Homeಚಳವಳಿದೆಹಲಿ ಪೊಲೀಸ್ ದೌರ್ಜನ್ಯದ ಕತೆ ಹೇಳಿದ ಜಾಮಿಯಾ ವಿಡಿಯೋಗಳು

ದೆಹಲಿ ಪೊಲೀಸ್ ದೌರ್ಜನ್ಯದ ಕತೆ ಹೇಳಿದ ಜಾಮಿಯಾ ವಿಡಿಯೋಗಳು

ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕಿದ್ದು ಅಹಿಂಸಾತ್ಮಕ ಚಳವಳಿಗಳಿಂದ. ಇದೇ ಅಹಿಂಸಾಮಾರ್ಗವನ್ನು ಈ ದೇಶದ ಜನ ಈವರೆಗೆ ಅನುಸರಿಸಿಕೊಂಡು ಬಂದಿದ್ದಾರೆ. ದೇಶದ ಬಹುಸಂಖ್ಯಾಕ ಪ್ರಜೆಗಳು ಈಗಲೂ ಅಹಿಂಸೆಯಲ್ಲಿ ನಂಬಿಕೆ ಇರಿಸಿರುವುದು ನಮ್ಮ ಅದೃಷ್ಟ.

- Advertisement -
- Advertisement -

ಬಹುಜನ ಭಾರತ : ಡಿ.ಉಮಾಪತಿ

ಧರ್ಮದ ಆಧಾರದಲ್ಲಿ ಪೌರತ್ವವನ್ನು ತೀರ್ಮಾನಿಸುವ ಸಿಎಎ ಕಾಯಿದೆಯ ವಿರುದ್ಧ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಡಿಸೆಂಬರ್ 15ರಂದು ಪ್ರತಿಭಟನಾ ಪ್ರದರ್ಶನ ನಡೆಸಿದ್ದರು. ಮೆರವಣಿಗೆ ನಡೆಸಲು ಅನುಮತಿ ಸಿಗಲಿಲ್ಲ. ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಇಡಲಾಯಿತು.

ವಿದ್ಯಾರ್ಥಿಗಳೇ ಈ ಗಲಭೆಕೋರರೆಂದು ಬಗೆದ ಪೊಲೀಸರು ವಿಶ್ವವಿದ್ಯಾಲಯದ ಆಡಳಿತದ ಅನುಮತಿಯಿಲ್ಲದೆ ವಿವಿ ಆವರಣಕ್ಕೆ ನುಗ್ಗಿದ್ದರು. ವಿದ್ಯಾರ್ಥಿಗಳನ್ನು ಥಳಿಸಿದ್ದರು. ವಿವಿಯ ಗ್ರಂಥಾಲಯಕ್ಕೂ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಚಚ್ಚಿದ್ದ ಆಪಾದನೆಯನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದರು. ತಾವು ಗುಂಡು ಹಾರಿಸಿದ ಆಪಾದನೆಯನ್ನೂ ಅವರು ತಳ್ಳಿ ಹಾಕಿದ್ದರು. ವಿಶ್ವವಿದ್ಯಾಲಯದ ಆವರಣವನ್ನು ನುಗ್ಗಿ ಅಲ್ಲಿನ ಪೀಠೋಪಕರಣಗಳು ಮತ್ತು ವಾಹನಗಳನ್ನು ಹಾಗೂ ಸಿ.ಸಿ.ಟೀವಿಗಳನ್ನು ಚಚ್ಚಿ ಹಾಕಲಿಲ್ಲ ಎಂದಿದ್ದರು. ಆದರೆ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದ್ದು ಹೌದೆಂಬುದು ದೆಹಲಿ ಪೊಲೀಸ್ ಆಂತರಿಕ ವಿಚಾರಣೆಯಲ್ಲಿ ತಿಳಿದುಬಂದಿತ್ತು. ಗ್ರಂಥಾಲಯ ಪ್ರವೇಶಿಸಲಿಲ್ಲ ಎಂಬ ಅವರ ಸುಳ್ಳು ಕೂಡ ಇದೀಗ ಬಯಲಾಗಿದೆ. ಭಾನುವಾರ ಮತ್ತು ಸೋಮವಾರ ಹೊರಬಿದ್ದ ಜಾಮಿಯಾ ವಿವಿ ಸಿಸಿ ಟೀವಿ ವಿಡಿಯೋಗಳು ಪೊಲೀಸರ ದೌರ್ಜನ್ಯ ಮತ್ತು ಸುಳ್ಳುಗಳ ಮೇಲಿನ ಪರದೆ ಸರಿಸಿವೆ. ಸಿಸಿ ಟೀವಿಯ ಕ್ಯಾಮೆರಾಗಳನ್ನು ಚಚ್ಚಿ ಹಾಕುತ್ತಿರುವ ದೃಶ್ಯಗಳೂ ದಾಖಲಾಗಿವೆ. ತಾವು ಮಾಡಿದ್ದು ನ್ಯಾಯವೇ ಆಗಿದ್ದಲ್ಲಿ ಸಿ.ಸಿ. ಟೀವಿ ಕ್ಯಾಮೆರಾಗಳನ್ನು ಒಡೆದುಹಾಕುವ ಪ್ರಮೇಯವಾದರೂ ಏನಿತ್ತು?

ವಿಡಿಯೋ ನೋಡಿ

ಜಾಮಿಯ

ಜಾಮಿಯ ಮಿಲಿಯ ವಿವಿಯ ಲೈಬ್ರರಿಗೆ ನುಗ್ಗಿ ಪೊಲೀಸರ ದೌರ್ಜನ್ಯ.. ಮೊದಲನೇ ವಿಡಿಯೋ

Posted by Naanu Gauri on Monday, February 17, 2020

ಗ್ರಂಥಾಲಯದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳನ್ನು ಕ್ರಿಮಿನಲ್‌ಗಳಂತೆ ನಡೆಸಿಕೊಂಡು, ಬರ್ಬರವಾಗಿ ಥಳಿಸಿರುವ ದೃಶ್ಯಗಳು ಈ ವಿಡಿಯೋ ಕ್ಲಿಪ್‌ಗಳಲ್ಲಿವೆ. ಅವರು ನಿಜಕ್ಕೂ ಗಲಭೆಕೋರರೇ ಆಗಿದ್ದರೆ ಕೇವಲ ಥಳಿಸಿ ಯಾಕೆ ಸುಮ್ಮನಾಗಬೇಕಿತ್ತು, ಬಂಧಿಸಬಹುದಿತ್ತಲ್ಲ? ವಿದ್ಯಾರ್ಥಿಯೊಬ್ಬ ಕೈಯಲ್ಲಿ ಕಲ್ಲು ಹಿಡಿದಿದ್ದ, ಗಲಭೆಕೋರರು ಗ್ರಂಥಾಲಯದಲ್ಲಿ ಆಶ್ರಯ ಪಡೆದಿದ್ದರು ಎಂದು ದೆಹಲಿ ಪೊಲೀಸರು ತಮ್ಮ ದುರ್ವರ್ತನೆಗೆ ಸಮಜಾಯಿಷಿ ನೀಡುವ ಪ್ರಯತ್ನ ನಡೆಸಿದ್ದಾರೆ. ವಿದ್ಯಾರ್ಥಿಯ ಕೈಯಲ್ಲಿದ್ದ ವಸ್ತು ಆತನ ಪರ್ಸ್ ಎಂದೂ, ಕಲ್ಲು ಅಲ್ಲವೆಂದೂ ಆಲ್ಟ್ ನ್ಯೂಸ್ ತನಿಖೆಯಿಂದ ತಿಳಿದುಬಂದಿದೆ.

ಲಾಠಿ ಏಟುಗಳಿಂದಾಗಿ ವಿದ್ಯಾರ್ಥಿ ಮಿನ್ಹಾಜುದ್ದೀನ್ ಕಣ್ಣು ಕಳೆದುಕೊಂಡಿದ್ದಾನೆ. ನ್ಯಾಯ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನೋಟೀಸು ನೀಡಿದೆ. ಎರಡೂ ಕಾಲು ಕಳೆದುಕೊಂಡಿರುವ ಮುಜೀಬ್ ಕೂಡ ನ್ಯಾಯಾಲಯದ ಕದ ಬಡಿದಿದ್ದಾನೆ. ಇಬ್ಬರೂ ನ್ಯಾಯಯುತ ವಿಚಾರಣೆ ಮತ್ತು ಹಣಕಾಸು ಪರಿಹಾರ ಕೋರಿದ್ದಾರೆ.

ವಿದ್ಯಾರ್ಥಿಯೊಬ್ಬನ ಕಾಲುಗಳ ಮೇಲೆ ಸತತ ಲಾಠಿ ಬೀಸಿ ಮೂಳೆಗಳನ್ನು ಮುರಿಯಲಾಗುತ್ತದೆ. ಮುರಿದ ಕಾಲುಗಳ ಆ ವಿದ್ಯಾರ್ಥಿಯನ್ನು ಓಡು ಎನ್ನಲಾಗುತ್ತದೆ. ಕಾಲು ಮುರಿದಿವೆ ಓಡಲಾರೆ ಎನ್ನುವ ವಿದ್ಯಾರ್ಥಿಯ ಮೇಲೆ ಪೊಲೀಸರ ಎದೆಯಲ್ಲಿ ತುಸುವಾದರೂ ಸಹಾನುಭೂತಿ ಹುಟ್ಟುವುದಿಲ್ಲ. ಬದಲಾಗಿ ಮುರಿದ ಅವೇ ಕಾಲುಗಳ ಮೇಲೆ ಮತ್ತೆ ಮತ್ತೆ ಲಾಠಿ ಏಟುಗಳು ಬೀಳುತ್ತವೆ. ಇದೆಂತಹ ಕ್ರೌರ್ಯ?

ಅಶ್ರುವಾಯು ಸಿಡಿಸಿದ್ದ ಕಾರಣ ಉಸಿರಾಟ ಕಷ್ಟವಾಗಿತ್ತು. ಕರವಸ್ತ್ರ ಮೂಗಿಗೆ ಕಟ್ಟಿಕೊಂಡಿದ್ದರು. ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸುತ್ತಿದ್ದ ಮತ್ತು ಸಿ.ಸಿ.ಟೀವಿ ಕ್ಯಾಮೆರಾಗಳನ್ನು ಒಡೆದುಹಾಕುತ್ತಿದ್ದ ಪೊಲೀಸರು ಕರವಸ್ತ್ರಗಳಿಂದ ಮುಖ ಮುಚ್ಚಿಕೊಂಡಿದ್ದು ಯಾಕೆ ಎಂದು ವಿವರಣೆ ನೀಡಬೇಕಿದೆ. ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಗಳನ್ನು ಒಡೆದು ಹಾಕಲಾಗಿದೆ.

ಎರಡನೇ ವಿಡಿಯೋ

ಜಾಮಿಯ

ದೆಹಲಿ ಪೊಲೀಸರಿಂದ ಜಾಮಿಯ ವಿದ್ಯಾರ್ಥಿಗಳ ಮೇಲೆ ಪೈಶಾಚಿಕ ದಾಳಿ: ಎರಡನೇ ವಿಡಿಯೋ

Posted by Naanu Gauri on Monday, February 17, 2020

ಕೈಮುರಿಸಿಕೊಂಡವರು ಮತ್ತು ಕಣ್ಣು ಕಳೆದುಕೊಂಡವರನ್ನು ರಾತ್ರಿಯೆಲ್ಲ ಪೊಲೀಸ್ ಠಾಣೆಯಲ್ಲಿ ನೀರು ಅನ್ನ ಚಿಕಿತ್ಸೆ ಇಲ್ಲದೆ ಕೊಳೆ ಹಾಕಲಾಗುತ್ತದೆ. ಒಬ್ಬಿಬ್ಬರು ಸತ್ತರೆ ಏನೂ ಪ್ರಪಂಚ ಮುಳುಗಿಹೋಗುವುದಿಲ್ಲ ಎಂದು ಪೊಲೀಸರು ಹೇಳುತ್ತಾರೆ.

ವಿದ್ಯಾರ್ಥಿಗಳ ಭಯಭೀತ ಕಣ್ಣುಗಳು, ಕರುಣೆ ತೋರುವಂತೆ ಮುಗಿದು ಎದೆಮೇಲೆ ಜೋಡಿಸಿದ ಹಸ್ತಗಳು…ಮರುಕವಿಲ್ಲದೆ ಕೈಕಾಲು ಮುರಿಯುವಂತೆ ಬಾರಿಸುವ ಪೊಲೀಸರು. ಆಜಾದೀ ಬೇಕೇನ್ರೋ ನಿಮಗೆ ಎಂದು ಛೇಡಿಸಿದ್ದಲ್ಲದೆ, ಕೋಮುವಾದೀ ಬೈಗಳ ಪ್ರಯೋಗವನ್ನೂ ಪೊಲೀಸರು ಮಾಡಿದ್ದಾರೆ. ಈ ದೌರ್ಜನ್ಯದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಎರಡು ತಿಂಗಳೇ ಉರುಳಿದ್ದರೂ ಪೊಲೀಸ್ ದೌರ್ಜನ್ಯದ ವಿರುದ್ಧ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಜೆ.ಎನ್.ಯು. ಪ್ರವೇಶಿಸಿ ವಿದ್ಯಾರ್ಥಿಗಳನ್ನು ಬಡಿಯುವ ಮುಸುಕುಧಾರಿಗಳಿಗೆ ಪೊಲೀಸರೇ ಮುಂದೆ ನಿಂತು ರಕ್ಷಣೆ ನೀಡುತ್ತಾರೆ. ಕ್ಯಾಂಪಸ್ ಒಳಗೆ ಪ್ರವೇಶಿಸಲು ಜೆ.ಎನ್.ಯು. ಆಡಳಿತದ ಅನುಮತಿಯಿಲ್ಲ ಎಂದು ನೆವ ಹೇಳುತ್ತಾರೆ. ಪೊಲೀಸರ ಈ ಸುಳ್ಳು ಮತ್ತು ಆಷಾಡಭೂತಿತನ ಜಾಮಿಯಾ ಪ್ರಕರಣದಲ್ಲಿ ಬಟ್ಟಬಯಲಾಗಿದೆ.

ಶಾಹೀನ್ ಬಾಗ್‌ನ ಶಾಂತಿಯುತ ಪ್ರತಿಭಟನೆಯನ್ನು ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಿನಿ ಪಾಕಿಸ್ತಾನ ಎಂದು ಕರೆದಿದ್ದರು ಬಿಜೆಪಿ ನಾಯಕರು. ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಭಯೋತ್ಪಾದಕ ಎಂದು ಕೇಂದ್ರ ಮಂತ್ರಿಗಳೇ ಬಣ್ಣಿಸಿದ್ದರು. ಆದರೆ ಮಿನಿ ಪಾಕಿಸ್ತಾನದ ಪ್ರತಿಭಟನಾಕಾರರ ಜೊತೆ ಮಾತುಕತೆಯ ಮಾರ್ಗವನ್ನು ಸುಪ್ರೀಂಕೋರ್ಟ್ ತೆರೆದಿದೆ. ಅದಕ್ಕಾಗಿ ಸಂಧಾನಕಾರರನ್ನು ನೇಮಕ ಮಾಡಿದೆ. ಪ್ರತಿಭಟಿಸುವ ಹಕ್ಕು ಪ್ರಜೆಗಳ ಮೂಲಭೂತ ಹಕ್ಕು ಎಂದು ಸಾರಿದೆ. ‘ಭಯೋತ್ಪಾದಕ’ ಕೇಜ್ರೀವಾಲ್ ಮತ್ತು ಅವರ ಪಕ್ಷವನ್ನು ದೆಹಲಿಯ ಜನರು ಭಾರೀ ಬಹುಮತದಿಂದ ಆರಿಸಿ ಮೂರನೆಯ ಬಾರಿಗೆ ಅಧಿಕಾರ ನೀಡಿದ್ದಾರೆ.

ಕಾರ್ಯಾಂಗದ ದಬ್ಬಾಳಿಕೆಯ ವಿರುದ್ಧ ನ್ಯಾಯಾಂಗ ಅಲ್ಲಲ್ಲಿಯಾದರೂ ದನಿ ಎತ್ತತೊಡಗಿರುವುದು ಕಾರ್ಮೋಡದಲ್ಲೊಂದು ಬೆಳ್ಳಿರೇಖೆ ಮೂಡಿದ ಬೆಳವಣಿಗೆ. ಬಾಂಬೆ ಹೈಕೋರ್ಟಿನ ಔರಂಗಾಬಾದ್ ನ್ಯಾಯಪೀಠದ ಟಿಪ್ಪಣಿಗಳು ಮತ್ತು ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಭಾಷಣ ಈ ದಿಸೆಯಲ್ಲಿ ಗಮನಿಸಲೇಬೇಕಾದಂತಹವು.

”ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಜನರನ್ನು ದೇಶದ್ರೋಹಿಗಳು, ದೇಶವಿರೋಧಿಗಳು ಎಂದು ಕರೆಯುವಂತಿಲ್ಲ. ಕಾನೂನೊಂದನ್ನು ವಿರೋಧಿಸಿದಾಕ್ಷಣ ಯಾರೂ ದೇಶವಿರೋಧಿಗಳಾಗಿ ಬಿಡುವುದಿಲ್ಲ’’ ಎಂದು ಔರಂಗಾಬಾದ್ ನ್ಯಾಯಪೀಠ ಸಾರಿ ಹೇಳಿದೆ.

”ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕಿದ್ದು ಅಹಿಂಸಾತ್ಮಕ ಚಳವಳಿಗಳಿಂದ. ಇದೇ ಅಹಿಂಸಾಮಾರ್ಗವನ್ನು ಈ ದೇಶದ ಜನ ಈವರೆಗೆ ಅನುಸರಿಸಿಕೊಂಡು ಬಂದಿದ್ದಾರೆ. ದೇಶದ ಬಹುಸಂಖ್ಯಾಕ ಪ್ರಜೆಗಳು ಈಗಲೂ ಅಹಿಂಸೆಯಲ್ಲಿ ನಂಬಿಕೆ ಇರಿಸಿರುವುದು ನಮ್ಮ ಅದೃಷ್ಟ.’’

”ನಾವು ಜನತಾಂತ್ರಿಕ ಗಣರಾಜ್ಯ ಎಂಬುದನ್ನು ಮರೆಯಕೂಡದು. ನಮ್ಮ ಸಂವಿಧಾನ ನಮಗೆ ಕಾನೂನಿನ ಆಳ್ವಿಕೆಯನ್ನು ನೀಡಿದೆಯೇ ವಿನಾ ಬಹುಮತದ ಆಳ್ವಿಕೆಯನ್ನು ಅಲ್ಲ. ಪೌರತ್ವ ತಿದ್ದುಪಡಿ ಕಾಯಿದೆಯಂತಹ ಕಾಯಿದೆಯನ್ನು ರೂಪಿಸಿದಾಗ, ಈ ಕಾಯಿದೆ ತಮ್ಮ ಹಿತದ ವಿರುದ್ಧ ಎಂದು ಕೆಲವರು ವಿಶೇಷವಾಗಿ ಮುಸಲ್ಮಾನರು ಭಾವಿಸುವ ಸಾಧ್ಯತೆ ಇದೆ. ಅದು ಅವರ ಗ್ರಹಿಕೆ ಮತ್ತು ನಂಬಿಕೆ.’’

ನ್ಯಾಯಮೂರ್ತಿ ಚಂದ್ರಚೂಡ್ ಅವರು ಕಾನೂನು ಪದವೀಧರರನ್ನು ಉದ್ದೇಶಿಸಿ ಹೇಳಿದ ಮಾತುಗಳು ಹೀಗಿವೆ- ಎದ್ದು ನಿಂತು ಭಿನ್ನಮತ ವ್ಯಕ್ತಪಡಿಸುವುದು ಬಹಳ ಮುಖ್ಯ. ವಿಷಯಕ್ಕೆ ಮತ್ತೊಂದು ಭಿನ್ನ ಮುಖವಿದೆಯೆಂದು ನಿಮ್ಮ ಅಭಿಪ್ರಾಯ ಮತ್ತು ದಿಟ್ಟತನವನ್ನು ಪ್ರಕಟಿಸುವ ಶಕ್ತಿಯೇ ಇತರರನ್ನು ಒಂದು ಗಳಿಗೆ ನಿಂತು ಆಲೋಚಿಸಲು ಹಚ್ಚುತ್ತದೆ. ಮುಕ್ತ ಅಭಿವ್ಯಕ್ತಿಯನ್ನು ಅದುಮಿ ಹಾಕುವಂತಹ ಭಯಭೀತ ವಾತಾವರಣ ಸೃಷ್ಟಿಸುವುದು ಮುಕ್ತ ಮತ್ತು ಬಹುಮುಖೀ ಸಮಾಜದ ಆಶಯವನ್ನು ಕಟ್ಟಿಕೊಟ್ಟಿರುವ ಸಂವಿಧಾನಕ್ಕೆ ವ್ಯತಿರಿಕ್ತ ಕ್ರಿಯೆ. ಕಾಶ್ಮೀರದಲ್ಲಿ ಸಾರ್ವಜನಿಕ ಭದ್ರತಾ ಕಾಯಿದೆಯಡಿ ನಡೆದಿರುವ ರಾಜಕೀಯ ಬಂಧನಗಳು, ಉತ್ತರಪ್ರದೇಶದ ಉದ್ದಗಲಕ್ಕೆ ಸೆಕ್ಷನ್ 144ರ ಬೇಕಾಬಿಟ್ಟಿ ಬಳಕೆ, ದೇಶದ ನಾನಾಭಾಗಗಳಲ್ಲಿ ಪದೇಪದೇ ಅಂತರ್ಜಾಲ ಸ್ಥಗಿತ, ವಸಾಹತು ಕಾಲದ ದೇಶದ್ರೋಹದ ಕಾಯಿದೆಯ ವ್ಯಾಪಕ ಪ್ರಯೋಗ ನಡೆದಿದೆ….. ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವ ಈ ಎಲ್ಲ ಕರಾಳ ಪ್ರಯತ್ನಗಳು ಬಹುಮುಖೀ ಭಾರತೀಯತೆಯ ಉಲ್ಲಂಘನೆ.

ಗುಜರಾತಿನ ಅಹ್ಮದಾಬಾದ್ ರಾಷ್ಟ್ರೀಯ ಕಾನೂನು ಶಾಲೆಯ ಘಟಿಕೋತ್ಸವದಲ್ಲಿ ಮೊನ್ನೆ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳ ಮಾತುಗಳನ್ನು ಬೇರೆ ಯಾರಾದರೂ ಆಡಿದ್ದರೆ, ಈ ಹೊತ್ತಿಗೆ ಅವರ ಮೇಲೆ ದೇಶದ್ರೋಹದ ಮೊಕದ್ದಮೆ ಹೂಡಿ ಬಂಧಿಸಲಾಗುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಜನ್ಮ ಜಾಲಾಡಲಾಗುತ್ತಿತ್ತು. ನ್ಯಾಯಮೂರ್ತಿಯವರ ಅದೃಷ್ಟ ಚೆನ್ನಾಗಿದೆ. ಯಾಕೆಂದರೆ ಅವರು ಈ ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಮೂರ್ತಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...