ಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ

ಕೊರೋನ ಮಹಾಮಾರಿ ಹಿಡಿಯಾಗಿ ಪ್ರಪಂಚವನ್ನೇ ಕಾಡಲುಹತ್ತಿದ್ದರಿಂದ ಯಾವ ದೇಶದವರೂ ಭಾರತಕ್ಕೆ ಬಂಡವಾಳ ತೆಗೆದುಕೊಂಡು ಬಂದು ಉದ್ಯಮಗಳನ್ನು ಆರಂಭಿಸುವ ಸಾಧ್ಯತೆಗಳಿಲ್ಲ ಎಂಬುದನ್ನು ಮನಗಂಡು ಈಗ ಹೊಸ ರಾಗ ಹಾಡಲು ಮೋದಿಯವರು ತೊಡಗಿದ್ದಾರೆ. ಅವರ ಇಂದಿನ ಸ್ಲೋಗನ್‍ಗಳೆಂದರೆ ಆತ್ಮ ನಿರ್ಭರತೆ, ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನಗಳನ್ನು ಬೆಳಸಿಕೊಳ್ಳುವುದು. ಇದು ಸರಿಯಾದ ತೀರ್ಮಾನವೇ ಸರಿ. ಆದರೆ ಈ ತತ್ವಗಳಿಗೆ ಮೋದಿ ಸರ್ಕಾರ ಮುಂದೆ ಎಂದೆಂದೂ ಬದ್ಧವಾಗಿ ಇರುತ್ತದೆಯೇ ಎಂಬುದು ಮೂಲ ಭೂತ ಪ್ರಶ್ನೆ.

ಕೊರೋನ ವ್ಯಾದಿ ವಿಶ್ವದೆಲ್ಲಡೆ ಇಲ್ಲವಾಗಿ ಆರ್ಥಿಕ ಚೇತರಿಕೆಯೂ ಆದಮೇಲೂ ಆತ್ಮನಿರ್ಭರತೆ ಇವರ ಸ್ಲೋಗನ್ ಆಗಿರುತ್ತದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಕಾಲವೇ ನಿರ್ಧರಿಸುತ್ತದೆ.

ಆತ್ಮನಿರ್ಭರತೆ ಇನ್ನು ಮುಂದೆ ಭಾರತ ಸರ್ಕಾರದ ನೀತಿ ಎಂದು ಮೋದಿಯವರು ಘೋಷಿಸಿದರೆ ಮಾತ್ರ ಇದು ಬರಿ ಸ್ಲೋಗನ್ ಅಲ್ಲ, ನಮ್ಮ ರಾಷ್ಟ್ರ ನೀತಿ ಎಂದು ನಾವು ನಂಬಬಹುದು. ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ, ಇವು ಬರಿಯ ಸ್ಲೋಗನ್‍ಗಳಾಗಬಾರದು.

ಸ್ವದೇಶಿ ಒಂದು ವ್ರತವಾಗಬೇಕು. ಸರ್ಕಾರ ಈ ವ್ರತವನ್ನು ಕಾರ್ಯಗೊಳಿಸಬೇಕು. ಜಪಾನಿನಲ್ಲಿ ಬೃಹತ್ ಯಂತ್ರಗಳಿಂದ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ. ಆದರೆ ಅವೆಲ್ಲವೂ ರಫ್ತಿಗಾಗಿ. ಅವರ ನಿತ್ಯದ ಅಗತ್ಯತೆಯ ವಸ್ತುಗಳೆನ್ನೆಲ್ಲ ಅವರು ಗೃಹೋದ್ಯೋಗದ ಮೂಲಕ ಪಡೆಯುತ್ತಾರೆ. ಗೃಹೋದ್ಯೋಗದಿಂದ ತಯಾರಾದ ಪದಾರ್ಥಗಳನ್ನು ಇವು ನಮ್ಮ ಹೆಮ್ಮೆಯ ಪದಾರ್ಥಗಳೆಂದು ಭಾವಿಸಿ ಬಳಸುತ್ತಾರೆ. ಇದೇ ಆತ್ಮನಿರ್ಭರತೆ. ಇದಕ್ಕೆ ಮೋದಿಯವರ ಸಹಮತ ಇದೆಯೇ? ನಮ್ಮದು ಪ್ರಜಾ ಸಂಖ್ಯೆ ಅಧಿಕವಾಗಿರುವ ದೇಶ. ಇಲ್ಲಿ ಜನರ ಕೈಗೆ ಕೆಲಸ ಕೊಡಬೇಕು. ಅದಕ್ಕೆ ಅನುಗಣವಾದ ಅಪ್ರೋಪ್ರಿಯೇಟ್ ಟೆಕ್ನಾಲಾಜಿಯನ್ನೇ ನಾವು ಅಳವಡಿಸಿಕೊಳ್ಳಬೇಕು. ಬೃಹತ್ ಯಂತ್ರಗಳು, ದೈತ್ಯ ಯಂತ್ರಗಳು, ಸ್ವಯಂ ಚಾಲಿತ ಯಂತ್ರಗಳು ನಮ್ಮ ಜನರು ಉದ್ಯೋಗವನ್ನು ಕಸಿದುಕೊಳ್ಳುತ್ತವೆ. ಬಡಜನರ ಹೊಟ್ಟೆಯ ಮೇಲೆ ಹೊಡೆಯುತ್ತವೆ.

ಆದ್ದರಿಂದ ನಮ್ಮ ಜನರ ಉದ್ಯೋಗಗಳನ್ನು ಕಸಿಯದ ಯಂತ್ರೋದ್ಯಮಕ್ಕೆ ನಮ್ಮ ಆದ್ಯತೆ ಎಂದು ಸರ್ಕಾರ ಘೋಷಿಸುತ್ತದೆಯೆ?

ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂಬ ಸ್ಲೋಗನ್‍ಗಳನ್ನು ಮೋದಿಯವರು ಉಚ್ಛರಿಸಿದರು. ಮೇಡ್ ಇನ್ ಇಂಡಿಯಾ ಸ್ಲೋಗನ್ ಅನ್ನು ಇಂದಿರಾ ಗಾಂಧಿ ಹಿಂದೆಯೆ ಘೋಷಣೆ ಮಾಡಿದ್ದರು. ಈ ಎರಡು ಘೋಷಣೆಗಳು ದೋಷಪೂರಿತವಾದದ್ದು. ಭಾರತದಲ್ಲಿ ತಯಾರಾದ ಮಾತ್ರಕ್ಕೆ ಆ ಪದಾರ್ಥಗಳು ಸ್ವದೇಶಿ ಅಲ್ಲ. ಬಂಡವಾಳಗಾರರು ಹೆಚ್ಚಿನ ಲಾಭಗಳಿಕೆಗಾಗಿಯೇ ಉದ್ಯಮ ನಡೆಸುವುದು. ಬಂಡವಾಳಶಾಹಿಗಳು ಭಾರತಿಯರಿರಬಹುದು, ಬಹುರಾಷ್ಟ್ರೀಯರಿರಬಹುದು. ಅವರಿಬ್ಬರಿದೂ ಉದ್ದೇಶ ಒಂದೆ. ಅದೆಂದರೆ ತಮ್ಮ ಶಕ್ತಿ ಮೀರಿ ಲಾಭ ಗಳಿಸುವುದು. ಇದರಲ್ಲಿ ಒಂದು ನಾಡ ಕತ್ತಿ, ಮತ್ತೊಂದು ಸೀಮೆಯ ಕತ್ತಿ. ಒಟ್ಟಿನಲ್ಲಿ ಅವರೆಡು ಕ್ಷೌರದ ಕತ್ತಿಗಳೆ. ಅವೆರಡು ಬಯಸುವುದು ಹೆಚ್ಚಿಗೆ ಲಾಭ, ಅಗ್ಗದ ಶ್ರಮಶಕ್ತಿ, ಸಂಪನ್ಮೂಲಗಳ ಲೂಟಿ.

ಆದ್ದರಿಂದ ಈ ಲೂಟಿಕೋರರು ಭಾರತದ ಉದ್ಯಮಪತಿಗಳೆ ಆಗಿದ್ದರೂ, ಬೇರೆ ರಾಷ್ಟ್ರಗಳ ಶ್ರೀಮಂತರೇ ಆಗಿದ್ದರೂ ಅವರನ್ನು ದೂರ ಇಡಬೇಕು. ಬದಲಿಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಸಣ್ಣ ಕೈಗಾರಿಕೆಗಳಲ್ಲಿನ ಉತ್ಪಾದನೆ ಮಾತ್ರವೇ ಸ್ವದೇಶಿ ಅನಿಸಿಕೊಳ್ಳುತ್ತದೆ.

ನಮ್ಮಲ್ಲಿ ತಯಾರಾಗದ ಪದಾರ್ಥಗಳನ್ನು ತಯಾರು ಮಾಡಲು ಪರದೇಶದ ಕಂಪನಿಗಳನ್ನು ಭಾರತಕ್ಕೆ ಕರೆತರಬಹುದು. ಆದರೆ ಒಂದು ಕರಾರಿನ ಮೇಲೆ ಮಾತ್ರ. ಅದೆಂದರೆ ಹಾಗೇ ಬರುವವರು ಹತ್ತು ವರ್ಷಗಳ ಕಾಲ ಮಾತ್ರ ಭಾರತದಲ್ಲಿ ತಮ್ಮ ಉದ್ಯಮವನ್ನು ನಡೆಸಬಹುದು ಮತ್ತು ನಮ್ಮ ಜನರಿಗೆ ಆ ಪದಾರ್ಥಗಳ ತಯಾರಿಕೆಯ ತಂತ್ರಜ್ಞಾನವನ್ನು ಕಲಿಸಿಕೊಟ್ಟು ಹೋಗಬೇಕು.

ವಲಸಿಗ ಕಾರ್ಮಿಕರು ಈಗ ಬಹುಸಂಖ್ಯೆಯಲ್ಲಿ ನಗರಗಳನ್ನು, ಪಟ್ಟಣದಗಳನ್ನು ಬಿಟ್ಟು ಗ್ರಾಮಗಳಿಗೆ ಹೋಗಿದ್ದಾರೆ. ಅವರು ತಮ್ಮ ಗ್ರಾಮಗಳಲ್ಲಿ ಜೀವನ ನಡೆಸುವುದಾದರೂ ಹೇಗೆ? ಭೂಮಿತಿ ಶಾಸನವನ್ನು ಪುನಃ ಪರಿಶೀಲಿಸಿ ಸೀಲಿಂಗ್ ಲಿಮಿಟ್ ಅನ್ನು ಇಳಿಸಿ ಯಾರು ವ್ಯವಸಾಯದಲ್ಲಿ ತೊಡಗಿಕೊಳ್ಳಲು ಆಶಿಸುವರೋ ಅವರಿಗೆ ತಲಾ ನಾಲ್ಕುವರೆ ಎಕರೆ ಕುಷ್ಕಿ ಜಮೀನನ್ನು ಮಂಜೂರು ಮಾಡಬೇಕು. ಹೀಗೆ ಸರ್ಕಾರ ಕೊಟ್ಟ ಭೂಮಿಯನ್ನು ಮಾರಾಟ-ಭೋಗ್ಯ ಯಾವುದನ್ನು ಮಾಡುವ ಆಗಿಲ್ಲ ಎಂದು ಕಾನೂನು ಮಾಡಬೇಕು. ಉಳಿದ ವಲಸಿಗರಿಗೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಕೆಲಸ ಕೊಡಬೇಕು. ನಾಲ್ಕು ಹಳ್ಳಿಗಳಿಗೆ ಸೇರಿದಂತೆ ಒಂದು ಸಣ್ಣ ಕೈಗಾರಿಕೆ ಸ್ಥಾಪಿತವಾಗುವದಾದರೆ ಅವರಿಗೆಲ್ಲ ಕೆಲಸ ಕೊಡಬಹುದು.

ಗ್ರಾಮಗಳಲ್ಲಿ ಇರುವ ಬಡಗಿ, ಕಮ್ಮಾರ, ನೇಕಾರ, ಚಮ್ಮಾರ, ಇವರಿಗೆಲ್ಲ ಶಿಕ್ಷಣ ಕೊಟ್ಟು ತಮ್ಮ ವೃತ್ತಿ ಕೌಶಲವನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು. ನಲ್ಲಿ, ಮೋಟಾರ್ ಸೈಕಲ್, ರೇಡಿಯೋ, ಟಿ.ವಿ. ಕೊಳವೇ ಬಾವಿ, ಗಡಿಯಾರ, ಮುಂತಾದವುಗಳ ರಿಪೇರಿ ಕೆಲಸ ಕಲಿಸಿ ಅವರಿಗೆ ಒಬ್ಬೊಬ್ಬರಿಗೂ ಒಂದು ಕಿಟ್ ಕೊಟ್ಟರೇ ಅವರು ಜೀವನ ನಿರ್ವಹಣೆಗೆ ಈ ಕಸುಬುಗಳನ್ನು ಅವಲಂಬಿಸಿಯಾರು. ತರಕಾರಿ, ಹಣ್ಣು ಇವುಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ ಜನರಿಗೆ ಕೆಲಸ ಕೊಡಬಹುದು. ಈ ಮೂಲಕ ಗ್ರಾಮೀಣ ಜನರ ಬಡತನವನ್ನು ದೂರಮಾಡಬಹುದು. ಇದನ್ನೆಲ್ಲ ಮೋದಿ ಸರ್ಕಾರ ಮಾಡೀತೇ ಎಂದು ಕುತೂಹಲದಿಂದ ಕಾದುಕೂತು ನೋಡಬಯಸುತ್ತೇನೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here