Homeಮುಖಪುಟಅವಿಶ್ವಾಸ ಶುರುವಾಗಿದೆ, ವಿಶ್ವಾಸ ಇನ್ನೂ ಬಂದಿಲ್ಲ

ಅವಿಶ್ವಾಸ ಶುರುವಾಗಿದೆ, ವಿಶ್ವಾಸ ಇನ್ನೂ ಬಂದಿಲ್ಲ

- Advertisement -
- Advertisement -

ಮೋದಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಮೊದಲ ಅವಿಶ್ವಾಸ ನಿರ್ಣಯ ಮಂಡನೆಯಾಯಿತು. 15 ವರ್ಷಗಳ ಏಕೈಕ ಅವಿಶ್ವಾಸ ನಿರ್ಣಯವಿದು. ಸರ್ಕಾರದ ಪರ ಬಿಜೆಪಿ ಪಕ್ಷದ ಸಂಸದರಷ್ಟೇ ಮತ ಹಾಕಿದರೂ ಅವಿಶ್ವಾಸ ನಿರ್ಣಯ ಸೋಲುತ್ತದೆ ಎಂದು ಅದನ್ನು ಮಂಡಿಸಿದವರಿಗೂ ಗೊತ್ತಿತ್ತು. ಆದರೂ ಇದು ಮಂಡನೆಯಾಯಿತು. ವಿರೋಧ ಪಕ್ಷಗಳಿಗೆ ಸರ್ಕಾರದ ಬಗ್ಗೆ ಹೇಗೂ ವಿಶ್ವಾಸ ಇರಲಿಲ್ಲ. ಆದರೆ, 29 ವರ್ಷಗಳ ನಂತರ ದೇಶದ ಜನರು ಒಂದೇ ಪಕ್ಷದ ಮೇಲೆ ವಿಶ್ವಾಸವಿರಿಸಿ 2014ರಲ್ಲಿ ಅಭೂತಪೂರ್ವ ರೀತಿಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಗೆಲ್ಲಿಸಿದ್ದರು. ನಾಲ್ಕು ವರ್ಷಗಳ ಆಡಳಿತದ ನಂತರ ಜನರ ವಿಶ್ವಾಸ ಕದಡುತ್ತಿದ್ದು, ಅದರ ಸಂಸದೀಯ ಅಭಿವ್ಯಕ್ತಿಯಾಗಿ ಈ ಅವಿಶ್ವಾಸ ನಿರ್ಣಯವು ಯಶಸ್ವಿಯಾಯಿತೇ ಇಲ್ಲವೇ ಎಂಬುದಷ್ಟೇ ಪ್ರಶ್ನೆ.
ಒಂದೇ ವಾಕ್ಯದಲ್ಲಿ ಹೇಳಬಹುದಾದರೆ, ಮೋದಿ ಸರ್ಕಾರದ ವಿಶ್ವಾಸವು ಕದಡುತ್ತಿದೆ; ಆದರೆ ಪ್ರತಿಪಕ್ಷಗಳ ಮೇಲೆ ವಿಶ್ವಾಸ ಬಂದಿಲ್ಲ. ಎನ್‍ಡಿಎ ಮೈತ್ರಿಕೂಟವು ಸುಭದ್ರವಾದ ಮತ್ತು ವಿಶ್ವಸನೀಯವಾದ ಆಡಳಿತವನ್ನು ಕೊಡುತ್ತಿದ್ದರೂ, ಈ ಅವಿಶ್ವಾಸ ನಿರ್ಣಯ ಏಕೆ ಮಂಡಿಸಲಾಯಿತೆಂದು ಆಡಳಿತ ಪಕ್ಷದ ನಾಯಕರು ಕೇಳಿದರು.
ವಾಸ್ತವದಲ್ಲಿ ಇದು ಬಿಜೆಪಿಯ ಎರಡನೇ ಅತಿ ದೊಡ್ಡ ಮಿತ್ರ ಪಕ್ಷವಾಗಿದ್ದ ತೆಲುಗುದೇಶಂ (16 ಲೋಕಸಭಾ ಸದಸ್ಯರು) ಮಂಡಿಸಿದ ಅವಿಶ್ವಾಸ ನಿರ್ಣಯ. ಅದರ ಅತೀ ದೊಡ್ಡ ಮಿತ್ರ ಪಕ್ಷವಾಗಿದ್ದ ಶಿವಸೇನೆ (18 ಲೋಕಸಭಾ ಸದಸ್ಯರು) ಲೋಕಸಭೆಯಿಂದ ಹೊರನಡೆದು ತನ್ನ ಅವಿಶ್ವಾಸವನ್ನು ತೋರಿಸಿತು. ಇವೆರಡನ್ನು ಹೊರತುಪಡಿಸಿದರೆ ಎರಡಂಕಿಗಳ ಲೋಕಸಭಾ ಸದಸ್ಯರನ್ನು ಹೊಂದಿರುವ ಇನ್ನಾವ ಪಕ್ಷವೂ ಎನ್‍ಡಿಎನಲ್ಲಿ ಇಲ್ಲ. ಆದರೆ, 37 ಸ್ಥಾನವಿರುವ ಅಣ್ಣಾ ಡಿಎಂಕೆ ಬೆಂಬಲ ಕೊಟ್ಟಿತು. ಅದರ ಜೊತೆಗೆ ಎರಡೇ ಸ್ಥಾನಗಳಿದ್ದರೂ, ಬಿಜೆಪಿ ಬೆಂಬಲದೊಂದಿಗೆ ಬಿಹಾರದಂತಹ ದೊಡ್ಡ ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿಯು ಮತ್ತೆ ಎನ್‍ಡಿಎ ಜೊತೆಗೆ ಬಂದಿದೆ. ಆ ಅರ್ಥದಲ್ಲಿ ಬಲಾಬಲಗಳ ವಿಚಾರದಲ್ಲಿ ಇನ್ನೂ ದೊಡ್ಡ ಏರುಪೇರು ಕಾಣುತ್ತಿಲ್ಲ. ಜಯಲಲಿತಾರ ನಂತರ ಶಶಿಕಲಾರನ್ನು ಹೊರಗಿಟ್ಟ ಅಣ್ಣಾ ಡಿಎಂಕೆಯು ತಮಿಳುನಾಡಿನಲ್ಲಿ ವಿಶ್ವಾಸ ಕಳೆದುಕೊಂಡಿದೆ ಮತ್ತು ತ.ನಾಡಿನ ಗುಣಕ್ಕೆ ತಕ್ಕಂತೆ ಮುಂದಿನ ಸಾರಿ ಆ ಪಕ್ಷವು ಒಂದು ಲೋಕಸಭೆ ಸ್ಥಾನವನ್ನು ಗೆದ್ದುಕೊಳ್ಳುವುದೂ ಕಷ್ಟವಿದೆ ಎಂಬ ಲೆಕ್ಕಾಚಾರವನ್ನು ಬಿಜೆಪಿ ವಿರೋಧಿಗಳು ಮುಂದಿಡಬಹುದು. ಮತದಾನದಿಂದ ಹೊರಗುಳಿದ ಟಿಆರ್‍ಎಸ್, ಬಿಜೆಡಿಗಳು ತಾವು ಯಾರ ಜೊತೆಗೆ ಬೇಕಾದರೆ ಹೋಗಬಹುದು ಎಂಬುದನ್ನು ಸೂಚಿಸಿದರು.

ಇನ್ನುಳಿದಂತೆ ದೇಶದ ಬಹುತೇಕ ದೊಡ್ಡ ಪಕ್ಷಗಳು ಬಿಜೆಪಿಯ ವಿರುದ್ಧ ನಿಂತಿವೆ. ಇವರೆಲ್ಲರ ಮೈತ್ರಿಕೂಟವು ಬಿಜೆಪಿಯನ್ನು ದೇಶವ್ಯಾಪಿ ಬಲಗೊಳಿಸಲಿದೆ ಎಂದು ನರೇಂದ್ರ ಮೋದಿ ಹೇಳಿದರು. ಬಂಗಾಲ, ಕೇರಳ, ತೆಲಂಗಾಣ, ಒರಿಸ್ಸಾ, ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್ ಸ್ಥಳೀಯವಾಗಿ ಪ್ರಬಲವಾಗಿರುವ ಇತರ ಪಕ್ಷಗಳ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಲ್ಲಿ ಖಂಡಿತವಾಗಿ ಅಲ್ಲೆಲ್ಲಾ ಬಿಜೆಪಿಯ ಕೈ ಮೇಲಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ, ಸ್ಥಳೀಯವಾಗಿ ಈ ಪಕ್ಷಗಳ ಎದುರಾಳಿ ಕಾಂಗ್ರೆಸ್ಸೇ ಆಗಿದೆ. ಹಾಗಾಗಿ ಆಯಾ ರಾಜ್ಯಗಳಲ್ಲಿ ಇಂತಹ ಮೈತ್ರಿಕೂಟದ ವಿರುದ್ಧ ಇರುವ ಇಡೀ ಜಾಗವನ್ನು ಸಹಜವಾಗಿ ಬಿಜೆಪಿ ಮತ್ತು ಅದರ ಜೊತೆ ಹೋಗಬಹುದಾದ ಸಣ್ಣಪುಟ್ಟ ಪಕ್ಷಗಳು ಆಕ್ರಮಿಸಿಕೊಳ್ಳುತ್ತವೆ. ಆದರೂ, ಮೋದಿ-ಷಾ ಜೋಡಿ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅವರಿಗೆ ಹೆಚ್ಚು ಮತಗಳನ್ನೂ, ಸೀಟುಗಳನ್ನೂ ತಂದುಕೊಡುವ ಮಿತ್ರರ ಅಗತ್ಯವಿದೆ. ಏಕೆಂದರೆ ಬಿಜೆಪಿಯ ಮತಗಳಿಕೆಯು ಗಣನೀಯವಾಗಿ ಹೆಚ್ಚಾಗದಿದ್ದರೆ 2019ರಲ್ಲಿ ಸ್ವತಂತ್ರವಾಗಿ ಬಹುಮತವನ್ನು ಪಡೆದುಕೊಳ್ಳುವುದು ಕಷ್ಟ.
ಕೆಳಗಿನ ಲೆಕ್ಕ ನೋಡಿದರೆ ಅದು ಅರ್ಥವಾಗುತ್ತದೆ. 2014ರಲ್ಲಿ ಬಿಜೆಪಿಯು ಹೆಚ್ಚು ಸೀಟುಗಳನ್ನು ಯಾವ್ಯಾವ ರಾಜ್ಯಗಳಲ್ಲಿ ಪಡೆದುಕೊಂಡಿತೆಂಬುದನ್ನು ನೋಡಿ. ಅಸ್ಸಾಂ 14ರಲ್ಲಿ 7, ಬಿಹಾರ 40ರಲ್ಲಿ 28 (ಮಿತ್ರ ಪಕ್ಷ ಎಲ್‍ಜೆಪಿ ಸೇರಿ), ಛತ್ತೀಸ್‍ಗಡ 11ರಲ್ಲಿ 10, ಗುಜರಾತ್ 26ರಲ್ಲಿ 26, ಹರಿಯಾಣ 10ರಲ್ಲಿ 7, ಹಿಮಾಚಲ ಪ್ರದೇಶ 4ರಲ್ಲಿ 4, ಜಾರ್ಖಂಡ್ 14ರಲ್ಲಿ 12, ಕರ್ನಾಟಕ 28ರಲ್ಲಿ 17, ಮಧ್ಯಪ್ರದೇಶ 29ರಲ್ಲಿ 26, ಮಹಾರಾಷ್ಟ್ರ 48ರಲ್ಲಿ 41 (ಆಗಿನ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಶೇತ್ಕರಿ ಸಂಘಟನೆಗಳ ಜೊತೆ), ರಾಜಸ್ತಾನ 25ರಲ್ಲಿ 23, ಉತ್ತರಪ್ರದೇಶ 80ರಲ್ಲಿ 71, ಉತ್ತರಖಂಡ 5ರಲ್ಲಿ 5, ದೆಹಲಿ 7ರಲ್ಲಿ 7 ಗೆದ್ದಿತ್ತು. ಇವಿಷ್ಟು ರಾಜ್ಯಗಳ ಒಟ್ಟು ಸೀಟುಗಳ ಸಂಖ್ಯೆ 341. ಅವುಗಳಲ್ಲಿ ಬಿಜೆಪಿಯು 284 ಸೀಟುಗಳನ್ನು (ಎಲ್‍ಜೆಪಿ, ಶಿವಸೇನೆ ಮತ್ತು ಶೇತ್ಕರಿ ಸೇರಿ) ಪಡೆದುಕೊಂಡಿತ್ತು. ಉಳಿದೆಲ್ಲಾ ರಾಜ್ಯಗಳಲ್ಲಿ ಮಿತ್ರಪಕ್ಷಗಳನ್ನು ಸೇರಿ ಹೆಚ್ಚೆಂದರೆ 25 ಸೀಟುಗಳು. ಮೇಲಿನ ರಾಜ್ಯಗಳ ಪೈಕಿ ಕರ್ನಾಟಕ ಮತ್ತು ದೆಹಲಿ ಬಿಟ್ಟರೆ ಉಳಿದೆಲ್ಲಾ ಕಡೆ ಬಿಜೆಪಿಯೇ ಅಧಿಕಾರದಲ್ಲಿದೆ. ಮತ್ತು ಬಹುತೇಕ ಕಡೆ ಅದರ ಆಡಳಿತವು ಜನರ ಮೆಚ್ಚುಗೆಯನ್ನು ಗಳಿಸಿಲ್ಲ.
ಹೀಗಾಗಿ ಮತ್ತೆ 2014ರಲ್ಲಿ ನಡೆಸಿದ ರೀತಿಯಲ್ಲಿ ಮೋದಿ ಅಲೆಯ ಎರಡನೇ ಅಂಕವನ್ನು ಬೀಸುವಂತೆ ಮಾಡದಿದ್ದರೆ, ಇದರಲ್ಲಿ ಕನಿಷ್ಠ 100 ಸೀಟುಗಳನ್ನು ಬಿಜೆಪಿಯು ಕಳೆದುಕೊಳ್ಳುತ್ತದೆ. ಇದು ಮೋದಿಯವರಿಗೂ ಗೊತ್ತಿರುವುದರಿಂದಲೇ ಕಳೆದ ಒಂದು ತಿಂಗಳಲ್ಲಿ ಉತ್ತರಪ್ರದೇಶವೊಂದರಲ್ಲೇ 3 ರ್ಯಾಲಿಗಳನ್ನು ನಡೆಸಿದ್ದಾರೆ. ಹಾಗೆಯೇ ಚುನಾವಣಾ ತಯಾರಿಯ ರ್ಯಾಲಿಯನ್ನು ಪಶ್ಚಿಮ ಬಂಗಾಳದಲ್ಲಿ ನಡೆಸಿದ ಮಮತಾ ಬ್ಯಾನರ್ಜಿ ಬಿಜೆಪಿಯು ಹೆಚ್ಚೆಂದರೆ 100ರಿಂದ 150 ಸೀಟುಗಳನ್ನಷ್ಟೇ ಗೆಲ್ಲಬಹುದು ಎಂದು ರಾಜ್ಯವಾರು ಲೆಕ್ಕವನ್ನು ಮುಂದಿಟ್ಟಿದ್ದಾರೆ. ಮೋದಿ ಅಲೆಯು 2014ರಲ್ಲಿ ಇದ್ದುದು ನಿಜ, ಈಗಲೂ ಇರುವುದು ವಾಸ್ತವ. ಒಂದು ವೇಳೆ ಅದು ಸ್ವಲ್ಪ ಬಲ ಕಳೆದುಕೊಳ್ಳುತ್ತಿದೆ ಎನಿಸಿದರೆ ಹಣ ಮತ್ತು ಮಾಧ್ಯಮಗಳ ಬಲದಿಂದ ಅದನ್ನು ಮತ್ತೆ ಸೃಷ್ಟಿಸಲಾಗುತ್ತದೆ. ಅಗತ್ಯ ಬಿದ್ದಾಗಲೆಲ್ಲಾ ಕೋಮು ಧ್ರುವೀಕರಣವನ್ನು ಹಾಗೂ ಜಾತಿಗಳ ಸಮೀಕರಣವನ್ನು ಯಶಸ್ವಿಯಾಗಿ ರೂಪಿಸಲಾಗುತ್ತದೆ. ಇವೆಲ್ಲವು 2014ರಲ್ಲೂ ಇದ್ದವು, ಈಗಲೂ ಬಳಕೆಯಾಗಲಿರುವ ವಿಧಾನಗಳು.
ಈ ವಿಚಾರದಲ್ಲಿ ಬಿಜೆಪಿ, ಆರೆಸ್ಸೆಸ್ ಮತ್ತು ಮೋದಿ-ಷಾಗಳನ್ನು ಸರಿಗಟ್ಟುವ ಶಕ್ತಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಸಿಗೂ ಇಲ್ಲ; ಉಳಿದೆಲ್ಲಾ ಪಕ್ಷಗಳು ಒಂದುಗೂಡಿದರೂ ಸಾಧ್ಯವಿಲ್ಲ. ಇವನ್ನು ಸಾಧ್ಯವಾದಷ್ಟು ಮಟ್ಟಿಗೆ ಮಾಡುವುದರ ಜೊತೆಗೆ, ಮೋದಿ ನೇತೃತ್ವದ ಸರ್ಕಾರದ ವೈಫಲ್ಯವನ್ನು ಯಶಸ್ವಿಯಾಗಿ ಜನರಿಗೆ ಕೊಂಡೊಯ್ಯುವ ಮೂಲಕ ಮಾತ್ರವೇ ಅದನ್ನು ಮಾಡುವುದು ಸಾಧ್ಯ. ಹಾಗಿಲ್ಲದೇ, ಮೋದಿಗೆದುರು ಯಾವುದೇ ಒಬ್ಬ ರಾಜಕೀಯ ನಾಯಕ ಅಥವಾ ನಾಯಕಿಯ ವರ್ಚಸ್ಸಿನ ಮೂಲಕ ಎನ್‍ಡಿಎಯನ್ನು ಸೋಲಿಸುವ ಸಾಧ್ಯತೆ ಇಲ್ಲ.
ಅವಿಶ್ವಾಸ ನಿರ್ಣಯವು ಸರ್ಕಾರದ ವೈಫಲ್ಯವನ್ನು ಮುಂದಿಡುವ ಒಂದು ಸಾಧನವಾಗಿತ್ತು. ಅದನ್ನು ಬಳಸಿಕೊಳ್ಳಲು ವಿರೋಧ ಪಕ್ಷಗಳು ಸದನದೊಳಗೆ ಶಕ್ತಿ ಮೀರಿ ಪ್ರಯತ್ನಿಸಿ ಇದ್ದುದರಲ್ಲಿ ಉತ್ತಮ ಸಾಧನೆಯನ್ನೂ ತೋರಿದವು. ಜನಸಾಮಾನ್ಯರ ದೃಷ್ಟಿಯಲ್ಲಿ ಮೋದಿ ಸುತ್ತ ಸೃಷ್ಟಿಸಲಾಗಿರುವ ಪ್ರಭಾವಳಿಯನ್ನು ಒಡೆದು ಹಾಕುವುದು ಒಂದೇ ಬಾರಿಗೆ ಸಾಧ್ಯವೂ ಇಲ್ಲ, ಅದಕ್ಕೆ ಬೇಕಾದ ರಾಜಕೀಯ ಹಾಗೂ ನೈತಿಕಶಕ್ತಿಯನ್ನು ಯಾವುದೇ ನಾಯಕ ಯಾ ನಾಯಕಿ ಅಥವಾ ಪಕ್ಷವು ತನ್ನಂತೆ ತಾನೇ ಹೊಂದಿಯೂ ಇಲ್ಲ. ಏಕೆಂದರೆ, ರಾಷ್ಟ್ರಮಟ್ಟದಲ್ಲಿ ಅಂತಹ ಜನನಾಯಕರನ್ನು ಕಾಂಗ್ರೆಸ್ ಸೇರಿದಂತೆ ಯಾರೂ ಹೊಂದಿಲ್ಲ. ರಾಹುಲ್‍ಗಾಂಧಿ ಕಳೆದ ಒಂದು ವರ್ಷದಲ್ಲಿ ಗಣನೀಯವಾಗಿ ಸುಧಾರಿಸಿದ್ದಾರೆ ಮತ್ತು ಮೋದಿಯವರ ವ್ಯಕ್ತಿತ್ವ, ರಾಜಕೀಯ, ಸಿದ್ಧಾಂತಗಳಿಗೆ ಪರ್ಯಾಯ ನಾಯಕನಾಗಿ ರೂಪುಗೊಳ್ಳುತ್ತಿದ್ದಾರೆ. ಕಾಂಗ್ರೆಸ್ಸಿಗೂ ಬೇರೆ ರೂಪವನ್ನು ಕೊಡುವ ಪ್ರಯತ್ನ ನಡೆದಿದೆ. ಆದರೂ, ಅವರು ಬದಲಿಸಲಾಗದ ಹಲವು ಸಂಗತಿಗಳು ಅವರನ್ನೂ, ಕಾಂಗ್ರೆಸ್ಸನ್ನೂ ಕಾಡುತ್ತವೆಯಾದ್ದರಿಂದ ಕಾಂಗ್ರೆಸ್ ಸ್ವಂತ ಬಲದ ಮೇಲೆ ಬಹುಮತ ಪಡೆದುಕೊಳ್ಳುವ ಸಾಧ್ಯತೆಯಂತೂ ಇಲ್ಲವೇ ಇಲ್ಲ.
ಸಮಾಜವಾದವನ್ನು ಪ್ರತಿಪಾದಿಸುವ, ಆಚರಣೆಯಲ್ಲೂ ಜಾರಿಗೆ ತರುವ ರಾಜಕೀಯ ಶಕ್ತಿಗಳು ದೇಶದಲ್ಲಿ ದೊಡ್ಡ ಬಲವನ್ನು ಹೊಂದಿಲ್ಲ. ಆದರೆ, ಜಾತ್ಯತೀತತೆಯನ್ನು ಪ್ರತಿಪಾದಿಸುವ ಮತ್ತು ಜನರ ಪರವಾದ ಕಲ್ಯಾಣ ಕಾರ್ಯಕ್ರಮಗಳನ್ನು ತರಬಲ್ಲ ಬಿಜೆಪಿಯೇತರ ರಾಜಕೀಯ ಶಕ್ತಿಗಳ ಒಂದು ಮೈತ್ರಿಕೂಟ ಬಿಜೆಪಿಯನ್ನು ಎದುರಿಸಲು ಸಾಧ್ಯವಿದ್ದು, ಕಳೆದೊಂದು ವರ್ಷದಿಂದ ಆ ಸಾಧ್ಯತೆಗಳು ತೆರೆದುಕೊಂಡಿವೆಯಾದರೂ ಇನ್ನೂ ಹರಳುಗಟ್ಟಿಲ್ಲ. ಯಾರು ಅದರ ನಾಯಕತ್ವ ವಹಿಸಬೇಕು, ಈ ಕೂಟದ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬ ವಿಷಯ ಬಗೆಹರಿಯುವುದೂ ಸುಲಭವಲ್ಲ. ಬಹುಶಃ ಬಿಜೆಪಿ ಕೂಟವನ್ನು ಸಂಸತ್‍ನಲ್ಲಿ, ಸಮಾಜದಲ್ಲಿ ಮತ್ತು ಚುನಾವಣೆಯಲ್ಲಿ ಎದುರಿಸುವ ಪ್ರಕ್ರಿಯೆಯಲ್ಲಿ ಅದು ರೂಪುಗೊಳ್ಳಬೇಕು.
ಆದರೆ, ಆ ದಿಕ್ಕಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯು ಒಳ್ಳೆಯ ಪ್ರಯತ್ನವೆಂದು ಹೇಳಲು ಅಡ್ಡಿಯಿಲ್ಲ; ವಿರೋಧ ಪಕ್ಷಗಳು ಇದನ್ನು ಸಾಕಷ್ಟು ಎನರ್ಜಿಯೊಂದಿಗೇನೇ ಮುಂದಿಟ್ಟವು. ಈ ಎನರ್ಜಿ ಮತ್ತು ಹೊಂದಾಣಿಕೆಗಳು ಎಷ್ಟು ನಿರಂತರವಾಗಿರುತ್ತವೆ, ಪರಿಣಾಮಕಾರಿಯಾಗಿರುತ್ತವೆ ಮತ್ತು ಮೋದಿ-ಷಾ-ಆರೆಸ್ಸೆಸ್ ಕೂಟದ ಪ್ರತಿತಂತ್ರಗಳನ್ನು ವಿಫಲಗೊಳಿಸುತ್ತವೆ ಎಂಬುದನ್ನು ಮುಂದಿನ ದಿನಗಳಷ್ಟೇ ತೋರಬಲ್ಲವು. ಹಾಗಾಗಿಯೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಲಪಂಥೀಯ ಸರ್ಕಾರದ ವಿರುದ್ಧ ಅವಿಶ್ವಾಸ ಆರಂಭವಾಗಿದೆ, ಆದರೆ ಬಿಜೆಪಿಯೇತರ ಪಕ್ಷಗಳ ಕೂಟದ ಮೇಲೆ ಇನ್ನೂ ವಿಶ್ವಾಸ ಬಂದಿಲ್ಲ ಎಂಬುದನ್ನು ಈ ಸಂಸದೀಯ ಪ್ರಕ್ರಿಯೆಯು ತೋರಿದೆ ಎಂದು ಷರಾ ಬರೆಯಬಹುದು.

ಪ್ರತಿಪಕ್ಷಗಳ ಸಮಸ್ಯೆಗಳು

ದ್ವೇಷ ರಾಜಕಾರಣದ ವಿರುದ್ಧದ ಕಾರ್ಯಕ್ರಮವೇನು?
ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಬಹುತೇಕ ಪಕ್ಷಗಳು ಮಾತಾಡುತ್ತಿವೆ. ಆದರೆ, ಅದರ ವಿರುದ್ಧ ಸಮಾಜದಲ್ಲಿ ಅವರ ಕಾರ್ಯಕ್ರಮ ಮಾತ್ರ ಯಾರೂ ಹೊಂದಿಲ್ಲ. ಕಳೆದ ಚುನಾವಣೆಗೆ ಮುಂಚೆ ಅಂತಹ ಪ್ರಯತ್ನವನ್ನು ಮಾಯಾವತಿಯವರು ಉ.ಪ್ರದೇಶದಲ್ಲಿ ರೂಪಿಸಿದ್ದರು. ಆದರೆ, ಅದೂ ಸಹಾ ಚುನಾವಣೆಯಲ್ಲಿ ಫಲ ಕೊಟ್ಟಿರಲಿಲ್ಲ. ದೇಶದ ಜನಸಾಮಾನ್ಯರ ನಡುವೆ ದ್ವೇಷ ಬೆಳೆಯದಂತೆ ನೋಡಿಕೊಳ್ಳಲು ಸಾಮಾಜಿಕ, ಸಾಂಸ್ಕøತಿಕ ಮತ್ತು ಸಂಘಟನಾತ್ಮಕ ಕಾರ್ಯಕ್ರಮವಿಲ್ಲದ ಪಕ್ಷಗಳು ಸೌಹಾರ್ದ ರಾಜಕೀಯ ಬೆಳೆಯಬೇಕೆಂಬ ಅಪೇಕ್ಷೆಯನ್ನು ಹೊಂದಿರುವುದು ವಿಪರ್ಯಾಸ.
ಹೀಗಾಗಿಯೇ ಗುಂಪು ಥಳಿತ ಮತ್ತು ಹಿಂಸೆಯನ್ನು ಪ್ರಚೋದಿಸುತ್ತಿರುವ ಪಕ್ಷದ ನಾಯಕ ನರೇಂದ್ರ ಮೋದಿ ಸಲೀಸಾಗಿ ಕಾನೂನು ಸುವ್ಯವಸ್ಥೆಯ ಹೊಣೆ ಹೊಂದಿರುವ ರಾಜ್ಯ ಸರ್ಕಾರಗಳು, ಅವನ್ನು ನಿಯಂತ್ರಿಸಲಿ ಎಂದು ಹೇಳಿ ಕೈ ತೊಳೆದುಕೊಂಡುಬಿಟ್ಟರು. ಕರ್ನಾಟಕವೂ ಸೇರಿದಂತೆ ಎಲ್ಲೆಡೆ ಬಿಜೆಪಿಯೇತರ ರಾಜಕೀಯ ಪಕ್ಷಗಳು ಈ ಕುರಿತು ಗಂಭೀರವಾಗಿ ಯೋಚಿಸಬೇಕು.

ಜಿಎಸ್‍ಟಿ, ನೋಟು ರದ್ದತಿ ಕೌಂಟರ್ ಮಾಡುವುದು ಸಾಧ್ಯವೇ? ಹೇಗೆ?
ನೋಟು ರದ್ದತಿಯ ಕಾರಣದಿಂದ ಬಿಸಿನೆಸ್ ಕಳೆದುಕೊಂಡ ವ್ಯಾಪಾರಿಗಳು ಮತ್ತು ಬೆಳೆಗೆ ಬೆಲೆ ಕಳೆದುಕೊಂಡ ರೈತರ ಸಂಕಷ್ಟವೇ ಆ ಕ್ರಮದ ವಿರುದ್ಧ ಜನಾಭಿಪ್ರಾಯ ಮೂಡಿಸುವುದಿಲ್ಲ. ಏಕೆಂದರೆ, ತಮಗಿಂತ ಜಾಸ್ತಿ ಭ್ರಷ್ಟ ಶ್ರೀಮಂತರು ಕಳೆದುಕೊಂಡಿದ್ದಾರೆ ಎಂಬ ಸುಳ್ಳನ್ನು ಅವರು ನಂಬಿದ್ದಾರೆ. ಕಪ್ಪುಹಣ ಎಷ್ಟು ಹೊರಗೆ ಬಂದಿತು, ಅಮಿತ್‍ಷಾ ಬ್ಯಾಂಕ್ ಹಗರಣ, ಅಂಬಾನಿ-ಅದಾನಿಗೆ ಮೊದಲೇ ಗೊತ್ತಿತ್ತು ಎಂಬ ಬಿಜೆಪಿ ಎಂಪಿಯ ಹೇಳಿಕೆ ಇತ್ಯಾದಿ ನಿರ್ದಿಷ್ಟ ಸಣ್ಣ ಅಂಶಗಳನ್ನು ಮಾತ್ರ ಮುಂದಿಟ್ಟು ವ್ಯವಸ್ಥಿತಪ್ರಚಾರ ರೂಪಿಸುವುದು ಸಾಧ್ಯವಿಲ್ಲದ ಪಕ್ಷಗಳು, ಸುಳ್ಳು ಫ್ಯಾಕ್ಟರಿಯನ್ನು ಎದುರಿಸಲು ಸಾಧ್ಯವಾಗದೆ ಒದ್ದಾಡುತ್ತಿವೆ.
ಹಾಗಾಗಿಯೇ ನೋಟು ರದ್ದತಿಯಿಂದ ಅದೆಷ್ಟೋ ಸಾವಿರ ಕೋಟಿ ಕಪ್ಪು ಹಣದ ಲೆಕ್ಕ ಸಿಕ್ಕಿದೆ, ಬ್ಯಾಂಕ್ ಅಕೌಂಟಿಗೆ ಬಂದು ಬಿದ್ದಿದೆ ಎಂದು ಬಿಜೆಪಿ ಪರ ‘ಆರ್ಥಿಕ ತಜ್ಞ’ ಟಿವಿ ಚರ್ಚೆಯೊಂದರಲ್ಲಿ ಅಮತ್ರ್ಯಸೇನ್‍ರಿಗೇ ಹೇಳುವ ಧೈರ್ಯ ತೋರುತ್ತಾನೆ.
ಜನರ ಸಮಸ್ಯೆಗಳ ಕುರಿತಾಗಿ ಬದ್ಧತೆಯಿಲ್ಲದ ರಾಜಕೀಯ ಪಕ್ಷಗಳು
ಅವಿಶ್ವಾಸ ನಿರ್ಣಯವನ್ನು ಮುಂದಿಟ್ಟಿದ್ದು ಟಿಡಿಪಿ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡದೇ ಅನ್ಯಾಯ ಮಾಡಿದ್ದಾರೆಂಬ ಕಾರಣಕ್ಕೆ. ಆದರೆ, ಅದರ ಕುರಿತು ಮೋದಿ ಮಾತಾಡಿದ್ದು ಕೇವಲ 5 ನಿಮಿಷಗಳು. ಅದೂ ಗಂಭೀರವಾಗಿರಲಿಲ್ಲ. ಅದನ್ನು ಕೌಂಟರ್ ಮಾಡಿ ಪ್ರಶ್ನೆ ಕೇಳುವ ಅವಕಾಶ ಇದ್ದದ್ದು ಟಿಡಿಪಿಗೆ ಮಾತ್ರ. ಆದರೆ, ಅದನ್ನು ಸರಿಯಾಗಿ ಮಾಡದೇ ಮೋದಿಯೊಬ್ಬ ಡ್ರಾಮಾ ಮಾಸ್ಟರ್ ಎಂದು ಲೇವಡಿ ಮಾಡುತ್ತಾ ಅವಕಾಶ ಕಳೆದುಕೊಂಡರು. ಏಕೆಂದರೆ, ಈ ವಿಶೇಷ ಸ್ಥಾನಮಾನದ ವಿಷಯ ಅವರಿಗೂ ರಾಜಕೀಯ ವಿಚಾರ ಅಷ್ಟೇ. ಮೊದಲು ನಿರ್ಣಯ ಮಂಡನೆ ಮಾಡಿದಾಗ ಜಯದೇವ್ ಗಲ್ಲಾ ಇದು ಟಿಡಿಪಿ ಮತ್ತು ಬಿಜೆಪಿಯ ನಡುವಿನ ಯುದ್ಧವಲ್ಲ; ನೈತಿಕತೆ ಮತ್ತು ಬಹುಮತ (morality and majority)ದ ಮಧ್ಯೆ ಸಮರ ಎಂದು ಹೇಳಿದರು. ಇಂತಹ ದೊಡ್ಡ ಮಾತುಗಳಿಗೆ ತಕ್ಕ ಬದ್ಧತೆ ಆ ಪಕ್ಷಕ್ಕೇ ಇದ್ದಂತಿರಲಿಲ್ಲ.
ರೈತರ ಸಾಲಮನ್ನಾ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡಿರುವ ಕರ್ನಾಟಕದ ಸಮ್ಮಿಶ್ರ ಸರ್ಕಾರವು, ದೇಶದ ಎರಡನೇ ಅತೀ ಹೆಚ್ಚು ಬರಪೀಡಿತ ಪ್ರದೇಶ ಹೊಂದಿರುವ, ರೈತರ ಆತ್ಮಹತ್ಯೆಗಳನ್ನು ಹೆಚ್ಚಾಗಿ ಕಾಣುತ್ತಿರುವ ಕರ್ನಾಟಕದ ಗ್ರಾಮೀಣ ಭಾಗದ ಪುನಶ್ಚೇತನಕ್ಕೆ ಆಂದೋಲನ ರೂಪಿಸುವ ಸಾಧ್ಯತೆಯಿದ್ದೂ, ಬದ್ಧತೆ ತೋರುತ್ತಿಲ್ಲ. ಬದಲಿಗೆ ಕಾವೇರಿ ಅಂತಿಮ ತೀರ್ಪಿನ ಭಾಗವಾಗಿರುವ ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡವೆಂಬ ಭಾವನಾತ್ಮಕ ಸಂಗತಿಯನ್ನು ಎತ್ತುವ ತಂತ್ರ ಹೂಡುತ್ತಿದ್ದಾರೆ.
ಒಂದು ವೇಳೆ ವಿಫಲವಾದರೂ ಪರವಾಗಿಲ್ಲ; ಜನರ ಪರವಾದ ನಿಜವಾದ ಕಾಳಜಿಯನ್ನು ಮುಂದಿಡುವ ಪ್ರಾಮಾಣಿಕತೆ ಮತ್ತು ಬದ್ಧತೆ ಇಲ್ಲದಿದ್ದರೆ, ಅದಕ್ಕಾಗಿ ತಮ್ಮ ಈ ಹಿಂದಿನ ತಪ್ಪುಗಳ ಕುರಿತೂ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ, ಪ್ರತಿಪಕ್ಷಗಳು ಸುಲಭಕ್ಕೆ ಹುಸಿ ಅಭಿವೃದ್ಧಿಯ ಮಾದರಿಯನ್ನು ಎದುರಿಸಲಾರವು.

10ರಲ್ಲಿ 8 ಅಂಕ ಪಡೆದುಕೊಂಡ ರಾಹುಲ್ ಗಾಂಧಿ

ಈ ಮಾಕ್ರ್ಸ್‍ಷೀಟ್ ಮುಂದಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿರುವ ಯುವಕ ಧ್ರುವ್ ರಾಠಿ. ರಾಹುಲ್ ಬಹಳ ಸಮರ್ಥವಾಗಿ ವಿಷಯಗಳನ್ನು ಮುಂದಿಟ್ಟರು. ಕೆಲವು ಭ್ರಷ್ಟ ಕಾರ್ಪೊರೇಟ್‍ಗಳ ಪರವಾಗಿ ಮೋದಿ ನಿಂತಿರುವುದು, ರೈತರು, ಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು, ನಿರುದ್ಯೋಗದ ಸಮಸ್ಯೆ ಮತ್ತು ನರೇಂದ್ರ ಮೋದಿಯವರ ವಚನಭ್ರಷ್ಟತೆ, ದ್ವೇಷ ರಾಜಕಾರಣ ಇವೆಲ್ಲದರ ಕುರಿತು ಪರಿಣಾಮಕಾರಿಯಾಗಿ ಮಾತುಗಳನ್ನಾಡಿದರು.
ಹೆಚ್ಚು ನೋಟ್ಸ್ ನೋಡದೇ ಮೋದಿಯವರನ್ನು ನೇರವಾಗಿ ನೋಡುತ್ತಾ, ಸದನವನ್ನು ಉದ್ದೇಶಿಸಿ ಮಾತಾಡಿದ ರಾಹುಲ್‍ರಲ್ಲಿ ಆತ್ಮವಿಶ್ವಾಸ ವೃದ್ಧಿಯಾಗಿರುವುದು ಎದ್ದುಕಾಣುತ್ತಿತ್ತು. ನಿಜಕ್ಕೂ ಗಂಭೀರವಾದ ಸಂಗತಿಗಳನ್ನು ಪ್ರಸ್ತಾಪಿಸಿದರು. ಆರ್‍ಟಿಐ ದುರ್ಬಲವಾಗುತ್ತಿರುವುದು, ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುತ್ತಿರುವ ಫೈನಾನ್ಸ್ ಬಿಲ್ ಸೇರಿದಂತೆ ಹಲವನ್ನು ಬಿಟ್ಟರೂ, ತಮಗಿದ್ದ ಸಮಯವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡರು. ಈ ವಿಷಯಗಳ ಜೊತೆಗೆ ಇನ್ನೊಂದು ಅಂಶದ ಅಗತ್ಯವಿತ್ತು. ಮೋದಿ ಇದುವರೆಗೂ ಅಪ್ಪಿಕೊಂಡಿರುವುದು ಅಂಬಾನಿಯ ರೀತಿಯ ಉದ್ದಿಮೆಪತಿಗಳನ್ನು, ಇಲ್ಲವೇ ವಿದೇಶೀ ನಾಯಕರನ್ನು. ದೇಶದ ಮಟ್ಟಿಗೆ ಅವರು ‘ಯಾರೂ ಮುಟ್ಟಲಾಗದ’ ಬಲಾಢ್ಯ ವ್ಯಕ್ತಿ. ಈ ದೈಹಿಕ ಸಾಮೀಪ್ಯಕ್ಕೂ ಒಂದು ಅರ್ಥವಿರುತ್ತದೆ. ಆ ವ್ಯಕ್ತಿಯನ್ನು ಯಾರಾದರೂ ಎದುರಿಗೇ ನೇರವಾಗಿ ಎದುರಿಸಬಲ್ಲರೇ ಎಂಬುದೂ ಮಾನಸಿಕ ಶಕ್ತಿಯನ್ನು ಅವಲಂಬಿಸಿರುತ್ತದೆ. ಎಲ್ಲರೂ ಹೆದರುವ ಸರ್ವಾಧಿಕಾರಿಯೊಬ್ಬನನ್ನು ಆತನೆದುರಿಗೇ ನಿನ್ನನ್ನು ನಾನು ‘ಟಚ್ ಮಾಡಬಲ್ಲೆ’ ಎಂಬ ಸಂದೇಶ ರವಾನಿಸುವುದು ಒಂದು ಸಂದೇಶ ನೀಡುತ್ತದೆ.
ಮೊದಲಿಗೆ ಮೋದಿ ತನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರರು ಎಂದು ರಾಹುಲ್ ಘೋಷಿಸಿದರು, ಬಿಜೆಪಿ ಸದಸ್ಯರ ಗದ್ದಲದ ನಡುವೆಯೂ ತನ್ನ ಮಾತುಗಳನ್ನು ಗಟ್ಟಿಯಾಗಿ ಆಡಿದರು, ನಂತರ ದ್ವೇಷ ರಾಜಕಾರಣವನ್ನು ಪ್ರೀತಿಯಿಂದ ಗೆಲ್ಲುತ್ತೇನೆ ಎಂದು ದೊಡ್ಡ ದನಿಯಲ್ಲೇ ಹೇಳಿ, ನಡೆದುಕೊಂಡು ಹೋಗಿ ಮೋದಿಯನ್ನು ಅಪ್ಪಿಕೊಂಡು, ವಾಪಸ್ ತನ್ನ ಸೀಟಿನೆಡೆಗೆ ವಿಶ್ವಾಸದಿಂದ ನಡೆದುಬಂದರು. ರಾಹುಲ್ ರಾಜಕೀಯ ಕ್ಷೇತ್ರದ ಅಸಲೀ ಶಾಲೆಯಲ್ಲಿ ಪದವೀಧರರಾದಂತೆ ತೋರುತ್ತಿದೆ ಎಂದು ಶಿವಸೇನಾ ನಾಯಕ ಹೇಳಿದ್ದಕ್ಕೆ ಅರ್ಥವಿದೆ. ಮೋದಿಗೆ ಯಾವ ರೀತಿ ಕೌಂಟರ್ ಕೊಡಬೇಕೆಂದು ಅವರು ಕಲಿಯುತ್ತಿದ್ದಾರೆ.
ಆದರೆ ಎರಡು ಗಂಭೀರ ತಪ್ಪುಗಳನ್ನು ಅವರು ಮಾಡಿದರು. ರ್ಯಾಫೆಲ್ ಡೀಲ್ ಮೋದಿ ಸರ್ಕಾರವನ್ನು ಮುಂದೆಯೂ ಕಾಡಬಹುದಾದ ದೊಡ್ಡ ಹಗರಣ. ಆ ವಿಚಾರದಲ್ಲಿ (ಒಂದು ವೇಳೆ ಫ್ರಾನ್ಸ್‍ನ ಅಧ್ಯಕ್ಷರು ರಾಹುಲ್‍ಗಾಂಧಿಗೆ ಹೇಳಿರುವ ಮಾತುಗಳು ನಿಜವೇ ಆಗಿದ್ದರೂ) ರಾಹುಲ್‍ಗಾಂಧಿ ಪ್ರಸ್ತಾಪಿಸಿದ ಎರಡು ಸಂಗತಿಗಳು ಸರಿಯಾಗಿರಲಿಲ್ಲ. ಹಾಗೆಯೇ ತಾನು ದ್ವೇಷವನ್ನು ಪ್ರೀತಿಯಿಂದ ಗೆಲ್ಲಬಯಸುತ್ತೇನೆ ಎಂದು ಹೇಳಿದ ರಾಹುಲ್, ಮೋದಿಯನ್ನು ಅಪ್ಪಿಕೊಂಡು ತನ್ನ ಸೀಟಿಗೆ ಮರಳಿದ ಮೇಲೆ, ಜೊತೆಗಾರ ಎಂಪಿಗೆ ಕಣ್ಣು ಹೊಡೆದದ್ದು, ಆ ಮುಂಚೆ ಅವರು ಆಡಿದ ಮಾತಿನ ದೊಡ್ಡತನವನ್ನು ಕಳೆದುಹಾಕಿತು.
ಮೋದಿ ವಿರೋಧಿಗಳು ಕೊಡುವ 10ರಲ್ಲಿ 8 ಅಂಕ ಪ್ರಯೋಜನಕ್ಕೆ ಬರದು. ದೇಶದ ಜನಸಾಮಾನ್ಯರು ಈ ಸದ್ಯ ರಾಹುಲ್‍ಗಾಂಧಿಗೆ 10ರಲ್ಲಿ 3 ಕೊಡುತ್ತಾರಷ್ಟೇ. 2019ರಲ್ಲಿ ಮೋದಿಯನ್ನು ಸೋಲಿಸಬೇಕೆಂದರೆ ಕನಿಷ್ಠ 6 ಅಂಕ ಪಡೆದುಕೊಳ್ಳಬೇಕು.

ಮಮತಾ ಬ್ಯಾನರ್ಜಿಯ ಲೆಕ್ಕ ಮತ್ತು ಲೆಕ್ಕಾಚಾರ
ಕೊಲ್ಕೊತ್ತಾದಲ್ಲಿ ಚುನಾವಣಾ ತಯಾರಿಯ ಭಾಗವಾಗಿ ಮಮತಾ ಬ್ಯಾನರ್ಜಿ ನಡೆಸಿದ ರ್ಯಾಲಿ ಲೆಕ್ಕಾಚಾರದಿಂದ ಕೂಡಿತ್ತು. ಮಿಕ್ಕೆಲ್ಲಾ ಪಕ್ಷಗಳಿಗಿಂತ ಮುಂಚೆಯೇ ತಾನು ತಯಾರಾಗುತ್ತಿದ್ದೇನೆ ಎಂಬ ಸೂಚನೆಯನ್ನು ಕೊಡುವುದು, ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಲ್ಕನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿಎಂಸಿ ಪ್ರಧಾನಮಂತ್ರಿ ಸೀಟಿಗೆ ಸ್ಪರ್ಧಿಸಬಹುದೆನ್ನುವ ಇಂಗಿತ ಮುಂದಿಡುವುದು ಅವರ ಇರಾದೆಯಾಗಿತ್ತು. ಜನವರಿಯಲ್ಲಿ ಮತ್ತೆ ವಿರೋಧ ಪಕ್ಷಗಳೆಲ್ಲವನ್ನೂ ಸೇರಿಸಿ ಇನ್ನೊಂದು ರ್ಯಾಲಿ ಮಾಡಲಾಗುವುದೆಂದು ಈಗಲೇ ಅವರು ಘೋಷಿಸಿದರು.
ಇದೇ ರ್ಯಾಲಿಯಲ್ಲಿ ‘ಬಿಜೆಪಿಯು ಎಷ್ಟು ಸೀಟುಗಳನ್ನು ಗೆಲ್ಲುತ್ತದೆಂಬ ಲೆಕ್ಕವನ್ನು ನಾನು ಹೇಳಬಲ್ಲೆ. ತಮಿಳುನಾಡಿನಲ್ಲಿ ಸ್ಟಾಲಿನ್ 39 ಸೀಟುಗಳನ್ನೂ, ಅಣ್ಣಾಡಿಎಂಕೆ ಸೊನ್ನೆ ಸೀಟುಗಳನ್ನೂ ಗೆಲ್ಲುತ್ತಾರೆ; ಉ.ಪ್ರದೇಶದಲ್ಲಿ ಮುಲಾಯಂ ಮತ್ತು ಮಾಯಾವತಿ ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಗೆ ಹೆಚ್ಚೆಂದರೆ 30 ಸೀಟುಗಳು ಬರುತ್ತವೆ. ಮಧ್ಯಪ್ರದೇಶದಲ್ಲಿ 28ರಲ್ಲಿ ಒಂದು ಗೆಲ್ಲಬಹುದು; ರಾಜಾಸ್ತಾನದ 25ರಲ್ಲಿ 5ಕ್ಕಿಂತ ಹೆಚ್ಚು ಗೆಲ್ಲಲ್ಲ. ಗುಜರಾತ್‍ನಲ್ಲಿ ಶೂನ್ಯ ಸಂಪಾದನೆ ಮಾಡುತ್ತಾರೆ. ಬಿಹಾರದಲ್ಲಿ ಲಾಲೂಜಿ ಬಹುತೇಕ ಗೆಲ್ಲುತ್ತಾರೆ ಮತ್ತು ಒರಿಸ್ಸಾದಲ್ಲಿ ಎಲ್ಲಾ ಸೀಟುಗಳನ್ನೂ ಬಿಜೆಡಿ ಗೆಲ್ಲುತ್ತದೆ. ಪಂಜಾಬ್‍ನಲ್ಲಿ ಕ್ಯಾಪ್ಟನ್ ಅಮರಿಂದರ್‍ಜಿ ಪೂರ್ಣ ಹಿಡಿತ ಹೊಂದಿದ್ದಾರೆ. ಹೀಗಿರುವಾಗ ಅವರಿಗೆ ಸೀಟುಗಳು ಎಲ್ಲಿಂದ ಬರುತ್ತವೆ? ನಾನು ಯಾವಾಗಲೂ ಖಚಿತ ತಿಳಿವಳಿಕೆಯಿಂದ ಮಾತಾಡುತ್ತೇನೆ, ನಮ್ಮ ಲೆಕ್ಕಾಚಾರದ ಬಗ್ಗೆ ನೀವು ವಿಶ್ವಾಸವಿಡಬಹುದು’ ಎಂದು ‘ಖಚಿತ ಲೆಕ್ಕ’ ಮುಂದಿಟ್ಟರು. ಇದರಲ್ಲಿ ಉತ್ಪ್ರೇಕ್ಷೆಯಿದ್ದರೂ, ಟ್ರೆಂಡ್‍ಅನ್ನು ಅವರು ಗುರುತಿಸಿದ್ದಾರೆ.

– ನೀಲಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತವು ‘ಪೊಲೀಸ್ ರಾಜ್’ ಅಲ್ಲ: ಜಮ್ಮು ಕಾಶ್ಮೀರ ಹೈಕೋರ್ಟ್

0
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ 26 ವರ್ಷದ ಯುವಕನ ಬಂಧನವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ರದ್ದುಗೊಳಿಸಿದ್ದು, 'ಭಾರತವು ಪೊಲೀಸ್ ರಾಜ್' ಅಲ್ಲ ಎಂದಿದೆ. ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರು ಮಾರ್ಚ್ 22 ರಂದು ನೀಡಿದ್ದ...