Homeಮುಖಪುಟಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

ಪ್ರತಾಪ ಸಿಂಹರ ಸೋಲು ಗೆಲುವು- ಈ ಸಾರಿಯೂ ದೇವೇಗೌಡರ ಕೈಯ್ಯಲ್ಲಿ

- Advertisement -
- Advertisement -

ಇದುವರೆಗೂ ಸಿದ್ದರಾಮಯ್ಯನವರು ಮತ್ತು ಮೈಸೂರಿನ ದಳಪತಿಗಳ ನಡುವೆ ದೋಸ್ತಿ ಕುದುರಿಲ್ಲ. ಸಮ್ಮಿಶ್ರ ಸರ್ಕಾರವೇ ಈ ಎರಡು ಪಕ್ಷಗಳ ಮೈತ್ರಿಯಿಂದ ರಚನೆಯಾದರೂ, ಮೈಸೂರಿನಲ್ಲಿ ಅಷ್ಟು ಸುಲಭವಿರಲಿಲ್ಲ. ಚಾಮುಂಡೇಶ್ವರಿಯ ಸೋಲು ಸಿದ್ದರಾಮಯ್ಯನವರಿಗೆ ಯಾವ ಮಟ್ಟಿಗಿನ ಬೇಸರ/ಅಸಮಾಧಾನ ಮೂಡಿಸಿದೆಯೆಂದರೆ, 2 ತಿಂಗಳ ಕೆಳಗೆ ಮೈಸೂರಿನಲ್ಲಿ ಮಾತನಾಡಿ ‘ಪ್ರತೀ ವರ್ಷ ಇಲ್ಲಿ ಸಾಮೂಹಿಕ ಮದುವೆ ಏರ್ಪಡಿಸುತ್ತಿದ್ದೆ. ನಾನು ಹೇಳಿದರೆ ಕೆಲವರು ದುಡ್ಡೂ ಕೊಡೋರು. ಈ ವರ್ಷದಿಂದ ಇಲ್ಲಿ ಮಾಡಿಸಲ್ಲ. ಮೈಸೂರಿನಿಂದ ನನ್ನನ್ನು ಓಡಿಸಿದ್ದೀರಿ. ಹಾಗಾಗಿ ಬಾದಾಮಿಯಲ್ಲೇ ಮಾಡಿಸುತ್ತೇನೆ’ ಎಂದಿದ್ದರು. ಒಕ್ಕಲಿಗ ಮತಗಳ ಧ್ರುವೀಕರಣದ ಜೊತೆಗೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದದ ಮೂಲಕ ಸಿದ್ದರಾಮಯ್ಯನವರಿಗೆ ತವರಿನಲ್ಲಿ ಕೊಟ್ಟ ಪೆಟ್ಟು ಆ ಪ್ರಮಾಣಕ್ಕೆ ಇತ್ತು.

ಆದರೂ ಮೈಸೂರು ಲೋಕಸಭಾ ಕ್ಷೇತ್ರ ಬೇಕೆ ಬೇಕೆಂದು ಪಟ್ಟು ಹಿಡಿದು, ಹಾಲಿ ಸಂಸದರಿದ್ದ ತುಮಕೂರನ್ನೂ ಬಿಟ್ಟುಕೊಟ್ಟು ಅದನ್ನು ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಮೈಸೂರಿನ ಮೇಲೆ ಏನೇ ಪಟ್ಟಿದ್ದರೂ, ಅವರು ದೇವೇಗೌಡರನ್ನು ಒಲಿಸಿಕೊಳ್ಳದೇ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕಳೆದ ಎರಡು ಚುನಾವಣೆಗಳ ಅಂಕಗಣಿತ ನೋಡಿದರೆ ಅದು ಸುಸ್ಪಷ್ಟ.

ಇದು ಚೆನ್ನಾಗಿ ಗೊತ್ತಿದ್ದ ಪ್ರತಾಪಸಿಂಹ ಕಳೆದ ಸಾರಿ ಆಡಿದ ಆಟವನ್ನೇ ಈ ಸಾರಿಯೂ ಆಡಲು ಶುರು ಮಾಡಿದ್ದಾರೆ. ಆಗ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ಅವರು ಅಗತ್ಯವಿರಲಿ ಇಲ್ಲದಿರಲು ದೇವೇಗೌಡರನ್ನು ಟೀಕೆ ಮಾಡುವ ಕೆಲಸವನ್ನು ಮಾಡುತ್ತಲೇ ಇದ್ದು, ಒಂದು ನಕಾರಾತ್ಮಕ ಸಂದೇಶವನ್ನು ಕೊಟ್ಟಿದ್ದರು. ಹಾಗಾಗಿಯೇ ಚಿಕ್ಕಮಗಳೂರು ಮೂಲದ, ಬೆಂಗಳೂರಿನಲ್ಲಿ ಪತ್ರಕರ್ತನಾಗಿದ್ದ ಸಿಂಹ, ಪ್ರತಾಪ್ ಸಿಂಹ ಗೌಡನಾಗಿ ಮೈಸೂರಿಗೆ ಎಂಟ್ರಿ ಕೊಟ್ಟಿದ್ದು. ದೇವೇಗೌಡರ ಬಗ್ಗೆ ಹೊಗಳುತ್ತಾ, ಎಚ್.ವಿಶ್ವನಾಥ್ ಅವರು ಆ ರೀತಿ ಗೌಡರ ಬಗ್ಗೆ ಮಾತನಾಡುವುದನ್ನು ತಾನು ಒಪ್ಪುವುದಿಲ್ಲವೆಂದು ಹೇಳುತ್ತಾ ಪ್ರಚಾರ ಮಾಡಿದ್ದರು.

ಸ್ಪಷ್ಟವಾಗಿರುವ ಅಂಕಗಣಿತ
ಅದಕ್ಕೆ ಸರಿಯಾಗಿ ಜೆಡಿಎಸ್ ಅಂತಹ ದೊಡ್ಡ ಹೆಸರಲ್ಲದ ಚಂದ್ರಶೇಖರಯ್ಯನವರನ್ನು ಕಣಕ್ಕಿಳಿಸಿ ಪ್ರತಾಪ್ ಸಿಂಹರ ಪರವಾಗಿ ಒಳ ಸಂದೇಶ ಕೊಟ್ಟಿದ್ದರು. ಇವೆಲ್ಲದರ ಜೊತೆಗೆ ಇಡೀ ದೇಶದಲ್ಲಿ ಆಗ ಇದ್ದ ಮೋದಿ ಅಲೆಯ ಲಾಭವನ್ನು ಪಡೆದುಕೊಂಡರೂ ಪ್ರತಾಪ್ ಸಿಂಹ ಗೆದ್ದಿದ್ದು 31 ಸಾವಿರ ಮತಗಳಲ್ಲಿ. 2009ರಲ್ಲಿ ಎಚ್.ವಿಶ್ವನಾಥ್ 3.54 ಲಕ್ಷ ಮತ ಪಡೆದುಕೊಂಡಿದ್ದರೆ, ಬಿಜೆಪಿಯ ವಿಜಯಶಂಕರ್ 3.47 ಲಕ್ಷ ಪಡೆದುಕೊಂಡಿದ್ದರು. ಕೊಡಗಿನ ಜೀವಿಜಯ ಜನತಾದಳದಿಂದ ಸ್ಪರ್ಧಿಸಿ 2.16 ಲಕ್ಷ ಪಡೆದುಕೊಂಡಿದ್ದರು. ಅದಕ್ಕೆ ಹಿಂದಿನ ಸಾಲಿನಲ್ಲಿ ಜೆಡಿಎಸ್‍ನ ಮತಪ್ರಮಾಣದಲ್ಲಿ ಶೇ.9.8ರಷ್ಟು ನಷ್ಟವಾಗಿ ಮಿಕ್ಕೆರಡೂ ಪಕ್ಷಗಳು ಅದರ ಲಾಭ ಪಡೆದುಕೊಂಡಿದ್ದರೂ, ಜೆಡಿಎಸ್‍ಗೆ 2.16 ಲಕ್ಷ ಮತ ಇದ್ದೇ ಇತ್ತು.

2014ರಲ್ಲಿ ಒಂದೂ ಮುಕ್ಕಾಲು ಲಕ್ಷ ಹೆಚ್ಚು ಮತಗಳು ಚಲಾವಣೆಯಾದವು. ದೇವೇಗೌಡರು ಪ್ರತಾಪಸಿಂಹರಿಗೆ ಬೆಂಬಲಿಸಿದದರೂ, ಜೆಡಿಎಸ್‍ನ ಡಮ್ಮಿ ಕ್ಯಾಂಡಿಡೇಟ್‍ಗೆ 1.38 ಲಕ್ಷ ಮತಗಳು ಬಂದವು. ಕಾಂಗ್ರೆಸ್‍ನ ಎಚ್.ವಿಶ್ವನಾಥ್ ಹಿಂದಿಗಿಂತ 1 ಲಕ್ಷ 20 ಸಾವಿರ ಹೆಚ್ಚು ಮತ ಪಡೆದುಕೊಂಡರೂ ಸೋತರು. ಇವೆಲ್ಲವೂ ದೇವೇಗೌಡರ ಕಾರಣಕ್ಕೆ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಆದರೂ ಸಂದರ್ಭದ ಅನಿವಾರ್ಯತೆಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ‘ಗೌಡರ ವಿರೋಧಿ’ ವಿಶ್ವನಾಥ್ ಜೆಡಿಎಸ್ ಸೇರಿ ಅದರ ರಾಜ್ಯಾಧ್ಯಕ್ಷರಾಗಿದ್ದಾರೆ.
ಈ ಚುನಾವಣೆಯ ಹೊತ್ತಿಗೆ ಒಕ್ಕಲಿಗರ ಮತ ಧ್ರುವೀಕರಣದಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತಷ್ಟು ಪ್ರಬಲವಾಗಿದೆ. ಕಾಂಗ್ರೆಸ್‍ಗೆ ಒಬ್ಬ ಎಂಎಲ್‍ಎ ಇದ್ದರೆ, ಜೆಡಿಎಸ್‍ಗೆ ಮೂವರು ಎಂಎಲ್‍ಎಗಳಿದ್ದಾರೆ. ಅಂದರೆ, ಇಂದಿನ ಮತದಾರರ ಸಂಖ್ಯೆಗೆ ತಾಳೆ ಹಾಕುವುದಾದರೆ ಜೆಡಿಎಸ್ ಕನಿಷ್ಠ 3 ಲಕ್ಷ ಓಟುಗಳನ್ನು ಹೊಂದಿದೆ. ಜೊತೆಗೆ ಇದೊಂಥರಾ ಟ್ರಾನ್ಸಫರಬಲ್ ಮತಗಳು. ಹೀಗಾಗಿ ಇಲ್ಲಿ ದೇವೇಗೌಡರೇ ನಿರ್ಣಾಯಕ. ಅವರ ನೆರವಿಲ್ಲದೇ ಸಿದ್ದರಾಮಯ್ಯನವರು ವಿಜಯಶಂಕರ್‍ರನ್ನು ಗೆಲ್ಲಿಸಿಕೊಳ್ಳುವುದು ಸುಲಭವಿಲ್ಲ.

ಮೈತ್ರಿ ಧರ್ಮ ಪಾಲನೆಯಾದರೆ, ಪ್ರತಾಪ್‍ಸಿಂಹ 2 ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಮುಂದಿನ ಒಂದು ವಾರದಲ್ಲೇ ದೋಸ್ತಿಗಳ ನಡುವಿನ ಬಂಧ ಎಷ್ಟು ಗಟ್ಟಿಯಿದೆ ಎಂಬುದು ತೀರ್ಮಾನವಾಗಿಬಿಡುವುದರಿಂದ, ಮೈಸೂರು ಕ್ಷೇತ್ರದ ಫಲಿತಾಂಶವೂ ಈ ವಾರದಲ್ಲೇ ಅಂತಿಮಗೊಂಡುಬಿಡುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...