Homeಅಂಕಣಗಳುಪ್ರಧಾನಿ ಹುದ್ದೆಯ ಘನತೆ ಹಾಳು ಮಾಡಿದ ನರೇಂದ್ರ ಮೋದಿ

ಪ್ರಧಾನಿ ಹುದ್ದೆಯ ಘನತೆ ಹಾಳು ಮಾಡಿದ ನರೇಂದ್ರ ಮೋದಿ

ಇದನ್ನು ಓದಿರಿ

- Advertisement -
- Advertisement -

|ನ್ಯಾಯಪಥ ಸಂಪಾದಕೀಯ |

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಳೆದೊಂದು ವಾರದಿಂದ ಬಹಳ ಸುದ್ದಿಯಲ್ಲಿದ್ದಾರೆ. ಒಳ್ಳೆಯ ಸಾಧನೆಯ ಕಾರಣಕ್ಕಾಗಿ, ಇಲ್ಲವೇ ದೇಶದ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ವಿಚಾರದಲ್ಲಿ ಸುದ್ದಿಯಾಗಿದ್ದರೆ ಎಲ್ಲರೂ ಸಂತಸ ಪಡಬಹುದಿತ್ತು. ಆದರೆ ಅವರ ಅಜ್ಞಾನದ ಕಾರಣಕ್ಕಾಗಿ, ಸಾರ್ವಜನಿಕವಾಗಿ ಒಂದರ ಮೇಲೊಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಕಾರಣಕ್ಕಾಗಿ ಪ್ರಧಾನಿಯವರು ಸುದ್ದಿಯಲ್ಲಿರುವುದು ದುರಂತವಾಗಿದೆ.

ನ್ಯೂಸ್ ನೇಷನ್ ಎಂಬ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತ, ನರೇಂದ್ರ ಮೋದಿಯವರು ‘ಕೆಟ್ಟ ಹವಾಮಾನ ಮತ್ತು ಮೋಡಗಳಿರುವ ಕಾರಣಕ್ಕಾಗಿ ಬಾಲಾಕೋಟ್ ವಾಯುದಾಳಿಯನ್ನು ಮುಂದೂಡುವ ಬಗ್ಗೆ ತಜ್ಞರು ನಿರ್ಧರಿಸಿದ್ದರು. ಆದರೆ ನಾನು ಮೋಡವಿದ್ದರೆ ಯುದ್ಧವಿಮಾನಗಳು ರೇಡಾರ್‍ನಿಂದ ತಪ್ಪಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಸಲಹೆ ನೀಡಿದ್ದೆ’ ಎಂದು ಹೇಳಿದ್ದಾರೆ. ಒಂದು ಘನತೆಯುತ ಪ್ರಧಾನಿಯ ಸ್ಥಾನದಲ್ಲಿರುವವರು ತಿಳಿದುಕೊಂಡು ಮಾತನಾಡಬೇಕು. ತಾಂತ್ರಿಕ ವಿಚಾರಗಳು ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು. ಆದರೆ ಯಾವಾಗಲೂ ಪ್ರಶಂಸೆ ಬಯಸುವ ಮೋದಿಯವರ ಈ ಹೇಳಿಕೆಯಿಂದ ಇಡೀ ದೇಶವೇ ಮುಜುಗರಕ್ಕೊಳಪಡಬೇಕಾದ ಪರಿಸ್ಥಿತಿ ಬಂದಿದೆ.

ಮೊದಲನೆಯದಾಗಿ ಮಳೆ, ಮೋಡ ಮಂಜು ಏನೇ ಇದ್ದರೂ ರೇಡಾರ್ ಕಿರಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬ ಸತ್ಯವನ್ನು ಸೇನೆಯಲ್ಲಿರುವವರು ತಿಳಿದೂ ಸಹ ಯಾರು ಅಂದು ಪ್ರಶ್ನಿಸದೇ ಇರುವುದು ಏನನ್ನು ಸೂಚಿಸುತ್ತದೆ? ಅಂದು ಕಣ್ಣು ಮುಚ್ಚಿಕೊಂಡು ವಾಯುಪಡೆಯ ಅಧಿಕಾರಿಗಳು ಮೋದಿಯವರ ಆದೇಶವನ್ನು ಪಾಲಿಸಿದ್ದಾರೆ. ಮುಂದೆಯೂ ಇಂತಹದೇ ಅವೈಜ್ಞಾನಿಕ ಆದೇಶಗಳನ್ನು ಮೋದಿ ನೀಡಿದರೆ ಅದರ ಬೆಲೆ ತೆರಬೇಕಾದವರು ಯಾರು?

ಎರಡನೆಯದಾಗಿ ರಫೇಲ್ ವಿಷಯದಲ್ಲಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷಗಳು ಆರೋಪ ಮಾಡಿದಾಗ ಅದು ರಕ್ಷಣಾ ವಿಷಯವಾದ್ದರಿಂದ ಕೋರ್ಟಿಗೆ ರಹಸ್ಯ ದಾಖಲೆಗಳನ್ನು ಕೊಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈಗ ಯಾರು ಕೇಳದಿದ್ದರೂ ಸಹ ಖುದ್ದು ಮೋದಿಯವರೇ ನಿರ್ದಿಷ್ಟ ವಾಯುದಾಳಿಯೊಂದರ ವಿವರಗಳನ್ನು ಟಿವಿಯೊಂದರಲ್ಲಿ ಕುಳಿತು ಹೇಳುತ್ತಾರೆಂದರೆ ಏನರ್ಥ? ದೇಶದ ರಕ್ಷಣಾ ರಹಸ್ಯಗಳನ್ನು ತನ್ನ ಸ್ವಂತ ಇಮೇಜ್ ಹೆಚ್ಚಿಸಿಕೊಳ್ಳಲು ಬಹಿರಂಗ ಮಾಡುವುದು ಸರ್ವಥಾ ಸರಿಯಲ್ಲ.

ಮೂರನೆಯದಾಗಿ ಬಾಲಾಕೋಟ್ ವಾಯುದಾಳಿಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇರಲು ಈ ಪ್ರಧಾನಿಯವರ ಅಜ್ಞಾನದ ಆದೇಶವೇ ಕಾರಣ ಎಂಬ ಅನುಮಾನ ದಟ್ಟವಾಗುತ್ತಲಿದೆ. ಬಾಲಾಕೋಟ್ ವಾಯುದಾಳಿಯಲ್ಲಿ 300 ಜನ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದರೂ ಇದುವರೆಗೂ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಒಬ್ಬರೂ ಕೂಡ ಸಾವನ್ನಪ್ಪಿಲ್ಲ ಎಂಬುವವರೆಗು ವರದಿಗಳು ಹರಿದಾಡುತ್ತಿವೆ. ಈಗ ಪ್ರಧಾನಿಯವರ ಹೇಳಿಕೆ ನೋಡಿದರೆ ಅದಕ್ಕೆ ಮತ್ತಷ್ಟು ಇಂಬು ಕೊಡುವಂತೆ ಕಾಣುತ್ತಿವೆ. ವಾಯುದಾಳಿಯಲ್ಲಿ ಒಬ್ಬ ವಿಂಗ್ ಕಮಾಂಡರ್ ಹುತಾತ್ಮನಾಗಿದ್ದರೆ ಮತ್ತೊಬ್ಬ ಅಭಿನಂದನ್ ಎರಡು ದಿನಗಳ ಕಾಲ ಪಾಕ್‍ನಲ್ಲಿ ಸೆರೆಯಾಳಾಗಬೇಕಾಗಿ ಬಂದಿದ್ದು ಪ್ರಧಾನಿಯವರ ಆದೇಶದಿಂದಲೇ ಎಂಬ ಪ್ರಶ್ನೆ ಎದುರಾಗುತ್ತಿದೆ

ನಾಲ್ಕನೆಯದಾಗಿ ಮೋದಿಯವರ ಈ ಹೇಳಿಕೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಬರುವಂತಾಗಿದೆ. ಏಕೆಂದರೆ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಪ್ರಧಾನಿಯವರ ಇಂತಹ ಹೇಳಿಕೆಗಳು ಜೋಕ್‍ನಂತಾಗಿಬಿಡುವ ಅಪಾಯವಿದೆ. ಈಗಾಗಲೇ ಭಾರತದಲ್ಲಿ ಈ ಕುರಿತು ಲಕ್ಷಾಂತರ ಜೋಕ್‍ಗಳು, ಮೀಮ್‍ಗಳು, ಟ್ರೋಲ್‍ಗಳು ಹರಿದಾಡುತ್ತಿವೆ. ‘ಇವು ಮೋದಿಯವರ ಮೇಲಿನ ಜೋಕ್‍ಗಳಲ್ಲ, ಬದಲಿಗೆ ಮೋದಿಯವರನ್ನು ಇನ್ನೂ ಬೆಂಬಲಿಸುತ್ತಿರುವ ವಿದ್ಯಾವಂತ ವರ್ಗದವರ ಮೇಲಿನ ಜೋಕ್‍ಗಳು’ ಎಂದು ಪತ್ರಕರ್ತರೊಬ್ಬರು ಮಾರ್ಮಿಕವಾಗಿ ನುಡಿದಿರುವುದು ಸತ್ಯವಾಗಿದೆ.

ಮೋದಿಯವರ ಸುಳ್ಳು ಇಲ್ಲಿಗೆ ನಿಲ್ಲುವುದಿಲ್ಲ. ಅದೇ ಸಂದರ್ಶನದಲ್ಲಿ ಮುಂದುವರೆದು ‘ನಾನು 1987-88ರಲ್ಲಿ ನನ್ನ ಡಿಜಿಟಲ್ ಕ್ಯಾಮರದಿಂದ ಅಡ್ವಾಣಿಯವರ ವರ್ಣರಂಜಿತ ಫೋಟೊ ತೆಗೆದು ದೆಹಲಿಗೆ ಇಮೇಲ್ ಮಾಡಿದ್ದೆ’ ಎಂದು ಮತ್ತೊಂದು ಸುಳ್ಳು ಹೇಳಿಬಿಟ್ಟಿದ್ದಾರೆ. ವಾಸ್ತವವಾಗಿ 90ರ ದಶಕದ ನಂತರ ಡಿಜಿಟಲ್ ಕ್ಯಾಮರ ಭಾರತದ ಮಾರುಕಟ್ಟೆಗೆ ಬಂದಿದೆ. ಇನ್ನು ಆಗಸ್ಟ್ 14, 1995ರಂದು ವಿಎಸ್‍ಎನ್‍ಎಲ್ ಇಂಟರ್‍ನೆಟ್ ಸೇವೆ ಬಳಕೆಗೆ ಬಂದಿದೆ. ಆದರೆ ಮೋದಿ 1987-88ರಲ್ಲಿಯೇ ಬಳಸಿದ್ದೆ ಎನ್ನುವ ಮೂಲಕ ಹಾಸ್ಯದ ವಸ್ತು ಆಗಿದ್ದಾರೆ. ದೇಶದ ಪ್ರಧಾನಿಯೇ ಹೀಗಾದರೆ ದೇಶದ ಗೌರವ ಉಳಿದೀತೇ?

ಇದನ್ನು ಓದಿರಿ ನ್ಯಾಯಪಥ ಸಂಪಾದಕೀಯ

ಮೋದಿಯವರ ಈ ರೀತಿಯ ಸುಳ್ಳು ಹೇಳಿಕೆಗಳು ಇದೇ ಮೊದಲೇನಲ್ಲ. ಈ ಹಿಂದೆ ಸಹ ಅವರು ಗಟಾರಗಳಿಂದ ಗ್ಯಾಸ್ ಉತ್ಪಾದಿಸಬಹುದೆಂದು ಹೇಳಿದ್ದರು. ವಿಶ್ವದಾದ್ಯಂತ ಆಗುತ್ತಿರುವ ಹವಾಮಾನ ಬದಲಾವಣೆ ಪ್ರಶ್ನೆ ಬಂದಾಗ ಮೋದಿಯವರು ಹವಾಮಾನ ಬದಲಾವಣೆಯಾಗುತ್ತಿಲ್ಲ, ನಮ್ಮ ಚರ್ಮ ಬದಲಾಗುತ್ತಿದೆ ಅಷ್ಟೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.

ಮೋದಿ ಮಾತ್ರವಲ್ಲ ಅವರ ಸಹೋದ್ಯೋಗಿಗಳು ಸಹ ಸುಳ್ಳು ಹೇಳುವುದರಲ್ಲಿ ಕಡಿಮೆ ಏನಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ಗಣೇಶನದು ಪ್ಲಾಸ್ಟಿಕ್ ಸರ್ಜರಿ, ವೇದಕಾಲದಲ್ಲೇ ನಮ್ಮ ಬಳಿ ವಿಮಾನವಿತ್ತು, ಪ್ರಣಾಳಶಿಶು ತಂತ್ರಜ್ಞಾನವು ಇತ್ತು, ಮಂಗನಿಂದ ಮಾನವ ಆಗಿದ್ದು ಸುಳ್ಳು ಎಂದೆಲ್ಲಾ ಹೇಳಿಕೆಗಳನ್ನು ನೀಡಿದ್ದರಿಂದ ಎರಡು ಮೂರು ಬಾರಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ಸಮುದಾಯವು ಈ ಮೋದಿ ಸಹೋದ್ಯೋಗಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ಮೋದಿಯವರು ವಿಜ್ಞಾನ ಮತ್ತು ವೈಚಾರಿಕತೆಯನ್ನು ನಿರ್ಲಕ್ಷಿಸಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ವಿದ್ವತ್ತು, ವಿದ್ವಾಂಸರು, ಬುದ್ದಿಜೀವಿಗಳು, ವಿಜ್ಞಾನಿಗಳೆಂದರೆ ಈ ಸರ್ಕಾರಕ್ಕೆ ಆಗಿಬರುವುದಿಲ್ಲ. ಎಲ್ಲಿಯವರೆಗೆ ಈ ಬಿಕ್ಕಟ್ಟು ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೆ ಭಾರತ ಅಭಿವೃದ್ದಿಯಾಗುವುದಿಲ್ಲ ಮಾತ್ರವಲ್ಲ ಪ್ರಪಂಚದಲ್ಲಿ ತನ್ನ ಹೆಸರನ್ನು ಮತ್ತಷ್ಟು ಕೆಡಿಸಿಕೊಳ್ಳುವ ಅಪಾಯವಿದೆ. ಮೋದಿಯವರಿಗೆ ಇದು ಅರ್ಥವಾಗಬೇಕು ಅಥವಾ ಅಧಿಕಾರದಿಂದ ಕೆಳಗಿಳಿಯಬೇಕು ಇವೆರಡೆ ಸದ್ಯಕ್ಕಿರುವ ದಾರಿಗಳಾಗಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...