ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಸುಪ್ರೀಂ ಕೋರ್ಟ್‌‌ನಲ್ಲಿ ಪಿಐಎಲ್‌ ಸಲ್ಲಿಕೆ

ಅರ್ಜಿಯು ಕೇಂದ್ರದ ಹೊರತಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಗೋವಾ, ಅಸ್ಸಾಂ, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳನ್ನು ಪ್ರತಿವಾದಿ ಪಕ್ಷಗಳನ್ನಾಗಿ ಮಾಡಿದೆ.

PIL in Supreme Court opposing labor law amendments in many states..

ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯು ಕಾರ್ಮಿಕರು ಶಾಂತಿಯುತವಾಗಿ ಪ್ರತಿಭಟಿಸುವ, ಒಕ್ಕೂಟಗಳನ್ನು ಅಥವಾ ಸಂಘಗಳನ್ನು ರಚಿಸುವ ಹಕ್ಕನ್ನು ನಿರಾಕರಿಸುತ್ತದೆ ಎಂದು ವಾದಿಸಿ ಕೇರಳ ಮೂಲದ ಕಾನೂನು ವಿದ್ಯಾರ್ಥಿಯೊಬ್ಬರು ಸುಪ್ರೀಂ ಕೋರ್ಟ್‌‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

COVID-19 ಸಾಂಕ್ರಾಮಿಕದ ಮಧ್ಯೆ ಕಾರ್ಮಿಕ ಕಾನೂನುಗಳಲ್ಲಿ ಮಾಡಿದ ಬದಲಾವಣೆಗಳು, ಆರ್ಥಿಕ ಚಟುವಟಿಕೆ ಮತ್ತು ಮಾರುಕಟ್ಟೆ ಸುಧಾರಣೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ವಾಸ್ತವದಲ್ಲಿ ಕಾರ್ಮಿಕರನ್ನು ಬಲವಂತದ ದುಡಿಮೆಗೆ ತಳ್ಳುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಕೆಲವು ರಾಜ್ಯ ಸರ್ಕಾರಗಳು ಹೊರಡಿಸಿದ ಸುಗ್ರೀವಾಜ್ಞೆಗಳು ಮತ್ತು ಅಧಿಸೂಚನೆಗಳು “ದೇಶದ ಕಾರ್ಮಿಕ ಕಾನೂನು ಚೌಕಟ್ಟಿನಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಿವೆ” ಎಂದು ವಕೀಲರಾದ ಕಲೀಶ್ವರಂ ರಾಜ್  ಮತ್ತು ವಕೀಲ ನಿಶೆ ರಾಜೇನ್ ಶೋಂಕರ್ ಮೂಲಕ ಅರ್ಜಿ ಸಲ್ಲಿಸಿರುವ ನಂದಿನಿ ಪ್ರವೀಣ್ ಅವರು ದೂರಿದ್ದಾರೆ.

ಅರ್ಜಿಯು ಕೇಂದ್ರದ ಹೊರತಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಗೋವಾ, ಅಸ್ಸಾಂ, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳನ್ನು ಪ್ರತಿವಾದಿ ಪಕ್ಷಗಳನ್ನಾಗಿ ಮಾಡಿದೆ.

ಹರಿಯಾಣ, ಅಸ್ಸಾಂ, ಪಂಜಾಬ್ ಮತ್ತು ಗೋವಾ ರಾಜ್ಯಗಳು ಕೆಲಸದ ಅವಧಿಯನ್ನು ವಿಸ್ತರಿಸುವ ಅಧಿಸೂಚನೆಗಳನ್ನು ನೀಡಿವೆ ಎಂದು ಅದು ಹೇಳಿದೆ.

ಉತ್ತರ ಪ್ರದೇಶದ ಸುಗ್ರೀವಾಜ್ಞೆಯು “ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲಾ ಕಾರ್ಖಾನೆಗಳು ಮತ್ತು ಸಂಸ್ಥೆಗಳಲ್ಲಿನ ಎಲ್ಲಾ ಕಾರ್ಮಿಕ ಕಾನೂನುಗಳ ಕಾರ್ಯಾಚರಣೆಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟಿ ಮೂರು ವರ್ಷಗಳ ಅವಧಿಗೆ ವಿನಾಯಿತಿ ನೀಡಲಾಗುವುದು” ಎಂದು ಹೇಳಿದೆ.

“ವೇತನ ಸಂಹಿತೆಯನ್ನು ಅಮಾನತುಗೊಳಿಸಲಾಗಿದೆ ಮತ್ತು ವೇತನ ಪಾವತಿ ಕಾಯ್ದೆಯನ್ನು ರದ್ದುಗೊಳಿಸಲಾಗಿರುವುದರಿಂದ, ಕಾರ್ಖಾನೆಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸಮಯೋಚಿತ ವೇತನವನ್ನು ನೀಡಲು ಯಾವುದೇ ಶಾಸನಬದ್ಧ ಬಾಧ್ಯತೆಯಿರುವುಲ್ಲ. ಆದ್ದರಿಂದ, ಸುಗ್ರೀವಾಜ್ಞೆಯು ಮೂಲಭೂತವಾಗಿ ಈ ಸಂಸ್ಥೆಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ರದ್ದುಗೊಳಿಸಲು ಕಾರಣವಾಗಿದೆ” ಎಂದು ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ಅರ್ಜಿಯಲ್ಲಿ ತಿಳಿಸಲಾಗಿದೆ.

“ಕಾರ್ಮಿಕರ ಕಲ್ಯಾಣ ಮತ್ತು ಆರೋಗ್ಯ ಕ್ರಮಗಳನ್ನು ಸ್ಥಗಿತಗೊಳಿಸುವ ಮೂಲಕ ಮತ್ತು ಕೆಲಸದ ಸಮಯವನ್ನು ಹೆಚ್ಚಿಸುವುದು 1982 ರ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಪಿಯುಡಿಆರ್) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯು ಕಾರ್ಮಿಕರು ಶಾಂತಿಯುತವಾಗಿ ಪ್ರತಿಭಟಿಸುವ, ಒಕ್ಕೂಟಗಳನ್ನು ಅಥವಾ ಸಂಘಗಳನ್ನು ರಚಿಸುವ ಹಕ್ಕನ್ನು ನಿರಾಕರಿಸುತ್ತದೆ. ಕಾರ್ಮಿಕ ಸಂಘಗಳ ಮಾನ್ಯತೆ ಸ್ಥಗಿತಗೊಳ್ಳಲಿದೆ. ಈ ಹೊಸ ಕಾನೂನುಗಳು ಕಾರ್ಮಿಕರ ಆರೋಗ್ಯದ ಹಕ್ಕು, ವಿರಾಮ, ಸುರಕ್ಷಿತ ಕೆಲಸದ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತವೆ. ಅದು ಸಂವಿಧಾನದ 21 ನೇ ಪರಿಚ್ಛೇಧದ ಅಡಿಯಲ್ಲಿ ಜೀವಿಸುವ ಹಕ್ಕಿನ ವ್ಯಾಪ್ತಿಯಲ್ಲಿ ಬರುತ್ತದೆ. ಕಾರ್ಮಿಕ ಕಾನೂನುಗಳ ಕುರಿತಾದ ಅಂತರರಾಷ್ಟ್ರೀಯ ಚೌಕಟ್ಟನ್ನು ಈ ತಿದ್ದುಪಡಿಗಳು ಉಲ್ಲಂಘಿಸಿವೆ ಎಂದು ಆರೋಪಿಸಲಾಗಿದೆ.

ಕೈಗಾರಿಕಾ ವಿವಾದ ಕಾಯ್ದೆ

ಅನ್ಯಾಯದ ಕಾರ್ಮಿಕ ಪದ್ಧತಿಗಳನ್ನು ನಿಷೇಧಿಸುವ ನಿರ್ಣಾಯಕ ಕಾನೂನಾದ ಕೈಗಾರಿಕಾ ವಿವಾದ ಕಾಯ್ದೆಯ ವ್ಯಾಪ್ತಿಯಿಂದ ಕೆಲವು ರಾಜ್ಯಗಳು ಕಾರ್ಖಾನೆಗಳಿಗೆ ವಿನಾಯಿತಿ ನೀಡಿವೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.

“ವಿವಾದಗಳ ತನಿಖೆ ಮತ್ತು ಇತ್ಯರ್ಥಕ್ಕೆ ಸಾಕಷ್ಟು ಯಾಂತ್ರಿಕ ವ್ಯವಸ್ಥೆ ಇಲ್ಲದಿದ್ದರೆ ಯಾವುದೇ ರಾಜ್ಯ ಸರ್ಕಾರವು ಕಾಯ್ದೆಯಲ್ಲಿ ವಿನಾಯಿತಿ ನೀಡಲು ಅನುಮತಿಸುವುದಿಲ್ಲ. ಇದು ಪೂರ್ವಾಪೇಕ್ಷಿತವಾಗಿದೆ. ಎರಡನೆಯದಾಗಿ, COVID-19 ಸಾಂಕ್ರಾಮಿಕದಂತಹ ಬಿಕ್ಕಟ್ಟಿನಲ್ಲಿ, ಯಾವುದೇ ಪರ್ಯಾಯವಿಲ್ಲದೆ ಇಡೀ ಕಾಯಿದೆಗೆ ವಿನಾಯಿತಿ ನೀಡಲು ರಾಜ್ಯಗಳಿಗೆ ಅಧಿಕಾರವಿಲ್ಲ ಎಂದು ಅದು ವಾದಿಸಿದೆ.

ಈ ಕುರಿತು ಅರ್ಜಿದಾರರ ಪರ ವಕೀಲರಲ್ಲಿ ಒಬ್ಬರಾದ ಮೈತ್ರೇಯಿ ಎಸ್‌ ಹೆಗಡೆಯವರನ್ನು ನಾನುಗೌರಿ.ಕಾಂ ಮಾತನಾಡಿಸಿತು. ಅವರು “ದೇಶ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಮತ್ತುಷ್ಟು ಮಗದಷ್ಟು ದುಡಿಯಿರಿ ಎಂದು ಅದರ ಭಾರವನ್ನು ಕಾರ್ಮಿಕರ ಮೇಲೆ ಹಾಕುವುದು ಕಾನೂನಿಗೆ ವಿರುದ್ಧ ಎನ್ನುವುದಕ್ಕಿಂತ ಅಮಾನವೀಯ ಎನ್ನುವುದೇ ಸೂಕ್ತ. ಕೋವಿಡ್‌ನಿಂದಾಗಿ ಅತ್ಯಂತ ಕಷ್ಟಪಡುವ, ನಷ್ಟ ಅನುಭವಿಸುವ ವರ್ಗವೆಂದರೆ ಅದು ಕಾರ್ಮಿಕರಾಗಿದ್ದಾರೆ. ಅವರ ಮೇಲಿನ ಈ ದೌರ್ಜನ್ಯವನ್ನು ತಡೆಯಲು ನಾವು ಪಿಐಎಲ್‌ ಸಲ್ಲಿಸಿದ್ದೇವೆ ಎಂದರು.

ಉತ್ತರ ಪ್ರದೇಶ ಸರ್ಕಾರವು ಜನರ ಒತ್ತಡಕ್ಕೆ ಮಣಿದು ಕೆಲಸದ ಅವಧಿಯ ಹೆಚ್ಚಳವನ್ನು ಮಾತ್ರ ವಾಪಸ್‌ ಪಡೆದಿದ್ದಾರೆ. ಉಳಿದಂತೆ ವೇತನ ಕಾಯ್ದೆ, ಫ್ಯಾಕ್ಟರಿ ಕಾಯ್ದೆ ಮತ್ತು ಕೈಗಾರಿಕಾ ವಿವಾದ ಕಾಯ್ದೆಯ ಮೂಲಕ ಕಾರ್ಮಿಕರಿಗಿದ್ದ ಹಲವಾರು ಸೌಲಭ್ಯಗಳನ್ನು ಅಮಾನತ್ತು ಮಾಡಲಾಗಿದೆ. ಮಾಲೀಕರು ಕಾರ್ಮಿಕರಿಗೆ ಬೆದರಿಕೆ ಹಾಕುವ, ಕೆಲಸದಿಂದ ಕಿತ್ತೊಸೆಯಲು ಅವಕಾಶ ನೀಡಲಾಗಿದೆ. ಟ್ರಿಬ್ಯುನಲ್‌ಗಳನ್ನು ಕಿತ್ತುಹಾಕಲಾಗುತ್ತಿದೆ ಎಂದರು.

ಕರ್ನಾಟಕದಲ್ಲಿಯೂ ಕಾಯ್ದೆಗಳನ್ನು ಬಲಹೀನಗೊಳಿಸಲು ತಯಾರಿ ನಡೆಯುತ್ತಿದೆ. ಅದರ ಭಾಗವಾಗಿಯೇ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಬದಲಾವಣೆಯಾಗಿದೆ. ಕರ್ನಾಟಕ ಸರ್ಕಾರವು ಉಳಿದ ರಾಜ್ಯಗಳಲ್ಲಿನ ತಿದ್ದುಪಡಿಗೆ ಬರುತ್ತಿರುವ ವಿರೋಧ, ಪ್ರತಿಕ್ರಿಯೆಯ ಫಲಿತಾಂಶದ ಆಧಾರದಲ್ಲಿ ಕಾಯ್ದೆ ತಿದ್ದುಪಡಿ ಮಾಡಲು ಯೋಚಿಸುತ್ತಿದ್ದಾರೆ. ಖಂಡಿತವಾಗಿಯೂ ಅವರು ಅದನ್ನು ಇಲ್ಲಿಯೂ ತರುತ್ತಾರೆ ಎಂದು ವಿಷಾಧ ವ್ಯಕ್ತಪಡಿಸಿದರು.


ಇದನ್ನೂ ಓದಿ: ಕಾರ್ಮಿಕ ಕಾಯಿದೆಗಳ ರದ್ದು ಎಷ್ಟು ಸರಿ? – ಡಾ.ಚಂದ್ರಪೂಜಾರಿ 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here