Homeಸಾಹಿತ್ಯ-ಸಂಸ್ಕೃತಿಕಥೆಈ ಹೊತ್ತಿಗಲ್ಲ, ಇದು ಜೋಗುರರ ಕೊನೆಯ ಕಥೆ

ಈ ಹೊತ್ತಿಗಲ್ಲ, ಇದು ಜೋಗುರರ ಕೊನೆಯ ಕಥೆ

- Advertisement -

| ಡಾ. ಎಸ್. ಬಿ ಜೋಗುರ |

ಇದು ಜೋಗುರರ ಕೊನೆಯ ಕಥೆ

- Advertisement -

ಇತ್ತೀಚೆಗೆ ನಮ್ಮನ್ನಗಲಿದೆ ಕನ್ನಡದ ಕಥೆಗಾರ, ವಿಮರ್ಶಕ ಡಾ.ಎಸ್.ಬಿ.ಜೋಗುರಾ ಅವರು `ನ್ಯಾಯಪಥ’ ಪತ್ರಿಕೆಯ ನಿರಂತರ ಓದುಗ ಮತ್ತು ಅಭಿಮಾನಿಯಾಗಿದ್ದರು. ಪತ್ರಿಕೆಗಾಗಿ ಪುಸ್ತಕ ವಿಮರ್ಶೆ, ಲೇಖನಗಳನ್ನೂ ಬರೆದಿದ್ದರು. ತೀರಾ ಇತ್ತೀಚೆಗಷ್ಟೆ ತಮ್ಮ ಈ ಕಥೆಯನ್ನು ಕಳುಹಿಸಿ `ಸೂಕ್ತವೆನಿಸಿದರೆ ಈ ನನ್ನ ಅಪ್ರಕಟಿತ ಕಥೆಯನ್ನು ನ್ಯಾಯಪಥದಲ್ಲಿ ಪ್ರಕಟಣೆಗೆ ಪರಿಗಣಿಸಿ’ ಎಂದು ಪತ್ರ ಬರೆದಿದ್ದರು. ಕಾರಣಾಂತರಗಳಿಂದ ಅದನ್ನು ಪ್ರಕಟಿಸಲಾಗಿರಲಿಲ್ಲ. ಈಗ ಅವರ ವಿದಾಯದ ನೋವಿನ ಸ್ಮರಣೆಯಲ್ಲಿ ಅದನ್ನಿಲ್ಲಿ ಪ್ರಕಟಿಸುತ್ತಿದ್ದೇವೆ…..

ಆ ಹಗಲು ಅವಿನಾಶನ ಪಾಲಿಗೆ ಹಿತವಾಗಿರಲಿಲ್ಲ. ಡಿಶೆಂಬರ್ ತಿಂಗಳ ಛಳಿಗೆ ಹೆದರಿ ಆಸ್ಪತ್ರೆಯ ಹೆಣದಂತೆ ಟೈಟಾಗಿ ಇಡೀ ಶರೀರವನ್ನು ಸುತ್ತಿಕೊಂಡು ಮಲಗಿದ್ದ ಅವನ ಕಿವಿಗೆ, ಹೆಂಡತಿ ನಳಿನಿಯ ಮಾತುಗಳು ಅರವಳಿಕೆಯ ಸ್ಥಿತಿಯಲ್ಲಿದ್ದವನ ಜೊತೆಗೆ ಮಾತನಾಡುವಂತೆ ಕೇಳಿಸುತಿತ್ತು. ‘ಒಣಾ ಉಸಾಬರಿ ನಿಮಗೇಕೆ ಬೇಕಿತ್ತು.. ನಿಮ್ಮ ಜೊತೆಗೆನೇ ಅದೇ ಪತ್ರಿಕೆಯಲ್ಲಿ ಸಾಕಷ್ಟು ಜನ ಕೆಲಸ ಮಾಡ್ತಾರೆ ಎಲ್ಲರೂ ನಿಮ್ಮ ಹಾಗೆ ಸತ್ಯ ಹರಿಶ್ಚಂದ್ರನ ತುಂಡುಗಳಂತೆ ಇದಾರಾ..? ಪ್ರಾಮಾಣಿಕತೆಯಂತೆ.. ಬದ್ಧತೆಯಂತೆ ಬೆಂಕಿ ಬಿತ್ತು ನಿಮ್ಮ ಬದ್ಧತೆಗೆ, ಈ ಪ್ರ್ರಾಮಾಣಿಕತೆಯ ಪರಿಣಾಮ ನಿಮ್ಮ ಬೈಕ್ ಗೆ ಬೆಂಕಿ ಬಿದ್ದಾಗಲಾದರೂ ಬದಲಾಗಬೇಕಿತ್ತು.. ಏನು ಮಾಡೋದು ನಾಯಿ ಬಾಲ..’ ಎಂದು ಅಡುಗೆಮನೆಯ ಪಾತ್ರೆಯನ್ನು ಟಕ್ಕಂತ ಕುಕ್ಕರಿಸಿದ್ದಾಯಿತು. ಮಗ ಕಥನ ‘ ಮಮ್ಮಿ ನನ್ನ ಟಿಪ್ಹನ್ ಬಾಕ್ಸ್ ಎಲ್ಲಿದೆ..ನಂಗೆ ಟೈಮ್ ಆಯ್ತು.’ ಇನ್ನೊಂದು ಬದಿ ಮಗಳು ಕವಿತಾ ‘ಮಮ್ಮಿ ನನ್ನ್ ಐ.ಡಿ.ಕಾರ್ಡ್ ಸಿಗುತ್ತಿಲ್ಲ.’ ಎಂದದ್ದೇ ನಳಿನಿ ಪೂರ್ತಿ ಪ್ಯಾಕಾಗಿ ಮಲಗಿದ್ದ ಅವಿನಾಶ ಕಡೆಗೆ ಕೈ ಮಾಡಿ ‘ ಅಲ್ಲಿ ಸುತ್ತಗೊಂಡು ಬಿದ್ದಿದ್ದಾರಲ್ಲ ಅವರಿಗೆ ಕೇಳು ನನಗೆ ಹತ್ತು ಕೈ ಅದಾವಾ..?’ ಅಂದದ್ದೇ ಕವಿತಾ ಸಹೋದರ ಕಥನ ಕಡೆಗೆ ನೋಡಿದಳು. ಅವನು ತನ್ನ ಹಣೆಯನ್ನು ಕೈಯಿಂದ ಮೆಲ್ಲಗೆ ಚಚ್ಚಿಕೊಳ್ಳುತ್ತಿದ್ದ. ಒಟ್ಟಿನಲ್ಲಿ ಆ ಬೆಳಗು ಅವಿನಾಶ ಪಾಲಿಗೆ ತರವಲ್ಲ ಎನ್ನುವಂತಿತ್ತು. ಅದಕ್ಕೆ ಕಾರಣವೂ ಇತ್ತು. ಅವಿನಾಶ ಕೆಲಸ ಮಾಡುವ ದಿನವಾಣಿ ಪತ್ರಿಕೆಯಲ್ಲಿ ಆ ಊರಿನ ಶಾಸಕನ ಕೋಳಿ ಫ್ಹಾ ರ್ಮ್ ಬಗ್ಗೆ ವಸ್ತು ನಿಷ್ಟ ವರದಿಯೊಂದನ್ನು ಬರೆದು ಪ್ರಕಟಿಸಿದ್ದ. ಆ ಶಾಸಕ ಪತ್ರಿಕೆಯ ಸಂಪಾದಕ ಮತ್ತು ಅವಿನಾಶ ಇಬ್ಬರಿಗೂ ನೋಟಿಸ್ ನೀಡಿದ್ದ. ಪ್ರಕಟಿಸುವಾಗ ಸಫೋಟಾ ಹಣ್ಣಿನಂತೆ ಸಿಹಿ ಸಿಹಿ ಮಾತನಾಡಿದ್ದ ಸಂಪಾದಕ ರುದ್ರೇಶ, ನೋಟಿಸ್ ನೋಡಿದ್ದೇ ತಡ ಹಾಗಲಕಾಯಿಯಂತಾಗಿದ್ದ. ‘ ನಿಮಗೆ ಬಾಳ ಸಾರಿ ನಾನು ಹೇಳಿದ್ದೀನಿ ಈ ತರಾ ಒಣ ರಿಸ್ಕು ಬ್ಯಾಡಂತ. ಸೌದಿ ಅರೇಬಿಯಾದಲ್ಲಿ ಹೀಗೆ ಪರಿಸರ ಕಾಳಜಿ ಇಟ್ಗೊಂಡು ಬರೀತಿದ್ದ ಒಬ್ಬ ತನಿಖಾ ವರದಿಗಾರನನ್ನು ಮುಗಿಸೇ ಬಿಟ್ಟರು.. ಅವೆಲ್ಲಾ ಗೊತ್ತಿರಬೇಕು’ ‘ ಸರ್ ನಾನೇನೋ ಕಷ್ಟಪಟ್ಟು ವರದಿ ಮಾಡಿದೆ. ಜನರಿಗೆ ಸತ್ಯಾಸತ್ಯ ತಿಳಿಸುವುದೇ ಪತ್ರಿಕೆಯ ಉದ್ದೇಶವಲ್ಲವೇ..? ಅಷ್ಟಾಗಿಯೂ ಅದು ರಿಸ್ಕು ಎಂತಾದರೆ ಪ್ರಕಟಿಸದೇ ಇರಬಹುದಿತ್ತು.’ ಎಂದಾಗ ರುದ್ರೇಶ ಕಿಸೆಯೊಳಗಿನ ಮಾತ್ರೆ ನುಂಗುತ್ತಾ ‘ ಸರಿ ಮಾರಾಯಾ ನೀನು ಬರೆದದ್ದು ತಪ್ಪಲ್ಲ.. ನಾನು ಪ್ರಕಟಿಸಿದ್ದೂ ತಪ್ಪಲ್ಲ ಪರಿಣಾಮ ಹೀಗಾದಾಗ ಬಿ.ಪಿ.ಮಾತ್ರೆಗಳನ್ನು ನಾವೇ ನುಂಗತಾ ಕೂಡಬೇಕಾಗುತ್ತದೆ. ಕೆಲ ದಿನ ನೀನು ಬರೆಯುವುದೇ ಬೇಡ.’ ಅಂದಾಗ ಅವಿನಾಶಗೆ ತುಂಬಾ ಬೇಜಾರಾಗಿ ‘ಹಂಗಂದ್ರೆ ಹೇಗೆ ಸಾರ್ ಬರವಣಿಗೆ ನನ್ನ ಬದುಕಿನ ಭಾಗ..ಉಸಿರು. ಈ ವೃತ್ತಿಯನ್ನು ನಾನು ಇಷ್ಟಪಟ್ಟು ಆಯ್ದುಕೊಂಡವನು ನೀವೇ ಹೀಗಂದರೆ..’ ‘ಸುಮ್ಮನೇ ತಲಿ ತಿನಬ್ಯಾಡ ನಾನು ಹೇಳದಂಗೆ ಮಾಡು’ ಎಂದು ಎದುರಲ್ಲಿರುವ ಬೆಲ್ ಒತ್ತಿದ. ಅವಿನಾಶ ಸೀದಾ ಮನೆಗೆ ಬಂದವನೇ ಮುಸುಕು ಹಾಕಿ ಮಲಗಿಬಿಟ್ಟ. ಹಾಗೆ ರಾತ್ರಿ ಮಲಗಿದವನು ಬೆಳಿಗ್ಗೆ ಎಚ್ಚರಾದರೂ ಹೆಂಡತಿಯ ಗುಣಗಾನಕ್ಕೆ ಹೆದರಿ ಹಾಗೇ ಮಲಗಿರುವದಿತ್ತು. ಮಕ್ಕಳು ಶಾಲೆಗೆ ಹೋದ ಮೇಲೆ ಹೆಂಡತಿ ನಳಿನಿಯ ಗಂಟಲಿಗೆ ಮತ್ತೂ ತುಸು ಜಾಸ್ತಿ ತ್ರಾಣ ಬಂದಾಗಿತ್ತು. ಜೋರ್ ಜೋರಾಗಿ ‘ಒಣ ಲಿಗಾಡು ಬೇಡಂತ ಎಟ್ಟು ಸಾರಿ ಹೇಳೀನಿ ನಿಮ್ಮ ಮೇಲಿನ ಸಿಟ್ಟಿಗೆ ಯಾರರೆ ಮಕ್ಕಳಿಗಿ ಏನರೇ ಮಾಡೂಮಟ ನಿಮಗೆ ಬುದ್ದಿ ಬರೂದಿಲ್ಲ’ ಅಂದದ್ದೇ ಹೊದ್ದ ಹಾಸಿಗೆಯನ್ನು ಝಾಡಿಸಿ ಒಗೆದು ‘ ಬಾಯಿ ಮುಚ್ಚು ನಾನೂ ಆಗಲಿಂದೂ ನೋಡ್ತಾ ಇದೀನಿ, ವದರವ್ವಳ ಹಾಗೆ ವಡ ವಡ ಅಂತೀದಿ.. ನಾನೇನು ತಪ್ಪು ಮಾಡಿದ್ದೀನಿ.. ಜನರಿಗೆ ಸತ್ಯ ತಿಳಿಸೋದು ನನ್ನ ಧರ್ಮ’ ‘ ನಿಮಗೊಬ್ಬರಿಗೇ ಬೇಕಾ ಆ ಧರ್ಮ ಕರ್ಮ ಎಲ್ಲಾ.. ನಿಮ್ಮ ತತ್ವ.. ಸಿದ್ಧಾಂತಗಳೆಲ್ಲಾ ಈ ಹೊತ್ತಿಗಲ್ಲ.. ಅಲ್ರೀ ನಿಮ್ಮ ಎಡಿಟರೇ ಸಿಡಿಮಿಡಿಗೊಳ್ಳುವಾಗ ನೀವ್ಯಾಕೆ ತಲೆ ಕೆಡಿಸಿಕೊಳ್ಳಬೇಕು..?’ ‘ಹಂಗಲ್ಲವೇ.. ಒಬ್ಬರಾದರೂ ತಲೆ ಕೆಡಿಸಿಕೊಳ್ಳಬೇಕು. ಬದಲಾವಣೆ ಅನ್ನುವುದು ಸಮೂಹದಿಂದಲೇ ಹೌದಾದರೂ ಅದರ ಆರಂಭ ಮಾತ್ರ ಹೀಗೆ ಒಬ್ಬರೋ ಇಬ್ಬರಿಂದ ಮಾತ್ರ’ ‘ ನಿಮ್ಮ ಫಿûಲಾಸಫಿû ನನಗ ಬೇಕಾಗಿಲ್ಲ.’ ಅಂದವಳೇ ಸೀದಾ ಅಡುಗೆ ಮನೆಗೆ ಹೋದಳು.

ಕಳೆದ ಹತ್ತಾರು ವರ್ಷಗಳಿಂದ ಅವಿನಾಶ ಈ ದಿನವಾಣಿ ಪತ್ರಿಕೆಯಲ್ಲಿ ಪರಿಸರಕ್ಕೆ ಸಂಬಂಧಿಸಿದ ವರದಿಗಳನ್ನು ಬರೆಯುವ ಹೊಣೆಗಾರಿಕೆ ಹೊತ್ತು ಕೆಲಸ ಮಾಡುತ್ತಿದ್ದ. ಪರಿಸರದ ಬಗ್ಗೆ ಸಾಕಷ್ಟು ಆಸಕ್ತಿಯಿರುವ ಅವಿನಾಶ ಮುಂಚಿನಿಂದಲೂ ಪರಿಸರ ಜಾಗೃತಿ ವಿಷಯವಾಗಿ ಸಾಕಷ್ಟು ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ವಿಜಯಪುರದ ಹಸಿರು ಕೇರಿ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿದ ಮೂವರಲ್ಲಿ ಈತನೂ ಒಬ್ಬ. ಈಗಲೂ ಆ ಸಂಸ್ಥೆ ಪರಿಸರ ಸಂಬಂಧಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಹುಡ್ಕೊ ಕಾಲನಿಯಲ್ಲಿ ವಾಸವಾಗಿದ್ದ ಅವಿನಾಶನ ಮನೆಯ ಪಕ್ಕದ ಪ್ಲಾಟ್ ಖಾಲಿಯಿದ್ದ ಕಾರಣ ಅದು ಒಂದು ತಿಪ್ಪೆ ಗುಂಡಿಯಾಗಿಯೇ ಬದಲಾಗಿತ್ತು. ಅದೇ ತಾನೇ ಹಸಿರುಕೇರಿ ಎನ್ನುವ ಸಂಸ್ಥೆ ಉಗಮವಾಗಿತ್ತು. ಆ ಸಂಸ್ಥೆಯ ನೆರವಿನೊಂದಿಗೆ ಆ ಜಾಗೆಯನ್ನು ಸ್ವಚ್ಚಗೊಳಿಸಿ ಅಲ್ಲೇ ಸಮೀಪ ಎಲ್ಲರಿಗೂ ಅನುಕೂಲವಾಗುವ ಹಾಗೆ ಕ್ರಾಸ್ ರೋಡಲ್ಲಿ ಒಂದು ಕಸದ ತೊಟ್ಟಿಯನ್ನು ನಗರಪಾಲಿಕೆಯವರಿಗೆ ಹೇಳಿ ಇಡಿಸಿ, ಕೇರಿಯ ಬಹುತೇಕ ಮನೆಗಳಿಗೂ ಖುದ್ದಾಗಿ ಹೋಗಿ ದಯಮಾಡಿ ಎಲ್ಲೆಂದರಲ್ಲಿ ಕಸ ಚೆಲ್ಲಬೇಡಿ ಎಂದು ವಿನಂತಿಸಿಕೊಂಡಿದ್ದ. ಆಗ ಅವಿನಾಶ ಇನ್ನೂ ಪದವಿ ಹಂತದಲ್ಲಿದ್ದ. ಅಲ್ಲಿಂದ ಆರಂಭವಾದ ಅವನ ಪರಿಸರದ ಬಗೆಗಿನ ಕಾಳಜಿ ನಿರಂತರವಾಗಿತ್ತು. ಆತ ಮುಂದೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ವಿಜಯಪುರದ ಸ್ಥಳೀಯ ಪತ್ರಿಕೆ ಉದಯಗಿರಿಯಲ್ಲಿ ಕೆಲಸ ಆರಂಭಿಸಿದ. ಪರಿಸರಕ್ಕೆ ಸಂಬಂಧಿಸಿ ಸಾಕಷ್ಟು ತನಿಖಾ ವರದಿಗಳನ್ನು ಬರೆದು ಆ ಪತ್ರಿಕೆಯ ಜನಪ್ರಿಯತೆಗೂ ಕಾರಣನಾಗಿದ್ದ. ಬೇಸಿಗೆಯಲ್ಲಿ ನೀರು ಮಾರುವವರ ಬಗ್ಗೆ.. ಸಾವಯವ ಮಾರಾಟ ಮಳಿಗೆ ಎಂದು ಕೆಮಿಕಲ್ಸ್ ಬಳಸಿದ ತರಕಾರಿ ಹಣ್ಣು ಮಾರುವವರ ಬಗ್ಗೆ, ಪ್ರವಾಸಿತಾಣಗಳಲ್ಲಿ ಕುಳಿತು ಊಟ ಮಾಡಿ ಸ್ವಚ್ಚಗೊಳಿಸದೇ ಹೋಗುವುದು, ಅಲ್ಲಿ ಮದುವೆ ಮುಂಜಿಗಳನ್ನು ಮಾಡುವವರ ವಿರುದ್ಧ, ರಸ್ತೆ ಬದಿಯ ಗಿಡಗಳನ್ನು ಕಡಿಯುವದರ ಬಗ್ಗೆ, ಕೆರೆ ಬಾವಿಗಳನ್ನು ಶುದ್ಧೀಕರಣಗೊಳಿಸುವ ಕುರಿತು ಇಂಥಾ ಹತ್ತಾರು ಪರಿಸರಕ್ಕೆ ಸಂಬಂಧಿಸಿ ಗಮನಸೆಳೆಯುವ ವರದಿ ಬರೆದಾಗಲೇ ದಿನವಾಣಿ ಪತ್ರಿಕೆಯವರು ಅವಿನಾಶನನ್ನು ಸಂಪರ್ಕಿಸಿದರು. ವಿಜಯಪುರದ ಆ ಜನಪ್ರಿಯ ಪತ್ರಿಕೆಯಲ್ಲಿ ಉಪಸಂಪಾದಕನಾಗಿ ನೇಮಕಗೊಂಡು ಇಲ್ಲಿಯವರೆಗೂ ಸಾಕಷ್ಟು ತನಿಖಾ ವರದಿಗಳನ್ನು ಬರೆದಿದ್ದ. ಕೆಲ ಬಾರಿ ಜೀವ ಬೆದರಿಕೆಗಳೂ ಅವನನ್ನು ಹಿಂಬಾಲಿಸಿವೆ. ಪತ್ರಿಕಾ ವಲಯದಲ್ಲಿ ಇವೆಲ್ಲವೂ ಮಾಮೂಲು ಎನ್ನುವುದು ಅವಿನಾಶನ ಮಾತು. ಜಿಲ್ಲಾ ಪಂಚಾಯತದ ಸದಸ್ಯನೊಬ್ಬ ಕೊಡಕ್ಕೆ ಐದು ರೂಪಾಯಿಯಂತೆ ನೀರು ಮಾರಿಕೊಳ್ಳುವ ಬಗ್ಗೆ ವರದಿಯೊಂದನ್ನು ಆಧಾರ ಸಮೇತ ಪ್ರಕಟಿಸಿದ್ದೇ ತಡ ಮುಂದೆ ಒಂದೇ ವಾರದಲ್ಲಿ ಮನೆಯ ಮುಂದೆ ನಿಲ್ಲಿಸಿದ ಆತನ ಹೀರೋ ಹೊಂಡಾ ಬೈಕ್ ಬೆಂಕಿಗೆ ಆಹುತಿಯಾಯಿತು. ಅವಿನಾಶ ಆಗಲೂ ಧೃತಿಗೆಟ್ಟಿರಲಿಲ್ಲ. ಹೆಂಡತಿ ನಳಿನಿ ಮಾತ್ರ ಆಗಲೂ ಹೀಗೆಯೇ ಚಡಪಡಿಸಿರುವದಿತ್ತು. ಅವಿನಾಶ ಮಾತ್ರ ಇದೆಲ್ಲವೂ ನಿರೀಕ್ಷಿತ ಎನ್ನುವಂತೆ ತಣ್ಣಗಿದ್ದ.

ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳುವುದು ಕಷ್ಟ ಎನ್ನುವುದು ಅವಿನಾಶಗೆ ತಿಳಿದಿದೆ. ಹಾಗೆಂದು ವೃತ್ತಿ ಮನೋಧರ್ಮವನ್ನು ಬಲಿಕೊಟ್ಟು ಕೆಲಸ ಮಾಡಲು ತನ್ನಿಂದಾಗದು ಎನ್ನುವ ಮಾತನ್ನು ಮತ್ತೆ ಮತ್ತೆ ಆತ ಹೇಳುವದಿದೆ. ಕಳೆದ ವರ್ಷ ರಾಜ್ಯೋತ್ಸವದ ದಿನದಂದು ಕನ್ನಡ ಸಂಘಟನೆಯೊಂದು ಅವಿನಾಶನ ದಿಟ್ಟತನವನ್ನು ಗುರುತಿಸಿ ಸನ್ಮಾನ ಮಾಡುವುದಿತ್ತು. ಆಗಲೂ ಆತನದು ಅದೇ ಮಾತು. ‘ ಪತ್ರಿಕೋದ್ಯಮ ನಾನು ಹೊಟ್ಟೆ ಹೊರೆಯಲು ಆಯ್ದ ಕಾಯಕವಲ್ಲ, ಇಷ್ಟ ಪಟ್ಟು ಬಂದ ಉದ್ಯಮ. ನನ್ನತನವನ್ನು ಬಲಿಕೊಟ್ಟು ಕೆಲಸ ಮಾಡುವುದು ನನ್ನ ಮನಸಿಗೆ ವಿರುದ್ಧ. ಜೀವಕ್ಕೆ ಹೆದರುವವರಿಗೆ ಈ ವೃತ್ತಿಯಲ್ಲ. ನನ್ನ ಬೈಕಿಗೆ ಕೊಳ್ಳಿ ಇಡಬಹುದು ನನ್ನ ಮನೋಸ್ಥೈರ್ಯಕ್ಕಲ್ಲ. ನಾನು ಎಲ್ಲಿಯವರೆಗೆ ಪತ್ರಕರ್ತನಾಗಿರುತ್ತೇನೋ ಅಲ್ಲಿಯವರೆಗೂ ಬದ್ಧತೆಯನ್ನಿಟ್ಟುಕೊಂಡೇ ಕೆಲಸ ಮಾಡುತ್ತೇನೆ. ನಾನು ಈಗಿನ ಸಂದರ್ಭಕ್ಕೆ ಸಲ್ಲಲಿಕ್ಕಿಲ್ಲ ಆದರೆ ನನ್ನ ಮನಸಿನ ಎದುರು ನಾನು ಗೌರವದಿಂದ ಸಲ್ಲುತ್ತೇನೆ. ನನಗೆ ಬೇಕಾದದ್ದು ಕೂಡಾ ಅದೇ ಆತ್ಮ ಗೌರವ’ ಎಂದೆಲ್ಲಾ ಮಾತನಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ. ಅಂದಿನ ಆ ಸಭೆಯಲ್ಲಿ ಯಾವ ಶಾಸಕ ಅವಿನಾಶಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದನೋ ಅವನೇ ಈಗ ಕೋರ್ಟ್ ನೋಟಿಸ್ ಕಳುಹಿಸಿದ್ದ. ಈ ಶಾಸಕ ಕರಿನಿಂಗಪ್ಪ ವಿಜಯಪುರದ ಸುತ್ತಮುತ್ತಲೂ ಹತ್ತಾರು ದೊಡ್ಡ ದೊಡ್ಡ ಕೋಳಿ ಫ್ಹಾರ್ಮ್ ಗಳನ್ನು ಹೊಂದಿದ್ದ. ದೇಶದ ಅನೇಕ ಕಡೆಗಳಿಗೆ ಇಲ್ಲಿಂದ ಕೋಳಿಗಳನ್ನು ಕಳುಹಿಸಲಾಗುತ್ತಿತ್ತು. ನಿರಂತರವಾಗಿ ಸತ್ಯಂ ಶಿವಂ ಸುಂದರಂ ರೋಡ್ ಲೈನ್ಸ್ ಹೆಸರಿನ ಟ್ರಕ್ಕುಗಳು ಎಲ್ಲೆಂದರಲ್ಲಿ ಕಣ್ಣಿಗೆ ಬೀಳುತ್ತಿದ್ದವು. ಸಣ್ಣ ಪುಟ್ಟ ಮೀನುಗಳನ್ನು ತಿಂದು ದೊಡ್ಡ ಮೀನುಗಳು ಬದುಕುವಂತೆ ಈ ಕರಿನಿಂಗನೂ ತನ್ನ ಪ್ರದೇಶದಲ್ಲಿರುವ ಸಣ್ಣಪುಟ್ಟ ಕೋಳಿ  ಫ್ಹಾರ್ಮ್ಗಳನ್ನು ನುಂಗಿ ಹಾಕಿದ್ದ. ಮತ್ತೆ ಕೆಲವೊಂದನ್ನು ತಾನೇ ಮುಂದಾಗಿ ಖರೀದಿಸಿದ್ದ. ಕೋಳಿ ಫ್ಹಾರ್ಮ್ ಅಂದರೇನೇ ಎಮ್.ಎಲ್.ಎ. ಕರಿನಿಂಗಪ್ಪ ಅನ್ನುವಂತಿತ್ತು. ದಿನವಿಡೀ ಅಲ್ಲಿ ವ್ಯವಹಾರ ನಡದೇ ಇರುತ್ತಿತ್ತು. ಕೋಳಿಗಳ ಆಹಾರ ಬರುವುದು, ಕೋಳಿಗಳನ್ನು ತುಂಬುವುದು, ಬೇನಾಮಿ ವೈದ್ಯರು ಕೋಳಿಗಳಿಗೆ ಇಂಜಕ್ಷನ್ ನೀಡುವುದು ಹೀಗೆ ಯಾವಾಗಲೂ ಕರಿನಿಂಗಪ್ಪನ ಕೋಳಿ ಫ್ಹಾರ್ಮ್ ಒಂದಿಲ್ಲೊಂದು ಚಟುವಟಿಕೆಯಿಂದ ಚುರುಕಾಗಿರುತ್ತಿತ್ತು. ತೆಲುಗು ಸಿನೇಮಾ ಪ್ರಭಾವದಿಂದ ರೂಪಗೊಂಡಂತೆ ಫ್ಹಾರ್ಮ್ ಸುತ್ತಲೂ ದೊಡ್ಡದಾದ ಕಂಪೌಂಡು, ದ್ವಾರಬಾಗಿಲಿನಂತೆ ಕಾಣುವ ಗೇಟು, ಸತ್ಯಂ ಶಿವಂ ಸುಂದರಂ ಎನ್ನುವ ಹಣೆಬರಹ, ದೊಡ್ಡ ದೊಡ್ಡ ಛತ್ರಿಯಾಕಾರದ ಮೂರ್ನಾಲ್ಕು ಟೆಂಟುಗಳು, ಒಂದು ಪುಟ್ಟ ಲಕ್ಷ್ಮೀ ದೇವಸ್ಥಾನ ಎಂಟತ್ತು ಧಾಂಡಿಗರು ಅತ್ತಿಂದಿತ್ತ ಸುತ್ತುವವರು. ಇವಿಷ್ಟು ಅಲ್ಲಿಯ ಹೊರನೋಟದ ಪರಿಸರ. ಇಲ್ಲಿಂದ ಕೋಳಿಗಳೊಂದಿಗೆ ಗಾಂಜಾ ಕೂಡಾ ಟ್ರಕ್ಕುಗಳಲ್ಲಿ ರವಾನೆಯಾಗುತ್ತದೆ ಎನ್ನುವ ಮಾತಿದೆ. ಥೇಟ್ ಕೋಳಿಗಳನ್ನೇ ಹೋಲುವಂಥಾ ಬಟ್ಟೆಯ ಕೋಳಿಗಳನ್ನು ಈ ಕೆಲಸಕ್ಕಾಗಿ ಬಳಸಲಾಗುತ್ತಿದೆ ಎನ್ನುವ ಮಾತಿತ್ತು. ಅದೇ ವಿಷಯವಾಗಿ ಮುಂದಿನ ವರದಿ ಬರೆಯುವ ತಯಾರಿಯಲ್ಲಿರುವಾಗಲೇ ಈ ಕರಿನಿಂಗ ಪತ್ರಿಕೆಗೆ ನೋಟಿಸ್ ಕಳುಹಿಸಿರುವದಿತ್ತು.

ಆ ದಿನ ಸತ್ಯಂ ಶಿವಂ ಸುಂದರಂ ಕೋಳಿ ಫ್ಹಾರ್ಮ್ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಝಗಮಗಿಸುತ್ತಿತ್ತು. ಪ್ರತಿ ವರ್ಷ ಡಿಶೆಂಬರ್ ತಿಂಗಳ ಕೊನೆಯ ದಿನ ಅದು ಹಾಗೆಯೇ.. ತನಗೆ ಆಪ್ತರಾದವರನ್ನು ಕರೆದು ಇಲ್ಲಿ ಹೊಸ ವರ್ಷದ ಪಾರ್ಟಿ ಕೊಡುವ ಪರಿಪಾಟ ಕರಿನಿಂಗ ಈ ಫ್ಹಾರ್ಮ್ ಆರಂಭಿಸಿದ ವರ್ಷದಿಂದಲೂ ಇಟ್ಟುಕೊಂಡಿದ್ದಾನೆ. ಇಡೀ ರಾತ್ರಿ ಮೋಜು ಮಸ್ತಿ. ಪ್ರತಿವರ್ಷ ಆಂದ್ರದಿಂದ ಡಾನ್ಸರ್ ಒಬ್ಬಳನ್ನು ಕರೆಯಿಸಿ ಕುಡಿತ, ಕುಣಿತ ಎಲ್ಲವೂ ಧಾಮ್ ಧೂಮ್ ಆಗಿ ನಡೆಸಲಾಗುತ್ತದೆ. ಪ್ರತಿ ವರ್ಷ ಅವಿನಾಶ ಗೆ ಈ ಮಸ್ತಿಯಲ್ಲಿ ಪಾಲ್ಗೊಳ್ಳಲು ಆಮಂತ್ರಣವಿದ್ದರೂ ಆತ ತೆರಳುತ್ತಿರಲಿಲ್ಲ. ಕಳೆದ ವರ್ಷವಷ್ಟೇ ಈ ತನಿಖಾ ವರದಿಯ ಹಿನ್ನೆಲೆಯಲ್ಲಿ ಆತ ಅಲ್ಲಿಗೆ ಹೋಗಿರುವದಿತ್ತು ಆಗ ಈ ಕರಿನಿಂಗ ಖುದ್ದಾಗಿ ಎದ್ದು ಬಂದು ಬರಬೇಕು ದಿನವಾಣಿ ಪತ್ರಕರ್ತರು ಅಂತ ಸ್ವಾಗತ ಮಾಡಿದ್ದ. ಅವಿನಾಶ ಗೆ ಗುಂಡು ಹಾಕುವ ಖಯಾಲಿಯಿದ್ದರೂ ಅಲ್ಲಿ ಮಾತ್ರ ಒಂದು ಗುಟುಕನ್ನೂ ಕುಡಿಯಲಿಲ್ಲ. ಸುಮ್ಮನೇ ಹೀಗೇ ಚಿಪ್ಸ್ ತುಣುಕೊಂದನ್ನು ಬಾಯಿಗಿಟ್ಟು ಮೆಲ್ಲುತ್ತಾ ಅತ್ತಿಂದಿತ್ತ ಅಲೆದಾಡಿ ಕೋಳಿ ಫ್ಹಾರ್ಮ್ ಗಳ ಮೇಲೆ ಕಣ್ಣಾಡಿಸಿದ್ದ. ಮುಂದೆ ತಿಂಗಳಲ್ಲಿಯೇ ‘ಶಾಸಕ ಕರಿನಿಂಗನ ಕೋಳಿ ಫ್ಹಾರ್ಮ್ ಮತ್ತು ವಿಷದ ಇಂಜೆಕ್ಷನ್’ ಎನ್ನುವ ತಲೆಬರಹದ ಅಡಿಯಲ್ಲಿ ಸುದ್ದಿಯೊಂದು ಪ್ರಕಟವಾದದ್ದೇ ತಡ ಇಡೀ ವಿಜಯಪುರ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದಾದ್ಯಂತ ಸಂಚಲನವೇ ಉಂಟಾಯಿತು. ದಿನವಾಣಿ ಪತ್ರಿಕೆ ಎಂದಿಗಿಂತಲೂ ಎರಡು ಮೂರು ಪಟ್ಟು ಜಾಸ್ತಿ ಮಾರಾಟವಾಯಿತು. ವಿರೋಧ ಪಕ್ಷದವರಂತೂ ಲಾಟರಿ ಹತ್ತಿದವರಂತೆ ಕಂತೆ ಕಂತೆಯಾಗಿ ಖರೀದಿಸಿ ಹಂಚಿದರು. ಶಾಸಕನ ಕೋಳಿ ಫ್ಹಾರ್ಮ್ ಗಳಲ್ಲಿ ರಾಸಾಯನಿಕ ಚುಚ್ಚು ಮದ್ದು ಬಳಸಿ ಕೋಳಿಗಳ ತೂಕ ಹೆಚ್ಚುವಂತೆ ಮಾಡಲಾಗುತ್ತದೆ. ಈ ಬಗೆಯ ರಾಸಾಯನಿಕ ವಿಶ್ವದ ಬೇರೆ ಬೇರೆಡೆ ನಿಷೇಧಿಸಲಾಗಿದೆ. ಇದರ ಬಳಕೆ ಮನುಕುಲಕ್ಕೆ ಅಪಾಯಕಾರಿ. ಈ ಬಗೆಯ ರಾಸಾಯನಿಕ ಉಂಡು ಬೆಳೆದ ಕೋಳಿಗಳನ್ನು ತಿನ್ನುವದರಿಂದ ಮನುಷ್ಯನ ಆಯುಷ್ಯ ಕಡಿಮೆಯಾಗುವುದು ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯೂ ಹಾಳಾಗುತ್ತದೆ. ಹೀಗೆ ವಿಷ ಉಣಿಸಿ ಹಣ ಮಾಡುವ ಹಪಾಪಿತನಕ್ಕಿಳಿದ ಶಾಸಕನನ್ನು ಜೈಲಿಗೆ ದಬ್ಬುವವರಾರು..? ಎಂದೆಲ್ಲಾ ಆ ಲೇಖನದಲ್ಲಿ ಬರೆದಾಗಿತ್ತು. ಈ ಲೇಖನವನ್ನು ಬರೆಯುವ ಮುನ್ನ ಅನೇಕ ಪಶುಸಂಗೋಪನಾ ವೈದ್ಯರನ್ನು ಅವಿನಾಶ ಸಂಪರ್ಕಿಸಿದ್ದ. ಈ ರಾಸಾಯನಿಕದ ಮಾರಕ ಪರಿಣಾಮಗಳ ಬಗ್ಗೆ ಚರ್ಚಿಸಿದ್ದ. ಈ ಔಷಧಿ ಕೋಳಿಗಳ ತೀವ್ರ ಬೆಳವಣಿಗೆಗೆ ನೆರವಾದರೆ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಇದು ಹಾಳುಗೆಡವುತ್ತದೆ ಎನ್ನುವದು ಆ ವರದಿಯ ಒಟ್ಟು ಸಾರಾಂಶ. ಇನ್ನು ಈ ಕೋಳಿಗಳಿಗೆ ಇಂಜಕ್ಷನ್ ಕೊಡುವವರು ಯಾರೋ ನುರಿತ ಪಶು ವೈದ್ಯರಲ್ಲ.. ಫ್ಹಾರ್ಮ್ ಹೌಸಲ್ಲಿ ಕೆಲಸ ಮಾಡುವ ಧಾಂಡಿಗರು. ಒಂದು ಖಚಿತ ಅಳತೆಗೋಲಿಲ್ಲದೇ ಇಂಜಕ್ಷನ್ ಚುಚ್ಚತಾ ಹೋಗುವದನ್ನು ಕೂಡಾ ಈತ ರೆಕಾರ್ಡಿಂಗ್ ಮಾಡಿಕೊಂಡಿದ್ದ. ಕರಿನಿಂಗ ಅದನ್ನೋದಿ ಸಿಟ್ಟಿನಲ್ಲಿ ಅವನನ್ನು ಎತ್ತಿಯೇ ಬಿಡುವದೆಂದು ಯೋಚಿಸಿದ್ದ. ಆತ ಬರೆದದ್ದು ಎಲ್ಲವೂ ಸತ್ಯ ಎನ್ನುವುದು ಶಾಸಕನಿಗೆ ಗೊತ್ತಿತ್ತು. ಹಾಗಾಗಿಯೇ ಇದನ್ನು ಇನ್ನೊಂದು ಮಾರ್ಗದಿಂದ ನಿಭಾಯಿಸಬೇಕು ಎಂದು ಯೋಚಿಸಿದ್ದ. ಹೀಗೆ ಕೋಳಿಗಳಿಗೆ ಇಂಜಕ್ಷನ್ ಚುಚ್ಚುವುದು ಇಂದು ನೆನ್ನೆಯದಲ್ಲ.. ಕಳೆದ ಅನೇಕ ವರ್ಷಗಳಿಂದಲೂ ಹೀಗೆ ಮಾಡಲಾಗುತ್ತಿದೆ. ಈಗಷ್ಟೇ ಕಣ್ಣುಬಿಟ್ಟಂತೆ ಬರೆದ ಈ ಪತ್ರಕರ್ತನಿಗೆ ಒಂದು ಗತಿ ಕಾಣಿಸಬೇಕು ಎಂದು ಯೋಚಿಸಿಯೇ ತನಗೆ ಇದರಿಂದ ಅಪಾರ ನಷ್ಟವಾಗಿದೆ. ಬರೆದದ್ದೆಲ್ಲಾ ಸುಳ್ಳು ನನಗೆ ಪತ್ರಿಕೆ ಸಂಪಾದಕ ಮತ್ತು ಬರೆದವನು ನಷ್ಟ ತುಂಬಿ ಕೊಡಬೇಕು ಎಂದು ನೋಟಿಸ್ ನೀಡಲಾಗಿತ್ತು.

ಅವಿನಾಶ ಕೋಳಿಗಳಿಗೆ ಇಂಜಕ್ಷನ್ ಕೊಡುವ ಬಗ್ಗೆ ಬರೆದದ್ದು ಶಾಸಕ ಕರಿನಿಂಗನಿಗೆ ಕಿರಕಿರಿಯಲ್ಲ.. ಹಿಂದೊಮ್ಮೆ ಈ ಬಗ್ಗೆ ಅದಾಗಲೇ ಬೇರೆ ಪತ್ರಿಕೆಯಲ್ಲಿ ಇಷ್ಟೆಲ್ಲಾ ವಿವರವಾಗಿ ಅಲ್ಲದಿದ್ದರೂ ಬಂದಿರುವದಿತ್ತು. ಕರಿನಿಂಗನ ತಲೆನೋವು ಅದಲ್ಲ.. ಈ ಸತ್ಯಂ ಶಿವಂ ಸುಂದರಂ ಕೋಳಿ ಫ್ಹಾರ್ಮ್ ಗಳಿಂದ ಕೋಳಿಗಳ ಆಕಾರದಲ್ಲಿರುವ ಗೊಂಬೆಗಳಲ್ಲಿ ಡ್ರಗ್ಸ್ ತುಂಬಿ ಸರಬರಾಜು ಮಾಡಲಾಗುತ್ತದೆ ಎನ್ನುವ ಬಗ್ಗೆ ಆತ ತನಿಖಾ ವರದಿ ಬರೆಯುವವನಿದ್ದಾನೆ ಎನ್ನುವುದು ಅವನ ಗಮನಕ್ಕೆ ಬಂದದ್ದೇ ಈ ರೀತಿ ಕೋರ್ಟ್ ನೋಟಿಸ್ ಬಗ್ಗೆ ಆತ ತೀರ್ಮಾನಿಸಿದ್ದ. ಒಂದೊಮ್ಮೆ ಹಾಗೇನಾದರೂ ಬರೆದರೆ.. ಮುಂದಿನ ಚುನಾವಣೆಯನ್ನು ನೆನೆದು ಶಾಸಕ ಕರಿನಿಂಗ ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡು ಚಡಪಡಿಸುತ್ತಿದ್ದ. ಕಳೆದೆರಡು ದಿನಗಳಿಂದ ಅವಿನಾಶ್ ಮನ:ಸ್ಥಿತಿಯೂ ಸರಿಯಿರಲಿಲ್ಲ. ತಾನು ಬರೆದದ್ದು ಸತ್ಯವೇ ಹೌದಾದರೂ ಯಾಕೋ ಮನಸು ಭಾರವಾದಂತಿತ್ತು. ತನ್ನೊಬ್ಬನಿಂದ ಏನು ಸುಧಾರಣೆ ಮಾಡಲು ಸಾಧ್ಯವಿದೆ.. ಮನೆಯಲ್ಲಿ ತನ್ನ ಹೆಂಡತಿಗೇ ತನ್ನ ಪ್ರಾಮಾಣಿಕತೆ ಇಷ್ಟವಾಗದಿರುವ ಬಗ್ಗೆಯೂ ಅವನಿಗೆ ಬೇಸರವಿತ್ತು. ಎರಡು ದಿನ ಆತ ಪತ್ರಿಕೆಯ ಕಾರ್ಯಾಲಯದ ಕಡೆಗೆ ಹೋಗಲೇ ಇಲ್ಲ. ಅವಿನಾಶದು ಪುಟ್ಟ ಸಂಸಾರ. ಎರಡು ಮಕ್ಕಳು ಒಂದು ಗಂಡು, ಒಂದು ಹೆಣ್ಣು. ಇನ್ನೂ ಹೈಸ್ಕೂಲ್ ಹಂತದಲ್ಲಿ ಓದುತ್ತಿದ್ದರು. ಅವರ ಭವಿಷ್ಯದ ಬಗ್ಗೆ ನಿಮಗೆ ಕಾಳಜಿನೇ ಇಲ್ಲ. ಜುಜುಬಿ ಒಬ್ಬ ವರದಿಗಾರನಾಗಿದ್ದ ನಿಮ್ಮ ಸಂಬಂಧಿ ವರದರಾಜ ಸಾಕಷ್ಟು ಕಮಾಯಿಸಿದ್ದಾನೆ. ನೀವು ಉಪಸಂಪಾದಕ ಮತ್ತದೂ ತನಿಖಾ ವರದಿಗಾರ. ಟಿ.ವಿ. ಖರೀದಿ ಮಾಡಿದ್ದು ಕೂಡಾ ಇ.ಎಮ್.ಆಯ್ ಕಂತುಗಳಲ್ಲಿ. ಮಕ್ಕಳ ಫಿûೀಸ್ ಕಟ್ಟಲಿಕ್ಕಾಗದ ಸ್ಥಿತಿ. ಹೀಗಿದ್ದರೂ ನಿಮ್ಮ ಹಾಳು ಬದ್ಧತೆ.. ಪ್ರಾಮಾಣಿಕತೆ ಬೇರೆ. ನಿಮಗೆ ಬದುಕಿನ ಕಲೆ ಗೊತ್ತಿಲ್ಲ ಎಂದು ಹೆಂಡತಿಯೇ ಅವಿನಾಶ್ ಗೆ ಹತ್ತಾರು ಬಾರಿ ಹೇಳಿರಬೇಕು. ತನ್ನ ಬೈಕ್ ಸುಟ್ಟಿದ್ದು, ಬೇರೆಯವರಿಂದ ಬರುವ ಜೀವಬೆದರಿಕೆ ಕರೆಗಳಿಗಿಂತಲೂ ಹೆಂಡತಿಯ ಮಾತು ಅವನನ್ನು ಬಹಳಷ್ಟು ಬಾಧಿಸುತ್ತಿತ್ತು. ಆತ್ಮವಂಚನೆ ಮಾಡಿಕೊಂಡು ಕೆಲಸ ಮಾಡುವ ಅಗತ್ಯ ಬಂದ ದಿನವೇ ಈ ಕೆಲಸವನ್ನು ಬಿಡುವ ಬಗ್ಗೆ ಯೋಚಿಸಿ, ಮೆಲ್ಲಗೆ ಸೋಲಾಪುರ ರಸ್ತೆಯಲ್ಲಿರುವ ಪತ್ರಿಕಾ ಕಾರ್ಯಾಲಯದೆಡೆಗೆ ನಡೆದ. ಗೇಟಲ್ಲಿರುವ ಗಾರ್ಡ್ ಸೆಲ್ಯುಟ್ ಕೊಟ್ಟು ಅವಿನಾಶ್ ನನ್ನು ದಿಟ್ಟಿಸಿ ನೋಡುತ್ತಿದ್ದ. ಒಳಗಿರುವ ಸಿಬ್ಬಂದಿಗಳೂ ಅವನನ್ನೇ ಗಮನಿಸುವಂತಿತ್ತು. ಸಂಪಾದಕರ ಕೊಠಡಿ ಪ್ರವೇಶಿಸುತ್ತಿರುವಂತೆ ಅಲ್ಲಿದ್ದ ಸಿಪಾಯಿಯೊಬ್ಬ ‘ಸಾರ್ ಒಳಗಡೆ ಎಮ್.ಎಲ್.ಎ. ಕರಿನಿಂಗ ಇದ್ದಾರೆ, ಸಾಹೇಬರು ಯಾರನ್ನೂ ಬಿಡಬೇಡ’ ಎಂದಿದ್ದಾರೆ. ಅವಿನಾಶ ತಾನು ಕೆಲಸ ಮಾಡುವ ಆಸನದಲ್ಲಿ ಕುಳಿತು ಶಾಸಕ ಜಾಹೀರಾತು ಕೊಡಲು ಬಂದಿರಬಹುದೆ..? ಬರೆದದ್ದು ಸರಿಯಿಲ್ಲ ಸ್ಪಷ್ಟೀಕರಣ ಹಾಕಿ ಎಂದು ಒತ್ತಾಯಿಸಲು ಬಂದಿರುವನೇ..? ಆತನೇ ಖುದ್ದಾಗಿ ಬಂದಿದ್ದಾನೋ ಇಲ್ಲಾ ಸಂಪಾದಕರೇ ಕರೆಸಿದ್ದಾರೋ.. ಹೀಗೆ ಹತ್ತಾರು ಪ್ರಶ್ನೆಗಳು ತಲೆಯಲ್ಲಿ ಸುಳಿದು ಹೋದವು. ಅಷ್ಟರಲ್ಲಿ ಕರಿನಿಂಗ ಚೇಂಬರ್ ನಿಂದ ಹೊರಬಂದ. ಸಂಪಾದಕ ರುದ್ರೇಶ ಕೂಡಾ ಅವನನ್ನು ಮುಗುಳ್ನಗುತ್ತಾ ಹಿಂಬಾಲಿಸಿದ್ದರು. ಹೊರಬಂದದ್ದೇ ಕಣ್ಣಿಗೆ ಬಿದ್ದದ್ದು ಈ ಅವಿನಾಶ್. ನೋಡಿಯೂ ನೋಡದಂತೆ ಹೊರನಡೆದ ಕರಿನಿಂಗ ಹೋಗುವಾಗ ಸಂಪಾದಕರ ಕಿವಿಯಲ್ಲಿ ಏನೋ ಊದಿದಂತಿತ್ತು. ಅದಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ತನ್ನ ಕೆಲಸದಲ್ಲಿ ಅವಿನಾಶ ತೊಡಗಿಕೊಂಡ. ರುದ್ರೇಶ ನೇರವಾಗಿ ಚೇಂಬರ್ ಒಳಗೆ ಹೋದವರೇ ಅವಿನಾಶ್‍ನನ್ನು ಬರಹೇಳಿದರು. ‘ಕೂತ್ಗೊಳ್ಳಿ ತಪ್ಪು ಎಲ್ಲರಿಂದಲೂ ಆಗ್ತಾವೆ ಅದನ್ನು ಸರಿಪಡಿಸಿಕೊಳ್ಳುವಲ್ಲಿಯೇ ಜಾಣತನವಿದೆ.. ಇದು ನನ್ನ ಮಾತಲ್ಲ ಶಾಸಕರದ್ದು. ನಾವು ನೀವು ತಿಳಿದುಕೊಂಡಂತೆ ಕರಿನಿಂಗ ಅವರು ಕೆಟ್ಟವರಲ್ಲ. ಅವರಿಗೆ ಸಾಕಷ್ಟು ನಮ್ಮ ಬಗ್ಗೆ, ನಮ್ಮ ಪತ್ರಿಕೆಯ ಬಗ್ಗೆ ಕಳಕಳಿಯಿದೆ. ಅದಕ್ಕೆ ಸಾಕ್ಷಿ ಅವರು ಕೇಸ್ ಹಿಂತೆಗೆದುಕೊಳ್ಳುವದಾಗಿ ಹೇಳಿದ್ದಾರೆ. ಸಾಕು ಮತ್ತೆ ಅವರ ಬಗ್ಗೆ ಬರೆಯುವುದು ಬೇಡ. ರಾಜಕಾರಣಿಗಳ ಜೊತೆಗೆ ವೈರತ್ವ ಸರಿಯಲ್ಲ. ಇಲ್ನೋಡಿ ಎರಡು ಲಕ್ಷ ರೂಪಾಯಿಯ ಜಾಹೀರಾತು ಕೊಟ್ಟಿದ್ದಾರೆ. ನಿಮ್ಮ ಬಗ್ಗೆನೂ ಅವರು ಮಾತನಾಡಿದ್ದಾರೆ. ನಿಮ್ಮ ಬೈಕ್ ಸುಟ್ಟ ಬಗ್ಗೆ ಅವರಿಗೆ ಬೇಸರವಿದೆ. ನೀವು ಹುಂ ಅಂದ್ರೆ ಅವರಿಗೆ ಕಾರೇ ಗಿಪ್ಟ್ ಆಗಿ ಕೊಡುತ್ತೇನೆ ಎಂದರು. ನಾನೇ ಅವರಂಥವರಲ್ಲ ಅಂದೆ.. ನಕ್ಕರು. ಸುಮ್ಮನೇ ಯಾಕೆ ನೆಮ್ಮದಿ ಕೆಡಿಸಿಕೊಳ್ಳುವದು ಮತ್ತೇನೂ ಅವರ ಬಗ್ಗೆ ಬರೀಬೇಡಿ.. ಹಾಗೆ ಬರೆದರೂ ನಾನಂತೂ ಪ್ರಕಟಿಸುವದಿಲ್ಲ. ನನಗೆ ಪತ್ರಿಕೆಯನ್ನು ಉಳಿಸಿ ಬೆಳೆಸುವುದು ಮುಖ್ಯ.. ಬಿಟ್ಟು ಬಿಡಿ ಬೇರೆ ಏನಾದರೂ ಬರೀರಿ’ ಎನ್ನುತ್ತಿರುವಂತೆ ಕೈಯಲ್ಲಿಡಿದು ತಿರುಗುತ್ತಿದ್ದ ಪೇಪರ್ ವೇಟರ್ ನ್ನು ಸಂಪಾದಕರ ಬದಿಗೆ ಸರಿಸಿ ‘ಸಾರಿ ಸಾರ್..’ ಎಂದವನೇ ಮತ್ತೇನನ್ನೂ ಮರುಮಾತನಾಡದೇ ಬರಬರನೇ ಹೊರನಡೆದ. ಸಂಪಾದಕ ದೊಡ್ಡದಾದ ನಿಟ್ಟುಸಿರೊಂದನ್ನು ಬಿಟ್ಟು ಬೆಲ್ ಬಾರಿಸಿದ ‘ ಈ ಮ್ಯಾಟರ್ ಕೊಟ್ಟು ಮೊದಲ ಪುಟದ ಜಾಹೀರಾತಿಗಾಗಿ ಸೆಟ್ ಮಾಡಂತ ಹೇಳಪಾ’ ಎಂದು ಕುರ್ಚಿಗೆ ತಲೆಯಾನಿಸಿ ಕುಳಿತು ಕಣ್ಣು ಮುಚ್ಚಿದರು. ಸೀಲಿಂಗ್ ಫ್ಹ್ಯಾನು ಒಂಚೂರೂ ಸದ್ದು ಮಾಡದೇ ತಿರುಗುತ್ತಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...