ವಲಸೆಯ ವ್ಯಥೆ: ಈ ಮಹಾವಲಸೆಯ ಮಹಾಘಾತದ ಕೆಲವು ತುಣುಕುಗಳು ನಿಮ್ಮ ಮುಂದೆ..

ವಲಸೆ ಕಾರ್ಮಿಕರು ತಮ್ಮ ಸ್ಥಳಗಳಿಗೆ ತಲುಪಲು ಸಹಾಯ ಮಾಡುವುದಕ್ಕಾಗಿ ಆರಂಭವಾದ ಕರ್ನಾಟಕ ಜನಶಕ್ತಿ ಹೆಲ್ಫ್‌ಲೈನ್‌ನ ಭಾಗವಾದ ಮಲ್ಲಿಗೆ ಸಿರಿಮನೆಯವರು ತಮಗಾದ ಘೋರ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಮೊದಲ ಲಾಕ್ ಡೌನ್ ಘೋಷಣೆ ಮಾರ್ಚ್ 24ರಂದು ಸಂಜೆ 8ಕ್ಕೆ ಆದದ್ದು ಈ ದೇಶದ ಕರಾಳ ಇತಿಹಾಸದ ಭಾಗ. ಏಕೆಂದರೆ, ಅಂದು ದುಡಿದರೆ ಮಾತ್ರ ಆ ರಾತ್ರಿ ಊಟ ಮಾಡುವುದು ಸಾಧ್ಯವೆಂಬ ಸ್ಥಿತಿಯಲ್ಲಿ ಲಕ್ಷಾಂತರ ಕುಟುಂಬಗಳು ಬದುಕುತ್ತಿರುವ ಭಾರತವೆಂಬ ದೇಶದಲ್ಲಿ, ಕೇವಲ 4 ಗಂಟೆಗಳ ಕಾಲಾವಕಾಶದೊಂದಿಗೆ ಘೋಷಿಸಲಾದ ಲಾಕ್ ಡೌನ್‌ಗೆ ಹೊಂದಿಕೊಳ್ಳಲು ಸಂಬಳದಾರ ವರ್ಗವೇ ಒದ್ದಾಡಿದೆಯೆಂದ ಮೇಲೆ ದುಡಿದು ಬದುಕುವ ಜನರ ಸ್ಥಿತಿ ಏನಾಗಿರಬಹುದು? ದೇಶದ ಸುಮಾರು 45 ಕೋಟಿಯಷ್ಟು ದಿನಗೂಲಿ ಮತ್ತು ಅಸಂಘಟಿತ ಕಾರ್ಮಿಕರು, ಸುಮಾರು 56 ಕೋಟಿ ಸಣ್ಣ ರೈತ ಮತ್ತು ಕೃಷಿ ಕೂಲಿ ಕಾರ್ಮಿಕರು (14 ಕೋಟಿ ರೈತ ಕುಟುಂಬಗಳು) ಮತ್ತಿತರ ಕೋಟ್ಯಂತರ ಜನರು ಹಾದುಹೋಗುತ್ತಿರುವ ನರಕದ ಸಂಪೂರ್ಣ ಅಂದಾಜು ಇನ್ನೂ ಯಾರಿಗೂ ಸಿಕ್ಕಿಲ್ಲ.

ಈ ನಡುವೆ ಸಿಲುಕಿಕೊಂಡ ಕಾರ್ಮಿಕರು ಮತ್ತು ಜನರು ತಮ್ಮ ತಮ್ಮ ಊರುಗಳಿಗೆ ಹೋಗಬಹುದೆಂದು ಕೇಂದ್ರ ಸರ್ಕಾರ ಆದೇಶಿಸಿತು. ಆದರೆ ಅದಕ್ಕೆ ಬೇಕಾದ ಉಚಿತ ಪ್ರಯಾಣದ ವ್ಯವಸ್ಥೆಯನ್ನಾಗಲೀ, ಶ್ರಮಿಕರಿಗೆ ಅಗತ್ಯ ಮಾಹಿತಿ ಮತ್ತು ನೆರವನ್ನು ನೀಡುವ ವ್ಯವಸ್ಥೆಯನ್ನಾಗಲೀ ಮಾಡಲಿಲ್ಲ. ರಾಜ್ಯದಲ್ಲಿ ಸಹಾಯವಾಣಿ (ಹೆಲ್ಪ್ ಲೈನ್) ಗಳೆಂದು ನೀಡಲಾದ ನಂಬರ್‌ಗಳಲ್ಲಿ ಯಾವುದೂ ಈ ನಿಟ್ಟಿನಲ್ಲಿ ವಲಸೆ ಕಾರ್ಮಿಕರಿಗೆ ಉಪಯೋಗಕ್ಕೆ ಬರುವಂತಿರಲಿಲ್ಲ. ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯು ವಲಸೆ ಕಾರ್ಮಿಕರಿಗಾಗಿ ಹೆಲ್ಪ್ ಲೈನ್ ಒಂದನ್ನು ಆರಂಭಿಸುವ ಯೋಜನೆ ರೂಪಿಸಿತು.

ಅದರಂತೆ ಜನಶಕ್ತಿಯ ಕಾರ್ಯಕರ್ತರು ಹಾಗೂ ಇತರ ಸಾಮಾಜಿಕ ಚಳುವಳಿಗಳ ಒಡನಾಡಿಗಳಾದ 8 ಮಂದಿ ಸ್ವಯಂ ಸೇವಕರು ಈ ಹೆಲ್ಪ್ ಲೈನ್ ನಂಬರ್‌ಗಳನ್ನು ನಿಭಾಯಿಸುವ ಜವಾಬ್ದಾರಿ ಹೊರಲು ಸಿದ್ಧರಾದರು. ಸ್ವಾತಿ ಶುಕ್ಲ, ಭರತ್ ಹೆಬ್ಬಾಳ, ಪದ್ಮ ಕನಕರಾಜು, ರೋಸಿ ಮುಖರ್ಜಿ, ಮನೀಶ್ ಗೌತಮ್, ಮಾನ್ಸಿ, ಪ್ರಿಯಾ, ಬನಿಪ್ರಸಾದ್ ಅವರ ನಂಬರ್‌ಗಳೊಂದಿಗೆ ವಲಸೆ ಕಾರ್ಮಿಕರ ಹೆಲ್ಪ್ ಲೈನ್‌ಗೆ ಚಾಲನೆ ಕೊಡಲಾಯಿತು. ಅಲ್ಲಿ ಬರುವ ಕರೆಗಳನ್ನು ಬಗೆಹರಿಸುವ ಕೆಲಸಕ್ಕಾಗಿ ಗ್ರಾಮೀಣ ಕೂಲಿಕಾರರ ಸಂಘಟನೆಯ ಸ್ವರ್ಣ ಭಟ್, ಜನಶಕ್ತಿಯ ಮಲ್ಲಿಗೆ ಸಿರಿಮನೆ ಮತ್ತು ಕೆಲವು ಕಾರ್ಯಕರ್ತರು ಸೇರಿ ಒಂದು ತಂಡ ತಯಾರಾಯಿತು. ಕೆಲಸ ಮುನ್ನಡೆಯುತ್ತಾ ಹೋದಂತೆ, ಸಾಮಾಜಿಕ ಕಳಕಳಿಯುಳ್ಳ ಹಲವರು ಜೊತೆಗೂಡಿದರು.

ಸರ್ಕಾರದ ಹೆಲ್ಪ್ ಲೈನ್‌ಗಳಿಗಿಂತ ಈ ಪ್ರಯತ್ನ ಯಾಕೆ ವಿಶಿಷ್ಟವೆಂದರೆ, ಇಲ್ಲಿ ಯಾವುದೇ ರೀತಿಯ ಸಮಸ್ಯೆಗೂ ತಕ್ಷಣದಲ್ಲೇ ನೆರವು ನೀಡುವ ಪ್ರಯತ್ನ ಮಾಡಲಾಗುತ್ತಿದೆ. ವಾಪಸ್ ತಮ್ಮ ಮೂಲಸ್ಥಾನಗಳಾದ ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ಈಶಾನ್ಯ ರಾಜ್ಯಗಳು ಮೊದಲಾದ ಊರುಗಳಿಗೆ ಆನ್ ಲೈನ್ ನೋಂದಣಿಯನ್ನು ನಾವೇ ಮಾಡಿಸಿಕೊಡುವುದರಿಂದ ಹಿಡಿದು, ಹೋಗುವುದಕ್ಕೆ ನೋಂದಣಿ ಮಾಡಿಸಿಕೊಂಡು ತಮ್ಮ ಸರದಿಗಾಗಿ ಕಾಯುತ್ತಿರುವ ಕಾರ್ಮಿಕರಲ್ಲಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿದವರಿಗೆ ರೇಷನ್ ಮತ್ತು ಊಟ ತಲುಪಿಸುವವರೆಗೆ, ರೈಲ್ವೇ ನಿಲ್ದಾಣಕ್ಕೆ ಬಂದು ಟಿಕೆಟ್‌ಗೆ ಸಾಕಷ್ಟು ಹಣವಿಲ್ಲವೆಂದು ಕರೆ ಮಾಡಿದವರಿಗೆ ತಕ್ಷಣ ಹಣ ತಲುಪಿಸುವುದರಿಂದ ಹಿಡಿದು, ಆಂಧ್ರದಲ್ಲಿ ಸಿಲುಕಿದ ವಲಸೆ ಕಾರ್ಮಿಕರೊಬ್ಬರ ವಯಸ್ಸಾದ ತಂದೆ ತಾಯಂದಿರಿಗೆ ಊಟ-ಔಷಧಿ ತಲುಪಿಸುವವರೆಗೆ, ಅವರ ಎಲ್ಲ ಬಗೆಯ ನೋವು, ಸಮಸ್ಯೆ, ಆತಂಕಗಳಿಗೂ ಹೆಲ್ಪ್ ಲೈನ್ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿದೆ. ಈ ಮಹಾವಲಸೆಯ ಮಹಾಘಾತದ ಕೆಲವು ತುಣುಕುಗಳು ನಿಮ್ಮ ಮುಂದೆ..

ವಲಸೆಯ ವ್ಯಥೆ-1: ಗೆಲ್ಲಲೇಬೇಕು ಒಂದುದಿನ..

ಈತ ರಿತೇಶ್ ಕುಮಾರ್ ಚೌಹಾನ್. ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸ್ವಕ್ಷೇತ್ರ ಗೋರಖ್ ಪುರದಿಂದ ವಲಸೆ ಬಂದ ಕಾರ್ಮಿಕ. 28-30 ವರ್ಷ ವಯಸ್ಸಿರಬಹುದು. ಎಲ್ಲ ವಲಸೆ ಕಾರ್ಮಿಕರಂತೆಯೇ ದೊಡ್ಡ ಗುಂಪಿನಲ್ಲಿ ಬಂದಾತ….. ಎರಡು ವರ್ಷಗಳಿಂದ ಇಲ್ಲಿಯೇ ದುಡಿದಿದ್ದಾನೆ. ಮದುವೆಯ ನಂತರ ಹೆಂಡತಿಯನ್ನೂ ಕರೆತಂದ. ಈಗ ಆಕೆ ಎರಡು ತಿಂಗಳ ಬಾಣಂತಿ…ಅವಳಿ ಮಕ್ಕಳ ತಾಯಿ.

ಆತನೇ ಹೇಳುವಂತೆ, ಹಗಲು ರಾತ್ರಿ ದುಡಿದು ಗಳಿಸಿದ್ದು, ಉಳಿಸಿದ್ದೇನೂ ಇಲ್ಲ… ಬದುಕಿದ್ದಾನೆ ಅಷ್ಟೇ!

ಲಾಕ್ ಡೌನ್ ನಿಂದ ಈ ತನಕ ಉಸಿರು ಹಿಡಿದಿಡಲು ಉಳಿದಿದ್ದ ಅಲ್ಪಸ್ವಲ್ಪ ಹಣವನ್ನೂ ವ್ಯಯಿಸಿ ಖಾಲಿ ಕೈಯಾಗಿದ್ದಾನೆ.

ನಾಲ್ಕು ದಿನಗಳ ಹಿಂದೆ ಹೆಲ್ಪ್ ಲೈನ್‌ಗೆ ಈತನಿಂದ ಕರೆಬಂದಾಗ, ಏನು ಹೇಳುತ್ತಿದ್ದಾನೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಷ್ಟು ಸಮಾಧಾನ ಪಡಿಸಲು ಹೆಲ್ಪ್ ಲೈನ್‌ನ ವಾಲಂಟಿಯರ್ಸ್ ಕಷ್ಟಪಡಬೇಕಾಯಿತು.

ತಮ್ಮ ಜೊತೆಗಿದ್ದವರಿಗೆ ಊರಿಗೆ ಹೋಗುವ ರೈಲಿಗೆ ಸಂಬಂಧಿಸಿದ ಮೆಸೇಜ್ ಬಂದಿತ್ತೆಂದು, ಹಾಗಾದರೆ ತಾವೂ ಹೋಗಬಹುದೆಂಬ ಆಸೆಯಲ್ಲಿ, ಇದ್ದ ಗೂಡು ಖಾಲಿಮಾಡಿಕೊಂಡು ಚೀಲ, ಬುಟ್ಟಿ, ಸಾಮಾನು, ಸಂಸಾರ ಸಮೇತ ರೈಲು ನಿಲ್ದಾಣಕ್ಕೆ ಹೋದರೆ, ಅಲ್ಲಿ ಯಾರೂ ಇರಲಿಲ್ಲ! ನಮಗೆ ಕರೆ ಮಾಡುವುದಕ್ಕೂ ಮೊದಲೇ ಎರಡು ದಿನಗಳಿಂದಲೂ ಈ ಹಿಂದೆ ತಾವಿದ್ದ ಮನೆಯ ಹತ್ತಿರದ ಪೋಲಿಸ್ ಠಾಣೆಯ ಹೊರಗೆ ಹೆಂಡತಿ ಮಕ್ಕಳು ಮತ್ತು ತಮ್ಮ ಊರಿನ ಇನ್ನೂ 6 ಜನರೊಂದಿಗೆ ಹಗಲೂ ರಾತ್ರಿ ಕಾದು ಕುಳಿತಿದ್ದ, ತಮ್ಮ ಊರಿಗೆ ಪೊಲೀಸರು ಕಳಿಸಿಕೊಡುತ್ತಾರೆಂದುಕೊಂಡು.

ರಿತೇಶ್ ಕುಮಾರ್ ಚೌಹಾನ್

ಹೆಸರು ಎಂಟ್ರಿ ಮಾಡಿಕೊಂಡಿದ್ದಕ್ಕೆ ಪೊಲೀಸರು ಕೇಳಿದ ಹಣವನ್ನೂ ಕೊಟ್ಟ, ಪುಟ್ಟ ಮಕ್ಕಳೊಂದಿಗಿರುವ ತಮ್ಮನ್ನು ಬೇಗ ಕಳಿಸುವಂತೆ ಮನವಿಯನ್ನೂ ಮಾಡಿದ. ಊಟಕ್ಕೆಂದು ಇಟ್ಟುಕೊಂಡಿದ್ದ ಹಣ ಲಂಚಕ್ಕಾಗಿ ಹೋಯಿತು. ಎರಡನೇ ದಿನವಿಡೀ ಎಲ್ಲರೂ ನೀರು ಕುಡಿದು ಉಪವಾಸವಿದ್ದರು. ಮೂರನೇ ದಿನಕ್ಕೆ ತಡೆಯುವುದಾಗಲಿಲ್ಲ, ಯಾಕೆ ತಮ್ಮನ್ನು ಕಳಿಸುತ್ತಿಲ್ಲವೆಂದು ಕೇಳಲು ಹೋದ. ಪೊಲೀಸರಿಗೆ ಈತನ ಹಸಿದ ಹೊಟ್ಟೆಯ ಸಂಕಟ ಅಹಂಕಾರದ ವಾದದಂತೆ ಕೇಳಿಸಿತು! ಕಾಯುವುದೇನಿದೆ, ಕೈಯಲ್ಲಿದ್ದ ಲಾಠಿಯಿಂದ ಮೈಮೇಲೆ ಬಾಸುಂಡೆ ಬರಿಸಿ ಕಳಿಸಿದರು.

ಹಸಿದ ಹೊಟ್ಟೆಯಲ್ಲಿ, ದುಡಿದು ಬದುಕುವ ಘನತೆಯುಳ್ಳ ಆತ್ಮದ ಮೇಲೆ ಬಿದ್ದ ಏಟಿನ ನೋವಿನಲ್ಲಿ ಮಾತಾಡುತ್ತಿದ್ದ ಆತನ ಮಾತುಗಳು, ಇಡೀ ವಲಸಿಗ ಸಮುದಾಯದ ಆಕ್ರೋಶಕ್ಕೆ ಬಾಯಿ ಬಂದAತಿದ್ದವು. ಭೇಟಿಯಾಗಲು ಹೋಗಿ ನೋಡಿದಾಗ, ‘ಏನಿದ್ದರೂ ಬದುಕು ದೊಡ್ಡದು’ ಅನಿಸಿತು. ಅಷ್ಟೆಲ್ಲ ನೋವು ತಿಂದಾದ ಮೇಲೂ ಹೇಗೋ ಬಂದು ಹತ್ತಿರದ ಬಡವರು ವಾಸವಿರುವ ಪ್ರದೇಶದಲ್ಲಿ ಖಾಲಿಯಿದ್ದ ಪುಟ್ಟದೊಂದು ಕೊಠಡಿ ಹುಡುಕಿ ಎಲ್ಲರೂ ಅದರಲ್ಲೇ ಸೇರಿಕೊಂಡಿದ್ದರು.

ವಲಸೆ ಕಾರ್ಮಿಕರು ತಮ್ಮ ಊರಿಗೆ ಪಯಣಿಸಲು ಕಡ್ಡಾಯವಾಗಿ ಮಾಡಿಕೊಳ್ಳಬೇಕಾಗಿದ್ದ ‘ಸೇವಾ ಸಿಂಧು’ ಆಪ್ ನಲ್ಲಿ ಈತ ಮತ್ತು ಜೊತೆಗಾರರ ನೋಂದಣಿಯೇ ಆಗಿರಲಿಲ್ಲ. ಅವರನ್ನು ವಿವರವಾಗಿ ಮಾತಾಡಿಸಿದ ನಾವು, ತತ್ ಕ್ಷಣಕ್ಕೆ ಅವರ ಊಟ ಮತ್ತು ಕೊಠಡಿಗಾಗಿ ಹಣದ ವ್ಯವಸ್ಥೆ ಮಾಡಿ, ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡಿಸುವ ಪ್ರಕ್ರಿಯೆಯಲ್ಲಿದ್ದೆವು. ಅಷ್ಟರಲ್ಲಿ, ಬೇರೆ ಸಂಬಂಧಿಯೊಬ್ಬರಿಂದ, ವೈಟ್ ಫೀಲ್ಡ್ ನಿಂದ ರೈಲುಗಳು ಹೊರಡಲಿದ್ದು, ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪಟ್ಟಿ ಮಾಡಿಕೊಳ್ಳುತ್ತಿದ್ದಾರೆಂದು ಆತನಿಗೆ ಮಾಹಿತಿ ಬಂತು. ಅಲ್ಲಿಗೆ ಕುಟುಂಬ ಮತ್ತು ಸಾಮಾನು ಸರಂಜಾಮಿನ ಸಹಿತ ಹೋಗಲು ಆಟೋದವರು 1200 ಬಾಡಿಗೆ ತೆಗೆದುಕೊಂಡರು (ಕೆಲಸವಿಲ್ಲದೆ ಖಾಲಿಕೈಯ್ಯಲ್ಲಿರುವ ಅವರು ತಾನೆ ಇನ್ನೇನು ಮಾಡಿಯಾರು?). ಈಗ ಎರಡು ದಿನಗಳಿಂದ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಮುಂದೆ ಸರದಿಯಲ್ಲಿ ನಿಂತಿದ್ದಾನೆ, ಇಲ್ಲಿಂದಲಾದರೂ ತಾನು ಹೋಗುವ ದಾರಿ ಕಂಡುಕೊಳ್ಳುತ್ತೇನೇನೋ ಎಂಬ ಭರವಸೆಯಲ್ಲಿ.

ರಿತೇಶನ ಈ ಬದುಕಿನ ಹೋರಾಟದಲ್ಲಿ, ಹಸಿದು ಮಲಗದಂತೆ ಒಂದಷ್ಟು ಹಣ ಮತ್ತು ಹತಾಶನಾಗದಂತೆ ಮತ್ತೊಂದಷ್ಟು ಭರವಸೆಯ ಮಾತುಗಳ ಹೊರತು ನಾವೇನೂ ಮಾಡಲಾಗುತ್ತಿಲ್ಲ; ಏಕೆಂದರೆ ನಮ್ಮ ಹೃದಯಕ್ಕೆ ಗೊತ್ತಿದೆಯಲ್ಲ ಈ ವ್ಯವಸ್ಥೆ ರಿತೇಶನನ್ನು, ಆತನಂತಹ ಹಲವರನ್ನು ಸೋಲಿಸಲು ಪಣ ತೊಟ್ಟಿದೆಯೆಂದು.

ಈ ಹೋರಾಟದಲ್ಲಿ ಇಂದಲ್ಲದಿದ್ದರೆ ಎಂದಾದರೊಮ್ಮೆ ರಿತೇಶನಂತಹವರಿಗೆ ಗೆಲುವಾಗಬೇಕು! ಅದಕ್ಕಾಗಿ ಅವರ ಜೊತೆಗಿಂದು ನಾವಿರಬೇಕು!!

(ಅಡಿಟಿಪ್ಪಣಿ: ಈ ಬರಹ ಪ್ರಕಟಣೆಗೆ ಹೋಗುವ ವೇಳೆಗೆ ರಿತೇಶ್ ಮತ್ತು ಕುಟುಂಬ ಉತ್ತರ ಪ್ರದೇಶಕ್ಕೆ ಹೋಗುವ ರೈಲಿನಲ್ಲಿ ತಮ್ಮ ಊರು ತಲುಪಿದ್ದಾರೆ. ರಿತೇಶನ ದೂರದ ಸಂಬಂಧಿ, ಮತ್ತೊಬ್ಬ ವಲಸೆ ಕಾರ್ಮಿಕ, ಸ್ವತಃ ತಾನೇ ಕಷ್ಟದಲ್ಲಿದ್ದಾಗಲೂ ಈ ದೊಡ್ಡ ಕುಟುಂಬಕ್ಕೆ ಮನೆಯಲ್ಲೂ ಮನಸ್ಸಿನಲ್ಲೂ ಜಾಗಕೊಟ್ಟು ಪ್ರತಿ ಕ್ಷಣ ಅವರೊಂದಿಗಿದ್ದು ಹೋಗುವ ಹಾದಿಗೆ ಆಹಾರದ ವ್ಯವಸ್ಥೆಯನ್ನೂ ಮಾಡಿ ಕಳಿಸಿಕೊಟ್ಟರು.)

ವಲಸೆಯ ವ್ಯಥೆ-2 ‘ಅವರು ಒರಿಸ್ಸಾದವರೆಗೂ ಸೈಕಲ್ ಮೇಲೆಯೇ ಹೋಗಬೇಕು. ಏಕೆಂದರೆ…’

ಬೆಳಗಾವಿಯಿಂದ ಯುವಕರ ತಂಡ ಹೊರಟಿದ್ದು ಸೈಕಲ್‌ಗಳ ಮೇಲೆ. ಇದ್ದವರು 15 ಜನ, ಸೈಕಲ್‌ಗಳು ಮಾತ್ರ 10. ಹೊರಟದ್ದು ಅಲ್ಲಿಂದ 1300 ಕಿ.ಮೀ ದೂರದ ಒರಿಸ್ಸಾದ ಭುವನೇಶ್ವರಕ್ಕೆ, ಬಾಗಲಕೋಟೆ ದಾಟಿದ್ದಾಗ, ಇವರ ಸ್ಥಿತಿ ನೋಡಿ ನೊಂದುಕೊಂಡ ಸ್ಥಳೀಯರೊಬ್ಬರು ಯುವಕರ ನಂಬರ್ ಸಂಗ್ರಹಿಸಿಕೊಂಡು ಹೆಲ್ಪ್ ಲೈನ್‌ಗೆ ಕರೆ ಮಾಡಿದರು. “ಈ ಹುಡುಗರು ಈ ಬಿಸಿಲಿನಲ್ಲಿ ಅನ್ನ ನೀರಿಲ್ಲದೆ ಹೀಗೆ ಸೈಕಲ್ ಮೇಲೆ ಹೋದರೆ, ಭುವನೇಶ್ವರಕ್ಕೆ ಜೀವಂತವಾಗಿ ತಲುಪುವುದಿಲ್ಲ, ದಯವಿಟ್ಟು ಏನಾದರೂ ವ್ಯವಸ್ಥೆ ಮಾಡಿ”. ಆ ವಲಸೆ ಕಾರ್ಮಿಕರನ್ನು ಫೋನ್ ಮೂಲಕ ಸಂಪರ್ಕಿಸಿ, ಈ ರೀತಿ ಹೋಗದಂತೆ, ರೈಲಿನಲ್ಲಿ ಪ್ರಯಾಣಿಸುವಂತೆ ಮನವೊಲಿಸಬೇಕಾದರೆ, ಅವರಾಗಲೇ ರಾಯಚೂರಿನಿಂದ 100 ಕಿ.ಮೀ ದೂರದಲ್ಲಿದ್ದರು.

ತಕ್ಷಣ ರಾಯಚೂರಿನ ಕಾಳಜಿವಂತರೊಂದಿಗೆ ಮಾತುಕತೆ ಮಾಡಿಯಾಯಿತು. ಗ್ರಾಮೀಣ ಕೂಲಿಕಾರರ ಸಂಘದ ಬಸವರಾಜು, ಅಭಯ್, ರಾಯಚೂರಿನ ಜನಪರ ಹೋರಾಟಗಾರ ಅಸ್ಲಂ ಅಹಮದ್, ಕರ್ನಾಟಕ ಜನಶಕ್ತಿಯ ಮಾರಪ್ಪ, ಆಂಜನೇಯ, ಲಕ್ಷ್ಮಣ್ ಮಂಡಲಗೇರಾ ಎಲ್ಲರೂ ಒಂದು ಕರೆಗೆ ಸ್ಪಂದಿಸಿ, ಕಾರ್ಮಿಕರ ನೆರವಿಗೆ ಮುಂದಾದರು. ಊಟ, ನೀರು, ಸ್ನಾನಕ್ಕೆ, ವಿಶ್ರಾಂತಿಗೆ ವ್ಯವಸ್ಥೆ ಮಾಡಿದರು. ಅಧಿಕಾರಿಗಳೊಂದಿಗೆ ಮಾತಾಡಿದರು. ಎಲ್ಲವೂ ಬಗೆಹರಿಯಿತೆನ್ನಿಸಿತು; ಬಹುಶಃ ಸ್ವಲ್ಪ ಹೊತ್ತಿನಲ್ಲಿ, ಅವರಿಗೆ ರೈಲಿನಲ್ಲಿ ಹೋಗಲು ಬೇಕಾದ ವ್ಯವಸ್ಥೆ ಆಗಿದೆ ಎಂಬ ಫೋನ್ ಬರಬಹುದೆಂಬ ನಂಬಿಕೆ ಮೂಡಿತು.

ಫೋನ್ ಕರೆ ಬಂತು. “ಅವರು ರೈಲಿನಲ್ಲಿ ಹೋಗಲು ಸಾಧ್ಯವಿಲ್ಲ, ಆದ್ದರಿಂದ ಸೈಕಲ್‌ನಲ್ಲೇ ಮುಂದುವರೆದರು.!!!

“ಏಕೆ???”

“ಏಕೆಂದರೆ, ಅವರೀಗಾಗಲೇ ಬೆಳಗಾವಿಯಿಂದ ಸೇವಾ ಸಿಂಧು ಆಪ್ ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ. ಒಂದು ಆಧಾರ್ ಕಾರ್ಡಿಗೆ ಒಮ್ಮೆ ಮಾತ್ರ ರಿಜಿಸ್ಟರ್ ಮಾಡಲು ಸಾಧ್ಯ. ಈಗ ರಾಯಚೂರಿನ ಪಟ್ಟಿಗೆ ಇವರನ್ನು ಸೇರಿಸಲಾಗದು. ಸೇರಿಸದೆ, ರೈಲಿನಲ್ಲಿ ಕಳಿಸಲಿಕ್ಕೂ ಬರದು. ಒಂದು ವೇಳೆ ಇವರು ಇವತ್ತೊಂದು ದಿನ ಇಲ್ಲಿ ಉಳಿದು ಹೋಗಬೇಕೆಂದರೂ ಇವರನ್ನು ಜಿಲ್ಲಾಧಿಕಾರಿಗಳು ಕ್ವಾರಂಟೈನ್ ಮಾಡಬೇಕಾಗುತ್ತದಂತೆ, ಅದೇ ಇರುವ ನಿಯಮ. ಕ್ವಾರಂಟೈನ್‌ನ ಮಾತು ಕೇಳಿದೊಡನೇಯೇ ಆ ಹುಡುಗರು ‘ನಹೀಂ ಭಯ್ಯಾ, ಹಮ್ ಸೈಕಲ್ ಪರ್ ಹೀ ಠೀಕ್ ಹೈಂ. ಜಿಂದಾ ಯಾ ಮುರ್ಧಾ ಗಾಂವ್ ತೋ ಪಹುಚೇಂಗೆ’ (ಬೇಡ ಅಣ್ಣ, ನಾವು ಸೈಕಲ್ ನಲ್ಲೇ ಹೋಗುತ್ತೇವೆ; ಬದುಕಿದಂತೆಯೋ ಸತ್ತೋ ಊರನ್ನಂತೂ ಮುಟ್ಟುತ್ತೇವೆ) ಎನ್ನುತ್ತಾ ಹೊರಟರು”.. “ನಮಗೂ ಏನು ಮಾಡಬೇಕೋ ತಿಳಿಯಲಿಲ್ಲ, ದಾರಿಯಲ್ಲಿ ತಿನ್ನಲು ಬೇಕಾದ ಆಹಾರ, ಮುಂದಿನ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಅವರು ಸಂಪರ್ಕಿಸಬಹುದಾದ ಕಾಳಜಿವಂತರ ನಂಬರ್‌ಗಳನ್ನು ಕೊಟ್ಟು ಕಳಿಸಿದೆವು”!

ಮಾತುಗಳು ಭಾರವೆನಿಸುತ್ತವೆ ಇನ್ನು ಮುಂದೆ…

ಒಂದೊಂದು ಹೊತ್ತಿನ ಊಟಕ್ಕೆ ಮೊದಲು, ಬಿಸಿಲಿನ ಸೆಖೆಗೆಂದು ಫ್ಯಾನ್ ಹಾಕುವ ಮೊದಲು ನೆನಪಾಗುತ್ತಾರೆ….

ಹೇಗಿದ್ದಾರೋ ಎಲ್ಲಿಯತನಕ ಮುಟ್ಟಿದರೋ.

ಹೆದ್ದಾರಿಗಳಲ್ಲಿ ಅಪಘಾತದ ಸುದ್ದಿಗಳು ನಮ್ಮವರೇ ಹಾದಿಗುಂಟ ಹೊರಟಿದ್ದಾರೇನೋ ಎಂಬಂತಹ ನಡುಕವನ್ನು ಹುಟ್ಟಿಸುತ್ತಿವೆ!!

ಹೌದು, ನಮ್ಮವರೇ ಹೊರಟಿದ್ದಾರೆ, ಸೈಕಲ್ ಮೇಲೆ ಭುವನೇಶ್ವರಕ್ಕೆ!

ಏಕೆ?

ಏಕೆಂದರೆ, ಈ ವ್ಯವಸ್ಥೆಗೆ ಹೃದಯವಿಲ್ಲದ್ದಕ್ಕೆ!

(ಅಡಿಟಿಪ್ಪಣಿ-ಈ ಬರಹ ಪ್ರಕಟಣೆಗೆ ಹೋಗುವ ವೇಳೆಗೆ ಒರಿಸ್ಸಾ ಮಾರ್ಗವಾಗಿ ಆಂಧ್ರ ತಲುಪಿದ ಈ ಕಾರ್ಮಿಕರನ್ನು ಕರ್ನೂಲು ಮತ್ತು ವಿಜಯವಾಡಕ್ಕೆ ನಡುವೆ ‘ಆತ್ಮಕೂರು’ ಎಂಬಲ್ಲಿ ಅಲ್ಲಿನ ಪೊಲೀಸರು ತಡೆದು ನಿಲ್ಲಿಸಿದ್ದರು. ಮುಂದೆ ಹೋಗಲು ಬಿಡದೆ ಅಲ್ಲೇ ಕೂರಿಸಿದ್ದರು. ಅಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ರವರ ನಂಬರ್ ಪಡೆದು ಹೆಲ್ಪ್ ಲೈನ್‌ನ ಪರಿಚಯ ನೀಡಿ ಮಾತನಾಡಿದೆವು. ಜೊತೆಗೆ ಸ್ಥಳೀಯ ಸಂಘಟನೆಗಳ ಸ್ನೇಹಿತರನ್ನೂ ಸಂಪರ್ಕಿಸಿ ಅವರ ಮೂಲಕವೂ ಕಾರ್ಮಿಕರನ್ನು ಮುಂದೆ ಕಳಿಸುವಂತೆ ಮನವೊಲಿಸುವ ಪ್ರಯತ್ನ ಮಾಡಿದೆವು.

ಈ ಕಾರ್ಮಿಕರ ಸಂಘರ್ಷದ ಕಥೆಯನ್ನು ನಮ್ಮಿಂದ ಕೇಳಿ ತಿಳಿದ ಆಂಧ್ರದ ಸಂಘಟನೆಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಕಾರ್ಮಿಕರನ್ನು ಆಂಧ್ರದ ಗಡಿಯವರೆಗೆ ಕಳಿಸಲಿಕ್ಕಾದರೂ ಬಸ್ ವ್ಯವಸ್ಥೆ ಮಾಡುವ ಪ್ರಯತ್ನಕ್ಕೆ ಮುಂದಾದರು. ಕಡೆಗೂ ಎಲ್ಲರ ಪ್ರಯತ್ನದಿಂದ ಒರಿಸ್ಸಾದ ಸುದರ್ಶನ್ ಮತ್ತು ತಂಡಕ್ಕೆ ಒರಿಸ್ಸಾ ಗಡಿಯಂಚಿನವರೆಗೆ ಬಸ್ ವ್ಯವಸ್ಥೆಯಾಯಿತು.

ಅವರಿಂದ ಬಂದ ಫೋನ್ ಕರೆ ಮತ್ತು ಫೋಟೋಗಳು ಬಿರುಬಿಸಿಲಿನಲ್ಲಿ ತಂಗಾಳಿಯಂತಹ ಅನುಭವ ಕೊಟ್ಟವು. ಅಲ್ಲಿಂದ ಮುಂದೆಯೂ ಮತ್ತೆ ಅವರಿಗೆ ತಾಯ್ನೆಲದಲ್ಲಿ ಮೂರು ದಿನಗಳ ಸೈಕಲ್ ಪ್ರಯಾಣ ಬಾಕಿಯಿರುತ್ತದೆ!)


ಇದನ್ನೂ ಓದಿ: ವಲಸೆ ಕಾರ್ಮಿಕರ ಶೋಚನೀಯ ಪರಿಸ್ಥಿತಿಗೆ ಮಹಾನ್ ಕೋರ್ಟ್‍ಗಳು ಸ್ಪಂದಿಸಿದ್ದು ಹೇಗೆ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here