ಯಡ್ಡಿ ಮಗನ ವಿರುದ್ಧ ಬಿಜೆಪಿ ಹೈಕಮಾಂಡ್ ನೇಯುತ್ತಿದೆ `ಲಿಂಗಾಯತ ಬಂಡಾಯ’!

ಸಿಎಂ ಯಡಿಯೂರಪ್ಪನವರ ಮಗ ವಿಜಯೇಂದ್ರ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂಬುದು ಸರ್ವೇ ಸಾಧಾರಣ ಆರೋಪ. ಯಡಿಯೂರಪ್ಪನವರಿಗೂ ಇದು ಬೇಕಾಗಿರಬಹುದು. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ಹೈಕಮಾಂಡ್‌ ಮಾಡಲೊರಟಿರುವುದೇನು ಎಂಬುದರ ಅಸಲಿ ಕತೆ ಇದು.

ಯಡ್ಯೂರಪ್ಪ ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳುತ್ತಿದ್ದಾರಾ? ಬಿಜೆಪಿಯೊಳಗಿನ ಇತ್ತೀಚಿನ ಬೆಳವಣಿಗೆಗಳು ಇಂತದ್ದೊಂದು ಅನುಮಾನ ಮೂಡಿಸುತ್ತಿವೆ. ಸಿಎಂ ಗಾದಿಗೇರಿದ ದಿನದಿಂದಲೂ ಹೈಕಮಾಂಡ್ ಯಡ್ಯೂರಪ್ಪನವರ ಸಂಗಡ `ಒಲ್ಲದ ಗಂಡ’ನಂತೆಯೇ ವರ್ತಿಸುತ್ತ ಬಂದಿದೆ. ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಗಿಟ್ಟಿಸಿಕೊಳ್ಳುವುದಕ್ಕು ಸಿಎಂ ಸಾಹೇಬರು ಸಾಕಷ್ಟು ಸರ್ಕಸ್ ಮಾಡಬೇಕಾಯ್ತು. ದಿಲ್ಲಿ ಮಟ್ಟದಲ್ಲಿ ಇಂಥಾ `ಅ’ಸಂತೋಷ ಪರಿಸ್ಥಿತಿ ಇದ್ದಾಗ್ಯೂ ಯಡ್ಯೂರಪ್ಪನವರು ಇತ್ತೀಚೆಗೆ ಮಗ ವಿಜಯೇಂದ್ರನಿಗೆ ಉತ್ತರಾಧಿಕಾರಿ ಪಟ್ಟ ಕಟ್ಟಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದೇ 27ಕ್ಕೆ ಬೆಂಗ್ಳೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿರುವ ದುಬಾರಿ ಸಮಾರಂಭವೇನಿದೆಯಲ್ಲ, ಅದು ಹೆಸರಿಗಷ್ಟೆ ಯಡ್ಯೂರಪ್ಪನವರ 77ನೇ ಬರ್ತ್ಡೇ ಪಾರ್ಟಿ. ಅಸಲಿಗೆ ಅದು ವಿಜಯೇಂದ್ರನ ಅಧಿಕೃತ ಪಟ್ಟಾಭಿಷೇಕ ಕಾರ್ಯಕ್ರಮ ಅನ್ನೋದು ಜಗಜ್ಜಾಹೀರಾಗಿ ಹೋಗಿದೆ.

ಅಪ್ಪನ ಅಧ್ಯಾಯಕ್ಕೇ ಮಂಗಳ ಹಾಡಲು ಚೌಕಾಬಾರಾ ಆಡುತ್ತಿರುವ ಹೈಕಮಾಂಡ್, ಮಗನ ಉತ್ತರಾಧಿಕಾರವನ್ನು ಸಹಿಸಿಕೊಂಡೀತೇ? ಅದ್ಯಾವ ಪ್ರತಿತಂತ್ರ ಹೆಣೆದು ಯಡ್ಯೂರಪ್ಪಗೆ ಟಾಂಗ್ ಕೊಡಬಲ್ಲದು? ಎಂಬ ಪ್ರಶ್ನೆಗಳು ಗದ್ದಲ ಎಬ್ಬಿಸುತ್ತಿರುವ ಹೊತ್ತಿನಲ್ಲೆ ದಿಲ್ಲಿಯಲ್ಲಿ ಸದ್ದಿಲ್ಲದೆ ನಡೆದ ಉಮೇಶ್ ಕತ್ತಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರ ದಿಢೀರ್ ಭೇಟಿ ಹೊಸ ಲೆಕ್ಕಾಚಾರವೊಂದನ್ನು ತೆರೆದಿಟ್ಟಿದೆ. ಅದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಹೈಕಮಾಂಡ್ ಕುತಂತ್ರ! ಯಡ್ಯೂರಪ್ಪನವರ ಅಸ್ತ್ರವನ್ನು ಅವರ ಮೇಲೆಯೇ ಪ್ರಯೋಗಿಸುವ ಷಡ್ಯಂತ್ರ!!

ವಿಜೇಯೇಂದ್ರನ ಆರಂಗ್ರೇಟ್

ಬಿಜೆಪಿಯೊಳಗೆ ಯುವ ಮೋರ್ಚಾ ಘಟಕಕ್ಕೆ ಹೇಳಿಕೊಳ್ಳುವಂತಹ ಪ್ರಭಾವವಿಲ್ಲ. ಅದರಲ್ಲು ಆಡಳಿತ ಮತ್ತು ಕ್ಯಾಬಿನೆಟ್ ಕಿತಾಪತಿಯಲ್ಲಿ ಮೂಗು ತೂರಿಸುವ ಹಕ್ಕಂತು ಇಲ್ಲವೇ ಇಲ್ಲ. ಅಂತದ್ದರಲ್ಲಿ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರೋ ವಿಜಯೇಂದ್ರ ಮಾಧ್ಯಮಗಳ ಮುಂದೆ ನಿಂತು ಕ್ಯಾಬಿನೆಟ್ ವಿಸ್ತರಣೆಯ ವಿವರಣೆ ಕೊಡ್ತಾರೆ; `ಸದ್ಯದಲ್ಲೆ ಆರು ಸ್ಥಾನ ಭರ್ತಿ ಮಾಡ್ತೀವಿ; ಎಚ್.ವಿಶ್ವನಾಥ್, ಎಂಟಿಬಿಗೆ ಸೂಕ್ತ ಸ್ಥಾನಮಾನ ಕೊಡ್ತೀವಿ’ ಅಂತ ಹೇಳಿಕೆ ಕೊಡ್ತಾರೆಂದರೆ ಪಕ್ಷ ಮತ್ತು ಸರ್ಕಾರದ ಮೇಲೆ ಅವರ ಹಿಡಿತ ಎಷ್ಟು ಬಿಗಿಗೊಳ್ಳುತ್ತಿದೆ ಅನ್ನೋದು ಅರ್ಥವಾಗುತ್ತೆ. ಮೊದಲೆಲ್ಲ ಯಡ್ಯೂರಪ್ಪ ದಿಲ್ಲಿ ನಾಯಕರನ್ನು ಭೇಟಿಯಾಗಬೇಕೆಂದರೆ, ಇಷ್ಟವಿಲ್ಲದಿದ್ದರು ಜೊತೆಗೆ ಶೆಟ್ಟರ್, ಈಶ್ವರಪ್ಪ, ಅನಂತ್‌ಕುಮಾರ್ (ದಿವಂಗತ) ಥರದ ನಾಯಕರನ್ನು ಕರೆದೊಯ್ಯುತ್ತಿದ್ದರು. ಆದರೆ ಮೊನ್ನೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಅಮಿತ್ ಶಾ, ನಡ್ಡಾರನ್ನು ಯಡ್ಯೂರಪ್ಪ ಭೇಟಿಯಾದಾಗ ಜೊತೆಗಿದ್ದದ್ದು ಕನಿಷ್ಠಪಕ್ಷ ಶಾಸಕನೂ ಅಲ್ಲದ, ಮಗ ವಿಜಯೇಂದ್ರ!

ಮೊನ್ನೆಯಷ್ಟೇ ಮುರುಘಾ ಶರಣರ ನೇತೃತ್ವದಲ್ಲಿ ನಡೆದ ಗಣಮೇಳದ ಅಜೆಂಡಾಗಳಲ್ಲಿ ವಿಜಯೇಂದ್ರನನ್ನು ಮುಂದಿನ ಲಿಂಗಾಯತ ಲೀಡರ್ ಆಗಿ ಪ್ರೊಜೆಕ್ಟ್ ಮಾಡುವುದೂ ಒಂದು. ಇಲ್ಲದೆ ಹೋಗಿದ್ದರೆ, ಸರ್ವ ಜನಾಂಗದ ಅನುರಾಗಿಯಾದ ಬಸವಣ್ಣನವರ ಹೆಸರಲ್ಲಿ ನಡೆದ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಒಂದು ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ವಿಜಯೇಂದ್ರನನ್ನು ಆಯ್ಕೆ ಮಾಡುತ್ತಿರಲಿಲ್ಲ.

ಇದಿಷ್ಟೆ ಅಲ್ಲ, ಉಪಚುನಾವಣೆಯಲ್ಲಿ ಜಿದ್ದಾಜಿದ್ದಿನ ಕೆ.ಆರ್.ಪೇಟೆಯ ಹೊಣೆಯನ್ನು ಮಗನ ಹೆಗಲಿಗೇರಿಸಿ, ಅಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಯಡ್ಯೂರಪ್ಪನವರು ವಿಶೇಷ ಆಸ್ಥೆ ವಹಿಸಿದ್ದು ಕೂಡಾ ವಿಜಯೇಂದ್ರನನ್ನು ಹೈಕಮಾಂಡ್ ಮುಂದೆ ಸಕ್ಸಸ್ ಲೀಡರ್ ಆಗಿ ಪ್ರೊಜೆಕ್ಟ್ ಮಾಡಲು. ಮಂತ್ರಿಗಿರಿ ಸಿಗಲಿಲ್ಲವೆಂದು ಮುನಿಸಿಕೊಂಡಿದ್ದ ಮಹೇಶ್ ಕುಮಠಹಳ್ಳಿ ಮತ್ತು ಶ್ರೀಮಂತ ಪಾಟೀಲರನ್ನು ಸಮಾಧಾನ ಮಾಡಿದ್ದು ವಿಜಯೇಂದ್ರ ಎಂಬ ಸುದ್ದಿ ಕೆಲ ಮೀಡಿಯಾಗಳಲ್ಲಿ ಹರಿದಾಡುವಂತೆ ನೋಡಿಕೊಂಡದ್ದಾಗಲಿ, ಹೊಸ ಮಂತ್ರಿಗಳ ಪ್ರಮಾಣ ವಚನದ ಸಂದರ್ಭದಲ್ಲಿ ಬಿಎಸ್‌ವೈ-ವಿರೋಧಿ ಬಿಜೆಪಿಗರಿಗೆ ಇರಿಸುಮುರಿಸಾಗುವಂತೆ ವಿಜಯೇಂದ್ರಗೆ ಜೈಕಾರ ಮೊಳಗಿದ್ದಾಗಲಿ ಎಲ್ಲವೂ ಉತ್ತರಾಧಿಕಾರಿ ಪಟ್ಟಕಟ್ಟುವ ಯೋಜನೆಯ ಭಾಗಗಳೇ ಆಗಿವೆ. ವಿಜಯೇಂದ್ರ ಆಣತಿಯಿಲ್ಲದೆ ಯಾವ ಗಂಭೀರ ಫೈಲ್‌ಗಳು ಮೂವ್ ಆಗಬಾರದು ಎಂಬ ಅಲಿಖಿತ ಆದೇಶವೊಂದು ವಿಧಾನಸೌಧದ ಪಡಸಾಲೆಯಲ್ಲಿ ಚಾಲ್ತಿಯಲ್ಲಿದೆ ಎನ್ನುವ ಮಾತುಗಳೂ ಇವೆ.

ಇದೆಲ್ಲವೂ ಹಠಾತ್ತನೆ ಆದ ಬೆಳವಣಿಗೆಗಳಲ್ಲ. 2018ರ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಬಿಜೆಪಿಗೆ ಭರ್ಜರಿ ಫಸಲು ತಂದುಕೊಟ್ಟ ನಂತರವೂ ಹೈಕಮಾಂಡ್ ತನ್ನತ್ತ ತಾತ್ಸಾರದಿಂದ ನೋಡುತ್ತಿದೆ ಎಂಬುದು ಖಾತ್ರಿಯಾದ ದಿನದಿಂದಲೇ ಯಡ್ಯೂರಪ್ಪನವರ ಕುಟುಂಬದಲ್ಲಿ ಉತ್ತರಾಧಿಕಾರದ ಚರ್ಚೆಗಳು ಶುರುವಾಗಿದ್ದವು. ಯಡ್ಯೂರಪ್ಪ ಅದೆಷ್ಟೆ ಮುಂಗೋಪಿಯಾಗಿದ್ದರೂ ತಮ್ಮ ಮಕ್ಕಳ ಮುಂದೆ, ಅದರಲ್ಲೂ ಮೂವರು ಹೆಣ್ಮಕ್ಕಳ ಕಣ್ಣೀರ ಮುಂದೆ ಕರಗಿಹೋಗುತ್ತಾರೆ. ಹಿಂದೆ ಯಡ್ಯೂರಪ್ಪನವರ ರಾಜಕೀಯದಲ್ಲಿ ಶೋಭಾ ಕರಂದ್ಲಾಜೆಯವರ ಪ್ರಭಾವ ಹೆಚ್ಚಾದ ಸಂದರ್ಭದಲ್ಲು ಶೋಭಾರನ್ನು ದೂರ ಇಡಲು ಅವರ ಕುಟುಂಬ ಬಳಸಿದ್ದು ಇದೇ ತಂತ್ರವನ್ನು. ಮೇಲ್ನೋಟಕ್ಕೆ ಬಿಜೆಪಿ ಬಂಡಾಯಗಾರರ ಒತ್ತಡಕ್ಕೆ ಮಣಿದು ಹೈಕಮಾಂಡ್ ಸಂಧಾನದ ತರುವಾಯ ಯಡ್ಯೂರಪ್ಪನವರು ಗಳಗಳನೆ ಅಳುತ್ತಲೆ ಶೋಭಾರನ್ನು ಇಂಧನ ಸಚಿವೆಯಿಂದ ಕಿತ್ತುಹಾಕಿದ್ದಂತೆ ಕಂಡರೂ, ತೆರೆಮರೆಯ ಹಿಂದೆ ಕುಟುಂಬದ ಒತ್ತಡಗಳೂ ಕೆಲಸ ಮಾಡಿದ್ದವು.

ರಾಜಕೀಯ ಉತ್ತರಾಧಿಕಾರ ತಮ್ಮ ಕುಟುಂಬದ ಕೈಯಲ್ಲೆ ಇರಬೇಕೆಂಬ ಮಕ್ಕಳ ಒತ್ತಾಯಕ್ಕೆ ಮಣಿದೆ ಯಡ್ಯೂರಪ್ಪನವರು ಆಗ ಹಿರಿಮಗ ರಾಘವೇಂದ್ರನನ್ನು ಬೆಳೆಸಲು ಮುಂದಾದದ್ದು. ಇದು ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ ಹದ್ದುಮೀರುವಂತೆ ಮಾಡಿತ್ತು. ಕೊನೆಗೆ ಅದೇ ಅವರಿಗೆ ಮುಳುವಾಯ್ತು.

ಕಳೆದ ಅಸೆಂಬ್ಲಿ ಎಲೆಕ್ಷನ್‌ನಲ್ಲೆ ವಿಜಯೇಂದ್ರನನ್ನು ಸಿದ್ರಾಮಯ್ಯನವರ ಮಗ ಯತೀಂದ್ರನ ವಿರುದ್ಧ ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಯಡ್ಯೂರಪ್ಪ ಹರಸಾಹಸಪಟ್ಟಿದ್ದರು. ಆದರೆ `ಕುಟುಂಬ ರಾಜಕಾರಣ’ ಎಂಬ ಲೇಬಲ್ ಅಡ್ಡಬಂದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ, ಯಾವಾಗ ತನ್ನನ್ನು ಹೈಕಮಾಂಡ್ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂಬುದು ಯಡ್ಯೂರಪ್ಪನವರಿಗೆ ಮನವರಿಕೆಯಾಯ್ತೊ, ಆಗಲೆ ಇನ್ನು ಪೊಲಿಟಿಕಲ್ ವಾರಸುದಾರಿಕೆಯನ್ನು ಅಧಿಕೃತವಾಗಿ ಮಕ್ಕಳಿಗೆ ವರ್ಗಾಯಿಸದಿದ್ದರೆ ತಮ್ಮ ಕುಟುಂಬ ತನ್ನ ರಾಜಕೀಯ ಐಡೆಂಟಿಟಿಯನ್ನೆ ಕಳೆದುಕೊಳ್ಳಲಿದೆ ಎಂಬುದು ಅವರಿಗೆ ಮನದಟ್ಟಾಯ್ತು. ಯಡ್ಯೂರಪ್ಪ ಶತಾಯಗತಾಯ ಮೈತ್ರಿ ಸರ್ಕಾರವನ್ನು ಕೆಡವಿ ಮುಖ್ಯಮಂತ್ರಿಯಾಗಲು ಹಾತೊರೆದದ್ದು ಕೇವಲ ತಾನು ಸಿಎಂ ಗಾದಿಯಲ್ಲಿ ಕೂರುವುದಕ್ಕಷ್ಟೆ ಅಲ್ಲ, ಆ ಮೂಲಕ ತನ್ನ ಕುಟುಂಬಕ್ಕೆ ರಾಜಕಾರಣದ ವಾರಸುದಾರಿಕೆಯನ್ನು ಗಟ್ಟಿ ಮಾಡಿಕೊಡುವುದಕ್ಕೂ ಹೌದು. ಸ್ವತಃ ಹೈಕಮಾಂಡ್ ಆಸಕ್ತಿ ತೋರದೆ ಹೋದರು ಮೂರು ಸಲ ಆಪರೇಷನ್‌ಗೆ ಅವರು ಕೈಹಾಕಿದ್ದು ಕೂಡಾ ಇದೇ ಕಾರಣಕ್ಕೆ. ವಿಶೇಷವೆಂದರೆ ಈ ಮೂರೂ ಆಪರೇಷನ್‌ಗಳಲ್ಲಿ ಯಡ್ಯೂರಪ್ಪನ ಪರವಾಗಿ ಪ್ರಧಾನ ಪಾತ್ರ ವಹಿಸಿದ್ದು ಇದೇ ವಿಜಯೇಂದ್ರ!

ಮನೆಯೊಂದು ಮೂರು ಬಣ….

ಅಸಲಿಗೆ ಬಂಡಾಯ ಅನ್ನೋದು ಬಿಜೆಪಿಗೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಸ್ವತಃ ಯಡ್ಯೂರಪ್ಪನವರ ಕುಟುಂಬದಲ್ಲೇ ಬಣ ರಾಜಕೀಯ ಜೋರಾಗಿ ನಡೆದಿದೆ. ಕುಟುಂಬದ ಆಪ್ತ ಮೂಲಗಳೇ ಖಾತ್ರಿ ಪಡಿಸುವಂತೆ ಶಿಕಾರಿಪುರದ ಫ್ಯಾಮಿಲಿಯಲ್ಲೀಗ ಮೂರು ಬಣಗಳಿವೆ. ಯಡ್ಯೂರಪ್ಪನವರ ಇಬ್ಬರು ಗಂಡು ಮಕ್ಕಳದು ತಲಾ ಒಂದೊಂದು ಬಣ. ಮೂರನೇ ಬಣವೇ ಇಲ್ಲಿ ವಿಶೇಷ ಅನ್ನಿಸೋದು. ಹೌದು, ಅದು ಶೋಭಾ ಕರಂದ್ಲಾಜೆ, ಯಡ್ಯೂರಪ್ಪನವರ ಹಿರಿಯ ಅಳಿಯ ವಿರೂಪಾಕ್ಷ ಯಮಕನಮರಡಿ ಮತ್ತು ಇಂಟರೆಸ್ಟಿಂಗ್ಲಿ ಯಡ್ಯೂರಪ್ಪನ ಪಿಎ ಸಂತೋಷ್ ಒಟ್ಟುಗೂಡಿದ ಬಣ! ಮೂವರು ಹೆಣ್ಣುಮಕ್ಕಳಲ್ಲಿ ಹಿರಿಯ ಮಗಳು ಅರುಣಾ ದೇವಿಯನ್ನು ಹೊರತುಪಡಿಸಿದರೆ ಇನ್ನುಳಿದ ಇಬ್ಬರು (ಪದ್ಮಾವತಿ ಮತ್ತು ಉಮಾದೇವಿ) ಹೆಣ್ಮಕ್ಕಳು ವಿಜಯೇಂದ್ರನ ಬಣದಲ್ಲಿದ್ದಾರೆ. ಪಾಪ, ರಾಘವೇಂದ್ರನದು ಒಂಟಿಸೇನೆ!

ಆಗಾಗ್ಗೆ ಈ ಬಣಗಳ ನಡುವೆ ಸಣ್ಣದಾಗಿ ಸಂಘರ್ಷವೂ ನಡೆಯುತ್ತ ಬಂದಿದೆ. ಉಪಚುನಾವಣೆಗು ಮೊದಲೇ ಸರ್ಕಾರದ ಆಡಳಿತದಲ್ಲಿ ವಿಜಯೇಂದ್ರನ ಹಸ್ತಕ್ಷೇಪ ಅತಿಯಾದಾಗ, ಆ ಬಗ್ಗೆ ಮಾಧ್ಯಮಗಳಲ್ಲಿ ಒಂದಷ್ಟು ಚರ್ಚೆ ನಡೆದದ್ದು ನೆನಪಿರಬಹುದು. ಆ ಸ್ಟೋರಿಯನ್ನು ಪ್ಲಾಂಟ್ ಮಾಡಿದ್ದು ಯಡ್ಯೂರಪ್ಪನ ವಿರೋಧಿಗಳಲ್ಲ; ಕರಂದ್ಲಾಜೆ, ಹಿರಿಯ ಅಳಿಯ ವಿರೂಪಾಕ್ಷ ಮತ್ತು ಪಿಎ ಸಂತೋಷ್ ಬಣ! ಆಗಿನ್ನು ಬಿಜೆಪಿಯ ಕಾರ್ಯಾಧ್ಯಕ್ಷ ಹುದ್ದೆಯಲ್ಲಿದ್ದ ಜೆ.ಪಿ. ನಡ್ಡಾ ಸ್ವತಃ ಯಡ್ಯೂರಪ್ಪಗೆ ಫೋನ್ ಮಾಡಿ ವಿಜಯೇಂದ್ರನನ್ನು ನಿಯಂತ್ರಿಸುವಂತೆ ತಾಕೀತು ಮಾಡಿದ್ದರು. ಆಗ ವಿಜಯೇಂದ್ರ ತಾನು ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲವೆಂದು ಬರೋಬ್ಬರಿ ಎರಡು ಪುಟಗಳ ಸ್ಪಷ್ಟೀಕರಣದ ಪತ್ರ ಬರೆದು ತನ್ನ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಬೇಕಾಯ್ತು.

ಅದಾದ ನಂತರ ಖುದ್ದು ಯಡ್ಯೂರಪ್ಪ ಮಧ್ಯಸ್ಥಿಕೆ ವಹಿಸಿ, ಹೈಕಮಾಂಡ್ ತನ್ನ ಜೊತೆ ಹೇಗೆ ವರ್ತಿಸುತ್ತಿದೆ, ಇದು ಹೀಗೇ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಪಕ್ಷದೊಳಗೆ ತನ್ನನ್ನು ಹೇಗೆ ಮೂಲೆಗುಂಪು ಮಾಡಲಾಗುತ್ತಿದೆ. ಹಾಗೇನಾದರು ಆದಲ್ಲಿ, ತಮ್ಮ ಇಡೀ ಕುಟುಂಬ ಹೇಗೆ ತನ್ನ ರಾಜಕೀಯ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂಬುದನ್ನು ಮನೆಯವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆಮೇಲೆಯೇ, ಕುಟುಂಬದ ಹಿತಾಸಕ್ತಿಗಾಗಿ ಮನೆಯವರೆಲ್ಲ ತಮ್ಮ ನಡುವಿನ ಮನಸ್ತಾಪ ಮರೆತು ಒಮ್ಮತಕ್ಕೆ ಬಂದದ್ದು. ಆಗ ಯಡ್ಯೂರಪ್ಪನವರ ಉತ್ತರಾಧಿಕಾರಿ ಯಾರಾಗಬೇಕೆಂಬ ಚರ್ಚೆ ಮುನ್ನೆಲೆಗೆ ಬಂದಿತ್ತು.

ಶಿವಮೊಗ್ಗದ ಸಂಸದನೂ ಆಗಿರುವ ಬಿ.ವೈ.ರಾಘವೇಂದ್ರ ಮತ್ತು ವಿಜಯೇಂದ್ರ ಇವರಿಬ್ಬರ ನಡುವೆ ಸಣ್ಣ ಪೈಪೋಟಿಯೂ ನಡೆದಿತ್ತು. ಆದರೆ ಈ ಸಲ ಮೂವರು ಹೆಣ್ಣುಮಕ್ಕಳು ವಿಜಯೇಂದ್ರ ಪರ ನಿಂತಿದ್ದರು. ಅದಕ್ಕೆ ಕಾರಣವೂ ಉಂಟು. ವಿಜಯೇಂದ್ರಗೆ ಇರುವ ಫ್ಯಾಮಿಲಿ ಅಟ್ಯಾಚ್‌ಮೆಂಟ್ ರಾಘವೇಂದ್ರಗೆ ಇಲ್ಲ. ಅಲ್ಲದೆ, ತಮ್ಮನಿಗಿಂತ ಮೊದಲೇ ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಶಾಸಕ, ಸಂಸದನಾದರು ಇದುವರೆಗೆ ಲೀಡರ್‌ಶಿಪ್‌ನ ಲಕ್ಷಣ ತೋರಿಸಿಲ್ಲ. ಶಿವಮೊಗ್ಗದಲ್ಲಿ ಗೆಲ್ಲುವುದಕ್ಕು ಅಪ್ಪನ ನಾಮಬಲ ಬೇಕು. ಈಶ್ವರಪ್ಪನ ವರ್ಚಸ್ಸಿನಿಂದ ಶಿವಮೊಗ್ಗ ಸಿಟಿಯನ್ನು ಹೊರತರಲು ಸಾಧ್ಯವಾಗಿಲ್ಲ. ಅದೇ ಕಾರಣಕ್ಕೆ ಹೆಣ್ಮಕ್ಕಳು ವಿಜಯೇಂದ್ರನ ಪರ ವಕಾಲತ್ತು ವಹಿಸಿದ್ದರು. ಅಲ್ಲಿಂದಾಚೆಗೇ ವಿಜಯೇಂದ್ರನನ್ನು ಪ್ರಮೋಟ್ ಮಾಡುವ ವ್ಯವಸ್ಥಿತ ಯೋಜನೆಗಳು ಶುರುವಾದದ್ದು.

ಜೆಡಿಎಸ್ ಪ್ರಾಬಲ್ಯವಿರುವ ಹಳೇಮೈಸೂರು ಒಕ್ಕಲಿಗ ಬೆಲ್ಟ್‌ನಲ್ಲಿ ತನ್ನ ವರ್ಚಸ್ಸು ಹಿಗ್ಗಿಸಿಕೊಳ್ಳುವ ಆಲೋಚನೆಯಲ್ಲಿರುವ ಬಿಜೆಪಿ ಹೈಕಮಾಂಡ್ ಮತ್ತು ಸಂಘ ಪರಿವಾರದ ಉದ್ದೇಶವನ್ನು ಚೆನ್ನಾಗಿ ಬಲ್ಲ ಯಡ್ಯೂರಪ್ಪನವರು ಉದ್ದೇಶಪೂರ್ವಕವಾಗಿ ಕೆ.ಆರ್.ಪೇಟೆ ಕ್ಷೇತ್ರದ ಚುನಾವಣಾ ಹೊಣೆಯನ್ನು ವಿಜಯೇಂದ್ರನ ಹೆಗಲಿಗೇರಿಸಿದರು. ಈ ಭಾಗದಲ್ಲಿ ಬಿಜೆಪಿ ವಿಸ್ತಾರಗೊಳ್ಳಬೇಕೆಂದರೆ ನನ್ನ ಮಗನ ಅನಿವಾರ್ಯತೆ ನಿಮಗಿದೆ ಎಂಬುದನ್ನು ಹೈಕಮಾಂಡ್‌ಗೆ ಸೂಚ್ಯವಾಗಿ ರವಾನಿಸುವುದು ಯಡ್ಯೂರಪ್ಪನವರ ಉದ್ದೇಶವಾಗಿತ್ತು. ಹಾಗಾಗಿಯೇ ಅವರು ತಮ್ಮ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಗಿಂತ ಮೈಸೂರು, ಮಂಡ್ಯ ಭಾಗದಲ್ಲೆ ವಿಜಯೇಂದ್ರನನ್ನು ನಾಟಿ ಮಾಡಲು ಯತ್ನಿಸುತ್ತಿದ್ದಾರೆ. ಕೆ.ಆರ್.ಪೇಟೆಯಲ್ಲಿ ಗೆದ್ದು ಈ ಹಾದಿಯಲ್ಲಿ ಕೊಂಚ ಯಶಸ್ವಿಯೂ ಆದರು. ಅದೇ ವಿಜಯೋತ್ಸವದ ನೆಪವಿಟ್ಟುಕೊಂಡು ಅಮಿತ್ ಶಾರನ್ನು ಭೇಟಿಯಾಗಿ ಬಂದ ವಿಜಯೇಂದ್ರ, ಹೂಗುಚ್ಛ ಹಿಡಿದು ನಿಂತ ತಮ್ಮಿಬ್ಬರ ಫೋಟೊ ಬಳಸಿಕೊಂಡು ತನಗೆ ಹೈಕಮಾಂಡ್‌ನಿಂದಲೇ ಅಧಿಕೃತ ಮಾನ್ಯತೆ ಸಿಕ್ಕಿದೆ ಎಂದು ಬಿಂಬಿಸಿಕೊಳ್ಳಲು ಶುರು ಮಾಡಿದ.

ಹೈಕಮಾಂಡ್ ಕೈಗೆ ಸಿಕ್ಕ ಹೊಸ ಅಸ್ತ್ರ

ಇತ್ತ ಯಡ್ಯೂರಪ್ಪರನ್ನು ಸೈಡ್‌ಲೈನ್ ಮಾಡಲು ನಿರಂತರ ಕಸರತ್ತು ನಡೆಸುತ್ತಿರುವ ಹೈಕಮಾಂಡ್ ಪ್ರತಿಬಾರಿ ಹಿನ್ನಡೆ ಅನುಭವಿಸುತ್ತಲೇ ಬಂದಿದೆ. ಅದಕ್ಕೆ ಮುಖ್ಯ ಕಾರಣ, ಯಡ್ಯೂರಪ್ಪ ಇವತ್ತಿಗೂ ಲಿಂಗಾಯತ ವೋಟ್‌ಬ್ಯಾಂಕನ್ನು ತಮ್ಮ ಕಬ್ಜಾದಲ್ಲಿ ಇಟ್ಟುಕೊಂಡಿರೋದು. ಅಷ್ಟೆಲ್ಲ ಆಪರೇಷನ್ ಅಪಖ್ಯಾತಿಯ ನಡುವೆಯು ಉಪಚುನಾವಣೆಯ ಫಲಿತಾಂಶಗಳು ಅದನ್ನು ಸಾಬೀತು ಮಾಡಿವೆ. ತನ್ನ ಪಾಲಿಗೆ ಬೇಡದ ಕೂಸಿನಂತಾಗಿರುವ ಯಡ್ಯೂರಪ್ಪರನ್ನು ಹೇಗೆ ನಿವಾರಿಸಿಕೊಳ್ಳೋದು ಎಂಬ ಆಲೋಚನೆಯಲ್ಲಿದ್ದ ಹೈಕಮಾಂಡ್ ಕೈಗೆ ಯಡ್ಯೂರಪ್ಪನವರೇ ಈಗ `ಪುತ್ರವ್ಯಾಮೋಹ’ ಅಸ್ತ್ರ ಕೊಟ್ಟಂತಾಗಿದೆ.

ಹೌದು, ಮಗ ವಿಜಯೇಂದ್ರನನ್ನು ಮುಂಚೂಣಿಗೆ ತರಲು ಯತ್ನಿಸುತ್ತಿರುವ ಯಡ್ಯೂರಪ್ಪನವರ ಕ್ರಮ ಹಲವು ಹಿರಿಯ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅವರಲ್ಲಿ ಹೆಚ್ಚಿನವರು ಲಿಂಗಾಯತ ಲೀಡರ್‌ಗಳು ಅನ್ನೋದು ವಿಶೇಷ. ಮಂತ್ರಿಗಿರಿ ವಂಚಿತ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಉದಾಸಿ, ಬಸನಗೌಡ ಪಾಟೀಲ್ ಯತ್ನಾಳ್ ಇವರೆಲ್ಲ ಬೇಸರಗೊಂಡಿದ್ದಾರೆ. ಯಡ್ಯೂರಪ್ಪನವರ ನಂತರ ಲಿಂಗಾಯತ ವೋಟ್‌ಬ್ಯಾಂಕ್ ರಾಜಕಾರಣಕ್ಕೆ ತಾವು ವಾರಸುದಾರರಾಗಬಹುದು, ಆ ಮೂಲಕ ಮುಂದೊಂದು ದಿನ ಕರ್ನಾಟಕದ ಸಿಎಂ ಹುದ್ದೆಗೆ ಏರುವ ಅವಕಾಶ ಬಂದರೂ ಬರಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಇವರಿಗೆ ಈಗ ವಿಜಯೇಂದ್ರ ದಿಢೀರ್ ಲಿಂಗಾಯತ ಲೀಡರ್ ಆಗಿ ಪ್ರತಿಷ್ಠಾಪನೆಯಾಗುತ್ತಿರೋದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

ಹೈಕಮಾಂಡ್ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ ಎಂಬುದು ಲೇಟೆಸ್ಟ್ ಮಾಹಿತಿ. ಇತ್ತ ಸಂಪುಟ ವಿಸ್ತರಣೆಯಾದ ಆರೇ ದಿನಕ್ಕೆ ಸಿಟ್ಟು ಮಾಡಿಕೊಂಡಿದ್ದ ಉಮೇಶ್ ಕತ್ತಿಯನ್ನು ಹೈಕಮಾಂಡ್ ದಿಲ್ಲಿಗೆ ಕರೆಸಿಕೊಂಡು ಮಾತನಾಡಿರೋದರ ಅಸಲೀ ಕಾರಣವೇ ಇದು. ಮೇಲ್ನೋಟಕ್ಕೆ ತನ್ನ ಸೋದರ ರಮೇಶ್ ಕತ್ತಿಯನ್ನು ರಾಜ್ಯಸಭಾ ಸದಸ್ಯನನ್ನಾಗಿ ಆಯ್ಕೆ ಮಾಡುವ ಮನವಿ ಹಿಡಿದು ಉಮೇಶ್ ಕತ್ತಿಯೇ ಜೆಪಿ ನಡ್ಡಾರ ಆಫೀಸಿಗೆ ಹೋದಂತೆ ಬಿಂಬಿಸಲಾಗುತ್ತಿದೆ. ಆದರೆ ಅದು ಖುದ್ದು ಹೈಕಮಾಂಡ್ ಬುಲಾವ್ ಕೊಟ್ಟು ಕತ್ತಿಯನ್ನು ಕರೆಸಿಕೊಂಡದ್ದು. ಜೆಪಿ ನಡ್ಡಾ ಮಾತ್ರವಲ್ಲದೆ, ಸಂಘ ಪರಿವಾರದ ಮತ್ತೊಬ್ಬ ನಾಯಕ ಕೂಡಾ ಕತ್ತಿ ಜೊತೆಗೆ ದಿಲ್ಲಿಯಲ್ಲಿ ಮಾತಾಡಿರುವ ವರ್ತಮಾನವಿದೆ. ನೆನಪಿರಲಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಅಪಾಯಿಂಟ್‌ಮೆಂಟ್ ಕೊಡುವಂತೆ ಬಿಜೆಪಿ ಅಧ್ಯಕ್ಷರನ್ನು ಪರಿಪರಿಯಾಗಿ ಬೇಡಿಕೊಂಡರು ಯಡ್ಯೂರಪ್ಪರನ್ನು ಸತಾಯಿಸಿದ್ದ ಹೈಕಮಾಂಡ್, ಉಮೇಶ್ ಕತ್ತಿಗೆ ಅಷ್ಟು ಅನಾಯಾಸಕ್ಕೆ ಬಾಗಿಲು ತೆರೆದು ಸ್ವಾಗತಿಸುತ್ತದೆಯೇ?

`ಮೂಲ ಬಿಜೆಪಿಗರು ಮತ್ತು ಹೊಸ ವಲಸಿಗರನ್ನು ಸಮಸಂಖ್ಯೆಯಲ್ಲಿ ಮಂತ್ರಿ ಮಾಡಲು ನಾವು ಗ್ರೀನ್ ಸಿಗ್ನಲ್ ಕೊಟ್ಟಿದ್ದೆವು. ಅದರಲ್ಲಿ ನಿಮ್ಮ ಹೆಸರೂ ಒಳಗೊಂಡಂತೆ ಕೆಲವು ಲಿಂಗಾಯತ ನಾಯಕರ ಹೆಸರುಗಳು ಇದ್ದವು. ಆದರೆ, ತಮ್ಮ ಮಗನನ್ನು ಲಿಂಗಾಯತ ಸಮುದಾಯದ ಪರ್ಯಾಯ ನಾಯಕನನ್ನಾಗಿ ಬೆಳೆಸುವ ಉಮೇದಿನಲ್ಲಿರುವ ಯಡ್ಯೂರಪ್ಪನವರೆ, ವಲಸಿಗರಿಗೇ ಹೆಚ್ಚಿಗೆ ಆದ್ಯತೆ ಕೊಡಬೇಕು ಎಂಬ ವಾದ ಮಂಡಿಸಿ, ನಿಮ್ಮನ್ನೆಲ್ಲ ದೂರವಿಟ್ಟಿದ್ದಾರೆ. ಬಂಡಾಯ ಭುಗಿಲೇಳಬಹುದೆಂದು ಕೊನೇ ಕ್ಷಣದಲ್ಲಿ ನಾವು ಅನುಮತಿ ಕೊಟ್ಟಿದ್ದ ಮೂವರು ಮೂಲ ಬಿಜೆಪಿಗರ ಮಂತ್ರಿಗಿರಿಯನ್ನೂ ರದ್ದು ಮಾಡಿದೆವು’ ಎಂಬ ಒಕ್ಕಣೆಯೊಂದಿಗೆ ಮುಂದಿನ ಬಂಡಾಯಕ್ಕೆ ಉಮೇಶ್ ಕತ್ತಿಗೆ ಹೈಕಮಾಂಡ್ ಹಸಿರು ನಿಶಾನೆ ಕೊಟ್ಟು ಕಳಿಸಿದೆ ಎಂಬ ಖಚಿತ ಮಾಹಿತಿ ತಿಳಿದುಬಂದಿದೆ. ನಡ್ಡಾ ಅವರನ್ನು ಭೇಟಿಯಾಗಿ ಹೊರಬಂದ ಕತ್ತಿಯವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪರಿಯೇ ಇದನ್ನು ಸೂಚ್ಯವಾಗಿ ಸಾಬೀತು ಮಾಡುತ್ತೆ. `ಮಂತ್ರಿಗಿರಿ ಕೈತಪ್ಪಿದ ಅಸಮಾಧಾನವನ್ನು ಹೇಳಿಕೊಳ್ಳಲು ನಡ್ಡಾರನ್ನು ಭೇಟಿಯಾಗಿದ್ದಿರಾ?’ ಎಂಬ ಪ್ರಶ್ನೆಗೆ, “ನನ್ನನ್ನು ಮಂತ್ರಿ ಮಾಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟದ್ದು. ಅವರು ಮನಸ್ಸು ಮಾಡಿದ್ರೆ ಮಂತ್ರಿಯಷ್ಟೇ ಯಾಕೆ, ನನ್ನನ್ನು ಸಿಎಂ ಬೇಕಾದ್ರು ಮಾಡ್ತಾರೆ” ಎಂಬ ತುಂಬು ಆತ್ಮವಿಶ್ವಾಸದ ಹೇಳಿಕೆ ಎಸೆದು ನಕ್ಕಿದ್ದರು. ಇಲ್ಲಿ ಕತ್ತಿಯನ್ನು ಸಿಎಂ ಮಾಡುವ ಆಲೋಚನೆ ಖಂಡಿತ ಹೈಕಮಾಂಡ್‌ಗೆ ಇಲ್ಲ, ಅಂತಹ ಎಳಸು ಮಾತುಗಳನ್ನೂ ನಡ್ಡಾ ಮಾತಾಡಿರೋಲ್ಲ. ಆದ್ರೆ ಯಡ್ಯೂರಪ್ಪನವರ ವಿರುದ್ಧ ಕತ್ತಿಯನ್ನು ಪ್ರಚೋದಿಸಿರುವ ಸಾಧ್ಯತೆಯೇ, ಆ ಉತ್ತರದಲ್ಲಿ `ಸಿಎಂ’ ಹುದ್ದೆ ನುಸುಳುವಂತೆ ಮಾಡಿರೋದನ್ನು ತಳ್ಳಿ ಹಾಕಲಿಕ್ಕಾಗುವುದಿಲ್ಲ.

ಈಗ ಶುರುವಾಗಿರುವ ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಯಡ್ಯೂರಪ್ಪನವರ ಪುತ್ರವ್ಯಾಮೋಹದ ವಿರುದ್ಧ ಸಿಡಿದೇಳುವ ಸಾಧ್ಯತೆಯಿರುವ ಲಿಂಗಾಯತ ನಾಯಕರುಗಳನ್ನೆಲ್ಲ ಕಲೆಹಾಕಿ ಯಡ್ಯೂರಪ್ಪನವರ ವಿರುದ್ಧ `ಲಿಂಗಾಯತರ’ ಬಂಡಾಯ ಭುಗಿಲೇಳುವಂತೆ ಮಾಡಬೇಕೆನ್ನುವುದು ಹೈಕಮಾಂಡ್ ಕತ್ತಿಗೆ ವಹಿಸಿರುವ ಹೊಣೆ. . ಯಾವ ಲಿಂಗಾಯತ ಅಸ್ತ್ರವನ್ನಿಟ್ಟುಕೊಂಡು ಯಡ್ಯೂರಪ್ಪ ಆಟ ಆಡುತ್ತಿದ್ದರೋ ಅದೇ ಅಸ್ತ್ರವನ್ನು ಅವರ ಮೇಲೆ ಪ್ರಯೋಗಿಸಿ ನಯವಾಗಿ ನಿವಾರಿಸಿಕೊಳ್ಳುವುದು ದಿಲ್ಲಿ ನಾಯಕರ ಸದ್ಯದ `ಸಂತೋಷ’ದಾಯಕ ಉಪಾಯ. ಆ ಬಂಡಾಯಕ್ಕೆ ಯಡ್ಯೂರಪ್ಪ ಮೆತ್ತಗಾಗಿ ತಮ್ಮ ಬಳಿ ಸಂಧಾನಕ್ಕೆ ಬಂದರೆ, `ನೀವಿನ್ನು ಗೌರವಯುತವಾಗಿ ರಾಜಕೀಯದಿಂದ ವಿದಾಯ ಹೇಳುವುದು ಕ್ಷೇಮ ಅನ್ನಿಸುತ್ತೆ ಯಡ್ಯೂರಪ್ಪಾ`ಜಿ’, ಅದಕ್ಕೆ ಬೇಕಾದ ಏರ್ಪಾಟು ನಾವು ಮಾಡ್ತೀವಿ. ನಿಮ್ಮನ್ನು ಯಾವುದಾದರು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡ್ತೀವಿ. ನಿಮ್ಮ ಮಗನಿಗೆ ಆತನ ಅನುಭವಕ್ಕೆ ತಕ್ಕಂತ ಸ್ಥಾನಮಾನ ಕೊಡ್ತೀವಿ. ಇದಕ್ಕೂ ನೀವು ಒಪ್ಪದಿದ್ದರೆ ನಿಮ್ಮಿಷ್ಟ….’ ಎಂಬ ಆಫರ್ ಇಟ್ಟು ರಾಜ್ಯ ಬಿಜೆಪಿಯನ್ನು ಯಡ್ಯೂರಪ್ಪ ಬಿಗಿಹಿಡಿತದಿಂದ ಹೊರತರುವುದು ಹೈಕಮಾಂಡ್‌ನ ಹೊಸ ಗೇಮ್‌ಪ್ಲ್ಯಾನ್.

ಇದೆಲ್ಲ ಯಡ್ಯೂರಪ್ಪನವರಿಗೆ ಗೊತ್ತಿಲ್ಲ ಅಂತೇನಲ್ಲ. ಹೈಕಮಾಂಡ್ ಜೊತೆ ತಗ್ಗಿಬಗ್ಗಿ ನಡೆದರೂ ತುಂಬಾ ದಿನ ತನಗಿಲ್ಲಿ ಭವಿಷ್ಯವಿಲ್ಲ. ತನ್ನ ನಂತರ ನನ್ನ ಮಕ್ಕಳಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿ ಸ್ಥಾನಮಾನ ಕೊಡುತ್ತೆ ಅನ್ನೋದಕ್ಕೂ ಗ್ಯಾರಂಟಿಯಿಲ್ಲ. ಅಷ್ಟರೊಳಗೆ ಮಗನ ಭವಿಷ್ಯ ಸೆಟ್ಲ್ ಮಾಡಿಬಿಡಬೇಕು. ಅದಕ್ಕಾಗಿ ಹೈಕಮಾಂಡ್‌ಗೆ ಸೆಡ್ಡು ಹೊಡೆದರೂ ಪರವಾಗಿಲ್ಲ. ಈ ಕಾಳಗದಲ್ಲಿ ಕಳೆದುಕೊಳ್ಳುವ ಭೀತಿಗಿಂತ ಗಳಿಸಿಕೊಳ್ಳುವ ಆದಾಯವೇ ಹೆಚ್ಚು ಎಂಬ ನಿರ್ಧಾರಕ್ಕೆ ಬಂದಿರುವ ಯಡ್ಯೂರಪ್ಪನವರೂ ಮಗನನ್ನು ಮುನ್ನೆಲೆಗೆ ತರುವ ಸಾಹಸಕ್ಕೆ ಕೈಹಾಕಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ, ಮುಂದೆರಡು ತಿಂಗಳಲ್ಲಿ ಕರ್ನಾಟಕ ರಾಜಕಾರಣ ಮತ್ತಷ್ಟು ರಂಗೇರುವುದಂತೂ ಸ್ಪಷ್ಟ ಅನ್ನಿಸುತ್ತೆ….


ಶೆಟ್ಟರ್ ಮನೆಯಲ್ಲಿ ನಡೆದ ಸಭೆಯ ಗುಟ್ಟೇನು?

ಉಮೇಶ್ ಕತ್ತಿ ಬಿಜೆಪಿ ಹೈಕಮಾಂಡ್ ಭೇಟಿಯಾಗಿ ಬಂದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಅವರ ಮನೆಯಲ್ಲಿ ನಡೆದ ಅತೃಪ್ತರ ಸಭೆ ಬಂಡಾಯದ ಸ್ಪಷ್ಟ ಮುನ್ಸೂಚನೆ ನೀಡುತ್ತಿದೆ. ಇದು ಕೇವಲ ಮಂತ್ರಿಗಿರಿ ಕೈತಪ್ಪಿದವರ ಬಂಡಾಯ ಮಾತ್ರವಲ್ಲ, `ಯಡ್ಯೂರಪ್ಪನವರ ವಿರುದ್ಧ ಲಿಂಗಾಯತ ಲೀಡರ್‌ಗಳ ಬಂಡಾಯ’ ಭುಗಿಲೇಳಿಸುವುದು ಇದರ ಉದ್ದೇಶ. ಅವತ್ತು ಸಭೆ ಸೇರಿದ್ದವರಲ್ಲಿ ಪ್ರಮುಖರಾದ ಶೆಟ್ಟರ್, ಕತ್ತಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ್, ಎ.ಎಸ್. ಪಾಟೀಲ ನಡಹಳ್ಳಿ, ಶಂಕರ್ ಪಾಟೀಲ ಮುನೇನಕೊಪ್ಪ ಇವರೆಲ್ಲ ಲಿಂಗಾಯತ ಲೀಡರ್‌ಗಳು. ಶೆಟ್ಟರ್ ಮನೆಯಲ್ಲಿ ಸಭೆ ಸೇರುವುದಕ್ಕು ಮುನ್ನ ಇವರೆಲ್ಲ ಖಾಸಗಿ ಹೊಟೇಲ್ ಒಂದರಲ್ಲಿ ಕಲೆತು ಹೈಕಮಾಂಡ್‌ನ ಇಂಗಿತವನ್ನು ಚರ್ಚಿಸಿಕೊಂಡೇ ಶೆಟ್ಟರ್‌ರನ್ನು ಎಡತಾಕಿದ್ದರು. ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಯಡ್ಯೂರಪ್ಪನವರ ಪುತ್ರವ್ಯಾಮೋಹದ ವಿರುದ್ಧ ಬಂಡಾಯವನ್ನು ಹುರಿಗಟ್ಟಿಸಲು ಹೈಕಮಾಂಡ್‌ನಿಂದ ಗ್ರೀನ್‌ಸಿಗ್ನಲ್ ಸಿಕ್ಕಿದ್ದು, ಅದರ ನಾಯಕತ್ವವನ್ನು ನೀವೇ ವಹಿಸಿಕೊಳ್ಳಬೇಕೆಂದು ಶೆಟ್ಟರ್‌ರನ್ನು ಕೇಳುವುದಕ್ಕೆಂದೇ ಅವರು ಹೋಗಿದ್ದು. ಹಿಂದೊಮ್ಮೆ ಇಂತಹ ಆತುರದ ನಿರ್ಧಾರ ಕೈಗೊಂಡು ಯಡ್ಯೂರಪ್ಪನ ವಿರುದ್ಧ ನಿಲ್ಲಲು ಹೋಗಿ ಯಡವಟ್ಟು ಮಾಡಿಕೊಂಡಿದ್ದ, ಕೊನೆಗೆ ಯಡ್ಯೂರಪ್ಪನವರ ಮರ್ಜಿಯಿಂದಲೇ ಸಿಎಂ ಆಗುವ ದೈನೇಸಿ ಸ್ಥಿತಿ ತಂದುಕೊಂಡಿದ್ದ ಶೆಟ್ಟರ್ ಈ ಆಫರ್‌ಗೆ ಆತುರ ತೋರದೆ `ಹೈಕಮಾಂಡ್‌ನಿಂದ ನನಗೆ ಈ ಬಗ್ಗೆ ಖಾತ್ರಿ ಸಿಗಲಿ ಆಮೇಲೆ ನೋಡೋಣ. ಸದ್ಯಕ್ಕೆ ಈ ದಿಢೀರ್ ಬಂಡಾಯದ ಹೊಣೆ ಹೊತ್ತುಕೊಳ್ಳಲಾರೆ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಿ ಕಳಿಸಿದ್ದಾರೆ. ಅರ್ಥಾತ್, ಮುಂದಿನ ದಿನಗಳಲ್ಲಿ ಇದೇ ದಿಕ್ಕಿನಲ್ಲಿ ಬಂಡಾಯ ಜೋರಾದರೆ ಆಗ ತಾನು ನಾಯಕತ್ವ ವಹಿಸಿಕೊಳ್ಳಲು ಸಿದ್ದ ಎಂಬ ಇಂಗಿತ ಶೆಟ್ಟರ್ ಅವರದು.

ಯಡ್ಯೂರಪ್ಪನವರ ವಿರುದ್ಧ ಲಿಂಗಾಯತ ಶಾಸಕರ ಬಂಡಾಯವನ್ನು ಹುರಿಗಟ್ಟಿಸುವುದು ಮಾತ್ರವಲ್ಲ, ಯಡ್ಯೂರಪ್ಪನವರನ್ನು ಇಳಿಸಿದ ನಂತರ ಸಿಎಂ ಗಾದಿಗೆ ಮತ್ತೊಬ್ಬ ಲಿಂಗಾಯತ ನಾಯಕನನ್ನು ತಾತ್ಕಾಲಿಕವಾಗಿಯಾದರು ಕೂರಿಸದೆ ಹೋದರೆ, ಅದು ಹೈಕಮಾಂಡ್‌ಗೆ ಬಿಸಿ ತುಪ್ಪವಾಗಲಿದೆ. ಅಂತಹ ಸಂದರ್ಭ ಬಂದರೆ ಹೈಕಮಾಂಡ್ ಪಾಲಿಗೆ, ಮಾಜಿ ಮುಖ್ಯಮಂತ್ರಿಯಾದ ಅನುಭವವಿರುವ ತಾನೇ ಸೂಕ್ತ ಆಯ್ಕೆಯಾಗಲಿದ್ದೇನೆ, ಅದಕ್ಕೋಸ್ಕರ ಯಾಕೆ ಅವಸರ ಪಟ್ಟು ಕೈಸುಟ್ಟುಕೊಳ್ಳಬೇಕು. ಕಾದು ನೋಡೋಣ ಎಂಬ ತಂತ್ರಗಾರಿಕೆ ಶೆಟ್ಟರ್‌ರದ್ದು. ಆದರೆ ಈ ಸಭೆ `ಲಿಂಗಾಯತ ಬಂಡಾಯ’ಕ್ಕೆ ಮುನ್ನುಡಿಯನ್ನಂತು ಬರೆದಿದೆ.


ಯಡ್ಯೂರಪ್ಪ ಹಿಗ್ಗಾಮುಗ್ಗಾ ಬೈದ ಆ `ಸಂತೋಷ್’ ಯಾರು?

ಅತ್ತ ಜಗದೀಶ್ ಶೆಟ್ಟರ್ ಅವರ ಮನೆಯಲ್ಲಿ ಲಿಂಗಾಯತ ಶಾಸಕರ ನೇತೃತ್ವದಲ್ಲಿ ಅತೃಪ್ತರ ಸಭೆ ನಡೆದ ರಾತ್ರಿಯೇ, ಯಡ್ಯೂರಪ್ಪನವರು `ಸಂತೋಷ್’ಗೆ ಫೋನ್ ಮಾಡಿ ಹಿಗ್ಗಾಮುಗ್ಗಾ ಬೈದರು ಎಂಬ ಸುದ್ದಿಯೂ ಸಾಕಷ್ಟು ಸದ್ದು ಮಾಡಿತ್ತು. ಬಹಳಷ್ಟು ಜನ ಯಡ್ಯೂರಪ್ಪನ ವಿರುದ್ಧ ನಿರಂತರ ಚಿತಾವಣೆ ನಡೆಸುತ್ತಿರುವ ಬಿ.ಎಲ್.ಸಂತೋಷ್‌ಗೇ ಯಡ್ಯೂರಪ್ಪ ಬೈದಿರಬಹುದು ಎಂದು ಅಂದಾಜಿಸಿದ್ದರು. ಆದರೆ ಯಡ್ಯೂರಪ್ಪನಿಂದ ಬೈಸಿಕೊಂಡದ್ದು ಆ ಸಂತೋಷ್ ಅಲ್ಲ, ಖುದ್ದು ಯಡ್ಯೂರಪ್ಪನ ಪಿಎ ಸಂತೋಷ್! ಬಿಜೆಪಿ ಹೈಕಮಾಂಡ್ ಮಟ್ಟದಲ್ಲೆ ಮೋದಿ, ಶಾ, ನಡ್ಡಾ ಬಿಟ್ಟರೆ ನಾಲ್ಕನೇ ಪ್ರಭಾವಿ ಸ್ಥಾನದಲ್ಲಿರುವ ಬಿ.ಎಲ್.ಸಂತೋಷ್‌ಗೆ ಬೈಯ್ಯುವುದಿರಲಿ, ಮುಂದೆ ನಿಂತು ಗಟ್ಟಿಯಾಗಿ ಮಾತನಾಡುವ ಪ್ರಭಾವವೂ ಯಡ್ಯೂರಪ್ಪನವರಿಗೆ ಈಗ ಉಳಿದಿಲ್ಲ. ಒಂದು ಕಾಲಕ್ಕೆ ತನ್ನ ನೆರಳಲ್ಲಿ ಬೆಳೆದ ಸಂತೋಷ್ ಮುಂದೆ, ಇವತ್ತು ಯಡ್ಯೂರಪ್ಪ ಕೈಕಟ್ಟಿ ನಿಲ್ಲಬೇಕಾದ ದೈನೇಸಿ ಸ್ಥಿತಿ ಬಂದಿರೋದು ವಿಪರ್ಯಾಸವೇ ಸರಿ.

ತನ್ನ ಪಿಎ ಸಂತೋಷ್‌ಗೆ ಯಡ್ಯೂರಪ್ಪ ಫೋನ್‌ನಲ್ಲೆ ಸಿಕ್ಕಾಪಟ್ಟೆ ಬೈಯುವುದಕ್ಕೂ ಒಂದು ಕಾರಣವಿದೆ. ಏನೆಂದರೆ, ಶೆಟ್ಟರ್ ಮನೆಯಲ್ಲಿ ಏನು ಸಭೆ ನಡೆಯಿತಲ್ಲ, ಆ ಸಭೆಗು ಮುನ್ನ ನಡೆದ ಅದೇ ಅತೃಪ್ತರ ಖಾಸಗಿ ಸಭೆಯಲ್ಲಿ ಈ ಸಂತೋಷ್ ಕೂಡಾ ಭಾಗಿಯಾಗಿದ್ದ! ಇದೇ ಯಡ್ಯೂರಪ್ಪರನ್ನು ಕೆರಳಿಸಿದ್ದು. ಈತ ಕೇವಲ ಪಿಎ ಅಷ್ಟೇ ಆಗಿ ಉಳಿದಿಲ್ಲ, ಅವರ ಕುಟುಂಬದ ಪ್ರಭಾವಿ ವ್ಯಕ್ತಿಯಾಗಿಯೂ ಆಪರೇಟ್ ಆಗುತ್ತಿದ್ದಾನೆ. ಮುಖ್ಯವಾಗಿ ಯಡ್ಯೂರಪ್ಪನವರ ಹಿರಿಯ ಅಳಿಯ ವಿರೂಪಾಕ್ಷ ಯಮಕನಮರಡಿ ಮತ್ತು ಶೋಭಾ ಬಣದ ಸಕ್ರಿಯ ಸದಸ್ಯ. ಈತನ ಚಿತಾವಣೆಯಿಂದಾಗಿಯೇ ತಮ್ಮ ಮನೆಯೊಳಗೆ ಒಡಕು ಮೂಡುತ್ತಿದೆ ಎಂಬ ಅಸಮಧಾನ ವಿಜಯೇಂದ್ರನಿಗೆ ಮೊದಲಿನಿಂದಲು ಇದ್ದೇ ಇತ್ತು. ಆ ಕಾರಣಕ್ಕೆ ಮನೆಯವರು ಯಾರೂ (ಕೆಲಸಗಾರರೂ ಸೇರಿ) ಸಂತೋಷ್ ಜೊತೆಗೆ ಸಲುಗೆಯಿಂದ ಇರಬಾರದು ಎಂಬ ಕಟ್ಟಾಜ್ಞೆಯನ್ನು ವಿಜಯೇಂದ್ರ ಇತ್ತೀಚೆಗೆ ವಿಧಿಸಿದ್ದಾನೆ. ಇದೇ ಸಿಟ್ಟಿಗೆ ಸಂತೋಷ್ ಕೂಡಾ ಅವತ್ತಿನ ಅತೃಪ್ತರ ಸಭೆಯಲ್ಲಿ ಭಾಗವಹಿಸಿದ್ದ. ಇದು ಗೊತ್ತಾಗುತ್ತಿದ್ದಂತೆಯೇ ಯಡ್ಯೂರಪ್ಪ ಫೋನ್ ಮಾಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.


ಅನಾಮಧೇಯ ಪತ್ರಿಕಾ ಪ್ರಕಟಣೆಯ ಹಕೀಕತ್ತು

ಕಳೆದ ಒಂದು ವಾರದಿಂದ ಅನಾಮಧೇಯ ಪತ್ರಿಕಾ ಪ್ರಕಟಣೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದನ್ನು ಯಾರು ಬರೆದಿದ್ದಾರೆ ಅನ್ನೋದು ನಿಗೂಢವಾದರು ಬಿಜೆಪಿಯ ನಿಷ್ಠಾವಂತರು ಬರೆದುಕೊಂಡ ಅಳಲಿನಂತೆ ಇದು ಧ್ವನಿಸುತ್ತಾ ಸಾಗುತ್ತೆ. ಈ ಪ್ರಕಟಣೆ ಯಡ್ಯೂರಪ್ಪನವರನ್ನು ಸಿಕ್ಕಾಪಟ್ಟೆ ಹೊಗಳುತ್ತಲೇ ಅವರಿಗೆ ವಯಸ್ಸಾಗಿರೋದನ್ನು, ಸಮರ್ಥವಾಗಿ ಕೆಲಸ ನಿಭಾಯಿಸಲಾಗದೆ ಸರ್ಕಾರ ನಿಷ್ಕ್ರಿಯವಾಗಿರೋದನ್ನು, ಕಣ್ಣು-ಕಿವಿ ಸ್ವಾಧೀನ ಕಳೆದುಕೊಂಡು ಸದನದಲ್ಲಿ ಅಪಹಾಸ್ಯಕ್ಕೆ ಈಡಾಗಿರುವುದನ್ನು ಎತ್ತಿ ತೋರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ `ಬಿಎಸ್‌ವೈ ತಮ್ಮ ಸಮುದಾಯದ (ಅಂದರೆ ಲಿಂಗಾಯತ) ಬೇರೆ ಯಾವೊಬ್ಬ ನಾಯಕನನ್ನೂ ಬೆಳೆಸಿಲ್ಲ. ಬದಲಿಗೆ ಅವರ ಮೇಲೆ ದ್ವೇಷ ಅಸೂಯೆ ಸಾಧಿಸಿಕೊಂಡು ಬಂದಿದ್ದಾರೆ’ ಎಂಬ ಆರೋಪ `ಲಿಂಗಾಯತ ಬಂಡಾಯ’ವನ್ನು ಈ ಪ್ರಕಟಣೆಗೆ ಲಿಂಕ್ ಮಾಡುತ್ತಿದೆ.

77 ವರ್ಷ ಪೂರೈಸಿರುವ (ಮೋದಿ ಜಾರಿಗೆ ತಂದ `ಏಜ್-75 ಮಾರ್ಗದರ್ಶಕ್ ಮಂಡಳಿ’ಯನ್ನು ಇಲ್ಲಿ ಓದುಗರು ಸ್ಮರಿಸಿಕೊಳ್ಳಬಹುದು) ಯಡ್ಯೂರಪ್ಪನವರು ರಾಜ್ಯವನ್ನು ಮುನ್ನಡೆಸಲು ದೈಹಿಕವಾಗಿ ಸಮರ್ಥರಿಲ್ಲ. ಹೀಗಾಗಿ ಅವರನ್ನು ಯಾವುದಾದರು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ ಅವರಿಗೆ ಹೈಕಮಾಂಡ್ ಗೌರವ ಸಲ್ಲಿಸಬೇಕು’ ಎಂಬ `ಕಿಡಿಗೇಡಿ’ ಸಲಹೆಯೂ ಈ ಪ್ರಕಟಣೆಯಲ್ಲಿ ನುಸುಳಿಕೊಂಡಿದೆ.

ಇನ್ನು ಬಿ.ವೈ.ವಿಜಯೇಂದ್ರನನ್ನೂ ಅಷ್ಟೇ ನಯವಾಗಿ ಹೊಗಳುತ್ತಾ “ವಯಸ್ಸಾದ ತಂದೆಗೆ ಆಡಳಿತದಲ್ಲಿ ಸಹಾಯ ಮಾಡುತ್ತಿರುವ ವಿಜಯೇಂದ್ರನನ್ನು ವಿರೋಧಿಗಳು ಡಿಫ್ಯಾಕ್ಟೊ ಸಿಎಂ ಎಂದು ಕರೆಯುತ್ತಿರುವುದು ನಮಗೆಲ್ಲ ನೋವುಂಟು ಮಾಡುತ್ತಿದೆ. ವಯಸ್ಸಾದ ತಂದೆಗೆ ಮಗ ಸಹಾಯ ಮಾಡುವುದು ತಪ್ಪೇ? ಶಿವಾನಂದ ವೃತ್ತದ ಬಳಿಯಿರುವ ಅವರ ಆದರ್ಶ ರೋಸ್ ಅಪಾರ್ಟ್ಮೆಂಟ್ ಮನೆ ಹೊಸ ಶಕ್ತಿ ಕೇಂದ್ರವಾಗಿದೆ, ಸಂಜೆಯಾದರೆ ಎಲ್ಲಾ ಅಧಿಕಾರಿಗಳು, ಮಂತ್ರಿಗಳು, ಉದ್ದಿಮೆದಾರರು ಪಂಚತಾರಾ ಹೊಟೇಲ್‌ಗಳಲ್ಲಿ ವಿಜಯೇಂದ್ರರನ್ನು ಭೇಟಿಯಾಗಬೇಕಿದೆ, ಯಡ್ಯೂರಪ್ಪನವರೇ ತಮ್ಮ ಮಗ ವಿಜಯೇಂದ್ರನನ್ನು ಭೇಟಿಯಾಗಿ ಬರುವಂತೆ ಹೇಳಿಕಳಿಸುತ್ತಾರೆ ಎಂಬ ಆರೋಪಗಳನ್ನು ಕೇಳುತ್ತಿದ್ದರೆ ನಮಗೆಲ್ಲ ನೋವಾಗುತ್ತದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೇಳಿಕೆಕೊಡುವಷ್ಟು ಪ್ರಬುದ್ಧತೆ ಇರುವ ವಿಜಯೇಂದ್ರರ ಹೆಸರಿಗೆ ಮಸಿ ಬಳಿದರೆ ಮುಂದೆ ಸಂಸದೀಯ ಪಟುವಾಗಲಿರುವ ಅವರ ಬೆಳವಣಿಗೆಗೆ ತೊಂದೆಯಾಗುವುದಿಲ್ಲವೇ?” ಎಂದೆಲ್ಲಾ ಲೇವಡಿ ಮಾಡಲಾಗಿದೆ.

ಒಟ್ಟಿನಲ್ಲಿ ಶಾಲಲ್ಲಿ ಸುತ್ತಿಕೊಂಡು ಹೊಡೆಯೋದು ಅಂತಾರಲ್ಲ, ಹಾಗಿದೆ ಈ ಅನಾಮಧೇಯ ಪತ್ರಿಕಾ ಪ್ರಕಟಣೆ. ಇದರ ಉದ್ದೇಶವಂತೂ ಸ್ಪಷ್ಟ. ಯಡ್ಯೂರಪ್ಪನವರಿಗೆ ವಯಸ್ಸಾಗಿದೆ, ಆಡಳಿತ ನಡೆಸಲು ಅಸಮರ್ಥರು, ಲಿಂಗಾಯತ ಸಮುದಾಯದ ಯಾರನ್ನೂ ಬೆಳೆಸದ ಅವರೀಗ ಮಗನನ್ನು ಪರ್ಯಾಯ ನಾಯಕನನ್ನಾಗಿ ಪ್ರೊಜೆಕ್ಟ್ ಮಾಡಲು ಹೊರಟಿರೋದು ಅಕ್ಷಮ್ಯ, ಹೀಗೇ ಆದರೆ ಅವರ ಮಗನ ಭವಿಷ್ಯಕ್ಕೇ ಮುಂದೆ ಮುಳುವಾಗಲಿದೆ ಎಂಬ ಚರ್ಚೆಯನ್ನು ಮುನ್ನೆಲೆಗೆ ತರೋದಷ್ಟೆ ಇದರ ಇರಾದೆ. ಭವಿಷ್ಯದ ಬಂಡಾಯಕ್ಕೆ ವೇದಿಕೆ ಅಣಿಗೊಳಿಸುವ ಪ್ರಯತ್ನದಂತಿದೆ ಈ ಪ್ರಕಟಣೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here