. ಮೇಲ್ಜಾತಿ ತಾಯಂದಿರ ಕೂಸುಗಳಿಗೆ ತಳಸಮುದಾಯದ ಮಹಿಳೆಯರು ಎದೆಹಾಲು ಕುಡಿಸಿ ಸಾಕುವುದು ಅಂದಿಗೆ ಸಾಮಾನ್ಯವಾಗಿತ್ತು. ಆದರೆ ಸಾಕುತಾಯಿಯ ಮಕ್ಕಳಾದರೋ ಮೊಲೆಹಾಲಿನಿಂದ ವಂಚಿತರಾಗಿ ಆರೋಗ್ಯ ಸಮಸ್ಯೆಗಳಿಗೀಡಾಗುತ್ತಿದ್ದರು. ಅದರ ವಿರುದ್ಧ ಮುತ್ತುಲಕ್ಷ್ಮಿ ತಳಸಮುದಾಯದ ಮಹಿಳೆಯರಲ್ಲಿ ಜಾಗೃತಿ ಮೂಡಿಸತೊಡಗಿದರು.
28 ವರ್ಷದವರಾಗಿದ್ದ ಮುತ್ತುಲಕ್ಷ್ಮಿ ಸಮಾನ ಮನಸ್ಕ ಸಂಗಾತಿಯನ್ನು ತಾವೇ ಆಯ್ಕೆಮಾಡಿಕೊಂಡರು. 1914ರಲ್ಲಿ ನೇಟಿವ್ಸ್ ಮ್ಯಾರೇಜ್ ಆಕ್ಟ್ – 1872 ಪ್ರಕಾರ ಡಾ. ಸುಂದರ ರೆಡ್ಡಿಯವರನ್ನು ಮದುವೆಯಾದರು. ತಮ್ಮನ್ನು ಸಮಾನಳಂತೆ ಭಾವಿಸಬೇಕು ಮತ್ತು ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ದಾರಿಯಲ್ಲಿ ಎಂದೂ ಅಡ್ಡಬರಬಾರದು ಎಂಬ ಷರತ್ತಿನೊಂದಿಗೆ ಬ್ರಹ್ಮ ಸಮಾಜದ ರೀತ್ಯಾ ವಿವಾಹವಾದರು.
1917ರಲ್ಲಿ ಅನಿಬೆಸೆಂಟ್, ಮಾರ್ಗರೆಟ್ ಕಸಿನ್ಸ್, ಸರೋಜಿನಿ ನಾಯ್ಡು ಮೊದಲಾದವರೊಡನೆ ವಿಮೆನ್ಸ್ ಇಂಡಿಯಾ ಅಸೋಸಿಯೇಷನ್ ಶುರು ಮಾಡಿದರು. ಅವರೆಲ್ಲ ಸಾಮಾಜಿಕ ಅನಿಷ್ಟಗಳ ವಿರುದ್ಧ ದನಿಯೆತ್ತುತ್ತಲೇ ಲಿಂಗತಾರತಮ್ಯ, ಲಿಂಗ ದೌರ್ಜನ್ಯಗಳನ್ನು ವಿರೋಧಿಸಿದರು. ಮುನ್ಸಿಪಾಲ್ಟಿ ಹಾಗೂ ಶಾಸನ ಸಭೆಯ ಚುನಾವಣೆಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಬೇಕೆಂದು ಕೇಳಿದರು.
1925-26ರಲ್ಲಿ ಡಾ. ಮುತ್ತುಲಕ್ಷ್ಮಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ವಿಷಯದಲ್ಲಿ ಹೆಚ್ಚುವರಿ ಅಧ್ಯಯನಕ್ಕಾಗಿ ಲಂಡನ್ನಿಗೆ ಹೋದರು. 1927ರಲ್ಲಿ ಮದರಾಸು ವಿಧಾನ ಪರಿಷತ್ ಸದಸ್ಯೆಯಾಗಿ, ನಂತರ ಉಪಸಭಾಪತಿಯಾಗಿ ಅವಿರೋಧ ಆಯ್ಕೆಯಾದರು. ವಿಧಾನ ಪರಿಷತ್ ಸದಸ್ಯೆಯಾಗಿದ್ದ ಮೂರು ವರ್ಷ ಅವಧಿಯಲ್ಲಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಿಸುವ ನಾನಾ ಕಾಯ್ದೆಗಳ ಜಾರಿಮಾಡಲು ಶ್ರಮಿಸಿದರು. ಒಪ್ಪಿಗೆ ವಯಸ್ಸಿನ ಕುರಿತು ಇದ್ದ ಶಾರದಾ ಕಾಯ್ದೆ ಜಾರಿಯಾಗಿ ಮದುವೆಗೆ ಕನಿಷ್ಟ ವಯಸ್ಸು ಹುಡುಗರಿಗೆ 21, ಹುಡುಗಿಯರಿಗೆ 16 ಇರಬೇಕೆಂದು ಒತ್ತಾಯಿಸಿದರು. ಅನೈತಿಕ ಮಾನವ ಸಾಗಾಟ ನಿಯಂತ್ರಿಸುವ ಕಾಯ್ದೆ ಅವರ ಅವಧಿಯಲ್ಲೇ ಬಂದದ್ದು. ಮಹಿಳೆಯರ ವಾರ್ಡಿನಂತೆಯೇ ಮಕ್ಕಳಿಗೆ ವಿಶೇಷ ವಾರ್ಡು-ಆಸ್ಪತ್ರೆ ಇರಬೇಕು, ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು, 8ನೇ ತರಗತಿಯವರೆಗೆ ಹುಡುಗಿಯರಿಗೆ ಉಚಿತ ಶಿಕ್ಷಣ ಸಿಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ವೇಶ್ಯಾಗೃಹಗಳನ್ನು ನಿಲ್ಲಿಸುವುದು, ಮುಸ್ಲಿಂ ಮತ್ತು ಹರಿಜನ ಹುಡುಗಿಯರಿಗಾಗಿ ಹಾಸ್ಟೆಲು ಶುರುಮಾಡುವುದೇ ಮೊದಲಾದ ವಿಶಿಷ್ಟ ಆಲೋಚನೆಗಳನ್ನು ಕಾರ್ಯಗತಗೊಳಿಸಿದರು. ಸರ್ ಫಿಲಿಪ್ ಹರ್ಟೋಗ್ ನೇತೃತ್ವದಲ್ಲಿ ಶೈಕ್ಷಣಿಕ ಯೋಜನೆಗಳ ಪರಿಶೀಲನಾ ಸಮಿತಿಯ ಸದಸ್ಯೆಯಾದರು.
ದೇವದಾಸಿಯರು ಮತ್ತವರ ಮಕ್ಕಳ ಸಂಕಷ್ಟ-ಅವಮಾನಗಳನ್ನು ಹತ್ತಿರದಿಂದ ಬಲ್ಲವರಾಗಿದ್ದ ಮುತ್ತುಲಕ್ಷ್ಮಿ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಕಟಿಬದ್ಧರಾಗಿದ್ದರು. ಅದು ನಿಷೇಧಗೊಳ್ಳಲು ಕಾಯ್ದೆಯ ಬೆಂಬಲ ಇರಬೇಕೆಂಬುದು ಅವರ ಅಭಿಮತವಾಗಿತ್ತು. ಆದರೆ ಅದಷ್ಟು ಸುಲಭವಿರಲಿಲ್ಲ. ತಮಿಳುನಾಡಿನಲ್ಲಿ ಬಹುವಾಗಿ ಚಾಲ್ತಿಯಲ್ಲಿದ್ದ ದೇವದಾಸಿ ಪದ್ಧತಿ ನಿಲಿಸುವಂತೆ 1893ರಿಂದಲೇ ಹೋರಾಟ ಶುರುವಾಗಿತ್ತು. 1927ರಲ್ಲಿ ವಿ. ಆರ್. ಪಂತುಲು ಹೆಣ್ಮಕ್ಕಳನ್ನು ದೇವರಿಗೆ ಬಿಡುವ ಅನಿಷ್ಟಪದ್ಧತಿ ನಿಲ್ಲಬೇಕೆಂದು ವಿಧಾನ ಪರಿಷತ್ತಿನಲ್ಲಿ ಗೊತ್ತುವಳಿ ಸ್ವೀಕರಿಸಿದ್ದರು. ಆ ವೇಳೆಗೆ ಮುತ್ತುಲಕ್ಷ್ಮಿ ರೆಡ್ಡಿ ವಿಧಾನ ಪರಿಷತ್ ಪ್ರವೇಶಿಸಿ ಉಪಸಭಾಪತಿಯಾದರು.
ದೇವದಾಸಿ ಪದ್ಧತಿ ನಿಷೇಧ ಮಸೂದೆ ಮಂಡಿಸುವ ಮೊದಲು ಮುತ್ತುಲಕ್ಷ್ಮಿಯವರು ನೂರಾರು ದೇವದಾಸಿಯರನ್ನು ಸಂದರ್ಶಿಸಿ, ಹಲವು ಕಡೆ ಸಭೆ, ಸಮಾವೇಶ ನಡೆಸಿದರು. ತಂಜಾವೂರು ಮತ್ತು ಮಾಯಾವರಂನ ಇಸಾೈ ವೆಳ್ಳಲಾರ್ ಸಂಗಂ, ಕೊಚಿನ್ನಿನ ದೇವದಾಸಿಯರು ಮಸೂದೆ ಬೆಂಬಲಿಸಿ ಮೆರವಣಿಗೆ ಮಾಡಿದರೆ; ದೊರೈಕಾಣ್ಣು ಅಮ್ಮಾಳ್ ನೇತೃತ್ವದಲ್ಲಿ ಜಾರ್ಜ್‍ಟೌನಿನ ದೇವದಾಸಿಯರು ಮತ್ತು ಬೆಂಗಳೂರು ನಾಗರತ್ನಮ್ಮ ಮಸೂದೆಯನ್ನು ವಿರೋಧಿಸಿದರು. ಕಾಂಗ್ರೆಸ್ಸಿನ ಸತ್ಯಮೂರ್ತಿ ಅಯ್ಯರ್ ಮೊದಲಾದವರಿಂದಲೂ ಮಸೂದೆಗೆ ವಿರೋಧ ಬಂತು.
ಮುತ್ತುಲಕ್ಷ್ಮಿಯವರು ಗಾಂಧಿ ಮತ್ತು ಕಾಂಗ್ರೆಸ್‍ಗೆ ಬಹಿರಂಗ ಪತ್ರ ಬರೆದು, `ವಿಶ್ವದ ಎಲ್ಲ ದೇಶಗಳ ಸ್ವಾತಂತ್ರ್ಯ ಬೆಂಬಲಿಸುವ ಕಾಂಗ್ರೆಸ್ ನಾಯಕರು ಹೆಣ್ಮಕ್ಕಳ ಚಿಂತನಶೀಲತೆಯನ್ನೇ ಮೊಟಕುಗೊಳಿಸಿರುವ ಭಾರತದ ಸಾಮಾಜಿಕ ಅನಿಷ್ಠಗಳ ಬಗೆಗೇಕೆ ಪ್ರಶ್ನೆ ಎತ್ತುವುದಿಲ್ಲ? ಹಿಂದೂ ಧಾರ್ಮಿಕ ಆಚರಣೆಗಳ ಮುಖವಾಡ ಹೊತ್ತು ಚಾಲ್ತಿಯಲ್ಲಿರುವ ದುಷ್ಟತನಗಳ ಬಗೆಗೇಕೆ ಕಾಂಗ್ರೆಸ್ ಹೋರಾಡುವುದಿಲ್ಲ’ ಎಂದು ಪ್ರಶ್ನಿಸಿದರು. ಅವರ ಬೆಳವಣಿಗೆಯಲ್ಲಿ ಗಾಂಧಿ ಮತ್ತು ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮುತ್ತುಲಕ್ಷ್ಮಿ ಕಾಂಗ್ರೆಸ್ಸಿನೊಳಗಿದ್ದ ಲಿಂಗ ಅಸೂಕ್ಷ್ಮತೆಯ ಬಗೆಗೆ ಖೇದಗೊಂಡು ಕಹಿ ಪ್ರಶ್ನೆಗಳನ್ನೆತ್ತುತ್ತಿದ್ದರು.
1930ರಲ್ಲಿ ಲಂಡನ್ನಿಗೆ ತೆರಳಿ ಮೂರನೇ ದುಂಡುಮೇಜಿನ ಪರಿಷತ್ತಿನಲ್ಲಿ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿದರು. ಮಹಿಳೆಯರೂ ಸೇರಿದಂತೆ ಎಲ್ಲ ವಯಸ್ಕರಿಗೂ ಮತದಾನದ ಹಕ್ಕು ನೀಡುವುದೇ ನಿಜವಾದ ಪ್ರಾತಿನಿಧ್ಯ ನೀಡುವ ವಿಧಾನ ಎಂದು ವಾದಿಸಿದರು. ನಿಮ್ನವರ್ಗಗಳು ಮತ್ತು ಮಹಿಳೆಯರು ಸ್ವಾತಂತ್ರ್ಯ, ಅಧಿಕಾರ ಮತ್ತು ಜವಾಬ್ದಾರಿ ಪಡೆದರೆ ಸಾಮಾಜಿಕ ಅನಿಷ್ಟಗಳನ್ನು ಕೊನೆಗೊಳಿಸಲು ತಾವೇ ಕ್ರಮ ಕೈಗೊಳ್ಳುತ್ತಾರೆಂದು ವಾದಿಸಿದರು. ಆ ಹೊತ್ತಿಗೆ ದಂಡಿ ಉಪ್ಪಿನ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಗಾಂಧಿ ಬಂಧನವಾಯಿತು. ಬ್ರಿಟಿಷ್ ಸರ್ಕಾರದ ನಡೆಯನ್ನು ವಿರೋಧಿಸಿ ಮುತ್ತುಲಕ್ಷ್ಮಿಯವರೂ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ತಂತಮ್ಮ ಸ್ಥಾನಗಳಿಗೆ ರಾಜೀನಾಮೆಯಿತ್ತು ಹೊರಬಂದರು.
ಮುತ್ತುಲಕ್ಷ್ಮಿ ಅವರು ಬರಹಗಾರ್ತಿಯಾಗಿದ್ದರು. ‘ಶಾಸಕಿಯಾಗಿ ನನ್ನ ಅನುಭವಗಳು’ ಎಂಬ ಹೊತ್ತಗೆ ಹಾಗೂ ಆತ್ಮಚರಿತ್ರೆ ಬರೆದಿದ್ದಾರೆ. ರೋಶಿನಿ ಎಂಬ ಜರ್ನಲ್‍ನ ಸಂಪಾದಕಿಯೂ ಆಗಿದ್ದರು. 1931-40ರವರೆಗೆ ‘ಸ್ತ್ರೀ ಧರ್ಮ’ ಎಂಬ ಇಂಗ್ಲಿಷ್ ಜರ್ನಲ್‍ನ ಸಂಪಾದಕಿಯಾಗಿದ್ದರು.
ಅವೈ ಹೋಂ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಎಡೆಬಿಡದೆ ತೊಡಗಿಕೊಂಡರು. ಕ್ಯಾನ್ಸರ್ ಆಸ್ಪತ್ರೆ ಮತ್ತು ಅವೈ ಹೋಂ ಸ್ಥಾಪನೆ, ಸ್ಲಮ್ಮುಗಳಲ್ಲಿ ಆರೋಗ್ಯ ಕಾರ್ಯಕ್ರಮ, ಟಾಯ್ಲೆಟ್ಟುಗಳ ನಿರ್ಮಾಣ ಮತ್ತು ಬಳಕೆ ಕುರಿತು ತಿಳಿಸುವ ಯೋಜನೆಗಳನ್ನು ಹಮ್ಮಿಕೊಂಡರು. ಅಮೆರಿಕ, ಪ್ಯಾರಿಸ್, ಇಂಗ್ಲೆಂಡುಗಳ ಮಹಿಳಾ ಹೋರಾಟಗಾರರೊಡನೆ ಸಂಪರ್ಕ ಇಟ್ಟುಕೊಂಡಿದ್ದರು. ಅಂತಾರಾಷ್ಟ್ರೀಯ ಮಹಿಳಾ ಸಮಾವೇಶಗಳಲ್ಲೂ ಭಾಗವಹಿಸಿದರು.
ದೇವದಾಸಿ ಪದ್ಧತಿ ನಿರ್ಮೂಲನಾ ಕಾಯ್ದೆ ಇನ್ನೇನು ನಿಷೇಧಗೊಂಡುಬಿಡುತ್ತದೆ ಎನ್ನುವ ಕಾಲದಲ್ಲಿ ಅವರ ಮನೆಗೆ ಒಂದು ಬೆಳಿಗ್ಗೆ ಮೂವರು ಎಳೆಯ ಹುಡುಗಿಯರು ಬಂದರು. ಅವರು ದೇವದಾಸಿಯರಾಗಲು ಒಲ್ಲದ ಮಕ್ಕಳು. ಅವರ ನಿರ್ಧಾರವನ್ನು ಯಾರೂ ಬೆಂಬಲಿಸದಿದ್ದರಿಂದ ಮುಂದೇನು ಮಾಡುವುದೆಂದು ತಿಳಿಯದೆ ಮುತ್ತುಲಕ್ಷ್ಮಿಯವರ ಮನೆಗೆ ಬಂದಿದ್ದರು. ಆಗ ಮದರಾಸಿನಲ್ಲಿ ಎರಡೇ ಮಹಿಳಾ ನಿಲಯಗಳಿದ್ದವು – ಒಂದು ಬ್ರಾಹ್ಮಣ ಮಹಿಳೆಯರಿಗೆ, ಮತ್ತೊಂದು ಅಬ್ರಾಹ್ಮಣ ಮಹಿಳೆಯರಿಗೆ. ಎರಡೂ ಕಡೆ ಈ ಬಾಲೆಯರನ್ನು ಸೇರಿಸಿಕೊಳ್ಳದೆ ಅವು ಅಳುತ್ತ ವಾಪಸಾದವು. ಅವರನ್ನು ಮುತ್ತುಲಕ್ಷ್ಮಿ ತಮ್ಮ ಮನೆಯಲ್ಲೇ ಇಟ್ಟುಕೊಂಡು ಶಾಲೆಗೆ ಸೇರಿಸಿದರು. ಶಿಕ್ಷಣ ಆ ಮೂವರ ಬದುಕಿನ ದಿಕ್ಕುಗಳನ್ನು ಬದಲಿಸಿತು. ಅವರು ಮುಂದೆ ವೈದ್ಯೆ, ಸ್ಟಾಫ್ ನರ್ಸ್ ಮತ್ತು ಶಿಕ್ಷಕಿಯಾದರು. ಅಂತಹ ದೇವದಾಸಿ ಮಕ್ಕಳಿಗೆ, ಮಹಿಳೆಯರಿಗೆ ಆಶ್ರಯತಾಣವಾಗಿ `ಅವೈ ಹೋಂ’ನ್ನು 1936ರಲ್ಲಿ ಶುರು ಮಾಡಿದರು. ಶಾಲೆಯೂ ಶುರುವಾಯಿತು. ಮೂರು ದಶಕ ಕಾಲ ಮುತ್ತುಲಕ್ಷ್ಮಿ ಅದರ ಕಾರ್ಯದರ್ಶಿಯಾಗಿದ್ದರು.
1922ರಲ್ಲಿ ಅವರ ಸೋದರಿ ದೊಡ್ಡಕರುಳಿನ ಕ್ಯಾನ್ಸರಿಗೆ ಬಲಿಯಾಗಿದ್ದರು. ಆಗ ಭಾರತದಲ್ಲಿ ಕ್ಯಾನ್ಸರ್ ಎಂದರೆ ಸಾಯಲು ಬರುವ ಕಾಯಿಲೆ ಎಂದೇ ಭಾವಿಸಲಾಗಿತ್ತು. ಆದರೆ ಮುತ್ತುಲಕ್ಷ್ಮಿ 1954ರಲ್ಲಿ ಅಡ್ಯಾರಿನಲ್ಲಿ ಸಾರ್ವಜನಿಕ ದೇಣಿಗೆ ಸಹಾಯದಿಂದ ಕ್ಯಾನ್ಸರ್ ಆಸ್ಪತ್ರೆ ತೆರೆದರು. ಅದೀಗ ದೇಶದ ಅತ್ಯುತ್ತಮ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರಗಳಲ್ಲೊಂದಾಗಿದೆ. ಪ್ರತಿವರ್ಷ 80,000 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರವಾಗಿದೆ.
ತಮ್ಮ 82ನೇ ವಯಸ್ಸಿನವರೆಗೂ ಮಹಿಳಾ ಜಾಗೃತಿ, ಸಬಲೀಕರಣ ಯತ್ನಗಳಲ್ಲಿ ಕ್ರಿಯಾಶೀಲರಾಗಿದ್ದ ಡಾ. ಮುತ್ತುಲಕ್ಷ್ಮಿ ರೆಡ್ಡಿ ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಸರ್ಕಾರವು 1956ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

– ಡಾ. ಎಚ್. ಎಸ್. ಅನುಪಮಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...