Homeಮುಖಪುಟಮೋದಿ 2.1: ಹಿಂದೂ ರಾಷ್ಟ್ರೀಯವಾದದ ವಿಜೃಂಭಣೆಯೇ ಮೋದಿ ಸರ್ಕಾರದ ಸಾಧನೆ!

ಮೋದಿ 2.1: ಹಿಂದೂ ರಾಷ್ಟ್ರೀಯವಾದದ ವಿಜೃಂಭಣೆಯೇ ಮೋದಿ ಸರ್ಕಾರದ ಸಾಧನೆ!

ಮೇಧಾವಿಗಳಿಂದ ಸದಾಕಾಲ ಅಂತರ ಕಾಯ್ದುಕೊಳ್ಳುವ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಆವರಿಸಿಕೊಂಡಿರುವ ಗುಣಪಡಿಸಲಾಗದ ಖಾಯಿಲೆಯೆಂದರೆ ‘ಚಿಂತನಾ ದಾರಿದ್ರ್ಯ’. ಇದರ ಪರಿಣಾಮ ದೂರದರ್ಶಿತ್ವವಿಲ್ಲದ, ಶಬ್ದಾಡಂಬರದ ಪೊಳ್ಳು ನೀತಿನಿರೂಪಣೆಗಳಿಗೇ ಅದು ಅತುಕೊಂಡಿದೆ.

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೊಗದ ಜಾಗತಿಕ ಸಂಕಷ್ಟವೊಂದು ಎದುರಾಗದೆ ಇದ್ದಲ್ಲಿ ಭಾರತದ ಪ್ರಸ್ತುತ ರಾಜಕೀಯ ಚಿತ್ರಣ ಹೇಗಿರುತ್ತಿತ್ತು? ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪ್ರಚಂಡ ಬಹುಮತದೊಂದಿಗೆ ಎರಡನೆಯ ಅವಧಿಗೆ ಅಧಿಕಾರಕ್ಕೇರಿದ ನಂತರದ ಮೊದಲ ವರ್ಷ ಪೂರ್ಣಗೊಂಡಿರುವ ಈ ಅವಧಿಯನ್ನು ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಹೇಗೆ ಎದುರುಗೊಂಡಿರುತ್ತಿತ್ತು? ಈ ಪ್ರಶ್ನೆಗಳನ್ನು ನಮ್ಮ ಮುಂದಿರಿಸಿಕೊಂಡು ದೇಶದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ರಾಜಕೀಯ ಚದುರಂಗದಾಟವನ್ನು ಇಲ್ಲಿ ಗಮನಿಸಬಹುದು.

ಹಿಂದುತ್ವವಾದಿ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಕೇಂದ್ರದಲ್ಲಿಟ್ಟುಕೊಂಡೇ ಜನಿಸಿದ ಭಾರತೀಯ ಜನತಾ ಪಕ್ಷ ಸುದೀರ್ಘಕಾಲದಿಂದ ಎದುರು ನೋಡಿದ್ದಂತಹ ಆಡಳಿತ ಅವಧಿಯಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಎರಡನೆಯ ಅವಧಿಯ ಮೊದಲ ವರ್ಷ ದಾಖಲಾಗುತ್ತದೆ. ರಾಜಕೀಯ ಪಕ್ಷವೊಂದು ತನಗೆ ದೊರೆತ ಪ್ರಚಂಡ ಬಹುಮತವನ್ನು ಕೂಡಲೇ ತನ್ನ ತೀವ್ರ ಸ್ವರೂಪದ ರಾಜಕೀಯ ಚಿಂತನೆಗಳ ಅನುಷ್ಠಾನಕ್ಕೆ ಪರಿವರ್ತಿಸಲು ತೋರುವ ಹಪಹಪಿಯನ್ನು ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ತೋರಿತು. ಹಿಂದೂ ರಾಷ್ಟ್ರೀಯತೆಯ ಕೇಂದ್ರದಲ್ಲಿದ್ದ ಅಜೆಂಡಾಗಳಾದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು, ಅದೇ ರೀತಿ, ತನ್ನದೇ ಧರ್ಮದಲ್ಲಿ ಮಹಿಳೆಯರೆಡೆಗಿರುವ ಅಗಾಧ ಅಸಮಾನತೆಯ ಬಗ್ಗೆ ನಯವಾಗಿ ಜಾರಿಕೊಂಡರೂ, ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಆಗ್ರಹಿಸುವ ಹಿಂದುತ್ವವಾದಿ ಮನಸ್ಥಿತಿಯನ್ನು ತುಷ್ಟೀಕರಣಗೊಳಿಸಲೆನ್ನುವಂತೆ ಮುಸಲ್ಮಾನ ಮಹಿಳೆಯರ ರಕ್ಷಣೆಯ ಸೋಗಿನಲ್ಲಿ ತ್ರಿವಳಿ ತಲಾಖ್ ರದ್ದುಗೊಳಿಸಿದ್ದು. ಆ ಮೂಲಕ ಷರಿಯತ್ ಕಾನೂನುಗಳನ್ನು ತಾನು ನಿಧಾನವಾಗಿ ಹೊಸಕಿ ಹಾಕಲಿದ್ದೇನೆ ಎನ್ನುವ ಬಲಿಷ್ಠ ಹಿಂದುತ್ವದ ಪ್ರದರ್ಶನ ನೀಡಿದ್ದು. ಮುಂದುವರೆದು, ಪೌರತ್ವ ತಿದ್ದುಪಡಿ ಕಾಯಿದೆಯನ್ನು (ಸಿಎಎ) ಜಾರಿಗೊಳಿಸಿದ್ದು, ಅದರ ಮುಂದಿನ ಹೆಜ್ಜೆಯಾಗಿ ರಾಷ್ಟ್ರೀಯ ಪೌರತ್ವ ನೋಂದಣಿಗೆ ಚಾಲನೆ ಮಾಡುವುದು ಶತಸಿದ್ಧ ಎನ್ನುವ ಮೂಲಕ ಹಿಂದೂ ರಾಷ್ಟ್ರೀಯವಾದಿಗಳಲ್ಲಿ ರೋಮಾಂಚನ ಉಂಟು ಮಾಡಿದ್ದನ್ನು ಇಲ್ಲಿ ಮೇಲುನೋಟಕ್ಕೇ ಗುರುತಿಸಬಹುದು.

ಹಿಂದೂ ರಾಷ್ಟ್ರೀಯವಾದಕ್ಕೆ ಹೋಳಾದ ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದರೊಟ್ಟಿಗೇ, ಅದನ್ನು ‘ಜಮ್ಮು ಮತ್ತು ಕಾಶ್ಮೀರ’ ಹಾಗೂ ‘ಲಡಾಖ್’ ಎಂದು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವ ಮೂಲಕ ರಾಜ್ಯದ ಸ್ಥಾನಮಾನವನ್ನು ಕಸಿದಿದ್ದಂತೂ ಹಿಂದುತ್ವವಾದಿಗಳಲ್ಲಿ ರಣೋತ್ಸಾಹವನ್ನೇ ಉಂಟುಮಾಡಿತು. ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿಯೇ ಸುವಣಾಕ್ಷಾರಗಳಲ್ಲಿ ಬರೆದಿಡುವಂತಹ ಅತ್ಯಂತ ಬಲಿಷ್ಠ, ಸಮರ್ಥ, ದಿಟ್ಟ ನಿರ್ಧಾರ ಇದು ಎನ್ನುವ ಪ್ರಶಂಸೆಗಳು ಸಂಘ ಪರಿವಾರದಿಂದ ಕೇಳಿ ಬಂದವು. ಸ್ವತಂತ್ರ ಭಾರತದ ಆರಂಭದ ದಿನಗಳಲ್ಲಿ ಗೃಹ ಸಚಿವರಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಆರಂಭಿಸಿದ ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಅಮಿತ್ ಶಾ ಗೃಹಸಚಿವರಾಗಿ ಪೂರ್ಣಗೊಳಿಸಿದರು. ದೇಶದ ಮೊದಲ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಎಸಗಿದ ಪ್ರಮಾದವನ್ನು ಬಲಿಷ್ಠ ರಾಷ್ಟ್ರೀಯವಾದಿ ಪ್ರಧಾನಿಯಾದ ನರೇಂದ್ರ ಮೋದಿಯವರು ಸರಿಪಡಿಸಿದರು ಎನ್ನುವಂತಹ ಹಿಂದೂ ರಾಷ್ಟ್ರೀಯವಾದಿ ಮೂಸೆಯಲ್ಲಿ ಅದ್ದಿತೆಗೆದ ರಾಜಕೀಯ ಕಥನಗಳನ್ನು ಈ ಸಂದರ್ಭದಲ್ಲಿ ಬಲಪಂಥೀಯ ಶಕ್ತಿಗಳ ಮೂಲಕ ವ್ಯಾಪಕವಾಗಿ ಪ್ರಚುರಗೊಂಡವು. ಅತ್ತ, ಕಾಶ್ಮೀರದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಸುದೀರ್ಘ ಅವಧಿಯವರೆಗೆ ಗೃಹಬಂಧನದಲ್ಲಿರಿಸ ಲಾಯಿತು, ಕಾಶ್ಮೀರದ ಜನತೆಯ ಯಾವುದೇ ಅಭಿಪ್ರಾಯಗಳನ್ನು ಆಲಿಸುವ ಗೋಜಿಗೂ ಹೋಗದೆ, ಸುದೀರ್ಘ ಅವಧಿಯವರೆಗೆ ಅಲ್ಲಿ ದೂರಸಂಪರ್ಕ, ಇಂಟರ್ನೆಟ್‍ನಂತ ಸಂಪರ್ಕ ಸೇವೆಗಳನ್ನು ರದ್ದುಪಡಿಸಲಾಯಿತು. ಆ ಮೂಲಕ ಹೊರಜಗತ್ತಿನೊಂದಿಗೆ ಅದರ ಸಂಪರ್ಕವನ್ನು ಕಡಿಯಲಾಯಿತು. ವಿಪಕ್ಷಗಳ ನಾಯಕರ ಭೇಟಿಗೂ ಆರಂಭದಲ್ಲಿ ಅನುಮತಿ ನಿರಾಕರಿಸಲಾಯಿತು. ಸಂಸತ್ತಿನ ಒಳಹೊರಗೆ ಕೇಳಿಬಂದ ಟೀಕೆಟಿಪ್ಪಣಿಗಳಿಗೆ ಪ್ರಜಾಪ್ರಭುತ್ವವಾದಿ ಸರ್ಕಾರವಾಗಿ ಯಾವುದೇ ಕಿಮ್ಮತ್ತನ್ನೂ ಆಡಳಿತಾರೂಢ ಸರ್ಕಾರ ನೀಡಲಿಲ್ಲ.

ಹೀಗೆ, ದೇಶಾದ್ಯಂತ ಹಿಂದುತ್ವ ರಾಷ್ಟ್ರೀಯವಾದಿ ಭಾವನೆಗಳು ಉದ್ರೇಕದಲ್ಲಿರುವ ಹೊತ್ತಿನಲ್ಲಿಯೇ ರಾಷ್ಟ್ರೀಯ ಪೌರತ್ವ ತಿದ್ದುಪಡಿ ವಿಧೇಯಕವನ್ನು ಮುನ್ನೆಲೆಗೆ ತರಲಾಯಿತು. ಸಂಸತ್ತಿನಲ್ಲಿ ವಿಪಕ್ಷಗಳ ತೀವ್ರ ಪ್ರತಿರೋಧ ನಡುವೆಯೇ ತನ್ನ ಅಗಾಧ ಸಂಖ್ಯಾಬಲದಿಂದ ಸುಲಭವಾಗಿ ಈ ತಿದ್ದುಪಡಿ ಕಾಯಿದೆಗೆ ಬಿಜೆಪಿ ಸರ್ಕಾರವು ಅನುಮೋದನೆ ಪಡೆದುಕೊಂಡಿತು, ಇದರ ಬೆನ್ನಿಗೇ ರಾಷ್ಟ್ರಪತಿ ಅಂಕಿತವೂ ದೊರೆಯಿತು. 2020ರ ಜನವರಿ ಹತ್ತರಂದು ಗೆಜೆಟ್ ಅಧಿಸೂಚನೆಯ ಮೂಲಕ ದೇಶಾದ್ಯಂತ ಕಾಯಿದೆಯು ಜಾರಿಯೂ ಆಯಿತು. ಇದಕ್ಕೆ ಸಮಾನಾಂತರವಾಗಿಯೇ ದೇಶದುದ್ದಗಲಕ್ಕೂ ಪ್ರಗತಿಪರ ಸಂಘಟನೆಗಳು, ಚಿಂತಕರು, ಕಾಯಿದೆಯ ಅನುಷ್ಠಾನವನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಗಳು ಕಾವು ಪಡೆದುಕೊಂಡವು. ಹಿಂದೂ ರಾಷ್ಟ್ರೀಯವಾದವು ಪ್ರಜಾತಂತ್ರ, ಸಂವಿಧಾನವನ್ನು ಅತಿಕ್ರಮಿಸುತ್ತಿರುವ ಬಗ್ಗೆ ಗುಣಾತ್ಮಕ ಚರ್ಚೆಗಳು, ನಾಗರಿಕ ಪ್ರತಿರೋಧಗಳು ಆರಂಭವಾದವು. ಧರ್ಮದ ಆಧಾರದಲ್ಲಿ ಸ್ವತಂತ್ರ ಭಾರತದಲ್ಲಿ ಪ್ರಥಮ ಬಾರಿಗೆ ಕಾಯಿದೆಯೊಂದು ಜಾರಿಗೆ ಬಂದಿದ್ದು ಜಾಗತಿಕವಾಗಿಯೂ ಚರ್ಚೆಗೀಡಾಯಿತು . ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡುವ, ನಿರಾಕರಿಸುವ ಈ ಕಾಯಿದೆಯ ವಿರುದ್ಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಮುಖ್ಯಸ್ಥರು ಸುಪ್ರೀಂಕೋರ್ಟ್‍ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ರಾಷ್ಟ್ರೀಯವಾದದ ಹೆಸರಿನಲ್ಲಿ ಹಬ್ಬಿದ ಮತೀಯಗಲಭೆ

ಒಮ್ಮೆ ಸಿಎಎ ಮತ್ತು ಎನ್‍ಆರ್‌ಸಿ ಕುರಿತ ಚರ್ಚೆಗಳು ಹಿಂದುತ್ವವಾದದ ಚೌಕಟ್ಟಿನಿಂದ ನಿಧಾನವಾಗಿ ಹೊರಜಾರತೊಡಗಿದಂತೆ ಬಲಪಂಥೀಯ ರಾಷ್ಟ್ರವಾದಿ ಶಕ್ತಿಗಳು ಕನಲತೊಡಗಿದವು. ಪರಿಣಾಮ ಸಿಎಎ ವಿರುದ್ಧದ ಪ್ರತಿಭಟನಾಕಾರರಿಗೆ ರಾಷ್ಟ್ರವಿರೋಧಿಗಳು ಎನ್ನುವ ಹಣೆಪಟ್ಟಿ ಕಟ್ಟುವ ತಮ್ಮ ಎಂದಿನ ಚಾಳಿಯನ್ನು ಮತ್ತಷ್ಟು ಅತ್ಯುಗ್ರವಾಗಿ ಮುಂದುವರೆಸಿದವು. ಬಿಜೆಪಿ ನಾಯಕರೇ ಖುದ್ದು ಮುಂಚೂಣಿಯಲ್ಲಿ ನಿಂತು ಇದನ್ನು ಕಾರ್ಯಗತಗೊಳಿಸತೊಡಗಿದರು. ನೆರೆಹೊರೆಯಲ್ಲಿರುವ ಮುಸಲ್ಮಾನ ದೇಶಗಳಿಂದ ದೌರ್ಜನ್ಯಕ್ಕೀಡಾಗಿ, ನಿರಾಶ್ರಿತರಾಗಿ ಬರುವ ಹಿಂದೂಗಳಿಗೆ ಪೌರತ್ವವನ್ನು ನೀಡುವುದನ್ನು ಮುಸಲ್ಮಾನರು ಹಾಗೂ ಜಾತ್ಯತೀತತೆಯ ಹೆಸರಿನಲ್ಲಿ ಭಾಷಣ ಬಿಗಿಯುವ ರಾಷ್ಟ್ರದ್ರೋಹಿಗಳು ವಿರೋಧಿಸುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಈ ಪ್ರತಿಭಟನೆಗಳ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರವನ್ನು ಮಾಡಲಾಯಿತು. ಪ್ರತಿಭಟನೆಯ ಹಿಂದಿರುವ, ಸುಲಭವಾಗಿ ಸಾಮಾನ್ಯರಿಗೆ ಅರ್ಥವಾಗದ ಸಂಕೀರ್ಣ ವಾದವನ್ನು ಸುಲಭಕ್ಕೆ ತಿರುಚಬಹುದಾದ ಸಾಧ್ಯತೆಯನ್ನು ಬಿಜೆಪಿ ನಾಯಕರು ಬಳಸಿಕೊಂಡರು. ಇದೇ ವೇಳೆ, ಮತ್ತೊಂದೆಡೆ ದೆಹಲಿಯಲ್ಲಿ ಸುದೀರ್ಘ ಅವಧಿಯಿಂದ ನಡೆಯುತ್ತಿದ್ದ ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ನಿಧಾನವಾಗಿ ಹಿಂಸಾಚಾರಕ್ಕೆ ತಿರುಗಿಸುವ, ಕಾನೂನಿಗೆ ಹೊರತಾದ ಬಾಹ್ಯಶಕ್ತಿಗಳ ಮೂಲಕ ದಮನ ಮಾಡುವ ಪ್ರಕ್ರಿಯೆಗಳು ಆರಂಭವಾದವು. ಅಂತಿಮವಾಗಿ ಈ ಪ್ರತಿಭಟನೆಗಳ ನೆಲೆಗಟ್ಟನ್ನು ಹಿಂದೂ-ಮುಸ್ಲಿಂ ಕೋಮು ಸಮರಕ್ಕೆ ಸೀಮಿತಗೊಳಿಸುವ ಪ್ರಯತ್ನಗಳು ವಿಜೃಂಭಿಸಿದವು. ಇದಕ್ಕೆ ದೊರೆತ ಯಶಸ್ಸಿನಂತೆ ದೆಹಲಿಯ ಈಶಾನ್ಯ ಭಾಗದಲ್ಲಿ ಮುಸ್ಲಿಂ ಸಮುದಾಯಗಳು ಹೆಚ್ಚಿರುವ, ಸಿಎಎ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿದ್ದ ಭಾಗಗಳ ಜನವಸತಿ ಪ್ರದೇಶಗಳಲ್ಲಿ ಹಿಂದುತ್ವವಾದಿ ಗುಂಪುಗಳಿಂದ ಮತೀಯ ಗಲಭೆಗಳು ಆರಂಭಗೊಂಡವು. ಹಿಂಸೆ, ಪ್ರತಿಹಿಂಸೆಗಳು ಭುಗಿಲೆದ್ದ ಪರಿಣಾಮ ಐವತ್ತಕ್ಕೂ ಹೆಚ್ಚು ಮಂದಿ ಪ್ರಾಣತೆತ್ತರು. ಮಾನವೀಯತೆಯನ್ನು ಬಲಿಕೊಟ್ಟ ಈ ಗಲಭೆಗಳಿಂದ ಸಾವಿಗೀಡಾದವರಲ್ಲಿ ಮುಸಲ್ಮಾನರು ಅಧಿಕವಾಗಿದ್ದರು, ಅಲ್ಲದೆ ಮುಸಲ್ಮಾನ ಬಾಹುಳ್ಯ ಹೆಚ್ಚಿರುವ ಈ ಭಾಗದ ವಾಣಿಜ್ಯ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಯಿತು. ಸಹಜವಾಗಿಯೇ ಮುಸ್ಲಿಂ ಸಮುದಾಯ ಹೆಚ್ಚಿನ ಅರ್ಥಿಕ ಸಂಕಷ್ಟಕ್ಕೂ ತುತ್ತಾಯಿತು.

ಮೇಲ್ವರ್ಗಗಳ ಓಲೈಕೆಯಲ್ಲಿ ಮರೆತುಹೋದ ಕಾರ್ಮಿಕರು

ಹೀಗೆ ದೇಶದಲ್ಲಿ, ಕೋಮು ಆಧಾರದ ವಿಛಿದ್ರೀಕರಣದ ರಾಜಕೀಯ, ಸಾಮಾಜಿಕ ವರಸೆಗಳು ತುರೀಯಕ್ಕೆ ತಲುಪತೊಡಗಿದ್ದ ಹೊತ್ತಿನಲ್ಲಿಯೇ ಅತ್ತ ಜಾಗತಿಕವಾಗಿ ವ್ಯಾಪಿಸಿಕೊಳ್ಳಲಾರಂಭಿಸಿದ್ದ ಕೊರೊನಾ ಸಾಂಕ್ರಾಮಿಕ ಪಿಡುಗು ಭಾರತದ ಬಾಗಿಲನ್ನೂ ಬಡಿಯಿತು. ದೇಶ ಎರಡು ತಿಂಗಳಿಗೂ ಮೀರಿದ ದೀರ್ಘ ಅವಧಿಯ ಲಾಕ್‍ಡೌನ್ ಸಿಲುಕಿತು. ಈ ಲಾಕ್‍ಡೌನ್ ನಿಜ ಭಾರತದ ಮತ್ತೊಂದು ಬದಿಯನ್ನು ಅನಾವರಣ ಮಾಡಿತು. ಭಾರತೀಯ ಸಮಾಜವು ಇಂದು ಕೇವಲ ವ್ಯಾಪಕ ಕೋಮು ವಿಛಿದ್ರೀಕರಣಕ್ಕೆ ಮಾತ್ರವೇ ತುತ್ತಾಗಿಲ್ಲ, ಅಷ್ಟೇ ಗಂಭೀರವಾದ ಅರ್ಥಿಕ ಆಧಾರದ ವರ್ಗ ವಿಛಿದ್ರೀಕರಣವೂ ತುತ್ತಾಗಿದೆ ಎನ್ನುವುದನ್ನು ಎತ್ತಿ ತೋರಿಸಿತು. ಒಮ್ಮೆಲೇ ಎದುರಾದ ಈ ಸಂಕಷ್ಟದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಸಂಘಟಿತ ವಲಯದ ಕಾರ್ಮಿಕರು, ವಲಸೆ ಕಾರ್ಮಿಕರು ಅತಂತ್ರಗೊಂಡರು.

ಇನ್ನೂ ನಿಲ್ಲದ ವಲಸೆ ಕಾರ್ಮಿಕರ ನಡಿಗೆ; ಸೊಲ್ಲೆತ್ತದ, ಕೇಂದ್ರ ಸರ್ಕಾರ

ಆಧುನಿಕ ಭಾರತದ ಕರಾಳತೆಗೆ ಕನ್ನಡಿ ಹಿಡಿದಂತೆ ವಲಸೆ ಕಾರ್ಮಿಕರು ಅನ್ನ, ನೀರು, ನೆರಳಿಲ್ಲದೆ ತಮ್ಮ ಹುಟ್ಟೂರುಗಳಿಗೆ ಕಾಲ್ನಡಿಗೆಯಲ್ಲೇ ನೂರಾರು ಕಿ.ಮೀ. ತೆರಳತೊಡಗಿದರು. ಲಾಠಿ ಏಟಿಗೆ ಮೈಯೊಡ್ಡುತ್ತಾ, ರಕ್ತ ಒಸರುವ ಅಂಗಾಲುಗಳಲ್ಲಿ ದೇಶ ಹಿಡಿದಿರುವ ಭವಿಷ್ಯದ ಹಾದಿಯಲ್ಲಿ ನೋವಿನ ಹೆಜ್ಜೆಗಳನ್ನು ಮೂಡಿಸುತ್ತಾ ಅಂತೂ ಇಂತೂ ಇವರಲ್ಲಿ ಬಹುತೇಕರು ಮನೆ ಸೇರಿದರು. ಇದೇ ವೇಳೆ, ಲೆಕ್ಕಕ್ಕೆ ಸಿಗುವಂತೆಯೇ ನೂರಾರು ಮಂದಿ ಈ ಘೋರ ವಲಸೆಯಲ್ಲಿ ಅಪಘಾತಗಳಿಗೆ, ನಿತ್ರಾಣಕ್ಕೆ ತುತ್ತಾಗಿ ಪ್ರಾಣ ಬಿಟ್ಟರು. ಆದರೆ, ಆಳುವ ಸರ್ಕಾರಗಳು ಮಾತ್ರ ಮಧ್ಯಮ, ಮೇಲ್ಮಧ್ಯಮ ಹಾಗೂ ಶ್ರೀಮಂತ ವರ್ಗಗಗಳನ್ನು ಓಲೈಸುತ್ತಾ, ಅವರನ್ನು ಮನೆಯಲ್ಲಿರುವಂತೆಯೇ ರಮಿಸುತ್ತಾ, ಕೊರೊನಾ ಪಿಡುಗನ್ನು ತಡೆಯುವ ಯಾವುದೇ ನಿರ್ದಿಷ್ಟ ಕಾರ್ಯಸೂಚಿಗಳಿಲ್ಲದೆ ಮೈಮರೆತವು. ಈ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ರೈಲು ಸಂಚಾರವೂ ಸೇರಿದಂತೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಾಗದ ಹೃದಯಹೀನತೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಿದೆ. ಇದೆಲ್ಲದರ ನಡುವೆಯೂ, ಖುದ್ದು ಪ್ರಧಾನಿ ಮೋದಿಯವರು ಕೊರೊನಾ ಸೋಂಕನ್ನು ಭಾರತವು ಲಾಕ್ಡೌನ್ ಮೂಲಕ ಸಮರ್ಥವಾಗಿ ಎದುರಿಸಿದೆ ಎಂದು ಹೇಳುತ್ತಾ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡರು. ಇದೆಲ್ಲದರ ಬೆನ್ನಿಗೇ ಕುಸಿದು ಕೂತಿರುವ ಆರ್ಥಿಕತೆಗೆ ಉತ್ತೇಜನ ನೀಡುವ ರೂ.20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಯ ಪ್ರಹಸನವೂ ಘಟಿಸಿಬಿಟ್ಟಿತು!

ಮಹಾರಾಷ್ಟ್ರದ ಪೆಟ್ಟು, ‘ನಮಸ್ತೆ ಟ್ರಂಪ್’ ಎಡವಟ್ಟು

ಇನ್ನು, ಪ್ರಾಂತೀಯ ರಾಜಕಾರಣದಲ್ಲಿ ಬಿಜೆಪಿ ಉರುಳಿಸಿದ ದಾಳಗಳನ್ನೂ ಇಲ್ಲಿ ನೆನೆಯಬೇಕು. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆಯನ್ನು ಬಿಜೆಪಿ ದೊಡ್ಡಣ್ಣನ ದರ್ಪದಲ್ಲಿ ನಡೆಸಿಕೊಂಡ ರೀತಿ, ಶರದ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಹೋಳು ಮಾಡಿಯಾದರೂ ಸರ್ಕಾರ ರಚಿಸುತ್ತೇವೆ ಎಂದು ಹೊರಟ ಬಗೆ, ಕಡೆಗೆ ಎನ್ಸಿಪಿ ಹಾಗೂ ಶಿವಸೇನೆ ತೋಡಿದ ಗುಂಡಿಗೆ ಬಿದ್ದದ್ದು ಇಲ್ಲಿ ಗಮನಾರ್ಹ. ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿಯಂತೂ ತನ್ನಿಡೀ ಶಕ್ತಿಯನ್ನು ಪಣಕ್ಕಿಟ್ಟ ಸೆಣಸಿದ ಬಿಜೆಪಿ ತನ್ನೆಲ್ಲ ರಾಜಕೀಯ ಪಟ್ಟುಗಳ ನಡುವೆಯೂ ಆಪ್ ಪಕ್ಷದೆದುರಿಗೆ ತಲೆಬಾಗ ಬೇಕಾಯಿತು. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಹಾಗೂ ಆನಂತರದಲ್ಲಿ ಮಧ್ಯಪ್ರದೇಶದಲ್ಲಿ ಸ್ಥಳೀಯ ಸಮ್ಮಿಶ್ರ ಸರ್ಕಾರಗಳಲ್ಲಿನ ಅಸಮಧಾನಗಳನ್ನು ಬಳಸಿಕೊಂಡು, ‘ಆಪರೇಷನ್ ಕಮಲ’ವೆನ್ನುವ ಶಾಸಕರ ಖರೀದಿ ವ್ಯವಹಾರಗಳಿಗೆ ಬೆಂಬಲವಾಗಿ ನಿಂತು ರಾಜ್ಯಮಟ್ಟದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಅಧಿಕಾರಕ್ಕೆ ಬರಲು ಕೇಂದ್ರ ಸರ್ಕಾರವು ಪರೋಕ್ಷವಾಗಿ ಕಾರಣವಾದದ್ದನ್ನು ಇಲ್ಲಿ ಗಮನಿಸಬೇಕು.

ಮಧ್ಯಪ್ರದೇಶದ ರಾಜಕೀಯ ಚದುರಂಗದಾಟಕ್ಕೆ ಸಮಯ ಒದಗಿಸುವ ಸಲುವಾಗಿ ಹಾಗೂ ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪರೋಕ್ಷವಾಗಿ ತಮ್ಮ ಜಾಗತಿಕ ಮಿತ್ರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಬೆಂಬಲ ಸೂಚಿಸುವ ತಂತ್ರಗಾರಿಕೆಯಿಂದ ರೂಪಿಸಲಾದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ನಡೆಸುವ ಕಾರಣಕ್ಕಾಗಿ ಕೊರೊನಾದ ವಿರುದ್ಧ ಜಾರಿಗೊಳಿಸಬೇಕಾದ ರಕ್ಷಣಾ ಕ್ರಮಗಳನ್ನೇ ಕೇಂದ್ರ ಸರ್ಕಾರ ಮುಂದೂಡಿತು!

ಬಿಜೆಪಿಯ ರಾಜಕೀಯ ಹಪಹಪಿ ಆ ಮೂಲಕ ಜಾಗತಿಕವಾಗಿಯೂ ಜಗಜ್ಜಾಹೀರಾಯಿತು. ಕೊರೊನಾ ಹೊಸ್ತಿಲಲ್ಲಿ ನಿಂತಿದ್ದ ವೇಳೆ ‘ನಮಸ್ತೆ ಟ್ರಂಪ್’ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ನಡೆಸಿದ ಕಾರ್ಯಕ್ರಮದಿಂದಾಗಿ ಇಂದು ಅಹಮದಾಬಾದ್, ಅಷ್ಟೇ ಏಕೆ ಇಡೀ ಗುಜರಾತ್ ವ್ಯಾಪಕವಾಗಿ ಕೊರೊನಾ ಪೀಡಿತವಾಗಿದೆ ಎನ್ನುವ ಪ್ರತಿಪಕ್ಷಗಳ ಆರೋಪಗಳನ್ನು ನಿರಾಕರಿಸುವ ಸ್ಥಿತಿಯಲ್ಲಿ ಇಂದು ಖುದ್ದು ಬಿಜೆಪಿ ನಾಯಕರೇ ಇಲ್ಲ.

ಹಳಿಗೆ ಬಾರದ ಆರ್ಥಿಕತೆ, ಬಡಬಡಿಸುವ ಸರ್ಕಾರ!

ಚಿಂತಕರು, ಅರ್ಥಶಾಸ್ತ್ರಜ್ಞರು, ವಿದೇಶಾಂಗ ತಜ್ಞರು, ನೀತಿನಿರೂಪಣೆಯಲ್ಲಿ ಗುರುತರ ಸಲಹೆ ನೀಡಬಲ್ಲ ವಿವಿಧ ವಿಷಯಗಳ ಪರಿಣತರೊಂದಿಗೆ ಸದಾಕಾಲ ನಕಾರಾತ್ಮಕವಾದ ಅಂತರವನ್ನು ಉಳಿಸಿಕೊಳ್ಳುವುದು ಜಾಗತಿಕವಾಗಿ ಬಹುಪಾಲು ಬಲಪಂಥೀಯ ಸರ್ಕಾರಗಳು ಅನುಸರಿಸುವ ಧೋರಣೆ. ಹಿಂದೂ ರಾಷ್ಟ್ರೀಯವಾದವನ್ನು ಪುರಸ್ಕರಿಸದ, ಹಿಂದುತ್ವವಾದಿ ಚಿಂತನೆಗಳಿಗೆ ಹತ್ತಿರವಾಗದ ಪ್ರತಿಭಾವಂತರು, ವಿಷಯತಜ್ಞರು, ಮೇಧಾವಿಗಳಿಂದ ಸದಾಕಾಲ ಅಂತರ ಕಾಯ್ದುಕೊಳ್ಳುವ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಆವರಿಸಿಕೊಂಡಿರುವ ಗುಣಪಡಿಸಲಾಗದ ಖಾಯಿಲೆಯೆಂದರೆ ‘ಚಿಂತನಾ ದಾರಿದ್ರ್ಯ’. ಇದರ ಪರಿಣಾಮ ದೂರದರ್ಶಿತ್ವವಿಲ್ಲದ, ಶಬ್ದಾಡಂಬರದ ಪೊಳ್ಳು ನೀತಿನಿರೂಪಣೆಗಳಿಗೇ ಅದು ಅತುಕೊಂಡಿದೆ.

ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವವೆರಡರಿಂದಲೂ ದೂರಾಗಿರುವ ಈ ಸರ್ಕಾರ ಕೇವಲ ತಂತ್ರಜ್ಞಾನವನ್ನು ಮಾತ್ರವೇ ನೆಚ್ಚಿಕೊಂಡಿದೆ. ಅದೇ ರೀತಿ, ಪ್ರಜಾಪ್ರಭುತ್ವ, ಸಂವಿಧಾನದೆಡೆಗೆ ಬದ್ಧತೆಯಿಲ್ಲದ, ನಿರಂಕುಶಪ್ರಭುತ್ವದೆಡೆಗೆ ಒಲವಿರುವ, ಸರ್ವಾಧಿಕಾರವನ್ನು ಮೋಹಿಸುವ ಹುಂಬರ ಕೂಟವನ್ನು ಕಟ್ಟಿಕೊಂಡಿದೆ. ರೋಚಕತೆ, ನಾಟಕೀಯತೆಯಲ್ಲಿಯೇ ವ್ಯಸ್ತವಾಗಿರುವ ಈ ಮಂದಿ ಕಮರ್ಷಿಯಲ್ ಸಿನಿಮಾಗಳಿಗೆ ಬೇಕಾದ ಕತೆಯನ್ನು ನೀಡಬಲ್ಲಂತಹವರೇ ಹೊರತು, ದೂರದರ್ಶಿತ್ವದಿಂದ ಕೂಡಿದ ಪ್ರಗತಿಪರ, ಅಭಿವೃದ್ಧಿಪರ ಸಲಹೆಗಳನ್ನು ನೀಡಲಾರರು. ಇದರ ಗಂಭೀರ ಪರಿಣಾಮವನ್ನು ದೇಶದ ಇಂದಿನ ಆರ್ಥಿಕತೆ ಎದುರಿಸುತ್ತಿದೆ.

ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಪಾತಾಳದೆಡೆಗೆ ಮುಖಮಾಡಿದ ದೇಶದ ಅರ್ಥಿಕತೆಯು ಈವರೆಗೂ ಕುಸಿಯುವುದರಲ್ಲಿ ಮಾತ್ರವೇ ಹೊಸ ವಿಕ್ರಮಗಳನ್ನು ಸಾಧಿಸುತ್ತಿದೆ. ಅಪ್ರಬುದ್ಧತೆಯನ್ನೇ ಆವಾಹಿಸಿಕೊಂಡು ಮಾಡಿದ ನೋಟು ಅಮಾನ್ಯೀಕರಣ, ಅವೈಜ್ಞಾನಿಕವಾಗಿ, ಆತುರಾತುರವಾಗಿ ಜಾರಿಗೊಳಿಸಿದ ಜಿಎಸ್ಟಿ, ಅನುತ್ಪಾದಕ ಸಾಲದ ಹೊರೆಹೊತ್ತ ಬ್ಯಾಂಕಿಂಗ್ ವಲಯವನ್ನು ಪುನಶ್ಚೇತನಗೊಳಿಸುವಲ್ಲಿ ಅಳವಡಿಸಿಕೊಳ್ಳಬೇಕಾದ ಶಿಫಾರಸ್ಸುಗಳಿಂದ ವಿಮುಖವಾಗಿದ್ದು, ಸ್ಥಳೀಯ ಆರ್ಥಿಕತೆಯನ್ನು ಉದ್ದೀಪಿಸುವಲ್ಲಿ ಸೋತಿದ್ದು, ಅತಿಸಣ್ಣ, ಸಣ್ಣ, ಮಧ್ಯಮವರ್ಗದ ಕೈಗಾರಿಕೆಗಳು ಅವಸಾನದಂಚಿಗೆ ಸಾಗುವಂತೆ ಮಾಡಿದ್ದು, ಮೇಕ್ ಇನ್ ಇಂಡಿಯಾದಂತಹ ಘೋಷಣೆಗಳಾಚೆಗೆ ಸಾಗದ ಕಾರ್ಯಕ್ರಮಗಳಿಗೇ ಸೀಮಿತವಾಗಿದ್ದು ಹೀಗೆ ಮೊದಲ ಅವಧಿಯಲ್ಲಿ ಮಾಡಿಕೊಂಡಿರುವ ಭಾನಗಡಿಗಳು ಎರಡನೆಯ ಅವಧಿಯಲ್ಲಿ ಮತ್ತಷ್ಟು ಜಟಿಲವಾಗಿವೆ.

ದೇಶದ ಉತ್ಪಾದನಾ ವಲಯ ರೋಗಗ್ರಸ್ತವಾಗಿದೆ. ಸೇವಾ ವಲಯದಲ್ಲಿಯೂ ಸಹ ಉತ್ಸಾಹ ಕಂಡುಬರುತ್ತಿಲ್ಲ. ಕೆಲವೇ ಕೆಲವು ಉದ್ಯಮಿಗಳ ಹಿತಾಸಕ್ತಿ ಕಾಯುವಲ್ಲಿ ಮಾತ್ರವೆ ಸರ್ಕಾರ ಉತ್ಸಾಹ ತೋರಿಸುತ್ತಿದೆ ಎನ್ನುವ ಭಾವನೆ ಉದ್ಯಮ ವಲಯದಲ್ಲಿ ಮೂಡಿದೆ. ಸದ್ಯಕ್ಕಂತೂ ಕೊರೊನಾ ತಂದೊಡ್ಡಿರುವ ಜಾಗತಿಕ ಆರ್ಥಿಕ ಸಂಕಷ್ಟವನ್ನು ಮುಂದುಮಾಡಿ ಕೇಂದ್ರ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಿಕೊಳ್ಳುತ್ತಿದೆ. ಎರಡನೆಯ ಅವಧಿಗೂ ಮುಂಚಿತವಾಗಿಯೇ ದಾಖಲೆ ಪ್ರಮಾಣದ ನಿರುದ್ಯೋಗದಲ್ಲಿ ಸಿಲುಕಿದ್ದ ದೇಶದ ಪ್ರಸಕ್ತ ಪರಿಸ್ಥಿತಿಯನ್ನು ಹೇಳದಿರುವುದೇ ವಾಸಿ. ಹಿಂದೂ ರಾಷ್ಟ್ರೀಯವಾದವನ್ನು ಅನುಷ್ಠಾನಗೊಳಿಸುವ ಯೋಜನೆಗಳಲ್ಲಿ ತೋರುವ ಆಸಕ್ತಿಯಲ್ಲಿ ಅಲ್ಪ ಪ್ರಮಾಣವಾದರೂ ನೈಜ ಅಭಿವೃದ್ಧಿಯ ವಿಷಯಗಳತ್ತ ಈ ಸರ್ಕಾರ ತೋರಿದ್ದರೆ ಇಂತಹ ತೀವ್ರ ಸಂಕಷ್ಟ ತಲೆದೋರುತ್ತಿರಲಿಲ್ಲ. ಶಿಕ್ಷಣ ವಂಚಿತ ಹಾಗೂ ಅರೆ ಶಿಕ್ಷಣ ಪಡೆದಿರುವ ದೇಶದ ಬೃಹತ್ ಕಾರ್ಮಿಕ ವರ್ಗಕ್ಕೆ ಆಸರೆಯಾಗಿದ್ದುದೇ ಅಸಂಘಟಿತ ವಲಯದಲ್ಲಿನ ಉದ್ದಿಮೆಗಳು, ಕೈಗಾರಿಕೆಗಳು ಮತ್ತು ನಿರ್ಮಾಣ ಚಟುವಟಿಕೆಗಳು. ಇಂದು ಇಡಿಯಾಗಿ ಈ ಬೃಹತ್ ವಲಯ ಕುಸಿದುಬಿದ್ದಿದೆ. ಇದಾಗಲೇ ತೀವ್ರ ನಿಗಾ ಘಟಕದಲ್ಲಿದ್ದ ಈ ವಲಯದ ಬಹುತೇಕ ಉದ್ಯಮಗಳು ಲಾಕ್ಡೌನ್ ಅವಧಿಯಲ್ಲಿ ಹೆಚ್ಚುಕಡಿಮೆ ಕೊನೆಯುಸಿರೆಳೆದಿವೆ.

ಅಸಂಘಟಿತ ವಲಯದಲ್ಲಿ ಸೇವೆಯಲ್ಲಿದ್ದ ಕಾರ್ಮಿಕರಲ್ಲಿ ಕನಿಷ್ಠ ಮೂರನೇ ಒಂದರಷ್ಟು ಪಾಲು ಕೊರೊನಾ ನಂತರದ ದಿನಗಳಲ್ಲಿ ಮರಳಿ ಉದ್ಯೋಗ ಗಳಿಸಿಕೊಳ್ಳಲು ಸೋಲಲಿದೆ ಎನ್ನಲಾಗುತ್ತಿದೆ. ಇದಾಗಲೇ ಇರುವ ನಿರುದ್ಯೋಗದ ಬೃಹತ್ ಸಂಖ್ಯೆಗೆ ಈ ಪ್ರಮಾಣವೂ ಸೇರಿದರೆ ಅದು ಅತ್ಯಂತ ಅಗಾಧವಾಗಲಿದೆ. ಹಾಗಾದರೆ ಈ ಗಂಭೀರ ಸಮಸ್ಯೆಗೆ ಪರಿಹಾರವೇನು? ಸರ್ಕಾರದ ಬಳಿ ಉತ್ತರವಿಲ್ಲ. ಕೊರೊನಾ ಸಂಕಷ್ಟದ ಗಳಿಗೆಯಲ್ಲಿಯಾದರೂ ತಮ್ಮ ಪುನಶ್ಚೇತನಕ್ಕೆ ಸರ್ಕಾರದಿಂದ ದೊಡ್ಡ ಮಟ್ಟದ ಸಹಾಯ ದೊರೆಯಬಹುದೆಂದು ನಿರೀಕ್ಷಿಸಿದ್ದ ಈ ಅತಿಸಣ್ಣ, ಸಣ್ಣ, ಮಧ್ಯಮ ವಲಯದ ಕೈಗಾರಿಕೆಗಳು ಸದ್ಯ ಸರ್ಕಾರ ಘೋಷಿಸಿರುವ ರೂ.20 ಲಕ್ಷ ಕೋಟಿಯ ಪ್ಯಾಕೇಜಿನಲ್ಲಿನ ಸೊನ್ನೆಗಳನ್ನು ಎಣಿಸಿಕೊಂಡು ಆಕಾಶ ನೋಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ತನ್ನ ಸಾಧನೆಯನ್ನು ಪ್ರತಿಪಕ್ಷಗಳು ಪ್ರಶ್ನಿಸಿದಾಗಲೆಲ್ಲಾ, ಹಿಂದುತ್ವ, ಉಗ್ರ ರಾಷ್ಟ್ರೀಯವಾದದಡಿ ಅಡಗುವ ಈ ಸರ್ಕಾರಕ್ಕೆ ಬಡಾಯಿ ಬಾಯಿಗಳೇ ಆಸರೆ.

ಕೊರೊನಾ ನಂತರವಾದರೂ ಅಷ್ಟೇ, ಈ ಸರ್ಕಾರ ಮತ್ತೆ ಮರಳುವುದು ಅದೇ ಪೌರತ್ವದ ವಿಷಯ, ಪಾಕಿಸ್ತಾನದ ಭಯೋತ್ಪಾದನೆ, ಚೀನಾದ ಗಡಿ ತಂಟೆಯ ವಿಚಾರಗಳಿಗೆ. ಮತ್ತದೇ, ಹಿಂದೂ ರಾಷ್ಟ್ರೀಯವಾದ, ಮುಸ್ಲಿಂ ಭಯೋತ್ಪಾದನೆ, ಹಿಂದೂ ರಾಷ್ಟ್ರಭಕ್ತರು – ಜಾತ್ಯತೀತ ರಾಷ್ಟ್ರವಿರೋಧಿಗಳೆನ್ನುವ ತನ್ನ ರಾಜಕೀಯ ಕಥನಗಳಿಗೆ. ಅಧಿಕಾರದಲ್ಲಿರಲು ರಾಮರಾಜ್ಯದ ಆದರ್ಶಗಳ ಅಗತ್ಯವಿಲ್ಲ, ರಾಮಮಂದಿರ ನಿರ್ಮಾಣವೊಂದೇ ಸಾಕು ಎಂದು ನಂಬಿರುವ ಬಿಜೆಪಿ ನಾಯಕರು ಬಾಯಿಗೆ ಕೊಟ್ಟಷ್ಟು ಕೆಲಸವನ್ನು ತಲೆಗೆ ಎಂದೂ ಕೊಟ್ಟವರಲ್ಲ. ಜನರ ತಲೆ ಕೆಡಿಸಲು ಬಾಯಿಯೊಂದೇ ಸಾಕು ಎಂದು ನಂಬಿ, ಅದರಲ್ಲಿ ಜಯವನ್ನು ಸಾಧಿಸಿ ತೋರಿಸಿದವರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ನಿರೀಕ್ಷೆಯೂ ಉಳಿದಿಲ್ಲ.


ಇದನ್ನೂ ಓದಿ: ಮೋದಿ 2.1 : ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ಪ್ರಕರಣ: ಸುಪ್ರೀಂಕೋರ್ಟ್‌ ಪ್ರಶ್ನೆ ಬಳಿಕ ರಾಮ್‌ದೇವ್‌ ಮತ್ತೆ ಸಾರ್ವಜನಿಕ ಕ್ಷಮೆಯಾಚನೆ

0
ಪ್ರಸ್ತುತ ಸುಪ್ರೀಂಕೋರ್ಟ್‌ ಅಂಗಳದಲ್ಲಿರುವ 'ತಪ್ಪು ದಾರಿಗೆಳೆಯುವ ಜಾಹೀರಾತುಗಳ' ಕುರಿತು ಪತಂಜಲಿ ಆಯುರ್ವೇದ, ಆಚಾರ್ಯ ಬಾಲಕೃಷ್ಣ ಮತ್ತು ಸ್ವಾಮಿ ರಾಮ್‌ದೇವ್ ಅವರು ಹೊಸ ಸಾರ್ವಜನಿಕ ಕ್ಷಮೆಯಾಚನೆಯನ್ನು ಪ್ರಕಟಿಸಿದೆ. ನಿನ್ನೆ ಸುಪ್ರೀಂಕೋರ್ಟ್‌, ಪತ್ರಿಕೆಗಳಲ್ಲಿ ಮುದ್ರಿತ ಹಿಂದಿನ ಸಾರ್ವಜನಿಕ...