ಒಂದು ಜನತಾ ಕರ್ಫ್ಯೂ ಮತ್ತು ಎರಡು ವೈರಸ್‌ಗಳು : ಎ.ನಾರಾಯಣ್

ಕೊರೋನದ ಸೋಂಕು ಇಡೀ ವಿಶ್ವವನ್ನೇ ಆವರಿಸಿದ್ದರೆ ಆ ಇನ್ನೊಂದು ಸೋಂಕು ಕೇವಲ ಭಾರತಕ್ಕೆ ಸೀಮಿತವಾಗಿದೆ..

ಪ್ರಧಾನಮಂತ್ರಿಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ ಅಂದರೇನೇ ಏನೋ ವಿಪತ್ತು ಕಾದಿದೆ ಎನ್ನುವುದು ಇತ್ತೀಚಿಗೆ ಜನರ ಲೆಕ್ಕಾಚಾರ. ಆದರೆ ಹೋದ ವಾರ ಕೊರೋನ ವೈರಸಿನ ರೂಪದಲ್ಲಿ ವಿಪತ್ತೊಂದು ಪ್ರಪಂಚದ ಮೇಲೆ ಎರಗಿರುವ ಹೊತ್ತಿಗೆ ಪ್ರಧಾನಿಗಳ ಭಾಷಣದ ಪ್ರಸ್ತಾಪ ಬಂದದ್ದರಿಂದ ಅವರೇನು ಹೇಳಲಿದ್ದಾರೆ ಎನ್ನುವುದರ ಬಗ್ಗೆ ಆತಂಕದ ಬದಲು ಕುತೂಹಲವಿತ್ತು. ಅಷ್ಟೊತ್ತಿಗಾಗಲೇ ಗಾಳಿಸುದ್ದಿಗಳು ಯಥೇಚ್ಛವಾಗಿ ಹರಿದಾಡುತ್ತಿದ್ದವು. ಪ್ರಾಯಶಃ ಇಟಲಿಯಲ್ಲಿ ಮಾಡಿದಂತೆ ಇಡೀ ದೇಶ ಬಂದ್ ಮಾಡಿಸಬಹುದು ಅಥವಾ ದೇಶದ ವಿಮಾನ ನಿಲ್ದಾಣಗಳನ್ನೆಲ್ಲಾ ಮುಚ್ಚುವ ಘೋಷಣೆ ಮಾಡಬಹುದು ಅಥವಾ ಯಾರೂ ಈ ತನಕ ಊಹಿಸದ, ಅರಿಯದ ಕೆಲ ಕ್ರಮಗಳನ್ನು ಪ್ರಕಟಿಸಬಹುದು ಅಥವಾ ಇನ್ನೇನೋ ಇನ್ನೇನೋ…

ಅಂತೂ ಭಾಷಣ ಪ್ರಾರಂಭವಾಗುವ ಹೊತ್ತಿಗೆ ಹಿಂದೆಲ್ಲಾ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ನೋಡಲು ಮಾಡುತ್ತಿದ್ದಂತೆ ಜನ ಟಿವಿ ಮುಂದೆ ಜಮಾಯಿಸಿದರು. ಭಾಷಣ ಪ್ರಾರಂಭವಾಯಿತು. ಅವರು ಹೊಸತೇನೂ ಹೇಳಲಿಲ್ಲ. ಈಗಾಗಲೇ ಅವರೂ, ಇವರೂ ಹೇಳುತಿದ್ದದ್ದನ್ನು ಪ್ರಧಾನಮಂತ್ರಿಯವರು ಪುನರಾವರ್ತಿಸಿದರು, ಈಗಾಗಲೇ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದ ಸಂದೇಶಗಳಲ್ಲಿ ಸತ್ಯವಿದ್ದದ್ದನ್ನು ಪುನರುಚ್ಚರಿಸಿದರು. ಇನ್ನೇನು ಇಷ್ಟೇನಾ ಅಂದುಕೊಳ್ಳುವ ಹೊತ್ತಿಗೆ ಅವರ ಬಾಯಿಯಿಂದ ಬಂದದ್ದೇ ಜನತಾ ಕರ್ಫ್ಯೂಗೆ ಕರೆ.

ಭಾನುವಾರ ಅಂದರೆ ಮಾರ್ಚ್ 22ನೇ ದಿನಾಂಕದಂದು ಯಾರೂ ಬೀದಿಗಿಳಿಯಬಾರದು, ಎಲ್ಲರೂ ಮನೆಯೊಳಗೇ ಇದ್ದು ಕರೋನ ವೈರಸ್ ತಂದೊಡ್ಡಿದ ಸಾಂಕ್ರಾಮಿಕ ಹರಡದಂತೆ ಸಹಕರಿಸಬೇಕು ಎಂದರು. ಅಷ್ಟೇ ಅಲ್ಲ, ಸಂಜೆ ಐದರ ಹೊತ್ತಿಗೆ ಎಲ್ಲರೂ ತಮ್ಮ ತಮ್ಮ ಮನೆಯ ಆವರಣದಲ್ಲಿ ನಿಂತು ಚಪ್ಪಾಳೆ ತಟ್ಟಿ, ಗಂಟೆ ಬಡಿದು, ಜಾಗಟೆ ಬಾರಿಸಿ, ಸೀಟಿ ಊದಿ ಎಂದರು. ಕೊರೋನಾ ಮಾಹಾಮಾರಿಯನ್ನು ತಡೆಯಲು ಮತ್ತು ಅದಕ್ಕೆ ತುತ್ತಾದವರಿಗೆ ಚಿಕಿತ್ಸೆ ನೀಡಲು ತೊಡಗಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೊಂದು ನಮನ ಸಲ್ಲಿಸಲು ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸಲು ಹೀಗೊಂದು ಪ್ರದರ್ಶನ ಅಥವಾ ಸ್ವರ ನಮನ ಅಂದರು.

ಎಲ್ಲಾ ಓಕೆ, ಆದರೆ ಇದಕ್ಕೆ ‘ಕರ್ಫ್ಯೂ’ ಎನ್ನುವ ಭಯಂಕರ ಪೊಲೀಸ್ ಪದ ಬಳಸಬೇಕಿತ್ತೇ ಎನ್ನುವ ಪ್ರಶ್ನೆಯೊಂದು ಹಾಗೆ ಕೆಲವರ ಮನದಲ್ಲಿ ಹಾದುಹೋಯಿತು. ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಇಡೀ ದೇಶ ಋಣಿಯಾಗಿರಬೇಕು ನಿಜ, ಅದಕ್ಕೆ ಎಲ್ಲರ ಪರವಾಗಿ ಪ್ರಧಾನ ಮಂತ್ರಿಗಳೇ ಅವರ ಕುರಿತು ನಾಲ್ಕು ಮೆಚ್ಚುಗೆಯ ಮಾತುಗಳನ್ನು ಹೇಳಿ ಹುರಿದುಂಬಿಸಿದರೆ ಸಾಲದೇ? ಈ ಚಪ್ಪಾಳೆ-ಜಾಗಟೆ-ತಾಳ ಎಲ್ಲಾ ಯಾಕೆ ಎನ್ನುವ ಪ್ರಶ್ನೆಯೂ ಕೆಲವರನ್ನಾದರೂ ಕಾಡಿತು. ಆದರೂ ಇಂತಹಾ ಪ್ರಶ್ನೆಗಳನ್ನು ಯಾರೂ ಬೆಳೆಸಲಿಲ್ಲ. ಯಾಕೆಂದರೆ, ಇದು ಅಸಾಧಾರಣ ಸಮಯ. ಅಸಾಧಾರಣ ಸಮಯ ಅಸಾಧಾರಣವಾದ ಕ್ರಮಗಳನ್ನು ಅಪೇಕ್ಷಿಸುತ್ತದೆ. ಏನಿಲ್ಲ ಎಂದರೂ ಒಂದು ಸಂದೇಶವಾಗಿ, ಒಂದು ಸಂಕೇತವಾಗಿ ಜನ ಆದಷ್ಟೂ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದೆ, ಒಟ್ಟು ಸೇರದೆ ಸೋಂಕಿನ ಸರಣಿಯನ್ನು ತುಂಡರಿಸಬೇಕು ಎನ್ನುವ ಸಂದೇಶ ಈ ಕರೆಗಳಲ್ಲಿ ಇದೆ ಎನ್ನುವ ಸದ್ಭಾವನೆಯಿಂದಲೇ ಪ್ರಧಾನಿಗಳ ಕರೆಯನ್ನು ಸ್ವೀಕರಿಸಿ ಅದನ್ನು ಅನುಷ್ಟಾನಿಸಲು ಎಲ್ಲರೂ ಮಾನಸಿಕವಾಗಿ ಸಿದ್ಧರಾಗತೊಡಗಿದರು. ಅಲ್ಲಿಗೆ ಮೊದಲ ಅಂಕಕ್ಕೆ ಪರದೆ ಬಿತ್ತು.

ಇದಾಗಿ ಒಂದೆರಡು ಗಂಟೆಗಳಲ್ಲೇ ಎರಡನೇ ಅಂಕಕ್ಕೆ ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ವೇದಿಕೆ ಸಿದ್ಧವಾಯಿತು. ಮರುದಿನ ಬೆಳಗಾತ ಪ್ರಧಾನಿಗಳ ಕರೆಯ ಬಗ್ಗೆ ಬಿತ್ತರವಾಗತೊಡಗಿದ ಸುದ್ದಿ ಸಂದೇಶಗಳು ದೇಶಕ್ಕೆ ತಗುಲಿರುವ ಇನ್ನೊಂದು ಸೋಂಕನ್ನು ತೆರೆದಿರಿಸಿದವು. ಕರೋನದ ಸೋಂಕು ಇಡೀ ವಿಶ್ವವನ್ನೇ ಆವರಿಸಿದ್ದರೆ ಆ ಇನ್ನೊಂದು ಸೋಂಕು ಕೇವಲ ಭಾರತಕ್ಕೆ ಸೀಮಿತವಾದದ್ದು. ಅದನ್ನು ಏನೆಂದು ಕರೆಯುವುದು, ಹೇಗೆ ಅರ್ಥ ಮಾಡಿಕೊಳ್ಳುವುದು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಹೊರಟವರ ಮುಂದೆ ಕೊರೋನ ವೈರಸ್‌ನಂತಹದ್ದೇ ನಿಗೂಢವಾದ ಆಖಾಡವೊಂದು ತೆರೆದುಕೊಳ್ಳಬಹುದು. ಆದುದರಿಂದ ಈ ಪ್ರಶ್ನೆಗಳನ್ನೆಲ್ಲಾ ಹಾಗೆಯೇ ಇರಿಸಿ ಹೀಗೆ ಸುಮ್ಮನೆ ಎರಡನೇ ಅಂಕದ ಪ್ರಸಂಗ ಮತ್ತು ಪಾತ್ರಗಳನ್ನು ನೋಡುತ್ತಾ ಹೋಗುವ.

ಮೊದಲನೆಯದಾಗಿ ಕನ್ನಡ ಟಿವಿ ಚಾನೆಲ್‌ಗಳಲ್ಲಿ ಪ್ರಧಾನಿ ಭಾಷಣದ ಕುರಿತು ಅತಿರಂಜಿತ, ವೈಭವೀಕೃತ ಕಾರ್ಯಕ್ರಮಗಳು ಪ್ರಸಾರವಾಗತೊಡಗಿದವು. ‘ಏನಿದು ಮೋದಿಯ ಸಂಡೇ ಸೀಕ್ರೆಟ್?’ ಅಂತ ಒಂದು ಕಾರ್ಯಕ್ರಮ. ‘ಕೊರೋನ ವಿರುದ್ಧ ಮೋದಿಯ ಮಾಸ್ಟರ್ ಪ್ಲಾನ್’ ಅಂತ ಇನ್ನೊಂದು ಕಾರ್ಯಕ್ರಮ. ‘ಪ್ರಪಂಚದ ಯಾವ ನಾಯಕರೂ ಕೈಗೊಳ್ಳದ ಕ್ರಮ ಮೋದಿಯಿಂದ’ ಅಂತ ಮಗುದೊಂದು ಟಿವಿಯ ಇನ್ನೊಂದು ಕಾರ್ಯಕ್ರಮ. ಹೀಗೆ ಲಂಗುಲಗಾಮಿಲ್ಲದೆ ನಡೆಯಿತು ಮುಖ್ಯವಾಹಿನಿ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೋದಿ ವೈಭವೀಕರಣ. ಇದನ್ನು ಪುಷ್ಟಿಗೊಳಿಸಲೋ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ 22- ಕ್ಯಾರೆಟ್ ಶುದ್ಧ ಸುಳ್ಳುಗಳ ಯಥೇಚ್ಛ ವಿನಿಮಯ ನಡೆಯಿತು.

ಕೊರೋನ ವೈರಸ್ಸುಗಳ ಆಯುಸ್ಸು ಕೇವಲ ಎಂಟು ಗಂಟೆಗಳ ಕಾಲ. ಆದುದರಿಂದ ಬೆಳಗ್ಗೆ ಆರರಿಂದ ರಾತ್ರಿ ಒಂಬತ್ತರ ತನಕ ಕರ್ಫ್ಯೂ ವಿಧಿಸಿದ ಕಾರಣ ಕೊರೋನ ವೈರಸ್ಸು ಒಂದೇ ದಿನದಲ್ಲಿ ಸತ್ತೇ ಹೋಗುತ್ತದೆ. ಪ್ರಪಂಚದಲ್ಲಿ ಯಾರಿಗೂ ಹೊಳೆಯದ ಐಡಿಯಾ ಮೋದಿಗೆ ಹೊಳೆದಿದೆ ಅಂತ ಸಂದೇಶಗಳು ವಾಟ್ಸಾಪ್‌ನಲ್ಲಿ ಹರಿದಾಡಿ ಹರಿದಾಡಿ ವೈರಲ್ ಆದವು. ಭಕ್ತಿಯ ಸೋಂಕು ತಗಲಿಸಿಕೊಳ್ಳದ ಕೆಲ ವೈದ್ಯಕೀಯ ನಿಷ್ಣಾತರು ವಾಟ್ಸಾಪ್ ವಿಶ್ವವಿದ್ಯಾನಿಲಯದ ಈ ಸಂಶೋಧನೆಯನ್ನು ಅಲ್ಲಗಳೆಯುವುದರ ಮೂಲಕ ಅದು ನಗೆಪಾಟಲಿಗೆ ಈಡಾಯಿತು. ಇಪ್ಪತ್ತನಾಲ್ಕು ಗಂಟೆ ಬಂದ್ ಆಚರಿಸುವ ಮೂಲಕ ಸೋಂಕು ಸಂಕೋಲೆಯಿಂದ ಶಾಶ್ವತವಾಗಿ ಕಳಚಿಕೊಳ್ಳಬಹುದಾಗಿದ್ದರೆ ಭಾನುವಾರದವರೆಗೆ ಕಾಯುವ ಪ್ರಮೇಯವಾದರೂ ಯಾಕೆ ಎನ್ನುವ ಪ್ರಶ್ನೆಗಳನ್ನು ಸಹಜವಾಗಿಯೇ ಕೆಲವರಾದರೂ ಕೇಳಲಾರಂಭಿಸಿದರು.

ಏನೇ ಆದರೂ ಮೂಲ ಸಂದೇಶದ ಪ್ರಸಾರವೇನೂ ನಿಲ್ಲಲಿಲ್ಲ. ಅಷ್ಟರಲ್ಲಿ ಇನ್ನೊಂದು ಸಂದೇಶ ಹರಿದಾಡತೊಡಗಿತು. ಅದರ ಪ್ರಕಾರ ಮಾರ್ಚ್ 22ರ ಭಾನುವಾರ ಸಾಯಂಕಾಲ ಐದು ಗಂಟೆಗೆ ನವಗ್ರಹಗಳು ವಿಶಿಷ್ಟವಾದ ರೀತಿಯಲ್ಲಿ ಸಮಾಗಮಗೊಳ್ಳುತ್ತವೆ. ಆ ಕಾಲಕ್ಕೆ ಸರಿಯಾಗಿ ಚಪ್ಪಾಳೆ, ಗಂಟೆ, ಜಾಗಟೆ, ಶಂಖ ಇತ್ಯಾದಿ ಸ್ವರ ಮೊಳಗುವ ಮೂಲಕ ಉಂಟಾಗುವ ವಿಶಿಷ್ಟ ಕಂಪನದಿಂದಾಗಿ ಕರೋನ ವೈರಸ್ಸು ಸಾಯುತ್ತದೆ. ಈ ಬ್ರಹ್ಮಾಂಡ ರಹಸ್ಯ ಮೋದಿಗೆ ತಿಳಿದಿರುವ ಕಾರಣವೇ ಅವರು ಇಂತಹ ಸ್ವರಗಳನ್ನು ಸೃಷ್ಟಿಸಿ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಹೇಳಬೇಕು ಅಂತ ಕರೆ ನೀಡಿದ್ದು. ಈ ಸಂದೇಶ ಹರಿದಾಡಿ ಹರಿದಾಡಿ ಮೋದಿ ತ್ರಿಕಾಲಜ್ಞಾನಿಯಾದ ನಾಯಕ ಎಂದು ನಂಬಲು ಸಿದ್ಧರಿರುವ ಮಂದಿಯನ್ನು ನಂಬಿಸುವ ಕೆಲಸ ನಡೆಯಿತು. ಇವಿಷ್ಟು ಸಂಕ್ಷಿಪ್ತವಾಗಿ ಎರಡನೆಯ ಅಂಕ.

ಈ ಅಂಕಕ್ಕೆ ತೆರೆ ಬೀಳುವ ವೇಳೆಗೆ ಇಡೀ ಜನತಾ ಕರ್ಫ್ಯೂ ಮತ್ತು ಧನ್ಯವಾದ-ಸ್ವರಸೃಷ್ಟಿಯ ಹಿನ್ನೆಲೆಯಲ್ಲಿ ಇರಬೇಕಾಗಿದ್ದ ಕೊರೋನ ಕುರಿತ ಜಾಗೃತಿ ಇತ್ಯಾದಿಗಳೆಲ್ಲಾ ಮಾಯವಾಗಿ ಅಲ್ಲಿ ಯಾರ ಪ್ರತಿಷ್ಠಾಪನೆ ಆಗಬೇಕಾಗಿತ್ತೋ ಅದು ಆಗಿತ್ತು. ಈ ಸಂದೇಶಗಳೆಲ್ಲಾ ವೈರಸ್‌ನ ಹಾಗೆ ಪ್ರಾಕೃತಿಕವಾಗಿ ಸೃಷ್ಟಿ ಆಗುವುದಿಲ್ಲ. ಅವುಗಳನ್ನೆಲ್ಲಾ ಯಾರೋ ಸೃಷ್ಟಿಸುತ್ತಾರೆ. ಉದ್ದೇಶಪೂರ್ವಕವಾಗಿಯೇ ಸೃಷ್ಟಿಸುತ್ತಾರೆ. ಎಂದಿನಂತೆ ಇಂತಹ ಸಂದೇಶಗಳೆಲ್ಲಾ ಹರಿದಾಡಿದ್ದು ಮಾಮೂಲು ಭಕ್ತಗಣಗಳ ಸಾಮಾಜಿಕ ಜಾಲತಾಣಗಳ ವೇದಿಕೆಗಳ ಮೂಲಕವೇ ಎನ್ನುವುದು ಕೂಡಾ ಮುಖ್ಯವಾಗಿ ಪರಿಗಣಿಸಬೇಕಾದ ಅಂಶ.

ಅಂತೂ ಭಾನುವಾರ ಬಂತು. ಕರ್ಫ್ಯೂ ಅಂದ ಮೇಲೆ ಕರ್ಫ್ಯೂ. ಜನ ಬೀದಿಗಿಳಿಯಲಿಲ್ಲ. ಎಲ್ಲಾ ವ್ಯವಹಾರಗಳೂ ಸ್ಥಬ್ದ. ಹೀಗೊಂದು ವ್ಯಾಪಕ ಬಂದ್ ದೇಶದ ಉದ್ದಗಲಕ್ಕೆ ಹಿಂದೆಂದೂ ಆದದ್ದಿಲ್ಲ ಅನ್ನಿಸುತ್ತದೆ. ಜನ ಗಂಭೀರವಾಗಿ ಪರಿಗಣಿಸಿದ್ದು ಕೊರೋನವನ್ನೋ ಅಥವಾ ಪ್ರಧಾನಿಯ ಕರೆಯನ್ನೋ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಸಂಜೆ ಐದು ಗಂಟೆಗೆ. ಇದು ಮೂರನೇಯ ಅಂಕ ಮತ್ತು ಕ್ಲೈಮಾಕ್ಸ್ ಹಂತ. ನಿಗದಿತ ಸಮಯಕ್ಕೆ ಸರಿಯಾಗಿ ಜನ ಹೊರ ಬಂದು ಗುಂಪು ಸೇರಿದರು, ಚಪ್ಪಾಳೆ ತಟ್ಟಿದರು, ಶಂಖ ಊದಿದರು. ಇನ್ನು ಕೆಲವೆಡೆ ಜಾತ್ರೆಯಲ್ಲಿ ಆಗುವಂತಹ ಮೆರವಣಿಗೆಯೂ ಆಯಿತು. ಅಲ್ಲಿಗೆ ಜನತಾ ಕರ್ಫ್ಯೂವಿನ ನಿಜ ಉದ್ದೇಶವೇ ನಾಶವಾಯಿತು.

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕರ್ನಾಟಕದ ರಾಜ್ಯಪಾಲರಾದ ವಾಜುಬಾಯಿ ವಾಲರವರೇ ಬೀದಿಯಲ್ಲಿ ಒಟ್ಟುಗೂಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

Posted by Naanu Gauri on Sunday, March 22, 2020

ಇನ್ನೊಂದು ಅರ್ಥದಲ್ಲಿ ಕರೆ ನೀಡಿದವರ ಉದ್ದೇಶ ಸಾರ್ಥಕ್ಯ ಕಂಡಿತು. ಕರೆಯ ಹಿಂದೆ ಬ್ರಹ್ಮವಿದ್ಯೆಯೊಂದನ್ನು ಸೃಷ್ಟಿಸಲು ಹೊರಟವರ ಉದ್ದೇಶವಂತೂ ಖಂಡಿತಾ ಈಡೇರಿತು. ಜನ ಗುಂಪು ಸೇರಬಾರದು, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳಬಾರದು, ಪರಸ್ಪರ ಬೆರೆಯಬಾರದು, ತೀರಾ ಹತ್ತಿರ ಓಡಾಡಬಾರದು ಎನ್ನುವುದಾಗಿತ್ತಲ್ಲವೇ ಜನತಾ ಕರ್ಫ್ಯೂ ಹೇರಿದ್ದ ಉದ್ದೇಶ. ಕೊನೆಯಲ್ಲಿ ಗುಂಪು ಸೇರಿ ಜಾತ್ರೆ ಆಚರಣೆ ಮಾಡುವುದಿದ್ದರೆ ಇಷ್ಟೆಲ್ಲಾ ಯಾಕೆ ಬೇಕಿತ್ತು? ಜಾತ್ರೆ ನಡೆಸಿದವರ ಮನದಲ್ಲಿ ವೈರಸ್ ಬಗೆಗಿನ ಜಾಗೃತಿಗಿಂತ ಮೋದಿ ಕರೆಗೆ ಓಗೊಟ್ಟ ಸಾರ್ಥಕತೆ ಇತ್ತು. ‘ಪ್ರಧಾನ ಮಂತ್ರಿಯವರು ಉದ್ದೇಶಿಸಿದ್ದು ಇದನ್ನಲ್ಲ’ ಅಂತ ದೇಶದ ಯಶಸ್ವಿ ಮಹಿಳಾ ಉದ್ಯಮಿ ಕಿರಣ್ ಮಜುಂದಾರ್ ಷಾ ಮರುದಿನ ವಿಷಯದಿಂದ ಟ್ವೀಟ್ ಬರೆದುಕೊಂಡರು. ಯಾರು ಏನನ್ನು ಉದ್ದೇಶಿಸಿದ್ದರು ಅಂತ ಯಾರೇ ಆದರೂ ಹೇಗೆ ಭರವಸೆಯಿಂದ ಹೇಳುವುದು ಅಲ್ಲವೇ?

https://twitter.com/kiranshaw/status/1241741002588618757

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here