ಮಸ್ಕಿಯಿಂದ ರಾಜ್ಯದೆಲ್ಲೆಡೆ ಹೋರಾಟದ ಹಾಡುಗಳನ್ನು ಪಸರಿಸಿದ ಜನಕವಿ ದಾನಪ್ಪ ನಿಲೋಗಲ್

ಚಳವಳಿಯ ಸಂಗಾತಿಯಾಗಿ, ಆಯಾ ಕಾಲದ ಬಿಕ್ಕಟ್ಟುಗಳನ್ನು, ಜನರನ್ನು ಎಚ್ಚರಿಸಬೇಕಾದ ವಿದ್ಯಮಾನಗಳನ್ನು ಸರಳವಾಗಿ ಜನರ ಲಯದಲ್ಲಿ ಹಾಡು ಕಟ್ಟಿ ಹಾಡುತ್ತಾರೆ. ನಂತರ ಈ ಹಾಡಿಗೆ ಕಾಲು ಬಂದೋ, ರೆಕ್ಕೆ ಬಂದೋ ಬೇರೆ ಬೇರೆ ಕಡೆಗಳಿಗೆ ಚಲಿಸುತ್ತವೆ. ಹೀಗೆ ಚಲಿಸುತ್ತಾ ಚಳವಳಿಗಳ ಸಂಗಾತಿಗಳಾಗುತ್ತವೆ.

ಎಲೆಮರೆ-26

  • ಅರುಣ್‌ ಜೋಳದ ಕೂಡ್ಲಿಗಿ

ಕರ್ನಾಟಕದ ಜನಪರ ಚಳವಳಿ, ಕಾರ್ಯಾಗಾರ, ಸಭೆಗಳ ಹೋರಾಟದ ಹಾಡುಗಳಲ್ಲಿ ಒಂದಾದರೂ ಮಸ್ಕಿಯ ದಾನಪ್ಪ ನಿಲೋಗಲ್ ರಚನೆ ಇದ್ದೇ ಇರುತ್ತೆ. ಹೀಗೆ ಹಾಡುವಾಗ ಕೆಲವೊಮ್ಮೆ ಈ ಹಾಡನ್ನು ದಾನಪ್ಪ ಕಟ್ಟಿದ್ದು ಎನ್ನುವುದೂ ಮರೆಯಾಗುತ್ತದೆ. ಅಂದರೆ ದಾನಪ್ಪನ ಹಾಡುಗಳು ಜನಪದ ಗೀತೆಗಳಂತೆ ನಾಡಿನಾದ್ಯಂತ ಹೆಸರಿನ ಹಂಗಿಲ್ಲದೆ ಚಲಿಸುತ್ತಿವೆ. ಹೀಗೆ ಜನರನ್ನು ತಲುಪುವುದೇ ಮುಖ್ಯ ನನ್ನ ಹೆಸರನ್ನು ಹೇಳುವ ಅಗತ್ಯವಿಲ್ಲ ಎಂದು ಸ್ವತಃ ದಾನಪ್ಪ ತನ್ನ ಹಾಡನ್ನು ಸಾರ್ವಜನಿಕ ವಲಯಕ್ಕೆ ಒಪ್ಪಿಸಿದ್ದಾರೆ. ಹೀಗೆ ಎಂಬತ್ತರ ದಶಕದಿಂದಲೂ ದಲಿತ ಚಳವಳಿಯ ಸಂಗಾತಿಯಾಗಿ, ಆಯಾ ಕಾಲದ ಬಿಕ್ಕಟ್ಟುಗಳನ್ನು, ಜನರನ್ನು ಎಚ್ಚರಿಸಬೇಕಾದ ವಿದ್ಯಮಾನಗಳನ್ನು ಸರಳವಾಗಿ ಜನರ ಲಯದಲ್ಲಿ ಹಾಡು ಕಟ್ಟಿ ಹಾಡುತ್ತಾರೆ. ನಂತರ ಈ ಹಾಡಿಗೆ ಕಾಲು ಬಂದೋ, ರೆಕ್ಕೆ ಬಂದೋ ಬೇರೆ ಬೇರೆ ಕಡೆಗಳಿಗೆ ಚಲಿಸುತ್ತವೆ. ಹೀಗೆ ಚಲಿಸುತ್ತಾ ಚಳವಳಿಗಳ ಸಂಗಾತಿಗಳಾಗುತ್ತವೆ.

ದಾನಪ್ಪ ಮಸ್ಕಿಯಲ್ಲೇ ಇದ್ದರೂ ಆತನ ಹಾಡುಗಳು ದಣಿವರಿಯದೆ ಚಳವಳಿಯಲ್ಲಿ ನಿರತವಾಗಿರುತ್ತವೆ. ‘ದಾನಪ್ಪನ ಜತೆ ಹಾಡಿದವರು, ಹಾಡುಕಟ್ಟಿದವರು ಅದನ್ನೇ ಏಣಿ ಮಾಡಿಕೊಂಡು ಕಳೆದು ಹೋದರೂ, ದಾನಪ್ಪ ಮಾತ್ರ ಈಗಲೂ ಹಾಡನ್ನೇ ಬದುಕುತ್ತಿದ್ದಾರೆ. ಇದೇ ನನ್ನಂಥವರಿಗೆ ಸೋಜಿಗ’ ಎನ್ನುವ ಕೊಟಗಾನಹಳ್ಳಿ ರಾಮಯ್ಯನವರ ಮಾತುಗಳು ದಾನಪ್ಪನವರ ಬದ್ಧತೆಗೆ ಸಾಕ್ಷಿಯಾಗಿವೆ.

’ಹೈದರಾಬಾದ್ ಕರ್ನಾಟಕ ಅಂದ್ರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದದ್ದು ಅಂತಾರೆ ಅದು ಸತ್ಯ, ಅದರ ಜೊತೆಗೆ ಹಿಂದುಳಿಯೋಕೆ ಕಾರಣ ಏನು ಅಂತ ನೋಡುವಾಗ ಇಲ್ಲಿ ಫ್ಯೂಡಲ್ ಸಂಸ್ಕೃತಿ ಜೀವಂತವಾಗಿರುವ ನೆಲ. ಅಂತೆಯೇ ಸ್ವಾತಂತ್ರ್ಯ ಸಿಕ್ಕು ಒಂದು ವರ್ಷದ ನಂತರ ಸ್ವಾತಂತ್ರ್ಯ ಸಿಕ್ಕ ಪ್ರದೇಶ. ಹೈದರಾಬಾದ್ ನಿಜಾಮನ ಆಡಳಿತವಿದ್ದ ಕಾರಣ ಫ್ಯೂಡಲ್ ವ್ಯವಸ್ಥೆಯೂ ಜೀವಂತವಾಗಿದ್ದು, ಪ್ರತಿಯೊಂದು ಹಳ್ಳಿಯಲ್ಲಿಯೂ ದಲಿತ ಮತ್ತು ಅಸ್ಪೃಶ್ಯರ ಜೀವನ ಗಂಭೀರವಾದ ಕಡು ಬಡತನದಲ್ಲಿತ್ತು. ಇವರಿಗೆ ಭೂಮಿ ಇಲ್ಲ, ಓದು ಇಲ್ಲ. ಹೀಗಿರುವಾಗ ಗೌಡ್ರು, ಜಮೀನ್ದಾರರ ದಬ್ಬಾಳಿಕೆಯ ಆಡಳಿತ. ಈ ಸ್ಥಿತಿಯಲ್ಲಿ ನನಗೆ ಓದಲು ಅವಕಾಶ ಸಿಕ್ಕದ್ದೇ ದೊಡ್ ವಿಷ್ಯ. ನಮ್ದು ನಿಲೋಗಲ್ ಆದ್ರೂ ಸಹ ಹತ್ತನ್ನೆರಡು ಕಿ.ಮೀ ದೂರದ ಹಟ್ಟಿ ಗೋಲ್ಡ್ ಮೈನ್ಸ್‌ನಲ್ಲಿ ನಮ್ಮಪ್ಪ ಕಾರ್ಮಿಕ ಆಗಿದ್ದ ಕಾರಣ ನನಗೆ ಓದೋಕೆ ಅವಕಾಶ ಸಿಕ್ತು. ಗೆದ್ದಲಗಟ್ಟಿ, ನಿಲೋಗಲ್‌ಗಳು ಧಣಿಗಳ ದರ್ಬಾರ್ ಇರೋ ಊರುಗಳು. ಅಕಸ್ಮಾತ್ ಕೂಲಿ ಆಗಿ ಕಳೆದು ಹೋಗೋನು ಓದಿ ಉಳಕಂಡೆ’ ಎಂದು ಬಾಲ್ಯದ ಅನುಭವಗಳನ್ನು ಹೇಳುತ್ತಾರೆ ದಾನಪ್ಪ.

’ನಮ್ಮ ಮನೆ ಎದುರು ಈರಣ್ಣನ ಕಟ್ಟೆ ಇತ್ತು. ಅಲ್ಲಿ ಭಜನಿ ಮಾಡತಿದ್ದರು. ನಾನು ಮಕ್ಕಂಡೇ ಈ ಭಜನಿ ಹಾಡುಗಳನ್ನು ಕೇಳಿಸಿಕೊಂಡು ಗುನುಗ್ತಾ ಇದ್ದೆ. ಹಿಮ್ಮೇಳವಾಗಿ ಭಜನಿಯಲ್ಲಿ ಕೂತು ಹಾಡತಿದ್ದೆ. ಕ್ರಿಶ್ಚಿಯನ್ ಮಾಸ್ ಗೀತೆಗಳ ಜತೆ ಹಾಡ್ತಿದ್ದೆ. ನಮ್ಮಪ್ಪ ಭಜನೆ ಪದಾನ ಚೊಲೋ ಹಾಡತಿದ್ದ. `ಗೂಳಿ ಬಂತು ಗೂಳಿ ಬಂತಣ್ಣಾ, ಗುರುಮಠಕೆ ತಕ್ಕ ಗೂಳಿ ಬಂತು ಗೂಳಿ ಬಂತಣ್ಣಾ..’ ತರಹದ ಜನಪದ ಭಜನೆಗಳು ನನ್ನೊಳಗೆ ಹಾಡಿನ ಲಯವನ್ನು ಕೂರಿಸ್ತಾ ಇದ್ವು. ’ನೀರ ನಿಲ್ಲದ ಬಾವಿ ತುಂಬುವುದೋ/ತುಂಬಿ ತುಳಕುವುದೋ/ಇರುವಿ ನೀರಡಿಸಿ ಬಂದು ಕುಡಿಯುವುದೋ/ಜಲ ಬತ್ತುವುದೋ/ ರೆಕ್ಕೆ ಇಲ್ಲದ ಪಕ್ಷಿ ಸುತ್ತುವುದೋ..’ ಈ ತರಹದ ತತ್ವಪದಗಳು ನನಗೆ ಹೆಚ್ಚು ಪ್ರಭಾವ ಬರ‍್ತಾ ಇದ್ವು. ಇಂತಹ ಹಿನ್ನೆಲೆಯ ಕಾರಣ ಇದೇ ಹಾಡಿಕೆ ಲಯಗಾರಿಕೆ ಚಳವಳಿಗೆ ದುಮುಕಿದ ಮೇಲೆ ಮತ್ತೆ ನನ್ನೊಳಗೆ ಹೊಸ ರೂಪ ಪಡೆದವು. ದಲಿತ ಕಲಾ ಮಂಡಳಿಯ ಹಾಡಿಕೆ, ಪದ ರಚನೆಗಳೂ ಆ ಕಾಲಕ್ಕೆ ನಮ್ಮನ್ನು ತುಂಬಾ ಪ್ರಭಾವ ಬೀರಿದ್ವು. ಪಿಚ್ಚಳ್ಳಿ ಶ್ರೀನಿವಾಸರ ಹಾಡುಗಳು ಆಗ ದೊಡ್ಡಮಟ್ಟದಲ್ಲಿ ಚಳವಳಿಯಲ್ಲಿ ಹಾಡಿಕೆಗೆ ಬಂದಿದ್ದವು. ಹೀಗಿರುವಾಗ ಹಿರೇನಗನೂರು ಹೋಟೆಲ್ ಪ್ರವೇಶ ಹೋರಾಟದ ಸಂದರ್ಭದಲ್ಲಿ ’ಅವತ್ತು ಸೋಮವಾರ, ಅಪ್ಪ ಬಸವನ ವಾರ’ ಅನ್ನೋ ಮೊದಲ ಹಾಡನ್ನ ಬರದೆ. ಎಂಬತ್ತರ ದಶಕದಲ್ಲಿ ಕ್ರಾಂತಿಕಾರಿ ಕವಿ ಗದ್ದರ್ ಅವರ ಕಾರ್ಯಕ್ರಮ ನೋಡಲು ಸಿಕ್ಕಿತು. ಜನಪರ ಸಾಹಿತ್ಯದ ಒಳ ತಿರುಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿತು. ’ವಂಚಿತರೇ ಈ ದೇಶದ ವಾರಸುದಾರರು’ ಎನ್ನುವ ಸ್ಪಷ್ಟ ಕಲ್ಪನೆ ಬಂದಿತು. ಜನ ಕಲಾ ಮಂಡಳಿಯ ನಂಟಿನಿಂದ ಚೌಡಕಿ ಕತೆ, ನೀಲಗಿರಿ, ಹೆಸರಾದ ತವರೂರು, ಕೊಡಗು ಹೀಗೆ ಆಯಾ ಕಾಲದ ವಿಷ್ಯಗಳನ್ನು ಹಾಡುಗಳನ್ನಾಗಿ ಬರೆಯೋದು ಹಾಡೋದು ಶುರುವಾತು.

ನನ್ನ ಪ್ರತಿಯೊಂದು ಹಾಡಿನ ಮೊದಲ ತಾಲೀಮು ನನ್ನ ಮನೆ. ನನ್ನ ಹೆಂಡ್ತಿ ಮೇರಿ (ಮರಿಯಮ್ಮ) ಮಕ್ಕಳಾದ ಸ್ನೇಹಲತಾ, ಪ್ರಶಾಂತ್, ಪ್ರಮೋದ್ ಇವರನ್ನು ಅದೆಷ್ಟೋ ರಾತ್ರಿಗಳು ನಿದ್ದೆಗೆಡಿಸಿ ಕೋರಸ್ಸಿಗೆ ಎಬ್ಸಿದ್ದು, ರಾಗ ಲಯ ತಿದ್ದಿ ತೀಡಿ ಹಾಡು ಹೊರಬರೋ ಹೊತ್ತಿಗೆ ಬೆಳಕರಿದದ್ದೂ ಇದೆ’ ಎಂದು ಹಾಡಿಕೆಯ ಜಾಡನ್ನು ದಾನಪ್ಪ ನೆನೆಯುತ್ತಾರೆ.

ಅಂಬೇಡ್ಕರ್ ಹೇಳುವ `ಓದು-ಹೋರಾಟ’ ಒಟ್ಟೊಟ್ಟಿಗೆ ಆಗಬೇಕೆಂಬ ಮಾತನ್ನು ದಾನಪ್ಪ ಅಕ್ಷರಶಃ ಪಾಲಿಸಿದ್ದರು. ಬಿ.ಕೆ ಅವರ ಮಾರ್ಗದರ್ಶನ, ದಲಿತ ಕಲಾ ಮಂಡಳಿಯ ಪಿಚ್ಚಳ್ಳಿ ಶ್ರೀನಿವಾಸ, ಮುನಿಸ್ವಾಮಿ ಮೊದಲಾದವರ ಹೋರಾಟದ ಹಾಡುಗಳ ಸ್ಪೂರ್ತಿ, ಇದೆಲ್ಲದರ ಪರಿಣಾಮ ಧಾರವಾಡ ಜಿಲ್ಲೆಯ ದ.ಸಂ.ಸದ ಚಟುವಟಿಕೆಗಳು ಹಳ್ಳಿಗಳತ್ತ ನಡೆದದ್ದು, ಬ್ಯಾಡಗಿ ತಾಲೂಕಿನ ದುಮ್ಮಿಹಾಳ ಘಾಳ ಪೂಜೆ ಭೂ ಹೋರಾಟ, ಧರಣಿ ಹೋರಾಟ, ಅರೆಸ್ಟು, ಧಿಕ್ಕಾರಗಳು ಇವೆಲ್ಲ ದಾನಪ್ಪನ ನಿತ್ಯದ ಒಡನಾಡಿಗಳಾದವು. ’ಬಿ.ಕೆಯವರ ನಿರಂತರ ಒಡನಾಟ, ರಾಮದೇವ ರಾಕೆ, ಹೆಚ್.ಗೋವಿಂದಯ್ಯ, ಶಿವಲಿಂಗಪ್ಪ (ಶಿವಮೊಗ್ಗ), ಸಿ.ಎಂ.ಮುನಿಯಪ್ಪ (ಕೋಲಾರ) ಎಂ.ವೆಂಕಟಸ್ವಾಮಿ, ದೇವನೂರ ಮಹಾದೇವ, ಕವಿ ಸಿದ್ಧಲಿಂಗಯ್ಯ, ಮೊದಲಾದವರ ಭೇಟಿ ಚರ್ಚೆ ಮಾತುಕತೆ ನನ್ನನ್ನು ಮತ್ತಷ್ಟು ಗಟ್ಟಿಯಾಗಿಸಿದವು’ ಎಂದು ದಾನಪ್ಪ ನೆನೆಯುತ್ತಾರೆ.

ಹೀಗೆ ದಾನಪ್ಪ ನಿಲೋಗಲ್ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೀಗೊಂದು ಹೋರಾಟದ ಹಾಡಿನ ಪರಂಪರೆಯನ್ನು ಹುಟ್ಟುಹಾಕಿದ್ದಾರೆ. ಇದೀಗ ದಾನಪ್ಪನ ಮಗ ಪ್ರಶಾಂತನೂ ಈ ಪರಂಪರೆ ಮುಂದುವರಿಸಿದ್ದಾನೆ. ಗಂಗಾವತಿಯ ರಮೇಶ್ ಗಬ್ಬೂರು ಈ ಪರಂಪರೆಯನ್ನು ತಮ್ಮ ವಿದ್ಯಾರ್ಥಿಗಳ ಮೂಲಕ ಈ ಹಾಡಿಕೆಯ ಪರಂಪರೆಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ.


ಇದನ್ನೂ ಓದಿ: ರೆಡ್ಡಿ ಸಹೋದರರ ವಿರುದ್ಧ ಪಟ್ಟುಬಿಡದೇ ಹೋರಾಡಿ ಗೆದ್ದ ದಿಟ್ಟ ಯುವತಿಯ ಕಥೆ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here