Homeಮುಖಪುಟಲಾಕ್‍ಡೌನ್, ವಿಶ್ವಾಸ, ಮತ್ತು ವಿಶ್ವಾಸದ್ರೋಹ

ಲಾಕ್‍ಡೌನ್, ವಿಶ್ವಾಸ, ಮತ್ತು ವಿಶ್ವಾಸದ್ರೋಹ

- Advertisement -
- Advertisement -

ಕಳೆದೆರಡು ದಿನಗಳಿಂದ ನನ್ನನ್ನು ನಾನು ಸರಳವಾದ ಒಂದು ಪ್ರಶ್ನೆ ಕೇಳಿಕೊಳ್ಳುತ್ತ, ಅದನ್ನೇ ಕೆಲವು ಸ್ನೇಹಿತರು ಇಲ್ಲವೆ ಪರಿಚಯಸ್ತರನ್ನೂ ಕೇಳಿದ್ದೇನೆ. ಅವರಲ್ಲಿ, ಇಬ್ಬರು ರಾಷ್ಟ್ರಮಟ್ಟದ ಪ್ರತಿಷ್ಠಿತ ಇಂಗ್ಲಿಶ್‍ ಪತ್ರಿಕೆಗಳಲ್ಲಿ ಬಹಳ ಜವಾಬ್ದಾರಿಯುತ ಹುದ್ದೆಯಲ್ಲಿರುವ ಪತ್ರಕರ್ತರು; ಒಬ್ಬರು ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ದೊಡ್ಡಹುದ್ದೆಯಲ್ಲಿರುವವರು; ಒಬ್ಬರು, ಹಿರಿಯ ಪೊಲೀಸ್ ಅಧಿಕಾರಿಣಿ; ಒಬ್ಬರು, ಹಲವು ಜನ ಹಿರಿಯ ಐಪಿಎಸ್ ಅಧಿಕಾರಿಗಳಿಗೆ, ಮತ್ತು ಐಎಎಸ್ ಅಧಿಕಾರಿಗಳಿಗೆ, ಆತ್ಮೀಯರಾದವರು; ಒಬ್ಬರು, ಹಿಂದೆ ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿದ್ದು, ಕೆಲಕಾಲ ಮಂತ್ರಿಗಳಾಗಿದ್ದವರು; ಒಬ್ಬರು, ನಮ್ಮ ನೆರೆಯ ರಾಜ್ಯವೊಂದರ ವಿಧಾನಸಭೆಯ ಸದಸ್ಯರಾಗಿದ್ದವರು.

ಪ್ರಶ್ನೆ ಇದು: ಪ್ರಧಾನಿ ನರೇಂದ್ರ ಮೋದಿಯವರು, ಮೊನ್ನೆ, ಮಾರ್ಚ್ 24ರಂದು, ರಾತ್ರಿ ಎಂಟು ಗಂಟೆಗೆ ಟಿವಿಯಲ್ಲಿ ಕಾಣಿಸಿಕೊಂಡು ಇಪ್ಪತ್ತೊಂದು ದಿನಗಳ ದೇಶಪರ್ಯಂತದ ಲಾಕ್‍ಡೌನನ್ನು ಘೋಷಿಸುವುದಕ್ಕೆ ಕೆಲವು ದಿನಗಳಾದರೂ ಮೊದಲು, ದೇಶದ ಎಲ್ಲ ಮುಖ್ಯಮಂತ್ರಿಗಳು ಮತ್ತು ರಾಜ್ಯಸರಕಾರಗಳವರಿಗೆ (ಒಳಿತಾದ ಸರಕಾರೀ ಕ್ರಮವಾಗಿ, ಬಹಳ ಗುಟ್ಟಾಗಿಯೇ ಆಗಲಿ), ಬಹಳ ನಿಖರವಾಗಿ, ಈಕೆಳಗೆ ಕೊಟ್ಟಿರುವ ಒಕ್ಕಣೆಯಂಥದುಳ್ಳ ಸಂದೇಶವನ್ನು ಅತ್ಯಂತ ಅಧಿಕೃತವಾಗಿ ನೀಡಿದ್ದರೇ? ಅವರು ಅದನ್ನು ನೀಡಿದ್ದಿದ್ದರೆ, ಅದು ಎಂಥ ಒಕ್ಕಣೆಯುಳ್ಳ ಸಂದೇಶವಾಗಿರಬೇಕಿತ್ತು? ಇಗೊ, ಕಲ್ಪಿತವಾದ ಅಂಥ ಒಕ್ಕಣೆ:

‘‘ಇನ್ನು ಕೆಲವು ದಿನಗಳಲ್ಲಿ, ಮಾರ್ಚ್ 24ರಂದು, ನಾನು ಇಪ್ಪತ್ತೊಂದು ದಿನಗಳ, ದೇಶಪರ್ಯಂತದ ಲಾಕ್‍ಡೌನನ್ನು ಘೋಷಣೆ ಮಾಡುವವನಿದ್ದೇನೆ. ಲಾಕ್‍ಡೌನ್ ಸಮಯದಲ್ಲಿ ದೇಶದ ಜನರ ಹಿತವನ್ನು ಕಾಯಲು ಏನೇನು ಆಗಬೇಕು ಅನ್ನುವುದರ ರಾಷ್ಟ್ರೀಯ ಅಗ್ರಯೋಜನೆ – ನ್ಯಾಷನಲ್ ಮಾಸ್ಟರ್ ಪ್ಲ್ಯಾನ್ – ಒಂದನ್ನು ನನ್ನಕಚೇರಿಯವರು ತಯಾರುಮಾಡಿದ್ದಾರೆ. ಅದನ್ನು ಈಗ, ಈ ವಿಯಂಚೆಯ ಮೂಲಕ (ಅಥವಾ ವಿಶೇಷ ದೂತರ ಮೂಲಕ) ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನೀವು ನಿಮ್ಮ ರಾಜ್ಯಗಳ ಮಟ್ಟದಲ್ಲಿ ಅದನ್ನು ಹೇಗೆ ಸಫಲಗೊಳಿಸಬಹುದು ಯೋಚಿಸಿ, ತಿಳಿಸಿ. ಅದಕ್ಕೆ ಪೂರಕವಾಗಿ ನೀವು ನಿಮ್ಮನಿಮ್ಮ ರಾಜ್ಯದಲ್ಲಿ ಬೇರೆ ಏನೆಲ್ಲವನ್ನೂ ಮಾಡಬಹುದೋ ಮಾಡಿ. ನಿಮ್ಮ ಅಂಥ ರಾಜ್ಯಮಟ್ಟದ ಯೋಜನೆ – ಸ್ಟೇಟ್ ಲೆವೆಲ್ ಪ್ಲ್ಯಾನ್ – ನನಗೆ, ಒಂದೆರಡು ದಿನಗಳೊಳಗೆ ತಿಳಿಸಿ. ಒಂದೆರಡು ದಿನಗಳಲ್ಲಿಯೇ ಆಗಬೇಕಾದ ಕೆಲಸ ಅದು.

ಅತ್ಯಂತ ಮುಖ್ಯವಾದ ವಿಷಯ: ನಮ್ಮೆಲ್ಲರಿಗೂ ಗೊತ್ತಿರುವಂತೆ, ಇಂಥ ಯಾವುದೇ ಕ್ರಮದಿಂದ ತುಂಬ ಬಳಲುವುದು ವಲಸೆ ಕಾರ್ಮಿಕರು, ಮನೆಮಠ ಇಲ್ಲದವರು. ಅಂಥವರನ್ನು ಕಾಪಾಡುವುದು ನಮ್ಮ ಮೊತ್ತಮೊದಲ ಕರ್ತವ್ಯ. ಇಂಥ ಘೋಷಣೆಯಿಂದ ಅವರು ಗಾಬರಿಬಿದ್ದು ತಮ್ಮ ಊರುಗಳತ್ತ ಹೊರಟುಬಿಡುವ ಸಾಧ್ಯತೆಯೇ ಹೆಚ್ಚು. ಅದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಆ ಜನರಿಗಂತೂ ಅಪಾರವಾದ ಹಿಂಸೆಯಾಗುತ್ತದೆ.  ಜೊತೆಗೆ, ಈ ಭಯಂಕರ ಸಾಂಕ್ರಾಮಿಕ ರೋಗ ಹರಡಲು ನಾವು ಇನ್ನಷ್ಟು ಅವಕಾಶ ಕೊಟ್ಟಂತಾಗುತ್ತದೆ.  ಹಾಗಾಗಿ, ಅವರು ಈಗ ಎಲ್ಲೆಲ್ಲಿ ಬೀಡು ಬಿಟ್ಟಿದ್ದಾರೋ ಅಲ್ಲಲ್ಲಿಯೇ ಇರುವಂತೆ ನೋಡಿಕೊಳ್ಳುವುದು ನಮ್ಮ ಅತಿಮುಖ್ಯ ಜವಾಬ್ದಾರಿ. ಹಾಗೆ ನೋಡಿಕೊಳ್ಳಬೇಕಾದರೆ, ನಾವು-ನೀವು ಈಕೆಳಗೆ ಹೇಳಿರುವ ಹಲವು ಕೆಲಸ ಮಾಡಲೇಬೇಕು:

  • ಪ್ರತಿಯೊಂದು ವಿಧಾನಸಭಾ ಕ್ಷೇತ್ರ, ಕಾರ್ಪೊರೇಷನ್ ವಾರ್ಡ್, ಮುನಿಸಿಪಲ್ ವಾರ್ಡ್, ತಾಲೂಕು ಪಂಚಾಯತಿ ಮತ್ತು ಗ್ರಾಮಪಂಚಾಯತಿಯಲ್ಲಿ ವಲಸೆ ಕಾರ್ಮಿಕರು ಸಾಮೂಹಿಕವಾಗಿ ಬೀಡುಬಿಟ್ಟಿರುವ ಜಾಗಗಳು ಅಂದರೆ ಲೇಬರ್ ಕ್ಯಾಂಪ್‍ಗಳ ಮಾಹಿತಿ ಆಯಾ ಜಾಗದ ಚುನಾಯಿತ ಜನಪ್ರತಿನಿಧಿಗಳಿಗೆ, ಮತ್ತು ಅಲ್ಲಲ್ಲಿನ ಸರಕಾರೀ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿರುತ್ತದೆ. ಹಾಗೆಯೇ, ತಮ್ಮತಮ್ಮ ಕ್ಷೇತ್ರದಲ್ಲಿ ಕಟ್ಟಲಾಗುತ್ತಿರುವ ಮನೆಗಳು ಮತ್ತು ಇತರೆ ಕಟ್ಟಡಗಳ ಕಟ್ಟೋಣದಲ್ಲಿ (ಹಾಗೂ ಬೇರೆ ಹಲವು ಬಗೆಯ ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, ಸ್ವಂತ ಮನೆಯಿಲ್ಲದೆ, ಲೇಬರ್ ಕ್ಯಾಂಪ್‍ಗಳಲ್ಲಿಯೂ ಬೀಡುಬಿಡದೆ, ತಮ್ಮತಮ್ಮ ಕಾಮಗಾರಿಯ ಜಾಗದಲ್ಲಿಯೇ ಬೀಡುಬಿಟ್ಟಿರುವವವರ ಬಗ್ಗೆಯೂ) ಮಾಹಿತಿ ಇರುತ್ತದೆ. ಲಾಕ್‍ಡೌನ್ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ ಆ ನಮ್ಮ ಜನಪ್ರತಿನಿಧಿಗಳು ಅಂಥ ಒಂದೊಂದೂ ಜಾಗಕ್ಕೆ ಹೋಗಿ, ಧ್ವನಿವರ್ಧಕಗಳ ಮೂಲಕ ಅಲ್ಲಿನ ಜನರಿಗೆ ಧೈರ್ಯತುಂಬಲಿ. ಅವರು ಇದ್ದಲ್ಲಿಯೇ ಅವರಿಗೆ ಊಟ, ತಿಂಡಿ, ಹಾಲು, ನೀರು, ದಿನಸಿ, ತರಕಾರಿ, ಔಷಧ ಮುಂತಾದ್ದೆಲ್ಲವೂ ಸರಬರಾಜಾಗುತ್ತದೆ, ಜೊತೆಗೆ ತಕ್ಕಮಟ್ಟಿಗೆ ನಗದು ಹಣಕಾಸಿನ ನೆರವು ನೀಡಲಾಗುತ್ತದೆ ಎಂಬ ಭರವಸೆ ನೀಡಲಿ, ಮತ್ತು ಕೂಡಲೇ ಸರಬರಾಜು ಆರಂಭಿಸಲಿ.
  • ಜೊತೆಗೆ, ಅಂಥ ಕಾರ್ಮಿಕರನ್ನು ಆಯಾಯಾ ಜಾಗಕ್ಕೆ ಕರೆತಂದ ಕೂಲಿಕಾರರ ಗುತ್ತಿಗೆದಾರರೊಂದಿಗೆ, ಹಾಗೂ ಆಯಾ ಕೂಲಿಕಾರರು ಉದ್ಯೋಗಮಾಡಿಕೊಂಡಿರುವ ಹೊಟೇಲು, ಕಚೇರಿ ಮುಂತಾದ ಉದ್ದಿಮೆಗಳ ಮಾಲೀಕರುಗಳೊಂದಿಗೆ, ಮಾತನಾಡಿ, ಅವರು ಆ ಕೂಲಿಕಾರರ ಒಕ್ಕಲೆಬ್ಬಿಸಬಾರದೆಂದೂ, ತಮ್ಮ ಕೈಗೆಳಗಿರುವವನ್ನು ಕಾಯುವುದು ಆ ಮಾಲಿಕರು ಇಲ್ಲವೆ ಗುತ್ತಿಗೆದಾರರ ಜವಾಬ್ದಾರಿ ಆಗಿರುತ್ತದೆ ಎಂದೂ, ತಪ್ಪಿದರೆ ಬಹಳ ದೊಡ್ಡ ಶಿಕ್ಷೆಯನ್ನು ಅನುಭವಿಸಿಬೇಕಾಗುತ್ತದೆ ಎಂದೂ ಅವರಿಗೆ ಕಠೋರವಾದ ಎಚ್ಚರಿಕೆ ನೀಡಲಿ.
  • ನಾನು ವಿಯಂಚೆಯ ಮೂಲಕ (ಅಥವಾ ವಿಶೇಷ ದೂತರ ಮೂಲಕ) ಈಗಷ್ಟೆ ಕಳಿಸಿದ ನನ್ನ ಕಾರ್ಯಯೋಜನೆಯ ವಿವರವೆಲ್ಲವೂ ಈಗ ನಿಮ್ಮ ಕೈಯಲ್ಲಿದೆ. ಅದನ್ನು ಸಫಲಗೊಳಿಸುವುದರ ನಿಟ್ಟಿನಲ್ಲಿ ಈಕೂಡಲೆ ಕೆಲಸಮಾಡಲು ತೊಡಗಿ. ಎಲ್ಲ ರೀತಿಯ ಕಾರ್ಯಯೋಜನೆ ರೂಪಿಸಿ. ಎಲ್ಲ ತಯಾರಿ, ಎಲ್ಲ ವ್ಯವಸ್ಥೆ ಮಾಡಿಕೊಳ್ಳಿ.
  • ಈಗ, ನಿಮ್ಮ ಕಾರ್ಯಯೋಜನೆಯನ್ನು ನನ್ನ ಕಚೇರಿಗೆ ತಿಳಿಸಿ. ಅದನ್ನು ತಿಳಿಸಲು ನಿಮಗೆ ಎರಡು ದಿನ, ಎರಡೇ ದಿನಗಳ ಅವಕಾಶವಿದೆ. ಗಡಿಬಿಡಿ ಮಾಡುತ್ತಿದ್ದೇನೆ, ಹೌದು. ಅದಕ್ಕಾಗಿ ಕ್ಷಮೆಯಿರಲಿ. ಇದು ಯುದ್ಧಕಾಲ, ಅಭೂತಪೂರ್ವ ಆತಂಕದ ಪರಿಸ್ಥಿತಿ. ಹಾಗಾಗಿ ಗಡಿಬಿಡಿ ಅನಿವಾರ್ಯ.
  • ನಾನು ಹೇಳಿರುವ ಕಾರ್ಯಯೋಜನೆಗೂ ಮೇಲ್ಪಟ್ಟು ಇನ್ನೂ ಏನೆಲ್ಲ ವ್ಯವಸ್ಥೆಯಾಗಬೇಕು, ಏನೇನು ಮಾಡಬಹುದು ಅನ್ನುವುದನ್ನು ದಯವಿಟ್ಟು ಸೂಚಿಸಿ.
  • ಈಕೆಲಸದಲ್ಲಿ ಸಾರ್ವಜನಿಕ ಸೇವಾಸಂಸ್ಥೆಗಳವರು ಕೂಡ ಪಾಲುಗೊಳ್ಳಲಿ. ಅವರ ನೆರವನ್ನು ಕೂಡ ಯಥೇಚ್ಛ ಪಡೆಯಿರಿ. ಆದರೆ, ಎಲ್ಲೆಡೆಯೂ ಸರಕಾರಗಳ ಮುಂದಾಳ್ತನವಿರಲಿ.’’

ಕಡೆಯದಾಗಿ, ಒತ್ತಿ ಹೇಳುತ್ತಿದ್ದೇನೆ: ಮಧ್ಯಮ ವರ್ಗ, ಮತ್ತು ಮೇಲ್ವರ್ಗದವರನ್ನು ಕಾಯುವುದಕ್ಕಿಂತ ಕಡುಬಡವರನ್ನು ಕಾಯುವುದು  ನಮ್ಮ ಹೆಚ್ಚು ಮುಖ್ಯವಾದ ಜವಾಬ್ದಾರಿ ಎಂದು ನನ್ನ ಕಚೇರಿ ಮತ್ತು ಮಂತ್ರಿಮಂಡಲದಿಂದ ಮೊದಲುಗೊಂಡು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅವರ ಮಂತ್ರಿಮಂಡಲಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಎಲ್ಲೆಡೆಯ, ಎಲ್ಲ ಬಗೆಯ ಸರಕಾರೀ ಸಿಬ್ಬಂದಿಯು ತಿಳಿಯಲಿ. ದಯವಿಟ್ಟು ಎಲ್ಲರೂ ಕೈಜೋಡಿಸಿ.’’

ದೀರ್ಘವಾದ, ಪ್ರತಿಪಾದನರೂಪವಾದ ಈ ಪ್ರಶ್ನೆಯನ್ನು ನಾನು ಯಾರಯಾರ ಮುಂದಿಟ್ಟೆನೋ ಅವರೆಲ್ಲರೂ ಈ ಪ್ರಶ್ನೆಗೆ ಕೊಟ್ಟ ಉತ್ತರ: ಇಲ್ಲ, ಇಲ್ಲ, ಇಲ್ಲ. ಪರಿಣಾಮ ಈಗ ನಮ್ಮೆಲ್ಲರ ಕಣ್ಣಮುಂದಿದೆ.

ಈಗ, ಹತ್ತಾರು ಲಕ್ಷ ಜನ, ಪ್ರಾಯಶಃ ಕೋಟ್ಯಂತರ ಜನ, ವಲಸೆ ಕಾರ್ಮಿಕರು, ಕಡುಬಡವರು, ನಿರ್ಗತಿಕರು, ದಿನಗೂಲಿ ಕೆಲಸಮಾಡುವವರು, ಕಾಯಂ ಉದ್ಯೋಗ ಇಲ್ಲದಿರುವವರು, ಮನೆಮಠ ಇಲ್ಲದಿರುವವರು – ಇವರೆಲ್ಲರ ಬವಣೆ ಹೇಳತೀರದು. ಹತ್ತಾರು ಸಾವಿರ, ಪ್ರಾಯಶಃ ಲಕ್ಷಾಂತರ ಜನ, ತಮ್ಮ ಚೀಲಗಳನ್ನು ಹೊತ್ತು, ಹಲವೊಮ್ಮೆ ಮಕ್ಕಳುಮರಿಯೊಂದಿಗೆ, ಉರಿಬಿಸಿಲಲ್ಲಿ, ನೀರು ಕೂಡ ಸಿಕ್ಕದಂಥ ಪರಿಸ್ಥಿತಿಯಲ್ಲಿ, ನೂರಾರು ಕಿಲೋಮೀಟರು ನಡೆದು ತಮ್ಮತಮ್ಮ ಮನೆ ಸೇರಬೇಕಿದೆ; ಅಥವಾ, ಕೆಲವು ಸರಕಾರಗಳು ಆಗುಮಾಡಿದ ಬಸ್‍ ಸಾರಿಗೆ ವ್ಯವಸ್ಥೆಯಲ್ಲಿ, ಬಸ್ಸುಗಳಲ್ಲಿ ಇಡಿಕಿರಿದು ತುಂಬಿ ಮನೆಯತ್ತ ಸಾಗಬೇಕಿದೆ. ಇದರಿಂದಾಗಿ, ಕೋವಿಡ್ 19 ರೋಗ ಹರಡುವುದನ್ನು ತಡೆಗಟ್ಟಲು ಪಾಲಿಸಬೇಕಾದ  ‘ಸಾಮಾಜಿಕ ದೂರ’ ಮತ್ತು ಬೇರೆ ಕ್ರಮಗಳೆಲ್ಲ ಮೂರಾಬಟ್ಟೆಯಾಗಿವೆ. ಆ ರೋಗ ಈಗ ಹಳ್ಳಹಳ್ಳಿಯನ್ನು ತಲುಪುವ ಸಾಧ್ಯತೆ ಹೆಚ್ಚಿದೆ.

ಮೋದಿ ನೇತೃತ್ವದ ಇಂದಿನ ಕೇಂದ್ರ ಸರಕಾರವು ತನ್ನದು ‘ಸಬ್ ಕಾ ಸಾಥ್, ಸಬ್‍ ಕಾ ವಿಕಾಸ್, ಸಬ್‍ ಕಾ ವಿಶ್ವಾಸ್’ ಎಂದು ಘೋಷಿಸಿಕೊಂಡಿದೆ. ಈಗ, ದೇಶವು ಕೋವಿಡ್‍ 19 ಮಾರಿಯ ವಿರುದ್ಧ ಯುದ್ಧಮಾಡುತ್ತಿದೆ, ಈ ಯುದ್ಧದಲ್ಲಿ ಗೆಲ್ಲಬೇಕಿದೆ  ಎಂದು ಪ್ರಧಾನ ಮಂತ್ರಿ ಹೇಳುತ್ತಿದ್ದಾರೆ. ಆದರೆ, ಯುದ್ಧವನ್ನು ಕೇವಲ ಒಬ್ಬ ಮಹಾದಂಡನಾಯಕ ಮತ್ತು ಅವನ ಕಚೇರಿಯ ಆಪ್ತ ಸಿಬ್ಬಂದಿ ತಾವೇತಾವು ನಿಂತು ಗೆಲ್ಲಲಾದೀತೆ? ಮಹಾದಂಡನಾಯಕನೊಬ್ಬ ತನ್ನ ಕೆಳಗಿರುವ ದಂಡನಾಯಕರುಗಳು (ಅಂದರೆ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು), ಮಿತ್ರರಾಜ್ಯಗಳ ನಾಯಕರು (ಅಂದರೆ, ವಿರೋಧ ಪಕ್ಷಗಳ ನಾಯಕರು), ಮತ್ತು ಅವರ ಆಪ್ತರು ಹಾಗೂ ಅವರ ಅಧಿಕೃತ ಹಾಗೂ ಅನಧಿಕೃತ ಸಿಬ್ಬಂದಿ (ಅಂದರೆ, ವಿವಿಧ ರಾಜ್ಯ ಸರಕಾರಗಳ ಎಲ್ಲ ಸಿಬ್ಬಂದಿ, ಹಾಗೂ ವಿವಿಧ ಎನ್‍ಜಿಓಗಳು) – ಇವರನ್ನೆಲ್ಲ ತನ್ನ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ನೆರವಿನಿಂದ, ಎಲ್ಲರ ಜಾಣತನ ಮತ್ತು ಸಂವೇದನೆಗಳನ್ನು ಒಗ್ಗೂಡಿಸಿ ಗೆಲ್ಲಬೇಕಲ್ಲವೇ?

ಮೋದಿಯವರಂತೂ ಒಬ್ಬ ರಾಜಕಾರಣಿ; ಮೇಲಾಗಿ, ಇಂಥ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದರ ಮುನ್ನ ಹತ್ತು ಜನ ಅನುಭವಿಗಳು ಮತ್ತು ತಜ್ಞರ ಸಲಹೆಯನ್ನು ಕೇಳುವವರಲ್ಲ; ಸರ್ವಾಧಿಕಾರಿಯಂತೆ ನಡೆದುಕೊಳ್ಳುವವರು ಎನ್ನೋಣ. ಆದರೆ, ಅವರ ಕಚೇರಿಯಲ್ಲಿ, ಮತ್ತು ಸರಕಾರದ ಇತರ ಇಲಾಖೆಗಳಲ್ಲಿ, ಇರುವ ಅನುಭವೀ ಐಎಎಸ್ ಅಧಿಕಾರಿಗಳು, ಬೇರೆ ಹಲವು ಸರಕಾರೀ ಸೇವೆಗಳ ಅಧಿಕಾರಿಗಳು ಪ್ರಧಾನ ಮಂತ್ರಿಗೆ ಅವರಿಗೆ ‘‘ ಲಾಕ್‍ಡೌನ್ ಆಗಬೇಕು, ಮತ್ತು ತುರ್ತಾಗಿ ಆಗಬೇಕು, ನಿಜ. ಆದರೆ,ಈ ಇಂಥ ಕಠೋರವಾದ ಕ್ರಮವನ್ನು, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ರಾಜ್ಯ ಸರಕಾರಗಳಿಗೆ ನಿಖರವಾದ  ಮುನ್ಸೂಚನೆ ನೀಡದೆ, ಯಾವುದೇ ತಯಾರಿ ಇಲ್ಲದೆ ಕೈಗೊಳ್ಳುವುದು ಸಲ್ಲ. ಇದು ದಾರುಣವಾದ ಪರಿಸ್ಥಿತಿಗೆ ಕಾರಣವಾಗುತ್ತದೆ,’’ ಎಂದು ಖಡಾಖಂಡಿತವಾಗಿ ಹೇಳುವ ಧೈರ್ಯ ತೋರಬೇಕಿತ್ತಲ್ಲವೇ? ಆ ಧೈರ್ಯಮಾಡಬೇಕಾದದ್ದು ಜಾಣರಾದ, ವಿಚಕ್ಷಣರಾದ, ಹೃದಯವಂತಿಕೆಯಿರುವ, ಆತ್ಮಸಾಕ್ಷಿ ಎಚ್ಚತ್ತಿರುವ ಅಧಿಕಾರಿಗಳ ಕರ್ತವ್ಯವಲ್ಲವೇ? ನಾಯಕರಿಗೆ ಮುನ್ನೋಟವಿಲ್ಲದಾಗ, ಅದನ್ನು ತೋರುವುದು, ನೀಡುವುದು ಅಧಿಕಾರಿಗಳು, ಮತ್ತು ತಜ್ಞ ಸಲಹೆಗಾರರ ಪವಿತ್ರ ಕರ್ತವ್ಯವಲ್ಲವೇ?

ಆದರೆ, ನನ್ನ ಪ್ರಶ್ನೆಯನ್ನು ಕೇಳಿಸಿಕೊಂಡ ಬಲ್ಲವರು, ಬಲ್ಲಾಳರೆಲ್ಲರೂ ಲೋಕದಮೇಲೆ ಮಹಾಮಾರಿಯೊಂದು ಎರಗಿರುವ ಈ ಸಂದರ್ಭದಲ್ಲಿ ಮೇಲೆ ಹೇಳಿದ ಯಾವುದೂ ಆಗಿಯೇ ಇಲ್ಲ ಎಂದು ಹೇಳಿದ್ದಾರೆ.

ನಾಯಕನಾದವನು ತನ್ನ ಸಾಥಿಗಳೊಡನೆ ಸಮಾಲೋಚನೆ ಮಾಡದಿದ್ದರೆ ದೇಶದ ವಿಕಾಸವಾಗುವುದಿಲ್ಲ. ಜನರು ತನ್ನಲ್ಲಿಟ್ಟಿರುವ  ವಿಶ್ವಾಸಕ್ಕೆ ತಕ್ಕಂತೆ ಆ ನಾಯಕನು ನಡೆದುಕೊಳ್ಳದಿದ್ದರೆ, ಆ ವಿಶ್ವಾಸವನ್ನು ಆತ ದುರುಪಯೋಗಮಾಡಿಕೊಂಡಿದ್ದಾನೆ ಎಂದೇ ಅರ್ಥ. ಹಾಗಾಗಿ, ಮೋದಿ ನೇತೃತತ್ವದ ಕೇಂದ್ರ ಸರಕಾರದ ಈವತ್ತಿನ ವರ್ತನೆಯು ದೇಶದ ಜನರಿಗೆ – ಅದರಲ್ಲಿಯೂ ಕಡುಬಡವರಿಗೆ – ಎಸಗಿದ ವಿಶ್ವಾಸದ್ರೋಹ. ಜನವಿಶ್ವಾಸದ ಮಹಾ betrayal ಇದು.

ಒಂದು ಸಲಹೆ

ಕಡೆಯದಾಗಿ, ಒಂದು ಸಲಹೆ. ಈಗ ರಾಜ್ಯ ಸರಕಾರಗಳು, ವಲಸೆ ಕಾರ್ಮಿಕರು ಮುಂತಾದವರಿಗೆ ಊಟದ ವ್ಯವಸ್ಥೆ ಮಾಡುತ್ತಿವೆ. ಅದಕ್ಕಾಗಿ, ಅವರು ಪ್ರಾಯಶಃ ದೊಡ್ಡ, ದೊಡ್ಡ ಅಡಿಗೆಮನೆಗಳನ್ನು ಹುಟ್ಟುಹಾಕಬೇಕು; ಗುತ್ತಿಗೆದಾರರನ್ನು ಗೊತ್ತುಮಾಡಿಕೊಳ್ಳಬೇಕು. ಅದಕ್ಕೆ ಬದಲಾಗಿ, ಈಸದ್ಯ ಲಾಕ್‍ಡೌನ್ ಆಣತಿಯಿಂದಾಗಿ ಮುಚ್ಚಿರುವ ಹೊಟೇಲುಗಳ ಪೈಕಿ ಆಯ್ದ ಕೆಲವು ಹೊಟೇಲುಗಳ ಮಾಲೀಕರುಗಳ ಜೊತೆ ಮಾತನಾಡಿ, ಆ ಹೊಟೇಲುಗಳಲ್ಲಿ ಈಗಾಗಲೇ ಇರುವ ಅಡಿಗೆಮನೆ ಸೌಕರ್ಯಗಳು ಹಾಗೂ ಅಲ್ಲಲ್ಲಿನ ಸಿಬ್ಬಂದಿಯ ಬಳಸಿ, ಅಲ್ಲಿ ಅಡಿಗೆಯಾಗುವಂತೆ ಮಾಡಬಹುದಲ್ಲವೇ? ಹಾಗೆ ತಯಾರಾದ ಆಹಾರಕ್ಕಾಗಿ ಆ ಹೊಟೇಲುಗಳವರು ತಾವು ಮಾಡಿದ ಅಸಲಿ ಖರ್ಚಿನ ಬಾಬ್ತನ್ನು ಮಾತ್ರ ಸರಕಾರದಿಂದ ಪಡೆಯಬೇಕು. ಆ ಆಹಾರವನ್ನು ಸರಕಾರೀ ಸಿಬ್ಬಂದಿಯೇ ಆ ಸುತ್ತುಮುತ್ತಲಿನ, ಅದಾಗಲೇ ನಿಖರವಾಗಿ ಗೊತ್ತುಮಾಡಿಕೊಂಡ, ಲೇಬರ್ ಕ್ಯಾಂಪುಗಳಲ್ಲಿ ವಾಸಮಾಡುವವರಿಗೆ, ಮತ್ತು ಅಂಥ ಊಟದ ಅಗತ್ಯವಿರುವ ಬೇರೆಯವರಿಗೆ ತಲುಪಿಸಬೇಕು. ಇಂಥದನ್ನು ಆಯಾ ರಾಜ್ಯ ಸರಕಾರವು ತನ್ನ ರಾಜ್ಯದ ಹೊಟೇಲು ಮಾಲಿಕರ ಸಂಘಗಳು ಹಾಗೂ ಹೊಟೇಲು ಕೆಲಸಗಾರರ ಸಂಘಗಳೊಡನೆ ಸಮಾಲೋಚಿಸಿ ಮಾಡಬಹುದು. ಇದು ವಿಕೇಂದ್ರೀಕರಣದ ಮಾರ್ಗ; ಈಗಾಗಲೇ ಇರುವ ಮೂಲಸೌಕರ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮಾರ್ಗ.

*****

(ಲೇಖಕರು ಕನ್ನಡದ ಕವಿ, ನಾಟಕಕಾರ ಮತ್ತು ಖ್ಯಾತ ರಂಗನಿರ್ದೇಶಕರು. ಅಭಿಪ್ರಾಯಗಳು ವೈಯಕ್ತಿಕವಾದವು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...