ಮಾತಿನ ಮೂಲಕ ದೇಹದ ಅಸ್ಪೃಶ್ಯತೆ ಮೀರಿದ ಟ್ರಾನ್ಸ್ ಜೆಂಡರ್ ರೇಡಿಯೊ ಜಾಕಿ ಪ್ರಿಯಾಂಕಾ

ಎಲೆಮರೆ-23

ಕಾಲಕಾಲಕ್ಕೆ ಜಾತಿವಾದಿ, ಗಂಡಾಳ್ವಿಕೆ ಸಮಾಜವು ಅಸ್ಪೃಶ್ಯತೆಯ ಪಟ್ಟಿಯಲ್ಲಿ ಹೊಸ ಸಮುದಾಯಗಳನ್ನು ಸೇರಿಸುತ್ತಾ ಮುಟ್ಟದವರೆಂದು ಪಟ್ಟ ಕಟ್ಟಿ ದೂರ ಇಡುವ ಪ್ರಕ್ರಿಯೆ ಸದಾ ಜಾರಿಯಲ್ಲಿರುತ್ತದೆ. ಹೀಗೆ ರೂಪುಗೊಂಡ ನವ ಅಸ್ಪೃಶ್ಯರೆಂದರೆ ಟ್ರಾನ್ಸ್ ಜೆಂಡರ್ ಅಥವಾ ತೃತೀಯ ಲಿಂಗಿಗಳು. ಇವರ ಬಗೆಗೆ ಅನಗತ್ಯ ಭಯ ಹುಟ್ಟಿಸಿ ಅವರನ್ನು ನೋಡುವ ನೋಟಕ್ರಮದಲ್ಲೇ ಕೀಳುತನವನ್ನು ಬೆರೆಸಿ ಹತ್ತಿರ ಬಂದರೆ ಚೇಳು ಕಡಿದಂತೆ ದೂರ ಸರಿಸುವ ಪ್ರವೃತ್ತಿ ಅನೇಕರಲ್ಲಿದೆ. ಹೀಗಾಗಿ ಟ್ರಾನ್ಸ್ ಜೆಂಡರ್ ಸಮುದಾಯಕ್ಕೆ ದೈಹಿಕವಾಗಿ ಕಾಣಿಸಿಕೊಳ್ಳುವ ಕೆಲಸಗಳಿಗಿಂತ ದೈಹಿಕವಾಗಿ ಕಾಣಿಸಿಕೊಳ್ಳದ ಕೆಲಸಗಳು ಸಿಗತೊಡಗಿದವು. ಇದರಲ್ಲಿ ರೇಡಿಯೋ ಜಾಕಿ ವೃತ್ತಿಯೂ ಒಂದು. ಇಲ್ಲಿ ಮಾತನಾಡುತ್ತಿರುವವರು ಯಾರು ಎಂದು ತಕ್ಷಣಕ್ಕೆ ಗುರುತಾಗದು. ಹಾಗಾಗಿಯೇ ಧ್ವನಿಯನ್ನು ಕೇಳಿಸಿಕೊಳ್ಳುವುದಕ್ಕೆ ದೇಹದ ಸೌಂದರ್ಯವಾಗಲಿ, ಅಂಗವೈಕಲ್ಯವಾಗಲಿ, ಜಾತಿಧರ್ಮ ಲಿಂಗದ ತರತಮಗಳಾಗಲಿ ಅಡ್ಡಿ ಬರಲಾರವು. ಈ ಕಾರಣಕ್ಕೆ ಇಂದು ಟ್ರಾನ್ಸ್ ಜೆಂಡರ್ ಸಮುದಾಯ ರೇಡಿಯೋ ಜಾಕಿ ವೃತ್ತಿಯತ್ತ ಆಕರ್ಷಿತರಾಗುತ್ತಿದ್ದಾರೆ. ಇಂತಹದ್ದೊಂದು ಪ್ರಯೋಗಕ್ಕೆ ಮೊದಲ ಹೆಜ್ಜೆ ಇಟ್ಟದ್ದು ಬೆಂಗಳೂರಿನ ಗಿರಿನಗರದ ನಿವಾಸಿ ರೇಡಿಯೋ ಜಾಕಿಯಾದ ಟ್ರಾನ್ಸ್ ಮಹಿಳೆ ಪ್ರಿಯಾಂಕ ದಿವಾಕರ್.

`ಮಾಗಡಿಯಲ್ಲಿ ಮೇ 30, 1985ರಲ್ಲಿ ಜನಿಸಿದಾಗ ನಾನು ಹುಡುಗನಾಗಿದ್ದೆ. ರಾಜು ಎಂದು ಹೆಸರಿಟ್ಟಿದ್ದ ಅಪ್ಪ-ಅಮ್ಮ ತುಂಬಾ ಪ್ರೀತಿಸುತ್ತಿದ್ದರು. ಆದರೆ ನನ್ನ ದೇಹದಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ. ಚಾಮರಾಜಪೇಟೆಯಲ್ಲಿ ಶಾಲೆಗೆ ಹೋಗುತ್ತಿದ್ದಾಗಲೇ ನಾನು ಹೆಣ್ಣಿನಂತೆ ವರ್ತಿಸಲು ಶುರು ಮಾಡಿದ್ದೆ. ಹುಡುಗಿಯರೊಂದಿಗೆ ಕೂರಬೇಕು, ಅವರಂತೆ ಬಟ್ಟೆ ಧರಿಸಬೇಕು ಎನಿಸುತ್ತಿತ್ತು. ಮನೆಯಲ್ಲಿ ರಂಗೋಲಿ ಹಾಕುತ್ತಿದ್ದೆ. ತಾಯಿಯೊಂದಿಗೆ ಬೇರೆಯವರ ಮನೆ ಕೆಲಸಕ್ಕೆ ಹೋಗುತ್ತಿದ್ದೆ. ಈ ವರ್ತನೆ ಕಂಡು ಪೋಷಕರು ಬೈಯಲು ಶುರು ಮಾಡಿದರು. ಶಾಲೆಯಲ್ಲಿ ಸ್ನೇಹಿತರು ಹಾಗೂ ಶಿಕ್ಷಕರು ಹೀಯಾಳಿಸಿ ಖೋಜಾ ಎನ್ನುತ್ತಿದ್ದರು. ಆಗ ನಾನು ದೈಹಿಕವಾಗಿ ಹುಡುಗನಂತೆ ಇದ್ದೆ. ಆದರೆ ಮನಸ್ಸಿನ ಭಾವನೆಗಳು ಹುಡುಗಿಯಂತಿದ್ದವು. ಕಷ್ಟಪಟ್ಟು 9ನೇ ತರಗತಿಯವರೆಗೆ ಓದಿದೆ. ಆದರೆ ಯಾತನೆ ಶುರುವಾಯಿತು. ಯಾರೂ ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲವಲ್ಲ ಎಂಬ ಬೇಸರವಿತ್ತು. ಆಗಲೇ ನಾನು ಮನೆ ಬಿಡುವ ತೀರ್ಮಾನ ಮಾಡಿದೆ’ ಎಂದು ಪ್ರಿಯಾಂಕ ತನ್ನ ಬಾಲ್ಯದ ರೂಪಾಂತರವನ್ನು ನೆನೆಯುತ್ತಾರೆ.

ಮುಂದುವರಿದು `ಗೊರಗುಂಟೆಪಾಳ್ಯದ ಆ ವೇಶ್ಯೆಯರ ಮನೆ (ಹಮಾಮ್) ಸೇರಿಕೊಂಡಾಗ ನನಗಿನ್ನೂ 13 ವರ್ಷ ಗಂಡಾಗಿದ್ದ ನನಗೆ ಹೆಣ್ಣಾಗಬೇಕೆಂಬ ಆಸೆ ಹುಟ್ಟಿತು. ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ದುಡ್ಡು ಹೊಂದಿಸಲು ಮನೆ ಬಿಟ್ಟುಬಂದ ನಾನು ದೇಹ ಮಾರಿಕೊಳ್ಳಲು ಶುರುಮಾಡಿದೆ. ಹತ್ತು ವರ್ಷ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡಿರಬಹುದು. ಆ ಸಂದರ್ಭದಲ್ಲಿ ಹೆಚ್ಚಿನ ಗಂಡಸರು ನನ್ನೊಂದಿಗೆ ಕ್ರೂರವಾಗಿ ವರ್ತಿಸಿದ್ದಾರೆ. ಒಬ್ಬ ಮಾತ್ರ ಎಲ್ಲಾ ಕೆಲಸ ಮುಗಿದ ಮೇಲೆ `ನೀನು ಇಲ್ಲಿ ಯಾಕಿದ್ದೀಯಾ? ಈ ಲೋಕದಿಂದ ಹೊರ ಬಾ. ನೋಡಲು ಸುಂದರವಾಗಿದ್ದೀಯಾ. ಒಳ್ಳೆಯ ಕೆಲಸ ಮಾಡಿಕೊಂಡು ಬದುಕಿಕೊ’ ಎಂದು ಸಲಹೆ ನೀಡಿದ್ದ. ಆ ವ್ಯಕ್ತಿಯ ಮಾತು ಮುದ ನೀಡಿತು. ಈ ವೃತ್ತಿ ತೊರೆಯಬೇಕು ಎಂದು ಮೊದಲ ಬಾರಿ ಅನಿಸಿದ್ದೇ ಆಗ’ ಎನ್ನುತ್ತಾರೆ.

ಪ್ರಿಯಾಂಕ ಒಂದು ದಿನ ರಸ್ತೆ ಬದಿಯಲ್ಲಿ ಗಿರಾಕಿಗಳಿಗಾಗಿ ಕಾಯುತ್ತಿರುವಾಗ, ಮೂರುನಾಲ್ಕು ಮಂದಿ ಕಾರಿನಲ್ಲಿ ಎಲ್ಲಿಗೋ ಕರೆದೊಯ್ದು ಒಬ್ಬರ ಬಳಿಕ ಒಬ್ಬರು ಮೈಮೇಲೆ ಎರಗಿ ದುಡ್ಡು ಕೊಡದೆ ಓಡುತ್ತಾರೆ. ಈ ಘಟನೆ ಪ್ರಿಯಾಂಕಳನ್ನು ಘಾಸಿಗೊಳಿಸುತ್ತದೆ. `ಸೆಕ್ಸ್ ವರ್ಕ್ ಇನ್ನು ಸಾಕು’ ಅನ್ನಿಸುತ್ತದೆ. ಏನಾದರೂ ಸಾಧಿಸಬೇಕು ಎಂಬ ಭಾವನೆ ಮೊಳೆಯುತ್ತದೆ. ಈ ಸಂದರ್ಭಕ್ಕೆ ಎನ್‍ಜಿಒ ಸಂಸ್ಥೆ ಸಂಗಮ ನೆರವಿಗೆ ಬರುತ್ತದೆ. ಈ ಹಂತದಲ್ಲಿ 2010 ರಲ್ಲಿ ಜೈನ್ ಸಮೂಹ ಸಂಸ್ಥೆ ನಡೆಸುತ್ತಿರುವ ಎಫ್.ಎಂ. 90.4 ರೇಡಿಯೊ ಆಕ್ಟೀವ್ ಪ್ರಿಯಾಂಕಳನ್ನು ಸಂದರ್ಶಿಸಿ, ರೇಡಿಯೋ ಜಾಕಿಯನ್ನಾಗಿ ಸೇರಿಸಿಕೊಳ್ಳುತ್ತದೆ. ಇದೀಗ ಪ್ರತಿ ಗುರುವಾರ `ಯಾರಿವರು’ ಎನ್ನುವ ಜನಪ್ರಿಯ ಕಾರ್ಯಕ್ರಮದಲ್ಲಿ ಸ್ವತಃ ಪ್ರಿಯಾಂಕ ಟ್ರಾನ್ಸ್ ಜೆಂಡರ್ ಸಮುದಾಯದ ನೋವಿಗೆ ಧ್ವನಿಯಾಗಿದ್ದಾರೆ.

ಈಚೆಗೆ ಮುಂಬೈನ ಹಮ್ ಸಫರ್ ಸಂಸ್ಥೆಯು ಪ್ರಿಯಾಂಕ ನಡೆಸುವ ‘ಯಾರಿವರು?’ ಅತ್ಯುತ್ತಮ ಕಾರ್ಯಕ್ರಮ ಎಂದು ಪ್ರಶಸ್ತಿ ನೀಡಿದೆ. ಮುಂಬೈನ ರೇಡಿಯೋ ಕಾನೆಕ್ಸ್ ಸಂಸ್ಥೆಯು 2018ರಲ್ಲಿ ‘ಯಾರಿವರು?’ ಕಾರ್ಯಕ್ರಮಕ್ಕೆ ‘ಗೋಲ್ಡನ್ ಅವಾರ್ಡ್‘ ಪ್ರಶಸ್ತಿ ನೀಡಿತ್ತು. ಇದರೊಂದಿಗೆ, ಸುವರ್ಣ ರಾಜ್ಯ ಪ್ರಶಸ್ತಿ, ಯುವ ಸಾಧಕಿ ಪ್ರಶಸ್ತಿ, ನಮ್ಮ ಬೆಂಗಳೂರು ಪ್ರಶಸ್ತಿ, 2018ರ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಒಳಗೊಂಡಂತೆ, ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಎಂದು ‘ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್’ನಲ್ಲಿ ಪ್ರಿಯಾಂಕ ಹೆಸರು ಸೇರಿಕೊಂಡಿದೆ. ಪ್ರಿಯಾಂಕಳ ಸಾಧನೆಯ ಹಾದಿ ಗುರುತಿಸಿ ವಿವಿಧ ಸಂಸ್ಥೆಗಳು 25ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಿವೆ. ನಟ ಧನಂಜಯ ಅವರೊಂದಿಗೆ ‘ಜಯನಗರ 4ನೇ ಬ್ಲಾಕ್’ ಕಿರುಚಿತ್ರದಲ್ಲಿ ನಟಿಸಿ ಪ್ರಿಯಾಂಕ ಗಮನ ಸೆಳೆದಿದ್ದಾಳೆ. ಇದೇ ದಾರಿಯಲ್ಲಿ ಸೌಮ್ಯ, ಏ ಮಾಮ, ನೀನ್ ಗಂಡ್ಸ ಹೆಂಗ್ಸ, ಅವ್ನಿ, ಸಿದ್ಧಿ ಸೀರೆ ಹೀಗೆ ಅನೇಕ ಕಿರುಚಿತ್ರಗಳಲ್ಲಿ ಪ್ರಿಯಾಂಕ ನಟಿಸಿದ್ದಾಳೆ. ಪಯಣ ಎನ್ನುವ ಎನ್.ಜಿ.ಓ ಸಹಾಯದಿಂದ ಮೆನಿ ಕ್ವೀನ್ಸ್ ಪ್ರಾಜೆಕ್ಟ್ ನಲ್ಲಿ ಸಂಜೋತ ತೆಲಂಗ್ ಅವರು ಪ್ರಿಯಾಂಕ ಅವರನ್ನು ಅಂತಾರಾಷ್ಟ್ರೀಯ ಮಟ್ಟದ ಫ್ಯಾಶನ್ ಶೋಗೆ ಫೋಟೋಗ್ರಫಿ ಮಾಡಿದ್ದರು. ಪ್ಯಾರಿಸ್‍ನಲ್ಲಿ ಪ್ರಿಯಾಂಕ ಮಿಂಚಿದ್ದರು. ಈ ಕುರಿತು ಬಿ.ಬಿ.ಸಿ ವರದಿ ಮಾಡಿತ್ತು. ಹೀಗೆ ರಸ್ತೆ ಬದಿ ನಿಂತು ಗಿರಾಕಿಗಳಿಗಾಗಿ ಕಾಯುತ್ತಿದ್ದ ಪ್ರಿಯಾಂಕ ತಾನೆ ಟ್ರಾನ್ಸ್ ಜೆಂಡರ್ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

`ಹತ್ತು ವರ್ಷದ ಬಳಿಕ ಮನೆಯವರು ನನ್ನನ್ನು ಒಪ್ಪಿಕೊಂಡಿದ್ದಾರೆ. ನಾನು ಇದೀಗ ಪೋಷಕರೊಂದಿಗೆ ಗಿರಿನಗರದಲ್ಲಿ ನೆಲೆಸಿದ್ದೇನೆ. ಅವರನ್ನು ನಾನೇ ಸಲಹುತ್ತಿದ್ದೇನೆ. ಮದುವೆ ಆಗಬೇಕೆಂಬ ಆಸೆ ಇದೆ. ನನ್ನ ಮನಸ್ಸನ್ನು ಅರ್ಥಮಾಡಿಕೊಂಡು ಬದುಕುವ ಹುಡುಗ ಸಿಕ್ಕಿದರೆ ವಿವಾಹವಾಗಿ ಒಂದು ಮಗುವನ್ನು ದತ್ತು ತೆಗೆದುಕೊಳ್ಳುತ್ತೇನೆ. ಇಷ್ಟು ವರ್ಷಗಳ ನನ್ನ ಅನುಭವಗಳ ಕುರಿತು ಪುಸ್ತಕ ಬರೆಯುತ್ತಿದ್ದೇನೆ. ಕಾರ್ ಡ್ರೈವಿಂಗ್, ಇಂಗ್ಲಿಷ್ ಕಲಿಯುತ್ತಿದ್ದು ಶಿಕ್ಷಣ ಮುಂದುವರಿಸಬೇಕೆಂಬ ಆಸೆ ಇದೆ. ನೃತ್ಯವೆಂದರೆ ಇಷ್ಟ. ಹಲವು ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ್ದೇನೆ. ರೇಡಿಯೋ ಜಾಕಿ ಎಂದು ಇದೀಗ ಎಲ್ಲರೂ ನನ್ನನ್ನು ಗೌರವಿಸುತ್ತಾರೆ. ಇದು ಬದುಕಿನ ಬಗ್ಗೆ ಪ್ರೀತಿ ಮೂಡಿಸಿದೆ. ಆದರೆ ನನ್ನ ಅದೆಷ್ಟೋ ಸ್ನೇಹಿತರು ಇನ್ನೂ ಆ ವೇಶ್ಯಾಗೃಹಗಳಲ್ಲಿ ಕರಗುತ್ತಿದ್ದಾರೆ. ಖಂಡಿತ ಅವರಿಗೆಲ್ಲಾ ಸಹಾಯ ಮಾಡುವ ತುಡಿತವಿದೆ’ ಎಂದು ಪ್ರಿಯಾಂಕ ತನ್ನ ಕನಸು ಕಾಣ್ಕೆಗಳನ್ನು ಹೇಳಿಕೊಳ್ಳುತ್ತಾರೆ. ಪ್ರಿಯಾಂಕಳ ಕನಸುಗಳು ಈಡೇರಲಿ, ಮತ್ತಷ್ಟು ಎತ್ತರೆತ್ತರಕ್ಕೆ ಬೆಳೆದು ಟ್ರಾನ್ಸ್ ಜೆಂಡರ್ ಸಮುದಾಯದಲ್ಲಿ ಹೊಸ ಕನಸುಗಳ ಕಟ್ಟಲು ಪ್ರೇರಣೆಯಾಗಲಿ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here