Homeಅಂಕಣಗಳುದಿಲ್ಲಿಯ ಆಮ್ ಆದ್ಮಿಗಳ ಮೇಲೆ ಮೋದಿ ಸವಾರಿ

ದಿಲ್ಲಿಯ ಆಮ್ ಆದ್ಮಿಗಳ ಮೇಲೆ ಮೋದಿ ಸವಾರಿ

- Advertisement -
- Advertisement -

ಚುನಾಯಿತ ಸರ್ಕಾರದ ಮುಖ್ಯಮಂತ್ರಿಯೊಬ್ಬರು ಇತರೆ ಮಂತ್ರಿಗಳೊಂದಿಗೆ ಕೇಂದ್ರ ಸರ್ಕಾರದ ಪ್ರತಿನಿಧಿಯೆನಿಸಿರುವ ರಾಜ್ಯಪಾಲನೆದುರು ಸತತ 9 ದಿನಗಳ ಕಾಲ ಹಗಲಿರುಳು ಧರಣಿ ನಡೆಸಬೇಕಾದ ದುಸ್ಥಿತಿ ಈ ದೇಶದಲ್ಲಿದೆಯೆಂದರೆ ನಾವು ನಂಬಲೇಬೇಕು. ಯಾಕೆಂದರೆ ಈ ವಿದ್ಯಮಾನ ನಮ್ಮ ಕಣ್ಣೆದುರಿಗಿದೆ. 9 ದಿನಗಳ ಕಾಲ ನಿರಂತರ ಧರಣಿ ನಡೆಯಬೇಕೆಂದರೆ ಬಹುಶಃ ಈ ಧರಣಿ ನಿರತರು ಈಡೇರಿಸಲು ಸಾಧ್ಯವಿಲ್ಲದಂತಹ ಜಟಿಲ ಬೇಡಿಕೆಗಳನ್ನು ಮುಂದಿಟ್ಟಿರಬಹುದು ಎಂದು ನೀವು ಊಹಿಸಬಹುದು. ಊಹೂಂ, ಆ ಬೇಡಿಕೆಗಳು ನಿಜಕ್ಕೂ ತೀರಾ ‘ಕ್ಷುಲ್ಲಕ’ ಬೇಡಿಕೆಗಳಾಗಿದ್ದವು; ‘ತಮ್ಮ ಅಧೀನದಲ್ಲಿರುವ ಐಎಎಸ್ ಅಧಿಕಾರಿಗಳು ಚುನಾಯಿತ ಸರ್ಕಾರದೊಂದಿಗೆ ಸಹಕರಿಸುವಂತೆ ಆದೇಶ ನೀಡಿ’ ಎಂಬುದೇ ಅವರ ಮುಖ್ಯ ಬೇಡಿಕೆಯಾಗಿತ್ತು. ಅರೆ, ಇಷ್ಟು ಸಹಜ ವಿಚಾರಕ್ಕೆ 9 ದಿನಗಳ ಧರಣಿ ಯಾಕೆ ಬೇಕಿತ್ತು ಎನಿಸಬಹುದು. ಯಾಕೆಂದರೆ ಆ ಲೆಫ್ಟಿನೆಂಟ್ ಗವರ್ನರ್ ಮಹಾಶಯ ತನ್ನದೇ ಕಚೇರಿಯಲ್ಲಿ ಧರಣಿ ಕುಳಿತ ಮುಖ್ಯಮಂತ್ರಿ, ಮಂತ್ರಿಗಳತ್ತ ತಿರುಗಿಯೂ ನೋಡಿರಲಿಲ್ಲ.

ಇದು ಯಾವುದೋ ಮೂಲೆಯಲ್ಲಿ ನಡೆದ ವಿದ್ಯಮಾನವಲ್ಲ; ರಾಜಧಾನಿ ದೆಹಲಿಯಲ್ಲಿ ನಮ್ಮ ನಿಮ್ಮೆಲ್ಲರ ಕಣ್ಣೆದುರು ನಡೆದ ಘಟನಾವಳಿ. ಈ ಘಟನಾವಳಿಗಳ ಹಿನ್ನೆಲೆ ನೋಡಿ ಹೀಗಿದೆ.
ದೆಹಲಿಯ ಮುಖ್ಯಮಂತ್ರಿ ಹಾಗೂ ಇತರ ಇಲಾಖೆಯ ಮಂತ್ರಿಗಳು ಕರೆದ ಸಭೆಗಳಿಗೆ ಐಎಎಸ್ ಶ್ರೇಣಿಯ ಹಿರಿಯ ಅಧಿಕಾರಿಗಳು ಗೈರು ಹಾಜರಾಗುವುದು, ಸರ್ಕಾರದ ಆದೇಶವನ್ನು ಪಾಲಿಸದೆ ಅಸಹಕಾರ ತೋರುವುದು ಮಾಮೂಲಿ ವಿದ್ಯಮಾನವಾಗಿ ಹೋಗಿದೆ. ಕಳೆದ ತಿಂಗಳು ದೆಹಲಿ ಧೂಳಿನ ಬಿರುಗಾಳಿಯಲ್ಲಿ ತತ್ತರಿಸಿದ ಆತಂಕಕಾರಿ ಸನ್ನಿವೇಶವನ್ನು ನಾವೆಲ್ಲ ಟಿವಿಗಳಲ್ಲಿ ನೋಡಿದ್ದೆವಲ್ಲಾ. ಇಂಥಾ ಆತಂಕಕಾರಿ ಪರಿಸರದ ವಿಪ್ಪತ್ತಿನ ಬಗ್ಗೆ ಚರ್ಚಿಸಲು ಕರೆದ ಸಭೆಗೇ ಅಧಿಕಾರಿಗಳು ಹಾಜರಾಗಲಿಲ್ಲವೆಂದರೆ ಏನು ಹೇಳಬೇಕು?

ಇತ್ತೀಚೆಗೆ ಮತ್ತೊಂದು ಪ್ರಮುಖ ಘಟನೆಯೂ ನಡೆಯಿತು. ದೆಹಲಿಯ ಪಡಿತರ ಹಂಚಿಕೆಯ ದುರವಸ್ಥೆ ಮತ್ತು ಸೋರಿಕೆ ಬಗ್ಗೆ ಸ್ವತಃ ಮಹಾಲೇಖಪಾಲರು ತಮ್ಮ ವರದಿಯಲ್ಲಿ ಝಾಡಿಸಿದ್ದರು. ಈ ಪಡಿತರ ಹಂಚಿಕೆಯಲ್ಲಿನ ಭ್ರಷ್ಟಾಚಾರದ ಹಿಂದೆ ಬಲುದೊಡ್ಡ ವ್ಯಾಪಾರಿ-ಅಧಿಕಾರಿ ಲಾಬಿಯ ಅಪವಿತ್ರ ಮೈತ್ರಿ ಇದೆ. ಸ್ವತಃ ಕೇಜ್ರಿವಾಲ್ ಈ ಬಗ್ಗೆ ಹೇಳಿಕೆ ನೀಡಿದ್ದರು. ಈ ಲಾಬಿಯನ್ನು ತಹಬಂದಿಗೆ ತಂದು ಪಡಿತರ ಹಂಚಿಕೆ ವ್ಯವಸ್ಥೆಯ ಸುಧಾರಣೆಗೆ ಆಮ್ ಆದ್ಮಿ ಸರ್ಕಾರ ಮನೆಮನೆಗೆ ಪಡಿತರ ವಿತರಣೆಯ ವಿನೂತನ ಯೋಜನೆಯ ನೀಲ ನಕ್ಷೆ ಹಾಕಿಕೊಂಡಿತ್ತು. ಈ ಯೋಜನೆ ಜಾರಿಗೆ ಬಂದಲ್ಲಿ ಜನರು ಅಂಗಡಿಗಳಿಗೆ ಬಂದು ಕಾಯಬೇಕಿಲ್ಲ, ಸ್ವತಃ ಸರ್ಕಾರವೇ ತನ್ನ ಸಿಬ್ಬಂದಿ ಮೂಲಕ ಮನೆಮನೆಗೆ ಪಡಿತರ ವಿತರಿಸುತ್ತದೆ. ಲಕ್ಷಾಂತರ ಜನರ ಸಮಯ ಉಳಿತಾಯವಷ್ಟೇ ಅಲ್ಲ, ಪಡಿತರದ ಕಳ್ಳಾಟಗಳಿಗೂ ಕಡಿವಾಣ ಬೀಳುತ್ತದೆ. ಇದು ಆ ಯೋಜನೆ. ಆದರೆ ಈ ಯೋಜನೆ ಒಂದುಕಡೆ, ತಮ್ಮ ಆದಾಯಕ್ಕೆ ಕಡಿವಾಣ ಬೀಳುತ್ತದೆಂಬ ಕಾರಣಕ್ಕೆ ದೆಹಲಿಯ ಅಧಿಕಾರಿ ವರ್ಗಕ್ಕೂ ಇಷ್ಟವಿರಲಿಲ್ಲ. ಮತ್ತೊಂದೆಡೆ, ಈ ಯೋಜನೆಯಿಂದಾಗಿ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಹೆಚ್ಚಾಗುತ್ತದೆ ಹಾಗೂ ಅದರ ಪರಿಣಾಮ ಬರಲಿರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಂಬ ಕಾರಣಕ್ಕೆ ಕೇಂದ್ರದ ಮೋದಿ ಸರ್ಕಾರಕ್ಕೂ ಇಷ್ಟವಿರಲಿಲ್ಲ.

ಹೀಗಾಗಿ, ಕೇಂದ್ರ ಮತ್ತು ಕೇಂದ್ರದ ಏಜೆಂಟ್‍ನಂತಿರುವ ಲೆಫ್ಟಿನೆಂಟ್ ಗವರ್ನರ್ ಹಾಗೂ ಐಎಎಸ್ ಅಧಿಕಾರಿಗಳ ಕೂಟ ಒಟ್ಟಾಗಿ ಇಂಥದೊಂದು ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ. ‘ಮುಖ್ಯಮಂತ್ರಿ ಕಚೇರಿಯಲ್ಲೇ ಎಎಪಿ ಪಕ್ಷದ ಕಾರ್ಯಕರ್ತರು ಮುಖ್ಯ ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗಾಗಿ ನಮಗೆ ಪ್ರಾಣ ಬೆದರಿಕೆಯಿದೆ’ಯೆಂದು ಐಎಎಸ್ ಅಧಿಕಾರಿಗಳ ಸಂಘದವರು ಪತ್ರಿಕಾ ಗೋಷ್ಠಿ ನಡೆಸಿ ತಮ್ಮ ಅಹವಾಲನ್ನು ಹೇಳಿಕೊಂಡಿದ್ದೂ ಆಯಿತು. ಅದನ್ನು ನಮ್ಮ ಮಾಧ್ಯಮಗಳು ತಿರುಗಿಮುರುಗಿ ಹತ್ತಾರು ಬಾರಿ ತೋರಿಸಿದ್ದೂ ಆಯಿತು. ಆದರೆ ತಮಾಷೆಯ ವಿಚಾರವೆಂದರೆ, ಮುಖ್ಯ ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಯಿತೆನ್ನಲಾದ ಘಟನೆ ನಡೆದು 4 ತಿಂಗಳುಗಳಾಗಿವೆ. ಪೊಲೀಸ್ ಕಂಪ್ಲೈಂಟ್ ಕೂಡ ಆಗಿದೆ. ಆದರೆ ಇದುವರೆಗೆ ಚಾರ್ಜ್‍ಶೀಟ್ ದಾಖಲಾಗಿಲ್ಲ. ಕನಿಷ್ಟ ಮುಖ್ಯಮಂತ್ರಿ ಕಚೇರಿಯ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನಾದರೂ ತೆಗೆದು ಪರಿಶೀಲಿಸಿ ಎಂದು ದೆಹಲಿ ಸರ್ಕಾರದ ಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ. ಆದರೆ ಅದನ್ನು ಕೇಳಿಸಿಕೊಳ್ಳುವವರೂ ಇಲ್ಲ. ಹೀಗೆ ಎಲ್ಲವೂ ಪೂರ್ವ ನಿರ್ಧರಿತ ನಾಟಕದ ದೃಶ್ಯಗಳಂತೆ ನಡೆಯುತ್ತಿದೆ.
ಬಾಯಿಮಾತಿನಲ್ಲಿ ಅಧಿಕಾರಿಗಳು ನಾವು ಮುಷ್ಕರ ನಡೆಸುತ್ತಿಲ್ಲ ಎನ್ನುವುದೂ, ಆದರೆ ಸರ್ಕಾರದೊಂದಿಗೆ ಯಾವ ಕೆಲಸದಲ್ಲೂ ಭಾಗಿಯಾಗದೇ ಗೈರಾಗುವುದು ತಿಂಗಳುಗಟ್ಟಲೆಯಿಂದ ಪುನರಾವರ್ತನೆಯಾಗುತ್ತಾ ಬಂದಿದೆ. ಹೀಗಿದ್ದರೂ ಚುನಾಯಿತ ಸರ್ಕಾರ ಏನೂ ಮಾಡುವಂತಿಲ್ಲ. ಯಾಕೆಂದರೆ ಅಧಿಕಾರಮತ್ತರಾಗಿರುವ ಈ ಐಎಎಸ್‍ಗಳ ಮೇಲೆ ಚುನಾಯಿತ ದೆಹಲಿ ಸರ್ಕಾರಕ್ಕೆ ಯಾವ ಹಿಡಿತವೂ ಇಲ್ಲ. 2015ರಲ್ಲಿ ದೆಹಲಿಯ ಮತದಾರರು 70ರಲ್ಲಿ 67 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸಿದ್ದರು. ಆಮ್ ಆದ್ಮಿ ಸರ್ಕಾರ ರಚನೆಯಾಗಿ ಕೆಲವೇ ವಾರಗಳಲ್ಲಿ, ಆಗಲೇ ಕೇಂದ್ರದ ಚುಕ್ಕಾಣಿ ಹಿಡಿದು ಬೀಗುತ್ತಿದ್ದ ಮೋದಿ ಸರ್ಕಾರ ಒಂದು ಅಪ್ರಜಾತಾಂತ್ರಿಕ ಆದೇಶ ಹೊರಡಿಸಿ ದೆಹಲಿ ವ್ಯಾಪ್ತಿಯ ಐಎಎಸ್ ಅಧಿಕಾರಗಳ ಮೇಲೆ ಚುನಾಯಿತ ಸರ್ಕಾರಕ್ಕಿದ್ದ ಅಧಿಕಾರವನ್ನು ಕಿತ್ತುಕೊಂಡು ತನ್ನದೇ ಏಜೆಂಟ್ ಲೆಫ್ಟಿನೆಂಟ್ ಗವರ್ನರ್ ಕೈಗೆ ಈ ಅಧಿಕಾರವನ್ನು ವರ್ಗಾಯಿಸಿಬಿಟ್ಟಿತ್ತು. ಹೀಗೆ ಚುನಾಯಿತ ಸರ್ಕಾರದ ಮೇಲೆ ಸವಾರಿ ಮಾಡುತ್ತಾ ಪ್ರಜಾತಂತ್ರವನ್ನೇ ಗೇಲಿ ಮಾಡುವ ಹೀನ ಪ್ರವೃತ್ತಿ ಆರಂಭದಿಂದಲೂ ಜಾರಿಯಲ್ಲಿದೆ.

ದೆಹಲಿ ಸರ್ಕಾರ ಎಂಬುದು ದೆಹಲಿಯ ಒಟ್ಟು ಆಡಳಿತ ವ್ಯವಸ್ಥೆಯ ಪುಟ್ಟ ಭಾಗ. ದೆಹಲಿಯ ಬಹುತೇಕ ಪ್ರದೇಶ ಮತ್ತು ಆಡಳಿತದ ನಿಯಂತ್ರಣ ಹತ್ತು ಹಲವು ಅಧಿಕಾರ ವ್ಯವಸ್ಥೆಗಳಲ್ಲಿ ಹಂಚಿಹೋಗಿದೆ. ದೆಹಲಿಯಲ್ಲಿ ಮೂರು ಪೌರಾಡಳಿತಗಳಿವೆ. ಕೇಂದ್ರ ಸರ್ಕಾರವೇ ನೇರ ನಿಯಂತ್ರಣ ಇಟ್ಟುಕೊಂಡಿರುವ ಪ್ರದೇಶಗಳಿವೆ. ದೆಹಲಿಯ ನೆಲ ನಿರ್ವಹಣೆಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರವಿದೆ. ಅಷ್ಟಾಗಿಯೂ ದೆಹಲಿಗೊಂದು ಶಾಸನ ಸಭೆಯೂ ಇದೆ. ಅದಕ್ಕೆ ಸ್ವತಂತ್ರ ರಾಜ್ಯದ ಅಸ್ತಿತ್ವ ಇಲ್ಲ. ಆದರೆ ಅದು ಜನಾಭಿಪ್ರಾಯದ ಒಂದು ವೇದಿಕೆ. ಪ್ರಪಂಚದ ಅತಿ ದೊಡ್ಡ ಪ್ರಜಾಸತ್ತೆಯ ರಾಜಧಾನಿಗೆ ಪ್ರಜಾಪ್ರತಿನಿಧಿಗಳ ಸ್ವಯಮಾಡಳಿತ ವ್ಯವಸ್ಥೆ ಇರಬೇಕೆಂದು ಸ್ವತಃ ಕೇಂದ್ರ ಸರ್ಕಾರ ಭಾವಿಸದಿರುವುದು ದೆಹಲಿಯ ಯಜಮಾನಿಕೆಯ ಮನೋಭಾವಕ್ಕೊಂದು ಉದಾಹರಣೆ ಅಷ್ಟೇ. ಕಾಂಗ್ರೆಸ್ ಪಕ್ಷ ಕೂಡ ಈ ವಿಷಯದಲ್ಲಿ ಬಿಜೆಪಿಯ ಬಂಟನಂತೆ ವರ್ತಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು.

ವಿಪರ್ಯಾಸ ಹೇಗಿದೆ ನೋಡಿ. ತಾನು ಅಧಿಕಾರಕ್ಕೆ ಬಂದರೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ಸ್ವತಃ ಭಾಜಪ ಘೋಷಿಸಿತ್ತು. ಆದರೆ ಜನಾಭಿಪ್ರಾಯ ಹೇಗಿತ್ತೆಂದರೆ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದರೆ ಭಾಜಪ ಮೂರಕ್ಕೇ ಮುಕ್ತಿ ಪಡೆಯಬೇಕಾಯ್ತು. ಆಪ್ ಪಕ್ಷದ ಅಭೂತಪೂರ್ವ ಗೆಲುವನ್ನು ಮೋದಿ ಸರ್ಕಾರ ಇಂದಿಗೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಮೋದಿಯ ಕುತ್ಸಿತ ಮನಸ್ಸು ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದೆಯೆಂದರೆ ಆಪ್ ಸರ್ಕಾರ ನಿರಾಳವಾಗಿ ಕೆಲಸ ಮಾಡಲು ಎಂದೂ ಬಿಟ್ಟಿಲ್ಲ. ಕೇಂದ್ರದ ನಿಯಂತ್ರಣದಲ್ಲಿರುವ ಪೊಲೀಸ್ ಇಲಾಖೆಯ ಮೂಲಕ ಆಪ್ ಶಾಸಕರಿಗೆ, ಮಂತ್ರಿಗಳಿಗೆ ನಿರಂತರ ಕಿರುಕುಳವಿದೆ, ಕ್ಷುಲ್ಲಕ ಕಾರಣಗಳನ್ನು ಮುಂದುಮಾಡಿ ಶಾಸಕರ ಮೇಲೆ ಕೇಸು ಜಡಿಯುವುದು, ಅರೆಸ್ಟ್ ಮಾಡುವುದು ಇಲ್ಲಿ ಮಾಮೂಲಿ. ದೆಹಲಿಗೆ ಜನ ಆಯ್ಕೆ ಮಾಡಿದ ಶಾಸಕರ ಶಾಸನ ಸಭೆಯಿದ್ದರೂ ಆಡಳಿತದ ಸಂಪೂರ್ಣ ನಿಯಂತ್ರಣ ಇರುವುದು ದೆಹಲಿ ನೇಮಿಸಿದ ಲೆಫ್ಟಿನೆಂಟ್ ಜನರಲ್ ಎಂಬ ಹುದ್ದೆಯಲ್ಲಿ. ಇದು ಬ್ರಿಟಿಶ್ ಕಾಲದ ರೆಸಿಡೆಂಟ್ ಎಂಬ ಹುದ್ದೆಗಿಂತಲೂ ಸ್ವೇಚ್ಛಾ ಪ್ರವೃತ್ತಿಯದ್ದು.

ದೆಹಲಿಯ ಶಾಲಾ ವ್ಯವಸ್ಥೆ ಮತ್ತು ಆರೊಗ್ಯ ವ್ಯವಸ್ಥೆಯ ಸುಧಾರಣೆಗಳು ದೇಶದ ಗಮನ ಸೆಳೆದಿವೆ. ಒಂದೆಡೆ ಈ ಸುಧಾರಣೆಗಳು ಜನಮನ್ನಣೆ ಗಳಿಸುತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸರ್ಕಾರದ ಹೊಟ್ಟೆ ಉರಿಗೆ ಕಾರಣವಾಗಿದೆ. ಕಳೆದ ವರ್ಷ ಚುನಾವಣಾ ಆಯೋಗ 20 ಆಪ್ ಶಾಸಕರ ಮಾನ್ಯತೆಯನ್ನು ಕ್ಷುಲ್ಲಕ ಕಾರಣ ನೀಡಿ ರದ್ದುಪಡಿಸಿದ್ದೂ ಕೇಂದ್ರ ಸರ್ಕಾರದ ಚಿತಾವಣೆಯಿಂದ ಎಂಬುದು ರಹಸ್ಯವೇನಲ್ಲ. ಹೈಕೋರ್ಟ್ ಚುನಾವಣಾ ಆಯೋಗಕ್ಕೇ ಉಗಿದು ಉಪ್ಪಿನಕಾಯಿ ಹಾಕಿ, ಆ ಆದೇಶವನ್ನು ರದ್ದುಮಾಡಿದ್ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ.

ಇಡೀ ಆಡಳಿತ ಯಂತ್ರವೇ ಸ್ತಬ್ಧವಾದರೂ ಈ ಲೆಫ್ಟಿನೆಂಟ್ ಮಹಾಶಯ ಕಣ್ಣು ಕಿವಿ ತೆರೆಯಲೇ ಇಲ್ಲ. ಆಡಳಿತ ಯಂತ್ರ ಮುರಿದು ಬಿದ್ದು ಯಾವ ಕೆಲಸವೂ ಸುಸೂತ್ರವಾಗಿ ನಡೆಯದಿದ್ದಾಗ ಜನ ರೋಸಿ ಹೋಗಿ ಆಪ್ ಪಕ್ಷಕ್ಕೆ ಛೀಮಾರಿ ಹಾಕುತ್ತಾರೆ. ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸುತ್ತಾರೆ ಎಂಬುದು ಕೇಂದ್ರದ ಅಂದಾಜು. ಆದರೆ ಆಗಿದ್ದೇ ಬೇರೆ. ಕೇಂದ್ರ ಸರ್ಕಾರದ ನಿರಂಕುಶ ನಡೆಯ ವಿರುದ್ಧ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಕೇಜ್ರಿವಾಲ್‍ಗೆ ಬೆಂಬಲ ಘೋಷಿಸಿದರು. ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಹಾಗೂ ಹಲವು ಕ್ಷೇತ್ರದ ಗಣ್ಯರು ಆಪ್ ಪಕ್ಷದ ಜೊತೆ ಹೆಜ್ಜೆ ಹಾಕಿ ಲೆಫ್ಟಿನೆಂಟ್ ಗವರ್ನರ್ ನಡೆಗೆ ಛೀಮಾರಿ ಹಾಕಿದರು. ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಘೋಷಿಸಲಾಯ್ತು. ರಾಷ್ಟ್ರಪತಿಗೆ ದೂರು ಸಲ್ಲಿಸುವ ಹಂತ ತಲುಪಿತು. ಇಷ್ಟೆಲ್ಲಾ ರಾದ್ದಾಂತ ಯಾತಕ್ಕಾಗಿ? ‘ಮುಷ್ಕರ’ ನಡೆಸುತ್ತಿದ್ದ ಐಎಎಸ್ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಬೇಕೆಂಬ ಕನಿಷ್ಟ ಬೇಡಿಕೆಯನ್ನು ಮಾನ್ಯಮಾಡದ ಲೆ.ಗವರ್ನರ್‍ನ ಅತ್ಯಂತ ಅಗ್ಗದ ನಡವಳಿಕೆಯಿಂದಾಗಿ.

ಕ್ರಮೇಣ ಜನಾಭಿಪ್ರಾಯ ತಮ್ಮ ವಿರುದ್ಧ ತಿರುಗುತ್ತಿರುವುದನ್ನು ಮನಗಂಡ ಲೆ.ಗವರ್ನರ್ ಆಪ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಬಂದಿದ್ದಾರೆ. ಸದ್ಯಕ್ಕೆ ಧರಣಿ ಕೊನೆಗೊಂಡಿದೆ. ಆದರೆ ಇದು ಬೂದಿ ಮುಚ್ಚಿದ ಕೆಂಡ. ಇಂದಲ್ಲ, ನಾಳೆ ಮತ್ತೆ ಭುಗಿಲೇಳಲಿದೆ. ಯಾಕೆಂದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಆಪ್ ಸರ್ಕಾರ ಜನಪ್ರಿಯತೆ ಗಳಿಸುವುದು ಮೋದಿ ಸರ್ಕಾರಕ್ಕೆ ಬೇಕಿಲ್ಲ. ನೆನಪಿಡಿ, 2014ರ ಚುನಾವಣೆಯಲ್ಲಿ ದೆಹಲಿಯಲ್ಲಿನ ಏಳಕ್ಕೆ ಏಳೂ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.
ಇಲ್ಲಿ ಮಾದ್ಯಮಗಳ ನಡವಳಿಕೆ ತೀರಾ ಪ್ರಶ್ನಾರ್ಹ. ಈ ಸಮಸ್ಯೆಯನ್ನು ಮಾದ್ಯಮಗಳು ಕೇಜ್ರಿವಾಲ್‍ರ ಪ್ರತಿಷ್ಠೆಯ ಗುದ್ದಾಟ, ಹಠಮಾರಿ ಧೋರಣೆ ಎಂಬಂತೆ ಬಿಂಬಿಸಲು ಹೆಣಗಿದ್ದು ಅಸಹ್ಯಕರವಾಗಿತ್ತು. ಚುನಾಯಿತ ಮುಖ್ಯಮಂತ್ರಿಗೆ ವಾರಗಟ್ಟಲೆ ಭೇಟಿ ನಿರಾಕರಿಸಿದ್ದೇಕೆ? ಐಎಎಸ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕೆಂಬ ಸಣ್ಣ ಆದೇಶವನ್ನೂ ಹೊರಡಿಸದೆ ಸರ್ಕಾರವನ್ನು ಸ್ಥಬ್ದಗೊಳಿಸುವ ಕುಕೃತ್ಯಕ್ಕೆ ಬೆಂಬಲ ಕೊಟ್ಟಿದ್ದೇಕೆ? ಕೊನೆಗೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಭೇಟಿಯಾಗಬೇಕೆಂದರೂ ಅವಕಾಶ ಕೊಡಲಿಲ್ಲವೇಕೆ ಎಂಬ ಸರಳ ಪ್ರಶ್ನೆಗಳು ಮಾದ್ಯಮಗಳಿಗೆ ಮುಖ್ಯವೆನಿಸಲೇ ಇಲ್ಲ. ಬಹುತೇಕ ಮಾರಿಕೊಂಡ ಮಾದ್ಯಮಗಳು ದೇಶದ ಜನರೆದುರು ಸರಳ ಸತ್ಯಗಳನ್ನು ಮುಂದಿಡದೆ, ಇದನ್ನು ರಾಜಕೀಯದ ಹಗ್ಗಜಗ್ಗಾಟ ಎಂಬಂತೆ ಬಿಂಬಿಸಿ ನಾಲ್ಕನೇ ಸ್ಥಂಬದ ಕರ್ತವ್ಯಕ್ಕೆ ದ್ರೋಹ ಎಸಗಿವೆ.

ಕ್ಯೂಬಾದ ವಿರುದ್ಧ ಅಮೆರಿಕಾ ದಿಗ್ಬಂಧನ ಹಾಕಿದಾಗ, ಜನ ಸಂಕಷ್ಟ ಅನುಭವಿಸಿ ಕ್ಯಾಸ್ಟ್ರೊ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಅಮೆರಿಕಾ ಆಶಿಸಿತ್ತು. ಆದರೆ ಈ ಉಪಟಳ ಸರ್ಕಾರದ ವಿರುದ್ಧ ಅಲ್ಲ, ತಮ್ಮ ವಿರುದ್ಧ ಎಂದು ಜನ ಭಾವಿಸಿದ ಕಾರಣ ಅಮೆರಿಕಾದ ಆಟ ನಡೆಯಲಿಲ್ಲ. ದೆಹಲಿಯ ಘಟನಾವಳಿಗಳೂ ಅಷ್ಟೇ. ಇದು ಆಪ್ ಅಥವಾ ಕೇಜ್ರಿವಾಲ್‍ಗೆ ಸಂಬಂಧಿಸಿದ್ದಲ್ಲ. ಜನತಾಂತ್ರಿಕ ಪ್ರತಿನಿಧಿ ಆಡಳಿತದ ಹಕ್ಕಿಗೆ ಸಂಬಂಧಿಸಿದ್ದು ಎಂಬ ಸರಳ ಸತ್ಯವನ್ನು ದೆಹಲಿ ಜನತೆ ಅರ್ಥ ಮಾಡಿಕೊಳ್ಳುತ್ತಾರೆ. ಜನರು ಚುನಾಯಿಸಿದ ಸರ್ಕಾರಗಳ ಮೇಲೆ ಸವಾರಿ ಮಾಡಬಯಸುವ ಕೇಂದ್ರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಜನತೆಯಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

– ಕೆ.ಪಿ.ಸುರೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...