Homeಅಂಕಣಗಳುಬುಧನ ಜಾತಕ ಶಂಭಾ ಜೋಷಿ

ಬುಧನ ಜಾತಕ ಶಂಭಾ ಜೋಷಿ

- Advertisement -
- Advertisement -

“ಭಾಷೆಯೊಳಗಿನ ಪದಗಳಿಗೆ ಇತಿಹಾಸ ಉಂಟು. ಇದರಿಂದಾಗಿ, ಯಾವುದೊಂದು ಪದದ ಅರ್ಥವು ಬದಲಾಗುವುದರ ಹಿಂದಿನ ಇತಿಹಾಸವು ಅರಿಕೆಗೆ ಬರುತ್ತದೆ. ಜೀವನ ಜೀವಿತದ ಪ್ರತಿಬಿಂಬವು ಭಾಷೆಯಲ್ಲಿ ಒಡಮೂಡಿ ನಿಂತಿದೆ” ಎನ್ನುವ ಶಂಭಾ ಜೋಷಿ ಮಾನವನ ಭಾಷಾಪೂರ್ವ ಹಂತಕ್ಕೆ ಹೋಗಿ ಅಲ್ಲಿಂದ ನರನನ್ನು ರೂಪಿಸಿರುವ ಪ್ರಜ್ಞೆ ಮತ್ತು ಬುದ್ಧಿಗಳ ಮೂಲಕ್ಕೆ ಪಯಣಿಸುತ್ತಾರೆ. ಹಿಮ್ಮುಖವಾದ ಈ ಪಯಣಕ್ಕೆ ಕಾರಣವೇನು ಎನ್ನುವುದಾದರೆ ಪಾ ವೆಂ ಆಚಾರ್ಯರವರು ಗುರುತಿಸುವಂತೆ, “ಮನುಷ್ಯನ ಶ್ರೇಯಸ್ಸು ಯಾವುದರಲ್ಲಿದೆ? ಅವನ ಅಶ್ರೇಯಸ್ಸು ಯಾರಿಂದ ಆಗಿದೆ?” ಎಂಬುದು ಶಂಭಾರವರ ಪ್ರಧಾನ ತಾತ್ವಿಕ ಕಾಳಜಿ.

ಧರ್ಮ ಎಂದರೆ ವಿಶ್ವ ನಿಯಮ. ಆದರೆ, ಧರ್ಮ: ಸಂಸ್ಕೃತಿಯ ಮೂಲ ಪ್ರಚೋದನೆ ಮಾನವನ ಅಂತರಂಗದಲ್ಲಿ ಉಂಟು ಎನ್ನುವ ಬುಧನ ಜಾತಕವನ್ನು ಓದುವಾಗ “ತನ್ನ ನೇರಕ್ಕೆ ನೋಡುವ ಬುದ್ಧಿಗೆ, ಭಾಷೆಯ ಕಟ್ಟಡದ ತೊಡಕು ಅರ್ಥವಾಗುವುದಿಲ್ಲ. ಭಾಷೆಯು ವೈವೆತ್ತಿರುವಲ್ಲಿ, ಪ್ರಜ್ಞೆಯ ಅಂಗವಾದ ಮನಸ್ಸಿನ ಕೈವಾಡವಿದೆ” ಎನ್ನುವ ಅಂಶವನ್ನು ಅರಿವಿಗೆಟುಕಿಸುವಲ್ಲಿ ಶಂಭಾ ಯಶಸ್ವಿಯಾಗುತ್ತಾರೆ. ಆದರೆ ಶಂಭಾ ಜೊತೆಗೆ ತಾತ್ವಿಕವಾಗಿ ಪ್ರಯಾಣ ಮಾಡುವುದು ಅಷ್ಟೇನೂ ಸುಲಭವಲ್ಲ. ಒಬ್ಬ ಓದುಗನಿಗೆ ತಾತ್ವಿಕ ತಿಳಿವಳಿಕೆ, ಆಧ್ಯಾತ್ಮದ ತಾಂತ್ರಿಕ ತಿಳಿವಳಿಕೆ ಮತ್ತು ವೇದ ಪುರಾಣ ಇತಿಹಾಸಗಳ ಕೀಲಿ ಪ್ರಜ್ಞೆಗಳಿರಬೇಕು. ಪಾಶ್ಚಾತ್ಯ ಮತ್ತು ಪೌರಾತ್ಯಗಳೆರಡನ್ನೂ ಒಳಗೊಂಡು; ಅವುಗಳಿಂದ ಅತೀತವಾಗಿ ನಿಂತು ವಿವೇಚಿಸಲೂ ತಿಳಿದಿರಬೇಕು. ಮಾನವಶಾಸ್ತ್ರ, ಸಾಂಸ್ಕೃತಿಕ ಚರಿತ್ರೆ ಮತ್ತು ಮನೋವಿಜ್ಞಾನಗಳ ಮೂಲತತ್ವಗಳೂ ತಿಳಿದಿರಬೇಕು. ಇಲ್ಲವಾದರೆ, “ವೇದ ಸುಳ್ಳನ್ನು ನಂಬಹಚ್ಚಿದೆ. ರಾಮಾಯಣ, ಮಹಾಭಾರತ, ಪುರಾಣಾದಿಗಳು ಅಂತರ್ ವಿಸಂಗತಿಗಳಿಂದ ಕೂಡಿವೆ. ಮಾನವಧರ್ಮವನ್ನು ನಷ್ಟ ಮಾಡಿ, ಮೋಕ್ಷಕಾಮಿ ನರಧರ್ಮ ಎತ್ತಿಕಟ್ಟಲು ವ್ಯವಸ್ಥಿತ ರೀತಿಯಿಂದ ರಚನೆಗೊಂಡಿದೆ. ಜೀವನ್ಮುಕ್ತಿಯನ್ನು ಪ್ರತಿಪಾದಿಸುವ ಸನ್ಯಾಸಿ ಸಂತರು ಉನ್ಮಾದಕ್ಕೊಳಗಾಗಿ ಸತ್ಯವನ್ನು ಅರಿಯಲಾರದ ಅಜ್ಞರು; ಇಲ್ಲವೇ ವಂಚಕರು. ಪರಂಪರೆಯ ಕಣ್ಕಟ್ಟನ್ನು ಅರಿಯದೇ ತತ್ವಜ್ಞಾನ ಪ್ರತಿಪಾದಿಸಿರುವ ರಾಮಕೃಷ್ಣ ಪರಮಹಂಸ, ಅರವಿಂದ, ಟಿಳಕ್, ಗಾಂಧೀ, ರಾಧಾಕೃಷ್ಣನ್ ಮೊದಲಾದವರೆಲ್ಲ ಮರುಳರು; ಅರಿತೂ ಪ್ರತಿಪಾದಿಸಿದ್ದರೆ ಮೋಸಗಾರರು. ಭಾರತೀಯರು ಧರ್ಮಗ್ರಂಥಗಳ ಸಮ್ಮೋಹನಕ್ಕೆ ಒಳಗಾಗಿದ್ದಾರೆ. ಅವರ ತಲೆ ತಿರುಗಿಹೋಗಿದೆ ! (ಬ್ರೈನ್‍ವಾಶ್ ಆಗಿದೆ) ಅಂದರೆ, ಭಾರತದಲ್ಲಿ ಸಾಂಸ್ಕೃತಿಕ ತಿರುವುಮುರುವು ಉಂಟಾಗಿದೆ; ಸಾಂಸ್ಕೃತಿಕ ಪಲ್ಲಟವಾಗಿದೆ. ಈ ಸಾಂಸ್ಕೃತಿಕ ಪಲ್ಲಟವೇ ಭಾರತೀಯರ ಅವನತಿಗೆ ಕಾರಣವಾಗಿದೆ” ಎಂದು ನಿಷ್ಟುರಿ ತತ್ವಜ್ಞಾನಿಯೊಬ್ಬ ಗರ್ಜಿಸಿದಂತೆ ತೋರುತ್ತದೆ. ಆದರೆ, “ಭಾರತೀಯರು ತಮ್ಮ ಮೂಲ ಪರಂಪರೆಯನ್ನು ಅರಿತು, ಅದನ್ನು ಆಚರಣೆಯಲ್ಲಿ ತಂದಾಗ ಮಾತ್ರ ಅವರ ಉದ್ಧಾರ ಸಾಧ್ಯ. ‘ವೈವಸ್ವತಮನು ಪ್ರಣೀತ ಮಾನವಧರ್ಮ’ ಇದು ಭಾರತೀಯರ ಧಾರ್ಮಿಕ ಪರಂಪರೆಯ ಮೂಲ ಹೆಸರು. ಪ್ರಪಂಚದಲ್ಲಿ ಧರ್ಮ ಅನ್ನುವುದಿದ್ದರೆ, ಅದು ಮಾನವ ಧರ್ಮ ಒಂದೇ” ಎಂಬುದು ಅವರ ಗ್ರಹಿಕೆ ಮತ್ತು ಸಮರ್ಥನೆಯ ಅರಿಕೆ.

ಭಾರತೀಯರು ತಲೆಯ ಮೇಲೆ ಇಟ್ಟುಕೊಂಡು ಕಣ್ಣು ಮುಚ್ಚಿಕೊಂಡಿರುವ ಪವಿತ್ರಗ್ರಂಥಗಳು ಹೇಗೆ ವೈವಸ್ವತಸತ್ಯವನ್ನು ಬುದ್ಧಿಪೂರ್ವಕವಾಗಿ ಮರೆಮಾಚಿವೆಯೆಂಬುದನ್ನು ಉದಾಹರಣೆಗಳೊಂದಿಗೆ ಶಂಭಾ ಅವರು ಪ್ರತಿಪಾದಿಸಿ ವ್ಯಾಸ, ವಾಲ್ಮೀಕಿ, ವಶಿಷ್ಠಾದಿಗಳೆಲ್ಲಾ ಹೇಗೆ ಎಡವಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಾರೆ.

ಭಗವದ್ಗೀತೆಯಲ್ಲಿರುವ ಎಡವಟ್ಟುಗಳನ್ನು ತೋರುವ ಶಂಭಾ “ಉದ್ಧರೇತ್ ಆತ್ಮನಾತ್ಮಾನಂ” ಎಂದು ಉಪದೇಶ ಮಾಡುವ ಅ-ಮೃತ ಸ್ವರೂಪ ಈ ಭಗವಂತನು. ಆ ಬಳಿಕ, ನನಗೇ ಶರಣು ಬಾ ಎಂದು ಅಪ್ಪಣೆ ಕೊಡುತ್ತಾನೆ! ಎಂದು ವ್ಯಂಗ್ಯವಾಡುತ್ತಾರೆ.

ನಿಜವಾದ ದೇವರು ಯಾರು? ಅವನ ಐತಿಹಾಸಿಕ ಸ್ವರೂಪವೇನು ಎಂದೆಲ್ಲಾ ಎಳೆ ಹಿಡಿದುಹೋಗುವ ಶಂಭಾರವರ ಅಧ್ಯಯನ ಮತ್ತು ವಿಶ್ಲೇಷಣೆಗಳನ್ನು ಒಪ್ಪದ ಕೆ ಎಸ್ ನಾರಾಯಣಾಚಾರ್ಯರಂತಹ ಸಂಪ್ರದಾಯವಾದಿಗಳು ಅವರನ್ನು ಕಠೋರವಾಗಿ ಟೀಕಿಸಿದ್ದು ಉಂಟು. ಆದರೆ, ಅವರ ಟೀಕೆಯಲ್ಲಿ ವ್ಯಕ್ತಿಗತವಾಗಿ ನಿಂದನೆಯ ಮಟ್ಟಕ್ಕೆ ಹೋಗುವರೇ ಹೊರತು, ಶಂಭಾ ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಅಥವಾ ಪರ್ಯಾಯವಾಗಿ ಮತ್ತೊಂದು ಸಂಶೋಧನಾ ಶಿಸ್ತನ್ನು ತೋರಿಸಲು ವಿಫಲರಾಗುತ್ತಾರೆ.

ಬುದ್ಧಿ, ಪ್ರಜ್ಞೆ, ಮಾನವ, ನರ, ಧರ್ಮ, ಸಂಸ್ಕೃತಿ ಹೀಗೆ ಎಲ್ಲವನ್ನೂ ಪದರಪದರವಾಗಿ ಅರಿವಿಗೆ ಎಟುಕಿಸುವ ಈ ಬುಧನ ಜಾತಕ ಅರಿಯಲು ಬಹು ತಾಳ್ಮೆ ಮತ್ತು ಎಚ್ಚರಿಕೆ ಬೇಕು.

ಈ ಪುಟ್ಟ ಲೇಖನದಲ್ಲಿ ಅವನ್ನು ಸಂಗ್ರಹಿಸಿ ಒಪ್ಪಿಸಲು ಸಾಧ್ಯವೇ ಇಲ್ಲ. ಆದರೆ ಇದೊಂದು ಪರಿಚಯಾತ್ಮಕ ಲೇಖನವಾಗಿ ಓದುಗರು ಶಂಭಾ ಕೃತಿಗಳ ಕಡೆಗೆ ಹೊರಳಲಿ ಮತ್ತು ತಿಳಿಯುವ ಪ್ರಯತ್ನಗಳನ್ನು ಮಾಡಲಿ ಎಂಬ ಆಶಯವನ್ನು ಪ್ರಾಮಾಣಿಕವಾಗಿ ಹೊಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...