Homeಮುಖಪುಟರಾಜದ್ರೋಹ ಕಾಯ್ದೆಯ ಇತಿಹಾಸ : ತಿಲಕ್‌ & ಗಾಂಧಿ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿತ್ತೇಕೆ?

ರಾಜದ್ರೋಹ ಕಾಯ್ದೆಯ ಇತಿಹಾಸ : ತಿಲಕ್‌ & ಗಾಂಧಿ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿತ್ತೇಕೆ?

“ನೀವು ದಿವಂಗತ ತಿಲಕರ ರಾಜದ್ರೋಹದ ವಿಚಾರಣೆಯನ್ನು ನೆನಪಿಸಿ ನನ್ನನ್ನು ಗೌರವಿಸಿದ್ದೀರಿ. ಅವರ ಹೆಸರಿನೊಂದಿಗೆ ನನ್ನನ್ನು ಜೋಡಿಸಿದ್ದು ನಾನು ಅತಿಯಾಗಿ ಹೆಮ್ಮೆ ಪಡುವ ಗೌರವ ಮತ್ತು ಸುಯೋಗ ಎಂದು ಭಾವಿಸುತ್ತೇನೆ” ಎನ್ನುತ್ತಾರೆ ಗಾಂಧಿ.

- Advertisement -
- Advertisement -

ಮೂಲ : ಇಂಗ್ಲೀಷ್ :ಮೃದುಲಾ ಮುಖರ್ಜಿ
ಅನುವಾದ: ಬಿ. ಶ್ರೀಪಾದ ಭಟ್

(ಕೃಪೆ : “JNU ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು” ಕ್ರಿಯಾ ಮಾದ್ಯಮ ಪ್ರಕಟಿಸಿದ ಈ ಅನುವಾದಿತ ಪುಸ್ತಕದ ’ನಾಗರಿಕ ಸ್ವಾತಂತ್ರ್ಯಗಳು ಮತ್ತು ಭಾರತೀಯ ರಾಷ್ಟ್ರೀಯವಾದ’ ಲೇಖನದ ಆಯ್ದ ಭಾಗ)

ಇಂದಿನ ದಿನಗಳಲ್ಲಿ (2016 ಫೆಬ್ರುವರಿ) ನಡೆಯುತ್ತಿರುವ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ವಿಚಾರಗಳನ್ನು ಮಂಡಿಸುತ್ತೇನೆ. ಇಂದು ಜೆ.ಎನ್.ಯು ಮೇಲೆ ದಾಳಿ ನಡೆಯುತ್ತಿದೆ. ಜೆ.ಎನ್.ಯು.ವನ್ನು ದಾಳಿಗೆ ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗಿದೆ. ಜೆ.ಎನ್.ಯು. ಒಂದು ಪ್ರತೀಕ. ಜೆ.ಎನ್.ಯು.ನ ಬಾಯಿ ಮುಚ್ಚುವುದು ಸಾಧ್ಯವಾದರೆ, ಅದನ್ನು ಬಗ್ಗು ಬಡಿಯಲು ಸಾಧ್ಯವಾದರೆ, ಅದು ಈ ದಾಳಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗದಿದ್ದರೆ ಎಲ್ಲಾ ವಿ.ವಿ.ಗಳಿಗೆ, ಇಡೀ ದೇಶದಲ್ಲಿ ಅವರ ಸಿದ್ಧಾಂತದ ಮತ್ತು ‘ಭಾರತದ ಕಲ್ಪನೆ’ಯ ವಿರುದ್ಧ ವಿರುವ ಎಲ್ಲರಿಗೂ ‘ನೀವೂ ಸೋಲುತ್ತೀರಿ, ಶರಣಾಗಿ’ ಎಂಬ ಸ್ಪಷ್ಟ ಸಂದೇಶ ಹೋಗುತ್ತದೆ ಎಂಬುದು ಅಧಿಕಾರಸ್ಥರ ಎಣಿಕೆ. ಆದ್ದರಿಂದ ಇಂದು ನಾವು ದೇಶಕ್ಕಾಗಿ ಹೋರಾಡುತ್ತಿದ್ದೇವೆ, ಈ ದೇಶದ ಜನರ ಪರವಾಗಿ ಹೋರಾಡುತ್ತಿದ್ದೇವೆ, ಈ ಹೋರಾಟ ನಡೆಸಲು ಸಾಮಥ್ರ್ಯ ಇರುವುದರಿಂದ ನಮಗೆ ಈ ಹೋರಾಟ ನಡೆಸುವ ಅವಕಾಶ ದೊರಕಿದೆ.

ಪ್ರತಿ ದಿನ ವಿಶ್ವಕ್ಕೆ ‘ನಾವು ದೇಶ ವಿರೋಧಿಗಳಲ್ಲ, ಬದಲಿಗೆ ದೇಶ ಕಟ್ಟುವವರು’ ಎಂದು ಹೇಳುತ್ತಲೇ ಇರಬೇಕಾದ ಪರಿಸ್ಥಿತಿ ಇದೆ. ‘ನಮಗೆ ಚರ್ಚೆಯಲ್ಲಿ ನಂಬಿಕೆ ಇದೆ, ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ, ನಮ್ಮ ಸಂಸ್ಥೆಗಳ ಕಾರ್ಯವ್ಯವಸ್ಥೆಯ ಮೂಲಕವೇ ಎಲ್ಲಾ ಬಗೆಯ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಬಲ್ಲೆವು, ನಾವು ಸ್ವಾಯತ್ತತೆಯ ಪರವಾಗಿ ಹೋರಾಡುತ್ತಿದ್ದೇವೆ, ಸಂಸ್ಥೆಯ ಸ್ವಾಯತ್ತತೆಯನ್ನು ನಿರ್ಬಂಧಿಸುವ ಆಡಳಿತ ಮಂಡಳಿಯ ನೀತಿಗಳ ವಿರುದ್ದ ಹೋರಾಡುತ್ತಿದ್ದೇವೆ’ ಎಂದು ನಾವು ದಿನನಿತ್ಯ ವಿಶ್ವಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ನಾವು ಆದರ್ಶಗಳನ್ನು ಪಾಲಿಸುತ್ತೇವೆ ಎನ್ನುವ ಕಾರಣಕ್ಕೆ ಇಂದು ನಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ. ನಮ್ಮೊಳಗೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ನಮ್ಮೊಳಗೂ ಅಸಹಿಷ್ಣುತೆ ಇದೆಯೆ? ನಾವು ಭಿನ್ನತೆಗಳನ್ನು ಇನ್ನೂ ವಿಸ್ತಾರವಾದ ಹರಹಿನಲ್ಲಿ ಒಳಗೊಳ್ಳಬೇಕಾಗಿದೆಯೆ? ಭಿನ್ನತೆಗಳನ್ನು ಕೇವಲ ಸಹಿಕೊಳ್ಳುವುದರ ಬದಲಿಗೆ ನಾವು ಮತ್ತಷ್ಟು ಚರ್ಚೆ, ಸಂವಾದಗಳಲ್ಲಿ ತೊಡಗಿಕೊಳ್ಳಬೇಕೆ? ಭಾರತೀಯ ಸ್ವಾತಂತ್ರ್ಯ ಹೋರಾಟ ಅಥವಾ ರಾಷ್ಟ್ರೀಯ ಚಳುವಳಿ ಕುರಿತಂತೆ ನಾನು ನನ್ನ ವಿಚಾರಗಳನ್ನು ಮಂಡಿಸುತ್ತಿದ್ದೇನೆ.

JNU ನಲ್ಲಿ ಮೃದುಲಾ ಮುಖರ್ಜಿಯವರು ಭಾಷಣ ಮಾಡುತ್ತಿರುವ ದೃಶ್ಯ.

ನಾನು ಬುದ್ದಿಜೀವಿಯಲ್ಲ, ಸಿದ್ಧಾಂತವಾದಿಯಲ್ಲ, ನಾನೊಬ್ಬ ಸಾಮಾನ್ಯ ಇತಿಹಾಸಗಾರ್ತಿ ಮತ್ತು ನಮ್ಮ ಕೌಶಲ್ಯವು ಸರ್ವೆಸಾಮಾನ್ಯವಾದ ವೃತ್ತಿಕೌಶಲ್ಯವಾಗಿದೆ. ನಾವು ನೀರಸವಾದ ಹಳೆಯ ಕಡತಗಳಲ್ಲಿ ಕೈಯಾಡಿಸುತ್ತೇವೆ ಮತ್ತು ಅವುಗಳಿಂದ ವಿವೇಕಯುಕ್ತವಾದ ಸಂಗತಿಗಳನ್ನು ಹೆಕ್ಕಿ ತೆಗೆಯಲು, ಗತಕಾಲದ ಸಂಭ್ರಮಗಳನ್ನು ಭಾವೋದ್ವೇಗಗಳನ್ನು ನಿಮಗೆ ಪರಿಚಯಿಸಲು ಪ್ರಯತ್ನಿಸುತ್ತೇವೆ. ನಿಮಗೆ ಗೊತ್ತಿಲ್ಲದ ಸ್ವಾತಂತ್ರ್ಯ ಹೋರಾಟದ ಕೆಲ ಕತೆಗಳನ್ನು ಮರಳಿ ಹೆಕ್ಕಿತಂದು ನಿಮ್ಮೊಂದಿಗೆ ಸಂವಾದ ನಡೆಸಲು ಬಯಸುತ್ತೇನೆ. ನಾವು ಹಳೆಯ ಕತೆಗಳನ್ನು ಮರಳಿ ಕೆದುಕುವುದೇಕೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಅಡ್ಮಿರಲ್ ರಾಮದಾಸ್ ಅವರು ನಾವು ಇಪ್ಪತೊಂದನೆ ಶತಮಾನದಲ್ಲಿದ್ದೇವೆ, ಈ ಹದಿನೇಳನೆ ಶತಮಾನದಲ್ಲಿ ಚರ್ಚೆಗೆ ಬಂದ ಈ ರಾಷ್ಟ್ರೀಯತೆಯನ್ನು ಈಗೇಕೆ ಚರ್ಚಿಸಬೇಕು, ಅದನ್ನುಮರೆತುಬಿಡಿ ಎಂದು ಹೇಳಿದ್ದಾರೆ. ರಾಷ್ಟ್ರೀಯವಾದ ಮತ್ತು ಅದರ ಶಕ್ತಿಯನ್ನು ಮರೆತುಬಿಡುವುದು ತುಂಬಾ ಗಂಭೀರವಾದ ಸಂಗತಿ.

ರಾಷ್ಟ್ರೀಯವಾದವನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ, ಹೇಗೆ ಅದನ್ನು ನಮ್ಮ ಮುಖದ ಮೇಲೆ ಎರಚಲಾಗಿದೆ, ಅದು ಹೇಗೆ ಕೇವಲ ಎರಡೇ ವಾರಗಳಲ್ಲಿ ಈ ವಿಶ್ವವಿದ್ಯಾಲಯದ ಇಮೇಜ್ ಬದಲಾಗಿದೆ, ಇವೆಲ್ಲವೂ ತುಂಬಾ ಗಂಭೀರವಾದ ವಿಷಯಗಳು. ನಿಮಗೆ ಗೊತ್ತಿದೆ, ಜೆಎನ್‍ಯುಗೆ ಹೋಗಬೇಕೆಂದು ಹೇಳಿದಾಗ ಆಟೋದವನು ‘ನೀವು ಪಾಕಿಸ್ತಾನಕ್ಕೆ ಹೋಗಬೇಕೆ’ ಎಂದು ಕೇಳುತ್ತಾನೆ. (ಇದಕ್ಕೆ ನಾನು ‘ನೀವು ಇಲ್ಲಿಯೇ ಪಾಕಿಸ್ತಾನ ನಿರ್ಮಿಸಿರುವಾಗ ನಾನೇಕೆ ಪಾಕಿಸ್ತಾನಕ್ಕೆ ಹೋಗಲಿ’ ಎಂದು ಉತ್ತರಿಸಬಯಸುತ್ತೇನೆ). ಈ ರಾಷ್ಟ್ರೀಯವಾದದ ಉದ್ದೇಶವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ, ಜನಗಳ ನಡುವೆ ಅದರ ಅನುರಣನವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಮತ್ತು ನಾನು ಹೇಳುವ ‘ಕ್ರಾಂತಿಕಾರಿ ರಾಷ್ಟ್ರೀಯವಾದವನ್ನು ಯುಕ್ತವಾದ ರೀತಿಯಲ್ಲಿ ನಾವು ಬಳಸಿಕೊಳ್ಳಬೇಕಿದೆ. ಇಲ್ಲಿ ಪ್ರಗತಿಪರ ರಾಷ್ಟ್ರೀಯವಾದ ಇದೆ, ಕ್ರಾಂತಿಕಾರಿ ರಾಷ್ಟ್ರೀಯವಾದ ಇದೆ, ಅದೇ ರೀತಿ ಪ್ರತಿಗಾಮಿ, ಉದ್ರೇಕಕಾರಿ ಆಡಂಬರದ (ಜಿಂಗೋಯಿಸ್ಟ್) ರಾಷ್ಟ್ರೀಯವಾದ ಇದೆ. ಈ ಪ್ರತಿಗಾಮಿ ರಾಷ್ಟ್ರೀಯವಾದವು ನಮ್ಮನ್ನು ದೇಶ-ವಿರೋಧಿಗಳೆಂದು ಹೀಗಳೆಯುತ್ತಿದೆ, ಇದಕ್ಕೆ ಉತ್ತರವಾಗಿ, ‘ನಮ್ಮದು ಸ್ವಾತಂತ್ರ್ಯ ಹೋರಾಟವು ನೀಡಿದಂತಹ ಕ್ರಾಂತಿಕಾರಿ ರಾಷ್ಟ್ರೀಯವಾದ; ಮಾನವೀಯತೆಯ, ಜನತೆಯ ಪರವಾಗಿ ಸ್ಪಂದಿಸುವಂತಹ ರಾಷ್ಟ್ರೀಯವಾದ. ಈ ಪರಂಪರೆಯನ್ನು ನಾವು ಪಟ್ಟು ಹಿಡಿದು ಪ್ರತಿಪಾದಿಸುತ್ತೇವೆ’ಎಂದು ಈ ರಾಷ್ಟ್ರೀಯವಾದಕ್ಕೆ ಸವಾಲು ಹಾಕುವವರಿಗೆ ಸ್ಪಷ್ಟವಾಗಿ ತಿಳಿಸಬಯಸುತ್ತೇವೆ.

ನಮ್ಮ ಚರ್ಚೆಗಳ ಮುಖ್ಯಭಾಗವಾಗಿರುವ ನಾಗರಿಕ ಸ್ವಾತಂತ್ರ್ಯಗಳ ಕುರಿತು ಕೇಂದ್ರೀಕರಿಸಲು ಇಚ್ಚಿಸುತ್ತೇನೆ. ನೀವು ಯಾವುದೇ ದೃಶ್ಯ ಮಾದ್ಯಮಗಳ ಚರ್ಚೆಯನ್ನು ಗಮನಿಸಿ, ಅಲ್ಲಿ ಒಂದೇ ಪ್ರಶ್ನೆ ಕೇಳುತ್ತಾರೆ ‘ಈ ನಾಗರಿಕ ಸ್ವಾತಂತ್ರ್ಯಗಳಿಗೆ ಮಿತಿಗಳನ್ನು ಹೇರಬೇಡವೇ? ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬೇಡವೇ?’ ಆ ಕಡಿವಾಣಗಳೇನು? ಆ ಮಿತಿಗಳೇನು? ಇಲ್ಲಿ ನಿಚ್ಚಳತೆ ಇಲ್ಲ, ಸರಿ ಅಥವಾ ತಪ್ಪು ಎಂಬ ಸರಳ ಉತ್ತರಗಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಆ ಮಹನೀಯರು ಈ ವಿಚಾರಗಳನ್ನು ಹೇಗೆ ಎದುರಿಸಿದರು? ದೇಶದ ಕುರಿತಾಗಿ ಅವರ ಒಳನೋಟಗಳೇನಿದ್ದವು? ಈ ವಿಚಾರಗಳನ್ನು ಸಮಾಜದೊಳಗೆ ಆಳವಾಗಿ ನಾಟಿಸುವುದು ಹೇಗೆ ಎಂಬುದನ್ನುಆ ಕಾಲದ ಹೋರಾಟಗಾರರು ತಮ್ಮ ಆಚರಣೆ ಮತ್ತು ಹೋರಾಟಗಳ ಮೂಲಕಹೇಗೆ ಕಂಡುಕೊಂಡರು? ಇವು ನಮಗೆ ಇಂದು ಪ್ರಸ್ತುತವಾಗುತ್ತವೆ.

ಸ್ವಾತಂತ್ರ್ಯ ಹೋರಾಟದ ಪರಂಪರೆಯ ಹಲವು ರೂಪಗಳಿವೆ. ಆದರೆ ಜಾತ್ಯಾತೀತತೆಗೆ, ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳಿಗೆ ಬದ್ಧತೆ ಅದರ ನಿರ್ಣಾಯಕ ಮತ್ತು ಅಗತ್ಯವಾದ ಅಂಶಗಳು. ನಾಗರಿಕ ಹಕ್ಕುಗಳು ಪ್ರಜಾಪ್ರಭುತ್ವದ ಅವಶ್ಯಕ ಭಾಗವಾಗಿದೆ, ಒಂದನ್ನು ಬಿಟ್ಟು ಮತ್ತೊಂದಿಲ್ಲ. ನಾನು ನಾಗರಿಕ ಹಕ್ಕುಗಳ ಕುರಿತು ನನ್ನ ವಿಚಾರ ಮಂಡಿಸುತ್ತೇನೆ. ಸಾಮಾಜಿಕ ಮತ್ತು ಆರ್ಥಿಕ ಕ್ರಮಗಳ ಸಮಾನತಾವಾದದ ಪರಂಪರೆಯೊಂದು ಇದೆ. ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ಪರಂಪರೆಯೂ ಇದೆ. ಸಂವಿಧಾನವು ಬ್ರಿಟೀಶರ ಕೊಡುಗೆಯಲ್ಲ, ಸ್ವಾತಂತ್ರ್ಯವು ಸಹ ಬ್ರಿಟಿಶರ ಕೊಡುಗೆಯಲ್ಲ, ಇದನ್ನು ಇಂಚಿಂಚು ಹೋರಾಡಿ ಪಡೆದುಕೊಂಡಿದ್ದೇವೆ.
1895ರಲ್ಲಿ ಬಾಲಗಂಗಾದರ ತಿಲಕ್ ಅವರು ‘ಇಂಡಿಯಾ ಸಂವಿದಾನ ಮಸೂದೆ’ಯನ್ನು ಪ್ರಕಟಿಸಿದರು. ಅದರಲ್ಲಿ ವಯಸ್ಕ ಪುರುಷರು ಮತ್ತು ಮಹಿಳೆಯರೆಲ್ಲರಿಗೆ ಲಿಂಗಭೇದವಿಲ್ಲದೆ, ಶೈಕ್ಷಣಿಕ ಅರ್ಹತೆ, ಆಸ್ತಿಯ ಅರ್ಹತೆಯ ಅವಶ್ಯಕತೆ ಇಲ್ಲದೆ ಸಾರ್ವತ್ರಿಕ ಮತಾದಿಕಾರ ಕೊಡಬೇಕೆಂದು ಕೇಳಿದ್ದರು. ಬ್ರಿಟನ್‍ನಲ್ಲಿ ಮಹಿಳೆಯರಿಗೆ ಮೊದಲನೆ ಮಹಾಯುದ್ದದ (1914) ನಂತರ ಮತದಾನ ಮಾಡುವ ಹಕ್ಕು ಲಭ್ಯ್ಯವಾಯಿತು. ಭಾರತದಲ್ಲಿ 1895ಕ್ಕಿಂತ ಮೊದಲು ಸಂವಿಧಾನದ ಬಗ್ಗೆ ಚರ್ಚೆ ಆರಂಭವಾಗಿತ್ತು. ಸಂವಿಧಾನ ಒಂದೇ ಏಟಿಗೆ ತಯಾರಾದದ್ದಲ್ಲ. ಕನಿಷ್ಟ 50 ವರ್ಷಗಳ ಭಾರತದ ಸ್ವಾತಂತ್ರ್ಯ ಚಳುವಳಿಯ ವಿವಿಧ ತೊರೆಗಳ ನಡುವೆ ದೀರ್ಘ ಸಂವಾದ, ಚರ್ಚೆ, ಹೋರಾಟಗಳ ಮೂಲಕ ಅದು ರೂಪಿತವಾಗಿತ್ತು.

ನಾಗರಿಕ ಸ್ವಾತಂತ್ರ್ಯಗಳ ಕುರಿತು ಮಾತನಾಡುವಾಗ ಅದು 192 ವರ್ಷಗಳ ಹಿಂದಿನ ಸಮಾಜ ಸುಧಾರಕ ರಾಜಾರಾಮ್ ಮೋಹನ ರಾಯ್ ಕಾಲದ ಕುರಿತು ಮಾತನಾಡಲೇಬೇಕು. ನಾಗರಿಕ ಸ್ವಾತಂತ್ರ್ಯಗಳ ಹೋರಾಟಕ್ಕೆ ಅಷ್ಟು ದೀರ್ಘ ಚರಿತ್ರೆಯಿದೆ. ಆದ್ದರಿಂದ ನಾಗರಿಕ ಸ್ವಾತಂತ್ರ್ಯದ ಹೋರಾಟಗಾರರು ದುರ್ಬಲರು ಎಂದು ಅಂದುಕೊಳ್ಳಬೇಕಾಗಿಲ್ಲ. ಈ ದೀರ್ಘ ಸಂಪ್ರದಾಯದ ಬಲ ಅವರೊಂದಿಗಿದೆ. 1824ರಲ್ಲಿ ಪತ್ರಿಕೆಗಳ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮಸೂದೆಯ ವಿರುದ್ದ ಅವರು ಪ್ರತಿಭಟಿಸಿದ್ದರು. ಅದಕ್ಕಿಂತ ಮೊದಲು ಪತ್ರಿಕೆಗಳು ಇರಲಿಲ್ಲವಾದ್ದರಿಂದ ಯಾವುದೇ ಕಾನೂನೂ ಇರಲಿಲ್ಲ. ಆಧುನಿಕ ಪತ್ರಿಕೆಗಳು ಪ್ರಾರಂಭವಾಗುತ್ತಿದ್ದ ಹಾಗೆ ಅದನ್ನು ನಿಬಂಧಿಸುವ ಕಾನೂನುಗಳೂ ಚಾಲ್ತಿಗೆ ಬಂದವು. ಆಗ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಮನವಿಯಲ್ಲಿ ರಾಜಾರಾಮ್ ಮೋಹನ್ ರಾಯ್ ಅವರು ‘ಪ್ರಕಟಣೆಗೆ ನಿರ್ಬಂಧರಹಿತ ಸ್ವಾತಂತ್ರ್ಯ ಇದ್ದಾಗ ಮಾತ್ರ’ ಅದು, ಆಡಳಿತದಲ್ಲಿ ಮಧ್ಯಪ್ರವೇಶ ಎಲ್ಲಿ ಅಗತ್ಯವೆಂದು ನಾಗರಿಕರ ಅಭಿಪ್ರಾಯ ತಿಳಿದುಕೊಳ್ಳುವ ಕಾಳಜಿಯಿರುವ ಆಳುವವರ ಉದ್ದೇಶದ ಪರಿಣಾಮಕಾರಿ ಸಾಧನವಾಗಬಲ್ಲುದು ಎಂದು ಕೇಳಿಕೊಂಡಿದ್ದರು.

ನಾವು ಸಾಮಾನ್ಯವಾಗಿ ರಾಷ್ಟ್ರೀಯ ಚಳುವಳಿಯ ಪ್ರಾರಂಭ ಎಂದು ಪರಿಗಣಿಸುವ, 1885ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ಥಾಪನೆಗಿಂತ ಮೊದಲು ಸಹ ಅಂದರೆ 1860, 1870, 1880ರ ದಶಕಗಳಲ್ಲಿ ನಾಗರಿಕ ಹಕ್ಕುಗಳ ಪರವಾಗಿ ಗಟ್ಟಿಯಾದ ದನಿಗಳು ಕೇಳಿಬರುತ್ತಿದ್ದವು. ನಾಗರಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ, ಅದರಲ್ಲೂ ಪತ್ರಿಕಾ ಸ್ವಾತಂತ್ರ್ಯದ ಪರವಾದ ಹೋರಾಟವು ಭಾರತೀಯ ರಾಷ್ಟ್ರೀಯವಾದಿಗಳ ಕಾರ್ಯಕ್ರಮದ ಅಚಲ ಭಾಗವಾಗಿತ್ತು. ಭಾರತದ ರಾಷ್ಟ್ರೀಯವಾದ ಆರಂಭವಾಗಿದ್ದು ಭಾರತೀಯ-ಭಾಷಾ ಪತ್ರಿಕೆಗಳಿಂದ ಎಂದು ನಾನು ಹೇಳುತ್ತೇನೆ. ಭಾರತದ ರಾಷ್ಟ್ರೀಯವಾದವು ಮೊದಲ ಬಾರಿ ಮತ್ತು ಭಾರತದ ಬುದ್ಧಿಜೀವಿ ವರ್ಗ ರೈತನೊಂದಿಗೆ ಗುರುತಿಸಿಕೊಳ್ಳುವ ಭಾರತೀಯ ರಾಷ್ಟ್ರೀಯವಾದದ ಅತ್ಯಂತ ಆಸಕ್ತಿಕಾರಕ ಮತ್ತು ಮುಖ್ಯವಾದ ಗುಣಲಕ್ಷಣ ಕಾಣಿಸಿಕೊಳ್ಳುವುದು 1860ರ ದಶಕದಲ್ಲಿ. 1857ರ ಮೊದಲ ಸ್ವಾತಂತ್ರ್ಯ ಸಂಗಾಮದ ಕೆಲವೇ ವರ್ಷಗಳ ನಂತರ ‘ನೀಲಿ ರೈತರ ದಂಗೆ’ಯ ಕುರಿತ ಮೊದಲ ನಾಟಕವನ್ನು ದೀನಬಂಧು ಮಿತ್ರ ರಚಿಸುತ್ತಾರೆ. ಭಾರತೀಯ-ಭಾಷಾ ಪತ್ರಿಕೆಗಳ ಬ್ರಿಟಿಷ್-ವಿರೋಧಿ ದನಿ ಬಲವಾಗುತ್ತಾ ಹೋದಂತೆ, 1878ರಲ್ಲಿ ಬ್ರಿಟಿಷ್ ಸರಕಾರ ಸ್ಥಳೀಯ ಪತ್ರಿಕಾ ಕಾನೂನನ್ನು ಜಾರಿಗೆ ತರುತ್ತದೆ. ಭಾರತೀಯ-ಭಾಷಾ ಪತ್ರಿಕೆ ಮಾತ್ರ ಯಾಕೆ? ಯಾಕೆಂದರೆ ಭಾರತೀಯ-ಭಾಷಾ ಪತ್ರಿಕೆಗಳು ಇಂಗ್ಲಿಷ್ ಪತ್ರಿಕೆಗಳಿಗಿಂತ ಹೆಚ್ಚು ತಲಸ್ಪರ್ಶಿ (ರ್‍ಯಾಡಿಕಲ್) ಮತ್ತು ಕ್ರಾಂತಿಕಾರಿಯಾಗಿದ್ದವು. ಈ ಕಾನೂನು ಭಾರತೀಯ-ಭಾಷಾ ಪತ್ರಿಕೆಗಳ ಸ್ವಾತಂತ್ರ್ಯವನ್ನು ತೀವ್ರವಾಗಿ ಹತ್ತಿಕ್ಕಿತು. ರಾಷ್ಟ್ರವಾದಿಗಳು ಮತ್ತು ರಾಷ್ಟ್ರೀಯ ಪತ್ರಿಕೆಗಳು ಇದರ ವಿರುದ್ಧ ತೀವ್ರ ಪ್ರಚಾರ-ಪ್ರಕ್ಷೋಭೆ ಕೈಗೊಂಡವು.

ಮೊದಲ ರಾಷ್ಟ್ರೀಯ ನಾಯಕರು ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆ ಮತ್ತು ವಿಸ್ತರಣೆಯನ್ನು ರಾಷ್ಟ್ರೀಯ ಚಳುವಳಿಯ ಅಖಂಡ ಭಾಗವಾಗಿ ಮಾಡಿದ್ದರು. ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಅವುಗಳನ್ನು ಮಿತಿಗೊಳಿಸುವ ಪ್ರತಿಯೊಂದು ಪ್ರಯತ್ನದ ವಿರುದ್ಧವೂ ಹೋರಾಡಿದರು.
ಆಗಿನ ಸಂದರ್ಭದಲ್ಲಿ, ಪ್ರಜಾಪ್ರಭುತ್ವದ ಅನುಪಸ್ಥಿತಿಯಲ್ಲಿ ಭಾರತೀಯ ಪತ್ರಿಕೆಗಳು ಸಾಂಸ್ಥಿಕ ವಿರೋಧ ಪಕ್ಷದ ಪಾತ್ರ ವಹಿಸಿದವು ಮತ್ತು, ದೇಶದ ಹಾಗೂ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಪ್ರತಿದಿನವೂ ಹೋರಾಡಿದವು. ‘ವಿರೋಧ, ವಿರೋಧ, ವಿರೋಧ’ ಇದು ಮಾಧ್ಯಮದ ಧ್ಯೇಯೋಕ್ತಿಯಾಗಿತ್ತು. ಇದು ಭಾರತೀಯ ಕಾಂಗ್ರೆಸ್ ಪಕ್ಷದ ಸ್ಥಾಪನೆಗಿಂತಲೂ ಮೊದಲಿನ ಕತೆ. ಮಾರ್ಚ್ 1886ರಲ್ಲಿ (ಕಾಂಗ್ರೆಸ್ ಸ್ಥಾಪನೆಯಾದ ಕೇವಲ 3 ತಿಂಗಳ ನಂತರ) ವೈಸರಾಯ್ ಆಗಿದ್ದ ಲಾರ್ಡ ಡಫೆರಿನ್ ‘ತಮ್ಮ ಇಂಗ್ಲೀಷ್ ಶೋಷಕರ ವಿರುದ್ಧ ನೂರಾರು ಬಾಬುಗಳು ತೀಕ್ಷ್ಣವಾಗಿ ಟೀಕಿಸಿ ದಿನ ದಿನಕ್ಕೂ ಬರೆದ ಬರವಣಿಗಳು ಪ್ರಕಟವಾಗುತ್ತಲೇ ಇವೆ’ ಎಂದು ಹೇಳುತ್ತಾನೆ. ಇದನ್ನು ಇಂದಿನ ಮಾಧ್ಯಮಗಳ ಜೊತೆ ಹೋಲಿಸಲು ಸಾಧ್ಯವೇ? ಎರಡು ತಿಂಗಳುಗಳ ನಂತರ ಮತ್ತೆ ಬರೆಯುವ ಡಫರಿನ್ ‘ನಮ್ಮ ವಿರುದ್ದದ ಅವರ ಬರಹಗಳು ಮತ್ತಷ್ಟು ತೀವ್ರವಾಗಿವೆ, ನಮ್ಮನ್ನು ಮನುಕುಲದ ಅದರಲ್ಲೂ ಭಾರತದ ವಿರೋಧಿಗಳು ಎಂದೇ ಅವರು ಬಿಂಬಿಸುತ್ತಿದ್ದಾರೆ’ ಎಂದು ಹೇಳಿದ್ದಾನೆ. ಇದು ಆ ಕಾಲದ ಪತ್ರಿಕೆಗಳ ದನಿಯಾಗಿತ್ತು. ನಂತರ 1870ರಲ್ಲಿ ಪತ್ರಿಕೆಗಳ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲು (ರಾಜದ್ರೋಹದ) ಸೆಕ್ಷನ್ 124ಎ ಅನ್ನು ಜಾರಿಗೊಳಿಸಿದರು. ಇದನ್ನು ಆ ಕಾಲದಲ್ಲಿ ಭಾರತದ ಪತ್ರಕರ್ತರ ವಿರುದ್ದ ಬಳಸಿದರು. ಆಗ ಈ ಸೆಕ್ಶನ್ ಅಡಿ ಶಿಕ್ಷೆ ಬರಿಯ ಜೀವಾವಧಿಯದ್ದು ಆಗಿರಲಿಲ್ಲ, ‘ತಪ್ಪಿತಸ್ಥ’ರನ್ನು ದೂರ ಸಾಗ ಹಾಕಲಾಗುತ್ತಿತ್ತು. ಆದ್ದರಿಂದ ಸರಕಾರವನ್ನು ಕಟುವಾಗಿ ಟೀಕಿಸಿ ‘ರಾಜದ್ರೋಹ’ದ ಆಪಾದನೆ ಮೈಮೇಲೆ ಎಳೆದುಕೊಳ್ಳುವುದು ಸುಲಭದ ಮಾತೇನು ಆಗಿರಲಿಲ್ಲ.

ಆಗಿನ ಭಾರತದ ಪತ್ರಿಕೆಗಳು ರಾಷ್ಟ್ರೀಯ ಪತ್ರಿಕೆಗಳಾಗಿದ್ದವು. ಸಣ್ಣ ಸಂಖ್ಯೆಯ ಬ್ರಿಟಿಷ್-ಪರ ಪತ್ರಿಕೆಗಳು ಇರಲಿಲ್ಲವೆಂದಲ್ಲ. ರಾಷ್ಟ್ರೀಯ ಪತ್ರಿಕೆಗಳನ್ನು ಹೆಚ್ಚಾಗಿ ಮಧ್ಯಮ ವರ್ಗದ ವ್ಯಕ್ತಿಗಳು ತಮ್ಮ ಸ್ವಂತ ಹಣ ಹಾಕಿ ಕುಟುಂಬದ ಚಿನ್ನ ಮುಂತಾದ ಬೆಲೆ ಬಾಳುವ ಆಸ್ತಿಗಳನ್ನು ಅಡವಿಟ್ಟು ಪತ್ರಿಕೆಗಳನ್ನು ನಡೆಸುತ್ತಿದ್ದರು. ಅವರಲ್ಲಿ ಹೆಚ್ಚಿನವರು ಮತ್ತು ಅವರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಗುರಿಯಾದರು ಮತ್ತು ನಷ್ಟಕ್ಕೆ ಒಳಗಾಗಿ ನಾಶವಾದರು. ಇಂತಹ ಪತ್ರಿಕೆಗಳನ್ನು ಸ್ಥಾಪಿಸಿದ್ದು ದೊಡ್ಡ ಉದ್ಯಮಪತಿಗಳಾಗಲಿ ಕಾರ್ಪೊರೆಟ್‍ಗಳಾಗಿ ಅಲ್ಲ.
ರಾಷ್ಟ್ರೀಯ ಪತ್ರಕರ್ತರು ಬ್ರಿಟಿಷ್ ಸರಕಾರವನ್ನು ಟೀಕಿಸುತ್ತಲೇ ರಾಜದ್ರೋಹದ ಆಪಾದನೆಯಿಂದ ತಪ್ಪಿಸಿಕೊಳ್ಳಲು ಮೂರು ತಂತ್ರಗಳನ್ನು ಹೂಡಿದ್ದು ಕಂಡು ಬರುತ್ತದೆ. ಮೊದಲನೆಯದು ಸರಕಾರದ ದುಷ್ಕೃತ್ಯಗಳನ್ನು ಬಯಲಿಗೆಳೆದು ಬರೆಯುವ ಮೊದಲು ಬ್ರಿಟಿಷ್ ರಾಣಿ ಮತ್ತು ಸರಕಾರಕ್ಕೆ ನಿಷ್ಠೆ ತೋರಿ ಕೆಲವು ವಾಕ್ಯಗಳನ್ನು ಬರೆಯುತ್ತಿದ್ದರು. ಎರಡನೆಯದಾಗಿ ಬ್ರಿಟಿಷ್ ಇಂಡಿಯನ್ ಸರಕಾರದ ಕೃತ್ಯಗಳನ್ನು ಬಯಲಿಗೆಳೆಯುವ ಬ್ರಿಟಿಷ್ ಪತ್ರಿಕೆಗಳ ವರದಿಗಳನ್ನು ಉದ್ಧರಣೆ ಚಿಹ್ನೆ ಇಲ್ಲದೆ ಪ್ರಕಟಿಸಿ ಅಧಿಕಾರಿಗಳ ಕಣ್ಣು ಕೆಂಪಗಾಗಿಸುತ್ತಿದ್ದರು. ಆದರೆ ಅವರು ರಾಜದ್ರೋಹದ ಕ್ರಮ ತೆಗೆದುಕೊಳ್ಳಲು ಮುಂದಾದಾಗ, ಇದು ಬ್ರಿಟಿಷ್ ಪತ್ರಿಕೆಗಳ ಉದ್ಧರಣೆ, ಅದು ರಾಜದ್ರೋಹವಾದರೆ ಆ ಪತ್ರಿಕೆಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದರು. ಕೊನೆಯದಾಗಿ ಬ್ರಿಟಿಷ್ ಪತ್ರಿಕೆಗಳಲ್ಲಿ ಬಂದ ಝಾರಿಸ್ಟ್ ರಶ್ಯಾದ ಸರ್ವಾಧಿಕಾರದ ವಿರುದ್ಧ ಕ್ರಾಂತಿಕಾರಿಗಳ ದಾಳಿಯ ವರದಿಗಳನ್ನು ಹಾಕಿ, ಭಾರತದ ಕ್ರಾಂತಿಕಾರಿಗಳ ಕ್ರಮಗಳನ್ನು ಪರೋಕ್ಷವಾಗಿ ಸಮರ್ಥಿಸುತ್ತಿದ್ದರು. ತಿಲಕರು ವಿಶೇಷವಾಗಿ ಈ ತಂತ್ರಗಳನ್ನು ಬಳಸುವುದರಲ್ಲಿ ನಿಸ್ಸೀಮರಿದ್ದು ಅಧಿಕಾರಿಗಳನ್ನು ಹಲವು ರೀತಿಗಳಲ್ಲಿ ಛೇಡಿಸುತ್ತಿದ್ದರು.

ಕಲ್ಕತ್ತದ ಟೌನ್‍ಹಾಲ್‍ನಲ್ಲಿ ಭಾರತೀಯ ಪತ್ರಕರ್ತರ ಬಾಯಿ ಮುಚ್ಚಿಸಲು ಜಾರಿಗೊಳಿಸಿದ ಸ್ಥಳೀಯ ಪತ್ರಿಕಾ ಕಾಯಿದೆ 1878ರ ವಿರುದ್ದ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಹೀಗೆ ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಯಿಂದ ಆಧುನಿಕ ಸಾಮೂಹಿಕ ಜನಾಂದೋಲನದ ರಾಜಕಾರಣವು ಪ್ರಾರಂಭವಾಗಿತ್ತು. ಈ ಪ್ರತಿಭಟನೆ ಎಷ್ಟು ದೊಡ್ಡದಾಗಿತ್ತೆಂದರೆ 1881ರಲ್ಲಿ ಆಗಿನ ವೈಸ್‍ರಾಯ್ ರಿಪನ್ ಈ ಮಸೂದೆಯನ್ನು ಹಿಂಪಡೆದುಕೊಂಡರು. ಇದು ಆ ಕಾಲದ ರಾಷ್ಟ್ರೀಯವಾದಿಗಳ ದೊಡ್ಡ ಗೆಲುವಾಗಿತ್ತು.

ಆರಂಭದ ರಾಷ್ಟ್ರೀಯವಾದಿಯಾಗಿದ್ದ ಸುರೇಂದ್ರನಾಥ ಬ್ಯಾನರ್ಜಿ ತಮ್ಮ ಬರವಣಿಗೆಗಳಿಗಾಗಿ ಜೈಲುವಾಸ ಅನುಭವಿಸಬೇಕಾಯಿತು. ಆಗಸ್ಟ್ 2, 1883ರ ‘ಬೆಂಗಾಲಿ’ ಪತ್ರಿಕೆಯ ಸಂಪಾದಕೀಯದಲ್ಲಿ ಅವರು ಕಲ್ಕತ್ತ ಹೈಕೋರ್ಟಿನ ತೀರ್ಪನ್ನು ತೀವ್ರವಾಗಿ ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದರು. ನ್ಯಾಯಾಂಗ ನಿಂದನೆ ಆಧಾರದ ಮೇಲೆ ಅವರನ್ನು ಜೈಲಿಗೆ ತಳ್ಳಲಾಯಿತು. ಈ ಬಂಧನದ ವಿರುದ್ದ ಕಲ್ಕತ್ತದ ಹಲವು ಭಾಗಗಳಲ್ಲಿ ಪ್ರತಿಭಟನೆ, ಹರತಾಳ ನಡೆಸಲಾಯಿತು. ಕೋರ್ಟಿನ ಮುಂದೆ ವಿದ್ಯಾರ್ಥಿಗಳು ಪ್ರತಿಭಟಿಸಿದರು. ಕೋರ್ಟಿನ ಕಿಟಿಕಿ ಗಾಜುಗಳ ಮತ್ತು ಪೋಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಆ ವಿದ್ಯಾಥಿ ಗುಂಪಿನಲ್ಲಿದ್ದ ಅಶುತೋಶ್ ಮುಖರ್ಜಿ ಮುಂದೆ ಕಲ್ಕತ್ತ ವಿಶ್ವವಿದ್ಯಾಲಯದ ಜನಪ್ರಿಯ ಉಪಕುಲಪತಿಗಳಾದರು. ಈ ಪ್ರತಿಭಟನೆಯು ಬಂಗಾಳದ ಇತರ ಭಾಗಗಳಿಗೆ, ಲಾಹೋರ್, ಅಮೃತಸರ, ಆಗ್ರಾ, ಫೈಜಾಬಾದ್, ಪೂನಾ ಹಾಗೂ ಉತ್ತರ ಭಾರತದ ಹಲವು ಪ್ರದೇಶಗಳಿಗೆಲ್ಲ ಹಬ್ಬಿತು. ಮೊಟ್ಟ ಮೊದಲ ಬಾರಿಗೆ ಕಲ್ಕತ್ತದಲ್ಲಿ ಸುರೇಂದ್ರನಾಥ ಬ್ಯಾನರ್ಜಿ ಅವರ ಬಂಧನದ ವಿರುದ್ಧ ಇಂತಹ ಬಹಿರಂಗ ಜನಸಭೆ ನಡೆಯಿತು ಎಂಬುದು ಗಮನಾರ್ಹವಾಗಿದೆ. ಆವಾಗಿನಿಂದ ಇಂತಹ ಭಾರೀ ಬಹಿರಂಗ ಜನಸಭೆಗಳು ಭಾರತದ ರಾಷ್ಟ್ರೀಯ ಚಳುವಳಿಯ ಮುಖ್ಯ ಚಹರೆ ಆದವು. ಸುರೇಂಧ್ರನಾಥ ಬ್ಯಾನರ್ಜಿ ಅವರ ಆತ್ಮಕತೆ ‘ನಿರ್ಮಾಣವಾಗುತ್ತಿರುವ ರಾಷ್ಟ್ರ’ ಅದರ ತಲೆಬರಹ ಮತ್ತು ಹೂರಣ ಎರಡು ರೀತಿಗಳಿಂದ ಬಹಳ ಗಮನಾರ್ಹವಾದುದು. ಮೊದಲ ರಾಷ್ಟ್ರೀಯತಾವಾದಿಗಳ ಭಾರತದ ಕಲ್ಪನೆಯನ್ನು ಅವರು ಈ ಪುಸ್ತಕದಲ್ಲಿ ಪ್ರಸ್ತುತಪಡಿಸಿದ್ದಾರೆ. ಅವರದ್ದು ಪ್ರಾಚೀನ ಕಾಲದಿಂದಲೂ ಇದ್ದ, ದೀರ್ಘ ಕಾಲ ಸಂಘಟಿತವಾಗಿದ್ದ ದೇಶದ ಕಲ್ಪನೆ ಅಲ್ಲ. ಅವರ ಕಲ್ಪನೆ ನಿರ್ಮಾಣ ಪ್ರಕ್ರಿಯೆಯಲ್ಲಿರುವ ದೇಶದ್ದು ಎಂಬುದು ಗಮನಾರ್ಹ.
ನಂತರ ತಿಲಕರ ಮೇಲೂ ಈ 124ಎ ಸೆಕ್ಷನ್ ಅಡಿಯಲ್ಲಿ ರಾಜದ್ರೋಹದ ಆರೋಪ ಹೊರಿಸಲಾಯಿತು. ಇದಕ್ಕೆ ಕಾರಣ ಅವರು ತಮ್ಮ ಮರಾಠಿ ಪತ್ರಿಕೆ ‘ಕೇಸರಿ’ಯ ಜೂನ್ 15, 1897ರ ಸಂಚಿಕೆಯಲ್ಲಿ (ಅವರ ಇಂಗ್ಲಿಷ್ ಪತ್ರಿಕೆ ‘ಮರಾಠಾ’ ಆಗಿತ್ತು) ‘ಶಿವಾಜಿ ಉವಾಚಗಳು’ ಎಂಬ ಕವನವನ್ನುಮತ್ತು ಶಿವಾಜಿ ಉತ್ಸವದಲ್ಲಿ ಅವರ ಭಾಷಣವನ್ನು ಪ್ರಕಟಿಸಿದ್ದು. ಅವರ ವಿಚಾರಣೆಯನ್ನು 6 ಬ್ರಿಟಿಷರು ಮತ್ತು 3 ಭಾರತೀಯರು ಇದ್ದ ಜ್ಯೂರಿ ನಡೆಸಿತು. ಎಲ್ಲಾ ಬ್ರಿಟಿಷ್ ಜ್ಯೂರಿಗಳು ಶಿಕ್ಷೆಯ ಪರವಾಗಿದ್ದರೆ, ಎಲ್ಲಾ 3 ಭಾರತೀಯ ಜ್ಯೂರಿಗಳು ಶಿಕ್ಷೆಗೆ ವಿರುದ್ಧವಾಗಿದ್ದರು. ತಿಲಕರಿಗೆ 18 ತಿಂಗಳ ಬರ್ಬರವಾದ ಕಠಿಣ ಶಿಕ್ಷೆ ನೀಡಲಾಯಿತು. ಅವರು ಆಗ ಮುಂಬಯಿ ಪ್ರೆಸಿಡೆನ್ಸಿ ವಿಧಾನ ಸಭೆಯ ಸದಸ್ಯರಾಗಿದ್ದರು. ಇದು ನಿಜವಾದ ಸಾಮೂಹಿಕ ಜನಚಳುವಳಿಯಾದ 1905-08ರ ಸ್ವದೇಶೀ ಚಳುವಳಿಗಿಂತ ಮೊದಲು ಎಂತಲೂ ನೆನಪಿನಲ್ಲಿಡಬೇಕು. ನಾನು ಬೇಕೆಂತಲೇ ಸಾಮೂಹಿಕ ಜನಚಳುವಳಿಯ ಮೊದಲಿನ ಕತೆಗಳನ್ನು ಹೇಳುತ್ತಿದ್ದೇನೆ. ಈ ನಾಗರಿಕ ಹಕ್ಕಿನ ದಮನದ ವಿರುದ್ಧ ದೇಶದಾದ್ಯಂತ ರಾಷ್ಟ್ರೀಯತಾವಾದಿಗಳ ನಾಯಕತ್ವದಲ್ಲಿ ತೀಕ್ಷ್ಣ ಪ್ರತಿಭಟನೆಗಳ ನಡೆದವು. ಇವರಲ್ಲಿ ಹೆಚ್ಚಿನವರು ಮಂದಗಾಮಿಗಳಾಗಿದ್ದು, ತಿಲಕರು ತೀವ್ರಗಾಮಿ ನಾಯಕರಾಗಿದ್ದರು. ಆಗ ಕಾಂಗ್ರೆಸಿನೊಳಗೆ ಮಂದಗಾಮಿಗಳು ಮತ್ತು ತೀವ್ರಗಾಮಿಗಳ ನಡುವೆ ತೀವ್ರ ವಾಗ್ವಾದ ನಡೆಯುತ್ತಿತ್ತು. ಆದರೂ ನಾಗರಿಕ ಸ್ವಾತಂತ್ರ್ಯಗಳು ಪವಿತ್ರವೆಂದು ಅವರು ಭಾವಿಸಿದ್ದು ಅದಕ್ಕಾಗಿ ಅವರು ಒಂದಾಗಿ ಹೋರಾಡಿದರು. ಪತ್ರಿಕೆಗಳನ್ನು ಪ್ರತಿಭಟನಾರ್ಥವಾಗಿ ಕಪ್ಪು ಪಟ್ಟಿಗಳೊಂದಿಗೆ ಮುದ್ರಿಸಲಾಯಿತು. 1897ರ ಡಿಸೆಂಬರಿನಲ್ಲಿ ನಡೆದ ಕಾಂಗ್ರೆಸ್ ವಾರ್ಷಿಕ ಅಧಿವೇಶನದಲ್ಲಿ ಸುರೇಂದ್ರನಾಥ ಬ್ಯಾನರ್ಜಿ ಅವರು, ತಿಲಕರನ್ನು ಕಠಿಣ ಶಿಕ್ಷೆಗೆ ಗುರಿ ಮಾಡಿದ್ದಕ್ಕಾಗಿ ‘ಇಡೀ ದೇಶ ಕಣ್ಣೀರಿಡುತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದರು. ತಿಲಕರ ಬಂಧನ ಪತ್ರಿಕಾ ಸ್ವಾತಂತ್ರ್ಯದಂತಹ ನಾಗರಿಕ ಸ್ವಾತಂತ್ರ್ಯದ ಮೇಲೆ ತೀವ್ರ ಹಲ್ಲೆ ಎಂದು ಇಡೀ ದೇಶ ಪರಿಗಣಿಸಿತ್ತು.

ಮತ್ತೆ 11 ವರ್ಷಗಳ ನಂತರ ಜೂನ್ 24, 1908ರಂದು ಅದೇ ಸೆಕ್ಶನ್ 124ಎ ಅಡಿಯಲ್ಲಿ ರಾಜದ್ರೋಹದ ಪ್ರಕರಣವನ್ನು ದಾಖಲಿಸಲಾಯಿತು. ‘ಬಾಂಬಿನ ಆಗಮನದ ಕುರಿತು’ ಎಂಬ ಅವರ ಲೇಖನ ಸರಣಿ ರಾಜದ್ರೋಹದ್ದು ಎಂದು ಅಧಿಕಾರಿಗಳು ನಿರ್ಧರಿಸಿದ್ದರು. ಆಗಿನ ಸಂದರ್ಭ ಸ್ವದೇಶೀ ಚಳುವಳಿಯ ಕೊನೆಯ ಹಂತದ್ದಾಗಿತ್ತು. ಸರಕಾರಿ ಅಧಿಕಾರಿಗಳ ಮತ್ತಿತರರ ವಿರುದ್ಧ ವೈಯಕ್ತಿಕವಾಗಿ ಬಾಂಬುಗಳು ಮತ್ತು ಇತರ ಹಿಂಸಾತ್ಮಕ ಕ್ರಮಗಳನ್ನು ಬಳಸಲಾರಂಭಿಸಿದ್ದ ಕ್ರಾಂತಿಕಾರಿ ಭಯೋತ್ಪಾದಕತೆ ಎನ್ನುವ ರಾಜಕೀಯ ಪಂಥ ಸ್ವದೇಶೀ ಚಳುವಳಿಯೊಳಗೆ ಬೆಳೆಯಲಾರಂಭಿಸಿತ್ತು. ಈ ಲೇಖನ ಸರಣಿಯಲ್ಲಿ ಬಾಂಬು ಮತ್ತು ಹಿಂಸೆಯನ್ನು ವಿರೋಧಿಸುತ್ತಲೇ ಈ ಪಂಥ ಬೆಳೆದು ಬರಲಿಕ್ಕೆ ಕಾರಣಗಳು ಏನು ಎಂದು ತಿಲಕರು ವಿಶ್ಲೇಷಿಸುತ್ತಾರೆ. ಇದಕ್ಕೆ ಸ್ವಾತಂತ್ರ್ಯವನ್ನು ಭಿನ್ನಮತವನ್ನು ಹತ್ತಿಕ್ಕುವ ಬ್ರಿಟಿಷರ ದಮನ ನೀತಿಯೇ ಕಾರಣ ಎಂದು ಬ್ರಿಟಿಷರನ್ನೇ ತಪ್ಪಿತಸ್ಥರು ಎಂದು ಆಪಾದಿಸಿದ್ದು ಬ್ರಿಟಿಷ್ ಅಧಿಕಾರಿಗಳಿಗೆ ಪಥ್ಯವಾಗಿರಲಿಲ್ಲ. ಹಿಂಸೆಯನ್ನು ಅವರು ಸ್ಪಷ್ಟವಾಗಿ ಖಂಡಿಸಿದ್ದರೂ ರಾಜದ್ರೋಹದ ಪ್ರಕರಣ ದಾಖಲಿಸಲಾಯಿತು. ಅವರ ಬಂಧನದ ಕೆಲವು ದಿನಗಳ ಮೊದಲು ಅವರಿಗೆ ಎಚ್ಚರಿಕೆಯ ಮುನ್ಸೂಚನೆಯನ್ನು ರವಾನಿಸಿದ ಸ್ನೇಹಿತ ಪೋಲಿಸ್ ಅಧಿಕಾರಿಯೊಬ್ಬನಿಗೆ ಅವರು ಹೀಗೆ ಉತ್ತರಿಸಿದರಂತೆ ‘ಸರಕಾರ ಇಡೀ ದೇಶವನ್ನು ಒಂದು ಜೈಲಿನಂತೆ ಮಾಡಿದೆ. ಜೈಲಿಗೆ ಹೊಗುವುದೆಂದರೆ ವಿಶಾಲವಾದ ಜೈಲಿನಿಂದ ಚಿಕ್ಕ ಜೈಲಿಗೆ ಹೋದಂತೆ, ಅಷ್ಟೇ ವ್ಯತ್ಯಾಸ’ ಎಂದು ನಗುತ್ತಾ ಹೇಳಿದರಂತೆ. ತಿಲಕರಿಗೆ 6 ವರ್ಷಗಳ ಕಾಲ ಬರ್ಮಾದ ಮಂಡಾಲೆಗೆ ಸಾಗಿಸುವ ಶಿಕ್ಷೆ ನೀಡಲಾಯಿತು.

ತಿಲಕರ 1908ರ ಬಂಧನದ ವಿರುದ್ದ ಸಾರ್ವಜನಿಕ ಪ್ರತಿಕ್ರಿಯೆ ದಂಗು ಬಡಿಸುವಂತಹದು ಆಗಿತ್ತು. ಹತ್ತಿ ಗಿರಣಿಗಳ ಮತ್ತು ರೈಲ್ವೇ ವರ್ಕುಶಾಪುಗಳ ಕಾರ್ಮಿಕರು 6 ದಿನಗಳ ಮುಷ್ಕರ ಹೂಡಿದರು. ಅದೊಂದು ಕಾರ್ಮಿಕ ವರ್ಗ ಸ್ವಯಂಸ್ಫೂರ್ತವಾಗಿ ನಡೆಸಿದ ಪೂರ್ಣ ರಾಜಕೀಯ ಮುಷ್ಕರವಾಗಿತ್ತು, ಏಕೆಂದರೆ ಆಗಿನ್ನೂ ಟ್ರೇಡ್ ಯೂನಿಯನುಗಳ ಸಂಘಟಿತವಾಗಿರಲಿಲ್ಲ. ಮಾರುಕಟ್ಟೆಗಳು ಒಂದು ವಾರದಷ್ಟು ಕಾಲ ಬಂದಾಗಿತ್ತು. ಸಮಾಜದ ಎಲ್ಲಾ ಜನವಿಭಾಗಗಳಿಂದ ದೇಶದಾದ್ಯಂತ ತೀವ್ರವಾದ ಪ್ರತಿಭಟನೆಗಳು ನಡೆದವು. ಮುಂಬಯಿಯ ಕಾರ್ಮಿಕರನ್ನು ಕೆಲಸಕ್ಕೆ ಮರಳಿಸಲು ಪೋಲಿಸರನ್ನು ಕಳಿಸಲಾಯಿತು. ಅದು ವಿಫಲವಾದಾಗ ಸೈನ್ಯವನ್ನು ಕಳಿಸಲಾಯಿತು. ಆ ಸಂಘರ್ಷದಲ್ಲಿ 16 ಕಾರ್ಮಿಕರು ಸತ್ತರು. ಲೆನಿನ್ ಈ ಸುದ್ದಿ ಕೇಳಿ ಇದು ರಾಜಕೀಯ ಕ್ಷೇತ್ರಕ್ಕೆ ಭಾರತದ ಕಾರ್ಮಿಕ ವರ್ಗದ ಪ್ರವೇಶ ಮತ್ತು ತಿಲಕ್ ಒಬ್ಬ ಕ್ರಾಂತಿಕಾರಿ ಎಂದು ಉದ್ಗರಿಸಿದ್ದರು.

ಗಾಂಧೀಜಿಯವರನ್ನು 1922ರಲ್ಲಿ ಅದೇ ಸೆಕ್ಶನ್ 124ಎ ಅಡಿ ಅದೇ ರಾಜದ್ರೋಹದ ಆಪಾದನೆಗೆ ವಿಚಾರಣೆಗೆ ಒಳಪಡಿಸಿದಾಗ ತಿಲಕರ ವಿಚಾರಣೆಯ ಮಾರ್ದನಿ ಮತ್ತೆ ಕೇಳಿ ಬಂತು. ಹೀಗೆ ರಾಜದ್ರೋಹದ ಅಡಿಯಲ್ಲಿ ವಿಚಾರಣೆಗೊಳಗಾದವರ ದೀರ್ಘ ಮತ್ತು ಭವ್ಯವಾದ ಪರಂಪರೆ ಇದೆ. ಅಸಹಕಾರ ಚಳುವಳಿ 1922ರಲ್ಲಿ ಮುಗಿದ ಮೇಲೆ ಗಾಂಧೀಜಿಯವರ ಮೇಲೆ ರಾಜದ್ರೋಹದ ಪ್ರಕರಣ ದಾಖಲಿಸಲಾಯಿತು. ಅಸಹಕಾರ ಚಳುವಳಿ ನಡೆಯುತ್ತಿದ್ದಾಗ ಗಾಂಧೀಜಿ ಅವರನ್ನು ಬಂಧಿಸುವ ಧೈರ್ಯ ಸರಕಾರಕ್ಕೆ ಇರಲಿಲ್ಲ. ಬ್ರಿಟಿಷ್ ಆಡಳಿತದ ವಿರುದ್ಧ ಮಿಲಿಯಾಂತರ ಜನ ಭಾಗವಹಿಸಿದ ಲಕ್ಷಾಂತರ ಜನ ಜೈಲಿಗೆ ಹೋದ ಜಗತ್ತಿನಲ್ಲೇ ಅತಿ ದೊಡ್ಡ ಸಾಮೂಹಿಕ ಜನ ಚಳುವಳಿಯನ್ನು ಸಂಘಟಿಸಿದ ಗಾಂಧೀಜಿಯಂತಹ ಮಹಾನ್ ನಾಯಕರನ್ನು ಅದನ್ನು ಸಂಘಟಿಸಿದ್ದಕ್ಕಾಗಿ ಬಂಧಿಸಲಿಲ್ಲ. ಬದಲಿಗೆ ಯಂಗ್ ಇಂಡಿಯಾದಲ್ಲಿ ಲೇಖನವೊಂದನ್ನು ಬರೆದಿದ್ದಕ್ಕೆ ರಾಜದ್ರೋಹದ ಪ್ರಕರಣ ದಾಖಲು ಮಾಡುತ್ತಾರೆ. ಅದರ ತೀರ್ಪು ನೀಡುತ್ತಾ ‘ನಿಮ್ಮ ಅಪರಾಧ ತಿಲಕರು ಮಾಡಿದ್ದ ಅಪರಾಧವೇ. ಆದ್ದರಿಂದ ಅವರಿಗೆ ಕೊಟ್ಟ 6 ವರ್ಷಗಳ ಶಿಕ್ಷೆಯನ್ನೇ ಕೊಡುತ್ತೇನೆ’ ಎಂದು ನ್ಯಾಯಾಧೀಶರು ಗಾಂಧೀಜಿಯವರಿಗೆ ಹೇಳುತ್ತಾರೆ. “ನೀವು ದಿವಂಗತ ತಿಲಕರ ರಾಜದ್ರೋಹದ ವಿಚಾರಣೆಯನ್ನು ನೆನಪಿಸಿ ನನ್ನನ್ನು ಗೌರವಿಸಿದ್ದೀರಿ. ಅವರ ಹೆಸರಿನೊಂದಿಗೆ ನನ್ನನ್ನು ಜೋಡಿಸಿದ್ದು ನಾನು ಅತಿಯಾಗಿ ಹೆಮ್ಮೆ ಪಡುವ ಗೌರವ ಮತ್ತು ಸುಯೋಗ ಎಂದು ಭಾವಿಸುತ್ತೇನೆ” ಎಂದು ಉತ್ತರಿಸಿದರು.

ಮುಂದಿನ ಭಾಗ…

ತಿಲಕ್‌ ಮತ್ತು ಗಾಂಧಿ ಮೇಲೆ ದೇಶದ್ರೋಹದ ಪ್ರಕರಣಗಳು – ಮೃದುಲಾ ಮುಖರ್ಜಿ ಭಾಷಣ ಭಾಗ-2

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...