Homeಅಂತರಾಷ್ಟ್ರೀಯನಮ್ಮ ದೇಶದ ಸಂಪನ್ಮೂಲಗಳು ಹೆಚ್ಚಾದರೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು: ಹೇಗೆ?

ನಮ್ಮ ದೇಶದ ಸಂಪನ್ಮೂಲಗಳು ಹೆಚ್ಚಾದರೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು: ಹೇಗೆ?

ಅಂದಾಜಿನ ಪ್ರಕಾರ ನಮ್ಮಲ್ಲಿರುವ ಕೇವಲ ಅದಿರು ಮತ್ತು ತೈಲ ಸಂಪನ್ಮೂಲಗಳ ಬೆಲೆ ಸುಮಾರು ಐನೂರು ಲಕ್ಷ ಕೋಟಿ ರೂಪಾಯಿ. ಇದನ್ನು ಭಾರತದ 125 ಕೋಟಿ ನಾಗರಿಕರಿಗೆ ಹಂಚಿದರೆ ಹಣ ತಲಾ ನಲವತ್ತು ಲಕ್ಷ ರೂಪಾಯಿ ಬರುತ್ತದೆ.

- Advertisement -
- Advertisement -

ಇದೇನು ಹೊಸ ಶಾಪವೋ ಪರಿಹಾಸ್ಯವೋ ಎಂದು ಚಕಿತರಾಗಬೇಡಿ. ಇದು ದೇವರು ವರವಾಗಿ ನೀಡಿದ ನೈಸರ್ಗಿಕ ಸಂಪನ್ಮೂಲಗಳನ್ನು ಶಾಪವನ್ನಾಗಿ ಪರಿವರ್ತಿಸಿಕೊಂಡು ಒದ್ದಾಡುತ್ತಿರುವ ಸಮಾಜದ ದುರಾದೃಷ್ಟ. ಇದಕ್ಕೆ ಮುಖ್ಯ ಕಾರಣ ದುರ್ಬಲ ಸರಕಾರ, ಭ್ರಷ್ಟ ರಾಜಕಾರಣಿಗಳು ಮತ್ತು ದುರಾಸೆಯುಕ್ತ ಉದ್ಯೋಗಪತಿಗಳ ತ್ರಿಕೋಣ. ಎಲ್ಲೆಲ್ಲಿ ದೇವರು ಜನರಿಗೆ ಧಾರಾಳವಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ನೀಡಿದ್ದಾನೋ ಅಲ್ಲಲ್ಲಿ ಈ ಅನಿಷ್ಟ ತ್ರಿಕೋಣಗಳು ಕಾರ್ಯನಿರತರಾಗಿ, ಸಂಪನ್ಮೂಲಗಳನ್ನು ಕೊಳ್ಳೆಹೊಡೆದು, ಅದರ ನಿಜವಾದ ಹಕ್ಕು/ಪಾಲುದಾರರ ಅಭಿವೃದ್ಧಿಯನ್ನು ನಿರ್ಲಕ್ಷಿಸಿದಾಗ ಉಂಟಾಗುವ ಸಾಮಾಜಿಕ ಸಂಘರ್ಷಣೆಯೇ “ಸಂಪನ್ಮೂಲಗಳ ಶಾಪ”.

ಇಂತಹ ಸನ್ನಿವೇಶ ಸರಕಾರ ತನ್ನ ಗಮನವನ್ನು ಕೇವಲ ಒಂದು ಸಂಪನ್ಮೂಲಕ್ಕೆ ಕೇಂದ್ರೀಕರಿಸಿಕೊಂಡು ಇತರ ಸಂಪನ್ಮೂಲಗಳನ್ನು ನಿರ್ಲಕ್ಷಿಸಿದಾಗಲೂ ಎದುರಾಗಬಹುದು. ಇದಕ್ಕೆ ನಮ್ಮಲ್ಲಿಯೇ ಬೇಕಾದಷ್ಟು ಉದಾಹರಣೆಗಳಿವೆ, ಇತ್ತೀಚೆಗೆ ಮಾಧ್ಯಮದಲ್ಲಿ ವರದಿಯಾದಂತೆ ಝಾರ್ಖಂಡ್ ರಾಜ್ಯದ ದಾಂತೇವಾಡಾ ಜಿಲ್ಲೆಯ ಬೈಲಾಡಿಲಾದಲ್ಲಿ ಕಬ್ಬಿಣದ ಅದಿರಿನ ಅಪಾರ ಭಂಢಾರವನ್ನು ಸರಕಾರ ಅದಾನಿಯವರಿಗೆ ನೀಡಿದೆ. ಆದರೆ ನಾನು ಅದರ ಬಗ್ಗೆ ಬರೆದಲ್ಲಿ ಇದು ರಾಜಕೀಯ ಪ್ರೇರಿತ ಲೇಖನವೆಂದು ನಿಮ್ಮ ಮನಸ್ಸಿಗೆ ಬರಬಹುದು; ಅಲ್ಲದೆ ಈ ಶಾಪ ಹಲವಾರು ದೇಶಗಳನ್ನು ಬೇರೆ ಬೇರೆ ಸಂದರ್ಭದಲ್ಲಿ ಕಾಡಿದೆ. ಅದಕ್ಕಾಗಿ ಬೇರೆಯವರ ಉದಾಹರಣೆಯನ್ನು ಮೊದಲು ತೆಗೆದುಕೊಳ್ಳೋಣ.

ಒಂದು ಹಳೆಯ ಉದಾಹರಣೆ ಯೂರೋಪ್ ಭೂಖಂಡದ ಹಾಲೆಂಡ್ (ನೆದರ್ಲ್ಯಾಂಡ್) ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಾಲೆಂಡಿನ ಅಂಗಳವಾದ ಉತ್ತರ ಸಮುದ್ರದಲ್ಲಿ (ನಾರ್ತ್ ಸೀ) ಪತ್ತೆಯಾದ ಅಪಾರವಾದ ಗ್ಯಾಸ್ ಭಂಡಾರದಿಂದ ದೇಶಕ್ಕೆ ತಟ್ಟಿದ ಶಾಪ ‘ದಿ ಡಚ್ ಡಿಸೀಸ್’. ಈ ದಿಢೀರ್ ಗ್ಯಾಸ್ ಲಾಟರಿಯಿಂದಾಗಿ ಅದಕ್ಕೆ ಮಹಾಪೂರವಾಗಿ ಬಂದ ವಿದೇಶಿ ವಿನಿಮಯ, ಅದರಿಂದ ಉಂಟಾದ ಡಚ್ ಗಿಲ್ಡರ್ ಮೌಲ್ಯವೃದ್ಧಿ ಮತ್ತು ಡಚ್ ಸರಕಾರ ತನ್ನ ಗಮನವನ್ನೆಲ್ಲಾ ಅತ್ತ ಹರಿಸಿ ಕೃಷಿ, ಔದ್ಯೋಗಿಕ ಮತ್ತು ಇತರ ಕ್ಷೇತ್ರಗಳಿಗೆ ಮಾಡಿದ ನಿರ್ಲಕ್ಷದ ಪರಿಣಾಮದಿಂದಾಗಿ ಬಂದ ಕಾಯಿಲೆಯೇ ‘ಡಚ್ ಡಿಸೀಸ್’. ಸಂಪನ್ಮೂಲಗಳ ಶಾಪದಿಂದ ಬಂದ ಆರ್ಥಿಕ ಕಾಯಿಲೆಗೆ ಅರ್ಥಶಾಸ್ತ್ರಜ್ಞರು ನೀಡಿರುವ ಹೆಸರು. ಆದರೆ ಡಚ್ ಸರಕಾರ ಇದನ್ನು ಶೀಘ್ರವಾಗಿ ಅರ್ಥೈಸಿ, ಪರಿಹಾರ ಮಾಡಿ, ಪರಿಸ್ಥಿತಿ ಹದಗೆಡದಂತೆ ನೋಡಿಕೊಂಡಿತು.

 

ತೈಲದ ಶಾಪಕ್ಕೆ ಬಲಿಯಾಗಿರುವ ಅತ್ಯಂತ ದೊಡ್ಡ ಉದಾಹರಣೆ ಆಫ್ರಿಕಾ ಭೂಖಂಡದ ನೈಜಿರಿಯಾ. ನೈಜಿರಿಯಾ ವಿಶ್ವದಲ್ಲಿ ನಾಲ್ಕನೆಯ ಅತ್ಯಂತ ಅಧಿಕ ತೈಲ ಉತ್ಪಾದನೆ ಮಾಡುತ್ತಿದ್ದ ರಾಷ್ಟ್ರ, ಆದರೆ ಮೊದಲಿಂದಲೂ ಈ ತ್ರಿಕೋಣಕ್ಕೆ ಬಲಿಯಾಗಿ ವಿನಾಶದತ್ತ ಹೆಜ್ಜೆ ಹಾಕುತ್ತಿರುವ ದೇಶವೆಂದರೆ, ಬಹುಶಃ ತಪ್ಪಾಗಲಾರದು. ತೈಲ ನಿರ್ಯಾತದಿಂದ ಬಂದ ಹಣವನ್ನು ಜನರ ಅಭಿವೃದ್ಧಿಗಾಗಿ ಬಳಸಿದ್ದರೆ ಇಂದು ನೈಜಿರಿಯಾ ಸಮೃದ್ಧ ರಾಷ್ಟ್ರಗಳಲ್ಲಿ ಒಂದಾಗಬಹುದಿತ್ತು. ಎಲ್ಲಾ ದೇಶಗಳು ಈ ತ್ರಿಕೋಣಕ್ಕೆ ಬಲಿಯಾಗಲೇಬೇಕು ಎಂದೇನೂ ಇಲ್ಲ. ಕೊಲ್ಲಿ ದೇಶಗಳಾದ ಸೌದಿ ಅರೇಬಿಯಾ, ಒಮಾನ್, ಯು.ಎ.ಇ., ಕುವೈತ್, ಬಹರೇನ್, ಕತಾರ್ ಮುಂತಾದ ದೇಶಗಳಲ್ಲಿ ಪ್ರಜಾಪರ ಶಕ್ತಿಶಾಲಿ ರಾಜರಿದ್ದು, ಜನರ ಹಿತಕ್ಕಾಗಿ ತೈಲದ ಬಹುಪಾಲು ಹಣವನ್ನು ಉಪಯೋಗಿಸಿ, ತಾವೂ ಸುಖವಾಗಿ, ಪ್ರಜೆಗಳೂ ಸುಖವಾಗಿರುವಂತೆ ಮಾಡಿರುತ್ತಾರೆ. ಆದರೆ ಈ ದೇಶಗಳಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳಿಲ್ಲವೆಂಬುದೂ ಸಹ ಗಮನಾರ್ಹ ವಿಷಯ.

ಇರಾನ್ ದೇಶದ ಕತೆ ಸ್ವಲ್ಪ ವಿಭಿನ್ನವಾದುದು. ಅಲ್ಲಿದ್ದ ರಾಜ ಮೊಹಮ್ಮದ್ ರೆಜ್ಹಾ ಪೆಹ್ಲವಿ (ಶಾ ಆಫ್ ಇರಾನ್) ಅಮೇರಿಕಾ ದೇಶದ ಕೈಗೊಂಬೆಯಾಗಿ, ಬಂದ ಹಣವನ್ನೆಲ್ಲಾ ತನ್ನ ಇಷ್ಟದಂತೆ ಖರ್ಚು ಮಾಡುತ್ತಿದ್ದ ಕಾರಣದಿಂದ ದೇಶದಿಂದ ಪಲಾಯನ ಮಾಡಬೇಕಾಯಿತು. ಮಿಕ್ಕ ರಾಷ್ಟ್ರಗಳಲ್ಲಿ ತೈಲ ಮಾರಾಟದಿಂದ ಬಂದ ಎಲ್ಲಾ ಹಣವೂ ನಿಜವಾಗಿ ಜನರ ಅಭಿವೃದ್ಧಿಗೇ ಹೋಗುತ್ತಿದೆಯೇ ಅಥವಾ ಬೇರೆಡೆಗೆ ಸೋರುತ್ತಿದೆಯೇ ಎಂಬುದು ಚರ್ಚಾಸ್ಪದ ವಿಷಯವಾಗಿದ್ದರೂ, ಜನರು ದಂಗೆ ಎದ್ದು ಸಂಘರ್ಷಕ್ಕೆ ಇಳಿಯುವ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಆದರೆ ಸಿರಿಯಾ, ಇರಾಕ್, ಇಜಿಪ್ಟ್ ದೇಶಗಳಲ್ಲಿ ಇಂತಹ ಪರಿಸ್ಥಿತಿ ಈಗಾಗಲೇ ಕಂಡುಬಂದಿದೆ. ಕೇವಲ ತೈಲವೊಂದೇ ಅಲ್ಲ, ವಜ್ರ, ಚಿನ್ನ, ತಾಮ್ರ, ಕಬ್ಬಿಣ, ಮುಂತಾದ ಅದಿರುಗಳು ಆಥವಾ ಇನ್ಯಾವುದೇ ಪ್ರಾಕೃತಿಕ ಸಂಪನ್ಮೂಲಗಳೂ ಸಹ ಈ ಶಾಪಕ್ಕೆ ಕಾರಣವಾಗಬಹುದು. ಕಬ್ಬಿಣದ ಅದಿರಿನ ಮಿತಿಮೀರಿದ ಗಣಿಗಾರಿಕೆ, ಅದರಿಂದ ಕರ್ನಾಟಕ ಸರಕಾರಕ್ಕೆ ತಟ್ಟಿದ ಶಾಪ ನಿಮಗೆ ತಿಳಿದೇ ಇದೆ.

ಈ ಪಟ್ಟಿಗೆ ಸೇರ್ಪಡೆಯಾಗುತ್ತಿರುವ ರಾಷ್ಟ್ರಗಳಲ್ಲಿ ಎರಡು ಹೊಸ ಹೆಸರು ಪಾಪುವಾ ನ್ಯೂಗಿನಿ ಮತ್ತು ವೆನಿಜ್ಯುಏಲಾ. ಇಂಡೊನೇಷಿಯಾದ ಪೂರ್ವಕ್ಕೆ, ಆಸ್ಟ್ರೇಲಿಯಾದ ಉತ್ತರ ದಿಕ್ಕಿನಲ್ಲಿ, ಪ್ರಶಾಂತ ಮಹಾಸಾಗರದಲ್ಲಿರುವ ಸಣ್ಣ ರಾಷ್ಟ್ರ  ಪಾಪುವಾ ನ್ಯೂಗಿನಿ. ಇಲ್ಲಿರುವ ಅಪಾರ ನೈಸರ್ಗಿಕ ಅನಿಲ ಭಂಡಾರ ಬಹು ದೊಡ್ಡ ತೈಲ ಕಂಪನಿಯೊಂದರ ವಕ್ರ ದೃಷ್ಟಿಗೆ ಬಿದ್ದಿದೆ. ಕೇವಲ ಹತ್ತು ವರ್ಷದ ಹಿಂದೆ ಹಣದ ಬಳಕೆಯಿಲ್ಲದೇ, ಕೇವಲ ಕವಡೆ ಮತ್ತು ಹಂದಿಗಳನ್ನು ಪರಸ್ಪರ ವಿನಿಯೋಗಕ್ಕಾಗಿ ಬಳಸಿಕೊಂಡು ಜೀವನ ನಡೆಸುತ್ತಿದ್ದ ಆದಿವಾಸಿಗಳಿಗೆ, ಈ ನೈಸರ್ಗಿಕ ಸಂಪತ್ತಿಗಾಗಿ ಸರಕಾರ ಮಾಡಿಕೊಂಡಿರುವ ಒಪ್ಪಂದದ ಪರಿಣಾಮವಾಗಿ, ಅನಿರೀಕ್ಷಿತವಾಗಿ ಕೈಗೆ ಬಂದ ನಗದು ನಾರಾಯಣನ ಕೃಪೆಯಿಂದ, ಜನರಿಗೆ ಬಂದ ಕೊಳ್ಳುಬಾಕುತನ, ದುಶ್ಚಟಗಳ ಹಾವಳಿಯಿಂದಾಗಿ, ಅವರ ಜೀವನ ಶೈಲಿ ಹದಗೆಟ್ಟು, ಮಿಕ್ಕವರು ರಾಜಕೀಯ ಭ್ರಷ್ಟಾಚಾರ, ಬಲಹೀನ ಸರಕಾರ, ಜನರಿಗೆ ಹೆಚ್ಚಿನ ಪ್ರಯೋಜನವಿಲ್ಲದೆ ನಡೆಯುತ್ತಿರುವ ಅಭಿವೃದ್ಧಿ ಕಾರ್ಯದಿಂದಾಗಿ ರೋಸೆದ್ದು, ಹಳ್ಳಿಗಳನ್ನು ತ್ಯಜಿಸಿ, ಕಾಡಿನಲ್ಲಿ ಗುಂಪುಗಳಾಗಿ ಸೇರಿಕೊಂಡು, ವಿದ್ರೋಹ ಚಟುವಟಿಕೆ ನಡೆಸುತ್ತಿದ್ದಾರೆ.

ಅದೇ ರೀತಿ ವಿಶ್ವದಲ್ಲೇ ಅತಿ ಹೆಚ್ಚು ತೈಲ ಸಂಪತ್ತಿನ ನಿಕ್ಷೇಪವಿದ್ದ ರಾಷ್ಟ್ರ ವೆನಿಜ್ಯುಏಲಾ. ಸರಿಯಾಗಿ ನಿರ್ವಹಣೆ ಮಾಡದೆ 2010ರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಎಂದೂ ಕೇಳರಿಯದ ಹಣದುಬ್ಬರ, ಜೀವನೋಪಯೋಗಿ ವಸ್ತುಗಳ ತೀವ್ರ ಕೊರತೆ, ಹಸಿವು, ಬಡತನ, ನಿರುದ್ಯೋಗ, ಅಪರಾಧ ಸಮಸ್ಯೆಗೆ ತುತ್ತಾಗಿದ್ದಾರೆ. ಪರಿಸ್ಥಿತಿ ಎಲ್ಲಿಯವರೆಗೆ ಬೆಳೆದಿದೆ ಎಂದರೆ 2017ರಲ್ಲಿ ದೇಶದ ಮುಕ್ಕಾಲು ಪಾಲು ಜನರ ದೇಹದ ತೂಕ ಸರಾಸರಿ ಎಂಟು ಕೆಜಿ ಕಡಿಮೆಯಾಗಿದೆ ಎಂದು ವಿಶ್ವ ಸಂಸ್ಥೆ ವರದಿ ಮಾಡಿದೆ. ಈ ದೇಶದ ಆರ್ಥಿಕ ಸಂಕಷ್ಟಕ್ಕೆ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಮಾತ್ರವಲ್ಲ, ಬಹು ದೊಡ್ಡ ಕಾರಣ ಅಮೇರಿಕದ ರಾಜಕೀಯ ಹಸ್ತಕ್ಷೇಪ. ತನ್ನ ಕೈಗೊಂಬೆಯೊಬ್ಬನನ್ನು ಅಧ್ಯಕ್ಷನನ್ನಾಗಿ ಮಾಡಿ ದೇಶದ ಅಪಾರ ತೈಲ ಸಂಪತ್ತು ಸೂರೆಗೊಳ್ಳುವ ಹುನ್ನಾರವೆಂದೂ ಕೇಳಿಬರುತ್ತಿದೆ.

ನಮ್ಮ ದೇಶದಲ್ಲೂ ನಗರ ಪ್ರದೇಶದಲ್ಲಿ ಭೂಗಳ್ಳರ ಹಾವಳಿಯಿಂದಾಗಿ ಜಮೀನು ಕಳೆದುಕೊಂಡು, ಸ್ವಲ್ಪ ದಿನ ಮಜಾ ಮಾಡಿ ಈಗ ತಲೆಯಮೇಲೆ ಕೈಹೊತ್ತು ಕೂತ ರೈತರು, ಬಲಹೀನ ಸರಕಾರದಿಂದಾಗಿ ಕೊಳ್ಳೆ ಹೊಡೆಯಲ್ಪಟ್ಟ ಕಬ್ಬಿಣ, ಕಲ್ಲಿದ್ದಲು, 2ಜಿ/3ಜಿ ತರಂಗ, ಮುಂತಾದ ಸಂಪನ್ಮೂಲಗಳ ಶಾಪದಿಂದಾಗಿ ಹಲವು ರಾಜ್ಯಗಳಲ್ಲಿ ಸಮಾಜ ವಿರೋಧಿ ಭಯೋತ್ಪಾದಕ ಚಟುವಟಿಕೆ ಹುಟ್ಟಿ ಬಲಗೊಳ್ಳುತ್ತಿರಬಹುದಲ್ಲವೇ? ಸರಕಾರದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಾಗಿ, ಯಾವ ಸಂಪನ್ಮೂಲಗಳು ಯಾರಿಗೆ ಎಷ್ಟಕ್ಕೆ ಮಾರಾಟವಾಗುತ್ತಿದೆ, ದೇಶದಿಂದ ಹೊರಕ್ಕೆ ರಫ್ತಾಗುತ್ತಿದ್ದರೆ ನಿಜವಾಗಿ ಅದನ್ನು ಎಷ್ಟಕ್ಕೆ ಕೊಂಡುಕೊಳ್ಳುತ್ತಿದ್ದಾರೆ ಎಂಬ ಎಲ್ಲ ಮಾಹಿತಿ ಬಹಿರಂಗವಾದಲ್ಲಿ ಈ ತ್ರಿಕೋಣವನ್ನು ಮುರಿಯಬಹುದು.

ಭಾರತ ಬಡ ರಾಷ್ಟ್ರವೇನಲ್ಲ. ಒಂದು ಅಂದಾಜಿನ ಪ್ರಕಾರ ನಮ್ಮಲ್ಲಿರುವ (ಈಗ ಉಳಿದಿರುವ) ಕೇವಲ ಅದಿರು ಮತ್ತು ತೈಲ ಸಂಪನ್ಮೂಲಗಳ ಬೆಲೆ ಸುಮಾರು ಐನೂರು ಲಕ್ಷ ಕೋಟಿ ರೂಪಾಯಿ. ಇದನ್ನು ಭಾರತದ 125 ಕೋಟಿ ನಾಗರಿಕರ ಸಂಪತ್ತು ಎಂದು ಪರಿಗಣಿಸಿದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸಲ್ಲಬೇಕಾದ ಹಣ ತಲಾ ನಲವತ್ತು ಲಕ್ಷ ರೂಪಾಯಿ. ಇದನ್ನು ಅವರವರ ಹೆಸರಿನಲ್ಲಿ ಠೇವಣಿಯನ್ನಾಗಿ ಮಾಡಿ ಸರಕಾರ ತಾನೇ ಇಟ್ಟುಕೊಂಡು, ಅದಕ್ಕೆ ಕೇವಲ ವರ್ಷಕ್ಕೆ 6% ಬಡ್ಡಿ ನೀಡಿದರೂ, ಪ್ರತಿ ಪ್ರಜೆಗೂ ಕೊಡಬಹುದಾದ ಮಾಸಿಕ (ನಿರುದ್ಯೋಗ) ಭತ್ತೆ ರೂ. ಇಪ್ಪತ್ತು ಸಾವಿರ. ಇದು ನಾನು ಊಹಿಸಿ ಹೇಳಿದ ಮಾತಲ್ಲ, ಹಿಂದೆ ‘ಸತ್ಯಮೇವ ಜಯತೇ” ಎಂಬ ಟಿ.ವಿ. ಕಾರ್ಯಕ್ರಮದಲ್ಲಿ ಬಂದಂತಹ ಒಂದು ಅಭಿಪ್ರಾಯ.

ಹೀಗೆ ಜನರಿಗೆ ಹಣ ಹಂಚಲು ಸಾಧ್ಯವಿಲ್ಲ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯವೂ ಆದರೂ ಸಹ ನಾವು ಬಡವರಿಗೆ ತಿಂಗಳಿಗೆ ಮೂವತ್ತು ಕೆ.ಜಿ. ಅಕ್ಕಿ ಒಂದು ರೂಪಾಯಿ ದರದಲ್ಲಿ ಹಂಚುತ್ತಿದ್ದೇವೆ ಆಥವಾ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ನಾಲ್ಕು ಸಾವಿರ ರೂಪಾಯಿಯ ಅಡುಗೆ ಅನಿಲ ಸಬ್ಸಿಡಿ ಕೊಡುತ್ತಿದ್ದೇವೆ ಅಥವಾ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಬ್ಸಿಡಿ ಕೊಡುತ್ತಿದ್ದೇವೆ ಎಂದು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿರುವ, ಬರುತ್ತಿರುವ ಸರಕಾರಗಳಿಗೆ ದೇಶದ ಸಂಪನ್ಮೂಲಗಳು ದೇಶದ ಪ್ರಜೆಗಳ ಅಭಿವೃದ್ಧಿಗೆ ವಿನಿಯೋಗವಾಗದೇ, ದೇವರು ಕೊಟ್ಟ ವರವನ್ನು ಪೂಜಾರಿ ನುಂಗಲು ಮುಂದಾಗಿ, ಸಂಪನ್ಮೂಲಗಳು ಶಾಪವಾಗಿ ಪರಿವರ್ತಿತವಾದಲ್ಲಿ ಆಗಬಹುದಾದ ಅನಾಹುತದ ಬಗ್ಗೆ ಮುನ್ನೆಚ್ಚೆರಿಕೆಯ ಮಾತು. ನಮ್ಮ ದೇಶದ ಪ್ರಜೆಗಳು ಇನ್ನಾದರೂ ಎಚ್ಚೆತ್ತು ಇಂತಹ ಸಂಪನ್ಮೂಲದ ಶಾಪಕ್ಕೆ ಗುರಿಯಾಗದಿದ್ದರೆ ನಾವು-ನೀವು ಕ್ಷೇಮವಲ್ಲವೇ?

(ಲೇಖಕರು ಮೇಲೆ ಹೆಸರಿಸಿರುವ ಎಲ್ಲಾ ದೇಶಗಳಿಗೂ (ಸಿರಿಯಾ ಹೊರತುಪಡಿಸಿ) ಹೋಗಿ ಬಂದಿದ್ದಾರೆ.)


ಇದನ್ನೂ ಓದಿ: ‘ಅಪೋಫಿಸ್’ ಧರೆಗೆ ಅಪ್ಪಳಿಸುವ ಮುನ್ನ ನಿಮ್ಮ ಎಲ್ಲಾ ಆಸೆಗಳನ್ನು ಆದಷ್ಟು ಬೇಗ ಪೂರೈಸಿಕೊಳ್ಳಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷವನ್ನು ಸೋಲಿಸುವ ಮೂಲಕ ‘ಮೊಹಬ್ಬತ್ ಕಿ ದುಕಾನ್’ ತೆರೆಯಿರಿ: ರಾಹುಲ್ ಗಾಂಧಿ

0
ಇಂದಿನಿಂದಆರಂಭವಾಗುತ್ತಿರುವ 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ದ್ವೇಷವನ್ನು ಸೋಲಿಸುವ ಮೂಲಕ ದೇಶದ ಮೂಲೆಮೂಲೆಗಳಲ್ಲಿ 'ಪ್ರೀತಿಯ ಅಂಗಡಿ' (ಮೊಹಬ್ಬತ್...